Tag: varuna

  • ಸಿದ್ದರಾಮಯ್ಯರನ್ನು ಸೋಲಿಸಲು ಕೇಸರಿಪಾಳಯ ಪಣ- ಸಿಎಂ ವಿರುದ್ಧ ಕಣಕ್ಕಿಳಿತಾರಾ ಬಿಎಸ್‍ವೈ ಪುತ್ರ?

    ಸಿದ್ದರಾಮಯ್ಯರನ್ನು ಸೋಲಿಸಲು ಕೇಸರಿಪಾಳಯ ಪಣ- ಸಿಎಂ ವಿರುದ್ಧ ಕಣಕ್ಕಿಳಿತಾರಾ ಬಿಎಸ್‍ವೈ ಪುತ್ರ?

    ಮೈಸೂರು: ಭಾಗ್ಯಗಳ ಸರದಾರ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಪಾಳಯದಲ್ಲಿ ಒತ್ತಡ ಹೆಚ್ಚಾಗಿದೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಈ ಸಂಬಂಧ ಈಗಾಗಲೇ ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಮತ್ತಿತರ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆ ಎನ್ನಲಾಗಿದೆ.

    ವರುಣಾ ಕ್ಷೇತ್ರದಲ್ಲಿ ಒಟ್ಟು 1 ಲಕ್ಷದ 95 ಸಾವಿರ ಮತಗಳಿದ್ದು, ಅವುಗಳಲ್ಲಿ 50 ಸಾವಿರ ಲಿಂಗಾಯತ ಮತಗಳಿವೆ. ಲಿಂಗಾಯತ ಮತಗಳ ಜೊತೆಗೆ ಯುವಕರ ಮತ ಅಧಿಕವಾಗಿದ್ದು, ಕಳೆದ ಬಾರಿ ಸ್ಪರ್ಧಿಸಿದ್ದ ಸಿದ್ದಲಿಂಗಸ್ವಾಮಿ 53 ಸಾವಿರ ಮತಗಳ ಅಂತದಿಂದ ಜಯಗಳಿಸಿ, ಸಿದ್ದರಾಮಯ್ಯಗೆ ನಡುಕ ಹುಟ್ಟಿಸಿದ್ರು. ಈ ಬಾರಿ ಬಿಎಸ್‍ವೈ ಪುತ್ರ ವಿಜಯೇಂದ್ರರನ್ನು ಕಣಕ್ಕಿಳಿಸಿದ್ರೆ ಲಿಂಗಾಯತ ಮತಗಳ ಜೊತೆಗೆ ಯುವಕರ ಮತಗಳನ್ನು ಪಡೆದು, ಸಿದ್ದರಾಮಯ್ಯರನ್ನು ಸೋಲಿಸಬಹುದು ಅನ್ನೋದು ಬಿಜೆಪಿ ಲೆಕ್ಕಾಚಾರವಾಗಿದೆ.

    ಬಿಎಸ್‍ವೈ ಮಾತ್ರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಕಾದು ನೋಡೋ ತಂತ್ರಕ್ಕೆ ಶರಣಾಗಿದ್ದಾರೆ.

  • ಅಪ್ಪ-ಮಗನಿಗಾಗಿ ವರುಣಾ, ಚಾಮುಂಡೇಶ್ವರಿ ಮೀಸಲು-ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್, ಬಿಜೆಪಿ ಒಂದಾಗುತ್ತಾ ?

    ಅಪ್ಪ-ಮಗನಿಗಾಗಿ ವರುಣಾ, ಚಾಮುಂಡೇಶ್ವರಿ ಮೀಸಲು-ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್, ಬಿಜೆಪಿ ಒಂದಾಗುತ್ತಾ ?

    ಬೆಂಗಳೂರು: ಪುತ್ರ ಯತೀಂದ್ರರ ರಾಜಕೀಯ ಭವಿಷ್ಯಕ್ಕಾಗಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಆರಂಭಿಸಿದ್ದಾರೆ. ವರುಣಾ ಕ್ಷೇತ್ರದಲ್ಲೇ ಪುತ್ರನನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ವರುಣಾ ಕ್ಷೇತ್ರದ ಮುಖಂಡರೊಂದಿಗೆ ವಾರದ ಹಿಂದೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ನನ್ನ ಮಗನ ಸ್ಪರ್ಧೆಗೆ 2018ರ ವಿಧಾನಸಭೆ ಚುನಾವಣೆ ಸರಿಯಾದ ಸಮಯ. ನಾನು ಸಿಎಂ ಆಗಿರೋದ್ರಿಂದ ಪಕ್ಷದಲ್ಲಿ ಎಲ್ಲವೂ ನಡೆಯುತ್ತೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ ನನ್ನ ಮಗನ ಗೆಲುವಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿ ಉಳಿದ ನಾಯಕರುಗಳಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನಾನು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅಲ್ಲಿನ ಜನರು ನನ್ನ ಕಷ್ಟ ಕಾಲದಲ್ಲಿಯೇ ಕೈಬಿಟ್ಟಿಲ್ಲ. ಇನ್ನು ಈಗ ಕೈ ಬಿಡ್ತಾರಾ? ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ಸಿಎಂ ನಿಲುವಿಗೆ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ನಿಂತರೆ ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ಒಂದಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.

  • ಚುನಾವಣೆಯಲ್ಲಿ ನಿಲ್ಲಬೇಕು ಅಂತ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ: ಯತೀಂದ್ರ

    ಚುನಾವಣೆಯಲ್ಲಿ ನಿಲ್ಲಬೇಕು ಅಂತ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ: ಯತೀಂದ್ರ

    ಮಂಡ್ಯ: ನಾನು ಚುನಾವಣೆಗೆ ನಿಲ್ಲಬೇಕು ಅಂತಾ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಬ್ಯೂಸಿ ಆಗಿರುವದರಿಂದ ಅವರ ಪರವಾಗಿ ವರುಣಾ ಕ್ಷೇತ್ರದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಸಿಎಂ ಪುತ್ರ ಡಾ. ಯತೀಂದ್ರ ತಿಳಿಸಿದ್ದಾರೆ.

    ಚುನಾವಣೆಗೆ ಸ್ಪರ್ಧಿಸುವ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಪಕ್ಷದ ಹೈಕಮಾಂಡ್ ಟಿಕೆಟ್ ನೀಡುವ ಸಂದರ್ಭದಲ್ಲಿ ಚುನಾವಣೆಯ ಬಗ್ಗೆ ನಾನು ಖಚಿತ ನಿರ್ಧಾರವನ್ನು ತಿಳಿಸುತ್ತೇನೆ. ಚುನಾವಣೆಗೆ ನಿಲ್ಲುವಂತೆ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವುದಲ್ಲಿ ತಪ್ಪೇನಿಲ್ಲ ಅಂತಾ ಅಂದ್ರು.

    ಇದನ್ನೂ ಓದಿ: ಸಿಎಂ ಪುತ್ರ ಯತೀಂದ್ರ ವಿರುದ್ಧ ಶಂಕರ್ ಬಿದರಿ ಸ್ಪರ್ಧೆ?

    ಒಂದು ವೇಳೆ ರಾಜಕೀಯಕ್ಕೆ ಬಂದರೂ ಅದು ಕುಟುಂಬ ರಾಜಕಾರಣವಾಗಲ್ಲ. ಪ್ರಜಾಪ್ರಭುತ್ವದ ಜನರು ಒಪ್ಪಿಕೊಂಡರೆ ಮಾತ್ರ ನಾನು ಜನ ನಾಯಕ ಆಗಬಲ್ಲೆ ಎಂದು ಸ್ಪಷ್ಟಪಡಿಸಿದರು. ಸಿಎಂ ಸಿದ್ದರಾಮಯ್ಯನವರು ತಮ್ಮ ಪುತ್ರ ಯತೀಂದ್ರರಿಗಾಗಿ ವರುಣಾ ಕ್ಷೇತ್ರವನ್ನು ತ್ಯಜಿಸಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

    ಇದನ್ನೂ ಓದಿ:  ಕ್ಷೇತ್ರ ಬದಲಾವಣೆಯ ಗುಟ್ಟು ಬಿಟ್ಟುಕೊಟ್ಟ ಸಿದ್ದರಾಮಯ್ಯ ಲೆಕ್ಕಾಚಾರ ಹೇಗಿದೆ?

  • ಪುತ್ರ ವ್ಯಾಮೋಹದ ನಡುವೆ ಅಗ್ನಿಪರೀಕ್ಷೆಗೆ ಸಿದ್ದು ರೆಡಿ…!

    ಪುತ್ರ ವ್ಯಾಮೋಹದ ನಡುವೆ ಅಗ್ನಿಪರೀಕ್ಷೆಗೆ ಸಿದ್ದು ರೆಡಿ…!

    – ಕ್ಷೇತ್ರ ಬದಲಾವಣೆಯ ಗುಟ್ಟು ಬಿಟ್ಟುಕೊಟ್ಟ ಸಿದ್ದರಾಮಯ್ಯ ಲೆಕ್ಕಾಚಾರ ಹೇಗಿದೆ?

    ಕೆ.ಪಿ.ನಾಗರಾಜ್
    ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಕ್ಯಾಲ್ಕುಲೇಟಿವ್ ರಿಸ್ಕ್ ತೆಗೆದು ಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಬಿಟ್ಟು ತಮಗೆ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮರುಳುತ್ತಿದ್ದಾರೆ. ಅಂದ ಮಾತ್ರಕ್ಕೆ ವರುಣಾ ಕ್ಷೇತ್ರದಲ್ಲಿ ಸಿಎಂಗೆ ವಿರೋಧವಿದೆ, ಸಿಎಂಗೆ ವರುಣಾ ಸೇಫ್ ಅಲ್ಲ ಎಂದರ್ಥವಲ್ಲ. ಈ ಕ್ಷಣಕ್ಕೆ ಸಿಎಂಗೆ ವರುಣಾ ಕ್ಷೇತ್ರ ತುಂಬಾ ಸೇಫ್ ಇದೆ. ಆದರೂ, ಅವರು ಕ್ಷೇತ್ರ ಬಿಡುತ್ತಿರುವುದಕ್ಕೆ ಕಾರಣ ಪುತ್ರ ವ್ಯಾಮೋಹ. ತಮ್ಮ ಮಗ ಡಾ. ಯತೀಂದ್ರರನ್ನು ಶಾಸಕನಾಗಿ ನೋಡಬೇಕೆಂಬ ಆಸೆ ಅವರನ್ನು ಇವತ್ತು ಕ್ಷೇತ್ರ ಬಿಡುವ ರೀತಿ ಮಾಡುತ್ತಿದೆ. ಈ ಮೂಲಕ ಸಿಎಂ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಅಗ್ನಿಪರೀಕ್ಷೆಗೆ ರೆಡಿಯಾಗುತ್ತಿದ್ದಾರೆ.

    ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುವ ಇಂಗಿತವನ್ನು ಸಿಎಂ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಅವರಿಗೆ ಹೊಸದೇನೂ ಅಲ್ಲ. 1983 ರಿಂದ ಒಟ್ಟು 7 ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಅದರಲ್ಲಿ ಐದು ಬಾರಿ ಗೆದ್ದಿದ್ದರು. ಅದರಲ್ಲೂ 2006ರಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ ನಡೆದ ಉಪಚುನಾವಣೆ ನಿಜಕ್ಕೂ ಒಂದು ಕದನ. ಅಂತಹ ಕದನದಲ್ಲಿ 257 ಮತಗಳಿಂದ ಕ್ಷೇತ್ರದ ಮತದಾರರು ಸಿದ್ದರಾಮಯ್ಯಗೆ ರಾಜಕೀಯ ಪುನರ್ ಜನ್ಮ ನೀಡಿದ್ದರು. ನಂತರ, ಕ್ಷೇತ್ರ ಪುನರ್ ವಿಂಗಡಣೆ ಆಗಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ವರುಣಾ ಪ್ರತ್ಯೇಕ ಕ್ಷೇತ್ರವಾಯಿತು. ಆಗ, ಸಿದ್ದರಾಮಯ್ಯ ತಮ್ಮ ಹುಟ್ಟೂರು ಸಿದ್ದರಾಮನ ಹುಂಡಿ ಸೇರುವ ವರುಣಾ ಕ್ಷೇತ್ರವನ್ನು ತುಂಬಾ ಲೆಕ್ಕಚಾರದ ಮೇಲೆಯೇ ಆಯ್ಕೆ ಮಾಡಿಕೊಂಡು ಚಾಮುಂಡೇಶ್ವರಿಯಿಂದ ಶಿಫ್ಟ್ ಆದರು. ಅವರ ಲೆಕ್ಕಾಚಾರ ಸರಿ ಇತ್ತು. ವರುಣಾ ಕ್ಷೇತ್ರ ಸೃಷ್ಟಿಯಾದ ಮೇಲೆ ನಡೆದ ಎರಡು ಚುನಾವಣೆಗಳಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

    ವರುಣಾ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಇದೆ. ಅದರ ಜೊತೆಗೆ, ದಲಿತರು, ಕುರುಬರು, ಹಿಂದುಳಿದ ವರ್ಗದವರು, ನಾಯಕರು, ಮುಸ್ಲಿಮರು, ಒಕ್ಕಲಿಗರ ಮತಗಳು ಇವೆ. ಇಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ದೊಡ್ಡ ಬೇಸ್ ಇಲ್ಲ. ಜೆಡಿಎಸ್ ಕಥೆ ಬಿಜೆಪಿಗಿಂತಾ ಕೆಟ್ಟದಾಗಿದೆ. ವಿರೋಧ ಪಕ್ಷಗಳ ಸಂಘಟನೆ ಇಲ್ಲದಿರುವುದು, ಸ್ಥಳೀಯ ಮಟ್ಟದ ಒಡಕುಗಳು ಸಿದ್ದರಾಮಯ್ಯಗೆ ವರುಣಾ ಕ್ಷೇತ್ರವನ್ನು ಮತ್ತಷ್ಟು ಗಟ್ಟಿ ಮಾಡಿಕೊಟ್ಟಿವೆ.

    ವರುಣಾ ಸೇಫ್!: ವರುಣಾ ಕ್ಷೇತ್ರದ ಜಾತಿ ಸಮೀಕರಣ ಮತ್ತು ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ಸ್ಥಿತಿ ಎಲ್ಲವನ್ನೂ ನೋಡಿದರೆ ಈ ಕ್ಷಣಕ್ಕೆ ಸಿದ್ದರಾಮಯ್ಯ ಪಾಲಿಗೆ ವರುಣಾ ಸೇಫ್ ಪ್ಲೇಸ್. ಹೀಗಾಗಿ, ಇಂತಹ ಕ್ಷೇತ್ರದಲ್ಲಿ ಮಗ ಯತೀಂದ್ರಗೆ ಟಿಕೆಟ್ ಕೊಡಿಸಿ ಚುನಾವಣೆಗೆ ನಿಲ್ಲಿಸಿದರೆ ಗೆಲ್ಲಿಸುವುದು ಸುಲಭ. ರಿಸ್ಕ್ ಇರೋ ಕ್ಷೇತ್ರದಲ್ಲಿ ಮಗನನ್ನು ಕಣಕ್ಕೆ ಇಳಿಸಿ ಚಾನ್ಸ್ ತೆಗೆದುಕೊಳ್ಳುವುದಕ್ಕಿಂತಾ ತನಗೆ ಸೇಫ್ ಆಗಿರೋ ಕ್ಷೇತ್ರವನ್ನು ಮಗನಿಗೆ ಬಿಟ್ಟು ತಾನೂ ಬೇರೆ ಕ್ಷೇತ್ರಕ್ಕೆ ಹೋಗುವುದೇ ಸರಿ ಅನ್ನುವುದು ಸಿಎಂ ಲೆಕ್ಕಚಾರ.

    ಈ ಎಲ್ಲಾ ಕಾರಣಕ್ಕೆ ಸಿಎಂ ಈಗ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಸಿಎಂಗೆ ವರುಣಾದಷ್ಟು ಸೇಫ್ ಅಲ್ಲ. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಇದ್ದ ಚಾಮುಂಡೇಶ್ವರಿ ಕ್ಷೇತ್ರವೇ ಬೇರೆ, ಕ್ಷೇತ್ರ ಪುನರ್ ವಿಂಗಡಣೆ ನಂತರದ ಚಾಮುಂಡೇಶ್ವರಿ ಕ್ಷೇತ್ರವೇ ಬೇರೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಕ್ಷೇತ್ರದ ಜಾತಿ ಲೆಕ್ಕಾಚಾರ ಬದಲಾಗಿವೆ. ಒಕ್ಕಲಿಗ ಮತಗಳ ಪ್ರಾಬಲ್ಯ ಕ್ಷೇತ್ರದಲ್ಲಿ ಹೆಚ್ಚಿದೆ. ಜೆಡಿಎಸ್ ಇಡೀ ಕ್ಷೇತ್ರದಲ್ಲಿ ಬಲವಾಗಿ ಬೇರೂರಿದೆ. ಇದಕ್ಕೆ ಸಾಕ್ಷಿ ಎಂಬಂತೆ, 2013ರ ನಂತರ ನಡೆದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ, ಹಾಲು ಒಕ್ಕೂಟ ಹೀಗೆ ಎಲ್ಲಾ ಸ್ಥರದ ಚುನಾವಣೆಯಲ್ಲೂ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೂರು ದಿನ ಈ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ ಕೂಡ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೆಲ್ಲದರ ಆಧಾರದ ಮೇಲೆ ಈ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯ ರೀತಿ ಮಾರ್ಪಟ್ಟಿದೆ.

    ರಿಸ್ಕ್ ಯಾಕೆ ತಗೋತಿದ್ದಾರೆ ಸಿಎಂ?: ಈ ಕಾರಣದಿಂದಲೇ ಸಿಎಂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದು ಒಂದು ರೀತಿ ಅಗ್ನಿಪರೀಕ್ಷೆ ರೀತಿ ಕಾಣುತ್ತಿದೆ. ವಾಸ್ತವ ಹೀಗಿದ್ದರೂ ಸಿಎಂ ಯಾಕೆ ಇಂತಹ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಅನ್ನುವುದಕ್ಕೂ ಕಾರಣವಿದೆ. ಒಕ್ಕಲಿಗರ ಪ್ರಾಬಲ್ಯ ಕ್ಷೇತ್ರದಲ್ಲಿ ಇದ್ದರೂ ಸಹಿತ ಹಿಂದುಳಿದ ವರ್ಗಗಳ ಮತಗಳು ಕೂಡಾ ಹೆಚ್ಚಿವೆ. ಅದನ್ನೆಲ್ಲಾ ತಮ್ಮ ಹೆಸರಿನಲ್ಲಿ ಒಗ್ಗೂಡಿಸಬಹುದು. ಸಿಎಂ ಆಗಿ ತಮ್ಮ ಸಾಧನೆ ದೊಡ್ಡದಿದೆ ಆ ವರ್ಚಸ್ಸು ಕೆಲಸ ಮಾಡುತ್ತೆ. ಅಲ್ಲದೆ, ಮುಂದೆಯೂ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಮಾತನ್ನೇ ಮತ್ತಷ್ಟು ಗಟ್ಟಿ ಮಾಡಿದರೆ ಜನ ತಮ್ಮನ್ನು ಕೈ ಬಿಡುವುದು ಸಾಧ್ಯವೇ ಇಲ್ಲ ಅನ್ನೋದು ಸಿದ್ದರಾಮಯ್ಯ ಅವರ ಪೊಲಿಟಿಕಲ್ ಲೆಕ್ಕಾಚಾರ.

    ಒಂದಂಥೂ ಸತ್ಯ. ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ತಾನೂ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗುತ್ತಿರುವುದು ರಿಸ್ಕ್ ಅಂತಾ. ಆದರೆ, ಮಗನ ರಾಜಕೀಯ ಭವಿಷ್ಯ ಭದ್ರ ಮಾಡಲು ತಂದೆಯಾಗಿ ಇಂತಹ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಅವರು ಹಿಂದೆ ಮುಂದೆ ನೋಡುತ್ತಿಲ್ಲ ಅಷ್ಟೆ. ಅಕ್ಷರಶಃ ಕದನದಂತಾ ಚಾಮುಂಡೇಶ್ವರಿ ಉಪ ಚುನಾವಣೆ ಸಿದ್ದರಾಮಯ್ಯ ರಾಜಕೀಯ ಜೀವನದ ದೊಡ್ಡ ಭಾಗ. ಈಗ, ಸಿಎಂ ಆದ ನಂತರ ಅದೇ ಕ್ಷೇತ್ರದಲ್ಲಿ ಸವಾಲಿಗೆ ಎದೆಯೊಡ್ಡೋದಕ್ಕೆ ರೆಡಿಯಾಗಿದ್ದಾರೆ. ಹೀಗಾಗಿ, ಚಾಮುಂಡೇಶ್ವರಿ ಕ್ಷೇತ್ರ ಮುಂದಿನ ವಿಧಾನಸಭಾ ಚುನಾವಣೆಯ ನಂಬರ್ ಒನ್ ಸ್ಟಾರ್ ಕ್ಷೇತ್ರವಾಗುವುದು ನಿಶ್ಚಿತ.

  • ಸಿಎಂ ತವರು ಜಿಲ್ಲೆಯ ಈ ಗ್ರಾಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ರೂ ಜನರಿಗೆ ನೆಮ್ಮದಿಯಿಲ್ಲ

    ಸಿಎಂ ತವರು ಜಿಲ್ಲೆಯ ಈ ಗ್ರಾಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ರೂ ಜನರಿಗೆ ನೆಮ್ಮದಿಯಿಲ್ಲ

    ಮೈಸೂರು: ಆ ಹಳ್ಳಿ ಹೇಳಿ ಕೇಳಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸೋ ಗ್ರಾಮ. ಗ್ರಾಮದಲ್ಲಿ ಒಳ್ಳೆ ರಸ್ತೆ ಉಂಟು, ಚರಂಡಿ, ಕುಡಿಯಲು ನೀರು, ಅಂಗನವಾಡಿ, ಶಾಲೆ ಎಲ್ಲಾ ಉಂಟು. ಆದರೂ ಆ ಊರಿನ ಜನರಿಗೆ ಕಳೆದ ಎಂಟತ್ತು ವರ್ಷದಿಂದ ನೆಮ್ಮದಿ ಇಲ್ಲ.

    ಸಿಎಂ ಸಿದ್ದರಾಮಯ್ಯನವರ ತವರು ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಳ್ಳಿ ಸೋಮೇಶ್ವರಪುರ. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯವೂ ಇದೆ. ಆದ್ರೆ ಅಕ್ರಮ ಮದ್ಯ ಮಾರಾಟದಿಂದ ಊರಿನ ಜನರ ನೆಮ್ಮದಿಯೇ ಹಾಳಾಗಿ ಹೋಗಿದೆ.

    ಸೋಮೇಶ್ವರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಬಡ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಲಿ ಮಾಡಿ 300 ರೂ. ಗಳಿಸಿದ್ರೆ ಅದ್ರಲ್ಲಿ 200 ರೂ. ಹಣವನ್ನು ಮದ್ಯಕ್ಕಾಗಿ ಬಳಕೆ ಮಾಡ್ತಿದ್ದಾರೆ. ಮಾತ್ರವಲ್ಲದೇ ಮನೆಗೆ ಹೋಗಿ ಹೆಂಡತಿ ಮಕ್ಕಳಿಗೆ ತೊಂದ್ರೆ ಕೊಡ್ತಿದ್ದಾರೆ. ಇದರಿಂದ ಇಲ್ಲಿನ ಜನ ಬಹಳ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತಾ ಗ್ರಾಮಸ್ಥ ಮಹೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ರು.

    ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲೂ ಮದ್ಯ ಮಾರಾಟವಿಲ್ಲ. ಹೀಗಾಗಿ ಮದ್ಯಪಾನಿಗಳು ಇಲ್ಲಿಗೆ ಬಂದು ಮದ್ಯ ಖರೀದಿಸುತ್ತಾರೆ. ಹೀಗೆ ಕೂಲಿ ಕಾರ್ಮಿಕರು ತಾವು ದುಡಿದ ದುಡ್ಡನ್ನೆಲ್ಲಾ ಮದ್ಯಕ್ಕೆ ಸುರಿಯುತ್ತಿದ್ದು, ಹಲವರ ಸಂಸಾರ ಬೀದಿಗೆ ಬೀಳುವಂತಾಗಿದೆ. ಅಲ್ಲದೆ ಯುವಕರೂ ದಾರಿ ತಪ್ಪುತ್ತಿದ್ದಾರೆ. ಮದ್ಯ ಮಾರಾಟದ ವಿರುದ್ಧ ಗ್ರಾಮಸ್ಥರು ಹೋರಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಗ್ರಾಮದ ನಿವಾಸಿ ಗುರು ಮಲ್ಲೇಶ್ ಅಳಲು ತೋಡಿಕೊಂಡ್ರು.

    ಒಟ್ಟಾರೆ ಸಿಎಂ ತವರು ಕ್ಷೇತ್ರದ ಗ್ರಾಮವೊಂದರ ಕಥೆ ಹೀಗಾದ್ರೆ ಉಳಿದ ಪ್ರದೇಶಗಳ ಸ್ಥಿತಿಯೇನು ಅನ್ನೋದೇ ಜನಸಾಮಾನ್ಯರ ಮುಂದಿರುವ ಪ್ರಶ್ನೆಯಾಗಿದೆ. ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಅಂತ ಕಾದು ನೋಡ್ಬೇಕು.