Tag: Venkatesh Iyer

  • ಪಂತ್‌, ಶ್ರೇಯಸ್‌ ನಂತರ ಹೆಚ್ಚು ಮೊತ್ತಕ್ಕೆ ಬಿಡ್‌ ಆದ ವೆಂಕಟೇಶ್‌ ಅಯ್ಯರ್‌ – 23.75 ಕೋಟಿಗೆ KKRಗೆ ಸೇಲ್‌

    ಪಂತ್‌, ಶ್ರೇಯಸ್‌ ನಂತರ ಹೆಚ್ಚು ಮೊತ್ತಕ್ಕೆ ಬಿಡ್‌ ಆದ ವೆಂಕಟೇಶ್‌ ಅಯ್ಯರ್‌ – 23.75 ಕೋಟಿಗೆ KKRಗೆ ಸೇಲ್‌

    ಪಿಎಲ್‌ ಮೆಗಾ ಹರಾಜಿನಲ್ಲಿ ವೆಂಕಟೇಶ್‌ ಅಯ್ಯರ್‌ 23.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ ರೈಡರ್ಸ್‌ಗೆ ಬಿಕರಿಯಾಗಿದ್ದಾರೆ. ಆ ಮೂಲಕ ತಂಡಕ್ಕೆ ಮರಳಿದ್ದಾರೆ.

    ಕೆಕೆಆರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಬಿಡ್ಡಿಂಗ್ ಫೈಟ್‌ನಲ್ಲಿ ಅಯ್ಯರ್‌ ಮೂಲ ಬೆಲೆ 2 ಕೋಟಿ ರೂ. ನಿಂದ 11 ಪಟ್ಟು ಹೆಚ್ಚಾಯಿತು.

    29 ವರ್ಷದ ಅಯ್ಯರ್ ತಮ್ಮ ಚೊಚ್ಚಲ ಋತುವಿನಲ್ಲಿ 10 ಪಂದ್ಯಗಳನ್ನು ಆಡಿದರು. 350 ಕ್ಕೂ ಹೆಚ್ಚು ರನ್ ಗಳಿಸಿದರು. ನಾಲ್ಕು ಋತುಗಳಲ್ಲಿ ಒಟ್ಟಾರೆಯಾಗಿ 51 ಪಂದ್ಯಗಳಲ್ಲಿ, ಅಯ್ಯರ್ 137.13 ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 1,326 ರನ್‌ ಗಳಿಸಿದ್ದಾರೆ.

    ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್‌ನ ಐಪಿಎಲ್ 2024 ರ ಫೈನಲ್ ಗೆಲುವಿನಲ್ಲಿ ಅಯ್ಯರ್ ಮಿಂಚಿದ್ದರು. 114 ರನ್ ಚೇಸ್‌ನಲ್ಲಿ ಅಜೇಯ 52 ರನ್ ಗಳಿಸಿದ್ದರು.

    ಈ ಬಾರಿ ಮೆಗಾ ಹರಾಜಿನಲ್ಲಿ ರಿಷಬ್‌ ಪಂತ್‌ ದಾಖಲೆಯ 27 ಕೋಟಿ ರೂ. ಮೊತ್ತಕ್ಕೆ ಲಕ್ನೋಗೆ ಸೇಲ್‌ ಆಗಿದ್ದಾರೆ. ಇತ್ತ 26.75 ಕೋಟಿಗೆ ಶ್ರೇಯಸ್‌ ಅಯ್ಯರ್‌, ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL) ಅದ್ಭುತ ಪ್ರದರ್ಶನ ತೋರುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ವೆಂಕಟೇಶ್ ಅಯ್ಯರ್ (Venkatesh Iyer), ಇದೀಗ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದು, ಬಹುಕಾಲದ ಗೆಳತಿ ಶೃತಿ ರಘುನಾಥನ್ (Shruti Raghunathan) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ವೆಂಕಟೇಶ್ ಅಯ್ಯರ್ ಹಾಗೂ ಶೃತಿಯವರ ಎಂಗೇಜ್‍ಮೆಂಟ್ 2023ರ ನ.21ರಂದು ನೆರವೇರಿತ್ತು. ಇದೀಗ ಅವರ ಮದುವೆ ನೆರವೇರಿದ್ದು, ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ವೆಂಕಟೇಶ್ ಅಯ್ಯರ್ 15 ಪಂದ್ಯಗಳನ್ನಾಡಿ 4 ಅರ್ಧಶತಕ ಸಹಿತ 370 ರನ್ ಸಿಡಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

    ಟೀಂ ಇಂಡಿಯಾ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 60 ರನ್‌ಗಳ ಭರ್ಜರಿ ಜಯ

  • ರಂಗೇರಿಸಿದ ರಹಾನೆ, ಧೂಳೆಬ್ಬಿಸಿದ ದುಬೆ – ಚೆನ್ನೈ ಸೂಪರ್‌ ಕಿಂಗ್ಸ್‌ಗೆ 49 ರನ್‌ಗಳ ಭರ್ಜರಿ ಜಯ

    ರಂಗೇರಿಸಿದ ರಹಾನೆ, ಧೂಳೆಬ್ಬಿಸಿದ ದುಬೆ – ಚೆನ್ನೈ ಸೂಪರ್‌ ಕಿಂಗ್ಸ್‌ಗೆ 49 ರನ್‌ಗಳ ಭರ್ಜರಿ ಜಯ

    – ರನ್‌ ಹೊಳೆಯಲ್ಲಿ ತೇಲಾಡಿದ ಕಿಂಗ್ಸ್‌

    ಕೋಲ್ಕತ್ತಾ: ಅಜಿಂಕ್ಯಾ ರಹಾನೆ (Ajinkya Rahane), ಶಿವಂ ದುಬೆ (Shivam Dube), ಡಿವೋನ್‌ ಕಾನ್ವೆ (Devon Conway) ಭರ್ಜರಿ ಬ್ಯಾಟಿಂಗ್‌ ಹಾಗೂ ಶಿಸ್ತು ಬದ್ಧ ಬೌಲಿಂಗ್‌ ದಾಳಿ ಪ್ರದರ್ಶನದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ 49 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವು 20 ಓವರ್‌ಗಳಲ್ಲಿ ಭರ್ಜರಿ 235 ರನ್‌ ಸಿಡಿಸಿತ್ತು. 236 ರನ್‌ಗಳ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಕೆಕೆಆರ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ನಾರಾಯಣ್‌ ಜಗದೀಶನ್‌ 1 ರನ್‌ ಗಳಿಸಿದರೆ, ಸುನೀಲ್‌ ನರೇನ್‌ ಶೂನ್ಯ ಸುತ್ತಿದರು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ವೆಂಕಟೇಶ್‌ ಅಯ್ಯರ್‌ (Venkatesh Iyer) ಕೇವಲ 20 ರನ್‌, ನಾಯಕ ನಿತೀಶ್‌ ರಾಣಾ 27 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. ಇದರಿಂದ ತಂಡಕ್ಕೆ ಸೋಲು ಖಚಿತವಾಗಿತ್ತು. ಇದನ್ನೂ ಓದಿ: ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ಜೇಸನ್‌ ರಾಯ್‌ ಹಾಗೂ ರಿಂಕು ಸಿಂಗ್‌ ಜೋಡಿ 37 ಎಸೆತಗಳಲ್ಲಿ 65 ರನ್‌ ಸಿಡಿಸಿತ್ತು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡ ಚೇತರಿಕೆ ಕಂಡಿತ್ತು. ಆದರೆ ಜೇಸನ್‌ ರಾಯ್‌ (Jason Roy) ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿಮೆಯಾಯಿತು. ರಿಂಕು ಸಿಂಗ್‌ ಏಕಾಂಗಿ ಹೋರಾಟ ನಡೆಸಬೇಕಾಯಿತು. ಜೇಸನ್‌ ರಾಯ್‌ 26 ಎಸೆತಗಳಲ್ಲಿ 61 ರನ್‌ ಗಳಿಸಿದರೆ, ಕೊನೆಯವರೆಗೂ ಹೋರಾಡಿದ ರಿಂಕು ಸಿಂಗ್‌ (Rinku Singh) 33 ಎಸೆತಗಳಲ್ಲಿ 53 ರನ್‌ (3 ಬೌಂಡರಿ, 4 ಸಿಕ್ಸರ್)‌ ಗಳಿಸಿ ಅಜೇಯರಾಗುಳಿದರು. ಆ್ಯಂಡ್ರೆ ರಸ್ಸೆಲ್‌ 9 ರನ್‌, ಡೇವಿಡ್‌ ವೈಸ್‌ 1 ರನ್‌, ಉಮೇಶ್‌ ಯಾದವ್‌ 4 ರನ್‌ ಗಳಿಸಿದರು.

    ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತುಶಾರ್‌ ದೇಶ್‌ಪಾಂಡೆ ಹಾಗೂ ಮಹೀಶ್‌ ತೀಕ್ಷಣ ತಲಾ 2 ವಿಕೆಟ್‌ ಕಿತ್ತರೆ, ಆಕಾಶ್‌ ಸಿಂಗ್‌, ಮೊಯಿನ್‌ ಅಲಿ, ರವೀಂದ್ರ ಜಡೇಜಾ ಹಾಗೂ ಮಥೀಶ ಪತಿರಾಣಾ ತಲಾ ಒಂದೊಂದು ವಿಕೆಟ್‌ ಗಳಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ʻಕಾಂತಾರʼ ಸಾಂಗ್‌ – RCB ಗೆಲುವಿಗೆ ದೈವ ಕಾರಣ ಅಂದ್ರು ಫ್ಯಾನ್ಸ್‌

    ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅಜಿಂಕ್ಯಾ ರಹಾನೆ, ಶಿವಂ ದುಬೆ, ಡಿವೋನ್‌ ಕಾನ್ವೆ ಅವರ ಅಮೋಘ ಪ್ರದರ್ಶನದಂದಾಗಿ ದಾಖಲೆಯ ಮೊತ್ತ ಪೇರಿಸಿತು. ಚೆನ್ನೈ ತಂಡದ ಅಗ್ರ ಕ್ರಮಾಂಕದ ಎಲ್ಲಾ ಆಟಗಾರರೂ ಅಬ್ಬರದ ಪ್ರದರ್ಶನ ನೀಡಿದರು. ಅದರಲ್ಲೂ ಅಜಿಂಕ್ಯಾ ರಹಾನೆ ಹಾಗೂ ಶಿವಂ ದುಬೆ ಕೊಲ್ಕತ್ತಾ ನೈಟ್ ರೈಡರ್ಸ್ ಬೌಲರ್‌ಗಳನ್ನು ಧೂಳಿಪಟ ಮಾಡಿದರು. ಈ ಜೋಡಿ ಕೇವಲ 32 ಎಸೆತಗಳಲ್ಲಿ 85 ರನ್‌ಗಳ ಜೊತೆಯಾಟ ನೀಡುವ ಮೂಲಕ ಸಿಎಸ್‌ಕೆ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು. ಇದಕ್ಕೂ ಮುನ್ನ ಆರಂಭಿಕರಾದ ಡಿವೋನ್‌ ಕಾನ್ವೆ ಹಾಗೂ ಋತುರಾಜ್‌ ಗಾಯಕ್ವಾಡ್‌ 45 ಎಸೆತಗಳಲ್ಲಿ 73 ರನ್‌ ಸಿಡಿಸಿದ್ದರು.

    ಋತುರಾಜ್ 20 ಎಸೆತಗಳಲ್ಲಿ 35 ರನ್‌ಗಳಿಸಿ ಔಟಾದರು. ನಂತರ ಅರ್ಧ ಶತಕ ಸಿಡಿಸಿದ ಕಾನ್ವೆ 40 ಎಸೆತಗಳಲ್ಲಿ 56 ರನ್‌ (4 ಬೌಂಡರಿ, 3 ಸಿಕ್ಸರ್‌) ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಜೊತೆಯಾಗಿದ್ದು ರಹಾನೆ ಹಾಗೂ ದುಬೆ ಜೋಡಿ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ ಕೇವಲ 21 ಎಸೆತಗಳಲ್ಲೇ 50 ರನ್‌ (5 ಸಿಕ್ಸರ್‌, 2 ಬೌಂಡರಿ) ಗಳಿಸಿ ಚಚ್ಚಿದರು. ಆದರೆ ಅಜಿಂಕ್ಯಾ ರಹಾನೆ ಕೊನೆಯ ವರೆಗೂ ವಿಕೆಟ್ ಕಳೆದುಕೊಳ್ಳದೇ ಕೆಕೆಆರ್‌ ಬೌಲರ್‌ಗಳನ್ನ ಚೆಂಡಾಡಿದರು. ಕೇವಲ 29 ಎಸೆತಗಳಲ್ಲಿ ಅವರು 71 ರನ್‌ (5 ಸಿಕ್ಸರ್‌, 6 ಬೌಂಡರಿ) ಬಾರಿಸಿ ಅಜೇಯರಾಗುಳಿದರು.

    ಕೊನೆಯ ಕ್ಷಣದಲ್ಲಿ ರವೀಂದ್ರ ಜಡೇಜಾ 8 ಎಸೆತಗಳಲ್ಲಿ ಎದುರಿಸಿ 18 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಎಂ.ಎಸ್ ಧೋನಿ 2 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಸಿಎಸ್‌ಕೆ ಈ ಪಂದ್ಯದಲ್ಲಿ 4 ವಿಕೆಟ್ ಕಳೆದುಕೊಂಡು 235 ರನ್‌ಗಳಿಸಿತು. ಇದು ಈ ವರ್ಷದ ಐಪಿಎಲ್‌ನಲ್ಲಿ ಬೃಹತ್‌ ಮೊತ್ತ ಎಂಬ ದಾಖಲೆ ಸಹ ಬರೆಯಿತು.

    ಕೆಕೆಆರ್‌ ಪರ ಕುಲ್ವಂತ್ ಖೇಜ್ರೋಲಿಯಾ 2 ವಿಕೆಟ್‌ ಕಿತ್ತರೆ, ವರುಣ್‌ ಚಕ್ರವರ್ತಿ ಹಾಗೂ ಸುಯಶ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    IPL 2023: ಇಶಾನ್‌ ಕಿಶನ್‌ ಶೈನ್‌, ಅಯ್ಯರ್‌ ಶತಕದಾಟ ವ್ಯರ್ಥ – ಮುಂಬೈಗೆ 5 ವಿಕೆಟ್‌ಗಳ ಜಯ

    ಮುಂಬೈ: ಇಶಾನ್‌ ಕಿಶನ್‌ (Ishan Kishan) ಹಾಗೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌, ಕೋಲ್ಕತ್ತಾ ನೈಟ್‌ರೈಡರ್ಸ್‌ (KolkataKnight Riders) ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ (KKR) 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು. 186 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್‌ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ 17.4 ಓವರ್‌ಗಳಲ್ಲೇ 186 ರನ್‌ ಗಳಿಸಿ ಗೆದ್ದು ಬೀಗಿತು.

    ಬೃಹತ್‌ ಮೊತ್ತದ ಗುರಿ ಪಡೆದ ಮುಂಬೈ ಇಂಡಿಯನ್ಸ್‌ ತಂಡ ಸ್ಫೋಟಕ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ (Rohit Sharma) ಹಾಗೂ ಇಶಾನ್‌ ಕಿಶನ್‌ ಜೋಡಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ ಕೆಕೆಆರ್‌ ಬೌಲರ್‌ಗಳನ್ನ ಚೆಂಡಾಡಿದರು. ಮೊದಲ ವಿಕೆಟ್‌ ಪತನಕ್ಕೆ ಈ ಜೋಡಿ 4.5 ಓವರ್‌ಗಳಲ್ಲಿ 65 ರನ್‌ ಸಿಡಿಸಿತ್ತು. ಈ ವೇಳೆ ರೋಹಿತ್‌ ಶರ್ಮಾ 13 ಎಸೆತಗಳಲ್ಲಿ 20 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೆ 25 ಎಸೆತಗಳಲ್ಲಿ ಸ್ಫೋಟಕ 58 ರನ್‌ (5 ಬೌಂಡರಿ, 5 ಸಿಕ್ಸರ್)‌ ಚಚ್ಚಿದ ಇಶಾನ್‌ ಕಿಶನ್‌ ಸಹ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

    ನಂತರ 3ನೇ ವಿಕೆಟ್‌ಗೆ ಜೊತೆಯಾದ ಮಿಸ್ಟರ್‌ 360 ಸೂರ್ಯಕುಮಾರ್‌ ಯಾದವ್‌ (Suryakumar Yadav), ತಿಲಕ್‌ ವರ್ಮಾ ಸಹ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ನೆರವಾದರು. ಕಳೆದ ಮೂರು ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಸೂರ್ಯಕುಮಾರ್‌ ಯಾದವ್‌, ಈ ಪಂದ್ಯದಲ್ಲಿ ಉತ್ತಮ ಫಾರ್ಮ್‌ ಸಾಬೀತುಪಡಿಸಿದ್ರು. ಸೂರ್ಯ ಕೇವಲ 25 ಎಸೆತಗಳಲ್ಲಿ 43 ರನ್‌ (3 ಸಿಕ್ಸರ್‌, 4 ಬೌಂಡರಿ) ಗಳಿದರೆ, ತಿಲಕ್‌ ವರ್ಮಾ 30 ರನ್‌ (25 ಎಸೆತ, 1 ಸಿಕ್ಸರ್‌, 3 ಬೌಂಡರಿ) ಬಾರಿಸಿದರು. ಈ ನಡುವೆ ನೆಹಾಲ್ ವಧೇರಾ 6 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

    ಕೊನೆಯಲ್ಲಿ ಟಿಮ್‌ ಡೇವಿಡ್‌ 13 ಎಸೆತಗಳಲ್ಲಿ 2 ಸಿಕ್ಸರ್‌, 1 ಬೌಂಡರಿ ಸಹಿತ 24 ರನ್‌ ಚಚ್ಚಿದರೆ, ಕ್ಯಾಮರೂನ್‌ ಗ್ರೀನ್‌ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಕೆಕೆಆರ್‌ ಪರ ಸುಯಶ್‌ ಸರ್ಮಾ 2 ವಿಕೆಟ್‌ ಕಿತ್ತರೆ, ಶಾರ್ದೂಲ್‌ ಠಾಕೂರ್‌, ವರುಣ್‌ ಚಕ್ರವರ್ತಿ ಹಾಗೂ ಲಾಕಿ ಫರ್ಗುಸನ್ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: 9 ಸಿಕ್ಸ್‌, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್‌ ಅಯ್ಯರ್‌

    ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ಪರ ವೆಂಕಟೇಶ್ ಅಯ್ಯರ್ (Venkatesh Iyer) ಏಕಾಂಗಿ ಹೋರಾಟ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಜ್, ನಾರಾಯಣ್‌ ಜಗದೀಶನ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲರಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವೆಂಕಟೇಶ್‌ ಅಯ್ಯರ್‌ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದರು. ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಅಯ್ಯರ್‌ ಮುಂಬೈ ಬೌಲರ್‌ಗಳನ್ನ ಬೆಂಡೆತ್ತಿದರು. ಕೇವಲ 51 ಎಸೆತಗಳನ್ನು ಎದುರಿಸಿ ಸ್ಫೋಟಕ 104 ರನ್‌ (9 ಸಿಕ್ಸರ್‌, 6 ಬೌಂಡರಿ) ಸಿಡಿಸಿದರು. ವೆಂಕಟೇಶ್ ಐಯ್ಯರ್ ಸಿಡಿಸಿದ ಈ ಶತಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಳೆದ 15 ವರ್ಷಗಳಲ್ಲಿಯೇ ಮೊದಲ ಶತಕವಾಗಿದೆ. ಈ ಮೂಲಕ ಕೆಕೆಆರ್ ಫ್ರಾಂಚೈಸಿಯ ಸುದೀರ್ಘ ಕಾಲದ ಶತಕದ ಬರವನ್ನು ನೀಗಿಸಿದರು.

    ನಂತರ ಕಣಕ್ಕಿಳಿದರವರಲ್ಲಿ ಯಾರೊಬ್ಬರು ಉತ್ತಮ ಪ್ರದರ್ಶನ ತೋರದೇ ಇದ್ದರಿಂದ ಕೆಕೆಆರ್‌ ತಂಡ 185 ರನ್‌ಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ನಿತೀಶ್‌ ರಾಣಾ 5 ರನ್‌, ಶಾರ್ದೂಲ್‌ ಠಾಕೂರ್‌ 13 ರನ್‌, ರಿಂಕು ಸಿಂಗ್‌ 18 ರನ್‌ ಗಳಿಸಿದ್ರೆ, ಕೊನೆಯಲ್ಲಿ ಆ್ಯಂಡ್ರೆ ರಸ್ಸೆಲ್‌ 21 ರನ್‌ (11 ಎಸೆತ, 3 ಬೌಂಡರಿ, 1‌ ಸಿಕ್ಸರ್), ಸುನೀಲ್‌ ನರೇನ್‌ 2 ರನ್‌ ಗಳಿಸಿ ಅಜೇಯರಾಗುಳಿದರು.

    ಇನ್ನೂ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್‌ ಪರ ಹೃತಿಕ್‌ ಶೋಕೀನ್‌ 2 ವಿಕೆಟ್‌ ಪಡೆದರೆ, ಕ್ಯಾಮರೂನ್ ಗ್ರೀನ್, ದುವಾನ್‌ ಜಾನ್ಸೆನ್‌, ಪಿಯೂಷ್‌ ಚಾವ್ಲಾ ಹಾಗೂ ರಿಲೇ ಮೆರೆದಿಥ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಸಂಕ್ಷಿಪ್ತ ಸ್ಕೋರ್‌
    ಕೋಲ್ಕತ್ತಾ ನೈಟ್‌ರೈಡರ್ಸ್‌ – 20 ಓವರ್‌ – 185/6
    ಮುಂಬೈ ಇಂಡಿಯನ್ಸ್‌ – 17.4 ಓವರ್‌ – 186/5

  • 9 ಸಿಕ್ಸ್‌, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್‌ ಅಯ್ಯರ್‌

    9 ಸಿಕ್ಸ್‌, 5 ಬೌಂಡರಿ – IPLನಲ್ಲಿ ವೇಗದ ಶತಕ ಸಿಡಿಸಿ ಮೆರೆದಾಡಿದ ವೆಂಕಟೇಶ್‌ ಅಯ್ಯರ್‌

    ಮುಂಬೈ: ಕೋಲ್ಕತ್ತಾ ನೈಟ್‌ರೈಡರ್ಸ್‌ (KKR) ತಂಡದ ಆಟಗಾರ ವೆಂಕಟೇಶ್‌ ಅಯ್ಯರ್‌ (Venkatesh Iyer) 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ವೇಗದ ಶತಕ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ.

    ಎರಡು ದಿನಗಳ ಹಿಂದೆ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಆಟಗಾರ ಹ್ಯಾರಿ ಬ್ರೂಕ್‌ 55 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿ ಸಾಧನೆ ಮಾಡಿದ್ದರು. ಇಂದು (ಏಪ್ರಿಲ್‌ 16) ವೆಂಕಟೇಶ್‌ ಅಯ್ಯರ್‌ 49 ಎಸೆತಗಳಲ್ಲೇ ಭರ್ಜರಿ 100 ರನ್‌ ಬಾರಿಸಿದರು. 9 ಸಿಕ್ಸರ್‌ ಹಾಗೂ 5 ಬೌಂಡರಿಗಳೂ ಇದರಲ್ಲಿ ಸೇರಿವೆ. ಒಟ್ಟಾರೆ ಈ ಪಂದ್ಯದಲ್ಲಿ ವೆಂಕಟೇಶ್‌ 51 ಎಸೆತಗಳಲ್ಲಿ 104 (6 ಬೌಂಡರಿ, 9 ಸಿಕ್ಸರ್‌) ಚಚ್ಚಿದರು. ಇದನ್ನೂ ಓದಿ: IPL 2023: ಡೆಲ್ಲಿಗೆ ಸತತ 5ನೇ ಸೋಲು – ತವರಿನಲ್ಲಿ RCBಗೆ 23 ರನ್‌ಗಳ ಭರ್ಜರಿ ಜಯ

    ಭಾನುವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿತು. ಮೊದಲ 23 ಎಸೆತಗಳಲ್ಲಿ 50 ರನ್‌ ಗಳಿಸಿದ್ದ ವೆಂಕಟೇಶ್‌ ಅಯ್ಯರ್‌, ಕೊನೆಯಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ ಮುಂದಿನ 26 ಎಸೆತಗಳಲ್ಲಿ 50 ರನ್‌ ಗಳಿಸಿ ಶತಕ ಪೂರೈಸಿದರು. ಇದನ್ನೂ ಓದಿ: ಐಪಿಎಲ್‌ನಲ್ಲಿ ಮೊದಲ ಶತಕ – ಕೋಲ್ಕತ್ತಾ ಬೌಲರ್‌ಗಳನ್ನು ಚೆಂಡಾಡಿದ ಬ್ರೂಕ್‌

    ರನ್‌ ಏರಿದ್ದು ಹೇಗೆ?
    50 ರನ್‌ 30 ಎಸೆತ
    100 ರನ್‌ 64 ಎಸೆತ
    150 ರನ್‌ 99 ಎಸೆತ
    185 ರನ್‌ 120 ಎಸೆತ

  • IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ಅಹಮದಾಬಾದ್‌: ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌ ಸಿಡಿಸಿದ 5 ಭರ್ಜರಿ ಸಿಕ್ಸರ್‌ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌, ಹಾಲಿ ಚಾಂಪಿಯನ್ಸ್‌ ಗುಜರಾತ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಕೆಕೆಆರ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ 29 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಉಮೇಶ್‌ ಯಾದವ್‌ ಮೊದಲ ಎಸೆತದಲ್ಲಿ 1 ರನ್‌ ತೆಗೆದುಕೊಂಡರು. ನಂತರ ಕ್ರೀಸ್‌ಗೆ ಬಂದ ರಿಂಕು ಸಿಂಗ್‌ ಸತತ 5 ಎಸೆತಗಳನ್ನೂ ಭರ್ಜರಿ ಸಿಕ್ಸರ್‌ ಬಾರಿಸಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಈ ಮೂಲಕ ಗೆಲುವಿನ ಹಾದಿಯಲ್ಲಿದ್ದ ಹಾಲಿ ಚಾಂಪಿಯನ್ಸ್‌ ಪಡೆಗೆ ಸೋಲುಣಿಸಿ ಕೆಕೆಆರ್‌ ತಂಡ ಸತತ 2ನೇ ಗೆಲುವು ದಾಖಲಿಸಿತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ತಂಡ ಸಾಯಿ ಸುದರ್ಶನ್ ಹಾಗೂ ವಿಜಯ್ ಶಂಕರ್ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿತು. 205 ರನ್‌ ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ರೋಚಕ ಜಯ ಸಾಧಿಸಿತು. ಇದನ್ನೂ ಓದಿ: RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ

    ಚೇಸಿಂಗ್‌ ಆರಂಭಿಸಿದ ಕೆಕೆಆರ್‌ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಆದರೂ 3ನೇ ವಿಕೆಟ್‌ಗೆ ಜೊತೆಯಾದ ವೆಂಕಟೇಶ್‌ ಅಯ್ಯರ್‌, ನಾಯಕ ನಿತೀಶ್‌ ರಾಣ ಭರ್ಜರಿ ಬ್ಯಾಟಿಂಗ್‌ ನಡೆಸಿದರು. 3ನೇ ವಿಕೆಟ್‌ ಪತನಕ್ಕೆ ಈ ಜೋಡಿ 55 ಎಸೆತಗಳಲ್ಲಿ 100 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಅಷ್ಟರಲ್ಲೇ ನಿತೀಶ್‌ ರಾಣ 29 ಎಸೆತಗಳಲ್ಲಿ ಭರ್ಜರಿ 45 ರನ್‌ (4 ಬೌಂಡರಿ, 3 ಸಿಕ್ಸರ್‌) ಗಳಿಸಿ ಔಟಾದರು. ಇನ್ನೂ 207.50 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಏಕಾಂಗಿ ಹೋರಾಟ ನಡೆಸಿದ ವೆಂಕಟೇಶ್‌ ಅಯ್ಯರ್‌ 40 ಎಸೆತಗಳಲ್ಲಿ ಬರೋಬ್ಬರಿ 83 ರನ್‌ (5 ಸಿಕ್ಸರ್‌, 8 ಬೌಂಡರಿ) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ಈ ಬೆನ್ನಲ್ಲೇ ಆಂಡ್ರೆ ರಸ್ಸೆಲ್‌, ಸುನೀಲ್‌ ನರೇನ್‌, ಶಾರ್ದೂಲ್‌ ಠಾಕೂರ್‌ ರಶೀದ್‌ ಖಾನ್‌ ಸ್ಪಿನ್‌ ದಾಳಿಗೆ ಮಕಾಡೆ ಮಲಗಿದರು. ಇದರಿಂದ ತಂಡ ಗೆಲುವಿನ ಭರವಸೆ ಕೈಚೆಲ್ಲಿತು. ಆದರೆ ಕ್ರೀಸ್‌ನಲ್ಲಿದ್ದ ರಿಂಕು ಸಿಂಗ್‌ ಕೊನೆಯ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 228.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಿಂಕು ಸಿಂಗ್‌ 21 ಎಸೆತಗಳಲ್ಲಿ 48 ರನ್‌ (6 ಸಿಕ್ಸರ್‌, 1 ಬೌಂಡರಿ) ಬಾರಿಸಿದರೆ, ಉಮೇಶ್‌ ಯಾದವ್‌ 5 ರನ್‌ ಗಳಿಸಿ ಅಜೇಯರಾಗುಳಿದರು.

    ಗುಜರಾತ್‌ ಜೈಂಟ್ಸ್ ಪರ ರಶೀದ್‌ ಖಾನ್‌ 4 ಓವರ್‌ಗಳಲ್ಲಿ 37 ರನ್‌ ನೀಡಿ 3 ಪ್ರಮುಖ ವಿಕೆಟ್‌ ಕಿತ್ತರೆ, ಅಲ್ಝರಿ ಜೋಸೆಫ್‌ 2 ವಿಕೆಟ್‌ ಹಾಗೂ, ಮೊಹಮ್ಮದ್‌ ಶಮಿ, ಜಾಸ್‌ ಲಿಟಲ್‌ ತಲಾ ಒಂದು ವಿಕೆಟ್‌ ಕಬಳಿಸಿ ಮಿಂಚಿದರು. ಇದನ್ನೂ ಓದಿ: ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಜೈಂಟ್ಸ್‌ ಪರ ಆರಂಭಿಕ ವೃದ್ಧಿಮಾನ್‌ ಸಹಾ 17 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗಿಳಿದ ಸಾಯಿ ಸುದರ್ಶನ್‌ ಮತ್ತೊಮ್ಮೆ ಜವಾಬ್ದಾರಿಯುತ ಪ್ರದರ್ಶನ ನೀಡಿ ಗಮನಸೆಳೆದರು. ಸತತ 2ನೇ ಅರ್ಧ ಶತಕ ಸಿಡಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಸುದರ್ಶನ್‌ 38 ಎಸೆತಗಳಲ್ಲಿ 53 ರನ್‌ (2 ಸಿಕ್ಸರ್‌, 3 ಬೌಂಡರಿ) ಗಳಿಸಿ ಮಿಂಚಿದರು. ಸುದರ್ಶನ್‌ಗೆ ಉತ್ತಮ ಸಾಥ್ ನೀಡಿದ ಶುಭಮನ್‌ ಗಿಲ್ 39 ರನ್‌ (31 ಎಸೆತ, 5 ಬೌಂಡರಿ) ಗಳಿಸಿ ಔಟಾದರು. ಈ ಬೆನ್ನಲ್ಲೇ ಅಭಿನಮ್ ಮನೋಹರ್ 14 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

    ನಂತರ ಜೊತೆಯಾದ ವಿಜಯ್‌ ಶಂಕರ್‌ ಹಾಗೂ ಡೇವಿಡ್‌ ಮಿಲ್ಲರ್‌ ಜೋಡಿ ಭರ್ಜರಿ ರನ್‌ ಕಲೆಹಾಕಿತು. ಮುರಿಯದ 5ನೇ ವಿಕೆಟ್‌ಗೆ ಈ ಜೋಡಿ ಕೇವಲ 16 ಎಸೆತಗಳಲ್ಲಿ ಭರ್ಜರಿ 51 ರನ್‌ ಸಿಡಿಸಿತ್ತು. ಈ ವೇಳೆ ವಿಜಯ್‌ ಶಂಕರ್‌ 13 ಎಸೆತಗಳಲ್ಲಿ 46 ರನ್‌ ಚಚ್ಚಿದರೆ, ಮಿಲ್ಲರ್‌ 3 ಎಸೆತಗಳಲ್ಲಿ 2 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. 262 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ವಿಜಯ್‌ ಶಂಕರ್‌ 24 ಎಸೆತಗಳಲ್ಲಿ ಸ್ಫೋಟಕ 63 ರನ್‌ (4 ಬೌಂಡರಿ, 5 ಸಿಕ್ಸರ್)‌ ಚಚ್ಚಿ ತಂಡದ ಮೊತ್ತ 200ರ ಗಡಿ ದಾಟಿಸಿದರು.

    ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೇನ್‌ 3 ವಿಕೆಟ್ ಕಿತ್ತರೆ, ಸುಯಶ್ ಶರ್ಮಾ ಒಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • IPL 2023: ರಾಜಪಕ್ಸ ಫಿಫ್ಟಿ, ಅರ್ಷ್‌ದೀಪ್‌ ಬೆಂಕಿ ಬೌಲಿಂಗ್‌ – ಮಳೆ ನಡುವೆಯೂ ಪಂಜಾಬ್‌ಗೆ 7 ರನ್‌ ರೋಚಕ ಜಯ

    IPL 2023: ರಾಜಪಕ್ಸ ಫಿಫ್ಟಿ, ಅರ್ಷ್‌ದೀಪ್‌ ಬೆಂಕಿ ಬೌಲಿಂಗ್‌ – ಮಳೆ ನಡುವೆಯೂ ಪಂಜಾಬ್‌ಗೆ 7 ರನ್‌ ರೋಚಕ ಜಯ

    ಮೊಹಾಲಿ: ಭಾನುಕ ರಾಜಪಕ್ಷ ಭರ್ಜರಿ ಬ್ಯಾಟಿಂಗ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ ಬೆಂಕಿ ಬೌಲಿಂಗ್‌ ದಾಳಿಯ ಪರಿಣಾಮ ಮಳೆಯ ನಡುವೆಯೂ ಪಂಜಾಬ್‌ ಕಿಂಗ್ಸ್‌ (Punjab Kings), ಕೆಕೆಆರ್‌ (KKR) ವಿರುದ್ಧ 7 ರನ್‍ಗಳ ರೋಚಕ ಜಯ ಸಾಧಿಸಿದೆ.

    ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಸುಧಾರಣೆಯಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್‌ಗೆ ಕೊನೆಯ 24 ಎಸೆತಗಳಲ್ಲಿ 55 ರನ್‌ ಗಳ ಅಗತ್ಯವಿತ್ತು. ಆದರೆ ಮಳೆ ಅಡ್ಡಿಯಾದ್ದರಿಂದ ಡಕ್ವರ್ಥ್ ಲೂಯಿಸ್‌ ನಿಯಮ (DLS Method) ಅನ್ವಯಿಸಲಾಯಿತು. ಈ ನಿಯಮದಂತೆ ಪಂಜಾಬ್‌ 7 ರನ್‌ಗಳ ರೋಚಕ ಜಯ ಸಾಧಿಸಿತು.

    ಶನಿವಾರ ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ 2023ರ ಐಪಿಎಲ್‌ನ (IPL 2023) 2ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಭರ್ಜರಿ 191 ರನ್‌ ಕಲೆಹಾಕಿತ್ತು. 192 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ಮಳೆಯ ಕಾರಣ ನಿಗದಿತ 16 ಓವರ್‌ಗಳಲ್ಲಿ 146 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಕೋಲ್ಕತ್ತಾ ನೈಟ್‌ರೈಡರ್ಸ್‌ ಭರ್ಜರಿ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳು ಪಂಜಾಬ್ ‌ಬೌಲರ್‌ಗಳ ದಾಳಿಗೆ ತತ್ತರಿಸಿದರು. ಇದನ್ನೂ ಓದಿ: ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ – ಇಲ್ಲಿದೆ ಕಣ್ಮನ ಸೆಳೆಯುವ Photos

    ಆರಂಭಿಕರಾಗಿ ಕಣಕ್ಕಿಳಿದ ಮಂದೀಪ್‌ ಸಿಂಗ್‌ 4 ಎಸೆತಗಳಲ್ಲಿ ಕೇವಲ 2 ರನ್‌ ಗಳಿಸಿದರೆ, ರಹಮಾನುಲ್ಲಾ ಗುರ್ಬಾಜ್ 16 ಎಸೆತಗಳಲ್ಲಿ 22 ರನ್‌ (3 ಬೌಂಡರಿ, 1 ಸಿಕ್ಸರ್‌) ಬಾರಿಸಿ ಪೆವಿಲಿಯನ್‌ ಸೇರಿದರು. ತಾಳ್ಮೆಯ ಆಟವಾಡಿದ ನಾಯಕ ನಿತೀಶ್‌ ರಾಣಾ (Nitish Rana) 17 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್‌ನೊಂದಿಗೆ 24 ರನ್‌ ಗಳಿಸಿದರು. ರಿಂಕು ಸಿಂಗ್‌, ಅನುಕುಲ್‌ ರಾಯ್‌ ತಲಾ 4 ರನ್‌ ಗಳಿಸಿದರು. ಉಳಿದಂತೆ ಯಾವೊಬ್ಬ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಕೆಕೆಆರ್‌ ತಂಡ ಮೊದಲ ಪಂದ್ಯದಲ್ಲೇ ಸೋಲನ್ನು ಎದುರಿಸಬೇಕಾಯಿತು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ವೆಂಕಟೇಶ್‌ ಅಯ್ಯರ್ (Venkatesh Iyer) ಹಾಗೂ ಆಂಡ್ರೆ ರಸೆಲ್ (Andre Russell) ಸ್ಫೋಟಕ ಬ್ಯಾಟಿಂಗ್‌ ನಡೆಸುವ ಮೂಲಕ ತಂಡಕ್ಕೆ ನೆರವಾದರು. ಇದರಿಂದ ಕೆಕೆಆರ್‌ಗೆ ಮತ್ತೆ ಗೆಲುವಿನ ಆಸೆ ಚಿಗುರಿತ್ತು. ಆದರೆ, ಸ್ಯಾಮ್‌ ಕರ್ರನ್‌, ಅರ್ಷ್‌ದೀಪ್‌ ಸಿಂಗ್‌ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ವೆಂಕಟೇಶ್‌ ಅಯ್ಯರ್‌ 28 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ಸಹಿತ 34 ರನ್‌ ಗಳಿಸಿದರೆ, ರಸೆಲ್‌ 19 ಎಸೆತಗಳಲ್ಲಿ 2 ಸಿಕ್ಸರ್‌, 3 ಬೌಂಡರಿಯೊಂದಿಗೆ 35 ರನ್‌ ಚಚ್ಚಿ ಔಟಾದರು. ಕೊನೆಯಲ್ಲಿ ಶಾರ್ದೂಲ್‌ ಠಾಕೂರ್‌ 3 ಎಸೆತಗಳಲ್ಲಿ 8 ರನ್‌ ಹಾಗೂ ಸುನೀಲ್‌ ನರೇನ್‌ 2 ಎಸೆತಗಳಲ್ಲಿ 7 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಮಳೆ ಅಬ್ಬರಿಸಿದ್ದರಿಂದ ಡಕ್ವರ್ಥ್‌ ಲೂಯಿಸ್‌ ನಿಯಮ ಅನ್ವಯಿಸಲಾಯಿತು. ಇದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಕೆಆರ್‌ಗೆ ನಿರಾಸೆಯುಂಟಾಯಿತು.

    ಪಂಜಾಬ್‌ ಕಿಂಗ್ಸ್‌ ಪರ ಅರ್ಷ್‌ದೀಪ್‌ ಸಿಂಗ್‌ 3 ವಿಕೆಟ್‌ ಪಡೆದರೆ, ಸ್ಯಾಮ್‌ ಕರ್ರನ್‌, ನಾಥನ್ ಎಲ್ಲಿಸ್, ಸಿಕಂದರ್‌ ರಾಜಾ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಚೆನ್ನೈಗೆ ಗುನ್ನ ಕೊಟ್ಟ ಗುಜರಾತ್‌; ಹಾಲಿ ಚಾಂಪಿಯನ್ಸ್‌ಗೆ ರೋಚಕ ಜಯ

    ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಭಾನುಕ ರಾಜಪಕ್ಸ (Bhanuka Rajapaksa ಮತ್ತು ನಾಯಕ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ ಕಲೆಹಾಕಿತು.

    ಭಾನುಕ ರಾಜಪಕ್ಸ ಕೇವಲ 32 ಎಸೆತಗಳಲ್ಲಿ 50 ರನ್ (5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನೂ ನಾಯಕ ಶಿಖರ್ ಧವನ್ 29 ಎಸೆತಗಳಲ್ಲಿ 6 ಬೌಂಡರಿ ಸಮೇತ 40 ರನ್ ಗಳಿಸಿ ಔಟಾದರು. ನಂತರ ಬಂದ ಜಿತೇಶ್ ಶರ್ಮಾ 11 ಎಸೆತಗಳಲ್ಲಿ 21 ರನ್‌ಗಳ (1 ಬೌಂಡರಿ, 2 ಸಿಕ್ಸರ್‌) ಕೊಡುಗೆ ನೀಡಿದರು. ಇದೇ ವೇಳೆ ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಾಜ 13 ಎಸೆತಗಳಲ್ಲಿ 16 ರನ್ ಗಳಿಸಿದರು.

    ಕೊನೆಯಲ್ಲಿ ಐಪಿಎಲ್‌ನ ದುಬಾರಿ ಆಟಗಾರ ಸ್ಯಾಮ್ ಕರ್ರನ್ (Sam Curran) 17 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 26 ರನ್ ಬಾರಿಸಿದರೆ, ಶಾರೂಖ್ ಖಾನ್ 11 ರನ್ ಗಳಿಸಿ ತಂಡದ ಮೊತ್ತ 190ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಬೌಲಿಂಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಟಿಮ್ ಸೌಥಿ 4 ಓವರ್‌ಗಳಲ್ಲಿ 54 ರನ್ ನೀಡಿ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು. ಇನ್ನೂ ಉಮೇಶ್ ಯಾದವ್ 4 ಓವರ್‌ಗಳಲ್ಲಿ 27 ರನ್ ನೀಡಿ 1 ವಿಕೆಟ್ ಪಡೆದರೆ, ಸುನಿಲ್ ನರೈನ್ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಕಿತ್ತರು.

  • ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    ಶತಕ ಸಿಡಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್

    ಭೋಪಾಲ್: ವಿಜಯ್ ಹಜಾರೆ ಟೂರ್ನಿಯಲ್ಲಿ ಮಧ್ಯಪ್ರದೇಶದ ಆಟಗಾರ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ತಮಿಳಿನ ಖ್ಯಾತ ನಟರಾದ ರಜನಿಕಾಂತ್ ಸ್ಟೈಲ್‍ನಲ್ಲಿ ಸಂಭ್ರಮಿಸಿದ್ದಾರೆ.

    ಉತ್ತರ ಪ್ರದೇಶ ಮತ್ತು ಚಂಢೀಗಢ ನಡುವಿನ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ 151 ರನ್ (113 ಎಸೆತ, 8 ಬೌಂಡರಿ, 10 ಸಿಕ್ಸ್) ಬಾರಿಸಿ ಗೆಲುವಿನ ರೂವಾರಿಯಾದರು. ಅಯ್ಯರ್ ಶತಕ ಸಿಡಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ ಕಡೆ ಕೈ ತೋರಿಸಿ ರಜನಿಕಾಂತ್ ಸ್ಟೈಲ್‍ನಲ್ಲಿ ಕೂಲಿಂಗ್ ಗ್ಲಾಸ್ ಹಾಕುವಂತೆ ಕೈ ಸನ್ನೆ ಮಾಡಿ ರಜನಿಕಾಂತ್‍ಗೆ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ಶತಕವನ್ನು ಅವರಿಗೆ ಸಮರ್ಪಿಸಿ ಸಂಭ್ರಮಿಸಿದರು. ಇದನ್ನೂ ಓದಿ: ಬಿಡ್ಡನ ಅಡ್ಡಾದಲ್ಲಿ ಕಾಣಿಸಿಕೊಂಡ ವಾರ್ನರ್: ನೀನು ಚೆನ್ನಾಗಿದ್ದೀಯಾ ತಾನೇ ಎಂದು ಕಾಲೆಳೆದ ಕೊಹ್ಲಿ

    ಇಂದು ರಜನಿಕಾಂತ್ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅಯ್ಯರ್ ಶತಕ ಸಿಡಿಸಿದ ಬಳಿಕ ಅವರ ಆ್ಯಕ್ಷನ್ ಒಂದನ್ನು ಮೈದಾನದಲ್ಲಿ ಮಾಡುವ ಮೂಲಕ ಗಮನಸೆಳೆದರು. ಇದೀಗ ಶ್ರೇಯಸ್ ಅಯ್ಯರ್ ಈ ರೀತಿ ಸಂಭ್ರಮಿಸಿದ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

  • ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

    ಒಂದೇ ವರ್ಷದಲ್ಲಿ 4000% ಸಂಬಳ ಹೈಕ್ – ಇದು ಅಯ್ಯರ್ ಸಾಧನೆ

    ಮುಂಬೈ: ಐಪಿಎಲ್‍ನಲ್ಲಿ ಅದೇಷ್ಟೋ ಮಂದಿ ಆಟಗಾರರು ರಾತ್ರೋ ರಾತ್ರಿ ಬೆಳಕಿಗೆ ಬಂದಿದ್ದಾರೆ. ಅದೇ ರೀತಿ ಮಿಂಚಿ ಮರೆಯಾದವರು ಕೂಡ ಇದ್ದಾರೆ. ಇದೀಗ ತಮ್ಮ ಆಟದ ಶ್ರಮ, ಶ್ರದ್ಧೆಗೆ ಐಪಿಎಲ್‍ನಲ್ಲಿ ವೇದಿಕೆ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಂಡಿರುವ ಮಧ್ಯಪ್ರದೇಶ ಮೂಲದ ಆಲ್‍ರೌಂಡರ್ ಆಟಗಾರ ವೆಂಕಟೇಶ್ ಅಯ್ಯರ್ ಕೇವಲ ಒಂದೇ ವರ್ಷದಲ್ಲಿ 20 ಲಕ್ಷವಿದ್ದ ತಮ್ಮ ಸಂಬಳವನ್ನು 8 ಕೋಟಿಗೆ ಏರಿಸಿಕೊಳ್ಳುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

    ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಕೂಡ ಅಷ್ಟು ಸದ್ದು ಮಾಡದಿದ್ದ ಅಯ್ಯರ್ ಎಲ್ಲರಿಗೂ ಪರಿಚಯವಾಗಿದ್ದು 14ನೇ ಆವೃತ್ತಿಯ ಐಪಿಎಲ್ ಮೂಲಕ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿ ಫೈನಲ್‍ಗೆ ಹೋಗುವಂತೆ ಮಾಡಿದ ಕೀರ್ತಿಕೂಡ ವೆಂಕಟೇಶ್ ಅಯ್ಯರ್‌ಗೆ ಸಲ್ಲುತ್ತದೆ. 2021ರ ಐಪಿಎಲ್‍ನ ಹರಾಜಿನಲ್ಲಿ ಅಯ್ಯರ್‌ರನ್ನು ಕೇವಲ 20 ಲಕ್ಷ ರೂಪಾಯಿಗೆ ಕೋಲ್ಕತ್ತಾ ಫ್ರಾಂಚೈಸ್ ಖರೀದಿಸಿತು. ಬಳಿಕ ತಂಡದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅಯ್ಯರ್ ಇದೀಗ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡು ತಂಡದಲ್ಲಿ ರಿಟೈನ್ ಆಗುವ ಮಟ್ಟಕ್ಕೆ ಬೆಳೆದಿದ್ದಾರೆ. ಇದನ್ನೂ ಓದಿ: ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ

    ಈಗಾಗಲೇ 15ನೇ ಆವೃತ್ತಿಯ ಐಪಿಎಲ್‍ಗಾಗಿ 8 ತಂಡಗಳು ಕೆಲ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ಮಂದಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಅದರಲ್ಲಿ ವೆಂಕಟೇಶ್ ಅಯ್ಯರ್ ಕೂಡ ಸೇರಿದ್ದಾರೆ. ಈ ಹಿಂದೆ 20 ಲಕ್ಷ ರೂಪಾಯಿಗೆ ತಂಡ ಸೇರಿದ್ದ ಅಯ್ಯರ್ ಇದೀಗ ರಿಟೈನ್‍ನಲ್ಲಿ ಬರೋಬ್ಬರಿ 8 ಕೋಟಿ ಪಡೆದಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ 4000% ಸಂಬಳದಲ್ಲಿ ಏರಿಕೆ ಕಂಡು ಕೋಟ್ಯಧಿಪತಿ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಕ್ನೋ ಫ್ರಾಂಚೈಸ್ ನೀಡಿದ ಆಫರ್‌ನಿಂದ ರಾಹುಲ್, ರಶೀದ್ ಖಾನ್‍ಗೆ ಐಪಿಎಲ್ ಬ್ಯಾನ್ ಭೀತಿ?

    ಅಯ್ಯರ್ ಐಪಿಎಲ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾಗೆ ಕೂಡ ಆಯ್ಕೆಯಾಗಿ ಟಿ20 ಪಂದ್ಯನ್ನಾಡಿದ್ದಾರೆ. ಇದೀಗ ಭವಿಷ್ಯದ ಟೀಂ ಇಂಡಿಯಾದ ತಾರೆಯಾಗಿ ಗುರುತಿಸಿಕೊಂಡಿರುವ ಅಯ್ಯರ್ ಇನ್ನಷ್ಟೂ ಉತ್ತಮ ಪ್ರದರ್ಶನದ ಮೂಲಕ ಮಿಂಚಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

  • ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ

    ಕನಸು ನನಸಾಗಿಸಿಕೊಂಡ ಅಯ್ಯರ್ – ಟೀಂ ಇಂಡಿಯಾಗೆ ನೂತನ ಆಲ್‍ರೌಂಡರ್ ಎಂಟ್ರಿ

    ಜೈಪುರ: ದೇಶಿ ಕ್ರಿಕೆಟ್‍ನಲ್ಲಿ ರನ್ ಮಳೆ ಸುರಿಸುತ್ತಿದ್ದ ಮಧ್ಯಪ್ರದೇಶ ಮೂಲದ ಆಲ್‍ರೌಂಡರ್ ವೆಂಕಟೇಶ್ ಅಯ್ಯರ್ ಭಾರತ ತಂಡಕ್ಕಾಗಿ ಆಡಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ನೂತನ ಆಲ್‌ರೌಂಡರ್‌ನ ಎಂಟ್ರಿಯಾಗಿದೆ.

    ದೇಶಿ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು ಕೂಡ ಅಷ್ಟು ಸದ್ದು ಮಾಡದಿದ್ದ ಅಯ್ಯರ್ ಎಲ್ಲರಿಗೂ ಪರಿಚಯವಾಗಿದ್ದು 14ನೇ ಆವೃತ್ತಿಯ ಐಪಿಎಲ್ ಮೂಲಕ. ದುಬೈನಲ್ಲಿ ನಡೆದ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಶಕ್ತಿ ತುಂಬಿ ಫೈನಲ್‍ಗೆ ಹೋಗುವಂತೆ ಮಾಡಿದ ಕೀರ್ತಿಕೂಡ ವೆಂಕಟೇಶ್ ಅಯ್ಯರ್‍ ಗೆ ಸಲ್ಲುತ್ತದೆ. ಪಾಯಿಂಟ್ ಟೇಬಲ್‍ನಲ್ಲಿ 7ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ ತಂಡ ಫೈನಲ್‍ಗೇರಲು ತಮ್ಮ ಆಲ್‍ರೌಂಡರ್ ಪ್ರದರ್ಶನದ ಮೂಲಕ ಅಯ್ಯರ್ ನೆರವಾಗಿದ್ದರು. ಕೋಲ್ಕತ್ತಾ ಪರ 10 ಪಂದ್ಯಗಳನ್ನು ಆಡಿದ ಅಯ್ಯರ್ 4 ಅರ್ಧಶತಕ ಸಹಿತ 370 ರನ್ ಮತ್ತು 3 ವಿಕೆಟ್ ಕಿತ್ತು ಆಲ್‍ರೌಂಡರ್ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಐಪಿಎಲ್ ಪ್ರದರ್ಶನದ ಬಳಿಕ ನನಗೆ ಭಾರತ ತಂಡದ ಪರ ಆಡುವ ಕನಸಿದೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದಿದ್ದರು. ಆ ಬಳಿಕ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದಾಗ ನಾನು ಟೀಂ ಇಂಡಿಯಾ ಪರ ಆಡಲು ಉತ್ಸಾಹಕನಾಗಿದ್ದು, ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಸಿದ್ಧರಿರುವುದಾಗಿ ಸಂತೋಷ ವ್ಯಕ್ತಪಡಿಸಿದ್ದರು.

    ಐಪಿಎಲ್‍ನಲ್ಲಿ ಅಯ್ಯರ್ ಅಮೋಘ ಆಟ ನೋಡಿದ ಟೀಂ ಇಂಡಿಯಾ ಆಯ್ಕೆ ಸಮಿತಿ ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡಿದೆ. ಅದರಂತೆ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಮಧ್ಯಮ ವೇಗದ ಬೌಲಿಂಗ್ ಆಲ್‍ರೌಂಡರ್ ಒಬ್ಬರ ಉದಯವಾಗಿದೆ. ಟೀಂ ಇಂಡಿಯಾದ ಖಾಯಂ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಫಿಟ್ನೇಸ್ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಜಾಗಕ್ಕೆ ಅಯ್ಯರ್ ಎಂಟ್ರಿಕೊಟ್ಟಿದ್ದಾರೆ. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಐಪಿಎಲ್‍ನಲ್ಲಿ ಕಮಾಲ್ ಮಾಡಿದ ಅಯ್ಯರ್ ಟೀಂ ಇಂಡಿಯಾದಲ್ಲಿ ಕೂಡ ಮಿಂಚುಹರಿಸಿದರೆ ಭಾರತತಂಡದಲ್ಲಿ ಖಾಯಂ ಸದಸ್ಯನಾಗಬಹುದು ಹಾಗಾಗಿ ಅಯ್ಯರ್ ಟೀಂ ಇಂಡಿಯಾದ ಭವಿಷ್ಯದ ಆಟಗಾರನಾಗಿದ್ದು ಸಿಕ್ಕ ಅವಕಾಶವನ್ನು ಯಾವರೀತಿ ಬಲಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ