Tag: Vegan Milk

  • 10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    ನವದೆಹಲಿ: ಈ ಹಿಂದೆ ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಮತ್ತು ತಮಿಳುನಾಡಿನ ಜಲ್ಲಿಕಟ್ಟು ನಿಷೇಧಿಸುವಂತೆ ಆಗ್ರಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಾಣಿ ದಯಾ ಸಂಘ(ಪೇಟಾ)ನೀಡಿದ ಸಲಹೆಗೆ ಅಮುಲ್ ಸಂಸ್ಥೆ ಗರಂ ಆಗಿದೆ.

    ಹಾಲು ಉತ್ಪಾದನೆಯ ಬೃಹತ್ ಸಹಕಾರಿ ಸಂಸ್ಥೆಯಾದ ಅಮುಲ್‍ಗೆ ಪೇಟಾ ಪತ್ರ ಬರೆದು ವಿಚಿತ್ರ ಸಲಹೆಯನ್ನು ನೀಡಿದೆ. ಈಗ ಮಾರುಕಟ್ಟೆ ಬದಲಾಗಿದೆ. ದನದಿಂದ ಹಾಲನ್ನು ಕರೆಯುವ ಬದಲು ಸಸ್ಯಗಳ ಉತ್ಪನ್ನಗಳಿಂದ ಕಾರ್ಖಾನೆಗಳಲ್ಲಿ ಹಾಲನ್ನು ತಯಾರಿಸಬೇಕು. ಈ ಬದಲಾವಣೆಯನ್ನು ಅಮುಲ್ ಒಪ್ಪಿಕೊಳ್ಳುತ್ತದೆ ಎಂಬ ಭರವಸೆ ನನ್ನದು ಎಂದು ಹೇಳಿದೆ.

    ಈ ಸಲಹೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಕೆಂಡಾಮಂಡಲವಾಗಿದ್ದಾರೆ. ಹೈನುಗಾರಿಕೆಯನ್ನು ನಂಬಿರುವ ದೇಶದ 10 ಕೋಟಿ ಮಂದಿಗೆ ಪೇಟಾ ಉದ್ಯೋಗ ನೀಡುತ್ತಾ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

    ಹೈನುಗಾರಿಕೆ ಉದ್ಯೋಗ ಮಾಡುತ್ತಿರುವ ಶೇ.75 ಮಂದಿಗೆ ಭೂಮಿಯೇ ಇಲ್ಲ. ಈ ರೈತರ ಮಕ್ಕಳ ಶಾಲಾ ಶಿಕ್ಷಣಕ್ಕೆ ಹಣ ನೀಡುತ್ತಾ? ದೇಶದ ಬಡ ಜನತೆಗೆ ಇರುವ ಹಾಲಿನ ಅಗತ್ಯವನ್ನು ಕಡಿಮೆ ಬೆಲೆಗೆ ನೀಡುತ್ತಾ? ಲ್ಯಾಬ್ ಗಳಲ್ಲಿ ರಸಾಯನಿಕ ಮತ್ತು ಸಿಂಥೆಟಿಕ್ ವಿಟಮಿನ್ ಬಳಸಿ ತಯಾರಾಗುವ ಈ ಫ್ಯಾಕ್ಟರಿ ಆಹಾರವನ್ನು ಎಷ್ಟು ಮಂದಿ ಖರೀದಿಸಲು ಸಾಧ್ಯ ಎಂದು ಸೋಧಿ ಖಾರವಾಗಿ ಪ್ರಶ್ನಿಸಿದ್ದಾರೆ.

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಪೇಟಾ ಫೋರ್ಬ್ಸ್ ಸುದ್ದಿಯನ್ನು ಉಲ್ಲೇಖಿಸಿ, ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರುಕಟ್ಟೆಯಲ್ಲಿ ಭಾರತ ವಿಶ್ವನಾಯಕ ಎನಿಸಿಕೊಳ್ಳಲಿದೆ. ಪ್ರಾಣಿಗಳ ಜೀವ ಉಳಿಸಲು ಭಾರತದ ರೈತರು ಮತ್ತು ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದೆ.

    ವಿಚಿತ್ರ ಸಲಹೆಗೆ ಜನರು ಗರಂ ಆಗಿದ್ದು ಪೇಟಾ ಇಂಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಿಮಗೆ ಯಾಕೆ ಭಾರತದ ಮೇಲೆಯೇ ಕಣ್ಣು? ವಿದೇಶದಲ್ಲಿ ಕುಳಿತ ನೀವು ನಮಗೆ ಸಲಹೆ ನೀಡುವ ಅಗತ್ಯವಿಲ್ಲ. ಭಾರತದ ಆರ್ಥಿಕತೆಯೆ ಮೇಲೆ ಹೊಡೆತ ನೀಡಲು ಈ ಸಲಹೆ ನೀಡಿದ್ದೀರಾ ಎಂದು ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಐಎಂಎ ವರ್ಸಸ್ ಆರ್ಯುವೇದ, ಪೇಟಾ ವರ್ಸಸ್ ಅಮುಲ್. ಭಾರತದ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ. ಇದರ ಬೇರುಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಪೇಟಾ ನೀಡಿದ ಸಲಹೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.