Tag: vehicles

  • ತಮಿಳುನಾಡಿಗೆ ಹೋಗೋ ಎಲ್ಲ ವಾಹನಗಳ ಸಂಚಾರ ಬಂದ್!

    ತಮಿಳುನಾಡಿಗೆ ಹೋಗೋ ಎಲ್ಲ ವಾಹನಗಳ ಸಂಚಾರ ಬಂದ್!

    ಚಾಮರಾಜನಗರ/ಆನೇಕಲ್: ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಿಂದ ತಮಿಳುನಾಡಿಗೆ ಹೋಗುವ ಎಲ್ಲಾ ವಾಹನಗಳನ್ನು ಪೊಲೀಸರು ಸೋಮವಾರಪೇಟೆ ಹಾಗೂ ಅತ್ತಿಬೆಲೆಯ  ಬಳಿ ತಡೆಹಿಡಿದಿದ್ದಾರೆ.

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮವಾಗಿ ರಾಜ್ಯದಿಂದ ತಮಿಳುನಾಡಿಗೆ ಹೋಗುತ್ತಿದ್ದ ವಾಹನಗಳನ್ನು ತಡೆಹಿಡಿದಿದ್ದಾರೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಡಿ ಭಾಗದಲ್ಲಿ ಭದ್ರತೆಯನ್ನು ಸಹ ಹೆಚ್ಚಿಸಿದ್ದಾರೆ.

    ಕರುಣಾನಿಧಿಯವರ ನಿಧನದಿಂದಾಗಿ ಅಭಿಮಾನಿಗಳು ತಮಿಳುನಾಡಿನ ಹಲವು ಕಡೆ ದಾಳಿ ನಡೆಸುತ್ತಿದ್ದು, ಬಸ್ ಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಪೊಲೀಸ್ ಇಲಾಖೆ ತಮಿಳುನಾಡಿಗೆ ತೆರಳುತ್ತಿದ್ದ ಎಲ್ಲಾ ವಾಹನಗಳನ್ನು ತಾತ್ಕಾಲಿಕವಾಗಿ ತಡೆಹಿಡಿದ್ದಾರೆ.

    ಗಡಿಭಾಗವಾದ ಅತ್ತಿಬೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಗಡಿಯಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ. ತಮಿಳುನಾಡಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಬಂದ್ ಆಗಿದ್ದು, ಕರ್ನಾಟಕ ವಾಹನಗಳು ತಮಿಳುನಾಡಿಗೆ ಹೋಗದಂತೆ ಹಾಗೂ ತಮಿಳುನಾಡಿನ ವಾಹನಗಳು ಕರ್ನಾಟಕಕ್ಕೆ ಬರದಂತೆ ನಿರ್ಬಂಧ ಪಡಿಸಿ ಗಡಿಭಾಗದಿಂದ ವಾಹನಗಳನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ವಿಧಿವಶರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರಿನ ಮಿನಿ ವಿಧಾನಸೌಧದಲ್ಲಿ ಬೆಂಕಿ ಅವಘಡ- ಪ್ರಾಣಾಪಾಯದಿಂದ ಪಾರು

    ಮೈಸೂರು: ಜೀಪ್ ನ ಹಳೆಯ ಟೈರ್ ಗಳು ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಟಿ. ನರಸೀಪುರದ ಮಿನಿ ವಿಧಾನಸೌಧದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಮಿನಿ ವಿಧಾನಸೌಧದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದ್ದು, ವಾಹನಗಳ ಟೈರುಗಳು ಹಳೆಯದಾದ ಕಾರಣ ತಹಶೀಲ್ದಾರರ ಹಳೆಯ ಜೀಪು ಹಾಗೂ ಮೂರು ಬೈಕ್‍ಗಳು ಭಸ್ಮವಾಗಿದೆ.

    ಬೆಂಕಿ ಕಾಣಿಸಿಕೊಂಡ ಪರಿಣಾಮ ಯಾರಾದರೂ ಒಳಗೆ ಸಿಲುಕಿ ಕೊಂಡಿರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಅವಘಡ ಸಂಭವಿಸಿದ ಕೂಡಲೇ ಎಲ್ಲರೂ ಹೊರಬಂದಿದ್ದಾರೆ. ಜೀಪ್ ನ ಟೈರ್ ಸ್ಫೋಟಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಕೊಂಡಿದ್ದು, ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ಮೂರು ಬೈಕ್ ಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

    ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

  • ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

    ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

    ಚಿಕ್ಕಮಗಳೂರು: ರಾತ್ರಿ ಒಂಬತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಸಂಚಾರಕ್ಕೆ ನಿರ್ಬಂಧವಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖ ಮಾರ್ಗದಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಶಿರಾಡಿ ಘಾಟ್ ಬಂದ್ ಆದ ಮೇಲೆ ಕಳೆದ 4 ತಿಂಗಳಿನಿಂದ ಕುದುರೆಮುಖದಿಂದ ಮಂಗಳೂರಿಗೆ ಹೋಗುವ ಭಾರೀ ವಾಹನಗಳು ಹಾಗೂ ಇತರೇ ವಾಹನಗಳು ಮಾರ್ಗದಲ್ಲಿ ರಾತ್ರಿ ಪಾಳಯದಲ್ಲೂ ಸಂಚರಿಸಲು ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ ಕುದುರೆಮುಖ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ 45 ನಿಮಿಷಗಳ ಕಾಲ ಸಮಯದ ಮಿತಿಯನ್ನು ಹೇರಲಾಗಿತ್ತು. ಅಷ್ಟರಲ್ಲಿ ವಾಹನಗಳು ಕುದುರೆಮುಖದಿಂದ ಮಂಗಳೂರಿನ ಗಡಿ ಮುಟ್ಟಬೇಕಿತ್ತು.

    ಈಗ ಚಾರ್ಮಾಡಿಯಲ್ಲಿ ಸಮಸ್ಯೆ ಆಗಿರುವ 45 ನಿಮಿಷಗಳವರೆಗಿನ ನಿರ್ಬಂಧವನ್ನು ತೆರೆಯಲಾಗಿದೆ. ದಿನದ 24 ಗಂಟೆಯೂ ಯಾವಾಗ ಬೇಕಾದರು, ಯಾವ ವಾಹನ ಬೇಕಾದರು ಈ ಮಾರ್ಗದಲ್ಲಿ ಯಾವುದೇ ಟೈಂ ಲಿಮಿಟ್ ಇಲ್ಲದೆ ಸಾಗಲು ಸರ್ಕಾರ ವ್ಯವಸ್ಥೆ ಕಲ್ಪಿಸಿದೆ. ಇದರಿಂದ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಬೇಕಾದ ಪ್ರವಾಸಿಗರು ಮೂಡಿಗೆರೆ, ಕಳಸ ಮಾರ್ಗವಾಗಿ ಕುದುರೆಮುಖದಿಂದ ಮಂಗಳೂರು ತಲುಪಬಹುದು.

    ಕುದುರೆಮುಖ ರಸ್ತೆಯಲ್ಲಿ ಕಾಡು ಪ್ರಾಣಿಗಳ ಹತ್ಯೆ ನಡೆಯುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ 45 ನಿಮಿಷಗಳ ಕಾಲ ಸಮಯದ ಮಿತಿಯನ್ನು ವಿಧಿಸಿತ್ತು.

    ಇಂದು, ನಾಳೆ ಬಂದ್: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ 2ನೇ ತಿರುವಿನಲ್ಲಿ ಭೂಕುಸಿತ ಆಗಿದ್ದರಿಂದ ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಎಲ್ಲಾ ವಾಹನಗಳು ಸುಮಾರು ಮೂರು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಲ್ಲಿಯೇ ಸಿಲುಕಿಕೊಂಡಿದ್ದವು. ಚಾರ್ಮಾಡಿ ಘಾಟ್ ಭೂಕುಸಿತ ಹಿನ್ನೆಲೆ ಸದ್ಯ ಕಾಮಗಾರಿ ಮುಂದುವರಿಕೆಗೆ ಅವಕಾಶ ಕೇಳಿದ ಅಧಿಕಾರಿಗಳು ಮತ್ತೆರಡು ದಿನ ಚಾರ್ಮಾಡಿ ಘಾಟ್ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಬುಧವಾರ ಮತ್ತು ಗುರುವಾರ ಈ ರಸ್ತೆ ಬಂದ್ ಆಗಲಿದೆ.

    ಮಳೆಯಿಂದ ಮತ್ತಷ್ಟು ಮರ, ಗುಡ್ಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ನಮಗೆ 48 ಗಂಟೆಗೆ ಸಮಯ ಕೊಡಿ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತದ ನೆರವಿಂದ ಎಲ್ಲವನ್ನೂ ತೆರವುಗೊಳಿಸ್ತೇವೆ ಎಂದು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಹೇಳಿದ್ದಾರೆ.

  • ವಿವಾದಕ್ಕೆ ಕಾರಣವಾಯ್ತು ಮಂಗ್ಳೂರು ಕಾಲೇಜು ವಿದ್ಯಾರ್ಥಿನಿಯರ ಡ್ಯಾನ್ಸ್: ವಿಡಿಯೋ ನೋಡಿ

    ವಿವಾದಕ್ಕೆ ಕಾರಣವಾಯ್ತು ಮಂಗ್ಳೂರು ಕಾಲೇಜು ವಿದ್ಯಾರ್ಥಿನಿಯರ ಡ್ಯಾನ್ಸ್: ವಿಡಿಯೋ ನೋಡಿ

    ಮಂಗಳೂರು: ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ರಸ್ತೆ ತಡೆದು ಕಾಲೇಜು ಹುಡುಗಿಯರು ಕುಣಿದು ಕುಪ್ಪಳಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಶುಕ್ರವಾರ ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜಿನ ವಾರ್ಷಿಕೋತ್ಸವ ನಡೆದಿತ್ತು. ಈ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ವಿದ್ಯಾರ್ಥಿನಿಯರು ಪೂರ್ತಿಯಾಗಿ ರಸ್ತೆ ಮಧ್ಯೆ ಬಸ್, ಇನ್ನಿತರ ವಾಹನಗಳ ಸಂಚಾರ ತಡೆದು ನೃತ್ಯ ಮಾಡಿದ್ದಾರೆ.

    ಸಾಮಾನ್ಯವಾಗಿ ರಸ್ತೆ ತಡೆದು ಪ್ರತಿಭಟಿಸುವುದಕ್ಕೆ ಅವಕಾಶ ಇಲ್ಲ. 10 ನಿಮಿಷ ಹೆಚ್ಚು ಕಾಲ ರಸ್ತೆ ತಡೆದರೆ ಪೊಲೀಸರು ಬಂಧಿಸುತ್ತಾರೆ. ಅಂಥದ್ರಲ್ಲಿ ಕಾಲೇಜು ಹುಡುಗಿಯರ ಫ್ಲಾಶ್ ಮಾಬ್ ಗೆ ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಅದರಲ್ಲಿಯೂ ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಈ ಕಾಲೇಜು ಕನ್ಯೆಯರ ಡಿಜೆ ಕುಣಿತ ಸಂಜೆವರೆಗೂ ಮುಂದುವರಿದಿತ್ತು. ಕಾಲೇಜು ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕ ಜೆ.ಆರ್ ಲೋಬೊ ಕೃಪೆಯಿಂದ ಕಾಲೇಜಿಗೆ ಈ ಅವಕಾಶ ಸಿಕ್ಕಿದ್ದಿರಬೇಕು ಎನ್ನುವ ಮಾತು ಕೇಳಿಬರುತ್ತಿದೆ.

    ರಸ್ತೆ ಮಧ್ಯೆ ಡ್ಯಾನ್ಸ್ ಮಾಡಲು ಅವಕಾಶ ನೀಡಿದ ಜಿಲ್ಲಾಡಳಿತ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    https://youtu.be/EnTUX8hOkvo

  • ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

    ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

    ಯಾದಗಿರಿ: ಕೆರೆ ನೀರಿನಿಂದ ಹೆದ್ದಾರಿ ಸೇತುವೆ ಮುಳುಗಿ ವಾಹನ ಸವಾರರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ.

    ಕೊಡಂಗಲ್-ಸಿಂದಗಿಯ, ರಾಜ್ಯ ಹೆದ್ದಾರಿ 16ರ ರಸ್ತೆ ಮೇಲೆ ಕೆರೆ ನೀರು 15 ದಿನಗಳಿಂದ ಪ್ರತಿನಿತ್ಯವು ಜಲಪಾತದಂತೆ ಹರಿಯುತ್ತಿದ್ದು, ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಕೆರೆ ನೀರಿನ ಹರಿವಿನ ರಭಸಕ್ಕೆ ರಾಜ್ಯ ಹೆದ್ದಾರಿ 16ರಲ್ಲಿರುವ ಸೇತುವೆ ಕೊಚ್ಚಿಹೋಗಿದೆ. ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದೆ.

    ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಭಯಪಡುವಂತಾಗಿದೆ. ಹಗಲು ಹೊತ್ತಿನಲ್ಲಿ ಕಷ್ಟಪಟ್ಟು ವಾಹನ ಚಲಾಯಿಸಬಹುದು. ಆದರೆ ರಾತ್ರಿ ಇಲ್ಲಿ ಹೋಗೋದು ಕಷ್ಟ ಆದ್ದರಿಂದ ಅನಾಹುತದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ವಾಹನ ನಡೆಸಬೇಕಾಗಿದೆ, ಹೀಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಕೂಡ ಸಂಭವಿಸಿವೆ. ಇಷ್ಟೆಲ್ಲಾ ಆದರೂ ಕೂಡ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ಸೂಚನಾ ಫಲಕ ಕೂಡ ಹಾಕಿಲ್ಲ.

    ಹೀಗಾಗಿ ಇನ್ನಷ್ಟು ಅನಾಹುತಗಳು ಸಂಭವಿಸುವುದಕ್ಕೂ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

    ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

    –  ಪ್ರಕೃತಿ ಸಿಂಹ
    ಪ್ರಿಲ್ 1 ರಿಂದ ದೇಶದಲ್ಲಿ ಬಿಎಸ್ 3 ಎಂಜಿನ್‍ವುಳ್ಳ ದ್ವಿಚಕ್ರ, ತ್ರಿಚಕ್ರ ಹಾಗೂ 4 ಚಕ್ರದ ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ನಿಷೇಧಿಸಲಾಗಿದೆ. ಬಿಎಸ್ 4 ಎಂಜಿನ್‍ವುಳ್ಳ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಬಿಎಸ್-3 ಎಂಜಿನ್‍ವುಳ್ಳ ವಾಹನಗಳನ್ನ ಸ್ಮಾರ್ಟ್ ಫೋನ್‍ಗಳ ಬೆಲೆಯಲ್ಲಿ ಆಫರ್ ನೀಡಿ ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಲಾಗಿತ್ತು. ಹಾಗಿದ್ರೆ ಏನಿದು ಬಿಎಸ್ ಮಾನದಂಡ? ಯಾವಾಗ ಜಾರಿಗಳಿಸಲಾಯ್ತು? ಎಲ್ಲದಕ್ಕೂ ಉತ್ತರ ಇಲ್ಲಿದೆ.

    1. ಬಿಎಸ್- 3 ಅಂದ್ರೇನು?
    ಬಿಎಸ್- 3 ಅಂದ್ರೆ ಭಾರತ್ ಸ್ಟೇಜ್ 3. ಭಾರತ್ ಸ್ಟೇಜ್ ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿದೆ.

    2. ಯಾವಾಗ ಜಾರಿಗೊಳಿಸಲಾಯ್ತು?
    ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್ 2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್ 3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್ 4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. ಇದೀಗ 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್ 4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

    3. ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
    ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

    2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್‍ನಲ್ಲಿ ದೇಶದಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು.

    4. ಮುಂದೆ ಬಿಎಸ್-5 ಮಾನದಂಡ ಬರುತ್ತಾ?
    ಬಿಎಸ್ -5 ಮಾನದಂಡವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದ್ದು, 2020ರ ವೇಳೆಗೆ ದೇಶದಾದ್ಯಂತ ಬಿಎಸ್-6 ಮಾನದಂಡ ಜಾರಿಗೊಳಿಸಲು ಉದ್ದೇಶಿಸಿದೆ.

    5. ಕಡಿಮೆ ಬೆಲೆಗೆ ಬಿಎಸ್-3 ವಾಹನಗಳ ಮಾರಾಟ ಮಾಡಿದ್ದು ಯಾಕೆ?
    ಈಗಾಗಲೇ ನೋಂದಣಿಯಾಗಿರುವ ಬಿಎಸ್-3 ವಾಹನಗಳ ಮರುಮರಾಟ, ಮಾಲಿಕತ್ವ ಹಾಗೂ ವಿಳಾಸ ಬದಲಾವಣೆಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎಸ್ 3 ಎಂಜಿನ್ ಹೊಂದಿರುವ ವಾಹನಗಳ ಮೇಲೆ ಭಾರೀ ಡಿಸ್ಕೌಂಟ್ ನೀಡಿ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಲಾಗಿತ್ತು. ಈ ಬೈಕ್‍ಗಳನ್ನು 20, 25 ಸಾವಿರ ರೂ. ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು.

    6. ಬಿಎಸ್- 3 ವಾಹನಗಳು ಎಷ್ಟಿವೆ?
    ದೇಶದಾದ್ಯಂತ ವಿವಿಧ ಕಂಪೆನಿಗಳ ಒಟ್ಟು 8.2 ಲಕ್ಷ ಬಿಎಸ್ 3 ಎಂಜಿನ್‍ವುಳ್ಳ ವಾಹನಗಳ ದಾಸ್ತಾನು ಇದೆ. ಇವುಗಳಲ್ಲಿ 6.71 ಲಕ್ಷ ದ್ವಿಚಕ್ರ ವಾಹನಗಳು, 16 ಸಾವಿರ ಕಾರುಗಳು, 96 ಸಾವಿರ ಸರಕು ಸಾಗಣೆ ವಾಹನಗಳು ಹಾಗೂ 18 ಸಾವಿರ ಸರಕು ಸಾಗಣೆ ಆಟೋಗಳಿವೆ. ಈ ವಾಹನಗಳ ಒಟ್ಟು ಮೊತ್ತ 12 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.

    7. ವಾಹನ ತಯಾರಕರು ಏನು ಮಾಡಬಹುದು?
    ಬಿಎಸ್-4 ಮಾನದಂಡಕ್ಕೆ ಒಗ್ಗಿಕೊಳ್ಳಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರು ವಾಹನಗಳಲ್ಲಿ ಎವಾಪರೇಟಿವ್ ಎಮಿಷನ್ ಕಂಟ್ರೋಲ್ ಯೂನಿಟ್ ಅಳವಡಿಸಬೇಕು, ಇದರಿಂದಾಗಿ ನಿಲುಗಡೆ ಮಾಡಿದ ವೇಳೆಯಲ್ಲಿ ವಾಹನದಿಂದ ಇಂಧನ ಆವಿಯಾಗೋದು ಕಡಿಮೆಯಾಗುತ್ತದೆ. ಆದರೆ ಈ ರೀತಿ ಮಾಡಬೇಕಾದ್ರೆ ವಾಹನದ ವಿನ್ಯಾಸ ಕೂಡ ಬದಲಾಯಿಸಬೇಕು, ಇದು ತುಂಬಾ ಕಠಿಣವಾದ ಕೆಲಸ ಹಾಗೂ ದುಬಾರಿಯಾಗುತ್ತದೆ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ವಾಹನ ತಯಾರಕರಿಗೆ ಉಳಿದಿರೋ ಎರಡನೇ ಮಾರ್ಗವೆಂದರೆ ಬಿಎಸ್-3 ಮಾನದಂಡಕ್ಕೆ ಹೊಂದಿಕೆಯಾಗುವಂತಹ ರಾಷ್ಟ್ರಗಳಿಗೆ ಈ ವಾಹನಗಳನ್ನು ರಫ್ತು ಮಾಡಬೇಕಾಗುತ್ತದೆ.

  • ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

    ಜಗತ್ತಿನಲ್ಲೇ ಜನರಿಗಿಂತ ಹೆಚ್ಚು ವಾಹನ ಹೊಂದಿರೋ ದೇಶವಿದು!

    ಸಾನ್‍ಮರಿನೋ: ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವುದನ್ನು ಕೇಳಿದ್ದೇವೆ. ಆದ್ರೆ ಜನರಿಗಿಂತ ಹೆಚ್ಚು ವಾಹನಗಳನ್ನು ಹೊಂದಿರುವುದನ್ನು ಕೇಳಿರಲ್ಲಿಕ್ಕಿಲ್ಲ. ಅಂತಹ ಪಟ್ಟಿಗೆ ಸೇರಿದೆ ಸಾನ್ ಮರಿನೋ ರಾಷ್ಟ್ರ.

    ಹೌದು. ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾದ ಈ ದೇಶದಲ್ಲಿ ಜನರು ಕಡಿಮೆ. ವಾಹನಗಳು ಜಾಸ್ತಿ ಇವೆ. ಈ ರಾಷ್ಟ್ರದಲ್ಲಿ ಸುಮಾರು 34 ಸಾವಿರ ಜನರಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ರಾಷ್ಟ್ರದ ಸರಾಸರಿ 1 ಸಾವಿರ ಜನರಿಗೆ 1,263 ವಾಹನಗಳಿವೆ. ಮಾತ್ರವಲ್ಲದೇ ಈ ದೇಶ ಒಟ್ಟು ಜಿಡಿಪಿಯಲ್ಲೂ ಶ್ರೀಮಂತವಾಗಿದೆ.

    ಸಾನ್ ಮರಿನೋ ಹಾಗೂ ವಾಟಿಕನ್ ಸಿಟಿ ಈ ಎರಡೂ ರಾಷ್ಟ್ರಗಳು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿವೆ. ಇನ್ನು ಮೂರನೇ ರಾಷ್ಟ್ರವಾದ ಲೆಸ್ತೋ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಿಂದ ಸುತ್ತುವರಿದಿದೆ.