Tag: vehicles

  • ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್-ಸುಳ್ಳು ಹೇಳಿ ತಗ್ಲಾಕೊಂಡ ಜನ

    – ಗಾಡಿ ಪಾರ್ಕ್ ಮಾಡಿ, ಮನೆಗೆ ಹೋಗಿ

    ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಇಂದು ಬೆಳ್ಳಂಬೆಳಗ್ಗೆ ವಾಕಿಂಗ್ ಡ್ರೆಸ್‍ನಲ್ಲೇ ರಸ್ತೆಗಿಳಿದಿದ್ದಾರೆ. ತಾವೇ ಖುದ್ದು ವಾಹನ ತಪಾಸಣೆ ನಡೆಸಿ, ಮುಲಾಜಿಲ್ಲದೆ ವಾಹನಗಳನ್ನು ಸೀಜ್ ಮಾಡಿದ್ದಾರೆ.

    ನಗರದ ಟೌನ್ ಹಾಲ್ ಬಳಿ ಭಾಸ್ಕರ್ ರಾವ್ ಚೆಕಿಂಗ್ ಮಾಡಿದ್ದು, ಎಲ್ಲಿಂದ ಬರ್ತಾ ಇರೋದು, ಗಾಡಿ ಸೈಡ್‍ಗೆ ಹಾಕು, ಪಾಸ್ ಇದ್ಯಾ, ಗಾಡಿ ನಿಲ್ಲಿಸು. ದೂರ ನಿಲ್ಲಪ್ಪ ನೀನು ಎಂದು ಹೇಳುತ್ತಲೇ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ಸುಖಾಸುಮ್ಮನೆ ಓಡಾಡುತ್ತಿದ್ದ ಇನ್ನೋವಾ ಕಾರನ್ನು ಮುಲಾಜಿಲ್ಲದೆ ಸೀಜ್ ಮಾಡಿದ್ದಾರೆ.

    ಕಮೀಷನರ್ ಎದುರೇ ಪಾಸ್ ಇಲ್ಲದೆ ವಾಹನಗಳ ಓಡಾಟ ಹೆಚ್ಚಾಗಿದ್ದು, ಹಲವು ಬೈಕ್, ಕಾರುಗಳನ್ನು ಜಪ್ತಿ ಮಾಡಿಸಿದ್ದಾರೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಆರ್ಮಿ ಪ್ಲೇಟ್ ಹಾಕಿದ್ದ ವಾಹನಗಳು ಸೇರಿ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೈಕ್ ನಲ್ಲಿ ದೇವಸ್ಥಾನಕ್ಕೆ ಹೊರಟವರು, ಅಂತ್ಯಕ್ರಿಯೆಗೆ ಹೊರಟವರು, ತರಕಾರಿಗೆ ಹೊರಟವರು, ನೆಂಟರ ಮನೆಗೆ ಹೊರಟವರು ಕಮೀಷನರ್‍ಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕಮಿಷನರ್ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ವಾಹನ ತಪಾಸಣೆ ಸರಿಯಾಗಿ ಅಗ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ಚೆಕಿಂಗ್ ಮಾಡಬೇಕು ಎಂದು ಕಂಟ್ರೋಲ್ ರೂಂ ಮೂಲಕ ಮತ್ತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾಕಿ ಟಾಕಿ ಮೂಲಕ ವಾಹನಗಳನ್ನು ಸರಿಯಾಗಿ ತಪಾಸಣೆ ಮಾಡಿ. ಬಹುತೇಕ ಮಂದಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಆದರೂ ತಪಾಸಣೆ ಸರಿಯಾಗಿ ಅಗ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ಸಿಸಿಟಿವಿ ದೃಶ್ಯ ಆಧರಿಸಿ ವಾಹನ ಮಾಲೀಕರಿಗೆ ನೋಟಿಸ್- 303 ವಾಹನಗಳು ಸೀಜ್

    ಸಿಸಿಟಿವಿ ದೃಶ್ಯ ಆಧರಿಸಿ ವಾಹನ ಮಾಲೀಕರಿಗೆ ನೋಟಿಸ್- 303 ವಾಹನಗಳು ಸೀಜ್

    – ಕೊರೊನಾ ನಿವಾರಣೆಗೆ ಮಹಾ ಪ್ರತ್ಯಂಗಿರ ಹೋಮ

    ಮೈಸೂರು: ಕೊರೊನಾ ನಿವಾರಣೆಗೆ ಒಂದೆಡೆ ಪ್ರತ್ಯಂಗಿರ ಹೋಮ ಮಾಡಲಾಗುತ್ತಿದ್ದು, ಇನ್ನೊಂದೆಡೆ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಅನಗತ್ಯವಾಗಿ ಸಂಚರಿಸುವ ವಾಹನಗಳ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದಾರೆ.

    ಕೊರೊನಾ ಸೋಂಕು ಹರಡುವಿಕೆಯ ಭೀತಿಯಲ್ಲಿ ಜನರ ಅನಗತ್ಯ ಸಂಚಾರ ನಿಲ್ಲಿಸಲು ಮೈಸೂರು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಕಾರು ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡರಿಂದ ನೋಟಿಸ್ ನೀಡಲಾಗತ್ತಿದೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದೀರಿ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‍ನಲ್ಲಿ ಪ್ರಶ್ನಿಸಲಾಗಿದೆ.

    ಕಾರು ಮಾಲೀಕರಿಗೆ ಪೊಲೀಸರಿಂದ ನೋಟಿಸ್ ನೀಡಲಾಗುತ್ತಿದ್ದು, ಲಾಕ್‍ಡೌನ್ ವೇಳೆ ಅನಗತ್ಯವಾಗಿ ನಗರದಲ್ಲಿ ಸಂಚರಿಸಿರುವ 303 ವಾಹನಗಳನ್ನು ಸೀಜ್ ಮಾಡಲಾಗಿದೆ. 285 ದ್ವಿಚಕ್ರ ವಾಹನಗಳು, 10 ತ್ರಿ ಚಕ್ರ ವಾಹನಗಳು, 08 ನಾಲ್ಕು ಚಕ್ರ ವಾಹನಗಳು ಸೇರಿ ಒಟ್ಟು 303 ವಾಹನಗಳನ್ನು ಸೀಜ್ ಮಾಡಲಾಗಿದೆ.

    ಮಹಾಪ್ರತ್ಯಂಗಿರ ಹೋಮ

    ಮೈಸೂರಿನ ಶೆಟ್ಟನಾಯಕನಹಳ್ಳಿಯ ಮಹಾಪ್ರತ್ಯಂಗಿರ ದೇವಾಲಯದಲ್ಲಿ ಕೊರೊನಾ ನಿವಾರಣೆಗಾಗಿ ಮಹಾಪ್ರತ್ಯಂಗಿರ ಹೋಮ ಮಾಡಲಾಗಿದ್ದು, ಪೂಜೆ ನಡೆದಿದೆ. ಸರ್ಕಾರದ ಆದೇಶದಂತೆ ದೇವಾಲಯ ಬಾಗಿಲು ಹಾಕಿದ್ದ ಅರ್ಚಕರು, ನಿನ್ನೆ ರಾತ್ರಿ ದೇವಾಲಯದ ಆವರಣದಲ್ಲಿ ಕೋವಿಡ್-19 ಶತ್ರು ಸಂಹಾರ ಪ್ರತ್ಯಂಗಿರ ಹೋಮ ನೆರವೇರಿಸಿದ್ದಾರೆ.

    ಪ್ರತ್ಯಂಗಿರ ದೇವಾಲಯದ ಸಂಸ್ಥಾಪಕ ಯಾಗವಿದಾನಂದ ತಾಂತ್ರಿಕ್ ಅರ್ಚಕರು ಹೋಮ ಮಾಡಿದ್ದು, ಜಗತ್ತಿಗೆ ಪ್ರತ್ಯಂಗಿರ ದೇವಿ ತಾಯಿಯಾಗಿದ್ದಾಳೆ. ಇಂದು ಜಗತ್ತಿಗೆ ಕಂಟಕವಾಗಿರೋ ಕೊರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ನೀವೂ ನಿಮ್ಮ ಮನೆಗಳಲ್ಲಿ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ. ಆಸ್ತಿಕರಾಗಿ ನಾವೆಲ್ಲ ಕೊರೊನಾ ವಿರುದ್ಧ ಹೋರಾಡೋಣ ಎಂದು ಹೇಳಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಆಲಿಕಲ್ಲು ಮಳೆ

    ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಆಲಿಕಲ್ಲು ಮಳೆ

    – ಕೋಲಾರದಲ್ಲಿ ಗುಡುಗು, ಗಾಳಿ ಸಹಿತ ಭರ್ಜರಿ ಮಳೆ

    ಚಿಕ್ಕಬಳ್ಳಾಪುರ/ಕೋಲಾರ: ಚಿಕ್ಕಬಳ್ಳಾಪುರ ತಾಲೂಕಿನ ಗಂಗರೆಕಾಲುವೆ, ಗೊಳ್ಳು, ಕತ್ರಿಗುಪ್ಪೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ಇಂದು ಆಲಿಕಲ್ಲು ಸಹಿತ ಮಳೆಯಾಗಿದೆ.

    ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಇಂದು ಮಳೆ ಆಗಿದೆ. ಇನ್ನೂ ದಿಢೀರನೆ ಸುರಿದ ಆಲಿಕಲ್ಲು ಮಳೆಗೆ ದ್ರಾಕ್ಷಿ ಹಾಗೂ ತರಕಾರಿ, ಹೂ-ಹಣ್ಣಿನ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ.

    ಹಳ್ಳಿಗಳಲ್ಲಿ ಆಲಿಕಲ್ಲು ಮಳೆ ಆಗಿದೆ ಎಂದು ತಿಳಿದ ನಗರದ ಜನತೆ ನಗರದಲ್ಲಿ ಮಳೆನಾ ಇಲ್ವಲ್ವಾ. ಇಷ್ಟೊಂದು ಆಲಿಕಲ್ಲು ಮಳೆನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲೂ ಮಳೆಯಾಗಿದೆ.

    ಇತ್ತ ಕೋಲಾರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆರಾಯನ ಸಿಂಚನವಾಗಿದೆ. ಕೋಲಾರ ಹೊರಹೊಲಯದಲ್ಲಿ ಭರ್ಜರಿ ಮಳೆ ಆಗಿದೆ. 20 ನಿಮಿಷದಿಂದ ಭರ್ಜರಿ ಮಳೆ ಸುರಿಯುತ್ತಿದ್ದು, ಬಿಸಿಲ ಬೇಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.

    ದಿಢೀರನೆ ಆರಂಭವಾದ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತಿದೆ. ಸದ್ಯ ಜನರಿಗೆ ಮಳೆಯಿಂದ ಮತ್ತಷ್ಟು ಕೊರೊನಾ ವೈರಸ್‍ನ ಆತಂಕ ಹೆಚ್ಚಾಗಿದೆ.

  • ಡ್ರಂಕ್ & ಡ್ರೈವ್ ಕೇಸ್‍ಗಳಿಗೆ ತಟ್ಟಿದ ಕೊರೊನಾ ಬಿಸಿ

    ಡ್ರಂಕ್ & ಡ್ರೈವ್ ಕೇಸ್‍ಗಳಿಗೆ ತಟ್ಟಿದ ಕೊರೊನಾ ಬಿಸಿ

    ಬೆಂಗಳೂರು: ಡೆಡ್ಲಿ ಕೊರೊನಾ ಭೀತಿಯ ಎಫೆಕ್ಟ್ ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೂ ತಟ್ಟಿದೆ. ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದ ಡ್ರಂಕ್ & ಡ್ರೈವ್ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ.

    ಕೊರೊನಾ ಎಫೆಕ್ಟ್ ಹಂತ ಹಂತವಾಗಿ ಎಲ್ಲಾ ವಲಯಗಳಿಗೂ ತಟ್ಟುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಪತ್ತೆಯಾದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಡಿಡಿ ಕೇಸ್‍ಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿವೆ. ವಾಹನ ಸವಾರರಿಂದ ಎಲ್ಲಿ ನಮಗೆ ಕೊರೊನಾ ಬರುತ್ತೋ ಎನ್ನುವ ಭೀತಿಯಲ್ಲಿ ಟ್ರಾಫಿಕ್ ಪೊಲೀಸರು ಡಿಡಿ ಚೆಕ್ ಮಾಡುವುದಕ್ಕೆ ಹಿಂದೇಟು ಹಾಕಿದರು.

    ಅಲ್ಲದೆ ವಾಹನ ಸವಾರರು ಕೂಡ ಒಂದೇ ಅಲ್ಕೋಮೀಟರಿನಲ್ಲಿ ಎಲ್ಲರಿಗೂ ಚೆಕ್ ಮಾಡುತ್ತಾರೆ. ಹೀಗಾಗಿ ಬೇರೆ ವಾಹನ ಸವಾರರಿಂದ ನಮಗೂ ವೈರಸ್ ಬರುವ ಭೀತಿ ಇದೆ ಎಂದು ಡಿಡಿ ಚೆಕ್ ಮಾಡಿಸಿಕೊಳ್ಳುವುದಕ್ಕೆ ವಾಹನ ಸವಾರರು ಕೂಡ ಹಿಂದೇಟು ಹಾಕಿದರು. ಪ್ರಮುಖವಾಗಿ ಪೊಲೀಸರು ಮಾಸ್ಕ್ ಇಲ್ಲದೇ ಕೆಲಸ ಮಾಡುವುದಕ್ಕೆ ಬೇಸರ ವ್ಯಕ್ತಪಡಿಸಿ, ಮಾಸ್ಕ್ ಕೊಡಿಸುವಂತೆ ಮೇಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು.

    ಇದನ್ನು ಅರಿತ ಪೊಲೀಸ್ ಇಲಾಖೆಯೇ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಧರಿಸಿ ಡಿಡಿ ಚೆಕ್ ಮಾಡುವಂತೆ ಆದೇಶ ಹೊರಡಿಸಿ ಇಲಾಖೆ ಕಡೆಯಿಂದ ಮಾಸ್ಕ್‍ಗಳನ್ನು ನೀಡಿತ್ತು. ಇಷ್ಟದ್ರು ಕಳೆದ ಒಂದು ವಾರದಿಂದೀಚೆಗೆ ಡಿಡಿ ಕೇಸ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ದಿನಕ್ಕೆ 400-500 ಕೇಸ್‍ಗಳು ಬುಕ್ ಆಗುತ್ತಿದ್ದ ಜಾಗದಲ್ಲಿ ದಿನಕ್ಕೆ ಕೇವಲ 30-40 ಕೇಸ್‍ಗಳು ಮಾತ್ರ ಪತ್ತೆಯಾಗುತ್ತಿವೆ. ಕಳೆದ ಶನಿವಾರ 494 ಡ್ರಂಕ್ & ಡ್ರೈವ್ ಕೇಸ್‍ಗಳು ಬುಕ್ ಆಗಿದ್ರೆ, ಈ ವಾರ ಕೇವಲ 28 ಕೇಸ್‍ಗಳು ಮಾತ್ರ ಬುಕ್ ಆಗಿವೆ.

  • ಬಾಗಲಕೋಟೆಯಲ್ಲಿ ಮೂರು ಚೆಕ್ ಪೋಸ್ಟ್ – ಸರ್ಕಾರಿ, ಖಾಸಗಿ ವಾಹನಗಳಲ್ಲಿ ಬರುವವರ ತಪಾಸಣೆ

    ಬಾಗಲಕೋಟೆಯಲ್ಲಿ ಮೂರು ಚೆಕ್ ಪೋಸ್ಟ್ – ಸರ್ಕಾರಿ, ಖಾಸಗಿ ವಾಹನಗಳಲ್ಲಿ ಬರುವವರ ತಪಾಸಣೆ

    ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮೂರು ಕಡೆಗಳಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್ ತೆರೆಯುವ ಮೂಲಕ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡುತ್ತಿದೆ.

    ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ, ಮುಧೋಳ ತಾಲೂಕಿನ ಲೋಕಾಪುರ, ಬಾದಾಮಿ ತಾಲೂಕಿನ ಕುಳಗೇರಿ ಬಳಿಯಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್‌ಗಳನ್ನು ತೆರೆದಿದೆ. ಶನಿವಾರ ರಾತ್ರಿಯಿಂದಲೇ ಈ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಬರುವ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ.

    ಇಳಕಲ್ ತಾಲೂಕಿನ ಗುಗ್ಗಲಮರಿ ಚೆಕ್ ಪೋಸ್ಟ್‌ನಲ್ಲಿ ಶನಿವಾರ ರಾತ್ರಿಯಿಂದ ಬೆಳಿಗ್ಗೆಯವರೆಗೆ 65 ಪ್ರಯಾಣಿಕರ ಸ್ಕ್ರೀನಿಂಗ್ ಮಾಡಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಪ್ರತಿ ಬಸ್ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಸೇರಿ ಎಲ್ಲಾ ಖಾಸಗಿ ವಾಹನಗಳ ತಪಾಸಣೆ ಕೂಡಾ ಮಾಡಲಾಗುತ್ತಿದೆ.

    ಮಕ್ಕಳು, ಮಹಿಳೆಯರು ಸೇರಿ ಬಸ್‍ನಲ್ಲಿದ್ದ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗುತ್ತಿದೆ. ಪ್ರತಿಯೊಂದು ಚೆಕ್ ಪೋಸ್ಟ್‌ಗಳಿಗೂ ಆಯಾ ತಾಲೂಕಿನ ವೈದ್ಯಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ವೈದ್ಯರು, ನರ್ಸ್‍ಗಳನ್ನು ನಿಯೋಜನೆ ಮಾಡಲಾಗಿದೆ.

  • ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಚತುಷ್ಪತ ರಸ್ತೆ ಕಾಮಗಾರಿ ಮುಗಿಯುವ ಮುಂಚೆಯೇ ಟೋಲ್ ಶುಲ್ಕ – ಸ್ಥಳೀಯರಿಗೆ ವಿನಾಯ್ತಿ ನೀಡುವಂತೆ ಆಗ್ರಹ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಐ.ಆರ್.ಬಿ ಕಂಪನಿ ಚತುಷ್ಪತ ರಸ್ತೆ ಕಾಮಗಾರಿ ಅಪೂರ್ಣ ವಾಗಿರುವಾಗಲೇ ಟೋಲ್ ನಿರ್ಮಾಣ ಮಾಡಿ ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

    ಇಂದು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು ನಿನ್ನೆದಿನ ಐ.ಆರ್.ಬಿ ಕಂಪನಿ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡಿದ್ದೇನೆ. ಸ್ಥಳೀಯರಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ತಪ್ಪು, ಮಾಜಾಳಿಯಿಂದ ಅಂಕೋಲದ ವರೆಗೆ ಶೇಕಡ 50 ರಷ್ಟು ಕಾಮಗಾರಿ ಪೂರ್ಣವಾಗಿಲ್ಲ ಆದರೂ ಅಂಕೋಲದ ಬೇಲಿಕೇರಿ ಬಳಿ ಶುಲ್ಕ ವಸೂಲಿ ಮಾಡುತಿದ್ದಾರೆ, ಅರಗ, ಅಮದಳ್ಳಿ, ಚಂಡಯಾ, ಹಟ್ಟಿಕೇರಿ ಬಿಡ್ಜ್ ಗಳು, ರಸ್ತೆಗಳೇ ಆಗಿಲ್ಲ. ಹೀಗಿರುವಾಗ ಹೇಗೆ ಶುಲ್ಕ ವಸೂಲಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

    ಕರಾವಳಿ ಭಾಗದಲ್ಲಿನ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಲೇ ಬೇಕು ಈ ಹಿಂದೆ ಮಾಜಾಳಿ ನಂತರ ಗೋವಾ ಗಡಿಯಲ್ಲಿ ಗೋವಾ ಸರ್ಕಾರದ ಟೋಲ್ ಗೆ ಕಾರವಾರದ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಬೇಕೆಂದು ಗೋವಾದ ಅಂದಿನ ಮುಖ್ಯಮಂತ್ರಿ ಪಾಲೇಕರ್ ರವರಿಗೆ ನಾನು ಶಾಸಕನಾಗಿದ್ದಾಗ ವಿನಾಯ್ತಿ ನೀಡಬೇಕೆಂದು ಕೇಳಿದ್ದೆ ಆಗ ಕಾರವಾರದ ವಾಹನಗಳಿಗೆ ವಿನಾಯ್ತಿ ನೀಡಿದ್ದರು. ಆದರೇ ನಮ್ಮಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯ್ತಿ ನೀಡಿಲ್ಲ, ಕೇಳಿದರೆ ವೈಟ್ ಬೋರ್ಡ ಗೆ ಮಾತ್ರ ನೀಡುತ್ತೇವೆ ಎಂದು ಕಂಪನಿಯವರು ಹೇಳುತ್ತಾರೆ. ಇದು ತಪ್ಪು ಎಲ್ಲಾ ವಾಹನಗಳಿಗೆ ವಿನಾಯ್ತಿ ನೀಡಬೇಕು, ಕಾಮಗಾರಿ ಪೂರ್ಣವಾಗದೇ ಶುಲ್ಕ ವಸೂಲಿ ಮಾಡುತಿದ್ದಾರೆ. ನಾನು ಮಾಜಾಳಿಯಿಂದ ಅಂಕೋಲದ ವರೆಗೆ ರಸ್ತೆ ಸರ್ವೆ ಮಾಡಿಸಿ ಐ.ಆರ್.ಬಿ ಕಂಪನಿ ವಿರುದ್ಧ ಕೋರ್ಟ ನಲ್ಲಿ ದಾವೆ ಹೂಡುತ್ತೇನೆ. ಹತ್ತು ದಿನ ಸಮಯ ಕೇಳಿದ್ದಾರೆ ತೆಗೆದುಕೊಳ್ಳಲಿ ಆದರೇ ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯ್ತಿ ನೀಡಲೇ ಬೇಕು ಎಂದರು.

    ಸರ್ಕಾರಿ ಬಸ್ಸುಗಳ ಮೇಲೆ ಟೋಲ್ ಶುಲ್ಕ:
    ಕಾರವಾರದಿಂದ ಅಂಕೋಲಕ್ಕೆ ಹೋಗುವ ಸ್ಥಳೀಯ ಸರ್ಕಾರಿ ಬಸ್ ಗಳಿಗೆ ಟೋಲ್ ಶುಲ್ಕದಿಂದಾಗಿ ಪ್ರಯಾಣಿಕರ ಮೇಲೆ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಮೂರು ಕಡೆ ಟೋಲ್‍ಗಳಿದ್ದು, ಕೆಎಸ್‌ಆರ್‌ಟಿಸಿಯ ಬಸ್ಸಿಗೆ ಕ್ರಮವಾಗಿ 9 ರೂ., ಸ್ಲೀಪರ್ ಗೆ 13 ರೂ., ರಾಜಹಂಸಕ್ಕೆ 10 ರೂ. ಏರಿಸಲಾಗಿದೆ. ಆದರೆ ಲೋಕಲ್ ಬಸ್ಸಿಗೆ ವಿನಾಯ್ತಿ ನೀಡಬೇಕು ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಹೊರೆ ತಪ್ಪುತ್ತದೆ. ಪ್ರತಿ ಟ್ರಿಪ್‍ಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ಬಿಡಬೇಕು. 24 ಘಂಟೆಗೆ ತೆಗೆದುಕೊಳ್ಳಬೇಕು. ಐ.ಆರ್.ಬಿ ಕಂಪನಿ ರಸ್ತೆಯಲ್ಲಿ ದರೋಡೆಗೆ ಮಾಡುತಿದ್ದಾರೆ. ಇದು ಸರಿಯಲ್ಲ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸತೀಶ್ ಸೈಲ್ ಹೇಳಿದರು.

    ಅಪಘಾತ ತಪ್ಪಿಸಲು ಬೀದಿ ದೀಪ ಅಳವಡಿಸಿ:
    ಮಾಜಾಳಿಯಿಂದ ಅಂಕೋಲ ಭಾಗದಲ್ಲಿ ಅಲ್ಲಲ್ಲಿ ಬೀದಿ ದೀಪವನ್ನು ರಸ್ತೆಯಲ್ಲಿ ಅಳವಡಿಸಲಾಗಿದೆ. ಆದರೆ ಎಲ್ಲಿ ಅವಷ್ಯಕತೆ ಇದೆಯೋ ಅಲ್ಲಿ ಅಳವಡಿಸಿಲ್ಲ. ರಸ್ತೆ ತಿರುವು, ಗ್ರಾಮಗಳು ಇರುವ ಪ್ರದೇಶಕ್ಕೆ ಕಡ್ಡಾಯವಾಗಿ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಇತ್ತ ರಸ್ತೆಯನ್ನು ಸಹ ಸಮರ್ಪಕವಾಗಿ ಮಾಡದೇ ಅಪಘಾತವಾಗಿ ಜನರು ಸಾಯುವಂತಾಗಿದೆ ಎಂದು ಐ.ಆರ್.ಬಿ ಕಂಪನಿ ವಿರುದ್ಧ ಸತೀಶ್ ಸೈಲ್ ಆಕ್ರೋಶ ವ್ಯಕ್ತಪಡಿಸಿದರು.

  • ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?

    ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?

    ಬೆಂಗಳೂರು: ಸರಣಿ ಅಪಘಾತ ಮಾಡಿ ಪ್ರಕರಣದಿಂದ ಪಾರಾಗಲು ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಮೊಹಮ್ಮದ್ ನಲಪಾಡ್ ಈಗ ತಾನು ತೋಡಿದ್ದ ಗುಂಡಿಗೆ ಬಿದ್ದಿದ್ದಾನೆ. ಪೊಲೀಸರ ಮುಂದೆ ಅಪಘಾತ ಎಸಗಿದ್ದು ನಾನು ಎಂದು ಸುಳ್ಳು ಹೇಳಿದ್ದಕ್ಕೆ ಈಗ ನಲಪಾಡ್ ಗನ್ ಮ್ಯಾನ್ ಬಾಲಕೃಷ್ಣನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

    ಭಾನುವಾರ ಸರಣಿ ಅಪಘಾತ ನಡೆದ ಬಳಿಕ ಪ್ರಕರಣ ದಾಖಲಾಗಿತ್ತು. ನಂತರ ಬಾಲಕೃಷ್ಣ ನಾನು ಚಲಾಯಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು ಎಂದು ಹೇಳಿ ಸದಾಶಿವನಗರ ಪೊಲೀಸರ ಮುಂದೆ ಶರಣಾಗಿದ್ದ.

    ಶರಣಾದ ಬಾಲಕೃಷ್ಣನಿಗೆ ಪೊಲೀಸರು ವಿಚಾರಣೆ ವೇಳೆ ಹಲವು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಕೃತ್ಯ ಎಸಗಿದ್ದು ನಾನು ಎಂದು ಹೇಳುತ್ತಿದ್ದ. ಆತನ ಹೇಳಿಕೆಗೆ ಸ್ಪಷ್ಟತೆ ಇರದಿದ್ದ ಹಿನ್ನೆಲೆಯಲ್ಲಿ ಸತ್ಯ ತಿಳಿಯಲು ಪೊಲೀಸರು ಆತನನ್ನು ಬೆಂಟ್ಲಿ ಕಾರಿನ ಬಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕೀ ನೀಡಿ ಕಾರನ್ನು ಚಾಲು ಮಾಡು ಎಂದು ಹೇಳಿದ್ದಾರೆ.

    ಈ ವೇಳೆ ಕಾರನ್ನು ಚಾಲನೆ ಮಾಡಲು ಸಾಧ್ಯವಾಗಲಿಲ್ಲ. ಚಾಲನೆ ಮಾಡಲು ವಿಫಲನಾಗುತ್ತಿದ್ದಂತೆ ಬೆಂಟ್ಲಿ ಕಾರು ಓಡಿಸಿದ ವ್ಯಕ್ತಿ ಬಾಲಕೃಷ್ಣ ಅಲ್ಲ ಎನ್ನುವುದು ಪೊಲೀಸರಿಗೆ ಖಚಿತವಾಯಿತು. ಕೂಡಲೇ ಆತನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಕಾರು ಓಡಿಸಿದ್ದು ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಎಂದು ಬಾಯಿಬಿಟ್ಟಿದ್ದಾನೆ.

     Nalapad Car

    ಸಿಸಿಟಿವಿಗಳನ್ನು ಚೆಕ್ ಮಾಡಿದಾಗ ಬೆಂಟ್ಲಿ ಕಾರನ್ನು ನಲಪಾಡ್ ಓಡಿಸುತ್ತಿದ್ದ ವಿಚಾರ ಪೊಲೀಸರಿಗೆ ಗೊತ್ತಾಗಿತ್ತು. ಆದರೆ ಅಪಘಾತ ನಡೆಸುವಾಗ ಈ ಕಾರನ್ನು ನಲಪಾಡ್ ಓಡಿಸುತ್ತಿದ್ದನೋ ಅಥವಾ ಬೇರೆ ವ್ಯಕ್ತಿಗಳು ಓಡಿಸುತ್ತಿದ್ದರೋ ಎನ್ನುವುದು ಖಚಿತವಾಗಬೇಕಿತ್ತು. ಡ್ರೈವರ್ ಸತ್ಯ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮೊಹಮ್ಮದ್ ನಲಪಾಡ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.

    ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿ ತನಿಖೆ ದಿಕ್ಕುತಪ್ಪಿಸಿ ಸಾಕ್ಷ್ಯ ನಾಶ ಆರೋಪದ ಅಡಿಯಲ್ಲಿ ಗನ್ ಮ್ಯಾನ್ ಬಾಲಕೃಷ್ಣನನ್ನು ಸದಾಶಿವನಗರ  ಪೊಲೀಸರು ಬಂಧಿಸಿದ್ದಾರೆ.

     Nalapad Car ravikanthe gowda

    ಈ ಘಟನೆಯ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಡಿಸಿಪಿ ರವಿಕಾಂತೇಗೌಡ, ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ಬೆಂಟ್ಲಿ ಕಾರೊಂದು ಅಪಘಾತ ಮಾಡಿದ್ದು, ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಕಾಲು ಮುರಿದಿದ್ದು, ಒಂದು ಆಟೋ ಕೂಡ ಡ್ಯಾಮೇಜ್ ಆಗಿದೆ. ಅತಿವೇಗವಾಗಿ, ನಿರ್ಲಕ್ಷ್ಯವಾಗಿ ವಾಹನವನ್ನು ಚಾಲನೆ ಮಾಡಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿತ್ತು. ಆದರೆ ಚಾಲಕ ಅಲ್ಲಿಂದ ಓಡಿಹೋಗಿದ್ದನು. ಸೋಮವಾರ ನಾನೇ ಅಪಘಾತ ಮಾಡಿದ್ದು ಎಂದು ಓರ್ವ ಬಂದು ಶರಣಾಗಿದ್ದನು. ಆದರೆ ನಮ್ಮ ವಿಚಾರಣೆಯಲ್ಲಿ ಈತ ವಾಹನ ಚಾಲನೆ ಮಾಡಿರಲಿಲ್ಲ ಎಂಬುದು ಗೊತ್ತಾಗಿದೆ ಎಂದು ತಿಳಿಸಿದ್ದರು.

    ನಮಗೆ ಖಚಿತ ಸಾಕ್ಷ್ಯಾಧಾರಗಳ ಮೇಲೆ ನಲಪಾಡ್‍ಯೇ ಕಾರ್ ಓಡಿಸುತ್ತಿದ್ದನು ಎಂದು ತಿಳಿದುಬಂದಿದೆ. ನ್ಯಾಯಾಲಯಕ್ಕೆ ನಾವು ದೋಷಾರೋಪಣ ಪಟ್ಟಿಯನ್ನು ಸಲ್ಲಿಸುತ್ತೇವೆ. ನ್ಯಾಯಾಲಯವು ಶಿಕ್ಷೆಯನ್ನು ತೀರ್ಮಾನ ಮಾಡುತ್ತದೆ ಎಂದು ಡಿಸಿಪಿ ವಿವರಿಸಿದ್ದರು.

    ಏನಿದು ಪ್ರಕರಣ?
    ಕಳೆದ ಭಾನುವಾರ ಮಧ್ಯಾಹ್ನ ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳದ ಕಡೆಯಿಂದ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಹೋಗುತ್ತಿದ್ದ ಬೆಂಟ್ಲಿ ಕಾರ್ ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಆಟೋ ಚಾಲಕ ಸುಹೇಲ್ ಮತ್ತು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಸಬೀಹಾ ಮತ್ತು ಅವರ ಆರು ವರ್ಷದ ಬಾಲಕನಿಗೆ ಗಾಯಗಳಾಗಿದ್ದವು. ಅಪಘಾತದ ಬಳಿಕ ಐಷಾರಾಮಿ ಕಾರಿನ ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಓಡಿ ಹೋಗಿದ್ದನು. ಈ ಕುರಿತು ಎಫ್‍ಐಆರ್ ದಾಖಲಾಗಿತ್ತು.

    ಅಪಘಾತವಾದಾಗ ನಲಪಾಡ್ ಯಾರ ಕಣ್ಣಿಗೂ ಕಾಣಿಸಲಿಲ್ಲ. ಆದರೆ ನಲಪಾಡ್ ಸಂಬಂಧಿ ನಫಿ ಮೊಹಮದ್ ನಸೀರ್ ಮತ್ತು ಬಾಡಿಗಾರ್ಡ್ ಬಾಲಕೃಷ್ಣ ಕಾಣಿಸಿಕೊಂಡಿದ್ದರು. ಸಂಚಾರ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಕಾರನ್ನು ಚಲಾಯಿಸುತ್ತಿದ್ದವನು ನಲಪಾಡ್ ಎನ್ನುವ ಸುಳಿವು ಸಿಕ್ಕಿತ್ತು. ಅಲ್ಲದೇ ಭಾನುವಾರ ಒಂದೇ ದಿನ ನಗರದ ಎರಡು ಕಡೆ ಎರಡು ಕಾರುಗಳು ಅಪಘಾತ ಮಾಡಿದ್ದವು.

    ಈ ಬಗ್ಗೆ ಮಾಧ್ಯಮವೊಂದು ನಲಪಾಡ್‍ನನ್ನು ಪ್ರಶ್ನೆ ಮಾಡಿದಾಗ, ಮೊದಲಿಗೆ ನನಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅಪಘಾತಕ್ಕೂ ನನಗೂ ಸಂಬಂಧ ಕಲ್ಪಿಸಬೇಡಿ. ನನಗೆ ಯಾವ ಬಾಡಿಗಾರ್ಡ್ ಕೂಡ ಇಲ್ಲ ಎಂದು ಹೇಳಿದ್ದನು. ನಂತರ ಶಾಸಕರ ಮಗ ಆಗಿದ್ದೇನೆ ಎಂಬ ಮಾತ್ರಕ್ಕೆ ಅಪಘಾತ ಆಗಬಾರದಾ? ಬೇರೆಯವರು ಅಪಘಾತ ಮಾಡುವುದನ್ನು ಸುದ್ದಿ ಮಾಡುವುದಿಲ್ಲ. ಆದರೆ ಶಾಸಕರ ಮಗ ಅಪಘಾತ ಮಾಡಿದರೆ ಮಾತ್ರ ಏಕೆ ಸುದ್ದಿ ಆಗಬೇಕು ಎಂದು

    ಈ ಹಿಂದೆ ಮೊಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಬಾರಿನಲ್ಲಿ ಹಲ್ಲೆ ನಡೆಸಿ 116 ದಿನ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

  • ತುಂಗಾ ಸೇತುವೆ ಮೇಲೆ ಭಾರೀ ವಾಹನ ಸಂಚಾರ ನಿರ್ಬಂಧಿಸುವಂತೆ ಡಿಸಿಗೆ ಮನವಿ

    ತುಂಗಾ ಸೇತುವೆ ಮೇಲೆ ಭಾರೀ ವಾಹನ ಸಂಚಾರ ನಿರ್ಬಂಧಿಸುವಂತೆ ಡಿಸಿಗೆ ಮನವಿ

    ಶಿವಮೊಗ್ಗ: ಶಿವಮೊಗ್ಗ ಭದ್ರಾವತಿ ನಡುವಿನ ತುಂಗಾ ಸೇತುವೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸಿ ಸಾವು-ನೋವು ಸಂಭವಿಸುತ್ತಿವೆ. ಹೀಗಾಗಿ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ ಅವರ ನೇತೃತ್ವದಲ್ಲಿ ನಾಗರಿಕರು ಜಿಲ್ಲಾಧಿಕಾರಿ ಅವರಿಗೆ ಇಂದು ಮನವಿ ಮಾಡಿದರು.

    ಈ ರಸ್ತೆಯಲ್ಲಿ ತುಂಗಾ ನದಿಗೆ ಎರಡು ಸೇತುವೆ ನಿರ್ಮಿಸಲಾಗಿದ್ದು, ಒಂದು ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರೆ, ಮತ್ತೊಂದು ಸೇತುವೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿಯೇ ಈ ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಅಪಘಾತ ಸಂಭವಿಸುತ್ತಿವೆ. ಆದ ಕಾರಣ ಎರಡು ಸೇತುವೆ ಮೇಲೆ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

    ಅಲ್ಲದೇ ಭಾರೀ ವಾಹನ ಹಾಗೂ ಬಸ್‍ಗಳಿಗೆ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಿ ಬೈಪಾಸ್ ರಸ್ತೆಯ ಮಾರ್ಗವಾಗಿ ಸಂಚರಿಸಲು ಕ್ರಮಕೈಗೊಳ್ಳಬೇಕು. ಈ ಮೂಲಕ ಅಪಘಾತವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

  • ಸಂಚಾರ ಪೊಲೀಸರಿಗೆ ದುಸ್ತರವಾದ ದುಬಾರಿ ದಂಡ

    ಸಂಚಾರ ಪೊಲೀಸರಿಗೆ ದುಸ್ತರವಾದ ದುಬಾರಿ ದಂಡ

    ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದ ಸಂಚಾರ ನಿಯಮ ಉಲ್ಲಂಘನೆಯ ಹೊಸ ದಂಡಕ್ಕೆ ವಾಹನ ಸವಾರರು ದಂಡ ಕಟ್ಟಲಾಗದೆ ಬೈಕ್ ಹಾಗೂ ಕಾರ್‌ಗಳನ್ನು ಪೊಲೀಸರ ಬಳಿಯೇ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಪೊಲೀಸ್ ಠಾಣೆಯ ಆವರಣದಲ್ಲಿ ಬಿಟ್ಟು ಹೋದ ವಾಹನಗಳನ್ನು ಮರಳಿ ಪಡೆಯಲು ವಾಹನ ಸವಾರರು ತಿಂಗಳಗಂಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

    ಬೆಳಗಾವಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸುಮಾರು 60ಕ್ಕೂ ಹೆಚ್ಚು ಬೈಕ್‍ಗಳು ಪೊಲೀಸರ ಬಳಿಯೇ ಇವೆ. ಅವುಗಳನ್ನು ನಿಲ್ಲಿಸಲು ಜಾಗ ಇಲ್ಲದೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ದಂಡ ಕಟ್ಟಿ ವಾಹನ ತೆಗೆದುಕೊಂಡು ಹೋಗುವಂತೆ ವಾಹನ ಮಾಲೀಕರಿಗೆ ಕರೆ ಮಾಡಲು ಒಬ್ಬ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡಲಾಗಿದೆ. ಅಷ್ಟರ ಮಟ್ಟಿಗೆ ದುಬಾರಿ ದಂಡ ಪೊಲೀಸರಿಗೆ ಇರುಸು-ಮುರುಸು ಉಂಟುಮಾಡಿದೆ.

    ಸಂಚಾರ ನಿಯಮದ ದಂಡ 500-3000 ರೂ. ವರೆಗೆ ಇದ್ದರೆ ವಾಹನ ಸವಾರರು ಜಾಗದಲ್ಲೇ ಅಥವಾ ಮಾರನೆ ದಿನ ದಂಡಕಟ್ಟಿ ವಾಹನ ಪಡೆದು ಹೋಗುತ್ತಿದ್ದರು. ಆದರೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ಅಂಥ ದಂಡವನ್ನು ನ್ಯಾಯಾಲಯದಲ್ಲಿಯೇ ಕಟ್ಟಿ ವಾಹನ ಬಿಡಿಸಿಕೊಂಡು ಬರುವುದು ಸಾಮಾನ್ಯವಾಗಿದೆ. ಇಂತಹ ಪ್ರಕರಣದಲ್ಲಿ ಕನಿಷ್ಠ 10ಸಾವಿರ ರೂ. ದಂಡ ಕಟ್ಟಿಟ್ಟ ಬುತ್ತಿ.

    ಹೆಲ್ಮೆಟ್, ವಿಮಾ, ಪರವಾನಿಗೆ ಸೇರಿದಂತೆ ಇನ್ನಿತರ ಸಂಚಾರ ನಿಯಮ ಉಲ್ಲಂಘನೆ ಆಗಿದ್ದರೆ 15 ಸಾವಿರಕ್ಕೂ ಅಧಿಕ ದಂಡದ ಮೊತ್ತ ಹೆಚ್ಚುತ್ತದೆ. ಒಂದೇ ಬಾರಿ ಅಷ್ಟೊಂದು ದಂಡದ ಮೊತ್ತವನ್ನು ತುಂಬಲು ವಾಹನ ಸವಾರರು ಮುಂದೆ ಬರುತ್ತಿಲ್ಲ. ಅವರು ದಂಡ ಕಟ್ಟಿ ವಾಹನ ಪಡೆಯಲು ಒಂದು ತಿಂಗಳ ಸಮಯಬೇಕಾಗುತ್ತದೆ. ಅಲ್ಲಿಯವರೆಗೂ ವಾಹನಗಳನ್ನು ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸರು ರಕ್ಷಣೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ವಾಹನಗಳ ಮಾಲೀಕರು ವಾಹನಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ಆದ್ದರಿಂದ ವಾಹನಗಳು ಪೊಲೀಸ್ ಠಾಣೆಯಲ್ಲಿ ಇರುತ್ತದೆ. ವಾಹನ ಮಾಲೀಕರಿಗೆ ಕೋರ್ಟ್ ನಿಂದ ಮನೆಗೆ ನೋಟಿಸ್ ಕೊಡಿಸುವ ಅವಕಾಶವೂ ಪೊಲೀಸ್ ಇಲಾಖೆಗೆ ಇದೆ ಎಂದು ಡಿಸಿಪಿ ಯಶೋಧಾ ಹೇಳಿದ್ದಾರೆ.

  • ವಾಹನಗಳಿಗೆ ಐಎನ್‍ಡಿ ನಾಮಫಲಕ ಕಡ್ಡಾಯ, ಸ್ಟಿಕ್ಕರ್ ನಂಬರ್ ಪ್ಲೇಟಿಗೆ ಗುಡ್ ಬೈ

    ವಾಹನಗಳಿಗೆ ಐಎನ್‍ಡಿ ನಾಮಫಲಕ ಕಡ್ಡಾಯ, ಸ್ಟಿಕ್ಕರ್ ನಂಬರ್ ಪ್ಲೇಟಿಗೆ ಗುಡ್ ಬೈ

    ದಾವಣಗೆರೆ: ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಎಲ್ಲ ವಾಹನ ಸವಾರರು ಕಡ್ಡಾಯವಾಗಿ ಭಾರತೀಯ ಮೋಟರು ವಾಹನ ಕಾಯ್ದೆಯ ನಿಯಮಾನುಸಾರ ನೋಂದಣಿ ಫಲಕಗಳನ್ನು (ನಂಬರ್ ಪ್ಲೇಟ್) ಅಳವಡಿಸಿಕೊಳ್ಳಬೇಕು. ನಿರ್ಧಿಷ್ಟ ಅಳತೆ ಹಾಗೂ ನಂಬರ್ ಪ್ಲೇಟ್‍ನ ಮೂರನೇ ಒಂದು ಭಾಗದಲ್ಲಿ ಸರ್ಕಾರದ ಹಾಲೋಗ್ರಾಮ್ ಮತ್ತು ಐ.ಎನ್.ಡಿ ಎಂದು ನಮೂದಾಗಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಾಹನ ನೋಂದಣಿ ಫಲಕಗಳ ಕಾನೂನು ತಯಾರಿಸುವ ಕುರಿತು ಏರ್ಪಡಿಸಿಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ನೋಂದಣಿ ಫಲಕಗಳನ್ನು ಸ್ವ ಇಚ್ಛೆಯಂತೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತದ ಸಂದರ್ಭದಲ್ಲಿ ವಾಹನಗಳ ನೋಂದಣಿ ಪತ್ತೆ ಹಚ್ಚುವುದು ಮತ್ತು ಅಪರಾಧ ಮಾಡಿದ ಸಂದರ್ಭದಲ್ಲಿ ವಾಹನಗಳ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಅಲ್ಲದೆ ಇದು ಭಾರತೀಯ ಮೋಟರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿಯೊಬ್ಬ ವಾಹನ ಸವಾರರು ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

    ವಾಹನ ನೊಂದಣಿ ಸಂಖ್ಯೆಯ ಫಲಕದ ಅಕ್ಷರಗಳು ಆಂಗ್ಲ ಭಾಷೆ ಮತ್ತು ಅಂಕಿಗಳು ಹಿಂದೂ ಅರೇಬಿಕ್ ಸಂಖ್ಯೆಯಲ್ಲಿರಬೇಕು. ವಾಹನಕ್ಕೆ ಹಿಂಬದಿ ಮತ್ತು ಮುಂಬದಿ ನೋಂದಣಿ ಫಲಕ ಹೊಂದಿರಬೇಕು. ಇದರ ಅಳತೆ 1.0 ಎಂ.ಎಂ ಇರಬೇಕು. ಅಲ್ಯೂಮಿನಿಯಂ ಲೋಹದಿಂದ ಮಾಡಿದ್ದಾಗಿರಬೇಕು. ಐ.ಎಸ್.ಓ 759 ಮಾದರಿಯಲ್ಲಿ ರಚಿತವಾಗಿರಬೇಕು. ಅದರ ಅಂಚುಗಳು ಹಾಳಾಗದಂತೆ 10 ಎಂ.ಎಂ ದುಂಡದಾಗಿ ಮಾಡಿಸಬೇಕು. 2 ಮತ್ತು 3 ಚಕ್ರದ ವಾಹನಗಳಿಗೆ 200*100 ಎಂ.ಎಂ ಗಾತ್ರದ ನೊಂದಣಿ ಫಲಕ ಹೊಂದಿರಬೇಕು ಎಂದು ವಿವರಿಸಿದರು.

    ಕಾರುಗಳ ನಂಬರ್ ಪ್ಲೇಟ್ ಅಳತೆ 500*200 ಎಂ.ಎಂ,. ಲಘು ಮತ್ತು ಭಾರೀ ಗಾತ್ರದ ವಾಹನಗಳಿಗೆ 340*200 ಎಂ.ಎಂ ಗಾತ್ರದ ನೋಂದಣಿ ಫಲಕ ಹೊಂದಿರಬೇಕು. 2 ಮತ್ತು 3 ಚಕ್ರದ, ಮತ್ತು 4 ಚಕ್ರದ ವಾಹನಗಳ ಮುಂಭಾಗದ ನೊಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 35 ಎಂ.ಎಂ, 7 ಎಂ.ಎಂ ದಪ್ಪ ಹಾಗೂ ಹಿಂಭಾಗದ ನೋಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 40 ಎಂ.ಎಂ, 7 ಎಂ.ಎಂ ದಪ್ಪ ಇರಬೇಕು. ಮಧ್ಯದ ಅಂತರ 5 ಎಂ.ಎಂ ಇರಬೇಕು ಎಂದು ಸೂಚಿಸಿದ್ದಾರೆ.

    ನೋಂದಣಿ ಫಲಕಗಳಲ್ಲಿ ಅಲಂಕಾರಿಕ ಅಕ್ಷರಗಳು, ಯಾವುದೇ ಚಿತ್ರ, ಹೆಸರು, ದೇವರ ಚಿತ್ರಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಯಾವುದೇ ವಾಹನಗಳ ನೊಂದಣಿ ಫಲಕವನ್ನು ಹಾಕಿಸುವ ಸಮಯದಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ನಿಯಮವನ್ನು ಇಂದಿನಿಂದಲೇ ಜಾರಿಗೊಳಿಸಲಾಗಿದ್ದು, ನಿಯಮ ಪಾಲಿಸದಿದ್ದಲ್ಲಿ 1,000ರೂ. ದಂಡ ವಿಧಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.