Tag: Venkatreddy Mudnal

  • ಯಾದಗಿರಿ| ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

    ಯಾದಗಿರಿ| ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

    ಯಾದಗಿರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (71) ಚಿಕಿತ್ಸೆ ಫಲಕಾರಿಯಾಗದೇ ಇಂದು (ಮಂಗಳವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟರೆಡ್ಡಿ (Venkatreddy Mudnal) ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮೋದಿ ಜನ್ಮದಿನದಂದೇ ಜನನ – ಪುತ್ರನಿಗೆ ‘ನರೇಂದ್ರ’ ಎಂದು ಹೆಸರಿಟ್ಟ ಕೊಡಗಿನ ದಂಪತಿ

     

    ವೆಂಕಟರೆಡ್ಡಿ ಅವರು 2018ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಯಾದಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಇವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದು, ಯಾದಗಿರಿಯ ಪುರಸಭೆಯ ಅಧ್ಯಕ್ಷರಾಗಿದ್ದರು. ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರಾಗಿದ್ದರು. ಇದನ್ನೂ ಓದಿ: ವಿಎಓ/ಜಿಟಿಟಿಸಿ ಪರೀಕ್ಷೆ ಹೊಸದಾಗಿ ಅರ್ಜಿ ಸಲ್ಲಿಸಲು ಸೆ.19ರಿಂದ ಅವಕಾಶ: ಕೆಇಎ

    ಮೃತರ ಪಾರ್ಥಿವ ಶರೀರವನ್ನು ಇಂದು ರಾತ್ರಿ ಯಾದಗಿರಿಗೆ ತರಲಾಗುತ್ತದೆ. ನಾಳೆ (ಬುಧವಾರ) ಸಂಜೆ ಯಾದಗಿರಿ ತಾಲೂಕಿನಲ್ಲಿರುವ ಸ್ವಗ್ರಾಮದ ಜಮೀನಿನಲ್ಲಿ ವೆಂಕಟರೆಡ್ಡಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ – ನಾಳೆಗೆ ಅರ್ಜಿ ವಿಚಾರಣೆ

    ವಿಜಯೇಂದ್ರ ಸಂತಾಪ:
    ಇನ್ನು ವೆಂಕಟರೆಡ್ಡಿ ಮುದ್ನಾಳ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿದ್ದಾರೆ. ನೇರನುಡಿ, ಜನಾನುರಾಗಿಯಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಕಲ್ಯಾಣ ಕರ್ನಾಟಕದ ಹಿರಿಯ ರಾಜಕಾರಣಿಗಳಾದ ಮುದ್ನಾಳ ಅವರು, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದವರು. ಶಾಸಕರಾಗಿ ಸಾಮಾಜಿಕ, ರಾಜಕೀಯವಾಗಿ ತಮ್ಮ ಜಿಲ್ಲೆಯ ಅಭಿವೃದ್ಧಿಗೆ ಕಾರಣಕರ್ತರು. ಅವರ ಕುಟುಂಬಸ್ಥರು ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಮಹಿಳಾ ವೈದ್ಯರಿಗೆ ನೈಟ್ ಶಿಫ್ಟ್ ತೆಗೆದು ಅಧಿಸೂಚನೆ – ಮಮತಾ ಸರ್ಕಾರಕ್ಕೆ ಸುಪ್ರೀಂ ಚಾಟಿ

  • ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಯಾದಗಿರಿಯಲ್ಲಿ ಅಮಿತ್ ಶಾ ರೋಡ್ ಶೋ – ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚನೆ

    ಯಾದಗಿರಿ: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ, ಚುನಾವಣಾ (Election) ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ.

    ಗಿರಿನಾಡು ಯಾದಗಿರಿ (Yadgiri) ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರೂ ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ರಣೋತ್ಸಾಹದಲ್ಲಿದ್ದಾರೆ. ಆದರೆ ಈ ಬಾರಿ ಮತ್ತೊಮ್ಮೆ ಸರ್ಕಾರ ರಚಿಸುವ ಭರವಸೆಯಲ್ಲಿರುವ ಬಿಜೆಪಿ (BJP) ನಾಯಕರು ರೂಟ್ ಮ್ಯಾಪ್ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಇಂದು (ಮಂಗಳವಾರ) ಯಾದಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ (Venkatreddy Mudnal) ಪರ ಭರ್ಜರಿ ರೋಡ್ ಶೋ (Road Show) ನಡೆಸಿ, ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಸಂಜೆ 4:20ಕ್ಕೆ ಯಾದಗಿರಿ ನಗರಕ್ಕೆ ಆಗಮಿಸಲಿರುವ ಅಮಿತ್ ಶಾ, ಯಾದಗಿರಿ ನಗರದ ಸರ್ಕಾರಿ ಡಿಗ್ರಿ ಕಾಲೇಜು ಬಳಿಯಿಂದ ಶಾಸ್ತ್ರೀ ಸರ್ಕಲ್‌ವರೆಗೂ ರೋಡ್ ಶೋ ನಡೆಸಲಿದ್ದಾರೆ. 4:20ರಿಂದ 5:30ರವರೆಗೂ ರೋಡ್ ಶೋ ನಡೆಯಲಿದೆ. ರೋಡ್ ಶೋನಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ರೋಡ್ ಶೋ ಹಿನ್ನಲೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲಾ ಸಶಸ್ತ್ರ ಪಡೆ, ಪ್ಯಾರಾ ಮಿಲಿಟರಿ ಫೋರ್ಸ್ ಜೊತೆಗೆ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ ಐವರು ಡಿವೈಎಸ್ಪಿ ಸೇರಿದಂತೆ 50ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಡ್ರೋನ್ ಕಣ್ಗಾವಲಿನಲ್ಲಿ ರೋಡ್ ಶೋ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಲಾಗಿದೆ. ರೋಡ್ ಶೋ ನಡೆಯಲಿರುವ ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ವ್ಯಕ್ತಿ ಮುಖ್ಯವಲ್ಲ – ಶೆಟ್ಟರ್, ಸವದಿ ವಿರುದ್ಧ ಅಮಿತ್ ಶಾ ವಾಗ್ದಾಳಿ

    ಅಮಿತ್ ಶಾ ಆಗಮನದಿಂದ ಜಿಲ್ಲೆಯಲ್ಲಿದ್ದ ಬಿಜೆಪಿ ಬಂಡಾಯ ಶಮನಕ್ಕೆ ಟಾನಿಕ್ ನೀಡಿದಂತಾಗಿದೆ. ಯಾಕೆಂದರೆ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ಗೆ ಟಿಕೆಟ್ ನೀಡದಂತೆ ಆರು ಜನ ಆಕಾಂಕ್ಷಿಗಳು ದೆಹಲಿ (Delhi) ಅಂಗಳ ತಲುಪಿದ್ದರು. ವಿರೋಧದ ನಡುವೆಯೂ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡಿತ್ತು. ಆದರೆ ಇದೀಗ ಅಮಿತ್ ಶಾ ಆಗಮನದಿಂದ ಬಂಡಾಯ ಶಮನ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇದನ್ನೂ ಓದಿ: ಕಣದಲ್ಲಿರುವ ಬಂಡಾಯ ವೀರರು ಯಾರು? ಹಿಂದೆ ಸರಿದವರು ಯಾರು?