Tag: Vibhuti

  • ವಿಭೂತಿ ಹಾಕಿದ್ದಕ್ಕೆ ಕತ್ತೆ ಅಂದ್ರು, ಬಲವಂತವಾಗಿ ಮತಾಂತರಿಸಲು ಯತ್ನಿಸಿದ್ರು – ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿ ಆರೋಪ

    ವಿಭೂತಿ ಹಾಕಿದ್ದಕ್ಕೆ ಕತ್ತೆ ಅಂದ್ರು, ಬಲವಂತವಾಗಿ ಮತಾಂತರಿಸಲು ಯತ್ನಿಸಿದ್ರು – ಶಿಕ್ಷಕಿ ವಿರುದ್ಧ ವಿದ್ಯಾರ್ಥಿನಿ ಆರೋಪ

    ಚೆನ್ನೈ: ನನ್ನ ಧಾರ್ಮಿಕ ಗುರುತನ್ನು ಹೀಯಾಳಿಸಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದರು ಎಂದು ತಮಿಳುನಾಡಿನ ತಿರುಪ್ಪೂರ್‍ನ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

    ಹಣೆಯ ಮೇಲೆ ವಿಭೂತಿ ಹಾಕಿಕೊಂಡಿದ್ದಕ್ಕೆ ಶಿಕ್ಷಕಿ ನನ್ನನ್ನು ವಿಭೂತಿ ಕತ್ತೆ ಎಂದು ಹೀಯಾಳಿಸಿದ್ದಾರೆ. ಅಲ್ಲದೇ ಒಂದು ಬಾರಿ ನನ್ನ ಕೈಯನ್ನು ನೀರಿನಲ್ಲಿರಿಸಿ ಯೇಸುವಿನ ನಾಮವನ್ನು ಬಲವಂತವಾಗಿ ಹೇಳಿಸಿದ್ದಾರೆ. ನಂತರ ತನ್ನ ಕೈಯಲ್ಲಿದ್ದ ನೀರಿನಿಂದ ಹಿಂದೂ ಹುಡುಗಿಯರ ಹೊಟ್ಟೆಯನ್ನು ಮೂರು ಬಾರಿ ಮುಟ್ಟಿಸಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಸ್ಯಾಂಡಲ್‌ವುಡ್‌ ಕ್ವೀನ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 19 ವರ್ಷ: ಸದ್ಯದಲ್ಲೇ ರೀ ಎಂಟ್ರಿ

    ಪ್ರತಿ ದಿನ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪ್ರಾರ್ಥನೆ ಮಾಡುವಂತೆ ತಿಳಿಸಿದರು. ಒಂದು ದಿನ ತರಗತಿಯಲ್ಲಿ ನಮಗೆ ಪ್ರಾಣವನ್ನು ನೀಡಿ, ನಮ್ಮನ್ನು ರಕ್ಷಿಸುತ್ತಿರುವವರು ಯಾರು ಎಂದು ಶಿಕ್ಷಕಿ ಕೇಳಿದ್ದರು. ಈ ವೇಳೆ ನಾವು ಬೇರೆ, ಬೇರೆ ಹೆಸರುಗಳನ್ನು ಹೇಳಿದ್ದಕ್ಕೆ, ನೀವು ಯೇಸುವಿನ ಹೆಸರನ್ನು ಏಕೆ ಹೇಳಲಿಲ್ಲ ಎಂದು ನಮ್ಮನ್ನು ಪ್ರಶ್ನಿಸಿದ್ದರು ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಶಿಕ್ಷಕಿಯೊಬ್ಬರು ದೇವರುಗಳಲ್ಲಿ ಬಲಶಾಲಿ ಯಾರು ಎಂದು ಕೇಳಿದ್ದರು. ಅದಕ್ಕೆ ನಾನು ಶಿವ ಎಂದು ಹೇಳಿದ್ದೆ. ಆದರೆ ಅವರು ನನ್ನ ಹೇಳಿಕೆಯನ್ನು ಅಲ್ಲಗಳೆದರು. ಜೀಸಸ್ ದೇವರುಗಳಲ್ಲಿ ಬಲಶಾಲಿ ವಾದಿಸಿದರು ಎಂದು ವಿದ್ಯಾರ್ಥಿನಿ ತನಗಾದ ಅಪಮಾನವನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರದ ಬಗ್ಗೆ ವಿದ್ಯಾರ್ಥಿನಿ ಪೋಷಕರು, ಶಿಕ್ಷಕಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಆರಂಭಿಸಲಾಗಿದೆ.

    ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ನಾರಾಯಣ ತ್ರಿಪಾಠಿ, ಆಡಳಿತಾರೂಢ ಡಿಎಂಕೆ ಸರ್ಕಾರ ಬಲವಂತದ ಮತಾಂತರದ ಘಟನೆಗಳಿಗೆ ಮೂಕಪ್ರೇಕ್ಷಕವಾಗಿದೆ. ಈ ವಿಚಾರವಾಗಿ ಪೊಲೀಸರು ಮತ್ತು ಸರ್ಕಾರ ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಮತಾಂತರವು ಅತ್ಯಂತ ಅಪಾಯಕಾರಿ. ತಮಿಳುನಾಡಿನಲ್ಲಿ ತಕ್ಷಣವೇ ಮತಾಂತರ ವಿರೋಧಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

  • ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು

    ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಕೆ – 6 ತಿಂಗಳ ಮೊದಲೇ ವಿಭೂತಿ ಕೇಳಿದ್ದ ಶ್ರೀಗಳು

    ಬಾಗಲಕೋಟೆ: ಭೂಮಿ ಮೇಲಿನ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗುವ ಸುಳಿವು ಐದಾರು ತಿಂಗಳ ಹಿಂದೆಯೇ ಸಿಕ್ಕಿತ್ತಾ ಎಂಬ ಪ್ರಶ್ನೆ ಮೂಡಿದ್ದು, ಕ್ರಿಯಾಸಮಾಧಿಗೆ ಬಳಸಲಾಗಿರುವ ವಿಭೂತಿಗಟ್ಟಿ ತಯಾರಿಸಲು ಶ್ರೀಗಳು ಸೂಚನೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ.

    ಸಿದ್ದಗಂಗಾ ಶ್ರೀಗಳನ್ನು 6 ತಿಂಗಳ ಹಿಂದೆ ಭೇಟಿಯಾದ ವಿಭೂತಿ ತಯಾರಿಸುವ ಕುಟುಂಬ, ಅಂದು ಶ್ರೀಗಳು ಆಡಿರುವ ಮಾತನ್ನು ಸ್ಮರಿಸಿದೆ. ಸಿದ್ದಗಂಗಾ ಶ್ರೀಗಳು ಆರು ತಿಂಗಳ ಮುಂಚೆಯೇ ಎರಡು ಸಾವಿರ ಕ್ರಿಯಾಗಟ್ಟಿ ಮತ್ತು ಎಂಟು ಸಾವಿರ ವಿಭೂತಿಯನ್ನು ನೀಡಲು ಸೂಚಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.

    ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ಗ್ರಾಮದ ವೀರಯ್ಯ ಹಿರೇಮಠ ಕುಟುಂಬ ತಯಾರು ಮಾಡಿದ ವಿಭೂತಿಗಳನ್ನು ಶ್ರೀಗಳ ಕ್ರಿಯಾಸಮಾಧಿಗೆ ಬಳಸಲಾಗಿದೆ. ಶುದ್ಧ ದೇಶಿ ತಳಿಯ ಆಕಳ ಸಗಣಿಯಿಂದ ಓಂ ನಮಃ ಶಿವಾಯ ಮಂತ್ರ ಪಠಣದೊಂದಿಗೆ ಇವರು ವಿಭೂತಿ ತಯಾರು ಮಾಡುತ್ತಾರೆ. ಈ ಕುಟುಂಬ ಆರು ತಿಂಗಳ ಹಿಂದೆ ತುಮಕೂರಿನಲ್ಲಿ ಶ್ರೀಗಳನ್ನು ಭೇಟಿಯಾಗಿತ್ತು. ಆಗ ಶ್ರೀಗಳು ವಿಭೂತಿ ನೀಡಲು ತಿಳಿಸಿದ್ದರು.

    ವೀರಯ್ಯ ಹಿರೇಮಠ ಕುಟುಂಬ ಕಳೆದ 60 ವರ್ಷಗಳಿಂದ ಸಾಂಪ್ರದಾಯಿಕ ವೃತ್ತಿಯನ್ನಾಗಿ ವಿಭೂತಿ ತಯಾರಿಕೆ ಕಾರ್ಯ ಮಾಡುತ್ತಿದೆ. ಇವರು ತಯಾರಿಸುವ ವಿಭೂತಿ ಪವಿತ್ರವಾದದ್ದು ಹಾಗು ಅಷ್ಟೇ ಮಹತ್ವದ್ದು ಎಂದು ಕರೆಯಲಾಗುತ್ತದೆ. ಯಾವುದೇ ಕಲಬೆರಕೆ ಮಾಡದೇ ಪರಿಶುದ್ಧವಾದ ವಿಭೂತಿ ತಯಾರಿಸುವುದು ಇಲ್ಲಿನ ವಿಶೇಷತೆ.

    ದೇಶಿ ತಳಿಯ ಆಕಳುಗಳ ಸಗಣಿ ಬಳಸಿಕೊಂಡು ಅದನ್ನು ಬೂದಿ ಮಾಡಿ ನಂತರ ಅದನ್ನು ಸಾಣಿಗೆಯಲ್ಲಿ ಸೋಸಿ ಬಳಿಕ ಕ್ರಿಯಾಗಟ್ಟಿ ಮತ್ತು ವಿಭೂತಿಯನ್ನಾಗಿ ಮಾಡುತ್ತಾರೆ. ಈ ಕುಟುಂಬ ತಯಾರಿಸಿದ ವಿಭೂತಿಗಳನ್ನು ಯಾವುದೇ ಜಾತ್ರೆ, ಸಂತೆಯಲ್ಲಿ ಮಾರಾಟ ಮಾಡುವುದಿಲ್ಲ. ಬದಲಾಗಿ ವಿಭೂತಿಗಳನ್ನು ಕೇವಲ ಮಠಗಳಿಗೆ ಮಾತ್ರ ನೀಡುವುದು ಮತ್ತೊಂದು ವಿಶೇಷವಾಗಿದೆ. ದೇಶದ ವಿವಿಧ ಪ್ರಮುಖ ಮಠಗಳಿಗೆ ಇವರ ವಿಭೂತಿಗಳು ರವಾನೆಯಾಗುತ್ತವೆ. ಕಂಚಿ, ಕಾಶಿ, ಸಿದ್ದರಾಮೇಶ್ವರ, ಮಠ ಹುಬ್ಬಳ್ಳಿ ಮೂರು ಸಾವಿರ ಮಠ ಸೇರಿದಂತೆ ಪ್ರಮುಖ ಮಠಗಳಿಗೆ ಇವರೇ ವಿಭೂತಿಗಳನ್ನು ಪೂರೈಸುತ್ತಾರೆ.

    ಈ ಕುಟುಂಬದ ಸದಸ್ಯರೇ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಿಭೂತಿಗಳನ್ನು ನೀಡಿದ್ದಾರೆ. ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿದ್ದು ನೋವು ತಂದಿದೆ. ಅವರ ಕ್ರಿಯಾಸಮಾಧಿಗೆ ನಮ್ಮ ವಿಭೂತಿ ಬಳಸಿಕೊಂಡಿದ್ದು ನಮ್ಮ ಜೀವನ ಪಾವನವಾಯಿತು. ಇದು ನಮಗೆ ಶ್ರೀಗಳ ಆಶೀರ್ವಾದ ಎಂದು ವಿಭೂತಿ ತಯಾರಿಸಿದ ಕುಟುಂಬ ತಿಳಿಸಿದೆ. ಸಿದ್ದಗಂಗಾ ಶ್ರೀಗಳ ಕ್ರಿಯಾಸಮಾಧಿಗೆ ಬಸವಣ್ಣನ ನೆಲದ ವಿಭೂತಿ ಬಳಸಿದ್ದು ವಿಶೇಷವಾಗಿದ್ದು, ಇದಕ್ಕಾಗಿ ಆರು ತಿಂಗಳ ಮುಂಚೆಯೇ ವಿಭೂತಿ ನೀಡಲು ಹೇಳಿದ್ದ ಶ್ರೀಗಳು ಹೇಳಿರುವುದು ಅಚ್ಚರಿ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv