Tag: vehicles

  • ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು

    ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು

    – ಮೊದಲ ಬೆಳೆ ಬೆಳೆದು ಯಶಸ್ವಿಯಾಗಿ ಕಟಾವ್ ಮಾಡಿದ್ರು
    – ಜಪ್ತಿ ಮಾಡಿದ್ದ ವಾಹಗಳಲ್ಲಿ ಸಾವಯವ ಕೃಷಿ

    ತಿರುವನಂತಪುರಂ: ಸಾಮಾನ್ಯವಾಗಿ ಕದ್ದ ವಾಹನಗಳು, ಸರಿಯಾದ ದಾಖಲೆಗಳಿಲ್ಲ ವಾಹನಗಳು, ಅಪಘಾತ ನಡೆದ ವಾಹನಗಳು ಸೇರಿದಂತೆ ಅನೇಕ ವಾಹನಗಳು ಪೊಲೀಸ್ ಠಾಣೆಯಲ್ಲಿ ವರ್ಷಗಳಿಂದ ತುಕ್ಕು ಹಿಡಿಯುತ್ತಿರುತ್ತವೆ. ಆದರೆ ಕೇರಳ ಪೊಲೀಸರು ಅಂತಹ ಜಪ್ತಿ ಮಾಡಿದ್ದ ವಾಹನಗಳಲ್ಲಿಯೇ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

    ಪೊಲೀಸರು ಜಪ್ತಿ ಮಾಡುವ ವಾಹನಗಳನ್ನು ಇಷ್ಟು ವರ್ಷದೊಳಗೆ ಮಾಲೀಕರು ಬಂದು ತೆಗೆದುಕೊಂಡು ಹೋಗದೆ ಇದ್ದರೆ ಅಂತಹ ವಾಹನಗಳನ್ನು ಹರಾಜು ಮಾಡಲು ಪೊಲೀಸ್ ಇಲಾಖೆಗೆ ಅನುಮತಿ ಇದೆ. ಆದರೆ ಹಾಗೆ ಮಾಡುವುದರಲ್ಲಿ ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಇದಲ್ಲದೆ ಈ ವಾಹನಗಳಿಗೆ ಹೆಚ್ಚು ಖರೀದಿದಾರರು ಇರುವುದಿಲ್ಲ. 2019ರ ವರದಿಯ ಪ್ರಕಾರ, ರಾಜ್ಯದ ಪೊಲೀಸ್ ಠಾಣೆಗಳಲ್ಲಿ 40,000ಕ್ಕೂ ಹೆಚ್ಚು ವಾಹನಗಳು ತುಕ್ಕು ಹಿಡಿಯುತ್ತಿವೆ.

    ತುಕ್ಕು ಹಿಡಿಯುತ್ತಿರುವ ವಾಹನಗಳನ್ನು ನೋಡಲಾಗದೆ ಬೇಸರ ಮಾಡಿಕೊಂಡಿದ್ದ ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೊಲೀಸರು ಅವುಗಳಲ್ಲಿ ಕೆಲವು ವಾಹನಗಳಲ್ಲಿ ಸಾವಯವ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್, ರಘು ಮತ್ತು ಅನಿಲ್ ಅವರೊಂದಿಗೆ ಕೃಷಿಕರೂ ಆಗಿರುವ ಸಿವಿಲ್ ಪೊಲೀಸ್ ಅಧಿಕಾರಿ ರಂಗರಾಜ್ ಕೃಷಿಯನ್ನು ನೋಡಿಕೊಳ್ಳುತ್ತಾರೆ.

    “ನಾವು ಮರಳು ಕಳ್ಳಸಾಗಣೆಯಲ್ಲಿ ಜಪ್ತಿ ಮಾಡಿದ್ದ ಕೆಲವು ಮಿನಿ ಲಾರಿಗಳನ್ನು ಹೊಂದಿದ್ದೇವೆ. ಮೂರು ತಿಂಗಳ ಹಿಂದೆ ಅವುಗಳಲ್ಲಿ ತರಕಾರಿಗಳನ್ನು ಬೆಳೆಸಲು ನಾವು ನಿರ್ಧರಿಸಿದ್ದೇವೆ. ಇದು ಯಶಸ್ವಿಯಾಗಿದ್ದು, ಕಳೆದ ವಾರ ನಮ್ಮ ಮೊದಲ ಬೆಳೆಯನ್ನ ಕೂಡ ಕಟಾವ್ ಮಾಡಿದ್ದೇವೆ. ನಾವು ತರಕಾರಿಗಳನ್ನು ನಮ್ಮ ಪೊಲೀಸ್ ಕ್ಯಾಂಟೀನ್‍ಗೆ ನೀಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಸಿಂಪ್ಸನ್ ಹೇಳಿದ್ದಾರೆ.

    ಕೃಷಿ ಯಶಸ್ವಿಯಾದ ಕಾರಣ, ಅದನ್ನು ಇತರ ವಾಹನಗಳಿಗೂ ವಿಸ್ತರಿಸಲು ಪೊಲೀಸ್ ಅಧಿಕಾರಿಗಳು ಯೋಜಿಸಿದ್ದಾರೆ. ಮೊದಲ ಹಂತದಲ್ಲಿ, ಅವರು ಬೆಂಡೆಕಾಯಿ, ಬೀನ್ಸ್ ಮತ್ತು ಪಾಲಕ್ ಸೊಪ್ಪನ್ನು ಬೆಳೆದಿದ್ದಾರೆ. ಈಗ ಇತರ ತರಕಾರಿಗಳನ್ನು ಬೆಳೆಯಲು ಯೋಜಿಸಿದ್ದಾರೆ.

    ಕಾನೂನುಬಾಹಿರ ಚಟುವಟಿಕೆಯಲ್ಲಿ ವಾಹನವನ್ನು ವಶಪಡಿಸಿಕೊಂಡರೆ, ಅದರ ಮಾಲೀಕರು ಎಂದಿಗೂ ವಾಪಸ್ ಪಡೆಯಲು ಬಯಸುವುದಿಲ್ಲ. ಇನ್ನೂ ಅಪಘಾತ ವಾಹನಗಳ ವಿಷಯದಲ್ಲಿ, ನ್ಯಾಯಾಲಯದ ಆದೇಶದ ನಂತರವೂ ಅವುಗಳನ್ನು ಮಾಲೀಕರು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಅವರು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕಾರಣ ಮತ್ತೆ ಆ ವಾಹನ ಬೇಡ ಎಂದುಕೊಂಡಿರಬಹುದು. ಇನ್ನೂ ಕೆಲವು ಕೇಸ್‍ಗಳಲ್ಲಿ ತೀರ್ಪು ಪಡೆಯಲು ಕೆಲವು ವರ್ಷಗಳು ತೆಗೆದುಕೊಳ್ಳಬಹುದು. ಆ ಹೊತ್ತಿಗೆ ವಾಹನವು ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತವೆ. ಆದ್ದರಿಂದ ತೀರ್ಪು ಮಾಲೀಕರ ಕಡೆ ಬಂದರೂ ತುಕ್ಕು ಹಿಡಿದಿರುವ ವಾಹನವನ್ನು ವಾಪಸ್ ತೆಗೆದುಕೊಂಡು ಹೋಗಲು ಬಯಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಗಳು ವಾಹನಗಳನ್ನು ಹರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅದನ್ನು ಮಾಡಲು ನಮಗೆ ಸಾಕಷ್ಟು ಕಾನೂನು ಅನುಮತಿ ಬೇಕಾಗುತ್ತವೆ. ಇದು ಸುಲಭವಲ್ಲ, ಆದ್ದರಿಂದ ಈ ವಾಹನಗಳು ಅನೇಕ ವರ್ಷಗಳ ಕಾಲ ಇಲ್ಲಿಯೇ ಇರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಿಂದ ತೆರವುಗೊಳಿಸುವಂತೆ 2018ರಲ್ಲಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಲ್ಲಾ ಎಸ್‍ಎಚ್‍ಒಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಅದು ಯಶಸ್ವಿಯಾಗಿಲ್ಲ.

  • ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳು ಪುಡಿ ಪುಡಿ

    ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳು ಪುಡಿ ಪುಡಿ

    ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಡಿಗೇಡಿಗಳ ದಾಂಧಲೆಗೆ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

    ಪೊಲೀಸ್ ಠಾಣೆಯ ಪೊಲೀಸರ ಕಾರುಗಳು ಮತ್ತು 50ಕ್ಕೂ ಹೆಚ್ಚು ಬೈಕ್‍ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಲ್ಲದೇ ಪೊಲೀಸ್ ಠಾಣೆಯ ಪೀಠೋಪಕರಣಗಳು ಮತ್ತು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಬಹುತೇಕ ಪೊಲೀಸ್ ಅಧಿಕಾರಿಗಳ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.

    ಮೊದಲಿಗೆ ಗಲಭೆಯ ಸ್ಪಾಟ್‍ಗೆ ಹೋಗೋಕೆ ಹೋದ ಡಿಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನ ಪುಡಿ ಪುಡಿ ಮಾಡಿದ್ದಾರೆ. ಆ ಬಳಿಕ ಕೆಜಿ ಹಳ್ಳಿ ಇನ್ಸ್‌ಪೆಕ್ಟರ್ ಗಾಡಿಯನ್ನು ಹೊಡೆದು ಹಾಕಿದ್ದಾರೆ. ಇತ್ತ ಸ್ಪಾಟ್‍ಗೆ ಬರುತ್ತಿದ್ದ ಬಾಣಸವಾಡಿ ಎಸಿಪಿ ಜೀಪನ್ನು ಸಹ ಪುಡಿ ಪುಡಿ ಮಾಡಿದ್ದಾರೆ. ಎಸಿಪಿ ನಂತರ ಡಿಸಿಪಿ ಪೂರ್ವ ವಿಭಾಗದ ಶರಣಪ್ಪರ ಕಾರು ಕೂಡ ಪುಡಿ ಪುಡಿ ಆಗಿದೆ.

    ಹೆಚ್ಚಿನ ಪೋರ್ಸ್ ಸ್ಪಾಟ್‍ಗೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸ್ಪಾಟ್‍ಗೆ ಬರುತ್ತಿದ್ದ ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಕಾರು ಜಖಂ ಮಾಡಿದ್ದಾರೆ. ಬಳಿಕ ಸ್ಪಾಟ್‍ಗೆ ಬಂದ ಕೆಎಸ್‌ಆರ್‌ಪಿ ಗರುಡ ಪಡೆ, ಫೈರ್ ವಾಹನಗಳಿಗೂ ಕಲ್ಲು ತೂರಿ ಜಖಂ ಮಾಡಿದ್ದಾರೆ.

    ದುಷ್ಕರ್ಮಿಗಳು ದಾಂಧಲೆ ನಡೆಸಿದ ಎಲ್ಲಾ ಕಡೆಗಳಲ್ಲೂ ಸಿಸಿಟಿವಿಗಳನ್ನ ಧ್ವಂಸ ಮಾಡಿದ್ದಾರೆ. ಇತ್ತ ಕಾವಲ್ ಬೈರಸಂದ್ರದ ಪ್ರತಿರಸ್ತೆಯಲ್ಲೂ ನೀರವ ಮೌನ ಆವರಿಸಿದೆ. ಇದರಿಂದ ಭಯಗೊಂಡ ಸ್ಥಳೀಯರು ಮನೆಯಿಂದ ಹೊರಬರೋಕೆ ಹಿಂದೇಟು ಹಾಕುತ್ತಿದ್ದಾರೆ.

    ಗಲಭೆಗೆ ಕಾರಣವಾಗಿದ್ದ ಆರೋಪಿ ನವೀನ್ ಮತ್ತು 110 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದೀವಿ. ದಯಮಾಡಿ ಶಾಂತಿಯನ್ನು ಕಾಪಾಡಿ ಎಂದು ಪೊಲೀಸ್ ಕಮಿಷನರ್ ಕಮಲ್ ಪಂಥ್ ಬೆಂಗಳೂರಿನ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಸಂಡೆ ಲಾಕ್‍ಡೌನ್ ಹಿನ್ನೆಲೆ ಗ್ರಾಮಗಳತ್ತ ಹೊರಟ ಬೆಂಗ್ಳೂರಿಗರು

    ಸಂಡೆ ಲಾಕ್‍ಡೌನ್ ಹಿನ್ನೆಲೆ ಗ್ರಾಮಗಳತ್ತ ಹೊರಟ ಬೆಂಗ್ಳೂರಿಗರು

    ಬೆಂಗಳೂರು: ಸಂಡೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದಿನಿಂದಲೇ ಜನರು ತಮ್ಮ ತಮ್ಮ ಸ್ವ ಗ್ರಾಮಗಳತ್ತ ಹೋಗುತ್ತಿದ್ದಾರೆ.

    ಇಂದು ರಾತ್ರಿ 9 ಗಂಟೆಯಿಂದ ಸಂಡೆ ಲಾಕ್‍ಡೌನ್ ಜಾರಿಯಾಗಲಿದೆ. ಹೀಗಾಗಿ ಬೆಂಗಳೂರಿಗರು ತುಮಕೂರು ರಸ್ತೆ ನವಯುಗ ಟೋಲ್ ಮುಖಾಂತರ ಜನರು ತಮ್ಮ ತಮ್ಮ ಗ್ರಾಮಗಳತ್ತ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.

    ಕಳೆದ ಲಾಕ್‍ಡೌನ್ ವೇಳೆಯಲ್ಲೂ ಬೆಂಗಳೂರು ಬಿಟ್ಟು ಸಾವಿರಾರು ಜನರು ಹೋಗುತ್ತಿದ್ದರು. ಇಂದು ಕೂಡ ಕಾರು, ಬೈಕ್‍ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ. ಕೆಲವರು  ಮನೆಯಲ್ಲಿರುವ ಪೀಠೋಪಕರಣಗಳ ಜೊತೆಗೆ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಟೋಲ್ ಬಳಿ ಟ್ರಾಫಿಕ್ ಉಂಟಾಗುತ್ತಿದೆ.

    ಒಂದು ವಾರದ ಲಾಕ್‍ಡೌನ್ ಬಳಿಕ ಪ್ರತಿ ಭಾನುವಾರ ಲಾಕ್‍ಡೌನ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಹೀಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಸಂಡೆ ಲಾಕ್‍ಡೌನ್‍ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದ್ದರಿಂದ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ ಮುಂಜಾನೆ 5 ಗಂಟೆಯ ತನಕ ನಗರದ ಎಲ್ಲಾ ಪ್ರಮುಖ ರಸ್ತೆಗಳು ಬಂದ್ ಆಗಲಿವೆ.

  • ಅನ್‍ಲಾಕ್ ಎಫೆಕ್ಟ್- ನಗರದ ಬಹುತೇಕ ಕಡೆ ಟ್ರಾಫಿಕ್, ಟ್ರಾಫಿಕ್

    ಅನ್‍ಲಾಕ್ ಎಫೆಕ್ಟ್- ನಗರದ ಬಹುತೇಕ ಕಡೆ ಟ್ರಾಫಿಕ್, ಟ್ರಾಫಿಕ್

    ಬೆಂಗಳೂರು: ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ.

    ಮೈಸೂರು ರಸ್ತೆ, ಮೆಜೆಸ್ಟಿಕ್, ತುಮಕೂರು ರಸ್ತೆ, ಟೌನ್ ಹಾಲ್, ನವಯುಗ ಟ್ರೋಲ್ ಸೇರಿದಂತೆ ಅನೇಕ ಕಡೆ ವಾಹನಗಳು ಸಾಲಾಗಿ ನಿಂತಿದೆ. ಇದರಿಂದ ಅಧಿಕ ವಾಹನಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಟೌನ್ ಹಾಲ್ ಮುಂಭಾಗ ಫುಲ್ ಟ್ರಾಫಿಕ್ ಆಗಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಾಗುತ್ತಾ ಇದ್ದಾವೆ. ಕೆಲಸ, ಕಾರ್ಯ ಹೋಗುವವರು, ಸರ್ಕಾರಿ ಕಚೇರಿಗೆ ಹೋಗುವವರು ಸ್ವಂತ ವಾಹಗಳನ್ನು ಬಳಸುತ್ತಿರುವ ಹಿನ್ನೆಲೆ ವಾಹನಗಳ ಓಡಾಟ ಜಾಸ್ತಿ ಆಗಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

    ಮೇಕ್ರಿ ಸರ್ಕಲ್ ಬಳಿಯೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿವೆ. ಅನ್‍ಲಾಕ್ ಆದ ಕೂಡಲೇ ಸಾಲು ಸಾಲು ವಾಹನಗಳು ರಸ್ತೆಗಿಳಿದಿವೆ. ಇದರಿಂದ ಎಂದಿನಂತೆ ಟ್ರಾಫಿಕ್ ಉಂಟಾಗುತ್ತಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಸಿಗ್ನಲ್ ಪ್ರಾರಂಭ ಮಾಡಿದ್ದಾರೆ. ಮೈಸೂರು ರಸ್ತೆಯಲ್ಲೂ ಕೂಡ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ.

    ಇತ್ತ ಬೆಂಗಳೂರು ಆನ್‍ಲಾಕ್ ಹಿನ್ನೆಲೆಯಲ್ಲಿ ಮತ್ತೆ ಜನರು ತಮ್ಮ ತಮ್ಮ ಊರುಗಳು ಕಡೆ ವಾಪಸ್ ಹೋಗುತ್ತಿದ್ದಾರೆ. ಆದರೆ ಯಾರು ಕೂಡ ಬೆಂಗಳೂರಿನಿಂದ ವಾಪಸ್ ಬರುವುದು ಕಾಣಿಸುತ್ತಿಲ್ಲ. ಹೀಗಾಗಿ ಇಂದು ಕೂಡ ಬೆಂಗಳೂರಿಂದ ಜನರ ವಲಸೆ ಆರಂಭವಾಗಿದೆ. ಕೆಲವರು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವರು ಅಂಗಡಿ ಸಾಮಾನು ಖಾಲಿ ಮಾಡಿಕೊಂಡು ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ನವಯುಗ ಟೋಲ್ ಬಳಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.

  • ಲಾಕ್‍ಡೌನ್‍ಗೆ ಮೂರನೇ ದಿನ – ಬೆಳ್ಳಂಬೆಳಗ್ಗೆ ವಾಹನಗಳ ಓಡಾಟ, ಜನಸಂಚಾರ

    ಲಾಕ್‍ಡೌನ್‍ಗೆ ಮೂರನೇ ದಿನ – ಬೆಳ್ಳಂಬೆಳಗ್ಗೆ ವಾಹನಗಳ ಓಡಾಟ, ಜನಸಂಚಾರ

    – ಫುಟ್‍ಪಾತ್ ಮೇಲೆ ಭರ್ಜರಿ ವ್ಯಾಪಾರ

    ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಗುರುವಾರ ಒಂದೇ ದಿನ 2,344 ಪ್ರಕರಣಗಳು ವರದಿ ಆಗಿದ್ದು, ಒಟ್ಟಾರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಇತ್ತ ಇಂದು ಲಾಕ್‍ಡೌನ್ ಜಾರಿಯಾಗಿ ಮೂರು ದಿನಗಳಾಗಿದೆ. ಆದರೂ ನಗರದಲ್ಲಿ ವಾಹನಗಳ ಓಡಾಟ ಜೋರಾಗಿದೆ.

    ಬೆಂಗಳೂರಿನ ಬನಶಂಕರಿ ಭಾಗದಲ್ಲಿ ಅಪಾರ ಜನರು ಓಡಾಡುತ್ತಿದ್ದಾರೆ. ಜೊತೆಗೆ ವಾಹನಗಳ ಓಡಾಟವೂ ಸ್ವಲ್ಪ ಜೋರಾಗಿದೆ. ಜನರು ಸಾಮಾಜಿಕ ಅಂತರ ಮರೆತು ಓಡಾಡುತ್ತಿದ್ದಾರೆ. ಇತ್ತ ಮೆಟ್ರೋ ಸಂಚಾರ ಇಲ್ಲದ ಪರಿಣಾಮ ಈಗ ಮೆಟ್ರೋ ಸ್ಟೇಷನ್ ಜಗಲಿ ಕಟ್ಟೆಯಾಗಿದ್ದು, ಲಾಕ್‍ಡೌನ್ ಮಧ್ಯೆ ಸ್ಟೇಷನ್ ಬಳಿ ಜನರು ಕೂತಿದ್ದಾರೆ.

    ಶಾಂತಿನಗರ ಲಾಲ್‍ಬಾಗ್ ಗೇಟ್ ರಸ್ತೆ ಈಗ ಸಂತೆಯಾಗಿದ್ದು, ಸಮೀಪದ ಕೆ.ಆರ್. ಮಾರ್ಕೆಟ್ ಕ್ಲೋಸ್ ಎಂದು ಜನರು ಫುಟ್ ಪಾತ್ ಮೇಲೆ ವ್ಯಾಪಾರ ಶುರು ಮಾಡಿದ್ದಾರೆ. ಬೆಳ್ಳಂಬೆಳಗ್ಗೆ ಯಶವಂತಪುರ ಮಾರ್ಕೆಟ್‍ನಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹಣ್ಣು,ಸೊಪ್ಪು ತರಕಾರಿ, ಹೂ, ಮೊಟ್ಟೆ ಮಾಂಸ ಅಂತ ಜನರು ಖರೀದಿಗಾಗಿ ಮನೆಯಿಂದ ಹೊರಗೆ ಬರುತ್ತಿದ್ದಾರೆ. ವಾಹನಗಳ ಓಡಾಟ ಕೂಡ ತುಸು ಹೆಚ್ಚಾಗಿಯೇ ಇದೆ.

    ತುಮಕೂರು ರಸ್ತೆಯಲ್ಲಿ ಲಾಕ್‍ಡೌನ್ ಮೂರನೇ ದಿನ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಮಾರ್ಗಸೂಚಿಗಳಲ್ಲಿ ಹಲವಾರು ಕೆಲಸ ಕಾರ್ಯಗಳಿಗೆ ಅನುಮತಿ ಕೊಟ್ಟಿರುವುದರಿಂದ ವಾಹನಗಳ ಸಂಚಾರ ಜಾಸ್ತಿ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

    ಸದ್ಯಕ್ಕೆ ಬೆಂಗಳೂರಿನ ದಕ್ಷಿಣ ಭಾಗದ ಕೊರೊನಾ ಹಾರ್ಟ್ ಸ್ಪಾಟ್ ಜಯನಗರ. ನಿತ್ಯ ನೂರಾರು ಸಂಖ್ಯೆಯಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ. ಪರಿಣಾಮ ಲಾಕ್‍ಡೌನ್ ಮಧ್ಯೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇದ್ದರೂ ಗ್ರಾಹಕರು ಮಾತ್ರ ತಲೆ ಹಾಕುತ್ತಿಲ್ಲ. ಪರಿಣಾಮ ವ್ಯಾಪಾರಿಗಳು ಸಹ ಕೆಲವರು ಮಾತ್ರ ವ್ಯಾಪಾರ ಶುರು ಮಾಡಿದ್ದಾರೆ.

  • ಲಾಕ್‍ಡೌನ್‍ಗೂ ಕ್ಯಾರೆ ಎನ್ನದ ಜನ- ಬೆಂಗಳೂರಿನತ್ತ ಬರುತ್ತಿವೆ ಹೆಚ್ಚು ವಾಹನಗಳು

    ಲಾಕ್‍ಡೌನ್‍ಗೂ ಕ್ಯಾರೆ ಎನ್ನದ ಜನ- ಬೆಂಗಳೂರಿನತ್ತ ಬರುತ್ತಿವೆ ಹೆಚ್ಚು ವಾಹನಗಳು

    – ನೆಲಮಂಗಲ ಟೋಲ್‍ನಲ್ಲಿ ನಡೆಯುತ್ತಿಲ್ಲ ವಾಹನಗಳ ತಪಾಸಣೆ

    ನೆಲಮಂಗಲ: ಲಾಕ್‍ಡೌನ್‍ಗೂ ಕ್ಯಾರೆ ಎನ್ನದೆ ವಾಹನಗಳು ಬೆಂಗಳೂರಿನತ್ತ ಹೆಚ್ಚು ವಾಹನಗಳು ಆಗಮಿಸುತ್ತಿದ್ದು, ಸಿಬ್ಬಂದಿ ಸಹ ತಪಾಸಣೆ ನಡೆಸದೆ ಬಿಡುತ್ತಿದ್ದಾರೆ. ಇದರಿಂದಾಗಿ ಎಂದಿನಂತೆ ನೆಲಮಂಗಲ ಟೋಲ್‍ನಲ್ಲಿ ವಾಹನ ಸಂಚಾರ ಜೋರಾಗಿಯೇ ನಡೆಯುತ್ತಿದೆ.

    ನೆಲಮಂಗಲ ಟೋಲ್‍ನಲ್ಲಿ ವಾಹನಗಳ ತಪಾಸಣೆ ನಡೆಸಿ, ವಾಹನಗಳ ಸಂಚಾರಕ್ಕೆ ಸಿಬ್ಬಂದಿ ಹಾಗೂ ಪೊಲೀಸರು ಬ್ರೇಕ್ ಹಾಕಿಲ್ಲ. ಹೀಗಾಗಿ ಟೋಲ್‍ನಲ್ಲಿ ವಾಹನಗಳ ಸಂಚಾರ ಎಂದಿನಂತೆ ಜೋರಾಗಿದೆ. ಲಾಕ್‍ಡೌನ್ ಸಮಯದಲ್ಲೂ ಬರೋರು ಬರಬಹುದು, ಹೋಗೋರು ಹೋಗಬಹುದು ಎನ್ನವಂತಾಗಿದೆ. ಟೋಲ್‍ನ ಮುಖ್ಯರಸ್ತೆಗಳನ್ನು ಬಂದ್ ಮಾಡಿರುವುದನ್ನು ಬಿಟ್ರೆ ಪೊಲೀಸರು ಇನ್ನಾವುದೇ ರೀತಿಯ ತಪಾಸಣೆಯನ್ನು ನಡೆಸುತ್ತಿಲ್ಲ.

    ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಓಪನ್ ಇರುವುದರಿಂದ ಹೆಚ್ಚುವ ವಾಹನಗಳು ಬೆಂಗಳೂರಿನತ್ತ ಆಗಮಿಸುತ್ತಿವೆ. ಕಾರ್, ಬೈಕ್, ಆಟೋ, ಟ್ರಕ್, ಗೂಡ್ಸ್ ಗಾಡಿಗಳ ಓಡಾಟ ಜೋರಾಗಿದ್ದು, ಪೊಲೀಸರು ಯಾವುದೇ ತಪಾಸಣೆ ನಡೆಸುತ್ತಿಲ್ಲ. ಲಾಕ್‍ಡೌನ್ ಜಾರಿಯಾದ ಮೇಲೆ ಯಾರು ಹೋಗೋ ಹಾಗಿಲ್ಲ, ಬರೋ ಹಾಗಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಅದೆಲ್ಲ ಮಾತಿಗಷ್ಟೆ ಎನ್ನುವಂತಾಗಿದೆ.

  • ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್

    ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್

    ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಎಲ್ಲಾ ಅಂಗಡಿ, ರಸ್ತೆಗಳನ್ನು ಕ್ಲೋಸ್ ಮಾಡಿಸುತ್ತಿದ್ದಾರೆ. ಇದೀಗ ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್ ಮಾಡಲಾಗಿದೆ.

    ಬೆಂಗಳೂರಿಗೆ ಬರುತ್ತಿದ್ದವರು ಮತ್ತು ಬೆಂಗಳೂರಿನಿಂದ ಹೊರಟವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಯಾವ ಕಡೆಯಿಂದ ಬರುತ್ತಾರೋ ಅದೇ ಮಾರ್ಗದಲ್ಲಿ ವಾಹನ ಸವಾರರನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲದೇ ಕೆಂಗೇರಿ ಚೆಕ್‍ಪೋಸ್ಟ್ ಬಳಿ ನೈಸ್ ರೋಡ್‍ಗೆ ಜೆಸಿಪಿ ಮೂಲಕ ಮಣ್ಣಿನ ರಾಶಿ ಹಾಕಿ ರಸ್ತೆಯನ್ನು ನಿರ್ಮಿಸುತ್ತಿದ್ದಾರೆ.

    ಕೆಂಗೇರಿಯ ನೈಸ್ ರಸ್ತೆಯ ಚೆಕ್ ಪೋಸ್ಟ್ ಬಳಿ ಬೆಂಗಳೂರಿನಿಂದ ಒಳ ಬರುವ ಮತ್ತು ಹೊರ ಹೋಗುವ ವಾಹನ ಸಂಖ್ಯೆ ಹೆಚ್ಚಳವಾಗಿತ್ತು. ಲಾಕ್‍ಡೌನ್‍ನಲ್ಲೂ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ವಿವಿಧ ಕಾರಣಗಳನ್ನು ನೆಪ ಮಾಡಿಕೊಂಡು ಜನರು ಸುಮ್ಮನೆ ಓಡಾಡುತ್ತಿದ್ದರು. ಈ ವೇಳೆ ಎರಡು ಕಡೆಗಳಲ್ಲೂ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.

    ಆದರೆ ಅನಾವಶ್ಯಕ ವಾಹನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಪೊಲೀಸರು ಜೆಸಿಪಿಯಲ್ಲಿ ಮಣ್ಣಿನ ರಾಶಿ ಹಾಕಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಯೂಟರ್ನ್ ಮಾಡುವುದಕ್ಕೆ ರಸ್ತೆ ಮಾಡುವ ಮೂಲಕ ಅನಗತ್ಯವಾಗಿ ಬರುವವರನ್ನು ಅದೇ ಮಾರ್ಗವಾಗಿ ವಾಪಸ್ ಕಳುಹಿಸುತ್ತಿದ್ದಾರೆ.

  • ಬೆಂಗಳೂರಿನಿಂದ ಮುಂದುವರಿದ ವಲಸೆ- ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಶುರು

    ಬೆಂಗಳೂರಿನಿಂದ ಮುಂದುವರಿದ ವಲಸೆ- ಬೆಳ್ಳಂಬೆಳಗ್ಗೆ ವಾಹನ ದಟ್ಟಣೆ ಶುರು

    ಬೆಂಗಳೂರು: ಇಂದು ರಾತ್ರಿ 8 ಗಂಟೆಯ ಬಳಿಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ಕೂಡ ಜನ ಬೆಂಗಳೂರು ತೊರೆಯುತ್ತಿದ್ದಾರೆ.

    ಕುಟುಂಬ ಸಮೇತ ಗಂಟು ಮೂಟೆ ಕಟ್ಟಿಕೊಂಡು ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಇವತ್ತು ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಮೆಜೆಸ್ಟಿಕ್‍ನಿಂದ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಒಂದು ವಾರ ಲಾಕ್‍ಡೌನ್ ಇದೆ. ಹೀಗಾಗಿ ಊರಲ್ಲಿ ಇದ್ದು ಬರೋಣ ಎಂದು ಅನೇಕರು ಬೆಂಗಳೂರಿನಿಂದ ಹೋಗುತ್ತಿದ್ದಾರೆ.

    ಬಸ್ ನಿಲ್ದಾಣದಲ್ಲಿ ಲಗೇಜ್ ಸಮೇತ ಊರಿಗೆ ತೆರಳಲು ನಿಂತಿದ್ದಾರೆ. ನಿನ್ನೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡಿದ್ದರು. ಹೀಗಾಗಿ ಪ್ರತಿ ಬಸ್ ಸ್ಟಾಂಡ್‍ಗಳಲ್ಲಿ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಗೊರಗೊಂಟೆಪಾಳ್ಯ, ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣಗಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇಂದು ಕೂಡ ಊರಿಗಳಿಗೆ ತೆರಳಲು ಜನರು ನಿಂತಿದ್ದಾರೆ.

    ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರಿಗೂ ಆರೋಗ್ಯ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕಳುಹಿಸುತ್ತಿದ್ದಾರೆ. ಹೆಚ್ಚುವರಿ ಬಸ್‍ಗಳ ನಿಯೋಜನೆ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿದೆ.

    ಮುಂಜಾನೆಯಿಂದಲೇ ನೆಲಮಂಗಲ ರಸ್ತೆಯ ನವಯುಗ ಟೋಲ್‍ನಲ್ಲಿ ವಾಹನ ದಟ್ಟಣೆ ಶುರುವಾಗಿದೆ. ರಾತ್ರಿಯಿಂದ ನವಯುಗ ಟೋಲ್ ಹಣ ಸಂಗ್ರಹ ಮಾಡುತ್ತಿಲ್ಲ. ಲಾಕ್‍ಡೌನ್ ಹಿನ್ನೆಲೆ ವಾಹನ ಸವಾರರಿಂದ ಯಾವುದೇ ಸುಂಕ ಕಲೆಕ್ಟ್ ಮಾಡುತ್ತಿಲ್ಲ. ಇಂದು ರಾತ್ರಿ 8 ಗಂಟೆಯವರೆಗೆ ಹಣ ಸಂಗ್ರಹ ಮಾಡದಿರಲು ಆದೇಶ ಬಂದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ ನಿರಂತರವಾಗಿ ವಾಹನಗಳ ಓಡಾಡುತ್ತಿವೆ. ಇಂದು ಸಹ ಸ್ವಂತ ವಾಹನಗಳಲ್ಲಿ ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ಲಗೇಜ್ ಆಟೋ, ಬೈಕ್, ಕಾರ್‌ಗಳ ಮೂಲಕ ಊರಿಗೆ ಹೋಗುತ್ತಿದ್ದಾರೆ.

  • ರಾಜ್ಯದಲ್ಲಿ ಸೆಕೆಂಡ್ ಸಂಡೇ ಕರ್ಫ್ಯೂ- ಬಹುತೇಕ ರಸ್ತೆಗಳು ಖಾಲಿ ಖಾಲಿ

    ರಾಜ್ಯದಲ್ಲಿ ಸೆಕೆಂಡ್ ಸಂಡೇ ಕರ್ಫ್ಯೂ- ಬಹುತೇಕ ರಸ್ತೆಗಳು ಖಾಲಿ ಖಾಲಿ

    ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಂಡೇ ಲಾಕ್‍ಡೌನ್ ಜಾರಿ ಮಾಡಿದ್ದು, ಇಂದು ಎರಡನೇ ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಜನ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ. ಅಲ್ಲೊಂದು ಇಲ್ಲೊಂದು ಟೂ ವೀಲರ್ ಹೊರತು ಪಡಿಸಿದರೆ ವಾಹನಗಳ ಓಡಾಟವೂ ಇಲ್ಲ. ಅತ್ಯವಶ್ಯಕ ವಸ್ತುಗಳಾದ ಹಾಲು, ದಿನಸಿ, ದಿನಪತ್ರಿಕೆ ವಿತರಣೆ ಹೊರತು ಪಡಿಸಿ ಎಲ್ಲವೂ ಲಾಕ್‍ಡೌನ್ ಆಗಿದೆ. ಕಳೆದ ವಾರ ಸಹ ಜನ ಸ್ವಯಂ ನಿಯಂತ್ರಣ ಹಾಕಿಕೊಂಡು ಸಂಡೇ ಲಾಕ್‍ಡೌನ್ ಯಶಸ್ವಿ ಮಾಡಿದ್ದರು.

    ನಗರದ ಬಹುತೇಕ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿದ್ದು, ಕೇವಲ ಅತ್ಯವಶ್ಯಕ ವಾಹನಗಳಷ್ಟೆ ರಸ್ತೆಯಲ್ಲಿ ಓಡಾಟ ಮಾಡುತ್ತಿವೆ. ನಗರದ ಪ್ರಮುಖ ರಸ್ತೆಗಳು ಬ್ಯಾರಿಕೇಡ್ ಹಾಕಿ ಪೊಲೀಸರು ಕ್ಲೋಸ್ ಮಾಡಿದ್ದಾರೆ. ಇನ್ನೂ ಕೆಲವು ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನಗರದ ಎಲ್ಲಾ ಏರಿಯಾಗಳಲ್ಲಿ ಹೊಯ್ಸಳದಿಂದ ಗಸ್ತು ಮಾಡಲಾಗುತ್ತಿದೆ.

    ಮೆಜೆಸ್ಟಿಕ್ ಬಸ್ ನಿಲ್ದಾಣ, ಮಲ್ಲೇಶ್ವರಂ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿವೆ. ಎಂದಿನಂತೆ ಹಾಲು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಮನೆಯಿಂದ ಬರುತ್ತಿದ್ದಾರೆ. ಇತ್ತ ತುಮಕೂರು ರಸ್ತೆ ಕೂಡ ಖಾಲಿ ಖಾಲಿಯಾಗಿದ್ದು, ಬೆರೆಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚಾರ ಮಾಡುತ್ತಿವೆ. ಗೊರಗೊಂಟೆಪಾಳ್ಯದ ಫ್ಲೈ ಓವರ್ ಕ್ಲೋಸ್ ಆಗಿದ್ದು, ಅಲ್ಲಿಯೂ ಜನರ ಓಡಾಟವು ಇಲ್ಲದಂತಾಗಿದೆ.

    ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇನ್ನೂ ಏರ್‌ಪೋರ್ಟ್‌ಗೆ ಕ್ಯಾಬ್ ಮತ್ತು ಸ್ವಂತ ವಾಹನಗಳಲ್ಲಿ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಏರ್ ಟಿಕೆಟ್ ಮತ್ತು ಐಡಿ ಕಾರ್ಡ್‍ನೊಂದಿಗೆ ಏರ್‌ಪೋರ್ಟ್‌ಗೆ ಹೋಗಬಹುದು.

  • ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಬಸ್, ಆಟೋ, ಕ್ಯಾಬ್ ವಶಕ್ಕೆ: 9 ಪ್ರಕರಣ ದಾಖಲು

    ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಬಸ್, ಆಟೋ, ಕ್ಯಾಬ್ ವಶಕ್ಕೆ: 9 ಪ್ರಕರಣ ದಾಖಲು

    ಧಾರವಾಡ: ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಸಾಮಾಜಿಕ ಅಂತರ ನಿಯಮ ಪಾಲಿಸದೇ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿ, ಪ್ರಕರಣ ದಾಖಲಿಸಿದ್ದಾರೆ.

    ಹುಬ್ಬಳ್ಳಿ-ಧಾರವಾಡ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಒಟ್ಟು ಒಂಬತ್ತು ಪ್ರಕರಣಗಳನ್ನು ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 3 ಬೇಂದ್ರೆ ನಗರಸಾರಿಗೆ ವಾಹನಗಳು, ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್ ಹಾಗೂ ಸರಕು ಸಾಗಣೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ನಿರ್ದೇಶನದ ಮೇರೆಗೆ ಆರ್‍ಟಿಓ ಅಧಿಕಾರಿಗಳಾದ ಅಪ್ಪಯ್ಯ ನಾಲತ್ವಾಡಮಠ ಹಾಗೂ ಸಿ.ಡಿ.ನಾಯಕ್ ಅವರ ನೇತೃತ್ವದಲ್ಲಿ ಅವಳಿ ನಗರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.