Tag: varuna

  • ಬಿಎಸ್‍ವೈ ಪುತ್ರನಿಗೆ ವರುಣಾ ಟಿಕೆಟ್ ಕೈ ತಪ್ಪಿಸಿದ್ದು ಯಾರು?: ಕುದಿಮೌನ ತಾಳಿದ ಬಿಎಸ್‍ವೈ

    ಬಿಎಸ್‍ವೈ ಪುತ್ರನಿಗೆ ವರುಣಾ ಟಿಕೆಟ್ ಕೈ ತಪ್ಪಿಸಿದ್ದು ಯಾರು?: ಕುದಿಮೌನ ತಾಳಿದ ಬಿಎಸ್‍ವೈ

    ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಪುತ್ರರ ನಡುವೆ ಬಿಗ್ ಫೈಟ್ ಎಂದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ವರುಣಾದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪುತ್ತಿದಂತೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ.

    ವರುಣಾ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶಕ್ಕೆ ಬಿಎಸ್ ಯಡಿಯೂರಪ್ಪ ಆಗಮಿಸುವುದಕ್ಕೂ ಮುನ್ನ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರಿಗೆ ಟಿಕೆಟ್ ಘೋಷಣೆ ಮಾಡಬಾರದು. ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ. ನೀವು ಬಿ-ಫಾರಂ ಕೊಟ್ಟರೂ, ನಾವು ಸಿ-ಫಾರಂ ಕೊಡುತ್ತೇವೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದರು ಎನ್ನಲಾಗಿದೆ.

    ರಾಮ್ ಲಾಲ್ ಸೂಚನೆ ಮೇರೆಗೆ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದರು. ಈ ಘೋಷಣೆ ಪ್ರಕಟವಾದ ಬೆನ್ನಲ್ಲೇ ಕಾರ್ಯಕರ್ತರು ಆಕ್ರೋಶಗೊಂಡು ವೇದಿಕೆಯ ಮೇಲೆ ಗಲಾಟೆ ಮಾಡಿದರು. ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

    ಬಿಜೆಪಿ ಇಂದು ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ ಅದರಲ್ಲಿ ವರುಣಾ ಮತ್ತು ಬಾದಾಮಿಯ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹೀಗಾಗಿ ವರುಣಾ ಕ್ಷೇತ್ರದ ಟಿಕೆಟ್ ಘೋಷಣೆ ಕುರಿತು ಇಂದು ಸಂಜೆ ಬಿಎಸ್‍ವೈ ಅವರು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯದಲ್ಲಿ ಬಿಜೆಪಿ ನಾಯಕರ ನಡುವೆ ಅಸಮಾಧಾನವಿದೆ ಎನ್ನುವ ಸುದ್ದಿ ಈ ಹಿಂದೆ ಕೇಳಿ ಬಂದಾಗ ನಾಯಕರು ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿ ಸುದ್ದಿಗಳನ್ನು ತಳ್ಳಿ ಹಾಕುತ್ತಿದ್ದರು. ಆದರೆ ಈಗ ಟೆಕೆಟ್ ತಪ್ಪಿಸುವ ಮೂಲಕ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ರಾಜ್ಯದ ಹಿರಿಯ ನಾಯಕರೇ ಷಡ್ಯಂತ್ರ ನಡೆಸಿದ್ದರಾ ಎನ್ನುವ ಪ್ರಶ್ನೆ ಮತ್ತೆ ಹುಟ್ಟಿಕೊಂಡಿದ್ದು ಗೊಂದಲವನ್ನು ಪರಿಹರಿಸಬೇಕಿದೆ.

    ಈ ನಡುವೆ ಬಿಜೆಪಿ ಹೈಕಮಾಂಡ್ ಮೇಲೆ ಯಡಿಯೂರಪ್ಪ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದ್ದು, ಯಾರೊಂದಿಗೂ ಮಾತನಾಡದೇ ಬಿಎಸ್‍ವೈ `ಕುದಿ’ಮೌನ ತಾಳಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈ ಕುರಿತು ಬಿಎಸ್‍ವೈ ತಮ್ಮ ಆಪ್ತರೊಂದಿಗೆ ಆಕ್ರೋಶ ಹೊರ ಹಾಕಿರುವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಈ ನಡುವೆ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿಸಲು ಆರ್ ಎಸ್‍ಎಸ್ ನಾಯಕರು ಅಡ್ಡಗಾಲು ಹಾಕಿದೆ ಎನ್ನಲಾಗಿದ್ದು, ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಲಾಗಿತ್ತು. ಹಲವು ಆರ್ ಎಸ್‍ಎಸ್ ನಾಯಕರು ಬಿಎಸ್‍ವೈ ಪುತ್ರ ವಿಜಯೇಂದ್ರನಿಗೆ ಟಿಕೆಟ್ ನೀಡಬಾರದು ಎಂದು ಪ್ರಬಲವಾಗಿ ವಾದ ಮಂಡಿಸಿದ್ದರು. ಈ ಒತ್ತಡಕ್ಕೆ ಮಣಿದು ವಿಜಯೇಂದ್ರ ಅವರಿಗೆ ಬಿ ಫಾರಂ ನೀಡಿಲ್ಲ ಎನ್ನಲಾಗಿದೆ.

     

  • ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಿಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ನಿಲ್ತಾರೆ ಅಂತಾ ಹೇಳಲಾಗುತ್ತಿತ್ತು. ವಿಜಯೇಂದ್ರ ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಹ ಮುಂದಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಬಿಎಸ್‍ವೈ ಪುತ್ರನಿಗೆ ಬಿ ಫಾರಂ ತಪ್ಪಿದೆ.

    ನಂಜನಗೂಡು ಕ್ಷೇತ್ರದಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ಹೆಲಿಕಾಪ್ಟರ್ ನಿಂದ ಬಂದಿಳಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಫೋನ್ ಕಾಲ್ ಬಂದಿತ್ತು. ಹೈಕಮಾಂಡ್ ಒಪ್ಪಿಗೆ ಇಲ್ಲದೇ ವಿಜಯೇಂದ್ರ ನಾಮಪತ್ರವನ್ನು ಸಲ್ಲಿಸುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‍ಲಾಲ್ ಬಿಎಸ್‍ವೈಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

    ನಾವು ಪಟ್ಟಿ ಫೈನಲ್ ಮಾಡುವರೆಗೂ ನಿಮ್ಮ ಪುತ್ರ ನಾಮಪತ್ರವನ್ನು ಸಲ್ಲಿಸಬಾರದು. ಒಂದು ವೇಳೆ ನೀವು ಬಿ ಫಾರಂ ಕೊಟ್ಟರೂ, ನಾವು ಸಿ ಫಾರಂ ಕೊಡುತ್ತೇವೆ ಎಂದು ಕರೆ ಮಾಡಿ ತಿಳಿಸಿದ್ದಾರೆ.

    ರಾಮ್‍ಲಾಲ್ ಅವರ ಕರೆ ಬರುತ್ತಿದ್ದಂತೆ ಸಮಾವೇಶದಲ್ಲಿ ವರುಣಾ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಲಾಗುವುದು ಅಂತಾ ಯಡಿಯೂರಪ್ಪ ಘೋಷಣೆ ಮಾಡಿದ್ರು. ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಂತೆ ಕಾರ್ಯಕರ್ತರೆಲ್ಲಾ ಆಕ್ರೋಶಗೊಂಡು ವಿಜಯೇಂದ್ರ ಅವರನ್ನು ಮುತ್ತಿಗೆ ಹಾಕಿದ್ರು.

    ರಾಮ್‍ಲಾಲ್ ಕರೆ ಮಾಡಿರುವ ವಿಚಾರ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಹ ತಿಳಿದಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ. ನಂಜನಗೂಡಿನಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಗೆ ಅಮಿತ್ ಶಾ ವರದಿಯನ್ನು ಕೇಳಿದ್ದಾರೆ ಎನ್ನಲಾಗಿದೆ.

    ಷಡ್ಯಂತ್ರ: ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಆರ್‍ಎಸ್‍ಎಸ್ ನಾಯಕರು ಹೈಕಮಾಂಡ್ ಮೂಲಕ ನಾಮಪತ್ರ ಸಲ್ಲಿಸಬಾರದೆಂದು ಹೇಳಿಸಿತಾ ಅಥವಾ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡೆಸಿದ ಷಡ್ಯಂತ್ರಕ್ಕೆ ವಿಜಯೇಂದ್ರ ಬಲಿಯಾದ್ರಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಈಗ ಹರಿದಾಡುತಿದ್ದು, ಕೊನೆ ಗಳಿಗೆಯಲ್ಲಿ ಈ ಬದಲಾವಣೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ರಾಜ್ಯ ನಾಯಕರು ಉತ್ತರ ನೀಡಬೇಕಿದೆ. ಇದನ್ನೂ ಓದಿ: ಆರ್‍ಎಸ್‍ಎಸ್ ವರ್ಸಸ್ ಯಡಿಯೂರಪ್ಪ: ಆಕ್ರೋಶಕ್ಕೆ ತಿರುಗಿದ ಬಿಜೆಪಿ ಭಿನ್ನಮತ

  • ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್ ಕಣಕ್ಕೆ

    ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್ ಕಣಕ್ಕೆ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ 4ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಬದಾಮಿ, ವರುಣಾ ಕ್ಷೇತ್ರದಿಂದ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ.

    ಯಶವಂತಪುರದಿಂದ ಜಗ್ಗೇಶ್, ಬೇಲೂರಿನಿಂದ ಎಚ್.ಕೆ.ಸುರೇಶ್, ಹಾಸನದಿಂದ ಪ್ರೀತಂ ಗೌಡ, ರಾಮನಗರ ದಿಂದ ಎಚ್.ಲೀಲಾವತಿ, ಕನಕಪುರ ದಿಂದ ನಂದಿನಿ ಗೌಡ, ಬಿಟಿಎಂ ಲೇಔಟ್ ನಿಂದ ಲಲ್ಲೇಶ್ ರೆಡ್ಡಿ, ಭದ್ರಾವತಿ ಯಿಂದ ಜಿ.ಆರ್.ಪ್ರವೀಣ್ ಪಾಟೀಲ್ ಕಣಕ್ಕೆ ಇಳಿಯಲಿದ್ದಾರೆ.

    ರಾಜ್ಯಾಧ್ಯಕ್ಷ , ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಈ ಬಾರಿ ಕಣಕ್ಕಿಳಿಯಲಿರುವ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಏಪ್ರಿಲ್ 8ರಂದು ಬಿಡುಗಡೆ ಮಾಡಿತ್ತು.

    ಏಪ್ರಿಲ್ 16 ರಂದು ಬಿಜೆಪಿ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ 82 ಮಂದಿಗೆ ಟಿಕೆಟ್ ಸಿಕ್ಕಿತ್ತು. 59 ಮಂದಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಏಪ್ರಿಲ್ 20 ರಂದು ಬಿಡುಗಡೆ ಮಾಡಿತ್ತು.

     

  • ವಿಜಯೇಂದ್ರ ಕೈ ತಪ್ಪಿದ ವರುಣಾ ಕ್ಷೇತ್ರ ಟಿಕೆಟ್ – ಕಾರ್ಯಕರ್ತರ ತೀವ್ರ ಆಕ್ರೋಶ

    ವಿಜಯೇಂದ್ರ ಕೈ ತಪ್ಪಿದ ವರುಣಾ ಕ್ಷೇತ್ರ ಟಿಕೆಟ್ – ಕಾರ್ಯಕರ್ತರ ತೀವ್ರ ಆಕ್ರೋಶ

    ಮೈಸೂರು: ತೀವ್ರ ಕುತೂಹಲ ಮೂಡಿಸಿದ್ದ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಿಲ್ಲ, ಇಲ್ಲಿ ಸಾಮಾನ್ಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂಪ್ಪ ತಿಳಿಸಿದ್ದಾರೆ.

    ಇಂದು ವರುಣಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿಎಸ್‍ವೈ, ಕ್ಷೇತ್ರದ ಜನರು ತಮ್ಮ ಮಗ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದರು. ಕಾರ್ಯಕರ್ತರ ಒತ್ತಡದ ಮೇರೆಗೆ ವಿಜಯೇಂದ್ರರನ್ನು ಕ್ಷೇತ್ರ ಪ್ರವಾಸ ಮಾಡಲು ಸೂಚಿಸಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಒಂದೇ ಕ್ಷೇತ್ರಕ್ಕೆ ಸಿಮೀತವಾಗುವುದು ಬೇಡ. ಅದ್ದರಿಂದ ವರುಣಾ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ತಿಳಿಸಿದರು.

    ಬಿಎಸ್‍ವೈ ಅವರ ನಿರ್ಧಾರ ಸಮಾವೇಶದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಉಂಟುಮಾಡಿದೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ವೇದಿಕೆಯಲ್ಲಿ ಗದ್ದಲ ಉಂಟು ಮಾಡಿದ್ದಾರೆ. ಅಲ್ಲದೇ ವಿಜಯೇಂದ್ರ ಅವರಿಗೆ ಮುತ್ತಿಗೆ ಹಾಕಿ ಕ್ಷೇತ್ರದಿಂದ ತಾವೇ ಸ್ಪರ್ಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸಮಾವೇಶಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರ ಅವರೇ ಪಕ್ಷ ಅಭ್ಯರ್ಥಿ ಎಂದು ತಿಳಿದಿದ್ದರು. ಇದರಂತೆ ವಿಜಯೇಂದ್ರ ಅವರು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿಲು ಸಿದ್ಧತೆ ಕೂಡ ನಡೆಸಿದ್ದರು.

    ಬಿಜೆಪಿ ಹೈಕಮಾಂಡ್ ಈ ನಡೆಯಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಬದಲಾವಣೆಯಾಗುವ ಸಾಧ್ಯತೆಗಳು ಇದೆ. ಆರಂಭದಿಂದಲೂ ಬಿಎಸ್‍ವೈ ಅವರನ್ನೇ ರಾಜ್ಯದ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದ ಹೈಕಮಾಂಡ್ ರಾಜ್ಯಾಧ್ಯಕ್ಷ ಪುತ್ರನಿಗೆ ಟಿಕೆಟ್ ನೀಡದಿರುವುದು ಕುತೂಹಲ ಮೂಡಿಸಿದೆ.

  • ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಮೈಸೂರು: ಚುನಾವಣಾ ಪ್ರಚಾರದ ಭರದಲ್ಲಿ ಮಾಜಿ ಸಿಎಂ ಪುತ್ರ ವಿಜಯೇಂದ್ರ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ.

    ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯೂರು ಗ್ರಾಮದಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಪ್ರಚಾರ ನಡೆಸಿದ್ರು. ಬೈಕ್ ಸವಾರ ಹಾಗೂ ಹಿಂಬದಿ ಸವಾರ ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದೆ. ಆದ್ರೂ ನಿಯಮವನ್ನ ಗಾಳಿಗೆ ತೂರಿದ ವಿಜಯೇಂದ್ರ ಬೈಕ್ ನ ಹಿಂಬದಿಯಲ್ಲಿ ಕುಳಿತು ಸಾಗಿದರು.

    ಬಿಜೆಪಿ ಮೂರನೇ ಪಟ್ಟಿಯಲ್ಲೂ ವಿಜಯೇಂದ್ರ ಅವರ ಹೆಸರು ಘೋಷಣೆ ಆಗಿಲ್ಲ. ಆದ್ರೂ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಶ್ರೀ ರಾಮುಲು, ಮಾಜಿ ಸಚಿವರುಗಳಾದ ವಿ.ಶ್ರೀನಿವಾಸ್ ಪ್ರಸಾದ್, ಗೋವಿಂದ್ ಕಾರಜೋಳ, ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣ್ಣ ಸಿದ್ದಯ್ಯ, ಹಿಂದುಳಿದ ಮೋರ್ಚ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.

  • ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಇಂದು ಭಾವುಕರಾದ್ರು.

    ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅವನು ಕಾಯಿಲೆ ಇತ್ತು, ಸತ್ತು ಹೋದ ಅಂತ ಮಗನನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ರು.

    ನಾನು ವರುಣಾದಲ್ಲಿ 30 ಸಾವಿರ ವೋಟುಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ತಾನೆ ಅಂತ ಮುಖ್ಯಮಂತ್ರಿ ಭಾವುಕ ಭಾಷಣ ಮಾಡಿದ್ರು.

    ಮಣ್ಣಿನ ಮಗನಿಗೆ ಮತ ಹಾಕ್ತಿರೋ? ಅವನ್ಯಾರಿಗೋ ಮತ ಹಾಕ್ತೀರಾ? ಅವನಿಗೂ ಕ್ಷೇತ್ರಕ್ಕೂ ಸಂಬಂಧ ಏನು? ಅವರ ಮಗ, ಇವರ ಮಗ ಅಂದವ್ರಿಗೆ ಮತ ಹಾಕ್ತೀರಾ? ವರುಣಾ ಮತ್ತು ಚಾಮುಂಡೇಶ್ವರಿ ನನ್ನ ಕಣ್ಣು ಅಂತ ಸಿದ್ದರಾಮಯ್ಯ ಯಡಿಯೂರಪ್ಪರ ಕಿರಿಯ ಮಗ ವಿಜಯೇಂದ್ರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ರು.

  • ಸಿಎಂ ಸೋಲಿಸಲು ಎಲ್‍ಡಿಎನ್, ಜಿಎಲ್‍ಡಿಎನ್ ತಂತ್ರ ಹೆಣೆದ ಶ್ರೀನಿವಾಸ ಪ್ರಸಾದ್!

    ಸಿಎಂ ಸೋಲಿಸಲು ಎಲ್‍ಡಿಎನ್, ಜಿಎಲ್‍ಡಿಎನ್ ತಂತ್ರ ಹೆಣೆದ ಶ್ರೀನಿವಾಸ ಪ್ರಸಾದ್!

    ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಆಗಿರುವ ಸೋಲಿಗೆ ಸಿಎಂ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಳ್ಳಲು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಚಾಮುಂಡೇಶ್ವರಿಯಲ್ಲಿ ಎಲ್‍ಡಿಎನ್ ಮತ್ತು ವರುಣಾ ಕ್ಷೇತ್ರದಲ್ಲಿ ಜಿಎಲ್‍ಡಿಎನ್ ತಂತ್ರವನ್ನು ಹೆಣೆದಿದ್ದಾರೆ.

    ಬಿಜೆಪಿಯ ಗೆಲುವಿಗೆ ವರುಣಾದಲ್ಲಿ ಲಿಂಗಾಯತ, ದಲಿತ, ನಾಯಕ(ಎಲ್‍ಡಿಎನ್) ಮತಗಳನ್ನು ಕ್ರೋಢೀಕರಿಸುವುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ, ದಲಿತ, ನಾಯಕ(ಜಿಎಲ್‍ಡಿಎನ್) ಮತಗಳನ್ನು ಕ್ರೋಢೀಕರಿಸಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಇದೇ ವಿಚಾರವಾಗಿ ಲಿಂಗಾಯತ ಮತ್ತು ವೀರಶೈವರ ಮತಗಳನ್ನು ಸೆಳೆಯಲು ಸುತ್ತೂರು ಮಠದ ಸ್ವಾಮಿಗಳ ಜೊತೆ ಶ್ರೀನಿವಾಸ್ ಪ್ರಸಾದ್ ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆಯನ್ನು ನಡೆಸಿದ್ದಾರೆ.

    ವರುಣಾ ಕ್ಷೇತ್ರದಲ್ಲಿ 60,000 ಲಿಂಗಾಯತರು, 42,000 ಪರಿಶಿಷ್ಠ ಜಾತಿ, 24,000 ಪರಿಶಿಷ್ಠ ಪಂಗಡ, 33,000 ಕುರುಬರು ಹಾಗೂ 13,000 ಒಕ್ಕಲಿಗ ಮತಗಳಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚು ಒಕ್ಕಲಿಗರ ಮತಗಳಿದ್ದು ನಂತರದ ಸ್ಥಾನದಲ್ಲಿ ಕುರುಬ, ನಾಯಕ, ಲಿಂಗಾಯತ ಮತ್ತು ದಲಿತ ಮತಗಳಿವೆ.

    2013ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 29,641 ಮತಗಳ ಅಂತರದಿಂದ ಸೋಲಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‍ ನ ಜಿಟಿ ದೇವೇಗೌಡ ಅವರು ಕಾಂಗ್ರೆಸ್‍ನ ಎಂ ಸತ್ಯನಾರಾಯಣ ಅವರನ್ನು 7,103 ಮತಗಳಿಂದ ಸೋಲಿಸಿದ್ದರು.

  • ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ದ್ವಂದ್ವದಲ್ಲಿ ನಾನು ಇದ್ದೇನೆ: ಎಲ್ ರೇವಣಸಿದ್ದಯ್ಯ

    ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ದ್ವಂದ್ವದಲ್ಲಿ ನಾನು ಇದ್ದೇನೆ: ಎಲ್ ರೇವಣಸಿದ್ದಯ್ಯ

    ಮೈಸೂರು: ಮಾಜಿ ಪೋಲಿಸ್ ಅಧಿಕಾರಿ ಲಿಂಗಾಯತ ಮುಖಂಡ ಎಲ್ ರೇವಣಸಿದ್ದಯ್ಯ ಅವರು ಬಹಿರಂಗವಾಗಿ ಕಾಂಗ್ರೆಸ್ ಮತ್ತು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿಎಂಗಾಗಿ ನನ್ನ ಸಮುದಾಯದ ವಿರೋಧ ಕಟ್ಟಿಕೊಂಡು ಪ್ರಚಾರ ಮಾಡಿದೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದೆ. ಸಿದ್ದರಾಮಯ್ಯ ಗೆದ್ದ ನಂತರ ನನಗೆ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ಇದು ನನಗೆ ಬೇಸರ ಮೂಡಿಸಿದೆ ಎಂದರು.

    ನನಗೆ ಕಾಂಗ್ರೆಸ್ ನಲ್ಲಿ ಬೇಸರವಾಗಿದೆ. ಆದರೆ ಯಾವ ಕಾರಣಕ್ಕೆ ಬೇಸರ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ಎಂಬ ದ್ವಂದ್ವ ದಲ್ಲಿ ನಾನಿರುವುದು ಸತ್ಯ ಎಂದು ಸ್ಪಷ್ಟಪಡಿಸಿದರು.

    ಸಿಎಂ ಜೊತೆ ಮಾತನಾಡುತ್ತೇನೆ. ನನಗಾಗಿರುವ ನೋವುಗಳನ್ನು ಅವರ ಮುಂದೆ ಹೇಳುತ್ತೇನೆ. ತದನಂತರದಲ್ಲಿ ಮುಂದಿನ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ. ಭಾವನಾತ್ಮಕವಾದ ನೋವುಗಳು ನನಗೆ ಆಗಿವೆ ಎಂದರು.

    ಡಾ. ಯತೀಂದ್ರ ಅವರು ಪ್ರತಿಕ್ರಿಯಿಸಿ, ರೇವಣ್ಣಸಿದ್ದಯ್ಯ ಅವರಿಗೆ ಅಸಮಾಧಾನವಾಗಿರುವುದು ಸತ್ಯ. ಹಾಗಾಗಿ ಇಂದು ಮಾತುಕತೆಗೆ ಬಂದಿದ್ದೇನೆ. ತಂದೆಯ ಸೂಚನೆ ಮೇರೆಗೆ ಮಾತುಕತೆಗೆ ಬಂದಿದ್ದೇನೆ. ನಮ್ಮ ತಂದೆ ರೇವಣ್ಣಸಿದ್ದಯ್ಯ ಜೊತೆ ಮಾತನಾಡಿದ ತಕ್ಷಣ ಸಮಸ್ಯೆ ಬಗೆಹರಿಯುತ್ತದೆ. ರೇವಣ್ಣಸಿದ್ದಯ್ಯ ಅವರು ಕಾಂಗ್ರೆಸ್ ಬಿಡುವುದಿಲ್ಲ. ನನ್ನ ಪರವಾಗಿ ಪ್ರಚಾರ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಭಾನುವಾರ ಬಿಎಸ್‍ವೈ ಪುತ್ರ ಬಿವೈ ವಿಜಯೇಂದ್ರ ಅವರು ರೇವಣಸಿದ್ದಯ್ಯ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ರೇವಣಸಿದ್ದಯ್ಯ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರತೊಡಗಿದೆ.

  • ವಿಜಯೇಂದ್ರ ಯಾಕೆ, ಅವರ ಅಪ್ಪ ಯಡಿಯೂರಪ್ಪ ಬಂದು ನಿಲ್ಲಲಿ: ಸಿಎಂ ಸಿದ್ದರಾಮಯ್ಯ

    ವಿಜಯೇಂದ್ರ ಯಾಕೆ, ಅವರ ಅಪ್ಪ ಯಡಿಯೂರಪ್ಪ ಬಂದು ನಿಲ್ಲಲಿ: ಸಿಎಂ ಸಿದ್ದರಾಮಯ್ಯ

    ಮೈಸೂರು: ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಯಾಕೆ ಅವರಪ್ಪ ಯಡಿಯೂರಪ್ಪ ಬೇಕಾದ್ರೆ ಬಂದು ಸ್ಪರ್ಧೆ ಮಾಡಲಿ ಅಂತಾ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

    ಯಡಿಯೂರಪ್ಪಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಅವರು ಬಂದ ತಕ್ಷಣ ಜನರು ಓಡೋಡಿ ಬರುವದಿಲ್ಲ. ನನ್ನ ಮಗ ಬಂದು ಚುನಾವಣೆಗೂ ನಿಂತರೂ ಸಿಎಂ ಮಗ ಅಂತಾ ವೋಟ್ ಹಾಕಲ್ಲ. ಸಿಎಂ ಆಗಿ ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆ. ಈ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನೇ ಹೊರತು ಯಡಿಯೂರಪ್ಪ ಅಲ್ಲ. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋಲ್ಲ. ಜನರಿಗೆ ಯಾರಿಗೆ ವೋಟ್ ಹಾಕಬೇಕು ಅಂತ ಗೊತ್ತಿದೆ. ಆ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರು ಬೇಕಾದ್ರು ಎಲ್ಲೆಲ್ಲೋ ನಿಲ್ತಿದ್ರು ಅಂತಾ ಅಂದ್ರು.

    ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ನಿರ್ಧಾರ ಮಾಡಿದ್ದಾರೆ. ಈ ಕ್ಷೇತ್ರದ ಜನರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವರೆಲ್ಲ ನನಗೆ ಮತ ಹಾಕ್ತಾರೆ ಅಂತ ನನಗೆ ವಿಶ್ವಾಸವಿದೆ. ಕ್ಷೇತ್ರದಲ್ಲಿ 5 ದಿನ ಪ್ರಚಾರ ನಡೆಸಿದ್ದೇನೆ. ನಾನು ಯಾವತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ದೂರ ಉಳಿದಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನ ಜಾಸ್ತಿ ಭೇಟಿ ಮಾಡ್ತಿದ್ದೆ. ಹಾಗಾಗಿ ಗೆಲ್ಲುವ ವಿಶ್ವಾಸ ನನಗಿದೆ ಅಂತಾ ಸಿಎಂ ಹೇಳಿದರು.

    ನಾಳೆಯಿಂದ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡ್ತಿನಿ. ಮೈಸೂರು ಪ್ರವಾಸ ನಂತರ ರಾಜ್ಯ ಪ್ರವಾಸ ಕೈಗೊಳ್ಳುವುದರ ಜೊತೆಗೆ ವರುಣಾ ಕ್ಷೇತ್ರದ ಪ್ರಚಾರಕ್ಕೆ ಬರ್ತಿನಿ. ನಾಳೆಯಿಂದ ದಾವಣಗೆರೆ ಸೇರಿದಂತೆ ಹಲವೆಡೆ ಪ್ರಚಾರ ಮಾಡ್ತಿನಿ. 8ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.