Tag: Veena kashappanavar

  • ಟಿಕೆಟ್ ಕೈತಪ್ಪಿದ್ದಕ್ಕೆ ಗಳಗಳನೇ ಕಣ್ಣೀರು ಹಾಕಿದ ವೀಣಾ ಕಾಶಪ್ಪನವರ್

    ಟಿಕೆಟ್ ಕೈತಪ್ಪಿದ್ದಕ್ಕೆ ಗಳಗಳನೇ ಕಣ್ಣೀರು ಹಾಕಿದ ವೀಣಾ ಕಾಶಪ್ಪನವರ್

    – ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧಾರ

    ಬಾಗಲಕೋಟೆ: ಸ್ವಾಭಿಮಾನಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಆಯೋಜನೆ ಮಾಡಿ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ (Veena Kashappanavar) ಗಳಗಳನೇ ಕಣ್ಣೀರು ಹಾಕಿದ್ದಾರೆ.

    ಕಣ್ಣೀರು ಹಾಕುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವೀಣಾ, ಟಿಕೆಟ್ ಸಿಗುತ್ತೆ ಎಂದು ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದೆ, ಆದರೆ ಹೇಗೆ ಟಿಕೆಟ್ ಕೈ ತಪ್ಪಿದೆ ಎಂದು ಗೊತ್ತಾಗ್ತಿಲ್ಲ. ನಾಯಕರು ನಮ್ಮ ಜಿಲ್ಲೆಯ ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೆ, ಯಾರಿಂದ ಟಿಕೆಟ್ ತಪ್ಪಿತು ಎಂದು ಗೊತ್ತಿಲ್ಲ ಎಂದರು.

    ರಾಜ್ಯ ನಾಯಕರನ್ನು ಕೇಳಿದ್ರೆ ಜಿಲ್ಲಾ ನಾಯಕರ ಹೆಸರು ಹೇಳ್ತಾರೆ. ಜಿಲ್ಲಾ ನಾಯಕರನ್ನ ಕೇಳಿದ್ರೆ ರಾಜ್ಯ ನಾಯಕರ ಹೆಸರು ಹೇಳ್ತಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಸ್ವೀಕರಿಸಿದ ಸ್ವತಂತ್ರ ಸ್ಪರ್ಧೆ ಬಗ್ಗೆ ನಿರ್ಧರಿಸುತ್ತೇನೆ ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

    ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದಕ್ಕೆ ಸಭೆ ಆಯೋಜನೆ ಮಾಡಲಾಗಿತ್ತು. ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಭಾಗಿಯಾಗಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವವಣೆಗೆ ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್‌ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಘೋಷಿಸಲಾಗಿದೆ.

  • ಪಂಚಮಸಾಲಿಗಳ ಮಹಿಳಾ ಪೀಠಕ್ಕೆ ಬೆಂಬಲವಿಲ್ಲ: ವೀಣಾ ಕಾಶಪ್ಪನವರ

    ಪಂಚಮಸಾಲಿಗಳ ಮಹಿಳಾ ಪೀಠಕ್ಕೆ ಬೆಂಬಲವಿಲ್ಲ: ವೀಣಾ ಕಾಶಪ್ಪನವರ

    ಬೆಳಗಾವಿ: ಪೀಠಗಳಿಗಿಂತ ಮೀಸಲಾತಿಗೆ ಒತ್ತಡ ಹಾಕಲಿ, ಸತ್ಯಾಗ್ರಹ ಮಾಡಲಿ, ಹೋರಾಟ ಮಾಡಲಿ ಆದರೆ ಈ ಸಮಯದಲ್ಲಿ ಪೀಠ ಅಗತ್ಯವಿತ್ತಾ ಎಂದು ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ ವಾಗ್ದಾಳಿ ನಡೆಸಿದರು.

    ಲಿಂಗಾಯತ ಪಂಚಮಸಾಲಿ 4ನೇ ಮಹಿಳಾ ಪೀಠ ಸ್ಥಾಪನೆ ಸಿದ್ಧತೆ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೀಠದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಜನರಿಗೂ ಗೊತ್ತಿದೆ. ಮೀಸಲಾತಿಗಾಗಿ ಮಹಿಳೆಯರಿಂದ ಹೋರಾಟ ಮುಂದುವರೆಯುತ್ತದೆ. ಗ್ರಾಮಗಳಲ್ಲಿ ಮಹಿಳೆಯರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಆದರೆ ನಾಲ್ಕನೇ ಪೀಠ ಮಹಿಳಾ ಪೀಠ ಮಾಡುತ್ತಾರೆ ಎನ್ನುವ ಮಾಹಿತಿ ಇದೆ ಎಂದು ಹೇಳಿದರು.

    ಕಿಶೋರಿ ಎನ್ನುವವರು ಈಗ ನಾಲ್ಕನೇ ಪೀಠ, ಮಹಿಳಾ ಪೀಠ ಮಾಡುತ್ತಿದ್ದಾರೆ. ಹೀಗಾಗಿ ನಾವು ಅವರನ್ನು ಕೈ ಬಿಟ್ಟಿದ್ದೇವೆ. ಇದನ್ನು ಮಹಿಳಾ ಘಟಕವು ವಿರೋಧಿಸುತ್ತದೆ. ನಮಗೆ ನಾಲ್ಕನೇ ಪೀಠದ ಅವಶ್ಯಕತೆ ಇಲ್ಲ. ನಾವು ಆ ಪೀಠಕ್ಕೆ ಬೆಂಬಲ ನೀಡುತ್ತಿಲ್ಲ. ಜನರ ಹಾದಿ ತಪ್ಪಿಸಲು ಹೊರಟಿದ್ದಾರೆ. ಇನ್ನೂ ನನ್ನ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾವು ಆ ಪೀಠಕ್ಕೆ ಬೆಂಬಲ ನೀಡಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ನಕಲಿ ಸಮಾಜವಾದ: ಅಖಿಲೇಶ್‌ ಯಾದವ್‌ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

  • ನಾಲ್ಕನೇ ಬಾರಿ ಲೋಕ ಗದ್ದುಗೆ ಏರಿದ ಗದ್ದಿಗೌಡರ್

    ನಾಲ್ಕನೇ ಬಾರಿ ಲೋಕ ಗದ್ದುಗೆ ಏರಿದ ಗದ್ದಿಗೌಡರ್

    ಬಾಗಲಕೋಟೆ: ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದೀಗೌಡರ್ 1,63,054 ಅಂತರ ಮತದಿಂದ ಗೆಲುವು ಸಾಧಿಸಿ ನಾಲ್ಕನೇಯ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.

    ಗದ್ದೀಗೌಡರ್ ಕಾಂಗ್ರೆಸ್ ಅಭ್ಯರ್ಥಿಯಾದ ವೀಣಾ ಕಾಶಪ್ಪನವರ ವಿರುದ್ಧ 1,63,054 ಅಂತರ ಮತ ಪಡೆದಿದ್ದಾರೆ. ಗದ್ದೀಗೌಡರ್ 6,36,953 ಮತ ಪಡೆದರೆ, ವೀಣಾ ಕಾಶಪ್ಪನವರ 4,73,899 ಮತ ಪಡೆದು ಗೆದಿದ್ದಾರೆ.

    ಪಿ.ಸಿ ಗದ್ದೀಗೌಡರ್  ಗೆದ್ದಿದ್ದು ಹೇಗೆ?
    ಮೂಲತಃ ಬಾಗಲಕೋಟೆ ಸದ್ಯ ಬಿಜೆಪಿ ಭದ್ರ ಕೋಟೆ ಎನಿಸಿದ್ದು, ಎಲ್ಲಿ ನೋಡಿದ್ರು ಮೋದಿ ಹವಾ ಮೂಡಿತ್ತು. ಪ್ರಬಲ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಪಿ.ಸಿ ಗದ್ದೀಗೌಡರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಎಲ್ಲ ಸಮುದಾಯದವರ ಜೊತೆ ಕೋಮು ಸೌಹಾರ್ಧತೆಯಿಂದ ನಡೆದುಕೊಂಡು ಬಂದಿದ್ದಾರೆ. ಸತತ ಮೂರು ಬಾರಿ ಸಂಸದರಾಗುವ ಮುಲಕ ಹ್ಯಾಟ್ರಿಕ್ ಹೀರೋ ಎಂಬ ಖ್ಯಾತಿ ಪಡೆದಿದ್ದಾರೆ. ಜಮಖಂಡಿ ಭಾಗದ ಗಾಣಿಗರು ಪಕ್ಷ ನಿಷ್ಠೆಗಿಂತ ಸಮುದಾಯಕ್ಕೆ ನಿಷ್ಠೆಯನ್ನು ತೋರಿ ಗದ್ದಿಗೌಡರಗೆ ಮತ ಹಾಕಿದ್ದಾರೆ.

    ಹುನಗುಂದ ಭಾಗದಲ್ಲಿ ದಲಿತರ ಮೇಲೆ ವಿಜಯಾನಂದ ಕಾಶಪ್ಪನವರ ದಬ್ಬಾಳಿಕೆ ಆರೋಪ ಗದ್ದೀಗೌಡರ್ ಗೆ ಪ್ಲಸ್ ಆಗಿದೆ. ಯುವ ಮತದಾರರು ಮೋದಿ ಅಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ತಡವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದು, ಸಮರ್ಪಕ ಪ್ರಚಾರ ನಡೆಸದೇ ಇರುವುದು ಗದ್ದೀಗೌಡರ್ ಗೆ ಲಕ್ ಆಗಿದೆ. ಬಾಗಲಕೋಟೆ ಲೊಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಜನ ಬಿಜೆಪಿ ಶಾಸಕರಿರೋದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ. ಗದ್ದೀಗೌಡರ್ ಪರ ಮೋದಿ ಎಪ್ರಿಲ್ 18ರಂದು ಬಾಗಲಕೋಟೆಗೆ ಆಗಮಿಸಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ್ದರು.

    ವೀಣಾ ಕಾಶಪ್ಪನವರ ಸೋಲಿಗೆ ಕಾರಣಗಳು?
    ವೀಣಾ ಕಾಶಪ್ಪನವರಗೆ ಪತಿ ವಿಜಯಾನಂದ ಕಾಶಪ್ಪನವರ ಅವರೇ ವಿಲನ್. ಏಕೆಂದರೆ ವಿಜಯಾನಂದ ಕಾಶಪ್ಪನವರ ನಡುವಳಿಕೆ ಹಾಗೂ ಗೂಂಡಾ ವರ್ತನೆ ವೀಣಾ ಕಾಶಪ್ಪನವರ ಸೋಲಿಗೆ ಪ್ರಮುಖ ಕಾರಣ. ವಿಜಯಾನಂದ ಕ್ಷೇತ್ರದ 2 ಲಕ್ಷ 70 ಸಾವಿರ ಮತದಾರರನ್ನು ಹೊಂದಿದ ಪ್ರಭಲ ಸಮುದಾಯ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿದ್ದರು. ವಿಜಯಾನಂದ ತಮ್ಮ ಕ್ಷೇತ್ರ ಹುನಗುಂದ ವಿಧಾನಸಭಾ ಕ್ಷೇತ್ರದ ಕುರುಬ ಸಮುದಾಯದ ಮುಖಂಡ ಮುಕ್ಕಣ್ಣ ಮುಕ್ಕಣ್ಣವರ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

    ಪಿಕೆಪಿಎಸ್ ಚುನಾವಣೆ ವೇಳೆ ವಿಜಯಾನಂದ ಕಾಶಪ್ಪನವರ ಹಾಗೂ ಮುಕ್ಕಣ್ಣವರ್ ಮಧ್ಯೆ ಜಗಳ ನಡೆದಿತ್ತು. ಇಬ್ಬರ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದರು. ನಂತರ ಘಟನೆಯಿಂದ ಗಾಯಗೊಂಡ ಮುಕ್ಕಣ್ಣ ಮುಕ್ಕಣ್ಣವರ ಕೆಲ ದಿನಗಳ ನಂತರ ಸಾವನ್ನಪ್ಪಿದ್ದರು. ಮುಕ್ಕಣ್ಣ ಸಾವಿಗೆ ವಿಜಯಾನಂದ ಕಾಶಪ್ಪನವರ ಕಾರಣ ಎಂದು ಕುರುಬ ಸಮುದಾಯದ ಜನರು ಆರೋಪ ಮಾಡಿದ್ದರು. ಇದರಿಂದ ಕುರುಬ ಸಮುದಾಯ ವಿಜಯಾನಂದ ಕಾಶಪ್ಪನವರ ಮೇಲಿನ ಸೇಡನ್ನು ವೀಣಾ ಮೇಲೆ ತೀರಿಸಿಕೊಂಡಿದ್ದಾರೆ.

    ವಿಜಯಾನಂದ್ ಮೊದಲಿನಿಂದಲೂ ಒಂದಿಲ್ಲೊಂದು ಕಾರಣದಿಂದ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿದ್ದರು. ಮಾಜಿ ಸಚಿವ ಎಸ್.ಆರ್ ಪಾಟಿಲ್ ಹಾಲಿ ಸಚಿವ ಆರ್.ಬಿ ತಿಮ್ಮಾಪುರ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದರು. ಕಳೆದ ಬಾರಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಾಗ ತನ್ನ ಸೋಲಿಗೆ ಎಸ್.ಆರ್ ಪಾಟೀಲ್ ಹಾಗೂ ಆರ್.ಬಿ ತಿಮ್ಮಾಪುರ ಅವರೇ ಕಾರಣ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದರಿಂದ ಎಸ್.ಆರ್ ಪಾಟೀಲ್ ಸಮುದಾಯದ ಲಿಂಗಾಯತ ರೆಡ್ಡಿ ಮತಗಳು ಕೈ ಕೊಟ್ಟಿತ್ತು.

    ಆರ್.ಬಿ ತಿಮ್ಮಾಪುರ ಸಮುದಾಯದ ಎಸ್‍ಸಿ ಮತಗಳು ವೀಣಾಗೆ ಬರಲಿಲ್ಲ. ಕುರುಬ ಸಮುದಾಯದ ಮುಖಂಡ ಬಾಗಲಕೋಟೆ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ ಮೇಟಿ ಜೊತೆ ಆಂತರಿಕ ಭಿನ್ನಮತ ಮೂಡಿತ್ತು. ಹೆಚ್.ವೈ ಮೇಟಿ ಮಗಳು ಹಾಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ವಿರೋಧ ಕಟ್ಟಿಕೊಂಡಿದ್ದರು. ಜಿಪಂ ಅಧ್ಯಕ್ಷೆ ಗಾದಿಗಾಗಿ ಪೈಪೋಟಿ ನಡೆಸಿದ್ದ ಬಾಯಕ್ಕ ಮೇಟಿ ವೀಣಾ ವಿರುದ್ಧ ತೊಡೆ ತಟ್ಟಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬಡಿದಾಡಿದ್ದರು. ಈ ವೇಳೆ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಪರವಾಗಿಯೇ ನಿಂತು, ಬಾಯಕ್ಕ ಮೇಟಿ ಒಳಗೊಳಗೆ ವೀಣಾ ವಿರುದ್ಧ ಕತ್ತಿ ಮಸೆದಿದ್ದರು.

    ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಇದ್ದರೂ ಕುರುಬ ಸಮುದಾಯದ ಜನರು ಸ್ಥಳೀಯವಾಗಿ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗಿದ್ದರು. ಕುರುಬ ಸಮುದಾಯದ ಅಸಹನೆ ತಣಿಸುವಲ್ಲಿ ಸಿದ್ದರಾಮಯ್ಯ ಗಂಭೀರವಾಗಿ ಪ್ರಯತ್ನಿಸಲಿಲ್ಲ. ವೀಣಾ ಕಾಶಪ್ಪನವರ್ ಎಂಪಿ ಆದರೆ ಪತಿ ವಿಜಯಾನಂದ ಕಾಶಪ್ಪನವರ ನಮ್ಮನ್ನು ಮೂಲೆ ಗುಂಪು ಮಾಡೋದು ಖಚಿತ ಎಂಬ ಕೈ ಮುಖಂಡರ ಭಯ ಮೂಡಿತ್ತು. ಇದರಿಂದ ಒಳ ಹೊಡೆತಕ್ಕೆ ಕೈ ಮುಖಂಡರು ಮುಂದಾಗಿದ್ದಾರೆ.

    ಜಿಪಂ ಅಧ್ಯಕ್ಷೆಯಾಗಿದ್ದ ವೇಳೆ ಲಿಂಗಾಯ ಬಣಜಿಗ(ಶೆಟ್ಟರ್) ಬಗ್ಗೆ ವೀಣಾ ಕಾಶಪ್ಪನವರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೀವು ಶೆಟ್ಟರು ಮಲ್ಲಪ್ಪ ಶೆಟ್ಟಿ ವಂಶದವರು ಹುಷಾರಾಗಿರಬೇಕು ಎಂದು ತಮಾಷೆಗೆ ಹೇಳಿದ ಮಾತಾದರೂ ಶೆಟ್ಟರ್ ಸಮುದಾಯ ಅದನ್ನು ಗಂಭೀರವಾಗಿ ತೆಗೆದುಕೊಂಡು ಅಸಮಾಧಾನ ಹೊರಹಾಕಿದ್ದರು. ಈ ಅಸಮಾಧಾನ ಶಮನ ಮಾಡುವಲ್ಲಿ ಹೆಚ್ಚಿನ ಮಟ್ಟದ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಬಣಜಿಗ ಮತಗಳು ಸ್ವಲ್ಪ ಪ್ರಮಾಣದಲ್ಲಿ ಕೈ ತಪ್ಪಿತ್ತು.

    ವೀಣಾ ಕಾಶಪ್ಪನವರ ಪ್ರಭಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಆದರೂ ಸಂಪೂರ್ಣವಾಗಿ ಪಂಚಮಸಾಲಿ ಮತಗಳು ಬಾರದಿದ್ದರು. ಬಿಜೆಪಿ ಹಾಗೂ ಬಿಎಸ್‍ವೈ ಅಭಿಮಾನದಿಂದ ಕೆಲ ಪ್ರಮಾಣದ ಪಂಚಮಸಾಲಿಗಳು ಬಿಜೆಪಿಗೆ ಬೆಂಬಲಿಸಿದ್ದಾರೆ. ಕಳೆದ ಬಾರಿ ಹುನಗುಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಸ್‍ಆರ್ ನವಲಿಹಿರೇಮಠ ಬಗ್ಗೆ ಅವಾಚ್ಯ ಶಬ್ಧಗಳಿಂದ ವಿಜಯಾನಂದ ಕಾಶಪ್ಪನವರ ನಿಂಧಿಸಿದ್ದರ ಪರಿಣಾಮ ಜೆಡಿಎಸ್ ಮತಗಳು ನಿರೀಕ್ಷೆ ಮಟ್ಟದಲ್ಲಿ ಬರಲಿಲ್ಲ.

    ಸಿದ್ದರಾಮಯ್ಯ ನಾಲ್ಕು ಬಾರಿ, ದಿನೇಶ್ ಗುಂಡೂರಾವ್ ಎರಡು ಬಾರಿ ಹೊರತುಪಡಿಸಿದರೆ ಕಾಂಗ್ರೆಸ್‍ನ ರಾಷ್ಟ್ರಮಟ್ಟದ ನಾಯಕರು ಯಾರೂ ಪ್ರಚಾರಕ್ಕೆ ಬಾರಲಿಲ್ಲ. ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಗಾಣಿಗ ಸಮುದಾಯದವರೇ ಆದರೂ ಜಮಖಂಡಿ ಬಾಗದ ಗಾಣಿಗ ಸಮುದಾಯದ ಮತಗಳನ್ನು ಕಾಂಗ್ರೆಸ್‍ಗೆ ಸೆಳೆಯುವಲ್ಲಿ ಅಷ್ಟಾಗಿ ಸಫಲವಾಗದೇ ವಿಫಲರಾಗಿದ್ದಾರೆ.

  • ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!

    ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಗೆ ಇಬ್ಬರು ಪ್ರತಿಷ್ಠಿತರ ನಡುವೆ ಶುರುವಾಗಿದೆ ಜಿದ್ದಾಜಿದ್ದಿ!

    -ವಿಜಯಾನಂದ ಕಾಶಪ್ಪನವರ್ ಪತ್ನಿ ವರ್ಸಸ್ ಹುಲ್ಲಪ್ಪ ಮೇಟಿ ಪುತ್ರಿ

    ಬಾಗಲಕೋಟೆ: ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್‍ನ ನಾಯಕರಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‍ನಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾಪಂಚಾಯಿತಿ ಅಧ್ಯಕ್ಷಗಿರಿಗಾಗಿ ಇಬ್ಬರು ಪ್ರತಿಷ್ಠಿತರ ನಡುವೆ ಕಾಳಗ ಶುರುವಾಗಿದ್ದು, ಕಾಂಗ್ರೆಸ್ಸಿಗರ ನಡೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಇರಿಸು-ಮುರಿಸು ಅನುಭವಿಸುವಂತಾಗಿದೆ.

    ಹಾಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರನ್ನ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ಸಿಗರಿಂದಲೇ ಸ್ಕೆಚ್ ರೆಡಿಯಾಗಿದೆ. ಶತಾಯ ಗತಾಯ ಅಧಿಕಾರದ ಗದ್ದುಗೆ ಹೀಡಿಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಬಾಯಕ್ಕಾ ಮೇಟಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ವೀಣಾ ಕಾಶಪ್ಪನವರ್ ಅವರನ್ನ ಕೆಳಗಿಳಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಸದಸ್ಯರ ಜೊತೆ ಕೈ ಜೋಡಿಸಿ ಅಧ್ಯಕ್ಷಗಿರಿ ಪಟ್ಟ ಪಡೆಯುವುದಾಗಿ ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಬಾಯಕ್ಕಾ ಮೇಟಿ ಬಿಜೆಪಿಗರನ್ನ ತಮ್ಮ 9 ಜನ ಜಿಲ್ಲಾಪಂಚಾಯಿತಿ ಸದಸ್ಯರ ಜೊತೆ ಸಂಪರ್ಕಿಸಿದ್ದಾರೆ. ಮೇಟಿಯವರ ಪುತ್ರಿಯ ನಡೆ ಈಗ ಬಾದಾಮಿ ಶಾಸಕರು ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇರುಸು-ಮುರುಸು ಉಂಟು ಮಾಡಿದೆ. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಒಟ್ಟು ಜಿಲ್ಲೆಯ 36 ಸ್ಥಾನಗಳಲ್ಲಿ ಕೇವಲ 17 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 18ರಲ್ಲಿ ಜಯಭೇರಿ ಬಾರಿಸಿತ್ತು. ಆದ್ರೆ ಕಾಂಗ್ರೆಸ್‍ನ ಒಬ್ಬರು ಪಕ್ಷೇತರರ ಬೆಂಬಲ ಪಡೆದು ಹಾಗೂ ಇನ್ನೊಬ್ಬ ಬಿಜೆಪಿ ಸದಸ್ಯರ ಗೈರು ಉಳಿಸುವುದರ ಮೂಲಕ ಅಧ್ಯಕ್ಷಗಿರಿ ಪಟ್ಟ ಗಿಟ್ಟಿಸಿಕೊಂಡಿದ್ದರು.

    ಜಿಲ್ಲಾ ಕಾಂಗ್ರೆಸ್‍ನಲ್ಲಿ ಈ ಬೆಳವಣಿಗೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ವಿರುದ್ಧ ಕೆಲವು ಸದಸ್ಯರು ಹರಿಹಾಯುತ್ತ ಬಂದಿದ್ದಾರೆ. ಸಾಮಾನ್ಯ ಸಭೆಗಳು ಸರಿಯಾಗಿ ನಡೆದ ಉದಾಹರಣೆಗಳಿಲ್ಲ. ಅಧ್ಯಕ್ಷ ಪಟ್ಟಕ್ಕೆ ಕುಳಿತು ಎರಡೂವರೆ ವರ್ಷಗಳಾಗಿದ್ದು, ಹೀಗಾಗಿ ಮತ್ತೊಬ್ಬರಿಗೆ ಅವಕಾಶ ಕೊಡಿ ಎಂದು ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರಂತೆ. ಅಲ್ಲದೇ ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಬಾಗಲಕೋಟೆ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಲೋಕಸಭೆ ಟಿಕೆಟ್ ನೀಡಿ, ಅಧ್ಯಕ್ಷೆ ಸ್ಥಾನವನ್ನು ತ್ಯಜಿಸುತ್ತೇನೆ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಕ್ಷದ ವರಿಷ್ಠರು ಏನೇ ತೀರ್ಮಾಣ ತೆಗೆದುಕೊಂಡರೂ ಬದ್ಧ ಎಂದು ಇಬ್ಬರು ನಾಯಕಿಯರು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಆಂತರಿಕ ಕಲಹ ಮಾತ್ರ ಶಮನಗೊಂಡಿಲ್ಲ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ ಎಂದು ಬಾಯಕ್ಕಾ ಮೇಟಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅದೇನೆಯಾಗಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿ ಪಟ್ಟ ಕಾಂಗ್ರೆಸ್ ಪಾಳಯದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಿದೆ. ಲೋಕಸಭೆ ಚುನಾವಣೆ ಸಮೀಪವಿರುವಾಗ್ಲೇ ಈ ಬೆಳವಣಿಗೆ ವರಿಷ್ಠರ ತಲೆ ನೋವಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv