Tag: venkaiah naidu

  • 93ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಾಜಪೇಯಿ – ಮೋದಿ, ವೆಂಕಯ್ಯ ನಾಯ್ಡುರಿಂದ ಶುಭಾಶಯ

    93ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಾಜಪೇಯಿ – ಮೋದಿ, ವೆಂಕಯ್ಯ ನಾಯ್ಡುರಿಂದ ಶುಭಾಶಯ

    ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ತಮ್ಮ 93ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನವದೆಹಲಿಯಲ್ಲಿರುವ ವಾಜಪೇಯಿ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಕೇಂದ್ರ ಗೃಹ ಮಂತ್ರಿ ರಾಜ್‍ನಾಥ್ ಸಿಂಗ್ ತೆರಳಿ ಶುಭಾಶಯ ತಿಳಿಸಿದರು.

    ಇವರ ಚಮತ್ಕಾರ ಹಾಗೂ ನಾಯಕತ್ವದಿಂದ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ. ವಿಶ್ವ ಮಟ್ಟದಲ್ಲಿ ನಮ್ಮ ದೇಶದ ಪ್ರತಿಷ್ಠಿತೆಯನ್ನು ಹೆಚ್ಚಿಸಿದ್ದಾರೆ. ಅವರ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.

    ವಾಜಪೇಯಿ ಅವರು ಜನರನ್ನು ಒಟ್ಟಾಗಿ ಇರಲು ಒತ್ತಾಯಿಸಿದರು ಮತ್ತು ಕಷ್ಟದ ಕಾಲದಲ್ಲಿ ಭರವಸೆಯನ್ನು ಅವರು ಬಿಡಲಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕವಿತೆ ಮೂಲಕ ವಾಜಪೇಯಿ ಅವರಿಗೆ ಶುಭ ಕೋರಿದ್ದಾರೆ.

    ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರು. 1924ರಲ್ಲಿ ಜನಿಸಿದ ವಾಜಪೇಯಿ ಅವರು 1942 ‘ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

    ರಾಜ್ಯದ ಪ್ರಥಮ ಬಯಲು ಬಹಿರ್ದೆಸೆ ಮುಕ್ತ ತಾಲೂಕು ನರಗುಂದ: ವೆಂಕಯ್ಯ ನಾಯ್ಡು ಘೋಷಣೆ

    ಗದಗ: ರೈತ ಬಂಡಾಯಕ್ಕೆ ಹೆಸರಾದ ನರಗುಂದಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯೋ ಮೂಲಕ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎನ್ನುವ ಹೆಗ್ಗಳಿಕೆ ನರಗುಂದಕ್ಕೆ ಲಭಿಸಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಶೌಚಾಲಯ ನಿರ್ಮಾಣದ ಕ್ರಾಂತಿ ಕಹಳೆಯನ್ನು ಮೊಳಗಿಸಿದರು.

    ಕೊಣ್ಣೂರ ಗ್ರಾಮದಲ್ಲಿ ತಿಪ್ಪೆ ಸಂಸ್ಕರಣ ಘಟಕ ಹಾಗೂ ಜನತಾ ಕಾಲೋನಿಯಲ್ಲಿರೋ ಶುದ್ಧ ಕುಡಿಯೋ ನೀರಿನ ಘಟಕ ಉದ್ಘಾಟಿಸಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತನಾಡೋ ಮೂಲಕ ಎಲ್ಲರ ಗಮನ ಸೆಳೆದರು.

    ನರಗುಂದ ತಾಲೂಕಿನ ಶೌಚಾಲಯ ನಿರ್ಮಾಣದ ಜನಾಂದೋಲನ, ರಾಜ್ಯಕ್ಕೆ ಮಾದರಿಯಾಗಿದೆ. ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿರುವ ಜನರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಗೃತಿ ಮೂಡಿಸುವ ಮೂಲಕ ಇಡೀ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

    ರಾಜ್ಯ ಸರ್ಕಾರದ ಶೌಚಾಲಯಕ್ಕಾಗಿ ಸಮರ ಹಾಗೂ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಮೂಲಕ ಇಡೀ ತಾಲೂಕಿನಲ್ಲಿ ಇದೀಗ ಶೇ.75 ರಷ್ಟು ವೈಯಕ್ತಿಕ ಶೌಚಾಲಯ ನಿರ್ಮಾಣದ ಕ್ರಾಂತಿಕಾರಕ ಕೆಲಸ ಮಾಡಲಾಗಿದೆ. ಹೀಗಾಗಿ ಇಂದು ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರ ಮಾನ ಕಾಪಾಡುವಲ್ಲಿ ಈ ಯೋಜನೆ ಪೂರಕವಾಗಿದೆ ಎಂದರು.

    ಈ ಮಹತ್ವಪೂರ್ಣ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಸನ್ಮಾನಿಸಿದರು. ಇಡೀ ದೇಶ ಬಯಲು ಬಹಿರ್ದೆಸೆ ಮುಕ್ತವಾಗಬೇಕು. ಬಯಲು ಬಹಿರ್ದೆಸೆ ಮುಕ್ತ ತಾಲೂಕು ಘೋಷಣೆಯಂತ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿ, ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ವೆಂಕಯ್ಯ ನಾಯ್ಡು ಹಾಸ್ಯ ಚಟಾಕೆ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದ್ದು ವಿಶೇಷವಾಗಿತ್ತು.

    ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್‍ಕೆ ಪಾಟೀಲ್ ಮಾತನಾಡಿ, ಶೌಚಾಲಯ ನಿರ್ಮಾಣದಲ್ಲಿ ನಮ್ಮ ಪ್ರಗತಿ ಗಣನೀಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಆರಂಭದಲ್ಲಿ ಶೌಚಾಲಯ ನಿರ್ಮಾಣ ಶೇ.34 ರಷ್ಟಿತ್ತು. ರಾಜ್ಯ ಸರ್ಕಾರದ ವಿಶೇಷ ಕಾಳಜಿಯಿಂದ ರಾಜ್ಯದಲ್ಲಿ ಶೇ.75 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ 2018 ಮಾರ್ಚ್ ಒಳಗಾಗಿ ಕರ್ನಾಟಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಸಂಕಲ್ಪ ಹೊಂದಿದೆ. ರಾಜ್ಯ ಸರ್ಕಾರದ ತಿಪ್ಪೆ ಸಂಸ್ಕರಣಾ ಯೋಜನೆ ರಾಷ್ಟ್ರಮಟ್ಟದಲ್ಲಾದರೆ ಸ್ವಚ್ಛ ಭಾರತದ ಕನಸಿಗೆ ಹೆಚ್ಚು ಬಲಬರಲು ಸಾಧ್ಯ. ಶೌಚಾಲಯದ ಜೊತೆಗೆ ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲು ಉಪರಾಷ್ಟ್ರಪತಿಗೆ ಒತ್ತಾಯಿಸಿದರು.

    ಕೊಣ್ಣೂರು ಗ್ರಾಮದ ಅಭಿವೃದ್ಧಿಗಾಗಿ ಯುಜಿಡಿ ಕಾಮಗಾರಿಗೆ ಸರ್ಕಾರ 5 ಕೋಟಿ ರೂ. ಮಂಜೂರು ಮಾಡುವ ಭರವಸೆ ನೀಡಿದರು. ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಸರ್ಕಾರದ ಸಾಧನೆ ಕುರಿತು ಕೊಂಡಾಡಿದರು.

    ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಸಚಿವ ರಮೇಶ್ ಜಿಗಜಣಗಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ನರಗುಂದ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತಮಾಡಲು ವಿಶೇಷ ಆಸಕ್ತಿಯೊಂದಿಗೆ ಶುಚಿ ಗ್ರಾಮದ ಕನಸು ಸಕಾರಗೊಳಿಸಲು ಶ್ರಮಿಸಿದ ನರಗುಂದ ಶಾಸಕ ಬಿಆರ್ ಯಾವಗಲ್ ಅವರನ್ನು ಎಲ್ಲರೂ ಮುಕ್ತ ಕಂಠದಿಂದ ಪ್ರಶಂಸಿಸಿದರು.

     

  • 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

    13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

    ನವದೆಹಲಿ: ದೇಶದ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ ಆಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು 272 ಮತಗಳ ಅಂತರದಿಂದ ಸೋಲಿಸುವ ಮೂಲಕ ಈ ಉಪರಾಷ್ಟ್ರಪತಿಯಾಗಿ ಆಯ್ಕೆ ಆಗಿದ್ದಾರೆ.

    ಒಟ್ಟು 785 ಮತದಾರರ ಪೈಕಿ ಬಿಜೆಪಿ ಇಬ್ಬರು ಸೇರಿ 14 ಮಂದಿ ಮತ ಹಾಕಿರಲಿಲ್ಲ. ಶೇಕಡವಾರು ಲೆಕ್ಕದಲ್ಲಿ ನೋಡೋದಾದ್ರೆ 98.21ರಷ್ಟು ಮತದಾನ ಆಗಿತ್ತು. ಒಟ್ಟು ಮತಗಳ ಶೇ. 68 ರಷ್ಟು ಅಂದರೆ  516 ಸಂಸದರು ಎನ್‍ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಪರ ಮತ ಚಲಾಯಿಸಿದರೆ,  ಶೇ. 32ರಷ್ಟು ಅಂದರೆ 244 ಮಂದಿ ಸಂಸದರು ಯುಪಿಎ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಪರ ಮತ ಚಲಾಯಿಸಿದ್ದಾರೆ.

    ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವೆಂಕಯ್ಯ ನಾಯ್ಡು ಅವರನ್ನು ಅಭಿನಂದಿಸಿದ್ದಾರೆ.

    ಈ ಚುನಾವಣೆಯಲ್ಲೂ ಅಡ್ಡಮತದಾನ ನಡೆದಿದ್ದು, ವೆಂಕಯ್ಯ ನಾಯ್ಡು ಅವರಿಗೆ ಹೆಚ್ಚುವರಿಯಾಗಿ 17 ಮತಗಳು ಬಿದ್ದಿದ್ದು,   ಗೋಪಾಲಕೃಷ್ಣ ಗಾಂಧಿ ಅವರಿಗೆ 33 ಮತಗಳು ಕಡಿಮೆ ಬಿದ್ದಿದೆ.

     

  • ಸಚಿವೆ ಸ್ಮೃತಿ ಇರಾನಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ

    ಸಚಿವೆ ಸ್ಮೃತಿ ಇರಾನಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ

     

    ನವದೆಹಲಿ: ಜವಳಿ ಸಚಿವೆ ಸ್ಮೃತಿ ಇರಾನಿ ಅವರಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ ಎಂದು ಸರ್ಕಾರ ಇಂದು ಘೋಷಿಸಿದೆ.

    ಹಿರಿಯ ಬಿಜೆಪಿ ನಾಯಕ ಎಂ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಾಂಕಿತರಾಗಿರುವ ಹಿನ್ನೆಲೆಯಲ್ಲಿ ಅವರು ನಿರ್ವಹಿಸುತ್ತಿದ್ದ ವಾರ್ತಾ ಮತ್ತು ಪ್ರಸಾರ ಸಚಿವ ಸ್ಥಾನಕ್ಕೆ ಸೋಮವಾರದಂದು ರಾಜೀನಾಮೆ ನೀಡಿದ್ದರು. ಅಲ್ಲದೆ ಅವರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಸದ್ಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜವಾಬ್ದಾರಿಯನ್ನು ಸಚಿವೆ ಸ್ಮೃತಿ ಇರಾನಿಗೆ ನೀಡಲಾಗಿದೆ. ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ನರೇಂದ್ರ ಸಿಂಗ್ ತೋಮರ್ ಅವರಿಗೆ ನೀಡಲಾಗಿದೆ. ಈ ಬಗ್ಗೆ ಪ್ರಧಾನಿ ಸಚಿವಾಲಯ ಟ್ವಿಟ್ಟರ್‍ನಲ್ಲಿ ತಿಳಿಸಿದೆ.

    ತೋಮರ್ ಅವರು ಸದ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದಾರೆ.

  • ಸಚಿವ ವೆಂಕಯ್ಯ ನಾಯ್ಡು ಎನ್‍ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ

    ಸಚಿವ ವೆಂಕಯ್ಯ ನಾಯ್ಡು ಎನ್‍ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ

    ನವದೆಹಲಿ: ಪ್ರಸ್ತುತ ನಗರಾಭಿವೃದ್ಧಿ ಸಚಿವರಾಗಿರುವ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ಪ್ರಕಟಿಸಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿ ವೆಂಕಯ್ಯ ನಾಯ್ಡು ಹೆಸರನ್ನು ಪ್ರಕಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಿದೆ.

    2002ರಿಂದ 2004ರವರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೆಂಕಯ್ಯ ನಾಯ್ಡು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

    ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅವಧಿ ಆಗಸ್ಟ್ 10ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಯಲಿದ್ದು, ವಿಪಕ್ಷಗಳು ಪಶ್ಚಿಮಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಆಯ್ಕೆ ಮಾಡಿವೆ.

     

  • 30 ಸ್ಮಾರ್ಟ್ ಸಿಟಿ ಪಟ್ಟಿ ರಿಲೀಸ್: ಕರ್ನಾಟಕಕ್ಕೆ ದಕ್ಕಿದ್ದು ಒಂದೇ ಒಂದು, ತಮಿಳುನಾಡು, ಯುಪಿಗೆ ಸಿಂಹಪಾಲು

    30 ಸ್ಮಾರ್ಟ್ ಸಿಟಿ ಪಟ್ಟಿ ರಿಲೀಸ್: ಕರ್ನಾಟಕಕ್ಕೆ ದಕ್ಕಿದ್ದು ಒಂದೇ ಒಂದು, ತಮಿಳುನಾಡು, ಯುಪಿಗೆ ಸಿಂಹಪಾಲು

    ನವದೆಹಲಿ: ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 30 ನಗರ ಪಟ್ಟಿಯಲ್ಲಿ ಕರ್ನಾಟಕ ಬೆಂಗಳೂರಿಗೆ ಸ್ಥಾನ ಸಿಕ್ಕಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡ ಹೊಸ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

    ಕೇಂದ್ರ ಸರ್ಕಾರ ಈ ಬಾರಿ 40 ನಗರಗಳ ಪಟ್ಟಿಯನ್ನು ಘೋಷಿಸಲಿದೆ ಎನ್ನಲಾಗಿತ್ತು. ಆದರೆ ಕೆಲವು ನಗರಗಳು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ನಿಗದಿಯಾಗಿದ್ದ ಕನಿಷ್ಠ ಮಾನದಂಡಗಳನ್ನು ಹೊಂದಿರದ ಕಾರಣ 30 ನಗರಗಳಿಗೆ ಮಾತ್ರ ಪಟ್ಟಿ ಸೀಮಿತವಾಗಿದೆ.

    ಇಂದಿನ 30 ಸೇರಿ ಒಟ್ಟು 90 ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಘೋಷಣೆ ಮಾಡಲಾಗಿದ್ದು, ಈ ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ 500 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.

    ಕೇಂದ್ರ ಸರ್ಕಾರದ ಸ್ಮಾಟ್ ಸಿಟಿ ಪಟ್ಟಿಯಲ್ಲಿ ಇದೂವರೆಗೆ ಕರ್ನಾಟಕದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ತುಮಕೂರು ನಗರಗಳು ಸ್ಥಾನ ಪಡೆದಿತ್ತು.

    1. ತಿರುವನಂತಪುರಂ(ಕೇರಳ)
    2. ರಾಯ್‍ಪುರ್ (ಛತ್ತೀಸ್‍ಗಢ)
    3. ರಾಜ್‍ಕೋಟ್(ಗುಜರಾತ್
    4. ಅಮರಾವತಿ(ಆಂಧ್ರಪ್ರದೇಶ)
    5. ಪಾಟ್ನಾ(ಬಿಹಾರ)

    6. ಕರೀಂನಗರ್(ಉತ್ತರಪ್ರದೇಶ)
    7. ಮುಜಾಫರ್‍ಪುರ್(ಉತ್ತರಪ್ರದೇಶ)
    8. ಪುದುಚೇರಿ(ಕೇಂದ್ರಾಡಳಿತ ಪ್ರದೇಶ)
    9. ಗಾಂಧಿನಗರ(ಗುಜರಾತ್)
    10. ಶ್ರೀನಗರ(ಜಮ್ಮು ಕಾಶ್ಮೀರ)

    11. ಸಗರ್(ಮಧ್ಯಪ್ರದೇಶ)
    12. ಕರ್ನಲ್(ಹರ್ಯಾಣ)
    13. ಸಾಟ್ನಾ(ಮಧ್ಯಪ್ರದೇಶ)
    14. ಬೆಂಗಳೂರು(ಕರ್ನಾಟಕ)
    15. ಶಿಮ್ಲಾ(ಹಿಮಾಚಲ ಪ್ರದೇಶ)

    16. ಡೆಹ್ರಾಡೂನ್(ಉತ್ತರಾಖಂಡ್)
    17. ತಿರುಪ್ಪುರ್(ತಮಿಳುನಾಡು)
    18. ಪಿಂಪ್ರಿ ಚಿಂಚ್ವಾಡ್( ಮಹಾರಾಷ್ಟ್ರ- ಪುಣೆ)
    19. ಬಿಲಾಸ್‍ಪುರ್(ಛತ್ತೀಸ್‍ಗಢ)
    20. ಪಾಸಿಘಾಟ್(ಅರುಣಾಚಲ ಪ್ರದೇಶ)

    21. ಜಮ್ಮು(ಜಮ್ಮುಕಾಶ್ಮೀರ)
    22. ದಾಹೂದ್(ಗುಜರಾತ್)
    23. ತಿರುನೆಲ್ವೇಲಿ(ತಮಿಳುನಾಡು)
    24. ತೂತುಕೂಡಿ(ತಮಿಳುನಾಡು)
    25. ತಿರುಚನಾಪಳ್ಳಿ(ತಮಿಳುನಾಡು)

    26. ಝಾನ್ಸಿ(ಉತ್ತರಪ್ರದೇಶ)
    27. ಐಜ್ವಾಲ್(ಮಿಜೋರಾಂ)
    28. ಅಲಿಗಢ್(ಉತ್ತರಪ್ರದೇಶ)
    29. ಅಲಹಾಬಾದ್(ಉತ್ತರಪ್ರದೇಶ)
    30. ಗ್ಯಾಂಗ್ಟಾಕ್ (ಸಿಕ್ಕಿಂ)

  • ರೈತರ ಸಾಲಮನ್ನಾ ಈಗ ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು

    ರೈತರ ಸಾಲಮನ್ನಾ ಈಗ ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು

    ಮುಂಬೈ: ರೈತರ ಸಾಲಮನ್ನಾ ಮಾಡುವುದು ಈಗ ಫ್ಯಾಶನ್ ಆಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

    ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೀವ್ರ ಸಂದರ್ಭದಲ್ಲಿ ಸಾಲವನ್ನು ಮನ್ನಾ ಮಾಡಬೇಕು. ಆದರೆ ಇದೇ ಅಂತಿಮ ಪರಿಹಾರವಾಗಬಾರದು. ಸರ್ಕಾರಗಳು ರೈತರ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಏರ್ ಇಂಡಿಯಾದ ಉದಾಹರಣೆ ನೀಡಿದ ಅವರು, ಏರ್‍ಇಂಡಿಯಾದಲ್ಲಿ ಏನಾಯ್ತು? ಸರ್ಕಾರವು ಈ ವ್ಯವಹಾರದಲ್ಲಿ ಯಾವುದೇ ವ್ಯವಹಾರವನ್ನು ಹೊಂದಿಲ್ಲ. ಕೇಂದ್ರ ಸರ್ಕಾರ ಹೆಲ್ತ್ ಕೇರ್, ಆಡಳಿತ, ಶಿಕ್ಷಣ ಮತ್ತು ಮೂಲ ಸೌಲಭ್ಯಗಳ ಕ್ಷೇತ್ರಗಳಿಗೆ ಹೆಚ್ಚು ಗಮನಕೊಡಬೇಕಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

    ರೈತರಿಗೆ ಅವಮಾನ: ವೆಂಕಯ್ಯ ನಾಯ್ಡು ಹೇಳಿಕೆಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತರಾಮ್ ಯಚೂರಿ ಪ್ರತಿಕ್ರಿಯಿಸಿ, ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ 36 ರಿಂದ 40 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಸಾಲಮನ್ನಾ ಮಾಡುವುದನ್ನು ಫ್ಯಾಶನ್ ಎಂದು ಹೇಳುವ ಮೂಲಕ ಅನ್ನದಾತನಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

    ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸರ್ಕಾರಗಳು ರೈತರ ಸಾಲವನ್ನು ಮನ್ನಾ ಮಾಡಿದ ಬಳಿಕ ಬುಧವಾರ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹಕಾರಿ ಸಂಘಗಳಲ್ಲಿ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಾಲವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

     

    ಇದನ್ನೂ ಓದಿ: ಸಾಲ ಮನ್ನಾ ಮಾಡಿದ ನಂತ್ರ ಮೋದಿಗೆ ಸಿಎಂ ಸವಾಲ್ ಹಾಕಿದ್ದು ಹೀಗೆ

    ಇದನ್ನೂ ಓದಿ:ಯಾವ ರಾಜ್ಯದಲ್ಲಿ ಎಷ್ಟು ಸಾಲಮನ್ನಾ? ಕೇಂದ್ರ ಸರ್ಕಾರ ಮತ್ತು ಆರ್‍ಬಿಐ ಹೇಳಿದ್ದು ಏನು?

     

     

  • ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಯ ಕೊಲೆ

    ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಯ ಕೊಲೆ

    ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡದಂತೆ ತಡೆದಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಇ-ರಿಕ್ಷಾ ಚಾಲಕರಾದ 34 ವರ್ಷದ ರವಿಂದರ್ ಕುಮಾರ್ ಕೊಲೆಯಾದ ದುರ್ದೈವಿ. ಶನಿವಾರದಂದು ಉತ್ತರ ದೆಹಲಿಯ ಮುಖರ್ಜಿನಗರದ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರೋ ಇ- ರಿಕ್ಷಾ ಸ್ಟ್ಯಾಂಡ್ ಬಳಿಯ ರಸ್ತೆಯಲ್ಲಿ ಇಬ್ಬರು ಯುವಕರು ಮೂತ್ರವಿಸರ್ಜನೆ ಮಾಡುತ್ತಿದ್ದಾಗ ರವಿಂದರ್ ಅದನ್ನು ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ರವಿಂದರ್ ಅವರಿಗೆ ಬೆದರಿಕೆ ಹಾಕಿದ್ದು, ಕೆಲವು ಗಂಟೆಗಳ ನಂತರ ದೊಡ್ಡ ತಂಡದೊಂದಿಗೆ ಬಂದು ಕಲ್ಲುಗಳನ್ನು ತುಂಬಿದ ಟವೆಲ್ ಹಾಗೂ ಹಿತ್ತಾಳೆ ಲೋಹದಿಂದ ಸುಮಾರು 20 ನಿಮಿಷಗಳವರೆಗೆ ಥಳಿಸಿದ್ರು ಎಂದು ರವಿಂದರ್ ಕುಟುಂಬಸ್ಥರು ಹಾಗೂ ಸ್ನೇಹಿತರು ಹೇಳಿದ್ದಾರೆ.

    ರಾತ್ರಿ ಸುಮಾರು 8.30ರ ವೇಳೆಯಲ್ಲಿ ಈ ಘಟನೆ ನಡೆದಿದ್ದು, ರವಿಂದರ್ ಅವರ ರಕ್ಷಣೆಗೆ ಯಾರೂ ಮುಂದೆ ಬಂದಿಲ್ಲ. ನಂತರ ಅದೇ ರಾತ್ರಿ ರವಿಂದರ್ ಮೃತಪಟ್ಟಿದ್ದಾರೆ.

    ಘಟನೆಯ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂಧು ಪೊಲೀಸ್ ಉಪ ಆಯುಕ್ತರಾದ ಮಿಲಿಂದ್ ಮಹಾದಿಯೋ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ. 12 ರಿಂದ 13 ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ನಮಗೆ ಅನ್ನಿಸುತ್ತಿದೆ. ಆದ್ರೆ ಅದಕ್ಕಿಂತಲೂ ಹೆಚ್ಚಿನವರು ಇರಬಹುದು ಎಂದು ಹೇಳಿದ್ದಾರೆ.

    ರವಿಂದರ್ ಅವರ ಸಹೋದರ ವಿಜೇಂದರ್ ಈ ಬಗ್ಗೆ ಹೇಳಿಕೆ ನೀಡಿದ್ದು, ಶನಿವಾರ ಆತ ಮನೆಗೆ ಬಂದಾಗ ಯಾವುದೇ ಕಾಣುವಂತಹ ಗಾಯಗಳು ಇರಲಿಲ್ಲವಾದ್ದರಿಂದ ವೈದ್ಯರ ಬಳಿ ಹೋಗ್ಲಿಲ್ಲ. ಆದ್ರೆ ಕೆಲ ಸಮಯದ ನಂತರ ಪ್ರಜ್ಞೆ ತಪ್ಪಿದ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರವಿಂದರ್ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು ಅಂತ ತಿಳಿಸಿದ್ದಾರೆ.

    ರವಿಂದರ್ ಸಾವಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿಷಾದ ವ್ಯಕ್ತಪಡಿಸಿದ್ದಾರೆ. ರವಿಂದರ್ ಸ್ವಚ್ಛ ಭಾರತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವರಾಗಿದ್ರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿಯ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.