Tag: Ventilators

  • ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

    ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

    ನವದೆಹಲಿ: ಕೋವಿಡ್ 19‌ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಾಗಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ವದೇಶಿ ವೆಂಟಿಲೇಟರ್‌ಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕೊರೊನಾ ಸೋಂಕು ದೇಶದಲ್ಲಿ ಹಬ್ಬುತ್ತಿದ್ದ ಕಾರಣ ಮಾರ್ಚ್‌ 24 ರಂದು ಸ್ವದೇಶಿ ವೆಂಟಿಲೇಟರ್‌ ರಫ್ತಿಗೆ ನಿಷೇಧ ಹೇರಲಾಗಿತ್ತು. ಈಗ ಸಾವಿನ ಪ್ರಮಾಣ ಶೇ.2.13ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೋವಿಡ್‌–19 ಉಸ್ತುವಾರಿ ಹೊಂದಿರುವ ಉನ್ನತ ಸಚಿವರ ತಂಡವು (ಜಿಒಎಂ) ವೆಂಟಿಲೇಟರ್‌ಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.

    ಕೋವಿಡ್‌–19 ರೋಗಿಗಳ ಪೈಕಿ ಶೇ. 0.28 ಮಂದಿ ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಅವರು ಶುಕ್ರವಾರ ಜಿಒಎಂಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್‌ ಸಿಇಓ

    ಕೆಲ ತಿಂಗಳ ಹಿಂದೆ ದೇಶದಲ್ಲಿ ಕೆಲ ಕಂಪನಿಗಳು ಮಾತ್ರ ವೆಂಟಿಲೇಟರ್‌ ನಿರ್ಮಾಣ ಮಾಡುತ್ತಿದ್ದವು. ಆದರೆ ಈಗ ಡಜನ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಕಂಪನಿಗಳು ವೆಂಟಿಲೇಟರ್‌ ಅಭಿವೃದ್ಧಿ ಪಡಿಸುತ್ತಿವೆ. ಆರಂಭದಲ್ಲಿ ಬಹಳಷ್ಟು ವೆಂಟಿಲೇಟರ್‌ ಅಗತ್ಯವಿದೆ ಎಂದು ತಿಳಿಯಲಾಗಿತ್ತು. ಆದರೆ ಈಗ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಜೊತೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

    ಈ ಮೊದಲು ದೇಶದಲ್ಲಿ ವೆಂಟಿಲೇಟರ್‌ ಉತ್ಪಾದನೆ ಮಾಡುತ್ತಿದ್ದ ಕಂಪನಿಗಳು ಪ್ರತಿ ತಿಂಗಳು 50-100 ನಿರ್ಮಾಣ ಮಾಡುತ್ತಿತ್ತು. ಆದರೆ ಈಗ 5 ಸಾವಿರ – 10 ಸಾವಿರ ವೆಂಟಿಲೇಟರ್‌ ನಿರ್ಮಿಸುವ ಸಾಮರ್ಥ್ಯ ಪಡೆದಿದೆ.

    ಈಗ ಎಷ್ಟಿದೆ?
    ಸರ್ಕಾರದ ವರದಿ ಪ್ರಕಾರ ಜೂನ್‌ 18ಕ್ಕೆ ಶೇ.3.33 ರಷ್ಟಿದ್ದರೆ ಜುಲೈ 10ಕ್ಕೆ ಶೇ.2.72ಕ್ಕೆ ಇಳಿಕೆಯಾಗಿತ್ತು. ಆಗಸ್ಟ್‌ 1 ರಂದು ಶೇ.2.15ರಷ್ಟಿದ್ದರೆ ಆಗಸ್ಟ್‌ 2 ರಂದು ಶೇ.2.13ಕ್ಕೆ ಇಳಿಕೆಯಾಗಿದೆ.

    ಕರೊನಾ ಸೋಂಕಿತರ ಪೈಕಿ ದೇಶದಲ್ಲಿ ಒಟ್ಟು 11,45,629(ಶೇ.65.44) ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. 5,67,730(ಶೇ.33.43) ಸಕ್ರಿಯ ಪ್ರಕರಣಗಳಿದ್ದು, 37,364(ಶೇ.2.13) ಮಂದಿ ಮೃತಪಟ್ಟಿದ್ದಾರೆ.

  • 24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

    24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

    – ಪಿಪಿಇ ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ

    ನವದೆಹಲಿ: ಕೋವಿಡ್-19 ಚಿಕಿತ್ಸೆ ನೀಡಲು ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ ಇವುಗಳನ್ನು ಸರಿಯಾಗಿ ಬಳಸಬೇಕು ಎಂದು ಒತ್ತಿ ಹೇಳಿದೆ.

    ದೆಹಲಿಯಲ್ಲಿ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್, ಕಳೆದ 24 ಗಂಟೆಗಳಲ್ಲಿ 549 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ 17 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 166ಕ್ಕೆ ಏರಿಕೆ ಕಂಡಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 5734 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 473 ಜನರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

    ಹರ್ಯಾಣದ ಕರ್ನಾಲ್‍ನಲ್ಲಿ ‘ಅಡಾಪ್ಟ್ ಎ ಫ್ಯಾಮಿಲಿ’ ಅಭಿಯಾನದಡಿ 13,000 ನಿರ್ಗತಿಕ ಕುಟುಂಬಗಳಿಗೆ 64 ಲಕ್ಷ ರೂ.ಗಳ ಸಹಾಯ ನೀಡಲಾಗುತ್ತಿದೆ. ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ), ಮಾಸ್ಕ್ ಮತ್ತು ವೆಂಟಿಲೇಟರ್ ಗಳ ಸರಬರಾಜು ಈಗ ಪ್ರಾರಂಭವಾಗಿದೆ. ಭಾರತದಲ್ಲಿ 20 ದೇಶೀಯ ತಯಾರಕರನ್ನು ಪಿಪಿಇಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. 1.7 ಕೋಟಿ ಪಿಪಿಇಗಳಿಗೆ ಆದೇಶಗಳನ್ನು ನೀಡಲಾಗಿದೆ ಮತ್ತು ಸರಬರಾಜು ಪ್ರಾರಂಭವಾಗಿದೆ. 49,000 ವೆಂಟಿಲೇಟರ್ ಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

    ರೈಲ್ವೆ ಇಲಾಖೆ 2,500ಕ್ಕೂ ಹೆಚ್ಚು ವೈದ್ಯರನ್ನು ಮತ್ತು 35,000 ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ಅವರ 586 ಆರೋಗ್ಯ ಘಟಕಗಳು, 45 ಉಪ ವಿಭಾಗೀಯ ಆಸ್ಪತ್ರೆಗಳು, 56 ವಿಭಾಗೀಯ ಆಸ್ಪತ್ರೆಗಳು, 8 ಉತ್ಪಾದನಾ ಘಟಕ ಆಸ್ಪತ್ರೆಗಳು ಮತ್ತು 16 ವಲಯ ಆಸ್ಪತ್ರೆಗಳು ತಮ್ಮ ಮಹತ್ವದ ಸೌಲಭ್ಯಗಳೊಂದಿಗೆ ಕೋವಿಡ್-19 ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಲಾವ್ ಅಗರ್‍ವಾಲ್ ಮಾಹಿತಿ ನೀಡಿದ್ದಾರೆ.

    80,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 5,000 ಬೋಗಿಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿವರ್ತಿಸುತ್ತಿದೆ. ಅದರಲ್ಲಿ 3,250 ಅನ್ನು ಬೆಡ್‍ಗಳಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಧಿಕಾರಿ ಮಾತನಾಡಿ, ಈವರೆಗೆ 1,30,000 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 5,734 ಮಾದರಿಗಳಲ್ಲಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಳೆದ 1ರಿಂದ 1.5 ತಿಂಗಳುಗಳಲ್ಲಿ ಶೇ.3ರಿಂದ 5ರ ನಡುವೆ ಇದೆ. ಇದು ಗಣನೀಯವಾಗಿ ಹೆಚ್ಚಿಲ್ಲ ಎಂದು ತಿಳಿಸುತ್ತದೆ. ಬುಧವಾರ ನಾವು 13,143 ಮಾದರಿಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದರು.

  • ವುಹಾನ್‍ನಲ್ಲಿ ಕೊರೊನಾ ತಡೆಗಟ್ಟಲು ಬೆಂಗ್ಳೂರಿನ ಕಂಪನಿಯ ಸಹಾಯ ಪಡೆದ ಚೀನಾ

    ವುಹಾನ್‍ನಲ್ಲಿ ಕೊರೊನಾ ತಡೆಗಟ್ಟಲು ಬೆಂಗ್ಳೂರಿನ ಕಂಪನಿಯ ಸಹಾಯ ಪಡೆದ ಚೀನಾ

    – ವೆಂಟಿಲೇಟರ್ ಜೋಡಣೆ ವೇಳೆ ಸ್ಕಾಟಿ ಬಳಕೆ
    – ಬ್ಲಿಂಕ್ ಇನ್ ಕಂಪನಿಯ ಉತ್ಪನ್ನ ಸ್ಕಾಟಿ

    ಬೆಂಗಳೂರು: ಕೊರೊನಾದ ಕೇಂದ್ರಬಿಂದು ಚೀನಾದ ವುಹಾನ್ ನಗರದಲ್ಲಿನ ರಕ್ಷಣಾ ಕಾರ್ಯಕ್ರಮಕ್ಕೆ ಬೆಂಗಳೂರಿನ ಕಂಪನಿಯೊಂದು ಕೈಜೋಡಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

    ಒಂದು ವಾರದಲ್ಲಿ ವುಹಾನ್ ನಗರದಲ್ಲಿ 1 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದನ್ನು ನೀವು ಓದಿರಬಹುದು. ಕೊರೊನಾ ತಡೆಗಟ್ಟಡಲು ಚೀನಾ ಸರ್ಕಾರ ಸಮರೋಪಾದಿಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಈ ಆರೋಗ್ಯ ರಕ್ಷಣಾ  ಕೆಲಸಕ್ಕೆ ಬೆಂಗಳೂರು ಮೂಲದ ಎಆರ್(ಅಗ್ಯುಮೆಂಟೆಡ್ ರಿಯಾಲಿಟಿ) ಕಂಪನಿಯ ಸಹಕಾರವಿತ್ತು.

    ಕೊರೊನಾ ವಿಪರೀತವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ವುಹಾನ್ ನಗರವನ್ನು ಲಾಕ್‍ಡೌನ್ ಮಾಡಲಾಗಿತ್ತು. ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಅವಶ್ಯಕವಾಗಿತ್ತು. ಈ ವೇಳೆ ಹಲವು ವೆಂಟಿಲೇಟರ್ ಗಳು ಜರ್ಮನಿಯ ಹ್ಯೂಬರ್ & ರಾನರ್ ಕಂಪನಿಯಿಂದ ಬಂದಿದ್ದವು. ತುರ್ತು ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿಗೆ ಚೀನಾಗೆ ತೆರಳಿ ಆಸ್ಪತ್ರೆಗೆ ತೆರಳಿ ಜೋಡಿಸುವುದು ಸವಾಲಿನ ಕೆಲಸವಾಗಿತ್ತು. ಈ ಕಷ್ಟದ ಸಂದರ್ಭದಲ್ಲಿ ಚೀನಿಯರಿಗೆ ಸಹಾಯ ಮಾಡಿದ್ದು ಬೆಂಗಳೂರಿನ ಬ್ಲಿಂಕ್‍ಇನ್ ಕಂಪನಿ.

    ಸಹಾಯ ಹೇಗೆ?
    ಹ್ಯೂಬರ್ & ರಾನರ್ ಕಂಪನಿ ಬ್ಲಿಂಕ್‍ಇನ್ ಕಂಪನಿಯ ಅಗ್ಯುಮೆಂಟೆಡ್ ರಿಯಾಲಿಟಿ ಉತ್ಪನ್ನವಾದ ‘ಸ್ಕಾಟಿ’ಯನ್ನು ಬಳಸಿದೆ. ವುಹಾನ್ ನಲ್ಲಿರುವ ವೈದ್ಯಕೀಯ ಸಿಬ್ಬಂದಿ ಕಂಪ್ಯೂಟರ್ ನಲ್ಲಿ ಮೂಡಿದ ಚಿತ್ರ/ ವಿಡಿಯೋಗಳ ಸಹಾಯದಿಂದ ಸಹಾಯದಿಂದ ವೆಂಟಿಲೇಟರ್ ಜೋಡಿಸಿದ್ದಾರೆ.

    ಚೀನಾದ ವೈದ್ಯಕೀಯ ತಂತ್ರಜ್ಞರು ಫೋನಿನ ಮೂಲಕ ಹ್ಯೂಬರ್ & ರಾನರ್ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದುಕೊಂಡು ವೆಂಟಿಲೇಟರ್ ಜೋಡಿಸುತ್ತಿದ್ದಾಗ ಹಲವು ಸಮಸ್ಯೆಗಳು ಬಂದಿದೆ. ಈ ವೇಳೆ ‘ಸ್ಕಾಟಿ’ ಸಹಾಯದಿಂದ ಗ್ರಾಫಿಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.

    ಹಲವು ಎರ್ ಅಪ್ಲಿಕೇಶನ್ ಗಳಿದ್ದು ಅವುಗಳನ್ನು ಬಳಸುವುದು ಅಷ್ಟು ಸುಲಭವಲ್ಲ. ಆದರೆ ಸ್ಕಾಟಿ ವೆಬ್‍ಜಿಎಲ್(ವೆಬ್ ಗ್ರಾಫಿಕ್ಸ್ ಲೈಬ್ರೆರಿ) ಎಪಿಐ ಜಾವಾಸ್ಕ್ರಿಪ್ಟ್ ಆಗಿದ್ದು ಯಾವುದೇ ಬ್ರೌಸರ್ ಮೂಲಕ ಬಳಸಬಹುದಾಗಿದೆ. ಹೀಗಾಗಿ ಬಹಳ ಸುಲಭವಾಗಿ ಚೀನಿಯರು ವೆಂಟಿಲೇಟರ್ ಗಳನ್ನು ಜೋಡಿಸಿದ್ದಾರೆ.

    ಸ್ಕಾಟಿ ಲೈಟ್‍ವೇಟ್ ಪ್ರೊಡಕ್ಟ್ ಆಗಿದ್ದರಿಂದ ಬಳಕೆ ಸುಲಭವಾಗಿದೆ. ಬೇರೆ ಎಆರ್ ಉತ್ಪನ್ನಗಳನ್ನು ಬಳಕೆ ಮಾಡಬೇಕಾದರೆ ತುಂಬಾ ಡೌನ್‍ಲೋಡ್ ಮಾಡಬೇಕಾಗುತ್ತದೆ. ಸ್ಕಾಟಿ ಬಳಕೆ ಸುಲಭವಾಗಿದೆ ಎಂದು ಬ್ಲಿಂಕ್ ಇನ್ ಸಿಇಒ ಮತ್ತು ಸಹಸಂಸ್ಥಾಪಕ ಹರ್ಷವರ್ಧನ್ ಕುಮಾರ್ ತಿಳಿಸಿದ್ದಾರೆ.

    ಬ್ಲಿಂಕ್ ಇನ್ ಕಚೇರಿ ಬೆಂಗಳೂರು ಮತ್ತು ಜರ್ಮನಿಯಲ್ಲಿದೆ. ಜರ್ಮನಿಯಲ್ಲಿ ಎಐ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಮತ್ತು ಎಆರ್(ಅಗ್ಯುಮೆಂಟೆಡ್ ರಿಯಾಲಿಟಿ) ತಂತ್ರಜ್ಞರು ವಿರಳ ಮತ್ತು ದುಬಾರಿ. ಈ ಕಾರಣಕ್ಕೆ ಬೆಂಗಳೂರಿನಿಂದ ಟೆಕ್ ಸಹಾಯ ಸಿಗುತ್ತಿದೆ.

    ಹರ್ಷವರ್ಧನ್ ಕುಮಾರ್, ನಿತಿನ್ ಕುಮಾರ್, ಧೀರಜ್ ಚೌಧರಿ ಬೆಂಗಳೂರಿನ ಬ್ಲಿಂಕ್‍ಇನ್ ಸಹಸಂಸ್ಥಾಪಕರಾಗಿದ್ದಾರೆ. ಮೂರು ವರ್ಷದ ಈ ಕಂಪನಿ ಜರ್ಮನಿ ವಿಕೆಬಿ ಇನ್ಯೂರೆನ್ಸ್ ಕಂಪನಿಯ ಜೊತೆ ಈಗ ಕೆಲಸ ಮಾಡುತ್ತಿದ್ದು ಮುಂದೆ ಯುರೋಪ್ ಅಟೋಮೊಬೈಲ್ ಕಂಪನಿಗಳ ಜೊತೆ ಕೆಲಸ ಮಾಡಲಿದೆ.

  • ರಾಜ್ಯದಲ್ಲಿರುವ 6.5 ಕೋಟಿ ಜನಸಂಖ್ಯೆಗೆ ಕೇವಲ 1,200 ವೆಂಟಿಲೇಟರ್ – ಯಾವ ಆಸ್ಪತ್ರೆಯಲ್ಲಿ ಎಷ್ಟು?

    ರಾಜ್ಯದಲ್ಲಿರುವ 6.5 ಕೋಟಿ ಜನಸಂಖ್ಯೆಗೆ ಕೇವಲ 1,200 ವೆಂಟಿಲೇಟರ್ – ಯಾವ ಆಸ್ಪತ್ರೆಯಲ್ಲಿ ಎಷ್ಟು?

    – ಸರ್ಜಿಕಲ್ ಮಾಸ್ಕ್ 4.5 ಲಕ್ಷ
    – ಥರ್ಮಲ್ ಸ್ಕ್ಯಾನರ್ 8,000

    ಬೆಂಗಳೂರು: ವಿಶ್ವದೆಲ್ಲೆಡೆ ಆತಂಕ ಉಂಟುಮಾಡಿರುವ ಕೊರೊನಾ ವೈರಸ್‍ನಿಂದ ಈಗ ಕರ್ನಾಟಕ ಕೂಡ ಅಪಾಯದಲ್ಲಿದೆ. ಒಂದು ವೇಳೆ ಸೋಂಕು ಸ್ಟೇಜ್ 3 ತಲುಪಿದರೆ ಕರುನಾಡನ್ನು ಕಾಪಾಡಲು ಕಷ್ಟವಾಗುತ್ತದೆ ಎನ್ನಲಾಗಿದೆ.

    ಶಸ್ತ್ರಾಸ್ತ್ರ ಇಲ್ಲದೇ ಕೊರೋನಾ ಸಮರಕ್ಕೆ ಸಜ್ಜಾದ್ದಂತೆ ಕರ್ನಾಟಕ ಸರ್ಕಾರ ತೋರಿಸಿಕೊಳ್ಳುತ್ತಿದೆಯಾ ಎಂಬ ಪ್ರಶ್ನೆ ಕೂಡ ಹುಟ್ಟುಕೊಂಡಿದೆ. ಕೊರೊನಾ ಸೋಂಕು ಪೀಡಿತರಲ್ಲಿ ಮುಖ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ವೆಂಟಿಲೇಟರ್ ಐಸಿಯು ವ್ಯವಸ್ಥೆ ರೋಗಿಗೆ ಬೇಕಾಗುತ್ತದೆ. ಕೊರೊನಾ ರೋಗಿ ಉಪಯೋಗಿಸಿದ ವೆಂಟಿಲೇಟರ್ ಬೆಡ್‍ನ್ನು ಅಷ್ಟು ಶೀಘ್ರವಾಗಿ ಬೇರೆ ಯಾವ ರೋಗಿಯೂ ಬಳಸುವಂತಿಲ್ಲ.

    ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಿ ಎರಡೂ ಆಸ್ಪತ್ರೆಗಳು ಸೇರಿ ಒಟ್ಟು 1,200 ವೆಂಟಿಲೇಟರ್ ಮಾತ್ರವಿದೆ. ಬೆಂಗಳೂರಿನಲ್ಲಿ ಸುಮಾರು 700 ವೆಂಟಿಲೇಟರ್ ಇದ್ದು, ಬಹುಪಾಲು ವೆಂಟಿಲೇಟರ್‌ಗಳು ಖಾಸಗಿ ಆಸ್ಪತ್ರೆಯದ್ದೇ ಆಗಿದೆ. ಈಗ ಸದ್ಯ ಲಭ್ಯವಿರುವ ವೆಂಟಿಲೇಟರ್‌ನಲ್ಲಿ ಬೇರೆ ತುರ್ತು ರೋಗಿಗಳು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಒಂದು ವೇಳೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ವೆಂಟಿಲೇಟರ್ ಎಮರ್ಜೆನ್ಸಿ ಎದುರಿಸಬೇಕಾಗುತ್ತದೆ. ಹೀಗಾಗಿ ಕೊರೊನಾ ಸಮರ ಎದುರಿಸಲು ಇರುವ ವೆಂಟಿಲೇಟರ್ ಸಾಕಾಗಲ್ಲ ಅನ್ನೋದನ್ನ ಪರಿಗಣನೆಗೆ ತೆಗೆದುಕೊಂಡು ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ.

    ಯಾವ ಆಸ್ಪತ್ರೆಯಲ್ಲಿ ಎಷ್ಟು ವೆಂಟಿಲೇಟರ್‌ಗಳು ಇವೆ?
    ವಿಕ್ಟೋರಿಯಾ ಆಸ್ಪತ್ರೆಯನ್ನು ಕೋವಿಡ್-19 ರೋಗಿಗಳಿಗೆ ಸೀಮಿತಗೊಳಿಸುವ ಯೋಚನೆಯಲ್ಲಿ ಸರ್ಕಾರ ಇದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೇವಲ 14 ವೆಂಟಿಲೇಟರ್ ಐಸಿಯು ಇದೆ. ಹಾಗೆಯೇ ವಾಣಿವಿಲಾಸ ಆಸ್ಪತ್ರೆಯಲ್ಲಿ 27, ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ 40, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 33, ಜಯದೇವ ಆಸ್ಪತ್ರೆಯಲ್ಲಿ 113, ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 33, ಇಂದಿರಾಗಾಂಧಿ ಆಸ್ಪತ್ರೆಯಲ್ಲಿ 45, ನಿಮ್ಹಾನ್ಸ್ ನಲ್ಲಿ 33 ವೆಂಟಿಲೇಟರ್ ಐಸಿಯುಗಳಿವೆ. ಹಾಗೆಯೇ 4.5 ಲಕ್ಷ ಸರ್ಜಿಕಲ್ ಮಾಸ್ಕ್‌ಗಳು, 6.5 ಲಕ್ಷ ಎನ್-95 ಮಾಸ್ಕ್‌ಗಳು ಹಾಗೂ 8,000 ಥರ್ಮಲ್ ಸ್ಕ್ಯಾನರ್‌ಗಳಿವೆ ಎಂದು ವರದಿಯಾಗಿದೆ.

    ಈ ವೆಂಟಿಲೇಟರ್ ಐಸಿಯುಗಳಲ್ಲಿ ಈಗಾಗಲೇ ಬಹುಪಾಲು ರೋಗಿಗಳು ದಾಖಲಾಗಿದ್ದಾರೆ. ಇತ್ತ ಹೆಚ್ಚುವರಿಯಾಗಿ ಕೋವಿಡ್-19ಗೆ ಅಂತಾನೆ 273 ಪ್ರತ್ಯೇಕ ವೆಂಟಿಲೇಟರ್ ಪೂರೈಸುವ ಬಗ್ಗೆ ಆರೋಗ್ಯ ಇಲಾಖೆ ಕೇಳಿದ್ದು, ಸರ್ಕಾರ ಅತಿ ಶೀಘ್ರದಲ್ಲಿ ಈ ಬೇಡಿಕೆಯನ್ನು ಪೂರೈಸಬೇಕಿದೆ.