Tag: Veterinarian

  • ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು – ಪ್ರಾಣಿಗಳು ಸತ್ತರೆ ಬಂಡೀಪುರ, ಮೈಸೂರು ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ

    ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು – ಪ್ರಾಣಿಗಳು ಸತ್ತರೆ ಬಂಡೀಪುರ, ಮೈಸೂರು ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ

    – ಕಳೆದ ಎಂಟತ್ತು ತಿಂಗಳಿಂದ ಪಶು ವೈದ್ಯರ ಹುದ್ದೆ ಖಾಲಿ

    ಚಾಮರಾಜನಗರ: ಜಿಲ್ಲೆ ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ. ಇಲ್ಲಿ ಪ್ರಾಣಿಗಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಬೇರೆ ಜಿಲ್ಲೆಯ ಅಥವಾ ಬಂಡೀಪುರದ ವೈದ್ಯರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿಯಿದೆ. ಹೊರಗುತ್ತಿಗೆ ಆಧಾರದ ಮೇಲೆ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು ಕೊಟ್ಟರೂ ಯಾರೂ ಬರುತ್ತಿಲ್ಲ.

    ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ (BRT Tiger Reserve), ರಾಜ್ಯದಲ್ಲಿರುವ ಪ್ರಮುಖ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂದಾಗಿದೆ. ಹುಲಿ, ಚಿರತೆ, ಆನೆ ಸೇರಿ ಹಲವು ಜೀವ ವೈಶಿಷ್ಟ್ಯಗಳ ತಾಣವಾಗಿದೆ. ಇಂತಹ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯದಲ್ಲೂ ಕೂಡ ಪಶು ವೈದ್ಯರ ಕೊರತೆಯಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದಲ್ಲೂ ಕೂಡ ಒಂದೊಂದು ಹುಲಿ ಸಂರಕ್ಷಿತಾರಣ್ಯದಲ್ಲಿ ಕೂಡ ವೈದ್ಯರಿರಬೇಕು ಎಂಬ ನಿಯಮವಿದೆ. ಆದರೆ, ಈ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಶು ವೈದ್ಯರ ಸ್ಥಾನ ಕಳೆದ ಎಂಟು ತಿಂಗಳಿಂದ ಖಾಲಿ ಇದೆ. ಇದನ್ನೂ ಓದಿ: Chamarajanagara | ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್‌

    ಹುಲಿ ಸೇರಿ ಇತರೆ ಪ್ರಾಣಿಗಳು ಸತ್ತರೆ ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಲೇಬೇಕು. ಸ್ವಾಭಾವಿಕವಾಗಿ ಸಾವನ್ನಪ್ಪಿದೆಯಾ ಅಥವಾ ಯಾರಾದರೂ ಬೇಟೆ, ದುಷ್ಕೃತ್ಯಗಳಿಂದ ಸಾವಾಗಿದೆಯಾ ಎಂಬ ಮಾಹಿತಿ ಪಡೆಯುವುದು ಅವಶ್ಯಕವಾಗಿದೆ. ಅಲ್ಲದೇ ಪ್ರಾಣಿಗಳು ಗಾಯಗೊಂಡರೆ ಅಂತಹ ಪ್ರಾಣಿಗಳ ಮೇಲೆ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ಕೊಡುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಾದರೂ ಕೂಡ ಅರಣ್ಯ ಪ್ರದೇಶಕ್ಕೆ ಪಶು ವೈದ್ಯರ ಅವಶ್ಯಕತೆಯಿದೆ.

    ಪಶು ವೈದ್ಯರ ಹುದ್ದೆ ಖಾಲಿ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲೂ ಪಶು ವೈದ್ಯರ ನೇಮಕಾತಿಗೆ ಜಾಹೀರಾತು ಕೊಟ್ಟಿದ್ದೇವೆ. ಆದರೆ, ಇಲ್ಲಿಯವರೆಗೂ ಕೂಡ ಯಾವುದೇ ಪಶು ವೈದ್ಯರು ಕೂಡ ಬಂದಿಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ: ರಸ್ತೆ ದಾಟಿದ ಗಜಪಡೆ – ಆತಂಕಕ್ಕೆ ಒಳಗಾದ ವಾಹನ ಸವಾರರು

  • ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯನನ್ನೆ ಅಪಹರಿಸಿ ಬಲವಂತದ ಮದುವೆ ಮಾಡಿದ್ರು

    ಪ್ರಾಣಿ ಪರೀಕ್ಷೆಗೆಂದು ಕರೆಸಿ ಪಶುವೈದ್ಯನನ್ನೆ ಅಪಹರಿಸಿ ಬಲವಂತದ ಮದುವೆ ಮಾಡಿದ್ರು

    ಪಾಟ್ನಾ: ಪ್ರಾಣಿ ಪರೀಕ್ಷಿಸಲು ಕರೆಸಿದ್ದ ಪಶುವೈದ್ಯನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ಘಟನೆ ಬಿಹಾರದ ಬೇಗುಸರಾಯ್‍ನಲ್ಲಿ ನಡೆದಿದೆ.

    ಸಂತ್ರಸ್ತನ ತಂದೆ ಈ ಕುರಿತು ಮಾತನಾಡಿದ್ದು, ನನ್ನ ಮಗನನ್ನು 12 ಗಂಟೆ ರಾತ್ರಿಗೆ ಪ್ರಾಣಿಯೊಂದಕ್ಕೆ ಆರೋಗ್ಯ ಸರಿಯಿಲ್ಲ ಎಂದು ಕರೆಸಿಕೊಂಡಿದ್ದರು. ಈ ವೇಳೆ ಮೂವರು ಬಂದು ನನ್ನ ಮಗನನ್ನು ಅಪಹರಿಸಿಕೊಂಡು ಹೋಗಿದ್ದಾರೆ. ವಿಷಯ ತಿಳಿದು ನಮಗೆ ಗಾಬರಿಯಾಯಿತು. ಅದಕ್ಕೆ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    ಬೇಗುಸರಾಯ್ ಎಸ್‍ಪಿ ಯೋಗೇಂದ್ರ ಕುಮಾರ್ ಈ ಕುರಿತು ಮಾತನಾಡಿದ್ದು, ಸಂತ್ರಸ್ತನ ತಂದೆ ಅವರೇ ದೂರನ್ನು ಬರೆದು ಪೊಲೀಸ್ ಠಾಣೆಗೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಎಸ್‍ಎಚ್‍ಒ ಮತ್ತು ಇತರ ಅಧಿಕಾರಿಗಳನ್ನು ಕೇಳಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    MARRIAGE

    ಇದೊಂದು ಪದ್ಧತಿ
    ವರನ ಅಪಹರಣ ಅಥವಾ ‘ಪಕದ್ವಾ ವಿವಾಹ’ ಎಂಬುದು ಬಿಹಾರದಲ್ಲಿ ನಡೆಯುವ ಪದ್ಧತಿಯಾಗಿದೆ. ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಇದು ಸಾಮಾನ್ಯವಾಗಿದೆ. ಈ ಪದ್ಧತಿಯಲ್ಲಿ ಬ್ರಹ್ಮಚಾರಿಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಹೊಂದಿರುವವರನ್ನು ವಧುವಿನ ಕುಟುಂಬ ಅಪಹರಿಸಿ ಮದುವೆ ಮಾಡಿಸುತ್ತಾರೆ. ಇದನ್ನೂ ಓದಿ:  ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಆರೋಪಿ ಭದ್ರತೆಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸರು 

  • ವಿಷ ಆಹಾರ ಸೇವನೆ – ಎರಡು ಎತ್ತು, ಒಂದು ಹಸು ಸಾವು

    ವಿಷ ಆಹಾರ ಸೇವನೆ – ಎರಡು ಎತ್ತು, ಒಂದು ಹಸು ಸಾವು

    ಮಂಡ್ಯ: ವಿಷ ಆಹಾರ ಸೇವಿಸಿದ ಪರಿಣಾಮ 2 ಎತ್ತು ಹಾಗೂ ಒಂದು ಹಸು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತರಾದ ರವಿ, ಪ್ರೀತಮ್ ಹಾಗೂ ಲೀಲಾ ಎಂಬುವವರಿಗೆ ಸೇರಿದ ರಾಸುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಮೃತಪಟ್ಟ ರಾಸುಗಳು ಅಂದಾಜು 1.20 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

    ವಿಷ ಆಹಾರ ಸೇವಿಸಿದ ರಾಸುಗಳು ಒದ್ದಾಡುತ್ತಿದ್ದವು ಕೂಡಲೇ ರೈತರು ಪಶು ವೈದ್ಯರಿಗೆ ಕರೆ ಮಾಡಿದ್ದಾರೆ. ವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮೃತಪಟ್ಟಿದ್ದವು.

    ಪಶುವೈದ್ಯ ಡಾ.ಗೋವಿಂದ ಹಾಗೂ ರಾಮ ಕೃಷ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಷ ಆಹಾರ ಸೇವಿಸಿ ಮೃತಪಟ್ಟಿವೆ ಎಂದು ದೃಢಪಡಿಸಿದ್ದಾರೆ. ರಾಸುಗಳು ಸಾವನ್ನಪ್ಪಿದ್ದರಿಂದ ಸರ್ಕಾರದಿಂದ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಫಿನಾಡಲ್ಲಿ ಸೀಳುದುಟಿಯ ವಿಚಿತ್ರ ಕರು ಜನನ

    ಕಾಫಿನಾಡಲ್ಲಿ ಸೀಳುದುಟಿಯ ವಿಚಿತ್ರ ಕರು ಜನನ

    ಚಿಕ್ಕಮಗಳೂರು: ಹುಟ್ಟುವಾಗಲೇ ನಾಲಿಗೆಯನ್ನು ಬಾಯಿಯ ಒಂದು ತುದಿಯಿಂದ ಹೊರಹಾಕಿಕೊಂಡು ಮೇಲ್ದುಟಿಯನ್ನ ಸೀಳಿಕೊಂಡ ವಿಚಿತ್ರವಾದ ಕರು ಹುಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಸಮೀಪದ ಬಿನ್ನಡಿ ಗ್ರಾಮದ ಸುರೇಶ್‍ಗೌಡ ಎಂಬವರ ಕೆಂಪಿ ಎಂಬ ಹಸು ಸೋಮವಾರ ಬೆಳಗ್ಗೆ ಕರುವಿಗೆ ಜನ್ಮ ನೀಡಿತ್ತು. ಆದರೆ ಹೆಣ್ಣು ಕರು ಹುಟ್ಟುವಾಗಲೇ ವಿಚಿತ್ರವಾಗಿ ಹುಟ್ಟಿದ್ದು ನಾಲಿಗೆಯನ್ನು ಹೊರಹಾಕಿಕೊಂಡು ಮೇಲ್ದುಟಿಯನ್ನ ಸೀಳಿಕೊಂಡಿದೆ.

    ಪ್ರಾಣಿಗಳನ್ನು ಇಷ್ಟಪಟ್ಟು ಸಾಕುವ ಸುರೇಶ್ ಗೌಡರು ಕರುವಿನ ಸ್ಥಿತಿ ಕಂಡು ಮಮ್ಮಲು ಮರುಗಿದ್ದಾರೆ. ಅಲ್ಲದೆ ಕರುವಿಗೆ ಎದ್ದು ನಿಲ್ಲುವ ಶಕ್ತಿಯೂ ಇಲ್ಲದಂತಾಗಿದೆ. ಎಬ್ಬಿಸಿ ನಿಲ್ಲಿಸಿದ್ರು ಸೊಂಟ ಹಾಗೂ ಕಾಲಿನಲ್ಲಿ ಬಲವಿಲ್ಲದೆ ಕೆಳಗೆ ಬಿಳುತ್ತಿದೆ. ತಾಯಿಯ ಬಳಿ ನಿಂತು ಹಾಲು ಕುಡಿಯುವ ಶಕ್ತಿಯೂ ಕರುವಿಗೆ ಇಲ್ಲದಂತಾಗಿದೆ.

    ಸ್ಥಳಕ್ಕೆ ಭೇಟಿ ನೀಡಿರುವ ಪಶು ವೈದ್ಯ ಚಿಕಿತ್ಸಿಕರು, ನಾಲ್ಕು ದಿನ ಕಳೆಯಲಿ, ಹಾಲು ಕುಡಿದ ಮೇಲೆ ದೇಹಕ್ಕೆ ಶಕ್ತಿ ಬಂದು ಎದ್ದು ನಿಲ್ಲಬಹುದು ಎಂದು ಹೇಳಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ಹಸುವಿನಿಂದ ಹಾಲು ಕರೆದು ಒಳಲೆ ಮೂಲಕ ಹಾಲು ಕುಡಿಸುವಂತೆ ವೈದ್ಯರು ಸುರೇಶ್ ಗೌಡರವರಿಗೆ ಸೂಚಿಸಿದ್ದಾರೆ.

  • ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ನೆರೆಯಿಂದ ತತ್ತರಿಸಿದ ರೈತರು – ಜಾನುವಾರಗಳ ಚಿಕಿತ್ಸೆಗೂ ಲಂಚ ಕೇಳುತ್ತಿರೋ ವೈದ್ಯರು

    ಹುಬ್ಬಳ್ಳಿ: ಇತ್ತೀಚೆಗಷ್ಟೇ ಸಂಭವಿಸಿದ ನೆರೆ ಪ್ರವಾಹದಿಂದ ರೈತರು ತತ್ತರಿಸಿದ್ದಾರೆ. ಆ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶು ವೈದ್ಯರು ಲಂಚ ಕೇಳುತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಂಚಬಾಕ ಪಶು ವೈದ್ಯ ಡಾ. ನಿಂಗಪ್ಪ ಮಾಯಾಗೋಳ್ ಕೈ ತುಂಬಾ ಸರ್ಕಾರಿ ಸಂಬಳ ಬರುತ್ತಿದ್ದರೂ ರೈತರು ಹಣ ಕೊಡದಿದ್ದರೆ ಜಾನುವಾರುಗಳಿಗೆ ಚಿಕಿತ್ಸೆಯನ್ನೇ ನೀಡುತ್ತಿಲ್ಲ. ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದರೆ ಇನ್ನೂರು ಮುನ್ನೂರರಿಂದ ಸಾವಿರ ಸಾವಿರ ರೂಪಾಯಿವರೆಗೂ ಲಂಚ ಕೊಡುವಂತೆ ಕೇಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಸಂಭವಿಸಿದ ನೆರೆಪ್ರವಾಹದಿಂದ ತತ್ತರಿಸಿ ಹೋಗಿರುವ ರೈತರ ಗೋಳು ಒಂದೆಡೆಯಾದರೆ ಧನದಾಹಿ ಪಶು ವೈದ್ಯ ಡಾ. ನಿಂಗಪ್ಪ ವೈದ್ಯನ ಲಂಚದಾಹದಿಂದ ಕುಂದಗೋಳ ತಾಲೂಕಿನ ರೈತರು ಬೇಸತ್ತು ಹೋಗಿದ್ದಾರೆ. ಮಾನವೀಯತೆಯನ್ನೇ ಮರೆತ ಈ ಲಂಚಬಾಕ ವೈದ್ಯ ರಾಜಾರೋಷವಾಗಿ ರೈತರಿಂದ ಹಣ ತೆಗೆದುಕೊಳ್ಳುವ ಸಂಪೂರ್ಣ ವೀಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಬೇಕೆಂದರೆ ಈ ಪಶು ವೈದ್ಯರಿಗೆ ಲಂಚ ನೀಡಲೇಬೇಕು.

    ಪ್ರತಿ ತಿಂಗಳು ಈ ಪಶು ವೈದ್ಯರಿಗೆ ಸರ್ಕಾರದಿಂದ ಸರಿಯಾಗಿ ಸಂಬಳ ಬರುತ್ತಿದ್ದರೂ ಪಶುಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇಲ್ಲಿನ ರೈತರ ಜೀವವನ್ನೇ ಹಿಂಡುತ್ತಿದ್ದಾರೆ. ತಾಲೂಕಿನಾದ್ಯಂತ 60 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಜಾನುವಾರುಗಳನ್ನ ರೈತರು ಸಾಕಿದ್ದಾರೆ. ಆದರೆ ಆ ಜಾನುವಾರುಗಳಿಗೆ ಅನಾರೋಗ್ಯ ಎದುರಾದರೆ ಈ ವೈದ್ಯರು ಚಿಕಿತ್ಸೆ ನೀಡಬೇಕಾದರೆ ನೂರರಿಂದ ಸಾವಿರದವರೆಗೆ ಹಣ ನೀಡಿದರೆ ಮಾತ್ರ ಚಿಕಿತ್ಸೆ ನೀಡಲು ಬರುತ್ತಾರೆ. ಹೀಗಾಗಿ ಈ ಭಾಗದ ರೈತರು ವೈದ್ಯರ ಈ ನಡೆಗೆ ಬೇಸತ್ತಿದ್ದು, ತಮ್ಮ ನೋವನ್ನು ಯಾರಿಗೂ ಹೇಳಿಕೊಳ್ಳದೆ ಒದ್ದಾಡುತ್ತಿದ್ದಾರೆ.

  • ಇಬ್ಬರನ್ನು ಗಾಯಗೊಳಿಸಿದ್ದ ಗೂಳಿ ಸೆರೆ

    ಇಬ್ಬರನ್ನು ಗಾಯಗೊಳಿಸಿದ್ದ ಗೂಳಿ ಸೆರೆ

    ಶಿವಮೊಗ್ಗ: ಮದವೇರಿದಂತೆ ಓಡಾಡುತ್ತಿದ್ದ ಗೂಳಿಯೊಂದು ಇಬ್ಬರನ್ನು ಗಾಯಗೊಳಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ವಿನೋಬನಗರದ ಶುಭ ಮಂಗಳ ಕಲ್ಯಾಣ ಮಂಟಪ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗೂಳಿಯ ದಾಳಿಯಿಂದ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಗೂಳಿ ತಪ್ಪಿಸಿಕೊಂಡು ಹೋಗದಂತೆ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ವಿಧಿಸಿದ್ದರು.

    ನಂತರ ಸ್ಥಳಕ್ಕಾಗಮಿಸಿದ ಪಶುವೈದ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಡಾರ್ಟಿಂಗ್ ಗನ್ ಮೂಲಕ ಗೂಳಿಗೆ ಅರವಳಿಕೆ ನೀಡಿ ಸೆರೆ ಹಿಡಿದು ಗೋ ಶಾಲೆಗೆ ಕಳುಹಿಸಿದ್ದಾರೆ. ಆತಂಕ ಸೃಷ್ಟಿಸಿದ್ದ ಗೂಳಿ ಸೆರೆಯಿಂದಾಗಿ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

    ಕಾಳಿ ರಕ್ಷಿತಾರಣ್ಯದಲ್ಲಿ ಸರಣಿ ಕಾಡುಕೋಣಗಳ ಸಾವು – ಸಾಂಕ್ರಾಮಿಕ ರೋಗಕ್ಕೆ ಬಲಿ?

    – ನಿಗೂಢವಾಗಿ ಉಳಿದ ಸಾವಿನ ಸರಣಿ
    – ಮನುಷ್ಯರಿಗೂ ರೋಗ ಭಾದಿಸುವ ಭಯ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ರಕ್ಷಿತ ಪ್ರದೇಶಗಳಲ್ಲಿ ಕಾಡುಕೋಣಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದು, ಕಾಡುಕೋಣಗಳಲ್ಲಿ ಸಾಂಕ್ರಾಮಿಕ ರೋಗದ ವಾಸನೆ ಹೊಡೆಯಲು ಆರಂಭವಾಗಿದೆ.

    ಕಳೆದ ಒಂದು ತಿಂಗಳಿಂದ 15 ಕಾಡುಕೋಣಗಳು ಸಾವನ್ನಪ್ಪಿವೆ. ಇದರಲ್ಲಿ ಈಗಾಗಲೇ ನಾಲ್ಕು ಕಾಡುಕೋಣಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅರಣ್ಯ ಇಲಾಖೆ ಮಾತ್ರ ದಾಖಲೆಯಲ್ಲಿ ಕೇವಲ ನಾಲ್ಕು ಕಾಡುಕೋಣಗಳು ಸಾವನ್ನಪ್ಪಿರುವ ಕುರಿತು ಉಲ್ಲೇಖಿಸಿದೆ.

    ಕಾಡುಕೋಣಗಳ ಕಳೆ ಬರಹಗಳು ಜೋಯಿಡಾ ಅರಣ್ಯ ಭಾಗವಾದಕಟ್ಟೆ, ಕೋಡುಗಾಳಿ, ಕಡಗರ್ಣಿ, ದಿಗಾಳಿ ಕಾಡಿನಲ್ಲಿ ಸಿಕ್ಕಿವೆ. ಇನ್ನು ಕುಂಬಾರವಾಡ, ಕ್ಯಾಸಲ್ ರಾಕ್ ಭಾಗದಲ್ಲಿಯೂ ಕಾಡುಕೋಣಗಳು ಅಸುನೀಗಿರುವ ಕುರಿತು ಸಂದೇಹಗಳು ವ್ಯಕ್ತವಾಗಿದೆ.

    ದಿಗಾಳಿ ಕಾಡಿನಲ್ಲಿ ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗ ವನ್ಯಜೀವಿ ವಲಯದ ಪಶುವೈದ್ಯಾಧಿಕಾರಿ ಡಾ.ವಿನಯ್ ನೇತ್ರತ್ವದಲ್ಲಿ ನಡೆಸಲಾಗಿದ್ದು, ಅಂಗಾಂಗ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

    ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಮಂಗಗಳು ಕ್ಯಾಸನೂರು ಕಾಯಿಲೆಗೆ ತುತ್ತಾಗಿ ಹಲವು ಮಂಗಗಳು ಸಾವನ್ನಪ್ಪಿದ್ದವು. ಇದರಿಂದಾಗಿ ಮನುಷ್ಯನಿಗೂ ರೋಗಾಣುಗಳು ಪಸರಿಸಿ ಅನೇಕರು ಮಂಗನಕಾಯಿಲೆಗೆ ತುತ್ತಾಗಿದ್ದರು.

    ಈಗ ಕಾಡುಕೋಣಗಳು ಸರಣಿ ಸಾವನ್ನಪ್ಪುತಿದ್ದು, ಮೊದಲು ನೀರಿನ ಕೊರತೆ ಎನ್ನಲಾಗಿತ್ತು. ಆದರೆ ಕಾಡುಕೋಣಗಳ ಕಳೇಬರಹ ಸಿಕ್ಕ ಸುತ್ತಮುತ್ತ ಅರಣ್ಯ ಇಲಾಖೆ ಪ್ರಾಣಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು ಹಾಗೂ ಹೇಳುವಂತಹ ಸಮಸ್ಯೆ ಕೂಡ ಇರಲಿಲ್ಲ. ಆದರೂ ಕಾಡುಕೋಣಗಳು ಸಾಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಯಾವುದೋ ಸಾಂಕ್ರಾಮಿಕ ರೋಗದಿಂದ ಸತ್ತಿರಬಹುದೇ ಎಂಬ ಅನುಮಾನ ಮೂಡತೊಡಗಿದೆ.

    ಸಾವುಕಂಡ ಕಾಡುಕೋಣದ ಗಂಟಲು ಹಾಗೂ ದೇಹದ ಒಳಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಂಡಿದ್ದು, ಸಾಂಕ್ರಾಮಿಕ ರೋಗ ಭಾದಿಸಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಕಾಡುಕೋಣದ ಮರಣೋತ್ತರ ಪರೀಕ್ಷೆಯಿಂದ ವಿಷಯ ಬಹಿರಂಗಗೊಳ್ಳಬೇಕಿದೆ.