Tag: vehical

  • ಬೆಳ್ಳಂಬೆಳಗ್ಗೆ ಹೊತ್ತಿ ಉರಿಯಿತು ಸೇತುವೆ ಕೆಳಗೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ವಾಹನ

    ಬೆಳ್ಳಂಬೆಳಗ್ಗೆ ಹೊತ್ತಿ ಉರಿಯಿತು ಸೇತುವೆ ಕೆಳಗೆ ನಿಲ್ಲಿಸಿದ್ದ 20ಕ್ಕೂ ಹೆಚ್ಚು ವಾಹನ

    ಮುಂಬೈ: ಬೆಳ್ಳಂಬೆಳಗ್ಗೆ ಬೋರ್ವಿಯಾಲಿಯಲ್ಲಿ ಸೇತುವೆ ಕೆಳಗೆ ನಿಲುಗಡೆ ಮಾಡಲಾಗಿದ್ದ 20 ಕ್ಕೂ ಹೆಚ್ಚು ವಾಹನಗಳು ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾಗಿದೆ.

    ಬೆಳಗ್ಗೆ ಸುಮಾರು 8 ಗಂಟೆಗೆ ಈ ಅವಘಡ ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಈ ಅಗ್ನಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಸೇತುವೆ ಕೆಳಗೆ ನಿಲುಗಡೆ ಮಾಡಲಾಗಿದ್ದ 20ಕ್ಕೂ ಹೆಚ್ಚು ವಾಹನಗಳು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ.

    ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ವಾಹನಗಳಿಗೆ ತಗುಲಿದ್ದ ಬೆಂಕಿಯನ್ನು ನೆಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದ್ದಕ್ಕಿದಂತೆ ಈ ಅಗ್ನಿ ಅನಾಹುತವಾಗಲು ಕಾರಣವೇನು ಎಂದು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

    2016ರಲ್ಲಿ ಮುಂಬೈ ಹೈ ಕೋರ್ಟ್ ಫ್ಲೈಓವರ್ ಕೆಳಗೆ ವಾಹನ ನಿಲುಗಡೆ ಮಾಡುವಂತಿಲ್ಲ ಎಂದು ತೀರ್ಪು ನೀಡಿತ್ತು. ಅಲ್ಲದೇ ಮೇ 2018ರಲ್ಲಿ ಸಾರ್ವಜನಿಕರು ಮುಂಬೈ ಬೀದಿಗಳಲ್ಲಿ, ಫ್ಲೈಓವರ್ ಕೆಳಗೆ ಉಪಯೋಗ ಮಾಡದ ವಾಹನಗಳನ್ನು ನಿಲ್ಲಿಸುವುದನ್ನು ಖಂಡಿಸಿ ಆಪರೇಷನ್ ಖತಾರ ಅಭಿಯಾನವನ್ನು ಕೂಡ ಆರಂಭಿಸಿದ್ದರು. ಆಗ ಪೋಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.

  • ಗಾಯಗೊಂಡ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡಿದ ಅಗ್ನಿಶಾಮಕ ಸಿಬ್ಬಂದಿ

    ಗಾಯಗೊಂಡ ನಾಗರಹಾವಿನ ಮರಿಗೆ ಚಿಕಿತ್ಸೆ ನೀಡಿದ ಅಗ್ನಿಶಾಮಕ ಸಿಬ್ಬಂದಿ

    ಮೈಸೂರು: ಗಾಯಗೊಂಡಿದ್ದ ನಾಗರ ಹಾವಿನ ಮರಿಗೆ ಮೈಸೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಸ್ನೇಕ್ ಕೆಂಪರಾಜು ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಬನ್ನಿಮಂಟಪ ಬಳಿ ವಾಹನ ಹರಿದು ನಾಗರ ಹಾವಿನ ಮರಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಸ್ನೇಕ್ ಕೆಂಪರಾಜು ಅವರು ನಾಗರ ಮರಿಯನ್ನು ರಕ್ಷಿಸಿದ್ದರು. ವಾಹನ ಹರಿದ ಪರಿಣಾಮ ಹಾವಿನ ಬೆನ್ನು ಮೂಳೆಗೆ ಗಾಯವಾಗಿತ್ತು. ಹೀಗಾಗಿ ಹಾವು ಮುಂದೆ ಹೋಗಲು ಸಾಧ್ಯವಾಗದೇ ಪರದಾಡುತ್ತಿತ್ತು.

    ಆಗ ಪಶು ವೈದ್ಯರ ಮಾರ್ಗದರ್ಶನದೊಂದಿಗೆ ಸ್ನೇಕ್ ಕೆಂಪರಾಜು ಅವರು ಹಾವಿಗೆ ಔಷಧಿ ಹಾಕಿ, ಬ್ಯಾಂಡೇಜ್ ಕಟ್ಟಿ ಚಿಕಿತ್ಸೆ ನೀಡುವ ಮೂಲಕ ಒಂದು ಪುಟ್ಟ ಜೀವವನ್ನು ಉಳಿಸಿದ್ದಾರೆ.

    ಕೆಂಪರಾಜು ಅವರು ಹಾವಿಗೆ ಚಿಕಿತ್ಸೆ ನೀಡಿ ಬಳಿಕ ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈಗಿನ ಕಾಲದಲ್ಲಿ ಮನುಷ್ಯ ಸಾಯುತ್ತಿದ್ದರೆ ಸಹಾಯಕ್ಕೆ ಮುಂದೆ ಬಾರದ ಜನರ ಮಧ್ಯೆ ಪುಟ್ಟ ಹಾವಿನ ಮರಿಯನ್ನು ರಕ್ಷಿಸಿ ಉರಗ ಪ್ರೇಮ ಮೆರೆದಿರುವ ಕೆಂಪರಾಜು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://www.youtube.com/watch?v=6zmwUI78LMk

  • ಅಡ್ಡ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾದ KSRTC ಬಸ್!

    ಅಡ್ಡ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾದ KSRTC ಬಸ್!

    ಚಿಕ್ಕಬಳ್ಳಾಪುರ: ದಾರಿ ಮಧ್ಯೆ ಅಡ್ಡ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಕೆಎಸ್‍ಆರ್ ಟಿಸಿ ಬಸ್ಸೊಂದು ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಅರಣ್ಯಪ್ರದೇಶದಲ್ಲಿ ಪಲ್ಟಿಯಾಗಿದೆ.

    ಈ ಬಸ್ ಚಿಂತಾಮಣಿ ಕೆಎಸ್‍ಆರ್ ಟಿಸಿ ಘಟಕಕ್ಕೆ ಸೇರಿದ್ದು, ಇಂದು ಚಿಂತಾಮಣಿಯಿಂದ ಪಾವಗಡಕ್ಕೆ ಬಸ್ಸು ತೆರಳುತ್ತಿದ್ದ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಕಣಿವೆ ಪ್ರದೇಶದ ಅಂಕು ಡೊಂಕಿನ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಆದ್ರೆ ಬಸ್ಸಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಕಣಿವೆ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಕಾರಣಾಂತರಗಳಿಂದ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆಯ ಒಂದು ಬದಿ ಇದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿದ್ದು, ಅಳಿದುಳಿದ ಕಲ್ಲುಗಳು ರಸ್ತೆ ಬದಿಯಲ್ಲೆ ಇವೆ. ಇದರಿಂದ ಪದೇ ಪದೇ ಈ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಆಡಚಣೆ ಉಂಟಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.

    ಬಸ್ ಪಲ್ಟಿಯಾದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಇತರೆ ವಾಹನ ಸವಾರರು ಪರದಾಡುವಂತಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಪಲ್ಟಿಯಾದ ಬಸ್ಸನ್ನು ಕ್ರೇನ್ ಮೂಲಕ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.