Tag: vehicles

  • ಕೆಸರು ಗದ್ದೆಯಂತಾದ ರಸ್ತೆ ಮಧ್ಯೆ ಸಿಲುಕಿದ ಅಂಬುಲೆನ್ಸ್

    ಕೆಸರು ಗದ್ದೆಯಂತಾದ ರಸ್ತೆ ಮಧ್ಯೆ ಸಿಲುಕಿದ ಅಂಬುಲೆನ್ಸ್

    – ನಿತ್ಯ ವಾಹನ ಸವಾರರ ಗೋಳು

    ಶಿವಮೊಗ್ಗ: ಮಳೆಗಾಲ ಆರಂಭವಾದರೆ ಮಲೆನಾಡಿನ ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದ್ದು, ಕೆಸರುಗದ್ದೆಯಂತಹ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸಪಟ್ಟು ಸಂಚರಿಸುತ್ತಾರೆ. ಅಲ್ಲದೆ ಅಂಬುಲೆನ್ಸ್ ಗಳು ಇದೇ ರಸ್ತೆಯಲ್ಲಿ ಸಿಲುಕಿಕೊಂಡ ಘಟನೆಯೂ ಇವೆ.

    ಇಷ್ಟಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸದೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕೋಡು ಗ್ರಾಮದ ಜನರ ಗೋಳಿಡುತ್ತಿದ್ದಾರೆ. ಸರ್ಕಾರ ಪ್ರತಿವರ್ಷ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡುತ್ತದೆ. ಆದರೆ ಹಣ ಎಲ್ಲಿ ಹೋಗುತ್ತೆದೆ. ರಸ್ತೆಗಳು ಎಲ್ಲಿ ಅಭಿವೃದ್ಧಿ ಆಗುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ದೂರಿಸಿದ್ದಾರೆ.

    ಮಳೆಗಾಲ ಆರಂಭವಾಗಿದ್ದು, ಮಲೆನಾಡಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರ ಜೊತೆಗೆ ಗ್ರಾಮ ಪಂಚಾಯಿತಿ ಸಹ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ, ರಸ್ತೆಗೆ ಮಣ್ಣು ಸುರಿದು ತಕ್ಕಮಟ್ಟಿಗಿದ್ದ ರಸ್ತೆಯನ್ನು ಇನ್ನೂ ದುಸ್ಥಿತಿಗೆ ತಳ್ಳಿದೆ. ಕಳೆದ ಮೂರು ದಿನದ ಹಿಂದೆ ಗ್ರಾಮದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಕ್ಕೆ ಅಂಬುಲೆನ್ಸ್ ಬಂದಿತ್ತು. ಕೆಸರು ತುಂಬಿದ್ದ ರಸ್ತೆಯಲ್ಲಿ ಅಂಬುಲೆನ್ಸ್ ಸಿಲುಕಿದ ಪರಿಣಾಮ ರೋಗಿಯನ್ನು ಸಾಗಿಸಲು ಗ್ರಾಮಸ್ಥರು ಪರದಾಡಿದ್ದಾರೆ. ನಂತರ ಕೆಸರು ತುಂಬಿದ್ದ ರಸ್ತೆಯಲ್ಲಿ ದೂರದಲ್ಲೇ ಅಂಬುಲೆನ್ಸ್ ನಿಲ್ಲಿಸಿ, ರೋಗಿಯನ್ನು ಅಂಬುಲೆನ್ಸ್ ಬಳಿಗೆ ಗ್ರಾಮಸ್ಥರು ಹೊತ್ತೊಯ್ದಿದ್ದಾರೆ. ಈ ಕಷ್ಟ ನೋಡಲಾರದೆ ಗ್ರಾಮಸ್ಥರು ಶಾಶ್ವತ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

  • ಕಾಫಿನಾಡಲ್ಲಿ ಪ್ರವಾಸಿಗರ ದಂಡು – ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರವೂ ಇಲ್ಲ

    ಕಾಫಿನಾಡಲ್ಲಿ ಪ್ರವಾಸಿಗರ ದಂಡು – ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರವೂ ಇಲ್ಲ

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಏರಿದೆ. ಆದರೆ ಜಿಲ್ಲೆಗೆ ಯಾವ ಆತಂಕವೂ ಇಲ್ಲದೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಅಧಿಕ ಸಂಖ್ಯೆಯ ಪ್ರವಾಸಿಗರನ್ನ ಕಂಡ ಜಿಲ್ಲೆಯ ಜನ ಎಲ್ಲಿ ನಮಗೂ ಕೊರೊನಾ ಬರುತ್ತೋ ಎಂದು ಕಂಗಾಲಾಗಿದ್ದಾರೆ.

    ಇಂದು ಭಾನುವಾರ ಆಗಿರುವುದರಿಂದ ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ಪ್ರವಾಸಿಗರ ವಾಹನಗಳು ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತಿದ್ದವು. ಕೈಮರ ಚೆಕ್ ಪೋಸ್ಟ್ ನಿಂದ ಸಿರಿ ಕಾಫಿವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಧಿಕ ಪ್ರಮಾಣದ ಪ್ರವಾಸಿಗರನ್ನು ಕಂಡ ಸ್ಥಳಿಯರು ಭಯಭೀತರಾಗಿದ್ದಾರೆ.

    ಗಿರಿಭಾಗದಲ್ಲೂ ಮುಖಕ್ಕೆ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳದೆ ಪ್ರವಾಸಿಗರು ಬೇಜವಾಬ್ದಾರಿತನ ತೋರಿಸಿದ್ದಾರೆ. ಇದನ್ನ ಕಂಡ ಜನ ಕೆಲವರಿಗೆ ತಿಳಿ ಹೇಳಿದ್ದಾರೆ. ಆದರೆ ಪ್ರವಾಸಿಗರು ಯಾವುದನ್ನೂ ಲೆಕ್ಕಿಸದೆ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡದಲ್ಲೂ ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದು, ಗಿರಿಪ್ರದೇಶದಲ್ಲಿ ಪ್ರವಾಸಿಗರ ವರ್ತನೆಗೆ ಸ್ಥಳೀಯರು ಹೈರಾಣಾಗಿದ್ದಾರೆ.

    ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುತ್ತಿರುವ ಪ್ರವಾಸಿಗರನ್ನ ಕಂಡ ಜನ ಸರ್ಕಾರ ಕೂಡಲೇ ಪ್ರವಾಸಿಗರನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ. ಕೆಲವರು ದಿನಕಳೆದಂತೆ ಕೊರೊನಾ ಹೆಚ್ಚಾಗುತ್ತಿದೆ. ಲಾಕ್‍ಡೌನ್ ಫ್ರೀ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸರ್ಕಾರ ಮತ್ತೆ ಲಾಕ್‍ಡೌನ್ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಲಾಕ್‍ಡೌನ್ ಸೀಜ್- ಬೆಂಗ್ಳೂರು ವಾಹನ ಸವಾರರಿಗೆ ಗುಡ್‍ನ್ಯೂಸ್

    ಲಾಕ್‍ಡೌನ್ ಸೀಜ್- ಬೆಂಗ್ಳೂರು ವಾಹನ ಸವಾರರಿಗೆ ಗುಡ್‍ನ್ಯೂಸ್

    ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಸೀಜ್ ಅದ ವಾಹನ ಸವಾರರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್‍ನ್ಯೂಸ್ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.

    ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದರು.

    ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ರಿಲೀಫ್ ಸಿಗ್ತಿದ್ದಂತೆ ರಸ್ತೆಯಲ್ಲಿ ಸಾಲು ಸಾಲು ವಾಹನ – ಅರ್ಧ ಕಿ.ಮೀ.ವರೆಗೂ ನಿಂತ ಬೈಕ್, ಕಾರುಗಳು

    ರಿಲೀಫ್ ಸಿಗ್ತಿದ್ದಂತೆ ರಸ್ತೆಯಲ್ಲಿ ಸಾಲು ಸಾಲು ವಾಹನ – ಅರ್ಧ ಕಿ.ಮೀ.ವರೆಗೂ ನಿಂತ ಬೈಕ್, ಕಾರುಗಳು

    ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಜನರ ಓಡಾಟ ಹೆಚ್ಚಾಗಿದೆ. ಜೊತೆಗೆ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.

    ಸರ್ಕಾರಿ ಕಚೇರಿ, ಐಟಿ-ಬಿಟಿ, ಗೂಡ್ಸ್ ಸರ್ವೀಸ್, ಕೃಷಿ ಚಟುವಟಿಕೆ, ಎಪಿಎಂಸಿ ಮತ್ತು ಇನ್ನಿತರ ತುರ್ತು ಸೇವೆಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ಇದರಿಂದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಜಾಸ್ತಿ ಆಗಿದ್ದು, ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸುಮಾರು ಅರ್ಧ ಕಿಲೋ ಮೀಟರ್ ವರೆಗೆ ಬೈಕ್ ಮತ್ತು ಕಾರುಗಳು ನಿಂತಿವೆ. ಇದನ್ನೂ ಓದಿ: ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಹೆಬ್ಬಾಳದ ಕೊಡಿಗೇಹಳ್ಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಪ್ರತಿಯೊಂದು ವಾಹನದ ಪಾಸ್ ಚೆಕ್ ಮಾಡಿ ಬಿಡುತ್ತಿದ್ದಾರೆ. ಹೀಗಾಗಿ ಪಾಸ್ ಚೆಕ್ ಮಾಡುವ ಸಂದರ್ಭದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತುಕೊಳ್ಳುತ್ತಿವೆ. ಈ ಮಧ್ಯೆ ಅನಗತ್ಯವಾಗಿ ಓಡಾಡುವ ವಾಹಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

    ಇನ್ನೂ ಕೆ.ಆರ್.ಸರ್ಕಲ್‍ನಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದು, ಪಾಸ್ ಇಲ್ಲದೆ ಇರುವ ವಾಹನಗಳನ್ನ ಸೀಜ್ ಮಾಡುತ್ತಿದ್ದಾರೆ. ಕೆಲಸಕ್ಕೆ ತೆರಳುತ್ತಿರುವ ಸಿಬ್ಬಂದಿಯ ಐಡಿ ಕಾರ್ಡ್ ಚೆಕ್ ಮಾಡಿ ಬಿಡಲಾಗುತ್ತಿದೆ. ಅಲ್ಲದೇ ಕಾವೇರಿ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಟೌನ್‍ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.

  • ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

    ಅನಗತ್ಯವಾಗಿ ಸಂಚರಿಸುತ್ತಿದ್ದವರ ವಾಹನ ಸೀಜ್- ಸಿಲಿಕಾನ್‍ ಸಿಟಿಯಲ್ಲಿ ಮಿಂಚಿನ ಕಾರ್ಯಾಚರಣೆ

    ಬೆಂಗಳೂರು: ಕಳೆದ ಎರಡ್ಮೂರು ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ವಿವಿಧೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‍ಡೌನ್ ಬಿಗಿಗೊಳಿಸಿದ್ದು, ಪೊಲೀಸರೂ ಸಷ್ಟೇ ಕಾರ್ಯಪ್ರವೃತ್ತರಾಗಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

    ಬೆಂಗಳೂರು ತುಮಕೂರು ಹೆದ್ದಾರಿಯ ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ಬೈಕ್ ಹಾಗೂ ಕಾರುಗಳನ್ನು ಸೀಜ್ ಮಾಡುತ್ತಿದ್ದಾರೆ. ಮಂಗಳವಾರ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಆನಂದರಾವ್ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಆಗಿತ್ತು. ಆ ಪ್ರಮಾಣದಲ್ಲಿ ವಾಹನಗಳು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ಪೊಲೀಸರು ಲಾಕ್‍ಡೌನ್ ಬಿಗಿಗೊಳಿಸಿದ್ದಾರೆ. ಪ್ರತಿ ವಾಹನವನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

    ಲಾಕ್‍ಡೌನ್ ಇದ್ದರೂ ಇಂದು ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಟ್ರಾಫಿಕ್ ಜಾಮ್ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಕಟ್ಟು ನಿಟ್ಟಾಗಿ ಪರಿಶೀಲನೆ ನಡೆಸಿದ್ದಾರೆ. ಒಂದೊಂದೇ ವಾಹನ ತಪಾಸಣೆ ಮಾಡಿ ಕಳಿಸುತ್ತಿದ್ದಾರೆ. ಇಂಟರ್ ವ್ಯೂವ್ ಇದೆ ಸರ್ ಬಿಡಿ, ಪಾಸ್ ಇಲ್ಲ ಎಂದು ಕುಂಟು ನೆಪ ಹೇಳಿಕೊಂಡು ಜನ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಇದೆ ಈ ಹೊತ್ತಲ್ಲಿ ಯಾವ ಇಂಟರ್ ವ್ಯೂವ್ ಇದೆ ತೋರಿಸು ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಪಾಸ್ ಇಲ್ಲ ಸರ್ ಬಿಡಿ ಎಂದು ಯುವಕ ಗೋಗರೆದರೂ, ಪಾಸ್ ಇಲ್ಲದೆ ಬಿಡುವುದಿಲ್ಲ ಎಂದು ಪೊಲೀಸರು ಖಡಾಖಂಡಿತವಾಗಿ ಹೇಳಿದ್ದಾರೆ.

    ಪ್ರತಿ ವಾಹನವನ್ನೂ ತಪಾಸಣೆ ನಡೆಸುತ್ತಿರುವುದರಿಂದ ಎಸ್‌ಆರ್‌ಎಸ್ ಸಿಗ್ನಲ್ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ನೂರಕ್ಕೂ ಹೆಚ್ಚು ಬೈಕ್‍ಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.

  • ಲಾಕ್‍ಡೌನ್ ಇದ್ರೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

    ಲಾಕ್‍ಡೌನ್ ಇದ್ರೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ವಾಹನ ದಟ್ಟಣೆ ಉಂಟಾಗಿದ್ದು, ಅಚ್ಚರಿ ಮೂಡಿಸಿದೆ.

    ಬೆಳಗ್ಗೆ ಈ ದೃಶ್ಯ ಕಂಡ ಸಿಲಿಕಾನ್ ಸಿಟಿ ಜನತೆಗೆ ಅಚ್ಚರಿ ಉಂಟಾಗಿದ್ದು, ಲಾಕ್‍ಡೌನ್ ಜಾರಿಯಲ್ಲಿದೆಯೋ ಅಥವಾ ಇಲ್ಲವೋ, ಇಷ್ಟು ಬೇಗ ಲಾಕ್‍ಡೌನ್ ಹಿಂಪಡೆದುಬಿಟ್ಟರಾ, ಪ್ರಧಾನಿ ಮೋದಿ ಲಾಕ್‍ಡೌನ್ ಆದೇಶ ಹಿಂಪಡೆದರಾ ಎಂಬ ಅನುಮಾನ ಮೂಡುವಷ್ಟರಮಟ್ಟಿಗೆ ವಾಹನಗಳು ರಸ್ತೆಗಿಳಿದಿವೆ.

    ಬೆಂಗಳೂರಿನ ಕೆ.ಆರ್.ಮಾರ್ಕೆಟ್‍ನಲ್ಲಿ ಈ ದೃಶ್ಯ ಕಂಡುಬಂದಿದ್ದು, ಲಾಕ್‍ಡೌನ್, ಟಫ್ ರೂಲ್ಸ್ ಮಧ್ಯೆ ಭಾರೀ ಪ್ರಮಾಣದ ವಾಹನಗಳು ರಸ್ತೆಗಿಳಿದಿವೆ. ಅಕ್ಕಪಕ್ಕದ ರಸ್ತೆಗಳೆಲ್ಲ ಬಂದ್ ಆದ ಹಿನ್ನೆಲೆ ಕೆ.ಆರ್.ಮಾರ್ಕೆಟ್ ನ ದೃಶ್ಯ ಬೆಚ್ಚಿ ಬೀಳುವಂತಿದೆ. ಬೇರೆ ದಿನಗಳಲ್ಲಿ ಪೀಕ್ ಅವರ್ ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕಂಡುಬರುವಂತ ಟ್ರಾಫಿಕ್ ಲಾಕ್‍ಡೌನ್‍ನಲ್ಲಿಯೂ ಕಂಡುಬಂದಿದೆ. ಹೀಗಾಗಿ ಬಂದ್ ಆಗಿದ್ದ ಟ್ರಾಫಿಕ್ ಸಿಗ್ನಲ್ ಗಳನ್ನು ಮತ್ತೆ ಪ್ರಾರಂಭಿಸಬೇಕು. ಸಿಗ್ನಲ್‍ನಲ್ಲಿ ಟ್ರಾಫಿಕ್ ನಿರ್ವಹಣೆಗೆ ಪೊಲೀಸರನ್ನು ನಿಯೋಜಿಸಬೇಕು ಆ ರೀತಿಯ ದೃಶ್ಯಗಳು ಎದುರಾಗಿವೆ.

    ಆನಂದ್ ರಾವ್ ಸರ್ಕಲ್ ನಲ್ಲಿ ಫುಲ್ ಜಾಮ್ ಆಗಿದ್ದು, ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿವೆ. ತಪಾಸಣೆ ಮಾಡಿ ಬಿಡುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಆನಂದ್ ರಾವ್ ಸರ್ಕಲ್, ಫ್ಲೈ ಓವರ್ ಕೆಳಗೆ ಇಂದು ಬೆಳಗ್ಗೆ ಟ್ರಾಫಿಕ್ ಫುಲ್ ಜಾಮ್ ಆಗಿದ್ದ ದೃಶ್ಯ ಕಂಡುಬಂದಿತ್ತು. ಅತ್ತ ಪ್ಯಾಲೆಸ್ ಗುಟ್ಟಹಳ್ಳಿ, ಅರಮನೆ ಮೈದಾನದ ಬಳಿ ಪೊಲೀಸರು ವಾಹನ ತಪಾಸಣೆಗೆ ಇಳಿದಿದ್ದು, ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

  • ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು, ದೊಣ್ಣೆಯಿಂದ ಥಳಿಸಿ ಕೊಂದ್ರು

    ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು, ದೊಣ್ಣೆಯಿಂದ ಥಳಿಸಿ ಕೊಂದ್ರು

    – ರಕ್ಷಿಸಲು ಹೋದ ಪೊಲೀಸರ ಮೇಲೆ ಹಲ್ಲೆ

    ಮುಂಬೈ: ಕಳ್ಳರೆಂದು ಶಂಕಿಸಿ ಮೂವರನ್ನು ಕಲ್ಲು ಮತ್ತು ದೊಣ್ಣೆಯಿಂದ ಬುಡಕಟ್ಟು ಜನಾಂಗದವರು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 200 ಜನ ಬುಡಕಟ್ಟು ಜನಾಂಗದವರು ಸೇರಿಕೊಂಡು ಮೂವರನ್ನು ಹೊಡೆದು ಕೊಂದು ಹಾಕಿದ್ದಾರೆ. ಕಾಸಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ದಬದಿ-ಖಾನ್ವೆಲ್ ರಸ್ತೆಯಲ್ಲಿ ಗುರುವಾರ ರಾತ್ರಿ ತಮ್ಮ ಕಾರಿನಲ್ಲಿ ನಾಸಿಕ್‍ಗೆ ಹೋಗುತ್ತಿದ್ದ ಮೂವರನ್ನು ಕಳ್ಳರು ಎಂದು ಅಡ್ಡಗಟ್ಟಿ ಹೊಡೆದು ಕೊಲೆ ಮಾಡಲಾಗಿದೆ.

    ಈ ಬುಡಕಟ್ಟು ಜನಾಂಗದವರು ಇರುವ ಹಳ್ಳಿಗಳಲ್ಲಿ ರಾತ್ರಿಯ ಸಮಯದಲ್ಲಿ ಕಳ್ಳತನಗಳು ಆಗುತ್ತಿದ್ದವು. ಈ ಕಾರಣಕ್ಕೆ ಬುಡಕಟ್ಟಿನ ಕೆಲವರು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದರು. ಈ ವೇಳೆ ರಾತ್ರಿಯಲ್ಲಿ ಕಾರಿನಲ್ಲಿ ಚಲಿಸುತ್ತಿದ್ದ ಮೂವರನ್ನು ಕಂಡು ಅಡ್ಡಗಟ್ಟಿದ್ದಾರೆ. ಅಲ್ಲದೆ ಇವರೇ ಕಳ್ಳರು ಎಂದು ಅನುಮಾನಗೊಂಡು ಕಾರಿನ ಮೇಲೆ ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ.

    ಈ ನಂತರ ಕಾರಿನಲ್ಲಿದ್ದ ಮೂವರನ್ನು ಹೊರೆಗೆ ಎಳೆದುಕೊಂಡು ಸುಮಾರು 200 ಜನರು ಸೇರಿಕೊಂಡು ಕಲ್ಲು ಮತ್ತು ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಈ ನಡುವೆ ಕಾರಿನ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಈ ಮೂವರನ್ನು ಅಲ್ಲಿನ ಜನರು ಮಾರಣಾಂತಿಕವಾಗಿ ಹಲ್ಲೆ ಮಾಡಿರುತ್ತಾರೆ. ಈ ವೇಳೆ ವಿಷಯ ತಿಳಿದ ಕಾಸಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

    ಸುಮಾರು 20 ಪೇದೆಗಳೊಂದಿಗೆ ಪೊಲೀಸರು ಸ್ಥಳಕ್ಕೆ ಬಂದಾಗ, ಪೊಲೀಸರ ವಿರುದ್ಧವೇ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಬುಡಕಟ್ಟು ಜನಾಂಗದವರು ಪೊಲೀಸ್ ವಾಹನವನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಈ ನಡುವೆ ಗ್ರಾಮಸ್ಥರನ್ನು ನಿಗ್ರಹಿಸಲು ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಅಲ್ಲಿಂದ ಆ ಮೂವರನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ.

    ಹಲ್ಲೆಗೆ ಒಳಗಾದ ಮೂವರು ತೀವ್ರವಾಗಿ ಗಾಯಗೊಂಡಿದ್ದ ಕಾರಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಬುಡಗಟ್ಟು ಜನಾಂಗದ 20 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರನ್ನು ವಿಚಾರಣೆ ಮಾಡಿದಾಗ ಆ ಮೂವರು ಕಳ್ಳರು ಎಂದು ಅವರ ಮೇಲೆ ಹಲ್ಲೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಕಾಸಾ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ನಿರ್ಬಂಧಿತ ರಸ್ತೆಯಲ್ಲಿ ಬಂದ ಮಾಜಿ ಮೇಯರ್‌ಗೆ ಪೊಲೀಸರು ಕ್ಲಾಸ್

    ನಿರ್ಬಂಧಿತ ರಸ್ತೆಯಲ್ಲಿ ಬಂದ ಮಾಜಿ ಮೇಯರ್‌ಗೆ ಪೊಲೀಸರು ಕ್ಲಾಸ್

    – ರಸ್ತೆಗಿಳಿದವರಿಗೆ ನಿಲ್ಲುವ ಶಿಕ್ಷೆ

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಪೊಲೀಸರು ಶಿಸ್ತಾಗಿ ಜಾರಿ ಮಾಡುತ್ತಿದ್ದಾರೆ. ಹೀಗಾಗಿ ನಿರ್ಬಂಧಿತ ರಸ್ತೆಯಲ್ಲಿ ಬಂದಿದ್ದ ಮಾಜಿ ಮೇಯರ್ ಅಯೂಬ್ ಖಾನ್‍ರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.

    ಮೈಸೂರಿನ ಉದಯಗಿರಿ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಆದರೂ ಮಾಜಿ ಮೇಯರ್ ಅಯೂಬ್ ಖಾನ್ ಮಾಸ್ಕ್ ಕೂಡ ಧರಿಸದೆ ನಿರ್ಬಂಧಿತ ರಸ್ತೆಯಲ್ಲಿ ಬರಲು ಯತ್ನಿಸಿದರು. ಈ ವೇಳೆ ಅಯೂಬ್‍ಖಾನ್‍ಗೆ ತಿಳಿ ಹೇಳಿದ ಪೊಲೀಸರು, ಮಾಸ್ಕ್ ಹಾಕಿಸಿ ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಎಲ್ಲ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಮೈಸೂರಿನಲ್ಲಿ ಲಾಕ್‍ಡೌನ್ ನಿಯಮ ಬಿಗಿಯಾಗಿ ಜಾರಿಯಾಗಿದ್ದು, ಮೈಸೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನ ಹಾಗೂ ಕಾರ್ ಸಂಚಾರಕ್ಕೆ ಅವಕಾಶವಿದೆ. ಅದು ಜನರು ತಾವು ವಾಸಿಸುವ ಪ್ರದೇಶಗಳ 2 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳ ಬಳಸಬಹುದು.

    ಈ ಮೊದಲು ನಿಯಮ ಉಲ್ಲಂಘಿಸಿದವರಿಗೆ ವಾರ್ನಿಂಗ್ ನೀಡಲಾಗಿದೆ. ಆದರೆ ಇಂದಿನಿಂದ ವಾಹನ ಜಪ್ತಿ ಮಾಡಲಾಗುತ್ತದೆ. ಒಂದು ವೇಳೆ ಈ ನಿಯಮ ಮೀರಿ ಬೇರೆ ಬಡಾವಣೆಗಳಿಗೆ ರಸ್ತೆಗಳಿಗೆ ಬರುವ ಜನರ ವಾಹನಗಳನ್ನು ಮೈಸೂರು ಪೊಲೀಸರು ತಾತ್ಕಾಲಿಕವಾಗಿ ಜಪ್ತಿ ಮಾಡುತ್ತಾರೆ. ಅಲ್ಲದೇ ರಸ್ತೆಯಲ್ಲಿ ನಿಲ್ಲುವ ಶಿಕ್ಷೆ ನೀಡುತ್ತಿದ್ದಾರೆ.

  • ರಾತ್ರೋರಾತ್ರಿ ಕಲ್ಲು ತೂರಾಟ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ ಕಾರ್ಮಿಕರು

    ರಾತ್ರೋರಾತ್ರಿ ಕಲ್ಲು ತೂರಾಟ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ ಕಾರ್ಮಿಕರು

    – ಸ್ವ ಗ್ರಾಮಗಳಿಗೆ ಹೋಗಲು ಅವಕಾಶ ಮಾಡಿಕೊಡುವಂತೆ ಒತ್ತಾಯ

    ಗಾಂಧಿನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ನೂರಾರು ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಅಲ್ಲದೇ ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ತಮ್ಮ ಸ್ವಂತ ಊರಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಶುಕ್ರವಾರ ರಾತ್ರಿ ಅನೇಕ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ನೂರಾರು ವಲಸೆ ಕಾರ್ಮಿಕರು ಗುಜರಾತ್‍ನ ಸೂರತ್‍ನಲ್ಲಿ ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್ ಆದ ಪರಿಣಾಮದಿಂದ ಕಾರ್ಮಿಕರು ತಮ್ಮ ಸ್ವಂತ ಗ್ರಾಮಗಳಿಗೆ ಹೋಗಲು ಯಾವುದೇ ವಾಹನವೂ ಸಿಗಲಿಲ್ಲ. ಹೀಗಾಗಿ ಅಂದಿನಿಂದ ಮಾಡಲು ಕೆಲಸವಿಲ್ಲದೆ ಸೂರತ್‍ನಲ್ಲೇ ಸಿಲುಕಿಕೊಂಡಿದ್ದಾರೆ. ಆದ್ದರಿಂದ ತಮ್ಮ ಗ್ರಾಮಕ್ಕೆ ಮರಳಲು ವ್ಯವಸ್ಥೆಗಳನ್ನು ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಲ್ಲದೇ ಲಾಕ್‍ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳುತ್ತಿದ್ದಂತೆ ಹಲವಾರು ವಲಸೆ ಕಾರ್ಮಿಕರು ಹತಾಶರಾಗಿ ರಸ್ತೆಗಿಳಿದು ಗುಂಪುಕಟ್ಟಿದ್ದಾರೆ. ನಂತರ ಕಲ್ಲು ತೂರಾಟ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೇ ಲಾಕ್‍ಡೌನ್ ಆಗಿದ್ದರಿಂದ ಶೀಘ್ರವೇ ತಮ್ಮ ಗ್ರಾಮಗಳಿಗೆ ವಾಪಸ್ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹಲವಾರು ವಲಸೆ ಕಾರ್ಮಿಕರನ್ನು ವಶಕ್ಕೆಪಡೆದಿದ್ದಾರೆ. ಇದುವರೆಗೂ ಗುಜರಾತ್‍ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 378ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಲಾಕ್‍ಡೌನ್ ಉಲ್ಲಂಘನೆ – 154 ವಾಹನ ಸೀಜ್

    ಲಾಕ್‍ಡೌನ್ ಉಲ್ಲಂಘನೆ – 154 ವಾಹನ ಸೀಜ್

    ಮಂಗಳೂರು: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 154 ವಾಹನಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಜಪ್ತಿ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಂಗಳೂರು ಕಮಿಷನರ್ ಡಾ.ಪಿ.ಎಸ್.ಹರ್ಷ, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮಂಗಳೂರು ನಗರ ಕಮಿಷನರ್ ವ್ಯಾಪ್ತಿಯಲ್ಲಿ ಇಂದು ಕೊರೊನಾ ಲಾಕ್‍ಡೌನ್ ಆದೇಶ ಉಲ್ಲಂಘಿಸಿದ 154 ವಾಹನಗಳನ್ನು ಸೀಜ್  ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಲಾಕ್ ಡೌನ್ ಹಿನ್ನಲೆಯಲ್ಲಿ ದ.ಕ. ಜಿಲ್ಲಾದ್ಯಂತ ದಿನಬಳಕೆ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಬೆಳಿಗ್ಗೆ 7ರಿಂದ 12ರವರೆಗೂ ಖರೀದಿಗಾಗಿ ವಾಹನಗಳಿಗೂ ಅವಕಾಶ ನೀಡಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆಯ ಬಳಿಕವೂ ಕೆಲವು ವಾಹನ ಸವಾರರು ರಸ್ತೆಯಲ್ಲಿ ಸಂಚಾರ ನಡೆಸಿ ಕೊರೊನಾ ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡಿದ್ದರು. ಪೊಲೀಸ್ ಆಯುಕ್ತರು ಮೊದಲೇ ಎಚ್ಚರಿಕೆ ನೀಡಿದ್ದರೂ ಆದೇಶ ಧಿಕ್ಕರಿಸಿದ ರಸ್ತೆಗಿಳಿದ ವಾಹನಗಳನ್ನು ಕಮಿಷನರ್ ಆದೇಶದಂತೆ ಸೀಜ್ ಮಾಡಲಾಗಿದೆ.