Tag: vehicles

  • ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಬೆಂಗಳೂರು: ಗಾಂಜಾ, ಮದ್ಯ ಹೀಗೆ ದುಷ್ಚಟಗಳಿಗೆ ದಾಸನಾಗಿರುವ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಮಲಗಿ, ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ನೀಡುವಂತೆ ಕಾಟ ಕೊಟ್ಟ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.

    ನೆಲಮಂಗಲ ಪಟ್ಟಣದ ಕೆಇಬಿ ಆಂಜನೇಯ ದೇವಾಲಯದ ರಸ್ತೆಯಲ್ಲಿ ಕುಡುಕ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾನೆ. ರಸ್ತೆಯಲ್ಲಿ ಬರುವ ಕಾರು, ಬೈಕ್‍ಗಳಿಗೆ ಅಡ್ಡ ಮಲಗಿ ಹಣಕ್ಕೆ ಬೇಡಿಕೆ ಇಟ್ಟು ತೊಂದರೆ ಕೊಡುತ್ತಾ, 100 ರೂ. ಕೊಡುವವರೆಗೂ ಬಿಡದೇ ರಂಪಾಟ ಮಾಡಿ ಹಣ ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಆತ ಕೇಳಿದಾಗ ಹಣ ನೀಡದಿದ್ದರೆ ಬೀದಿ ರಂಪಾಟ ಮಾಡಿ ಗಲಾಟೆ ಮಾಡುತ್ತಾನೆ. ಹೀಗಾಗಿ ಈತನ ಕಾಟ ತಾಳಲಾರದೆ ಜನರು ಹಣ ಕೊಟ್ಟು ದಯವಿಟ್ಟು ಕಾಟ ಕೊಡಬೇಡಪ್ಪ ಎಂದು ಜಾಗ ಖಾಲಿ ಮಾಡುತ್ತಾರೆ.

    ಪ್ರತಿನಿತ್ಯ ಈ ವ್ಯಕ್ತಿಯದ್ದು ಇದೇ ಗೋಳಾಗಿ ಬಿಟ್ಟಿದೆ. ಈತನ ಪುಂಡಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಗಾಂಜಾ ಇನ್ನಿತರ ಮಾದಕವಸ್ತುಗೆ ಯುವಕರು ಮಾರು ಹೋಗಿದ್ದು, ನಶೆಯಲ್ಲಿ ಈ ರೀತಿ ಬೀದಿ ರಂಪಾಟ ಮಾಡಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾರೆ.

  • ವಾಹನದ ಫುಟ್ ಸ್ಟ್ಯಾಂಡ್ ಮೇಲೆ ಬಾಲಕ – ಖಾಸಗಿ ಶಾಲಾ ವಾಹನಗಳಿಗಿಲ್ಲ ರೂಲ್ಸ್

    ವಾಹನದ ಫುಟ್ ಸ್ಟ್ಯಾಂಡ್ ಮೇಲೆ ಬಾಲಕ – ಖಾಸಗಿ ಶಾಲಾ ವಾಹನಗಳಿಗಿಲ್ಲ ರೂಲ್ಸ್

    ರಾಯಚೂರು: ಜಿಲ್ಲೆಯಲ್ಲಿ ಶಾಲಾ ವಾಹನಗಳಿಗೆ ಯಾವುದೇ ರೂಲ್ಸ್ ರೆಗ್ಯುಲೇಷನ್ಸ್ ಇಲ್ಲದಂತಾಗಿದೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಅಪಾಯದಲ್ಲಿ ಕರೆದೊಯ್ಯುತ್ತಿದ್ದಾರೆ.

    ಜಿಲ್ಲೆಯ ಮಾನವಿ ಪಟ್ಟಣದ ಎಸ್‍ಯುಪಿಎಂ ಮೌಂಟೆಸ್ಸರಿ ಇಂಗ್ಲಿಷ್ ಮಾಧ್ಯಮ ಶಾಲೆ ಮಕ್ಕಳನ್ನು ಅಪಾಯದಲ್ಲಿ ಶಾಲಾ ವಾಹನದಲ್ಲಿ ಕರೆದೊಯ್ಯುತ್ತಿರುವ ದೃಶ್ಯ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ. ಪ್ರಾಣಿಗಳಂತೆ ಮಕ್ಕಳನ್ನು ವಾಹನದಲ್ಲಿ ತುಂಬಿದ್ದಲ್ಲದೇ, ವಾಹನದ ಹೊರಭಾಗದ ಫುಟ್ ಸ್ಟ್ಯಾಂಡ್ ಮೇಲೆ ವಿದ್ಯಾರ್ಥಿಯನ್ನು ನಿಲ್ಲಿಸಿಕೊಂಡು ಕರೆದೊಯ್ಯಲಾಗಿದೆ.

    ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಆಡಳಿತ ಮಂಡಳಿ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೊಲೀಸರು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಇಂತಹ ಶಾಲಾ ಆಡಳಿತ ಮಂಡಳಿ ವಿರುದ್ದ ಕಠಿಣ ಕ್ರಮ ಕೈಗೊಂಡು ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕಿದೆ. ಶಾಲಾ ವಾಹನ ಹಾಗೂ ಆಟೋಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರು ಸಹ ಎಚ್ಚೆತ್ತುಕೊಳ್ಳಬೇಕಿದೆ.

  • ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಚಿಕ್ಕಮಗಳೂರು: ರಾಜ್ಯಾದ್ಯಂತ ದಸರಾ ಸಂಭ್ರಮ. ಹಿಂದೂಗಳಿಗೆ ಶ್ರೇಷ್ಠವಾದ ಹಬ್ಬ. ಎಲ್ಲರೂ ತಮ್ಮ-ತಮ್ಮ ವಾಹನಗಳಿಗೆ ಅಲಂಕರಿಸಿ, ಪೂಜೆ ಮಾಡಿ ಓಡಾಡಿ ಸಂಭ್ರಮಿಸುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ಕೂಡ ತನ್ನ ಬಸ್ಸುಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಚಿಕ್ಕಮಗಳೂರಿನ ಎಸ್‍ಎಂಎಸ್ ಬಸ್ ಮಾಲೀಕನಾದ ಸಿರಾಜ್, ಹಿಂದೂಗಳು ನಾಚುವಂತೆ ಆಯುಧ ಪೂಜೆ ಆಚರಿಸಿದ್ದಾರೆ. ಸಿರಾಜ್ ಹಿಂದೂಗಳಂತೆ ತಾನೂ ಹಬ್ಬ ಮಾಡಿ, ಎಲ್ಲರಿಗೂ ಸಿಹಿ ಹಂಚಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ.

    ಸಿರಾಜ್ ಅವರು ತಮ್ಮ ಆರು ಬಸ್ಸುಗಳನ್ನು ಶುಚಿ ಮಾಡಿ, ನಂತರ ಬಸ್ಸಿಗೆ ಚೆಂಡು ಹೂ, ಬಲೂನ್, ಬಾಳೆ ದಿಂಡು ಹಾಗೂ ಮಾವಿನ ತೋರಣದಿಂದ ಸಿಂಗರಿಸಿದ್ದಾರೆ. ಬಳಿಕ ವಾಹನಗಳಿಗೆ ಅರಿಶಿನ-ಕುಂಕುಮ, ವಿಭೂತಿ ಬಳಿದು ಆರತಿ ಮಾಡಿ ಪೂಜೆ ಮಾಡಿದ್ದಾರೆ.

    ತನ್ನೆಲ್ಲಾ ಬಸ್ಸುಗಳನ್ನು ಅಲಂಕರಿಸಿ ಹಿಂದೂ-ಮುಸ್ಲಿಂ ಎಲ್ಲರನ್ನೂ ಕರೆಸಿ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಎಲ್ಲರಿಗೂ ಸಿಹಿ ಹಂಚಿ ಆಯುಧ ಪೂಜೆಯ ಶುಭಾಶಯ ವಿನಿಮಯ ಮಾಡಿಕೊಂಡು, ಹಿಂದೂ-ಮುಸ್ಲಿಂ ಬಾಯಿ-ಬಾಯಿ ಎಂದೂ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

  • ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

    ರಸ್ತೆ ಮಧ್ಯೆ ಕೂತು ಎಣ್ಣೆ ಪಾರ್ಟಿ ಮಾಡಿದ ಭೂಪ

    – ಲಾರಿ ಬಂದರೂ ಕ್ಯಾರೆ ಮಾಡಿಲ್ಲ

    ಕೋಲಾರ: ಟಿವಿಯಲ್ಲಿ ಬರುವ ಆಸೆಗೆ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದು ಗಲಾಟೆ ಮಾಡಿದ ಘಟನೆ ಕೋಲಾರದ ಕೆಜಿಎಫ್ ನಗರದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಪಾರಂಡಳ್ಳಿ ರಸ್ತೆಯಲ್ಲಿ ಕುಡುಕ ಅವಾಂತರ ಮಾಡಿದ್ದಾನೆ. ಸಾವನ್ನು ಲೆಕ್ಕಿಸದೆ ರಸ್ತೆ ಮಧ್ಯೆ ಕುಳಿತು ಕುಡುಕ ಎಣ್ಣೆ ಪಾರ್ಟಿ ಮಾಡಿದ್ದಾನೆ. ರಸ್ತೆಯಲ್ಲಿಯೇ ಕುಳಿತು ಕಂಠ ಪೂರ್ತಿ ಕುಡಿದು ಎಲ್ಲರಿಗೂ ಫುಲ್ ಅವಾಜ್ ಹಾಕಿ ಗಲಾಟೆ ಮಾಡಿದ್ದಾನೆ.

    ಅಷ್ಟೇ ಅಲ್ಲದೆ ಪಾದಚಾರಿಗಳಿಗೆ ಆವಾಜ್ ಹಾಕಿ ಕಿರಿಕಿರಿ ಮಾಡುತ್ತ ತೊಂದರೆ ಕೊಟ್ಟಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ, ವಿಡಿಯೋ ಮಾಡಿ ಟಿವಿಯಲ್ಲಿ ಬರುತ್ತಲ್ಲ ಎಂದು ಕೇಳಿರುವುದು ಸೆರೆಯಾಗಿದೆ. ಟಿವಿಯಲ್ಲಿ ಬರುವ ಆಸೆಯಿಂದ ಕುಡುಕ ಈ ರೀತಿ ಅವಾಂತರ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ರಸ್ತೆಯಲ್ಲಿ ಕೂತು ಕುಡುಕ ಮಾಡಿದ ಅವಾಂತರಕ್ಕೆ ವಾಹನ ಸವಾರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ಲಾರಿ ಬರುತ್ತಿದ್ದರೂ ಕ್ಯಾರೆ ಅನ್ನದೆ ಈ ವ್ಯಕ್ತಿ ಕುಡಿಯುತ್ತ ಕುಳಿತ್ತಿದ್ದನು. ಹೀಗಾಗಿ ಲಾರಿ ಚಾಲಕನೇ ವಾಹನವನ್ನು ರಸ್ತೆ ಬದಿಯಿಂದ ಚಲಾಯಿಸಿಕೊಂಡು ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

  • ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಸದ್ಯ ದಂಡ ಹೆಚ್ಚಳವಿಲ್ಲ- ಭಾಸ್ಕರ್ ರಾವ್

    ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಸದ್ಯ ದಂಡ ಹೆಚ್ಚಳವಿಲ್ಲ- ಭಾಸ್ಕರ್ ರಾವ್

    ಬೆಂಗಳೂರು: ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು ಎನ್ನುವ ಮೂಲಕ ಹೊಸ ಟ್ರಾಫಿಕ್ ರೂಲ್ಸ್ ಇಂದಿನಿಂದ ಜಾರಿಗೆ ಬರುತ್ತಿದೆ ಎಂದು ಹೇಳಲಾಗಿತ್ತು. ಆದರೆ ಸದ್ಯ ದಂಡ ಹೆಚ್ಚಳವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

    ನಗರದಲ್ಲಿಂದು ಈ ಕುರಿತು ಮಾಹಿತಿ ನೀಡಿದ ಅವರು, ಮೋಟಾರು ವಾಹನ ಕಾಯಿದೆ ಹೊಸ ನಿಯಮ ಸದ್ಯ ಜಾರಿ ಇಲ್ಲ. ಕೇಂದ್ರ ಸರ್ಕಾರದ ಹೊಸ ನಿಯಮದ ಕುರಿತು ಅಧಿಕೃತ ಆದೇಶ ಇನ್ನೂ ನಮ್ಮ ಕೈ ಸೇರಿಲ್ಲ. ಆದೇಶ ಹೊರಬಿದ್ದರೂ ಸಹ ಮೊದಲು ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಮೂಲಕ ನಮ್ಮ ಬಳಿ ಬರುತ್ತದೆ. ಆದರೆ ಅದು ಇನ್ನೂ ನಮ್ಮ ಕೈ ತಲುಪಿಲ್ಲ. ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಬಂದ ಬಳಿಕ ಪರಿಷ್ಕೃತ ದರದಂತೆ ದಂಡ ಸಂಗ್ರಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಮೂಲಕ ಸದ್ಯಕ್ಕೆ ಪರಿಷ್ಕೃತ ದರ ಜಾರಿಯಿಲ್ಲ ಎಂದು ನಿರಾಳರಾಗಬಹುದಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶದ ಪ್ರತಿ ರವಾನಿಸಲು ಇನ್ನೂ ಎರಡರಿಂದ ಮೂರು ದಿನ ಸಮಯ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ವಾಹನ ಸವಾರರು ಹಬ್ಬದ ಸಮಯದಲ್ಲಿ ಹೆಚ್ಚು ದಂಡ ತೆರುವುದರಿಂದ ತಪ್ಪಿಸಿಕೊಂಡಂತಾಗಿದೆ.

  • ವಾಹನ ಸವಾರರೇ ಎಚ್ಚರ- ಇಂದಿನಿಂದ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ

    ವಾಹನ ಸವಾರರೇ ಎಚ್ಚರ- ಇಂದಿನಿಂದ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ

    ಬೆಂಗಳೂರು: ಇವತ್ತಿನಿಂದ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು, ವಾಹನ ಸವಾರರು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎಂದರೆ ಭಾರೀ ದಂಡ ಕಟ್ಟಲು ಸವಾರರು ಸಿದ್ಧವಾಗಿರಬೇಕು.

    ಹೌದು. 2019 ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಇಂದಿನಿಂದ ಜಾರಿ ಬರುತ್ತಿವೆ. ಇಂದು ಮತ್ತು ನಾಳೆ ಗಣೇಶ ಹಬ್ಬದ ಕಾರಣ ಕೋರ್ಟಿಗೆ ರಜೆ ಇದೆ. ಆದ್ದರಿಂದ ಮೈ ಮರೆತರೆ ದಂಡ ಕಟ್ಟಲು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಬೇಕಾದೀತು ಜೋಕೆ. ಟ್ರಾಫಿಕ್ ಪೊಲೀಸರು ರಾತ್ರಿಯಿಂದಲೇ ಅಲರ್ಟ್ ಆಗಿದ್ದಾರೆ. ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ಹಾಕಲು ಕಾದು ಕುಳಿತ್ತಿದ್ದಾರೆ.

    ಯಾವ ರೂಲ್ಸ್ ವೈಲೇಷನ್‍ಗೆ ಎಷ್ಟೆಷ್ಟು ದಂಡ:

  • ಬೆಂಗ್ಳೂರು ಸುತ್ತಮುತ್ತ ಭಾರೀ ಮಳೆ – ಹೈವೇಯಲ್ಲೇ ನಿಂತ ನೀರು

    ಬೆಂಗ್ಳೂರು ಸುತ್ತಮುತ್ತ ಭಾರೀ ಮಳೆ – ಹೈವೇಯಲ್ಲೇ ನಿಂತ ನೀರು

    ಬೆಂಗಳೂರು: ಗುರುವಾರ ನಗರದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ರಸ್ತೆ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಮಲ್ಲೇಶ್ವರಂ, ಸದಾಶಿವನಗರ, ಶೇಷಾದ್ರಿಪುರಂ, ಸ್ಯಾಂಕಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇತ್ತ ಮೆಜೆಸ್ಟಿಕ್, ವಿಧಾನಸೌಧ, ಶಿವಾಜಿನಗರ, ಹಲಸೂರು, ಕೆ.ಆರ್.ಮಾರ್ಕೆಟ್ ಸೇರಿದಂತೆ ಹಲವೆಡೆ ಭಾರೀ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

    ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7ರ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಮಳೆಯಿಂದ ನಾಲ್ಕೈದು ಅಡಿಯಷ್ಟು ಮಳೆನೀರು ರಸ್ತೆಯಲ್ಲಿ ನಿಂತು ಸಂಪೂರ್ಣ ಕೆರೆಯಂತಾಗಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದ್ದು, ಮಳೆನೀರು ರಸ್ತೆಯಲ್ಲಿ ನಿಂತಿರುವುದರಿಂದ ಕೆಲ ವಾಹನಗಳು ಕೆಟ್ಟು ಹೋಗಿದ್ದವು. ಇದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸಹ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.

    ಪ್ರತಿ ಬಾರಿ ಮಳೆ ಬಂದಾಗಲೂ ಸಹ ವೀರಸಂದ್ರ ಸಿಗ್ನಲ್ ಬಳಿ ರಸ್ತೆ ಜಲಾವೃತಗೊಂಡು ಕೆಲ ವಾಹನ ಸವಾರರು ಹಾಗೂ ಪಾದಚಾರಿಗಳು ಗುಂಡಿಗಳು ಕಾಣದೆ ಬಿದ್ದು ಕೈ ಕಾಲು ಮುರಿದುಕೊಂಡಿರುವಂತಹ ಘಟನೆಗಳು ಸಹ ಸಾಕಷ್ಟು ಬಾರಿ ನಡೆದಿವೆ. ಮಳೆ ಬಿದ್ದು ಗಂಟೆಗಳು ಕಳೆದರೂ ಮಳೆ ನೀರು ಹೊರ ಹೋಗದೆ ರಸ್ತೆಯಲ್ಲಿ ನಿಲ್ಲುತ್ತದೆ. ಹೀಗಾಗಿ ಕೂಡಲೇ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ ಹೊರ ಹೋಗುವ ಹಾಗೆ ಮಾಡಬೇಕೆಂಬುದು ವಾಹನ ಸವಾರರು ಆಗ್ರಹಿಸಿದ್ದರು.

  • ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ಚಾಮರಾಜನಗರ: ಕೇರಳದ ವಯನಾಡಿನಲ್ಲಿ ವರುಣನ ಅಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎರಡು ದಿನಗಳಿಂದ ರಸ್ತೆಯಲ್ಲಿಯೇ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದವು. ಆದರೆ ಈಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಇದೀಗ ಮಳೆ ಅಬ್ಬರ ಕೊಂಚ ತಗ್ಗಿರುವ ಕಾರಣಕ್ಕೆ ಭಾರೀ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅವುಗಳನ್ನು ಬಿಟ್ಟು ಇತರೆ ಕಾರು, ಬೈಕ್‍ಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಕಾವೇರಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವೆಸ್ಲಿ ಸೇತುವೆ ಮತ್ತಷ್ಟು ಕುಸಿಯುವ ಹಂತಕ್ಕೆ ಬಂದಿದೆ. ಬ್ರಿಟಿಷರ ಕಾಲದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಕುಸಿದು ಹೋಗಿತ್ತು. ಉಕ್ಕಿ ಹರಿಯುವ ನದಿ ನೀರಿನ ಹೊಡೆತಕ್ಕೆ ಸೇತುವೆ ಮತ್ತಷ್ಟೂ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಅಬ್ಬರಕ್ಕೆ ಸೇತುವೆ ಕುಸಿದು ಇತಿಹಾಸದ ಪುಟ ಸೇರುತ್ತಾ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.

  • ಮಡಿಕೇರಿ, ಮಂಗ್ಳೂರು ರಸ್ತೆಯಲ್ಲಿ ಬಿರುಕು – ಪರ್ಯಾಯ ಮಾರ್ಗದ ಮಾಹಿತಿ

    ಮಡಿಕೇರಿ, ಮಂಗ್ಳೂರು ರಸ್ತೆಯಲ್ಲಿ ಬಿರುಕು – ಪರ್ಯಾಯ ಮಾರ್ಗದ ಮಾಹಿತಿ

    ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಕಳೆದ ಬಾರಿಯ ಮಳೆಗಾಲದಲ್ಲಿ ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ಕುಸಿದಿದ್ದ ರಸ್ತೆಯಲ್ಲೇ ಈ ಬಾರಿ ಮತ್ತೆ ಬಿರುಕು ಮೂಡಿರುವುದು ಆತಂಕಕ್ಕೆ ಕಾರಣವಾಗಿದೆ.

    ಮಳೆ ಬಂದು ಬಿರುಕು ಜಾಸ್ತಿಯಾದರೆ ರಸ್ತೆ ಕುಸಿಯುವ ಸಾಧ್ಯತೆಯಿದೆ. ಜೂನ್ ಆರಂಭದಲ್ಲೇ ಘನವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಕಾರು, ಬಸ್ಸುಗಳು ಎಂದಿನಿಂತೆ ಸಂಚಾರ ನಡೆಸುತ್ತಿವೆ.

    ರಸ್ತೆಯಲ್ಲಿ ಬಿರುಕು ಮೂಡಿ ಅಪಾಯಕಾರಿ ಎನಿಸಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಂಗಳೂರು ತಲುಪಲು ಪರ್ಯಾ ಮಾರ್ಗವನ್ನು ನೀಡಲಾಗಿದೆ

    1. ಮೈಸೂರು – ಕುಶಾಲನಗರ – ಸೋಮವಾರಪೇಟೆ – ಸಕಲೇಶಪುರ – ಮಂಗಳೂರು
    2. ಮೈಸೂರು – ಹುಣಸೂರು – ಗೋಣಿಕೊಪ್ಪ – ವಿರಾಜಪೇಟೆ – ಸುಳ್ಯ – ಮಂಗಳೂರು
    3. ಬೆಂಗಳೂರು – ಹಾಸನ – ಶಿರಾಡಿ – ಮಂಗಳೂರು

    ಕಳೆದ ಬಾರಿಯೂ ಬಿರುಕು ಮೂಡಿ ಕುಸಿದಿದ್ದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಮಾಡಿತ್ತು. ಸದ್ಯ ದುರಸ್ತಿಯಾದ ರಸ್ತೆ ಮತ್ತೆ ಬಿರುಕು ಬಿಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಕಾರಣ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಕಳೆದ ಬಾರಿ ಕುಸಿದು ತನ್ನ ಸಾಮಥ್ರ್ಯ ಕಳೆದುಕೊಂಡಿದ್ದ ಇದೇ ರಸ್ತೆಯಲ್ಲಿ ಭಾರೀ ವಾಹನಗಳು ಹೆಚ್ಚಾಗಿ ಸಂಚರಿಸಿದ್ದೇ ಇದೀಗ ಮತ್ತೆ ಬಿರುಕು ಮೂಡಲು ಕಾರಣ ಎನ್ನಲಾಗುತ್ತಿದೆ.

    ಮಡಿಕೇರಿಯಿಂದ 6 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್‍ನಿಂದ ಕೂಗಳತೆ ದೂರದಲ್ಲಿ ಮೂಡಿರುವ ರಸ್ತೆ ಬಿರುಕುಗಳಿಗೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಂಕ್ರೀಟ್ ತೇಪೆ ಹಚ್ಚಿದೆ. ಅಲ್ಲದೆ ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತೆ ವಹಿಸಿದೆ. ಹೀಗೆ ಮುಂದುವರಿದು ಬಿರುಕು ಹೆಚ್ಚಾದಲ್ಲಿ ಹೆದ್ದಾರಿ ಕುಸಿದು ಮಡಿಕೇರಿ – ಮಂಗಳೂರು ರಸ್ತೆ ಸಂಪರ್ಕ ಕಡಿತಗೊಳ್ಳುವ ಲಕ್ಷಣ ಹೆಚ್ಚಾಗಿದೆ.

  • ಬಿಸಿಲನಾಡು ವಿಜಯಪುರದಲ್ಲಿ ಇಬ್ಬನಿಯ ಅಬ್ಬರಕ್ಕೆ ಪರದಾಡಿದ ವಾಹನ ಸವಾರರು

    ಬಿಸಿಲನಾಡು ವಿಜಯಪುರದಲ್ಲಿ ಇಬ್ಬನಿಯ ಅಬ್ಬರಕ್ಕೆ ಪರದಾಡಿದ ವಾಹನ ಸವಾರರು

    ವಿಜಯಪುರ: ಬಿಸಿಲ ನಾಡು ಗುಮ್ಮಟ ನಗರಿ ವಿಜಯಪುರದಲ್ಲಿ ಈಗ ಇಬ್ಬನಿಯ ಅಬ್ಬರ ಶುರುವಾಗಿದೆ.

    ಗುಮ್ಮಟ ನಗರಿಯಲ್ಲಿ ಮಿತಿಮೀರಿದ ಮೈ ಕೊರೆಯುವ ಚಳಿ ಆರಂಭವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಾಗಿರುವ ಚಳಿಯಿಂದ ಜನರು ತತ್ತರಿಸಿದ್ದು, ಬುಧವಾರ ಬಿದ್ದ ಭಾರೀ ಪ್ರಮಾಣದ ಇಬ್ಬನಿಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.

    ಜನರು ಹಾಗೂ ವಾಹನಗಳು ಬೆಳಗ್ಗೆ ಎಂಟು ಗಂಟೆ ಆದರೂ ರಸ್ತೆ ಮೇಲೆ ಕಾಣಿಸುತ್ತಿಲ್ಲ. ಎದುರಿಗೆ ಬರುವ ವಾಹನಗಳು ಕಾಣದಂತಾಗಿದ್ದು ಸವಾರರ ಪರದಾಟಕ್ಕೆ ಕಾರಣವಾಗಿತ್ತು. ಮೊದಲ ಬಾರಿಗೆ ಆವರಿಸಿದ ಮಂಜಿನಿಂದಾಗಿ ವಿಜಯಪುರ ಜನತೆ ಒಂದೆಡೆ ಪರದಾಡಿದರೆ, ಇನ್ನೊಂದೆಡೆ ಬಿಸಿಲ ನಾಡಲ್ಲಿ ಮಲೆನಾಡ ಸೊಬಗು ಕಂಡು ಫುಲ್ ಖುಷಿಯಾಗಿದ್ದಾರೆ.

    ಬರದಿಂದ ಕಂಗಲಾಗಿದ್ದ ಜಿಲ್ಲೆಯ ರೈತರು ಇಬ್ಬನಿಯನ್ನು ಕಂಡು ಕೊಂಚ ಸಂತಸಗೊಂಡಿದ್ದಾರೆ. ಇಬ್ಬನಿಯಿಂದ ಜೋಳ ಸೇರಿದಂತೆ ಕೆಲ ಬೆಳೆಗಳು ಚೆನ್ನಾಗಿ ಬರಲಿರುವ ಕಾರಣ ರೈತರು ಸಂತೋಷದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv