Tag: Vegetable Sales

  • ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    – ಉದ್ಯೋಗಕ್ಕೆ ಸೇರಿದ ಮೂರು ತಿಂಗಳಿಗೆ ಕೆಲಸದಿಂದ ವಜಾ

    ಹೈದರಾಬಾದ್: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಕೋವಿಡ್‍ನಿಂದ ಕೆಲಸ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳಾ ಟೆಕ್ಕಿ ನೆರವಿಗೆ ಸೋನು ಸೂದ್ ಧಾವಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

    ಹೈದರಾಬಾದ್‍ನ ಟೆಕ್ಕಿ ಉಂಡಾಡಿ ಶಾರದಾ ಕೊರೊನಾದಿಂದ ಕೆಲಸ ಕಳೆದುಕೊಂಡು ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ ತಿಳಿದು ಸೋನು ಸೂದ್ ಮಹಿಳಾ ಟೆಕ್ಕಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ಇದನ್ನೂ ಓದಿ: ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

    ಟೆಕ್ಕಿ ಶಾರದಾ ಬಗ್ಗೆ ರಿಚ್ಚಿ ಶೆಲ್ಸನ್ ಎಂಬವರು ಸೋನ್ ಸೂದ್ ಗಮನಕ್ಕೆ ತಂದಿದ್ದರು. “ಇವರು ಟೆಕ್ಕಿ ಶಾರದಾ, ಇತ್ತೀಚೆಗೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ನಂತರ ಅವರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನೀವು ಇವರಿಗೆ ಮತ್ತು ಕುಟುಂಬದವರಿಗೆ ಸಹಾಯ ಮಾಡಬೇಕು” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು.

    ಇವರ ಮನವಿಗೆ ಸ್ಪಂದಿಸಿದ ನಟ, “ನನ್ನ ಅಧಿಕಾರಿಗಳು ಅವರನ್ನು ಭೇಟಿಯಾಗಿದ್ದಾರೆ. ಟೆಕ್ಕಿಯ ಸಂದರ್ಶನ ಮುಗಿದಿದ್ದು, ಈಗಾಗಲೇ ಉದ್ಯೋಗದ ಪತ್ರವನ್ನು ಕಳುಹಿಸಲಾಗಿದೆ. ಜೈ ಹಿಂದ್” ಎಂದು ಟ್ವಿಟ್ಟರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    “ಸೋನು ಸೂದ್ ಅವರು ತುಂಬಾ ದಿನಗಳಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ತಿಳಿದಿತ್ತು. ಆದರೆ ನನಗೆ ಅವರು ಫೋನ್ ಮಾಡಿದಾಗ ಆಶ್ಚರ್ಯ ಮತ್ತು ಸಂತೋಷವಾಯಿತು. ನಾನು ತರಕಾರಿ ಮಾರಾಟ ಮಾಡುತ್ತಿರುವುದಕ್ಕೆ ನಾಚಿಕೆ ಇಲ್ಲ. ಈ ಸಂದರ್ಭದಲ್ಲಿ ನಾವು ಬದುಕುಳಿಯುವುದು ಮುಖ್ಯವಾಗಿದೆ. ಹೀಗಾಗಿ ನಾವು ಯಾವುದೇ ಕೆಲಸ ಮಾಡಿದರೂ ನಾಚಿಕೆಪಡಬೇಕಿಲ್ಲ” ಎಂದು ಶಾರದಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಶಾರದಾ ಹೈದರಾಬಾದ್‍ನಲ್ಲಿ ಎಂಎನ್‍ಸಿ ಕಂಪನಿಗೆ ಸೇರಿದ್ದರು. ಆದರೆ ಕೆಲಸಕ್ಕೆ ಸೇರಿದ ಮೂರು ತಿಂಗಳ ನಂತರ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಕಂಪನಿಯ ಶಾರದಾರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸ ಕಳೆದುಕೊಂಡ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ಪೋಷಿಸಲು ಪ್ರಾರಂಭಿಸಿದ್ದರು.

    ಶಾರದಾ ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು, ತರಕಾರಿಗಳನ್ನು ಪಡೆಯಲು ಸಗಟು ಮಾರುಕಟ್ಟೆಗೆ ಹೋಗುತ್ತಾರೆ. ಅಲ್ಲಿಂದ ತರಕಾರಿ ಖರೀದಿಸಿಕೊಂಡು ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

    ಸೋನು ಸೂದ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರೆಗೂ 47,000ಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಅಲ್ಲದೇ 6,700ಕ್ಕೂ ಹೆಚ್ಚು ನೆಟ್ಟಿಗರು ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರೊಬ್ಬರು “ಈ ಕೊರೊನಾ ಸವಾಲಿನ ಕಾಲದಲ್ಲಿ ನೀವು ನಿಜವಾಗಿಯೂ ಸ್ಪೂರ್ತಿದಾಯಕರಾಗಿದ್ದೀರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಟೆಕ್ಕಿ – ಜೀವನ ನಿರ್ವಹಣೆಗೆ ತರಕಾರಿ ಮಾರಾಟ

    ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಟೆಕ್ಕಿ – ಜೀವನ ನಿರ್ವಹಣೆಗೆ ತರಕಾರಿ ಮಾರಾಟ

    ಮಂಡ್ಯ: ತನ್ನ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದು ಆ ತಂದೆಯ ಬಯಕೆ ಆಗಿತ್ತು. ಅದರಂತೆ ಅವರ ಮಗಳು ಚೆನ್ನಾಗಿ ಓದಿ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ ಕೂಡ ಆಗಿದ್ದರು. ಆದರೆ ಇದೀಗ ಕೊರೊನಾ ಆರ್ಭಟದಿಂದಾಗಿ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ. ಕೆಲಸವಿಲ್ಲದ ಕಾರಣ ಇದೀಗ ಜೀವನೋಪಾಯಕ್ಕೆ ತರಕಾರಿ ಮಾರುತ್ತಿದ್ದಾರೆ.

    ಸದ್ಯ ಕಳೆದ ಮೂರು ನಾಲ್ಕು ತಿಂಗಳಿನಿಂದ ಇಡೀ ವಿಶ್ವದಲ್ಲಿ ಕೊರೊನಾ ರಣಕೇಕೆ ನಡೆಸುತ್ತಿದೆ. ಕೊರೊನಾ ಮಟ್ಟ ಹಾಕುವ ಉದ್ದೇಶದಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‍ಡೌನ್ ಮೊರೆ ಹೋಗಿದ್ದಾವೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದಾಗಿ ಅನೇಕ ಕಂಪನಿಗಳು ಬಾಗಿಲು ಹಾಕಿದ್ದು, ಇದರಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಹೀಗಿದ್ದರೂ ಸಹ ಮಂಡ್ಯದ ಯುವತಿ ಅನು ಧೃತಿಗೆಡದೆ ಬದುಕು ಕಟ್ಟಿಕೊಳ್ಳಲು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಅನು ಕಳೆದ ನಾಲ್ಕು ವರ್ಷದಿಂದ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಈಕೆ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿದ ಪರಿಣಾಮ ಕೆಲಸವಿಲ್ಲದೇ ವಾಪಸ್ ಮಂಡ್ಯಗೆ ಬಂದಿದ್ದಾರೆ. ಮಂಡ್ಯಗೆ ಬಂದು ಏನು ಮಾಡಬೇಕು ಎಂದು ಕುಳಿತಿದ್ದಾಗ ಈಕೆಗೆ ಹೊಳೆದಿದ್ದು ತರಕಾರಿ ಮಾರಾಟ ಮಾಡುವುದು. ಹೀಗಾಗಿ ಈಕೆ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.

    ಅನು ಅವರ ತಂದೆ ವಿರೇಂದ್ರಸಿಂಗ್ ಮೂಲತಃ ಉತ್ತರ ಪ್ರದೇಶದವರು. ಮಂಡ್ಯದಲ್ಲಿ ಕಳೆದ 26 ವರ್ಷಗಳಿಂದ ನೆಲಸಿದ್ದು, ತನ್ನ ಮಗಳನ್ನು ಓದಿಸುವ ಸಲುವಾಗಿ ಪಾನಿಪುರಿ, ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ತಂದೆಯ ಶ್ರಮದ ಪ್ರತಿಫಲವಾಗಿ ಅನು ರಾಮನಗರದ ಗೌಸಿಯಾ ಎಂಜಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

    ಇಷ್ಟು ವರ್ಷ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಇದ್ದರು. ಆದರೆ ಇದೀಗ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ಈಗ ಅನು ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬದುಕು ನಡೆಸಲು ತರಕಾರಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಗಳು ಮಾಡುತ್ತಿರುವ ಈ ಕೆಲಸ ಬೇಸರ ತಂದರು ಸಹ ನನ್ನ ಮಗಳು ಮಾಡುತ್ತಿರುವುದು ಇನ್ನೊಬ್ಬರಿಗೆ ಮಾದರಿಯಾಗುತ್ತಿರುವುದು ನನಗೆ ನೆಮ್ಮದಿ ಇದೆ ಎಂದು ಅನು ತಂದೆ ಹೇಳಿದ್ದಾರೆ.