Tag: Vegetable Seller

  • ಕಾಫಿನಾಡಿಗೆ ಆತಂಕ ಸೃಷ್ಠಿಸಿದ ಕೈದಿ, ಪೊಲೀಸ್, ಎಂಜಿನಿಯರ್, ತರಕಾರಿ ವ್ಯಾಪಾರಿ

    ಕಾಫಿನಾಡಿಗೆ ಆತಂಕ ಸೃಷ್ಠಿಸಿದ ಕೈದಿ, ಪೊಲೀಸ್, ಎಂಜಿನಿಯರ್, ತರಕಾರಿ ವ್ಯಾಪಾರಿ

    ಚಿಕ್ಕಮಗಳೂರು: ಏಳೆಂಟು ದಿನಗಳ ಹಿಂದೆ ಜೈಲಿನಲ್ಲಿದ್ದ ಕೈದಿಗೂ ಸೋಂಕು ದೃಢವಾಗಿದ್ದರಿಂದ ಜಿಲ್ಲೆಯ ಜನ ಕಂಗಾಲಾಗಿದ್ದರು. ಏಕಂದರೆ ಆರು ತಿಂಗಳಿಂದ ಜೈಲಿನಲ್ಲಿರುವ ಖ್ಯೆದಿಗೆ ಹೇಗೆ ಕೊರೊನಾ ಬಂತು ಎನ್ನುವುದು ಎಲ್ಲರಲ್ಲೂ ಪ್ರಶ್ನೆ ಹುಟ್ಟಿಸಿತ್ತು.

    ಕಳೆದೊಂದು ವಾರದ ಹಿಂದೆ ನಾಲ್ವರು ಪೊಲೀಸರು ತೀವ್ರ ಆತಂಕ ಸೃಷ್ಠಿಸಿದ್ದರು. ಮೂರು ದಿನದ ಹಿಂದೆ ರಸ್ತೆ ಮೇಲೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ವ್ಯಾಪಾರಿ ಕೂಡ ಭಯ ಹುಟ್ಟಿಸಿದ್ದ. ಬುಧವಾರ ಎಂಜಿನಿಯರ್ ಸರದಿ. ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆ ನಿವಾಸಿಯಾದ ಕೊರೊನಾ ಸೋಂಕಿತ ಎಂಜಿನಿಯರ್ ಕೂಡ ಸರ್ಕಾರಿ, ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ದಾದಿಯರಲ್ಲೂ ಭೀತಿ ಹುಟ್ಟಿಸಿದ್ದಾರೆ.

    ಜಿಲ್ಲೆಯಲ್ಲಿ ಬುಧವಾರ ಒಂದು ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಬೆಂಗಳೂರಿಗೆ ಹೋಗಿ ಬಂದ 28 ವರ್ಷದ ಎಂಜಿನಿಯರ್ ಯುವಕನಲ್ಲಿ ಸೋಂಕು ದೃಢವಾಗಿದ್ದು, ಆತ ಕೂಡ ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸಿದ್ದಾನೆ. ಕೊರೊನಾ ಆರಂಭವಾದ ಮೂರು ತಿಂಗಳ ಬಳಿಕ ಚಿಕ್ಕಮಗಳೂರು ನಗರದಲ್ಲಿ ಅಧಿಕೃತ ದಾಖಲಾದ ಮೊದಲ ಪ್ರಕರಣವಿದು. ಇಲ್ಲಿವರೆಗೂ ನಗರದಲ್ಲಿ ಒಂದೇ ಒಂದು ಕೇಸ್ ಇರಲಿಲ್ಲ.

    ಬೆಂಗಳೂರಿಗೆ ಹೋಗಿ ಹಿಂದುರಿಗಿದ ಎಂಜಿನಿಯರ್ ಆರೋಗ್ಯ ಸಮಸ್ಯೆಯಿಂದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದ್ದ. ಬುಧವಾರ ಆತನಿಗೆ ಕೊರೊನಾ ದೃಢವಾದ ಹಿನ್ನೆಲೆ ಸರ್ಕಾರಿ, ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರಿಗೂ ಆತಂಕ ಸೃಷ್ಟಿಯಾಗಿದೆ. ಸೋಂಕಿತನ ಮನೆಯವರು ಸೇರಿದಂತೆ ವೈದ್ಯರು, ದಾದಿಯರು ಎಲ್ಲರಿಗೂ ಕ್ವಾರಂಟೈನ್‍ಗೆ ಸೂಚಿಸಲಾಗಿದೆ.

    ಈ ಮಧ್ಯೆ ಮೂರು ದಿನಗಳ ಹಿಂದೆ ಬಂದ ಪ್ರಕರಣ ಕೂಡ ನಗರಕ್ಕೆ ಕಂಟಕವಾಗಿದೆ. ಹಾಸನ ಮಾರುಕಟ್ಟೆಗೆ ಹೋಗಿ ತರಕಾರಿ ತಂದು ಚಿಕ್ಕಮಗಳೂರು ನಗರದಲ್ಲಿ ಮಾರುತ್ತಿದ್ದ ವ್ಯಕ್ತಿಗೂ ಸೋಂಕು ದೃಢವಾಗಿದ್ದು, ನಗರದ ಹಲವು ಏರಿಯಾಗಳ ಜನ ಕೂಡ ಕಂಗಾಲಾಗಿದ್ದಾರೆ. ಬುಧವಾರದ ಪ್ರಕರಣದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. 23 ಜನ ಬಿಡುಗಡೆಯಾಗಿ, 19 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೆಮ್ಮಾರಿಗೆ 72 ವರ್ಷದ ವೃದ್ಧೆ ಪ್ರಾಣ ತೆತ್ತಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು

    ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು

    – ಹೊಟ್ಟೆ, ಎದೆಗೆ ಸ್ಕ್ರೂಡ್ರೈವರ್‌ನಿಂದ ಇರಿದ ಪಾಪಿಗಳು
    – ಸಿಗರೇಟ್ ಕೊರತೆಯೇ ಕೊಲೆಗೆ ಕಾರಣವಾಯಿತಾ?

    ಮುಂಬೈ: ಸಿಗರೇಟ್ ನೀಡಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯನ್ನು ಇಬ್ಬರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‍ನಲ್ಲಿ ನಡೆದಿದೆ.

    ಉತ್ತರ ಪ್ರದೇಶ ಮೂಲದ ಅರವಿಂದ್ ಶಂಕರ್ ಕುಮಾರ್ (38) ಕೊಲೆಯಾದ ವ್ಯಕ್ತಿ. ಕಲ್ಯಾಣ್‍ನ ಎಪಿಎಂಸಿ ಮಾರುಕಟ್ಟೆ ಬಳಿ ಬುಧವಾರ ಕೊಲೆಗೈದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ಅಪ್ರಾರಂಭಿಸಿದ್ದಾರೆ.

    ಆಗಿದ್ದೇನು?:
    ಮೃತ ತರಕಾರಿ ವ್ಯಾಪಾರಿ ಅರವಿಂದ್ ತನ್ನ ಸೋದರಸಂಬಂಧಿ ಆನಂದ್ ಗುಪ್ತಾ ಜೊತೆಗೆ ಕಲ್ಯಾಣ್‍ನ ಗೋವಿಂದ್ ವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅರವಿಂದ್ ಎಂದಿನಂತೆ ಬುಧವಾರ ತರಕಾರಿ ಮಾರಾಟಕ್ಕೆ ಹೋಗಿದ್ದರು. ಬಳಿಕ ಎಪಿಎಂಸಿ ಮಾರುಕಟ್ಟೆಯಲ್ಲಿನ ಶೌಚಾಲಯದ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಅಲ್ಲಿಗೆ ಬಂದು ಸಿಗರೇಟ್ ಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಅರವಿಂದ್ ಸಿಗರೇಟ್ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಜಗಳ ಆರಂಭಿಸಿದ್ದರು. ಅಷ್ಟಕ್ಕೆ ಬಿಡದೇ ಸ್ಕ್ರೂಡ್ರೈವರ್‌ನಿಂದ ಅರವಿಂದ್ ಹೊಟ್ಟೆ ಮತ್ತು ಎದೆಗೆ ಅನೇಕ ಬಾರಿ ಇರಿದು ಪರಾರಿಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆನಂದ್ ಗುಪ್ತಾ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರವಿಂದ್ ಅವರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರವಿಂಗ್ ಸಾವನ್ನಪಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಯಾಣ್‍ದ ಬಜಾರ್‍ಪೇಟೆ ಪೊಲೀಸರು, ಆರೋಪಿಗಳು ಅರವಿಂದ್ ಅವರ ಮೇಲೆ ಹಲ್ಲೆ ನಡೆಸಲು ಸ್ಕ್ರೂಡ್ರೈವರ್ ಬಳಸಿದ್ದಾರೆ. ಇಬ್ಬರು ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಮತ್ತು 326 (ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ತೀವ್ರ ನೋವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗೆ ಶೋಧಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆ ಪಾನ್ ಅಂಗಡಿಗಳು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಸಿಗರೇಟ್ ಕೊರತೆ ಉಂಟಾಗಿ ಸಿಗರೇಟ್ ಸಿಗದೆ ಇರುವುದಕ್ಕೆ ಆರೋಪಿಗಳು ಕೃತ್ಯ ಎಸೆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಜನರು ಮನೆಯಿಂದ ಹೊರ ಬರದಂತೆ ಚಿಕ್ಕೋಡಿ ಪೊಲೀಸರಿಂದ ಹೊಸ ಪ್ಲಾನ್

    ಜನರು ಮನೆಯಿಂದ ಹೊರ ಬರದಂತೆ ಚಿಕ್ಕೋಡಿ ಪೊಲೀಸರಿಂದ ಹೊಸ ಪ್ಲಾನ್

    ಚಿಕ್ಕೋಡಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಅನೇಕರು ತರಕಾರಿ ಖರೀದಿಗೆ ಅಂತ ಮನೆಯಿಂದ ಹೊರ ಬರುತ್ತಿದ್ದಾರೆ. ಹೀಗಾಗಿ ಚಿಕ್ಕೋಡಿ ಪೊಲೀಸರು ಪ್ಲಾನ್ ಮಾಡಿ ಮನೆಯಿಂದ ಜನರು ಹೊರ ಬರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.

    ಪೊಲೀಸರು ತಳ್ಳುವ ಗಾಡಿ ಅಥವಾ ಆಟೋಗಳಲ್ಲಿ ತರಕಾರಿ ಮಾರುವ ಒಟ್ಟು 12 ಜನರ ಹೆಸರು ಹಾಗೂ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ಅವರಿಗೆ ನಗರದ ವಿವಿಧ ಏರಿಯಾಗಳನ್ನು ಹಂಚಿಕೆ ಮಾಡಿದ್ದಾರೆ. ಈ ಎಲ್ಲ ವ್ಯಾಪಾರಿಗಳು ಬೆಳಗ್ಗೆ 6ರಿಂದ 9 ಗಂಟೆ ಹಾಗೂ ಸಂಜೆ 4ರಿಂದ 7ರವರೆಗೆ ತರಕಾರಿ ಮಾರಲಿದ್ದಾರೆ ಎಂದು ಪ್ರಕರಣೆ ಹೊರಡಿಸಿದ್ದಾರೆ.

    ತರಕಾರಿ ಖರೀದಿಸಲು ಜನರು ಗುಂಪು ಗುಂಪಾಗಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸರ ಹೊಸ ಪ್ಲಾನ್ ಜಾರಿಗೆ ತಂದಿದ್ದಾರೆ. ಅಷ್ಟೇ ಅಲ್ಲದೆ ಪ್ರಕಟಣೆಯಲ್ಲಿ ವಿಶೇಷ ಸೂಚನೆ ನೀಡಿರುವ ಪೊಲೀಸರು, ‘ತರಕಾರಿ ಖರೀದಿಸುವಾಗ ಗುಂಪಾಗಿ ನಿಲ್ಲದೆ ಅಂತರ ಕಾಯ್ದುಕೊಳ್ಳಬೇಕು. ತಳ್ಳುವ ಗಾಡಿ ಮನೆಯ ಹತ್ತಿರ ಬಂದಾಗ ಒಬ್ಬೊಬ್ಬರಾಗಿ ಒಂದು ತರಕಾರಿ ತೆಗೆದುಕೊಳ್ಳಬೇಕು. ಒಂದು ವೇಳೆ ಗುಂಪುಗೂಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.