Tag: Veer Savarkar

  • ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ- ಸಾವರ್ಕರ್ ಮೊಮ್ಮಗ

    ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ- ಸಾವರ್ಕರ್ ಮೊಮ್ಮಗ

    ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿವಾದಾತ್ಮಕ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದಿದ್ದು, ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

    ಹಿಂದುತ್ವದ ಪ್ರತೀಕಪಾದಕರಾಗಿರುವ ವೀರ್ ಸಾವರ್ಕರ್ ಕುರಿತು ರಾಹುಲ್ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಾನು ರಾಹುಲ್ ಗಾಂಧಿಯೇ ಹೊರತು ರಾಹುಲ್ ಸಾವರ್ಕರ್ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಆಡಳಿತ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನಂತರ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಇಂತಹ ಹೇಳಿಕೆಗಳನ್ನು ನೀಡುವುದನ್ನೇ ಅಭ್ಯಾಸವನ್ನಾಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜವಾಹರ್‍ಲಾಲ್ ನೆಹರು ಅವರು ಶಿವಾಜಿ ಮಹಾರಾಜರನ್ನು ಲೂಟಿಕೋರ ಎಂದು ಕರೆದಿದ್ದರು. ನಂತರ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದರು. ಇದೀಗ ಅವರ ಕುಟುಂಬದ ತಪ್ಪನ್ನು ಮತ್ತೆ ಪುನರಾವರ್ತಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಅಲ್ಪಸಂಖ್ಯಾತ ಸರ್ಕಾರವನ್ನು ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ಸಾವರ್ಕರ್ ಅವರಿಗೆ ಅವಮಾನ ಮಾಡುತ್ತಿದೆ. ಶಿವ ಸೇನೆ ಕಾಂಗ್ರೆಸ್‍ನ ಸಚಿವರನ್ನು ತೆಗೆದು ಹಾಕಬೇಕು ಎಂದು ರಂಜಿತ್ ಒತ್ತಾಯಿಸಿದ್ದಾರೆ.

    ರಾಹುಲ್ ಗಾಂಧಿ ಹೇಳಿದ್ದೇನು?
    ರಾಮಲೀಲಾ ಮೈದಾನದಲ್ಲಿ ನಡೆದ ಭಾರತ್ ಬಚಾವೋ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ನನ್ನ ಹೆಸರು ರಾಹುಲ್ ಗಾಂಧಿಯೇ ಹೊರತು, ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಹೇಳಿದ್ದೇನೆ ಹೀಗಾಗಿ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

    ಸತ್ಯ ಹೇಳಿದ್ದರ ಕುರಿತು ನಾನೆಂದೂ ಕ್ಷಮೆಯಾಚಿಸುವುದಿಲ್ಲ. ನನ್ನ ಹೆಸರು ರಾಹುಲ್ ಗಾಂಧಿಯೇ ಹೊರತು ರಾಹುಲ್ ಸಾವರ್ಕರ್ ಅಲ್ಲ. ನಾನು ಕ್ಷಮೆಯಾಚಿಸುವುದಿಲ್ಲ, ಕಾಂಗ್ರೆಸ್‍ನ ಯಾವ ನಾಯಕರೂ ಈ ರೀತಿ ಕ್ಷಮೆಯಚಿಸುವುದಿಲ್ಲ. ಅಲ್ಲದೆ ಕ್ಷಮೆ ಕೇಳಬೇಕಿರುವುದು ನಾನಲ್ಲ. ದೇಶದ ಆರ್ಥಿಕತೆಯನ್ನು ನಾಶಪಡಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಹಾಯಕ ಅಮಿತ್ ಶಾ ಕ್ಷಮೆಯಾಚಿಸಬೇಕು. ಲೋಕಸಭೆಯ ಅಧಿವೇಶನದಲ್ಲಿಯೂ ನಾನು ಈ ಕುರಿತು ಸ್ಪಷ್ಟಪಡಿಸಿದ್ದೇನೆ. ನಾನು ಸತ್ಯ ಹೇಳಿದ್ದೇನೆ ಹೀಗಾಗಿ ಕ್ಷಮೆ ಕೇಳುವುದಿಲ್ಲ ತಿರಸ್ಕರಿಸಿದರು.

    ತಮ್ಮ ಹೇಳಿಕೆ ಕುರಿತು ಲೋಕಸಭೆಯ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದೇ ಪತ್ರಿಕೆಗಳನ್ನು ತೆರೆದು ನೋಡಿದರೂ ಅದರಲ್ಲಿ ಬಹುತೇಕ ಅತ್ಯಾಚಾರದ ಸುದ್ದಿಗಳೇ ಕಣ್ಣಿಗೆ ಕಾಣುತ್ತವೆ. ಹೀಗಾಗಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಆಗಿದೆ ಎಂದು ಹೇಳಿಕೆ ನೀಡಿದೆ ಎಂದರು.

    ಜಾರ್ಖಂಡ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮೇಕ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ದೇಶದಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಆಡಳಿತ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದವು. ಅಲ್ಲದೆ ಈ ಕುರಿತು ಲೋಕಸಭೆಯಲ್ಲಿ ಸಹ ಪಟ್ಟು ಹಿಡಿಯುವ ಮೂಲಕ ಗದ್ದಲ ಎಬ್ಬಿಸಲಾಗಿತ್ತು. ಅಲ್ಲದೆ ಈ ಹಿಂದೆ ವೈಯನಾಡಿಗೆ ಭೇಟಿ ನೀಡಿದ ವೇಳೆ ಭಾರತ ರೇಪ್ ರಾಜಧಾನಿಯಾಗಿದೆ ಎಂದು ಹೇಳಿಕೆ ನೀಡಿ ಚರ್ಚೆಗೆ ಕಾರಣರಾಗಿದ್ದರು.

  • ಸಾವರ್ಕರ್​ಗೆ  ಭಾರತರತ್ನ ಕೊಟ್ರೆ, ಸ್ವಾತಂತ್ರ ಯೋಧರಿಗೆ ಗೌರವ ಕೊಟ್ಟಂತೆ – ಸವದಿ

    ಸಾವರ್ಕರ್​ಗೆ  ಭಾರತರತ್ನ ಕೊಟ್ರೆ, ಸ್ವಾತಂತ್ರ ಯೋಧರಿಗೆ ಗೌರವ ಕೊಟ್ಟಂತೆ – ಸವದಿ

    – ಇವತ್ತಲ್ಲ ನಾಳೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬಂದೇ ಬರುತ್ತೆ

    ಕೊಪ್ಪಳ: ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು. ವೀರ ಸಾವರ್ಕರ್ ಗೆ ಭಾರತರತ್ನ ಕೊಟ್ಟರೆ ಸ್ವಾತಂತ್ರ ಯೋಧರಿಗೆ ಗೌರವ ಕೊಟ್ಟಂತೆ ಆಗುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಕೊಪ್ಪಳದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಸಾವರ್ಕರನ್ನು ಹೀಯಾಳಿಸಿದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಅವಮಾನ ಮಾಡಿದಂತೆ ಆಗುತ್ತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

    ಸಾವರ್ಕರ್ ಗೆ ಭಾರತ ರತ್ನ ಕೊಡುವುದರಲ್ಲಿ ತಪ್ಪಿಲ್ಲ. ಅದರಂತೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಲು ನಾವು ಸಿದ್ಧರಿದ್ದೇವೆ. ಇವತ್ತಲ್ಲ ನಾಳೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬಂದೇ ಬರುತ್ತೆ. ನಾವು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಕೂಡ ಸಲ್ಲಿಸುತ್ತೇವೆ. ಅನರ್ಹ ಶಾಸಕರು ಇನ್ನೂ ಪಕ್ಷ ಸೇರ್ಪಡೆ ಆಗಿಲ್ಲ. ಅವರು ಪಕ್ಷ ಸೇರ್ಪಡೆ ಬಳಿಕ ಟಿಕೆಟ್ ನೀಡೋದು ಬಿಡೋದು ತೀರ್ಮಾನವಾಗುತ್ತೆ ಎಂದು ತಿಳಿಸಿದರು.

    ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಕಳೆದ ಚುನಾವಣೆಗಿಂತ ಅಧಿಕ ಸ್ಥಾನ ಬಿಜೆಪಿ ಪಡೆಯಲಿದೆ. ನಾನು ಐದು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ. ಜನರಿಗೆ ಬಿಜೆಪಿಯ ಬಗ್ಗೆ ನಂಬಿಕೆ ಇದೆ. ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೋ ಭವಿಷ್ಯ ನನಗೆ ಗೊತ್ತಿಲ್ಲ, ಮುಂದೆ ಏನು ಆಗುತ್ತೆ ಕಾದು ನೋಡ್ತೀನಿ ಎಂದು ಹೇಳಿದ್ದಾರೆ.

  • ಸಿದ್ದರಾಮಯ್ಯರನ್ನ ಹಡಗಿನಲ್ಲಿ ಅಂಡಮಾನ್‍ಗೆ ಕಳುಹಿಸಿಕೊಡಬೇಕು: ಡಿ.ವಿ.ಸದಾನಂದಗೌಡ

    ಸಿದ್ದರಾಮಯ್ಯರನ್ನ ಹಡಗಿನಲ್ಲಿ ಅಂಡಮಾನ್‍ಗೆ ಕಳುಹಿಸಿಕೊಡಬೇಕು: ಡಿ.ವಿ.ಸದಾನಂದಗೌಡ

    – ಗೂಬೆ ಕೂರಿಸುವುದರಲ್ಲೂ ಸಿದ್ದರಾಮಯ್ಯ ನಿಸ್ಸೀಮರು

    ಬೆಂಗಳೂರು: ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಡಗಿನಲ್ಲಿ ಅಂಡಮಾನ್, ನಿಕೋಬಾರ್​ಗೆ ಕಳುಹಿಸಬೇಕು. ಅಲ್ಲಿ ವೀರ್ ಸಾವರ್ಕರ್ ಹೇಗಿದ್ದರು ಎನ್ನುವುದು ಅವರಿಗೆ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸ ಇಲ್ಲ. ರಾತ್ರಿಯಲ್ಲ ನಿದ್ದೆಗೆಟ್ಟು ಏನ್ಮಾಡಬೇಕು ಅಂತ ಯೋಚನೆ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ಈ ರೀತಿಯ ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಹಾಗಾಗಿ ಅವರು ಅಂಡಮಾನ್‍ಗೆ ಹೋಗಿ ವೀರ್ ಸಾವರ್ಕರ್ ವಾಸವಿದ್ದ ಜೈಲಿನ ಸ್ಥಿತಿಗತಿ ನೋಡಿಕೊಂಡು ಬರಬೇಕು. ಆಗ ಅವರಲ್ಲಿರುವ ಕೆಟ್ಟ ಬುದ್ಧಿ ಸರಿ ಹೋಗುತ್ತದೆ ಎಂದು ಕುಟುಕಿದರು.

    ಚರಿತ್ರೆಯನ್ನು ಮತ್ತೆ ತಾನೇ ಬರೆಯುತ್ತೇನೆ ಎಂಬ ಹುಂಬುತನದ ಕೆಲಸ ಸರಿಯಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ವೀರ್ ಸಾವರ್ಕರ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಇಂದಿರಾ ಗಾಂಧಿ ಸಿದ್ದರಾಮಯ್ಯನವರ ನಾಯಕರಲ್ಲವೇ? ಸುಮ್ಮನೆ ಅವರ ಅಂಚೆ ಚೀಟಿ ಜಾರಿಗೆ ತರುತ್ತಿದ್ರಾ? ಸಿದ್ದರಾಮಯ್ಯ ಅವರನ್ನು 5 ವರ್ಷ ಮುಖ್ಯಮಂತ್ರಿಯಾಗಿ ಸಹಿಸಿಕೊಂಡಿರುವುದೇ ದೊಡ್ಡ ವಿಚಾರ ಎಂದು ವಾಗ್ದಾಳಿ ನಡೆಸಿದರು.

    ಗೂಬೆ ಕೂರಿಸುವದರಲ್ಲು ಸಿದ್ದರಾಮಯ್ಯನವರು ನಿಸ್ಸೀಮರು. ಕುಹಕದ ಮಾತು ಮತ್ತು ವಕ್ರ ಮಾತುಗಳನ್ನಾಡುವುದು ಅವರ ಕೆಲಸ. ಸಿದ್ದರಾಮಯ್ಯನವರು ಏನು ಅನ್ನೋದು ಕಾಂಗ್ರೆಸ್ಸಿವರಿಗೆ ಗೊತ್ತು. ಒಮ್ಮೆ ಅಂಡಮಾನ್, ನಿಕೋಬಾರ್ ಗೆ ಹೋಗಿ ಸಾವರ್ಕರ ಬಗ್ಗೆ ತಿಳಿಯಲಿ. ಸಾರ್ವಜಿಕರಿಂದ ಹಣ ಪಡೆದು ಅವರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡೋಣ ಎಂದರು.

    ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬೇಕು ಎನ್ನುವುದು ನಮ್ಮದು ಆದ್ಯತೆ. ಆದರೆ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರವನ್ನು ಅದಕ್ಕೆ ತಳಕು ಹಾಕುವುದು ಸರಿಯಲ್ಲ. ಇಂತಹ ಮಾತುಗಳಿಂದ ಜನರ ತಲೆ ಹಾಳು ಮಾಡುವ ಪ್ರವೃತ್ತಿ ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಗುಡುಗಿದರು.

    ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ವಿಳಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಈಗಾಗಲೆ ಒಂದು ಹಂತದ ಹಣ ಬಿಡುಗಡೆಯಾಗಿದೆ. ಬಾಕಿ ಹಣ ಬಿಡುಗಡೆಗು ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ಮುಂದಿನ ಹಂತದಲ್ಲಿ ಹಣ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ಕರ್ನಾಟಕ 1,200 ಕೋಟಿ ರೂ. ಹಾಗೂ ಬಿಹಾರ ರಾಜ್ಯಕ್ಕೆ 400 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

    ಎಸ್.ಟಿ.ಸೋಮಶೇಖರ್ ಬಿಜೆಪಿ ಸೇರ್ಪಡೆಗೆ ಯಶವಂತಪುರ ಬಿಜೆಪಿ ಘಟಕ ಪರ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅವರಿಗೆ ಟಿಕೆಟ್ ನೀಡಬೇಕಾ ಅಥವಾ ಬೇಡ್ವಾ ಎನ್ನುವ ತೀರ್ಮಾನ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ತಿಳಿಸಿದರು.

  • ಸಿದ್ದರಾಮಯ್ಯ ಕಾಂಗ್ರೆಸ್‍ನಿಂದ ಹೊರ ಬಂದ್ರೂ ಆಶ್ಚರ್ಯವಿಲ್ಲ: ರೇಣುಕಾಚಾರ್ಯ

    ಸಿದ್ದರಾಮಯ್ಯ ಕಾಂಗ್ರೆಸ್‍ನಿಂದ ಹೊರ ಬಂದ್ರೂ ಆಶ್ಚರ್ಯವಿಲ್ಲ: ರೇಣುಕಾಚಾರ್ಯ

    ದಾವಣಗೆರೆ: ಸಿದ್ದರಾಮಯ್ಯ ಕಾಂಗ್ರೆಸ್‍ನಿಂದ ಹೊರಗೆ ಬಂದರೂ ಆಶ್ಚರ್ಯ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

    ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಡಿ ಬೇಡಿ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆದವರು. ಮೂರು ತಿಂಗಳು ಪ್ರತಿಪಕ್ಷದ ನಾಯಕ ಸ್ಥಾನ ಖಾಲಿ ಇತ್ತು. ಇದರಿಂದ ಸಿದ್ದರಾಮಯ್ಯನವರಿಗೆ ಎಷ್ಟರ ಮಟ್ಟಿಗೆ ಕಾಂಗ್ರೆಸ್‍ನಲ್ಲಿ ಗೌರವ ಇತ್ತು ಎನ್ನುವುದು ತಿಳಿಯುತ್ತದೆ. ಹೀಗಾಗಿ ಸಿದ್ದರಾಮಯ್ಯನವರು ಕಾಂಗ್ರೆಸ್‍ನಿಂದ ಹೊರ ಬಂದರೂ ಆಶ್ಚರ್ಯಪಡಬೇಡಿ ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರತಿಪಕ್ಷದ ನಾಯಕರಾಗಿದ್ದಂತಹವರು. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಗೋಲಿ ಆಡುವವರು ಅಂತ ಹೇಳಿಕೆ ನೀಡುವುದು ಸರಿಯಲ್ಲ.

    ಕಾಂಗ್ರೆಸ್‍ನವರು ಭ್ರಮೆಯಲ್ಲಿದ್ದಾರೆ, ಅವರು ಭ್ರಮನಿರಸನವಾಗಿದ್ದಾರೆ. ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಯಾಗಿ, ನಂತರ ಸಮ್ಮಿಶ್ರ ಸರ್ಕಾರ ಬಂತು. ಈಗಲೂ ಕಾಂಗ್ರೆಸ್‍ನವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದು ಹಗಲುಗನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರ್ತನೆ ನೋಡಿದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯನವರ ಮಧ್ಯೆ ಎಷ್ಟು ಸಾಮರಸ್ಯವಿದೆ ಎಂದು ತಿಳಿಯುತ್ತದೆ ಎಂದರು.

    ವೀರಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ಹಗುರವಾಗಿ ಮಾತನಾಡಬಾರದು. ಅವರು ಅಪ್ರತಿಮ ದೇಶಭಕ್ತರು. ಮತಾಂಧ ಟಿಪ್ಪು ಜಯಂತಿ ಆಚರಿಸುತ್ತೀರಿ. ನಾವು ದೇಶಭಕ್ತರಿಗೆ ಭಾರತರತ್ನ ನೀಡಿದರೆ ತಪ್ಪೇ. ಸಾವರ್ಕರ್ ಬಗ್ಗೆ ಇತಿಹಾಸ ಓದಿ ತಿಳಿದುಕೊಳ್ಳಲಿ. ಈ ಕುರಿತು ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

  • ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು

    ಮದ್ಯ ಕುಡಿದು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ: ಸಿಟಿ ರವಿಗೆ ಸಿದ್ದರಾಮಯ್ಯ ತಿರುಗೇಟು

    – ಮಾನಸಿಕ ಅಸ್ವಸ್ಥ ಟ್ವೀಟ್‍ಗೆ ವಿಪಕ್ಷ ನಾಯಕ ಗರಂ

    ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಧ್ಯೆ ಟ್ವೀಟ್ ವಾರ್ ನಡೆದಿದೆ.

    ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಮಹಾತ್ಮ ಗಾಂಧೀಜಿ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು ಎಂದು ಹೇಳುತ್ತೀರಿ. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ನೀವು ಮಾನಸಿಕ ಅಸ್ವಸ್ಥರಾಗಿದ್ದೀರಿ. ಇತಿಹಾಸದ ಬಗ್ಗೆ ನಿಮಗೆ ಅರಿವಿದೆಯಾ? ನೀವ್ಯಾಕೆ ಸೆಲ್ಯೂಲರ್ ಜೈಲಿಗೆ ಹೋಗಬಾರದು. ನಾನೇ ಸ್ಪಾನ್ಸರ್ ಮಾಡುತ್ತೇನೆ ಎಂದು ಗುಡುಗಿದ್ದಾರೆ.

    ಸಚಿವರ ಹೇಳಿಕೆಯಿಂದ ಗರಂ ಆದ ಸಿದ್ದರಾಮಯ್ಯ ಅವರು, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ ಎಂದು ಕುಟುಕಿದ್ದಾರೆ.

    ಮಂಗಳೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ. ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಟೀಕಿಸಿದ್ದರು.

  • ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ನೀಡಿ: ಕಾಂಗ್ರೆಸ್ ನಾಯಕ

    ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ನೀಡಿ: ಕಾಂಗ್ರೆಸ್ ನಾಯಕ

    ಮುಂಬೈ: ವಿ.ಡಿ.ಸಾವರ್ಕರ್ ಬದಲಿಗೆ ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಿ ಎಂದು ಬಿಜೆಪಿಗೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟಾಂಗ್ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎನ್‍ಡಿಎ ಪ್ರಣಾಳಿಕೆಯಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದಾಗಿ ಬಿಜೆಪಿ ಘೋಷಿಸಿದ್ದು, ಇದಕ್ಕೆ ಮನೀಶ್ ತಿವಾರಿ ಅವರು ತಿರುಗೇಟು ನೀಡಿದ್ದಾರೆ. ಸಾವರ್ಕರ್ ಬದಲಿಗೆ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಎಂದು ಹರಿಹಾಯ್ದಿದ್ದಾರೆ.

    ಸಾವರ್ಕರ್ ಅವರು ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದಾರೆ. ಈ ವರ್ಷ ನಾವು ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಎನ್‍ಡಿಎ ಸರ್ಕಾರವು ಸಾವರ್ಕರ್ ಬದಲಿಗೆ ನೇರವಾಗಿ ಗೋಡ್ಸೆಗೆ ಭಾರತರತ್ನ ನೀಡಬೇಕು ಎಂದು ಹೇಳುವ ಮೂಲಕ ವ್ಯಂಗ್ಯವಾಗಿ ಕಿಡಿಕಾರಿದರು.

    ಇದಕ್ಕೂ ಮುನ್ನ ಬುಧವಾರ ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಕೂಡ ಸಾವರ್ಕರ್ ಅವರ ನಂತರ ಭಾರತ ರತ್ನಕ್ಕೆ ಮುಂದಿನ ಹೆಸರು ಗೋಡ್ಸೆ ಇರಬಹುದು ಎಂದು ಎನ್‍ಡಿಎ ಪ್ರಣಾಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಸಾವರ್ಕರ್ ಅವರ ಇತಿಹಾಸ ಎಲ್ಲರಿಗೂ ತಿಳಿದಿದೆ. ಸಾವರ್ಕರ್ ಅವರು ಗಾಂಧಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಇಂದು ಈ ಸರ್ಕಾರ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿದೆ. ಮುಂದಿನ ಸಾಲಿನಲ್ಲಿ ಗೋಡ್ಸೆ ಇರಬಹುದು ಎಂದು ಅಲ್ವಿ ಹೇಳಿದ್ದರು.

    ಇತ್ತೀಚೆಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನವನ್ನು ಜ್ಯೋತಿರಾವ್ ಪುಲೆ, ಸಾವಿತ್ರಿಬಾಯಿ ಪುಲೆ ಹಾಗೂ ವೀರ್ ಸಾವರ್ಕರ್ ಅವರಿಗೆ ನೀಡುವ ಕುರಿತು ಪ್ರಸ್ತಾಪಿಸಿದೆ.

  • ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

    ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

    ಮುಂಬೈ: ಹಿಂದುತ್ವದ ವಿಚಾರವಾದಿ ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ನೀಡದೆ ಕಾಂಗ್ರೆಸ್ ಅವಮಾನಿಸಿದೆ. ಅವರ ಮೌಲ್ಯಗಳು ರಾಷ್ಟ್ರ ನಿರ್ಮಾಣಕ್ಕೆ ಆಧಾರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ನಿರಾಕರಿಸಿತು. ಅಲ್ಲದೆ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡದೆಯೂ ಅವಮಾನಿಸಿದೆ. ಮಾತ್ರವಲ್ಲದೆ ಇದೀಗ ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಪಡಿಸಿರುವುದನ್ನು ಸಹ ವಿರೋಧಿಸುತ್ತಿದೆ. ಆದರೆ ನಾವು ಸಾವರ್ಕರ್ ಅವರ ಸಂಸ್ಕಾರಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಆಧಾರವನ್ನಾಗಿಸಿಕೊಂಡಿದ್ದೇವೆ ಎಂದರು.

    ಅಕ್ಟೋಬರ್ 21ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು, ಇದರಲ್ಲಿ ಸಹ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದು ಪ್ರಮುಖ ಅಂಶವಾಗಿದೆ. ಪ್ರಣಾಳಿಕೆಯಲ್ಲಿ ಘೋಷಣೆಯಾದ ಮರುದಿನವೇ ಇಂದು ಪ್ರಧಾನಿ ನರೇಂದ್ರ ಮೋದಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ವಿರೋಧ ಪಕ್ಷಗಳು ನಾಚಿಕೆ ಇಲ್ಲದವು, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮಾಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲಿ 370ನೇ ವಿಧಿ ಏನು ಎಂದು ಬಹಿರಂಗವಾಗಿ ಪ್ರಶ್ನಿಸುವ ಜನರಿದ್ದಾರೆ. ನಾನು ಅಂತಹವರಿಗೆ ಹೇಳಲು ಬಯಸುತ್ತೇನೆ, ಮಹಾರಾಷ್ಟ್ರದಂತೆಯೇ ಜಮ್ಮು ಕಾಶ್ಮೀರದ ಜನರು ಸಹ ಭಾರತಕ್ಕೆ ಸೇರಿದವರು ಎಂದರು.

    ಕಾಂಗ್ರೆಸ್-ಎನ್‍ಸಿಪಿಯದ್ದು ಭ್ರಷ್ಟ ಮೈತ್ರಿ, ಇದು ಮಹಾರಾಷ್ಟ್ರವನ್ನು ಒಂದು ದಶಕ ಹಿಂದಕ್ಕೆ ಕೊಂಡೊಯ್ದಿದೆ ಎಂದು ಮೈತ್ರಿ ಕುರಿತು ವಾಗ್ದಾಳಿ ನಡೆಸಿದರು.

  • ವೀರ ಸಾವರ್ಕರ್ ಹೇಡಿ: ರಾಹುಲ್ ಗಾಂಧಿ ವಿರುದ್ಧ ದೂರು

    ವೀರ ಸಾವರ್ಕರ್ ಹೇಡಿ: ರಾಹುಲ್ ಗಾಂಧಿ ವಿರುದ್ಧ ದೂರು

    ನವದೆಹಲಿ: ವೀರ ಸಾವರ್ಕರ್ ಅವರನ್ನು ಹೇಡಿ ಎಂದು ಕರೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿ ದೂರು ದಾಖಲಾಗಿದೆ.

    ನವದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು, ವೀರ ಸಾವರ್ಕರ್ ಅವರನ್ನು ಹೇಡಿ ಅಂತ ಅವಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಅವಿಧೇಯ ಭಾಷೆ ಬಳಸಿ ಸಾರ್ವಜನಿಕರ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇಂತಹ ಹೇಳಿಕೆ ವಿಚಾರವಾಗಿ ರಾಹುಲ್ ಗಾಂಧಿ ಅವರ ವಿರುದ್ಧ ದೂರು ದಾಖಲಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ನವೆಂಬರ್ ನಲ್ಲಿ ಛತ್ತೀಸ್‍ಗಢ ಚುನಾವಣಾ ರ‍್ಯಾಲಿ ಭಾಷಣದಲ್ಲಿ, ವೀರ ಸಾವರ್ಕರ್ ಅವರು 1911ರಲ್ಲಿ ಅಂಡಮಾನ್‍ನ ಸೆಲ್ಯುಲಾರ್ ಜೈಲಿನಿಂದ ಹೊರಬರಲು ಬ್ರಿಟಿಷರ ಮುಂದೆ ಅಂಗಲಾಚಿದ್ದರು ಎಂದು ಹೇಳಿಕೆ ನೀಡಿದ್ದರು.

    ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ವೀರ ಸಾವರ್ಕರ್‍ರ ಮೊಮ್ಮಗ ರಂಜಿತ್ ಸಾವರ್ಕರ್ ಎಐಸಿಸಿ ದೂರು ದಾಖಲಿಸಿದ್ದರು. ನಮ್ಮ ಅಜ್ಜ ವೀರ ಸಾರ್ವಕರ್ ಅವರು 27 ವರ್ಷಗಳ ಕಾಲ ಜೈಲಿನಲ್ಲಿದ್ದರು. ಆದರೆ ರಾಹುಲ್ ಗಾಂಧಿ ಹೇಳಿಕೆಯಿಂದ ಸುಳ್ಳಾಗಿದ್ದು, ಅವರ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದೇನೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv