Tag: vice president

  • ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ

    ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ನಿವಾಸಕ್ಕೆ ಬಾಂಬ್ ಬೆದರಿಕೆ

    ಚೆನ್ನೈ: ನಗರದಲ್ಲಿರುವ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಬಾಂಬ್ ಬೆದರಿಕೆ (Bomb threat) ಕರೆ ಬಂದಿದೆ. ತಪಾಸಣೆ ಬಳಿಕ ಇದೊಂದು ಹುಸಿ ಬೆದರಿಕೆ ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

    ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಇಮೇಲ್ ಬೆದರಿಕೆ ಸಂದೇಶ ಬಂದ ನಂತರ, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ ತಜ್ಞರು ಮತ್ತು ಸ್ನಿಫರ್ ನಾಯಿಯನ್ನು ಒಳಗೊಂಡ ತಂಡವನ್ನು ಉಪರಾಷ್ಟ್ರಪತಿಯವರ (Vice President) ಮನೆಗೆ ಸಂಪೂರ್ಣ ಶೋಧ ನಡೆಸಲು ಕಳುಹಿಸಲಾಯಿತು.

    ಶೋಧ ವೇಳೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆಯಾಗದ ಕಾರಣ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ನಿರ್ಧರಿಸಿದರು. ಕಳೆದ ಒಂದು ತಿಂಗಳಿನಿಂದ ಚೆನ್ನೈ ಪೊಲೀಸರಿಗೆ ಇದೇ ರೀತಿಯ ಹಲವಾರು ಇಮೇಲ್ ಬೆದರಿಕೆಗಳು ಬರುತ್ತಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪ್ರತ್ಯೇಕ ಪ್ರಕರಣದಲ್ಲಿ ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದ ವಿಶಾಲ್ ಭಾರ್ತಿ ಪಬ್ಲಿಕ್ ಶಾಲೆಗೆ ಗುರುವಾರ ಬಂದ ಬಾಂಬ್ ಬೆದರಿಕೆ ಇಮೇಲ್ ಆತಂಕ ಮತ್ತು ತುರ್ತು ಪ್ರತಿಕ್ರಿಯೆಗೆ ಕಾರಣವಾಯಿತು. ನಂತರ ಅದನ್ನು ಹುಸಿ ಬೆದರಿಕೆ ಎಂದು ಗುರುತಿಸಲಾಯಿತು. ಸಂದೇಶ ಕಳುಹಿಸುವವರು ಪರೀಕ್ಷೆಗಳನ್ನು ತಪ್ಪಿಸಲು ಬಯಸಿದ್ದ ವಿದ್ಯಾರ್ಥಿ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

  • ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

    ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

    – ಎನ್‌ಡಿಎ ಅಭ್ಯರ್ಥಿಗೆ ಗೆಲುವು ಸ್ಪಷ್ಟ
    – ಚುನಾವಣೆಯಿಂದ ಹಿಂದೆ ಸರಿದ ಬಿಆರ್‌ಎಸ್, ಬಿಜೆಡಿ

    ನವದೆಹಲಿ: ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯಲಿದೆ. ಆಡಳಿತ-ವಿರೋಧ ಪಕ್ಷದ ನಡುವೆ ಪ್ರತಿಷ್ಠೆಯ ಕಣವಾಗಿದ್ದು, ಎನ್‌ಡಿಎ  (NDA) ಅಭ್ಯರ್ಥಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್, ಇಂಡಿ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

    ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ. ಸಂಜೆ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ. ಬಹುತೇಕ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಸ್ಪಷ್ಟವಾಗಿದೆ.ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ | ಮೋದಿ ಸಮ್ಮುಖದಲ್ಲಿ NDA ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ ನಾಮಪತ್ರ ಸಲ್ಲಿಕೆ

    ಈ ಮಧ್ಯೆ ಬಿಆರ್‌ಎಸ್ ಮತ್ತು ಬಿಜೆಡಿ ಪಕ್ಷಗಳು ಚುನಾವಣೆಯಿಂದ ದೂರ ಉಳಿಯುತ್ತಿರುವುದರಿಂದ ಸಂಖ್ಯಾಬಲದ ಆಧಾರದ ಮೇಲೆ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಯೂರಿಯಾ ಕೊರತೆಯಿಂದಾಗಿ ತೆಲಂಗಾಣದ ರೈತರು ಅನುಭವಿಸುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸುವ ಸಲುವಾಗ ತಮ್ಮ ಪಕ್ಷವು ಮತದಾನದಿಂದ ದೂರ ಉಳಿಯಲಿದೆ ಎಂದು ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ತಿಳಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿ ಬಣ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವ ತನ್ನ ನೀತಿಯ ಭಾಗವಾಗಿ ಮತದಾನದಿಂದ ದೂರವಿರುವ ನಿರ್ಧಾರವನ್ನು ಬಿಜೆಡಿ ತಿಳಿಸಿದೆ.

    ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಉಪರಾಷ್ಟ್ರಪತಿಯನ್ನು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತರು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಇದರರ್ಥ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸಬಹುದು. ಹೆಚ್ಚಾಗಿ ಪಕ್ಷದ ಆಧಾರದ ಮೇಲೆ ಮತ ಚಲಾಯಿಸುತ್ತಾರೆ. ಪ್ರಸ್ತುತ ರಾಜ್ಯಸಭೆಯ 239 ಮತ್ತು 542 ಲೋಕಸಭಾ ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇದರ ಪ್ರಕಾರ ಮತದಾರರ ಸಂಖ್ಯೆ 781 ಮತ್ತು ಬಹುಮತಕ್ಕೆ 391 ಮತಗಳ ಅಗತ್ಯವಿದೆ. ಎನ್‌ಡಿಎ 422 ಸಂಸದರನ್ನು ಹೊಂದಿದೆ. ಹೀಗಾಗಿ ಎನ್ ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸುಲಭ ಎಂದೇ ಹೇಳಲಾಗಿದೆ. ಇಂಡಿಯಾ ಮೈತ್ರಿಕೂಟ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ವಿರೋಧ ಪಕ್ಷಗಳ ಜೊತೆಗೆ ಎನ್‌ಡಿಎ ಮಿತ್ರ ಪಕ್ಷದ ಸದಸ್ಯರ ಮತಗಳು ಲಭಿಸಲಿವೆ ಎನ್ನುವ ನಂಬಿಕೆ ಇಟ್ಟಿದೆ. ಇನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ 11 ಸಂಸದರನ್ನು ಹೊಂದಿದೆ. ರಾಜ್ಯಸಭೆಯಲ್ಲಿ ಏಳು ಮತ್ತು ಲೋಕಸಭೆಯಲ್ಲಿ ನಾಲ್ಕು ಸದಸ್ಯರನ್ನು ಹೊಂದಿದೆ.ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ – ಚುನಾವಣಾ ಆಯೋಗ ಘೋಷಣೆ

     

  • ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ ಯಾರು? ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

    ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ ಯಾರು? ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

    ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಸಿಪಿ ರಾಧಾಕೃಷ್ಣನ್‌ (CP Radhakrishnan) ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ (NDA Candidate) ಆಯ್ಕೆ ಮಾಡಲಾಗಿದೆ.

    ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ನೇತೃತ್ವತದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್‌ ಹೆಸರನ್ನು ಅಂತಿಮಗೊಳಿಸಲಾಯಿತು. ಉಪರಾಷ್ಟ್ರಪತಿ ಹುದ್ದೆಗೆ ಹಲವು ಹೆಸರುಗಳು ಕೇಳಿ ಬಂದಿದ್ದರೂ ಅಂತಿಮವಾಗಿ ಸಿಪಿ ರಾಧಾಕೃಷ್ಣನ್‌ ಅವರನ್ನು ಆಯ್ಕೆ ಮಾಡಲಾಯಿತು.

    ವಿಷಯಗಳ ಬಗ್ಗೆ ಜ್ಞಾನ, ಉತ್ತಮ ಸಂಸದೀಯ ಪಟು ಜೊತೆಗೆ ದಕ್ಷಿಣ ಭಾರತದ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಸಂದೇಶ ಕಳುಹಿಸಲು ಸಿಪಿ ರಾಧಾಕೃಷ್ಣನ್‌ ಅವರ ಹೆಸರನ್ನೇ ಬಿಜೆಪಿ ಅಂತಿಮಗೊಳಿಸಿದೆ.

    ಈ ವೇಳೆ ಮಾತನಾಡಿದ ನಡ್ಡಾ, ಮುಂದಿನ ಉಪರಾಷ್ಟ್ರಪತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದರು.

    ಸಿಪಿ ರಾಧಾಕೃಷ್ಣನ್‌ ಯಾರು?
    * ತಮಿಳುನಾಡಿನಲ್ಲಿ ಜನಿಸಿದ ರಾಧಾಕೃಷ್ಣನ್, ಕಳೆದ ವರ್ಷ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: 7 ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ: ರಾಹುಲ್‌ಗೆ ಚುನಾವಣಾ ಆಯೋಗ ಡೆಡ್‌ಲೈನ್‌

    * 68 ವರ್ಷ ವಯಸ್ಸಿನ ಅವರು ಈ ಹಿಂದೆ ಫೆಬ್ರವರಿ 2023 ರಿಂದ ಜುಲೈ 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ ಮತ್ತು ಜುಲೈ 2024 ರ ನಡುವೆ ಅವರು ತೆಲಂಗಾಣ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.

    * 2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ನಾಲ್ಕು ತಿಂಗಳೊಳಗೆ, ರಾಧಾಕೃಷ್ಣನ್ ಅವರು ರಾಜ್ಯದ ಎಲ್ಲಾ 24 ಜಿಲ್ಲೆಗಳಿಗೆ ಪ್ರಯಾಣಿಸಿ ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದರು.

    * ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಭಾರತೀಯ ಜನ ಸಂಘದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಇವರು 1998 ಮತ್ತು 1999 ರಲ್ಲಿ ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

     

    * ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದಾಗ(2004-2007) ಅವರು 93 ದಿನಗಳ ಕಾಲ 19 ಸಾವಿರ ಕಿಮೀ ‘ರಥ ಯಾತ್ರೆ’ಯನ್ನು ಕೈಗೊಂಡಿದ್ದರು. ಭಾರತದ ಎಲ್ಲಾ ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಾದಕ ದ್ರವ್ಯಗಳ ಪಿಡುಗನ್ನು ಎದುರಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಅವರು ವಿಭಿನ್ನ ಕಾರಣಗಳಿಗಾಗಿ ಇನ್ನೂ ಎರಡು ಪಾದಯಾತ್ರೆಗಳನ್ನು ಕೈಗೊಂಡಿದ್ದರು.  ಇದನ್ನೂ ಓದಿ:  ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

    * ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ರಾಧಾಕೃಷ್ಣನ್ ಅವರು ತಮಿಳುನಾಡಿನ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಹೆಸರನ್ನು ಹೊಂದಿದ್ದಾರೆ.

    *1957 ರಲ್ಲಿ ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ಅವರು ಕೊಯಮತ್ತೂರಿನ ಚಿದಂಬರಂ ಕಾಲೇಜಿನಿಂದ ಬಿಬಿಎ ಪದವಿ ಪಡೆದಿದ್ದಾರೆ. ಒಬ್ಬ ಉತ್ಸಾಹಿ ಕ್ರೀಡಾಪಟುವಾಗಿರುವ ಇವರು ಟೇಬಲ್ ಟೆನ್ನಿಸ್‌ನಲ್ಲಿ ಕಾಲೇಜು ಚಾಂಪಿಯನ್ ಆಗಿದ್ದರು. ಅಷ್ಟೇ ಅಲ್ಲದೇ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

    * ಸಂಸದರಾಗಿದ್ದಾಗ ಅವರು ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ.

    * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (2004) ಸಂಸದೀಯ ನಿಯೋಗದ ಭಾಗವಾಗಿದ್ದರು ಮತ್ತು ತೈವಾನ್‌ಗೆ ತೆರಳಿದ್ದ ಮೊದಲ ಭಾರತೀಯ ನಿಯೋಗದ ಭಾಗವಾಗಿದ್ದರು. ಇದನ್ನೂ ಓದಿಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಚಾಲನೆ  ಬಿಜೆಪಿ, ಚು. ಆಯೋಗ ವಿರುದ್ಧ ರಾಗಾ ವಾಗ್ದಾಳಿ

    * ರಾಧಾಕೃಷ್ಣನ್ ಸಾರ್ವಜನಿಕ ಆಡಳಿತದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೆಂಗಿನ ನಾರು ಮಂಡಳಿಯ ಅಧ್ಯಕ್ಷರಾಗಿದ್ದಾಗ (2016–2020) ಬೋರ್ಡ್‌ ದಾಖಲೆಯ 2,532 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಫ್ತು ಮಾಡಿತ್ತು. ಕೇರಳದ ಬಿಜೆಪಿಯ ಅಖಿಲ ಭಾರತ ಉಸ್ತುವಾರಿಯಾಗಿ (2020–2022) ಕೆಲಸ ಮಾಡಿದ್ದಾರೆ.

    * ರಾಜಕೀಯ ಮತ್ತು ಆಡಳಿತದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮಿಳುನಾಡಿನ ರಾಜಕೀಯ ಮತ್ತು ಬಿಜೆಪಿಯ ಸಂಘಟನೆಯ ಅನುಭವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

  • ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್‌ NDA ಉಪರಾಷ್ಟ್ರಪತಿ ಅಭ್ಯರ್ಥಿ

    ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್‌ NDA ಉಪರಾಷ್ಟ್ರಪತಿ ಅಭ್ಯರ್ಥಿ

    ನವದೆಹಲಿ: ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್‌ (CP Radhakrishnan)  ಅವರನ್ನು ಎನ್‌ಡಿಎ(NDA)  ಉಪರಾಷ್ಟ್ರಪತಿ (Vice President)  ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದೆ.

    ಇಂದು ಸಂಜೆ ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಸಿಪಿ ರಾಧಾಕೃಷ್ಣನ್‌ ಹೆಸರನ್ನು ಅಂತಿಮಗೊಳಿಸಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರುವ ರಾಧಾಕೃಷ್ಣನ್‌ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.

    ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ಅವರು ಅಕ್ಟೋಬರ್ 20, 1957 ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ್ದಾರೆ. ರಾಧಾಕೃಷ್ಣನ್ ಅವರು ತಮ್ಮ ರಾಜಕೀಯ ಪ್ರಯಾಣದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಜುಲೈ 31, 2024 ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದರು.

    ಇದಕ್ಕೂ ಮೊದಲು ಅವರು ಫೆಬ್ರವರಿ 18, 2023 ರಿಂದ ಜುಲೈ 30, 2024 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಮಾರ್ಚ್ ನಿಂದ ಜುಲೈ 2024 ರವರೆಗೆ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಮಾರ್ಚ್ ನಿಂದ ಆಗಸ್ಟ್ 2024 ರವರೆಗೆ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಕರ್ತವ್ಯಗಳನ್ನು ನಿರ್ವಹಿಸಿದ್ದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನ ಸಂಘದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಇವರು 1998 ಮತ್ತು 1999 ರಲ್ಲಿ ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

    ಬಿಜೆಪಿಯ ತಮಿಳುನಾಡು ಅಧ್ಯಕ್ಷರಾಗಿದ್ದಾಗ ರಾಧಾಕೃಷ್ಣನ್ ಅವರು ನದಿಗಳ ಜೋಡಣೆ, ಭಯೋತ್ಪಾದನೆ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿದ 93 ದಿನಗಳ ರಥಯಾತ್ರೆ ನಡೆಸಿದ್ದರು.

    ಸಂಸದರಾಗಿದ್ದಾಗ ಅವರು ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ.

    ರಾಧಾಕೃಷ್ಣನ್ 16ನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜನಸಂಘದೊಂದಿಗೆ ಸಂಬಂಧ ಹೊಂದಿದ್ದಾರೆ. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಸೇರಿದಂತೆ ಎನ್‌ಡಿಎನ ಹಲವು ನಾಯಕರು ರಾಧಾಕೃಷ್ಣನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು

    ಸೆಪ್ಟೆಂಬರ್ 9 ರಂದು ಭಾರತದ ಹೊಸ ಉಪರಾಷ್ಟ್ರಪತಿಯ ನೇಮಕಕ್ಕೆ ಸಂಬಂಧ ಚುನಾವಣೆ ನಡೆಯಲಿದೆ. ಇಲ್ಲಿಯವರೆಗೆ INDIA ಒಕ್ಕೂಟ ಅಭ್ಯರ್ಥಿ ಆಯ್ಕೆಯನ್ನು ಪ್ರಕಟಿಸಿಲ್ಲ.

  • ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

    ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್‌ ಧನಕರ್‌ ರಾಜೀನಾಮೆ – ಆಯ್ಕೆ ಪ್ರಕ್ರಿಯೆ ಹೇಗೆ? ಅರ್ಹತೆಗಳೇನು?

    ನಾರೋಗ್ಯದ ಕಾರಣ ಕೊಟ್ಟು ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ಜಗದೀಪ್‌ ಧನಕರ್‌ (Jagdeep Dhankhar) ರಾಜೀನಾಮೆ ಕೊಟ್ಟಿದ್ದಾರೆ. ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಬಳಿಕ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.‌ ಸಂಸತ್ತಿನ ಮೊದಲ ದಿನದ ಅಧಿವೇಶದ ಮೊದಲ ದಿನದ ಕಲಾಪವನ್ನು ನಡೆಸಿ, ಜಗದೀಪ್ ಧನಕರ್ ರಾಜೀನಾಮೆಯನ್ನು ನೀಡಿದ್ದರು. ಇವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಆಂಗೀಕರಿಸಿದ್ದಾರೆ. ಹಾಗಾಗಿ, ಮುಂದಿನ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಕೇಂದ್ರ ಚುನಾವಣಾ ಆಯೋಗ (Election Commission Of India) ಹೇಳಿದೆ. ಹಾಗಿದ್ರೆ ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಅರ್ಹತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಜಗದೀಪ್‌ ಧನಕರ್‌ ರಾಜೀನಾಮೆ ನೀಡಿದ್ದು ಯಾಕೆ?
    ಆರೋಗ್ಯದ ಕಾರಣವನ್ನು ನೀಡಿ 74 ವರ್ಷದ ಜಗದೀಪ್ ಧನಕರ್ ಪದತ್ಯಾಗ ಮಾಡಿದ್ದಾರೆ. ಮೊದಲ ದಿನದ ಕಲಾಪವನ್ನು ಸುಮಾರು 65 ನಿಮಿಷ ನಡೆಸಿಕೊಟ್ಟು, ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಜನ್ಮದಿನದ ಶುಭವನ್ನು ಕೋರಿ, ಐದು ನೂತನ ಸಂಸದರಿಗೆ ಪ್ರಮಾಣವಚನವನ್ನು ಜಗದೀಪ್ ಧನಕರ್ ಬೋಧಿಸಿದ್ದರು. ಆದರೆ, ಅದೇ ದಿನ ರಾಜೀನಾಮೆಯನ್ನು ನೀಡಿ ಎಲ್ಲರಿಗೂ ಶಾಕ್ ನೀಡಿದ್ದರು.

    ಜನತಾ ದಳದ ಅಭ್ಯರ್ಥಿಯಾಗಿ 1991ರಲ್ಲಿ ರಾಜಕೀಯ ಜೀವನ ಆರಂಭಸಿದ ಧನಕರ್‌ ಆ ಬಳಿಕ ಕಾಂಗ್ರೆಸ್‌ ಸೇರಿದ್ದರು. ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಬಿಜೆಪಿ ನಾಯಕತ್ವದ ಗಮನ ಸೆಳೆದ ಅವರು 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡರು. 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇನ್ನು ಸರಿಸುಮಾರು 2 ವರ್ಷಗಳ ಕಾಲ ಉಪರಾಷ್ಟ್ರಪತಿ ಅವಧಿ ಬಾಕಿ ಇದ್ದರೂ ಧನಕರ್ ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಬರೆದ ರಾಜೀನಾಮೆ ಪತ್ರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಸಲಹೆಗಳಿಂದ ಈ ತಕ್ಷಣದಿಂದ ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ. ಜಗದೀಪ್ ಧನಕರ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳೊಂದಿಗೆ ಆಗಾಗ್ಗೆ ಘರ್ಷಣೆಗಳು ನಡೆದವು. ಹಲವು ಬಾರಿ ಅವರು ಸುದ್ದಿಗೆ ಗ್ರಾಸವಾಗಿದ್ದರು.

    ರಾಷ್ಟ್ರಪತಿಯ ಹುದ್ದೆ ತೆರವಾದಾಗ ಅಥವಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹಂಗಾಮಿ ರಾಷ್ಟ್ರಪತಿಯಾಗಿ ಗರಿಷ್ಠ 6 ತಿಂಗಳ ಕಾಲ
    ಉಪರಾಷ್ಟ್ರಪತಿಯು ಕಾರ್ಯನಿರ್ವಹಿಸುತ್ತಾರೆ. ಈ ಮೂಲಕ ಆಡಳಿತ ವ್ಯವಸ್ಥೆ ನಿರಾತಂಕವಾಗಿರುವಂತೆ ಖಾತರಿಪಡಿಸುತ್ತಾರೆ. ಉಪರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿಯಾಗಿ, ಚರ್ಚೆಗಳನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ಶಿಷ್ಟಾಚಾರಗಳನ್ನು ಖಾತರಿಪಡಿಸುತ್ತಾರೆ. ರಾಜಕೀಯ ಪಕ್ಷಪಾತವಿಲ್ಲದೆ ಉನ್ನತ ಸದನವನ್ನು ನಿರ್ದೇಶಿಸುವ ಮೂಲಕ, ಸಾಂವಿಧಾನಿಕ ಪ್ರಜಾಪ್ರಭುತ್ವದ ನೈತಿಕತೆಯನ್ನು ಬಲಪಡಿಸುತ್ತಾರೆ.

    ಉಪರಾಷ್ಟ್ರಪತಿ ಚುನಾವಣೆ ಯಾವಾಗ?
    ಹಾಲಿ ಉಪರಾಷ್ಟ್ರಪತಿ 5 ವರ್ಷ ತಮ್ಮ ಅಧಿಕಾರಾವಧಿ ಪೂರ್ಣ ಗೊಳಿಸಿದಾಗ, ಇಲ್ಲವೇ ರಾಜೀನಾಮೆ ನೀಡಿದಾಗ ಚುನಾವಣೆ ನಡೆಯುತ್ತದೆ. ಜೊತೆಗೆ ಈ ಹುದ್ದೆಯಲ್ಲಿರುವವರು ಮರಣ ಹೊಂದಿದರೆ, ಸಂಸದೀಯ ಪ್ರಕ್ರಿಯೆಯ ಮೂಲಕ ಪದಚ್ಯುತಗೊಂಡರೆ ಇಲ್ಲವೇ ಚುನಾವಣೆ ವೇಳೆ ಅನರ್ಹತೆ ಸಾಬೀತಾದಾಗ ಉಪರಾಷ್ಟ್ರಪತಿ ಚುನಾವಣೆಯನ್ನು ನಡೆಸಲಾಗುತ್ತದೆ.

    ಆಯೋಗವು ಅಧಿಸೂಚನೆ ಹೊರಡಿಸಿದ ನಂತರ ನಾಪತ್ರ ಸಲ್ಲಿಕೆ, ಅಧಿಸೂಚನೆ, ಹಿಂಪಡೆಯುವಿಕೆ ಮತದಾನ ಹಾಗೂ ಎಣಿಕೆ ಪ್ರಕ್ರಿಯೆ 30 ದಿನಗಳ ಒಳಗಾಗಿ ಪೂರ್ಣಗೊಳ್ಳಬೇಕು.

    ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ?
    ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಈ ರೀತಿಯಾಗಿ, ಒಟ್ಟು 788 ಜನರು ಮತ ಚಲಾಯಿಸಬಹುದು.

    ಪಕ್ಷಗಳ ವಿಪ್ ಅಗತ್ಯವಿಲ್ಲದೆ ಗೌಪ್ಯ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ರಾಷ್ಟ್ರಪತಿ ಚುನಾವಣೆಯಂತೆ ರಾಜ್ಯಗಳ ವಿಧಾನಸಭೆ ಶಾಸಕ ರಿಗೆ ಮತದಾನದ ಅವಕಾಶವಿಲ್ಲ. ಏಕಮತದಾನ ವರ್ಗಾವಣೆ ವಿಧಾನದಲ್ಲಿ ಪ್ರತಿಯೊಬ್ಬ ಮತದಾರ ಅಭ್ಯರ್ಥಿಗಳನ್ನು ಪ್ರಾಶಸ್ಯದ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಅವರ ಪ್ರಾಶಸ್ಯವನ್ನು ಸಂಖ್ಯೆಗಳ ರೂಪದಲ್ಲಿ ಗುರುತಿಸುತ್ತಾರೆ. (ಮೊದಲ ಪ್ರಾಶಸ್ಯಕ್ಕೆ 1, 2ನೇ ಪ್ರಾಶಸ್ಯಕ್ಕೆ 2, ಇತ್ಯಾದಿ.) ಮತಪತ್ರವು ಮಾನ್ಯವಾಗಿರಲು ಮೊದಲ ಪ್ರಾಶಸ್ಯವನ್ನು ಗುರುತಿಸುವುದು ಕಡ್ಡಾಯವಾಗಿದೆ. ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ. ಎಣಿಕೆ ವೇಳೆ ಎಲ್ಲ ಅಭ್ಯರ್ಥಿಗಳಿಗೆ ಸಿಗುವ ಮೊದಲ ಪ್ರಾಶಸ್ಯದ ಮತಗಳನ್ನು ಆರಂಭಿಕವಾಗಿ ಎಣಿಕೆ ಮಾಡಲಾಗುತ್ತದೆ. ಮೊದಲ ಪ್ರಾಶಸ್ಯದ ಮತಗಳ ಎಣಿಕೆಯಲ್ಲಿ ಬಹುಮತ ದೊರೆಯದಿದ್ದಲ್ಲಿ 2ನೇ ಪ್ರಾಶಸ್ಯದ ಮತದಾನವನ್ನು ಪರಿಗಣಿಸಲಾಗುತ್ತದೆ. ಹೀಗೆಯೇ ಬಹುಮತ ಬರುವವರೆಗೂ ಮುಂದುವರಿಯುತ್ತದೆ.

    ಮುಂದಿನ ಚುನಾವಣೆ ಯಾವಾಗ?
    ಸಂವಿಧಾನದ ಪ್ರಕಾರ, ಉಪರಾಷ್ಟ್ರಪತಿ ಹುದ್ದೆ ಖಾಲಿಯಾದ 60 ದಿನಗಳ ಒಳಗೆ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ. ಚುನಾವಣಾ ಆಯೋಗವು ಶೀಘ್ರದಲ್ಲೇ ಉಪ ರಾಷ್ಟ್ರಪತಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸುತ್ತದೆ. ಉಪಾಧ್ಯಕ್ಷರನ್ನು ಲೋಕಸಭೆ ಮತ್ತು ರಾಜ್ಯಸಭಾ ಸಂಸದರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ, 543 ಲೋಕಸಭಾ ಸಂಸದರು ಮತ್ತು 245 ರಾಜ್ಯಸಭಾ ಸಂಸದರು (ನಾಮನಿರ್ದೇಶಿತ ಸದಸ್ಯರು ಸೇರಿದಂತೆ) ಸೇರಿದಂತೆ ಒಟ್ಟು 788 ಮತದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಈ ಚುನಾವಣೆಯನ್ನು ರಹಸ್ಯ ಮತದಾನದ ಮೂಲಕ ನಡೆಸಲಾಗುತ್ತದೆ.

    ಲೋಕಸಭೆಯಲ್ಲಿ ಎನ್‌ಡಿಎ ಒಕ್ಕೂಟವೂ 542ರ ಪೈಕಿ 293 ಸದಸ್ಯರ ಬೆಂಬಲ ಹೊಂದಿದ್ದು, ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲ ಹೊಂದಿದೆ. ಆಡಳಿತರೂಢ ಒಕ್ಕೂಟವೂ ಒಟ್ಟು 422 ಸದಸ್ಯರ ಬೆಂಬಲ ಹೊಂದಿದೆ.

    ಅರ್ಹತೆಗಳೇನು?
    *ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ಭಾರತದ ನಾಗರಿಕನಾಗಿರಬೇಕು.
    *ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.
    *ರಾಜ್ಯಸಭೆಯ ಸದಸ್ಯನಾಗಿ ಚುನಾಯಿತಗೊಳ್ಳಲು ಅರ್ಹತೆಯನ್ನು ಹೊಂದಿರಬೇಕು.
    *ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಸ್ಥಳೀಯ ಪ್ರಾಧಿಕಾರಗಳು ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಗಳ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
    *1974ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳ ಅಡಿಯಲ್ಲಿ, ಅಭ್ಯರ್ಥಿಯ ನಾಮನಿರ್ದೇಶನವನ್ನು ಚುನಾವಣಾ ಕಾಲೇಜಿನಿಂದ ಕನಿಷ್ಠ 20 ಪ್ರಸ್ತಾವಕರು ಮತ್ತು 20 ಸಮರ್ಥಕರು ಬೆಂಬಲಿಸಬೇಕು,
    *15,000 ರೂ. ಭದ್ರತಾ ಠೇವಣಿಯನ್ನು ಇಡಬೇಕು.

    ಬಿಜೆಪಿ ನೇತೃತ್ವದ ಎನ್​ಡಿಎ ಲೋಕಸಭೆಯಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ( 542 ಸದಸ್ಯರು) ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲವನ್ನು ಹೊಂದಿದೆ. ಇನ್ನು ನಾಮನಿರ್ದೇಶಿತ ಸದಸ್ಯರುಗಳನ್ನು ಸೇರಿಸಿದರೆ, ಆಡಳಿತ ಒಕ್ಕೂಟವು 786 ಸದಸ್ಯರಲ್ಲಿ 422 ಸದಸ್ಯರ ಬೆಂಬಲವನ್ನು ಹೊಂದಿದೆ.

    ಸಂಭಾವ್ಯ ಅಭ್ಯರ್ಥಿ ಯಾರು?
    ಜನತಾದಳ-ಸಂಯುಕ್ತ ಸಂಸದರಾಗಿರುವ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ನೋಡಲಾಗುತ್ತಿದೆ. ಅವರು 2020 ರಿಂದ ಈ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದು,ಸರ್ಕಾರದ ವಿಶ್ವಾಸವನ್ನು ಹೊಂದಿದ್ದಾರೆ.

    ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಕೂಡ ಮುಂದಿನ ಉಪ ರಾಷ್ಟ್ರಪತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಅವರು ಮೋದಿ ಮತ್ತು ಅಮಿತ್ ಶಾ ಅವರ ಸಮೀಪದಲ್ಲಿದ್ದು, ಬಿಜೆಪಿ ಅಧ್ಯಕ್ಷತ್ವ ಅವಧಿ ಮುಕ್ತಾಯವಾಗುತ್ತಿರುವುದರಿಂದ ನಡ್ಡಾ ಅವರಿಗೆ ಈ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪರಾಷ್ಟ್ರಪತಿ ಚುನಾವಣೆ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಅವರಿಗೂ ಈ ಹುದ್ದೆಗೇರುವ ಅವಕಾಶವಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.

    ಉಪರಾಷ್ಟ್ರಪತಿ ಹುದ್ದೆಯ ಇತಿಹಾಸ:
    1950ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದಾಗ ಉಪರಾಷ್ಟ್ರಪತಿ ಹುದ್ದೆಯನ್ನು ಸೃಜಿಸಲಾಯಿತು. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿ 1952ರಲ್ಲಿ ಆಯ್ಕೆಯಾದರು. ಒಟ್ಟಾರೆಯಾಗಿ, ಭಾರತವು ಇದುವರೆಗೆ 14 ಉಪರಾಷ್ಟ್ರಪತಿಗಳನ್ನು ಕಂಡಿದೆ.

  • ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

    ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ

    ನವದೆಹಲಿ: ವ್ಯಾಪಕ ಚರ್ಚೆ ಬೆನ್ನಲ್ಲೇ ಭಾರತದ ಮುಂದಿನ ಉಪ ರಾಷ್ಟ್ರಪತಿ (Vice President) ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಎನ್‌ಡಿಎ ಮೈತ್ರಿಕೂಟ ತೆರೆ ಎಳೆದಿದೆ. ಬಿಜೆಪಿಯಿಂದಲೇ (BJP) ಮುಂದಿನ ಅಭ್ಯರ್ಥಿ ಆಯ್ಕೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸ ಮುಗಿಸಿ ವಾಪಸ್‌ ಆದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಮೂಲಗಳ ಪ್ರಕಾರ, ಬಿಜೆಪಿಯೊಂದಿಗೆ ಸೈದ್ಧಾಂತಿಕ ಹೊಂದಾಣಿಕೆ ಹಾಗೂ ಸಂಸದೀಯ ಕಾರ್ಯವಿಧಾನದಲ್ಲಿ ಹೆಚ್ಚಿನ ಅನುಭವ ಹೊಂದಿರುವ ವ್ಯಕ್ತಿಯನ್ನ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈಗ ಆಯ್ಕೆಯಾಗುವ ರಾಷ್ಟ್ರಪತಿಗಳು 5 ವರ್ಷಗಳ ಅಧಿಕಾರವಧಿಯಲ್ಲಿ ಇರುತ್ತಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

    ಎನ್‌ಡಿಎ ಭಾಗವಾದ ಜೆಡಿ(ಯು) ನಿಂದ ಉಪ ರಾಷ್ಟ್ರಪತಿ ಹುದ್ದೆಗೆ ಯಾರೊಬ್ಬರೂ ಸ್ಪರ್ಧೆಯಲ್ಲಿಲ್ಲ. ಹೀಗಾಗಿ ತೆಲುಗು ದೇಶಂ ಪಕ್ಷ (TDP) ಮತ್ತು ಜೆಡಿ(ಯು) ಸೇರಿದಂತೆ ಮೈತ್ರಿಕೂಟದ ಎಲ್ಲಾ ಪಕ್ಷಗಳು ಬಿಜೆಪಿಯಿಂದಲೇ ಅಭ್ಯರ್ಥಿ ಆಯ್ಕೆ ಮಾಡಲು ಒಮ್ಮತ ಸೂಚಿಸಿವೆ ಎಂದು ಹೇಳಲಾಗಿದೆ. ಸದ್ಯ ಪ್ರಧಾನಿ ಮೋದಿ (Narendra Modi) ಅವರು ಬ್ರಿಟನ್‌, ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದು, ವಾಪಸ್‌ ಬಂದ ಬಳಿಕ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 4 ವರ್ಷಗಳಲ್ಲಿ 1.9 ಲಕ್ಷ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳಿಗೆ ಅನುಮೋದನೆ: ಅಶ್ವಿನಿ ವೈಷ್ಣವ್

    ಚುನಾವಣಾ ಪ್ರಕ್ರಿಯೆ ಶುರು ಮಾಡಿದ ಆಯೋಗ
    ಅನಾರೋಗ್ಯ ಕಾರಣ ನೀಡಿ ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ (Jagdeep Dhankhar) ರಾಜೀನಾಮೆ ನೀಡಿದ 2 ದಿನಗಳ ನಂತರ, ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಭಾರತೀಯ ಚುನಾವಣಾ ಆಯೋಗ (Election Commission) ಶುರು ಮಾಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇದನ್ನೂ ಓದಿ: ಟೇಕಾಫ್ ವೇಳೆ ಅಹಮದಾಬಾದ್-ದಿಯು ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ – ಹಾರಾಟ ಸ್ಥಗಿತ

    ಆಯೋಗದ ಪ್ರಕಟಣೆಯಲ್ಲಿ ಏನಿದೆ?
    ಭಾರತದ ಚುನಾವಣಾ ಆಯೋಗವು, ವಿಧಿ 324ರ ಅಡಿಯಲ್ಲಿ, ಭಾರತದ ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ (Vice Presidential Election) ನಡೆಸುವ ಅಧಿಕಾರವನ್ನು ಹೊಂದಿದೆ. ಭಾರತದ ಉಪಾಧ್ಯಕ್ಷರ ಹುದ್ದೆಗೆ ಚುನಾವಣೆಯನ್ನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆ, 1952 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು, ಅಂದ್ರೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು, 1974ರ ಮೂಲಕ ನಿಯಂತ್ರಿಸಲಾಗುತ್ತದೆ. ಅದರಂತೆ ಭಾರತೀಯ ಚುನಾವಣಾ ಆಯೋಗವು 2025ರ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿದೆ. ಈ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಚುನಾವಣಾ ವೇಳಾಪಟ್ಟಿಯನ್ನ ಆದಷ್ಟು ಬೇಗ ಘೋಷಿಸಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

    74 ವರ್ಷದ ಧನಕರ್‌ ಅವರು ಅನಾರೋಗ್ಯ ಕಾರಣ ನೀಡಿ ಸೋಮವಾರ (ಜು.21) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಕಳುಹಿಸಿದ್ದು, ‘ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದರು. ಈ ವೇಳೆ ಅವಕಾಶಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.

    ಧನಕರ್ ಅವರು 2022ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ 2027ರ ಆಗಸ್ಟ್ 10ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: 5 ವರ್ಷದ ಬಳಿಕ ಚೀನಿಯರಿಗೆ ಭಾರತ ಪ್ರವಾಸಕ್ಕೆ ಅನುಮತಿ

  • ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ನವದೆಹಲಿ: ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

    ಅನಾರೋಗ್ಯದ ಕಾರಣ ನೀಡಿ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದು, ಅವರ ಅನುಮೋದನೆಯ ನಂತರ ಗೃಹ ಸಚಿವಾಲಯವು ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದೆ.ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಇಂದು ಅಧಿವೇಶನದಲ್ಲಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿಲ್ಲ. ಹೀಗಾಗಿ ಉಪರಾಷ್ಟ್ರಪತಿಗಳ ಅಧಿಕಾರಾವಧಿಯ ಬಗ್ಗೆ ತಿಳಿಸುವ ಸಂವಿಧಾನದ 67ನೇ ವಿಧಿಯ ಅಡಿಯಲ್ಲಿ, ಹೊಸ ಉಪಾಧ್ಯಕ್ಷರ ಆಯ್ಕೆಯಾಗುವವರೆಗೂ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಾರೆ.

    ರಾಜ್ಯಸಭಾ ಅಧ್ಯಕ್ಷರಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ನಂತರ ಸೋಮವಾರ (ಜು.21) ರಾಜೀನಾಮೆ ಘೋಷಿಸಿದ್ದರು. ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದ ಪತ್ರದಲ್ಲಿ, ಆರೋಗ್ಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ರಾಜೀನಾಮೆ ಘೋಷಿಸಿರುವುದಾಗಿ ಉಲ್ಲೇಖಿಸಿದ್ದರು.

    ಕೆಲ ದಿನಗಳ ಹಿಂದೆ ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.ಇದನ್ನೂ ಓದಿ: ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

  • ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಜಗದೀಪ್ ಧನಕರ್

    ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಜಗದೀಪ್ ಧನಕರ್

    ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Varma) ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸಿದ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ತಿಳಿಸಿದ್ದಾರೆ.

    ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸಂಪಾದಿಸಿರುವ `ದಿ ಕಾನ್‌ಸ್ಟಿಟ್ಯೂಷನ್ ವಿ ಅಡಾಪ್ಟೆಡ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ವಿಚಾರಣಾ ಸಮಿತಿಗೆ ಯಾವುದೇ ಸಾಂವಿಧಾನಿಕ ವ್ಯಾಪ್ತಿಯಾಗಲಿ ಅಥವಾ ಕಾನೂನಿನ ಮಾನ್ಯತೆಯಾಗಲಿ ಇಲ್ಲ. ಆಂತರಿಕ ವಿಚಾರಣಾ ಸಮಿತಿಯಲ್ಲಿದ್ದ ಎರಡು ಹೈಕೋರ್ಟ್ಗಳ ನ್ಯಾಯಮೂರ್ತಿಗಳಿಗೆ ಸಾಕಷ್ಟು ಕಷ್ಟವಾಗಿದೆ. ಅದರಲ್ಲಿ ಒಂದು ಹೈಕೋರ್ಟ್ನ ವ್ಯಾಪ್ತಿ, ಎರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದರು.ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್‌ಗೆ ಜಾಮೀನು ಮಂಜೂರು

    ಸಮಿತಿಯ ನ್ಯಾಯಮೂರ್ತಿಗಳು ಯಾವುದೇ ಸಾಂವಿಧಾನಿಕ ಆಧಾರ ಅಥವಾ ಕಾನೂನು ಮಾನ್ಯತೆಯಾಗಲಿ ಇಲ್ಲದ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಇದು ಅಪ್ರಸ್ತುತವಾಗಿತ್ತು. ನ್ಯಾಯಾಲಯದ ಆಡಳಿತಾತ್ಮಕ ವಿಭಾಗದಲ್ಲಿ ವಿಕಸಿತವಾಗಿರುವ ಕಾರ್ಯ ವಿಧಾನದ ಮೂಲಕ ತನಿಖಾ ವರದಿಯನ್ನು ಯಾರಿಗಾದರೂ ಕಳುಹಿಸಬಹುದಾಗಿದೆ. ತನಿಖಾ ಸಮಿತಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದೆಯೇ ಎಂಬುದು ಜನರಿಗೆ ತಿಳಿದಿಲ್ಲ. ನ್ಯಾ. ವರ್ಮಾ ನಿವಾಸಕ್ಕೆ ಹಣ ಬಂದಿದ್ದು ಹೇಗೆ? ಅದರ ಹಿಂದಿನ ಉದ್ದೇಶ ಏನು? ಹಾಗೂ ಘಟನೆಯ ಹಿಂದಿರುವ ದೊಡ್ಡ ತಿಮಿಂಗಿಲಗಳ ಬಗ್ಗೆ ಅರಿಯಲು ದೇಶ ಕಾಯುತ್ತಿದೆ. ಘಟನೆ ನಡೆದು ಒಂದು ವಾರ ಕಳೆದರೂ 140 ಕೋಟಿ ಜನರಿರುವ ದೇಶಕ್ಕೆ ಆ ಬಗ್ಗೆ ಹೆಚ್ಚಿನ ವಿಷಯ ತಿಳಿಯಲಿಲ್ಲ. ಇಂತಹ ಎಷ್ಟು ಘಟನೆಗಳು ನಡೆದಿರಬಹುದು ಎಂದು ಊಹಿಸಿ. ಅಂತಹ ಪ್ರತಿಯೊಂದು ಘಟನೆಯೂ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

    ಪ್ರಕರಣದ ಆರಂಭಿಕ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಕಾರ್ಯ ಶ್ಲಾಘನೀಯ. ಇದು ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಸ್ವಲ್ಪಮಟ್ಟಿಗೆ ಮರುಸ್ಥಾಪಿಸಿದೆ. ನ್ಯಾ.ವರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕಾರ್ಯಾಂಗದ ಕೈಗಳನ್ನು ಕಟ್ಟಿಹಾಕಿದ 1991ರ ಕೆ ವೀರಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ. ಸಮಗ್ರ ಮತ್ತು ವೈಜ್ಞಾನಿಕ ತನಿಖೆ ಮಾತ್ರ ಇಂತಹ ವಿವಾದವನ್ನು ಕೊನೆಗಾಣಿಸಲು ಸಾಧ್ಯ ಎಂದರು.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಸ್ಕೀಂ ನಿಲ್ಲೋದಿಲ್ಲ: ಡಿಕೆಶಿ ಸ್ಪಷ್ಟನೆ

  • ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್

    ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು- ಉಪರಾಷ್ಟ್ರಪತಿ ಜಗದೀಪ್ ಧನಕರ್

    ಹುಬ್ಬಳ್ಳಿ: ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: 500 ರೂ.ಗೆ ಗ್ಯಾಸ್ ಸಿಲಿಂಡರ್, 300 ಯೂನಿಟ್ ವಿದ್ಯುತ್ ಉಚಿತ – ದೆಹಲಿ ಚುನಾವಣೆಗೆ `ಕೈ’ ಗ್ಯಾರಂಟಿ

    ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮಾತನಾಡಿದ ಅವರು, ಜೈನ ಧರ್ಮ ಮೂರು ವಿಚಾರಗಳನ್ನು ಪ್ರತಿಬಿಂಬಿಸುತ್ತದೆ. ನಂಬಿಕೆ, ಜ್ಞಾನ, ಅಧ್ಯಾತ್ಮದ ಪ್ರತಿರೂಪವೇ ಜೈನ ಧರ್ಮ. ಸುಮೇರು ಪರ್ವತ ಧಾರ್ಮಿಕತೆಯ ಮೇರು ಪರ್ವತ. ಸದ್ಯ ವಿಶ್ವ ಶಾಂತಿಯ ಅಗತ್ಯವಿದೆ. ಮಾನವೀಯ ಜೈನ ಧರ್ಮ ತತ್ವಗಳನ್ನು ಅಳವಡಿಕೊಳ್ಳಬೇಕು. ಮಠ-ಮಂದಿರ ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಮಠ-ಮಂದಿರಗಳು ಸಾಮಾಜಿಕ ಬದಲಾವಣೆಗೂ ಕಾರಣವಾದ ಕೇಂದ್ರಗಳು. ಸಂಘರ್ಷಗಳ ಕಾರಣದಿಂದ ಜಾಗತಿಕ ಬಿಕ್ಕಟ್ಟುಗಳು ಹೆಚ್ಚಿವೆ. ಮಾತುಕತೆಗೆ ಮಾನ್ಯತೆ ಸಿಗುತ್ತಿಲ್ಲ. ಮಾತಿಗೆ ಬೆಲೆ ಕೊಡುವ ಕೆಲಸ ಆಗಬೇಕಿದೆ. ಶಾಂತಿ ಮಂತ್ರ ಜಪಿಸಬೇಕಿದೆ. ಭಾರತ ಜಾಗತಿಕ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

    ನಿಜವಾದ ವಿಕಾಸವಾದಲ್ಲಿ ಭಾರತ ವಿಶ್ವಗುರು ಆಗುತ್ತದೆ. ನಮ್ಮ ಸಿರಿವಂತ ಸಂಸ್ಕೃತಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ. ಮಾನವೀಯ ಮೌಲ್ಯಗಳು ಶಾಂತಿಗೆ ನಾಂದಿಹಾಡುತ್ತದೆ. ನಮ್ಮ ನಾಗರಿಕತೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಅತ್ಯುನ್ನತ ಆಧ್ಯಾತ್ಮಿಕ ಇತಿಹಾಸವಿದೆ. ಭಾರತದ ಸಂಪ್ರದಾಯದ ಉಳಿವಿನ ಅಗತ್ಯವಿದೆ. ಗುಣಧರನಂದಿ ಮಾರ್ಗದರ್ಶನದಲ್ಲಿ ವರೂರು ಕ್ಷೇತ್ರ ಬೆಳೆದಿದೆ. ಸಮಾನತೆ, ಸಹಬಾಳ್ವೆಗೆ ಇಂತಹ ಕ್ಷೇತ್ರಗಳು ವೇದಿಕೆಗಳಾಗಿವೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರೋದಕ್ಕೆ ಖುಷಿಯಾಗ್ತಿದೆ ಎಂದು ತಿಳಿಸಿದರು.ಇದನ್ನೂ ಓದಿ: ಯಕ್ಷಗಾನದ ಟೆಂಟ್‌ಗೆ ನುಗ್ಗಿದ ಪೊಲೀಸರು – ಈಗ ಕಾಂಗ್ರೆಸ್ Vs ಬಿಜೆಪಿ ಜಟಾಪಟಿ

  • ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    – ಭಾರತೀಯ ಮೂಲದ ಉಷಾ ಅವರ ಪತಿ ಜೆಡಿ ವ್ಯಾನ್ಸ್

    ಹೈದರಾಬಾದ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ (JD Vance) ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿನ್ನೆಲೆ ಆಂಧ್ರಪ್ರದೇಶದ (Andhra Pradesh) ವಡ್ಲೂರಿನಲ್ಲಿ (Vadluru) ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಜೊತೆಗೆ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಪುಸ್ತಕ ತೆರೆದ್ರೆ ಬರೀ ಕಪ್ಪು ಕಾಣಿಸ್ತದೆ, ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ: ಅಶೋಕ್

    ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆಡಿ ವ್ಯಾನ್ಸ್ ಆಂಧ್ರಪ್ರದೇಶದ ವಡ್ಲೂರ ಗ್ರಾಮದ ಅಳಿಯ. ಹೌದು ವಡ್ಲೂರಿನ ಉಷಾ ಅವರನ್ನು ಜೆಡಿ ವ್ಯಾನ್ಸ್ ವಿವಾಹವಾಗಿದ್ದಾರೆ.

    ಉಷಾ ಹಿನ್ನೆಲೆ ಏನು?
    ಆಂಧ್ರಪ್ರದೇಶದ ವಡ್ಲೂರಿನಲ್ಲಿದ್ದ ಉಷಾ ಪೋಷಕರು 1986ರಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದರು. ಆಗ ಆ ದಂಪತಿಗೆ ಜನಿಸಿದ ಮಗು ಉಷಾ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ತಮ್ಮ ಬಾಲ್ಯವನ್ನು ಕಳೆದರು.

    ಯೇಲ್ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಪದವಿಯನ್ನು ಪಡೆದು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (University of Cambridge) ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಯೇಲ್ ಜರ್ನಲ್ ಆಫ್ ಲಾ, ಟೆಕ್ನಾಲಜಿ ಮತ್ತು ದಿ ಯೇಲ್ ಲಾ ಜರ್ನಲ್‌ನಲ್ಲಿ ವ್ಯವಸ್ಥಾಪಕ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

    ಯೇಲ್ ಲಾ ಸ್ಕೂಲ್‌ನಲ್ಲಿ ಉಷಾ ಹಾಗೂ ಜೆಡಿ ವ್ಯಾನ್ಸ್ ಮೊದಲ ಬಾರಿಗೆ ಭೇಟಿಯಾದರು. ಇದಾದ ಬಳಿಕ 2014ರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಈಗ ಮೂರು ಮಕ್ಕಳನ್ನು ಹೊಂದಿದ್ದಾರೆ. ಜೆಡಿ ವ್ಯಾನ್ಸ್ ಅವರ ರಾಜಕೀಯ ವೃತ್ತಿಜೀವನದುದ್ದಕ್ಕೂ ಉಷಾ ಬೆಂಬಲ ನೀಡಿದ್ದಾರೆ. ಭಾರತೀಯ ಮೂಲದ ಮಹಿಳೆಯಾಗಿರುವ ಉಷಾ ಅವರ ಪತಿ ಇದೀಗ ಅಮೆರಿಕದ ಉಪಾಧ್ಯಕ್ಷರಾಗಿದ್ದು, ಆಂಧ್ರಪ್ರದೇಶದ ವಡ್ಲೂರಿನಲ್ಲಿ ಸಂಭ್ರಮ ಮನೆ ಮಾಡಿದೆ.ಇದನ್ನೂ ಓದಿ: ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?