ಚಾಮರಾಜನಗರ: ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಪ್ರತಿಷ್ಠೆ ಪಣಕ್ಕಿಡಲು ಹೊರಟಿರುವ ಮಾಜಿ ಸಚಿವ ವಿ.ಸೋಮಣ್ಣ (V.Somanna) ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ (Congress) ರಣತಂತ್ರ ಹೆಣೆಯುತ್ತಿದೆ. ವರುಣಾದಲ್ಲಿ ಹೆಚ್ಚು ಕೇಂದ್ರೀಕರಿಸದಂತೆ ಚಾಮರಾಜನಗರದಲ್ಲಿ (Chamarajanagara) ಕಟ್ಟಿ ಹಾಕಲು ರಣವ್ಯೂಹ ರಚಿಸಿದೆ.
ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲು ಬಿಜೆಪಿ ಸೋಮಣ್ಣಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಾಗೆ ಸೋಮಣ್ಣ ಹೋಗದಂತೆ ಚಾಮರಾಜನಗರದಲ್ಲೇ ಕಟ್ಟಿ ಹಾಕಲು ಕಾಂಗ್ರೆಸ್ ಮುಂದಾಗಿದ್ದು ಇದಕ್ಕೇ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ. ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಫೋಟವಾಗಿದೆ. ಟಿಕೆಟ್ ವಂಚಿತ ನಾಗಶ್ರೀ ಪ್ರತಾಪ್ ಅವರ ಬೆಂಬಲಿಗರು ಈಗಾಗಲೇ ಕೆರಳಿ ಕೆಂಡವಾಗಿದ್ದು, ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ಹರಿಹಾಯ್ದಿದ್ದು, ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ
ಹೇಳಿ ಕೇಳಿ ಚಾಮರಾಜನಗರ ಹಾಗೂ ವರುಣಾದಲ್ಲಿ ಲಿಂಗಾಯತ ಪ್ರಾಬಲ್ಯ ಇದ್ದು, ಸೋಮಣ್ಣ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಮಾತು ಆಡುತ್ತಾರೆ ಎಂಬ ಆರೋಪ ಈಗಾಗಲೇ ಸಮುದಾಯದ ಜನರಲ್ಲಿ ಕಿಚ್ಚು ಹೊತ್ತಿಸಿದೆ. ಇದು ಚುನಾವಣೆ ಹೊತ್ತಲ್ಲಿ ಅಂಡರ್ ಕರೆಂಟಾಗಿ ಕೆಲಸ ಮಾಡಲಿದೆ ಎಂಬುದು ಸೋಮಣ್ಣ ಆದಿಯಾಗಿ ಎಲ್ಲರಿಗೂ ತಿಳಿದಿದ್ದು, ಇದನ್ನು ಶಮನ ಮಾಡುವುದರಲ್ಲೇ ಸೋಮಣ್ಣ ಕಾಲ ಕಳೆಯಬೇಕಾಗುತ್ತದೆ. ವರುಣಾದತ್ತ ಗಮನ ಹರಿಸುವುದು ಅಸಾಧ್ಯವಾಗಲಿದೆ ಎಂಬುದು ಕೈ ಪಡೆ ರಣತಂತ್ರವಾಗಿದೆ.
ವರುಣಾದಲ್ಲಿ ಸೋಮಣ್ಣ ಗಮನ ಕಡಿಮೆಯಾದಷ್ಟು ಕಾಂಗ್ರೆಸ್‌ಗೆ ವರವಾಗಲಿದೆ ಎಂಬ ಒಂದಂಶದ ಮೇಲೆ ಚಾಮರಾಜನಗರದಲ್ಲಿನ ಬಂಡಾಯವನ್ನು ಹಾಗೇ ಉಳಿಸಲು ಕಾಂಗ್ರೆಸ್ ಈಗ ಮುಂದಾಗಿದೆ. ಚಾಮರಾಜನಗರದ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಅಸಮಾಧಾನ ಇದ್ದು, ಇದನ್ನು ಪರಿಹರಿಸುವ ಜವಾಬ್ದಾರಿ ಸೋಮಣ್ಣ ಮೇಲಿದೆ. ಬಂಡಾಯ ಶಮನ ಮಾಡುವುದೋ ಅಥವಾ ವರುಣಾದಲ್ಲಿ ಯುದ್ಧ ಮಾಡುವುದೋ ಎಂಬ ಸಂದಿಗ್ಧತೆಗೆ ಸೋಮಣ್ಣರನ್ನು ದೂಡುವುದೇ ಕಾಂಗ್ರೆಸ್‌ನ ಸದ್ಯದ ರಣನೀತಿಯಾಗಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸುಧಾಕರ್ ನಾಮಪತ್ರ ಸಲ್ಲಿಕೆ
ಮೈಸೂರು: ವರುಣಾ (Varuna) ಕ್ಷೇತ್ರಕ್ಕೆ ತಾಲೂಕು ಕೇಂದ್ರವಿಲ್ಲದೆ ಅಲ್ಲಿನ ಜನ ಅಬ್ಬೆಪಾರಿಗಳಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವ ಸ್ಥಳಕ್ಕೆ ಹೋಗಬೇಕೆಂಬ ಗೊಂದಲ 15 ವರ್ಷದಿಂದಲೂ ಇದೆ. ಸಿದ್ದರಾಮಯ್ಯನವರ (Siddaramaiah) ಕೈಯಲ್ಲಿ ಒಂದು ತಾಲೂಕು ಕೇಂದ್ರ ಮಾಡಲು ಆಗಲಿಲ್ಲ. ಮುಖ್ಯಮಂತ್ರಿಯಾಗಿಯೂ ಸಿದ್ದರಾಮಯ್ಯನವರು ವರುಣಾ ಅಭಿವೃದ್ಧಿ ಮಾಡಲಿಲ್ಲ. ವರುಣಾ ತಾಲೂಕು ಕೇಂದ್ರವಾಗಬೇಕಿದೆ. ಒಂದೇ ಸರ್ಕಾರಿ ಕಚೇರಿಯಲ್ಲಿ ವರುಣಾ ಜನರ ಕೆಲಸವಾಗಬೇಕು. ಸೋಮಣ್ಣನ (V Somanna) ಗೆಲ್ಲಿಸಿ ವರುಣಾ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ 2018 ಕೊನೆ ಚುನಾವಣೆ ಎಂದು ಹೇಳಿದ್ದರು. ಕೊನೆ ಚುನಾವಣೆಯಲ್ಲೇ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರನ್ನು ಮುಗಿಸಿದರು. ಈ ಬಾರಿಯೂ ಅದೇ ಪ್ಲೇಟ್ ಅನ್ನು ಸಿದ್ದರಾಮಯ್ಯ ಹಾಕುತ್ತಿದ್ದಾರೆ. ಇಲ್ಲಿಯ ಜನರು ಕೂಡ ಅವರ ರಾಜಕೀಯ ಜೀವನವನ್ನು ಮುಗಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:ಕೊಡಗು ವಿಹೆಚ್‍ಪಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ
ಚಾಮುಂಡಿ ಆಶೀರ್ವಾದ ಮಾಡುವುದು ಆಕೆಯ ಭಕ್ತರಿಗೆ ಮಾತ್ರ. ಸಿದ್ದರಾಮಯ್ಯ ಪತ್ನಿ, ಚಾಮುಂಡಿ ತಾಯಿ ಭಕ್ತೆ ಇರಬಹುದು. ಆದರೆ ಅವರ ಪತ್ನಿ ಚುನಾವಣೆಗೆ ಸ್ಪರ್ಧಿಸಿಲ್ಲವಲ್ಲ ಎಂದ ಅವರು, ಮೈಸೂರು ಭಾಗಕ್ಕೆ ನಾಯಕತ್ವದ ದೊಡ್ಡ ಕೊರತೆ ಇತ್ತು. ತುರ್ತಾಗಿ ತ್ವರಿತವಾಗಿ ಒಬ್ಬ ನಾಯಕನ ಅವಶ್ಯಕತೆ ಇತ್ತು. ಸೋಮಣ್ಣ ಆ ಕೊರತೆಯನ್ನು ನೀಗಿಸುತ್ತಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಂಘಟನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:ಪತ್ರಿಕೋದ್ಯಮ ಓದಿದ ಬರಿಗಾಲ ಸಂತನಿಗೆ ಬಿಜೆಪಿ ಟಿಕೆಟ್
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಎಂತಹ ನಾಯಕರಾದರು ಕೂಡ ಇಲ್ಲಿ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ ಎಂದು ಸಚಿವ ವಿ.ಸೋಮಣ್ಣ V.Somanna) ಗುರುವಾರ ಮೈಸೂರಿನಲ್ಲಿ (Mysuru) ಹೇಳಿದ್ದಾರೆ.
ಸುತ್ತೂರು ಮಠಕ್ಕೆ (Suttur Math) ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಹಾಗೂ ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಪಳಗಿದವರು. ವರುಣಾ ಕ್ಷೇತ್ರದಲ್ಲಿ ಈಗ ನಾನು ನೆಪ ಮಾತ್ರ. ಪಕ್ಷದಲ್ಲಿ ಯಾವ ಮುಖಂಡರು ಚಿಕ್ಕವರಲ್ಲ ಹಾಗೂ ದೊಡ್ಡವರಲ್ಲ. ಇಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ದೊಡ್ಡವರು ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್
ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರುವುದಿಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನನಗೆ 75 ವರ್ಷವಾದ ಮೇಲೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ನಾನು ಇಲ್ಲಿ ಶಾಶ್ವತ ಅಲ್ಲ. ಹಾಗೆಂದು ಇದು ನನ್ನ ಕೊನೆಯ ಚುನಾವಣೆ ಅಥವಾ ರಾಜಕೀಯ ನಿವೃತ್ತಿ ಅಲ್ಲ. ನಮ್ಮ ಪಕ್ಷದ ನಿಯಮಗಳಂತೆ ನಾನು ಇರುತ್ತೇನೆ. ಪಕ್ಷದೊಳಗೆ ಯಾರಾದರೂ ಇಲ್ಲ ಸಲ್ಲದ್ದನ್ನು ಮಾತಾಡುತ್ತಾರೆ. ಅದನ್ನು ದೊಡ್ಡ ವಿಚಾರವಾಗಿ ಬಿಂಬಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಗೋವಿಂದರಾಜ ನಗರದ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯಲಿದೆ. ನಾಳೆಯಿಂದ ವರುಣಾ ಕ್ಷೇತ್ರದ ಪ್ರಚಾರ ಆರಂಭಿಸುತ್ತೇನೆ. ಕ್ಷೇತ್ರದ ಪ್ರತಿ ಹಳ್ಳಿಯನ್ನು ಸುತ್ತುತ್ತೇನೆ. ಏ.17 ರಂದು ವರುಣಾ (Varuna) ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ಏ.19 ರಂದು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗುಡ್ ಬೈ
– ವರುಣಾದಲ್ಲಿ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದ ಸಿದ್ದರಾಮಯ್ಯ – ಸೋಮಣ್ಣಗೆ ಒಲಿಯುತ್ತಾ ಗೆಲುವು? – ವರುಣಾ ಕ್ಷೇತ್ರದ ರಾಜಕೀಯ, ಚುನಾವಣೆ, ಜಾತಿ ಲೆಕ್ಕಾಚಾರವೇನು?
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ವರುಣಾದಿಂದ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಠಕ್ಕರ್ ಕೊಡಲು ಬಿಜೆಪಿ ಮುಂದಾಗಿದೆ. ಲಿಂಗಾಯತ ಸಮುದಾಯದವರೇ ಹೆಚ್ಚಿರುವ ವರುಣಾದಿಂದ ಅದೇ ಸಮುದಾಯದ ಹಾಲಿ ಸಚಿವ ವಿ.ಸೋಮಣ್ಣ (V.Somanna) ಅವರ ಹೆಸರನ್ನು ಬಿಜೆಪಿ ಘೋಷಿಸಿದೆ. ಆ ಮೂಲಕ ಈ ಬಾರಿ ಚುನಾವಣೆಯಲ್ಲಿ ಈ ಕ್ಷೇತ್ರ ರಾಜಕೀಯವಾಗಿ ಹೆಚ್ಚು ಗಮನ ಸೆಳೆಯಲಿದೆ.
ವರುಣಾ (Varuna) ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಾಮರ್ಥ್ಯ ಕುಂದಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರನ್ನೇ ಹುರಿಯಾಳಾಗಿಸಿ ಸಿದ್ದುಗೆ ಪ್ರಬಲ ಪೈಪೋಟಿ ನೀಡಲು ಪ್ಲ್ಯಾನ್ ಮಾಡಿತ್ತು. ಸಿದ್ದು ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಕಣ್ಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಮಗನ ರಾಜಕೀಯ ಭವಿಷ್ಯ ಹಿತದೃಷ್ಟಿಯಿಂದ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ದು ವಿರುದ್ಧ ಸೆಣಸಲು ಸೋಮಣ್ಣ ಹುರಿಯಾಳಾಗಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಸೋಮಣ್ಣ ಕಟ್ಟಿ ಹಾಕಲು ಕಾಂಗ್ರೆಸ್ ಪ್ಲ್ಯಾನ್
ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜಾತಿ ಲೆಕ್ಕಾಚಾರದಲ್ಲಿ ವಿ.ಸೋಮಣ್ಣ ಅವರನ್ನ ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಪ್ಲ್ಯಾನ್ ಯಶಸ್ವಿಯಾಗುತ್ತಾ? ಸ್ವಕ್ಷೇತ್ರ ಬಿಟ್ಟು ಸೋಮಣ್ಣ ಹೊರಗಿನ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದಾರೆ. ವರುಣಾದಲ್ಲಿ ಜಾತಿ ಮೇಲಾಟ ಸೋಮಣ್ಣ ಕೈ ಹಿಡಿಯಬಹುದೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಅದೇನೇ ಇರಲಿ, ವರುಣಾ ಕ್ಷೇತ್ರದ ರಾಜಕೀಯ ಇತಿಹಾಸ ಏನು? ಇಲ್ಲಿನ ಚುನಾವಣೆ ಹಾಗೂ ಜಾತಿ ಲೆಕ್ಕಾಚಾರ ಹೇಗಿದೆ? ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಗೆದ್ದು ತವರು ಕ್ಷೇತ್ರದಲ್ಲಿ ನೆಲ ಭದ್ರಪಡಿಸಿಕೊಳ್ಳುತ್ತಾರಾ ಅಥವಾ ಕರ್ಮ ಭೂಮಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಸೋಮಣ್ಣ ಜಯ ಗಳಿಸುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿವೆ.
ವರುಣಾ ಕ್ಷೇತ್ರದ ಇತಿಹಾಸವೇನು?
ರಾಜಕೀಯ ಇತಿಹಾಸವನ್ನು ಗಮನಿಸುವುದಾದರೆ, ವರುಣಾ ಮೊದಲು ಚಾಮುಂಡೇಶ್ವರಿ ಕ್ಷೇತ್ರದ ಭಾಗವೇ ಆಗಿತ್ತು. 2008ರಲ್ಲಿ ಚಾಮುಂಡೇಶ್ವರಿಯಿಂದ ವಿಭಜನೆಯಾಗಿ ವರುಣಾ ಕ್ಷೇತ್ರ ಸೃಷ್ಟಿಯಾಯಿತು. ಆ ಕಾಲಕ್ಕೆ ಚಾಮುಂಡೇಶ್ವರಿಯಲ್ಲಿ ಜನಪ್ರಿಯರಾಗಿದ್ದ ಸಿದ್ದರಾಮಯ್ಯಗೆ ಧರ್ಮ ಸಂಕಟ ಎದುರಾಯಿತು. ಮುಂದೆ ತನ್ನ ರಾಜಕೀಯ ಭವಿಷ್ಯವನ್ನು ಚಾಮುಂಡೇಶ್ವರಿಯಲ್ಲಿ ಕಟ್ಟಿಕೊಳ್ಳುವುದೋ ಅಥವಾ ವರುಣಾದಲ್ಲೋ ಎಂಬ ಇಕ್ಕಟ್ಟಿಗೆ ಸಿಲುಕಿದ್ದ ಸಿದ್ದರಾಮಯ್ಯ ಕೊನೆಗೆ ಆಯ್ದುಕೊಂಡಿದ್ದು ವರುಣಾವನ್ನೇ. ಇದನ್ನೂ ಓದಿ: 2 ಕಡೆ ಟಿಕೆಟ್ ಕೊಡ್ತಾರೆ ಅಂತ ಕನಸಲ್ಲೂ ಅನ್ಕೊಂಡಿರಲಿಲ್ಲ: ಸೋಮಣ್ಣ
ವರುಣಾ 4ನೇ ಚುನಾವಣೆಯಲ್ಲಿ ಯಾರು ಗೆಲ್ತಾರೆ?
ವರುಣಾ ಕ್ಷೇತ್ರ ವಿಭಜನೆಯಾದಾಗಿನಿಂದ ಇಲ್ಲಿಯವರೆಗೆ ಮೂರು ಚುನಾವಣೆ ನಡೆದಿದೆ. 3 ಚುನಾವಣೆಗಳ ಪೈಕಿ ಸಿದ್ದರಾಮಯ್ಯ 2 ಬಾರಿ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಒಂದು ಬಾರಿ ಗೆಲುವಿನ ನಗೆಬೀರಿದ್ದಾರೆ. 2023ರ ಚುನಾವಣೆಗೆ ಸಿದ್ದರಾಮಯ್ಯ ತಮ್ಮ ಪುತ್ರನ ಬದಲಾಗಿ ಮತ್ತೆ ಕಣಕ್ಕಿಳಿದಿದ್ದಾರೆ.
ವರುಣಾ ಚುನಾವಣಾ ಹಿನ್ನೋಟ
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವರುಣಾ ವಿಧಾನಸಭಾ ಕ್ಷೇತ್ರ ರಚನೆಯಾಗಿ 2008ರಲ್ಲಿ ಮೊದಲ ಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಕಣಕ್ಕಿಳಿದು ಭರ್ಜರಿ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್.ರೇವಣಸಿದ್ದಯ್ಯ ವಿರುದ್ಧ 18,837 ಮತಗಳ ಅಂತರದಿಂದ ಜಯ ಗಳಿಸಿದ್ದರು.
2013ರ ವಿಧಾನಸಭಾ ಚುನಾವಣೆ ಮತ್ತೆ ಸಿದ್ದರಾಮಯ್ಯ ಅವರೇ ಸ್ಪರ್ಧಿಸುತ್ತಾರೆ. ಆ ವೇಳೆಗೆ ಬಿಜೆಪಿಯೊಂದಿಗಿನ ಭಿನ್ನಮತದಿಂದ ಪಕ್ಷ ತೊರೆದು ಹೊರಬಂದ ಯಡಿಯೂರಪ್ಪ ಕೆಜೆಪಿ ಎಂಬ ಪ್ರತ್ಯೇಕ ಪಕ್ಷ ಕಟ್ಟಿರುತ್ತಾರೆ. ಬಿಎಸ್‌ವೈ ಹೊಸ ಪಕ್ಷದಿಂದ ವರುಣಾದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸ್ಪರ್ಧಿಸಿರುತ್ತಾರೆ. ಸಿದ್ದರಾಮಯ್ಯ 19,641 ಮತಗಳ ಅಂತರದಿಂದ ಕಾಪು ಸಿದ್ದಲಿಂಗಸ್ವಾಮಿ ವಿರುದ್ಧ ಭರ್ಜರಿ ಜಯ ಗಳಿಸುತ್ತಾರೆ. ಈ ವಿಜಯದ ಬಳಿಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಾರೆ. ಇದನ್ನೂ ಓದಿ: ವರುಣಾದಲ್ಲಿ ಸೋಮಣ್ಣ Vs ಸಿದ್ದರಾಮಯ್ಯ – ಚಾಮರಾಜನಗರದಿಂದಲೂ ಟಿಕೆಟ್
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಮತ್ತು ಬದಾಮಿಯಿಂದ ಕಣಕ್ಕಿಳಿದಿದ್ದರು. ಈ ಚುನಾವಣೆ ಮೂಲಕವೇ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ ಯತೀಂದ್ರ ತಂದೆಗಿಂತಲೂ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ವರುಣಾದಲ್ಲಿ ಗಮನ ಸೆಳೆದಿದ್ದರು. ಈ ಚುನಾವಣೆಯಲ್ಲಿ 96,435 ಮತಗಳನ್ನು ಪಡೆದ ಯತೀಂದ್ರ, 58,616 ಮತಗಳ ಅಂತರದಿಂದ ಬಿಜೆಪಿ ಟಿ.ಬಸವರಾಜು ವಿರುದ್ಧ ಜಯಭೇರಿ ಬಾರಿಸಿದ್ದರು.
ಜಾತಿ ಲೆಕ್ಕಾಚಾರ ಏನು?
ವರುಣಾ ಕ್ಷೇತ್ರದಲ್ಲಿ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ ಸುಮಾರು 70,000 ಲಿಂಗಾಯತ ಮತದಾರರು ಇದ್ದಾರೆ. ಇವರನ್ನು ಹೊರತುಪಡಿಸಿದರೆ, ಅಂದಾಜು ಕುರುಬರು 35,000, ಪರಿಶಿಷ್ಟ ಜಾತಿಯ 43,000 ಮತದಾರರು, ಪರಿಶಿಷ್ಟ ಪಂಗಡದ 23,000, ಒಕ್ಕಲಿಗರು 12,000 ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದವರು 12,000 ಮತದಾರರು ಇದ್ದಾರೆ. ಇದನ್ನೂ ಓದಿ: ಕನಕಪುರದಲ್ಲಿ ಮೋದಿ, ಶಾ ಆಟ ನಡೆಯೋದಿಲ್ಲ: ಡಿಕೆ ಸುರೇಶ್
ಸಿದ್ದು ತವರು ಕ್ಷೇತ್ರ ಉಳಿಸಿಕೊಳ್ತಾರಾ?
ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ 2023ರ ಚುನಾವಣೆ ಮಹತ್ವದ್ದಾಗಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಪುತ್ರ ಯತೀಂದ್ರ ತಂದೆಗೆ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಿದ್ದು ನೆಲ ಭದ್ರಪಡಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಲಿಂಗಾಯತ ಸಮುದಾಯದ ಸೋಮಣ್ಣ ಹುರಿಯಾಳಾಗಿರುವುದು ಸಿದ್ದು ನಿರಾಯಾಸದ ಗೆಲುವಿಗೆ ತೊಡರುಗಾಲು ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೆ ವರುಣಾ ಕ್ಷೇತ್ರದ ಲಿಂಗಾಯತ ಮತದಾರರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಗೆಲುವು ಸುಲಭವಾಗುತ್ತಾ ಬಂದಿದೆ. ಈಗ ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ ಎಂಬ ಮಾತು ಒಂದು ಕಡೆಯಾದರೆ, ಲಿಂಗಾಯತ ಸಮುದಾಯ ಬಿಟ್ಟರೆ ವರುಣಾದಲ್ಲಿ ನಂತರದ ಸ್ಥಾನದಲ್ಲಿ ಕುರುಬ ಮತ್ತು ಪರಿಶಿಷ್ಟ ಜಾತಿ ಸಮುದಾಯ ಮತಗಳಿರುವುದರಿಂದ, ಈ ವರ್ಗಗಳ ಮತ ಸಿದ್ದರಾಮಯ್ಯ ಅವರಿಗೆ ಕಟ್ಟಿಟ್ಟ ಬುತ್ತಿ. ಅಲ್ಲದೇ ಹಿಂದುಳಿದ ವರ್ಗಗಳ ಮತದಾರರು ಕೂಡ ಸಿದ್ದು ಪರವಾಗಿದ್ದಾರೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಇದು ಸಿದ್ದರಾಮಯ್ಯ ಗೆಲುವಿಗೆ ವರದಾನವಾಗಬಹುದು ಎನ್ನುವ ಮಾತು ಕೂಡ ಇದೆ.
ಅದೃಷ್ಟ ಪರೀಕ್ಷೆಯಲ್ಲಿ ಗೆಲ್ತಾರಾ ಸೋಮಣ್ಣ?
ಆರಂಭದಲ್ಲಿ ವರುಣಾದಲ್ಲಿ ಸ್ಪರ್ಧೆಯ ಸುಳಿವು ಸಿಕ್ಕಾಗ ಸೋಮಣ್ಣ ಹಿಂಜರಿದಿದ್ದರು. ಲಿಂಗಾಯತ ಮತಗಳನ್ನಷ್ಟೇ ನಂಬಿಕೊಂಡು ಚುನಾವಣೆಗೆ ಧುಮುಕಿದರೆ ಗೆಲುವು ಕಷ್ಟ ಎಂಬ ಅರಿವು ಕೂಡ ಅವರಿಗಿತ್ತು. ವರುಣಾ ಸ್ಪರ್ಧಿಸಬೇಕಾದರೆ ನನ್ನ ಮೊದಲ ಆದ್ಯತೆ ಗೋವಿಂದರಾಜನಗರ ಅಥವಾ ಚಾಮರಾಜನಗರ. ಇವರೆಡು ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರ ಕೊಟ್ಟು ಹೆಚ್ಚುವರಿಯಾಗಿ ವರುಣಾ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಹೈಕಮಾಂಡ್‌ಗೆ ಸೋಮಣ್ಣ ಸ್ಪಷ್ಟಪಡಿಸಿದ್ದರು. ಈಗ ಚಾಮರಾಜನಗರ ಜೊತೆಗೆ ವರುಣಾ ಕ್ಷೇತ್ರವನ್ನೂ ಪಕ್ಷ ಕೊಟ್ಟಿದೆ. ಇದರೊಂದಿಗೆ ಸೋಮಣ್ಣ ಅವರ ರಿಸ್ಕ್‌ನ್ನ ಹೈಕಮಾಂಡ್ ಕಡಿಮೆ ಮಾಡಿದೆ. ಆದರೆ ಸೋಮಣ್ಣ ಅವರನ್ನು ವರುಣಾ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟ ಹೈಕಮಾಂಡ್ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ. 70 ವರ್ಷ ದಾಟಿದ ಸೋಮಣ್ಣ ಅವರನ್ನು ಈಶ್ವರಪ್ಪ, ಶೆಟ್ಟರ್ ಮಾದರಿಯಲ್ಲಿ ನಿವೃತ್ತಿಗೊಳಿಸುವ ಎದೆಗಾರಿಕೆಯನ್ನು ತೋರದ ಹೈಕಮಾಂಡ್ ಜಾಣ ನಡೆ ಇಟ್ಟಿದೆ. ಈ ಮೂಲಕ ಪುತ್ರನಿಗೂ ಟಿಕೆಟ್ ಕೇಳುತ್ತಿದ್ದ ಸೋಮಣ್ಣ ಬೇಡಿಕೆಗೆ ಮನ್ನಣೆ ಕೊಡದಿರಲು ವರಿಷ್ಠರು ನಿರ್ಧರಿಸಿದ್ದಾರೆ. ವರುಣಾದಲ್ಲಿ ಸೋತು ಚಾಮರಾಜನಗರದಲ್ಲಿ ಗೆದ್ದರೆ ಸೋಮಣ್ಣ ಸೇಫ್. ಆದರೆ ಎರಡೂ ಕ್ಷೇತ್ರದಲ್ಲಿ ಸೋಮಣ್ಣಗೆ ಹಿನ್ನಡೆಯಾದರೆ ಅವರಿಗೆ ರಾಜಕೀಯವಾಗಿ ಈ ಚುನಾವಣೆ ಮಾರಕವಾಗಿ ಪರಿಣಮಿಸಲಿದೆ. ಈ ಮೂಲಕ 70 ವರ್ಷ ಮೀರಿರುವ ಸೋಮಣ್ಣ ಅವರನ್ನು ರಾಜಕೀಯವಾಗಿ ತೆರೆಗೆ ಸರಿಸುವ ತಂತ್ರಗಾರಿಕೆಯನ್ನು ಹೈಕಮಾಂಡ್ ಮಾಡಿದಂತಾಗಲಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಹೊಂದಾಣಿಕೆ ಪಾಲಿಟಿಕ್ಸ್ ಆರೋಪ ಕೇಳಿಬಂದಿದೆ. ಚುನಾವಣಾ ರಾಜಕೀಯದಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ (Yediyurappa) ಹಾಗೂ ಸಿದ್ದರಾಮಯ್ಯ (Siddaramaiah) ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ದೆಹಲಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು (H.D.Deve Gowda) ಹೊಸ ಬಾಂಬ್ ಸಿಡಿಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು, ಬಿಎಸ್‌ವೈ ನಡುವೆ ಒಳ ಒಪ್ಪಂದ ಇದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಮ್ಯಾಚ್ ಫಿಕ್ಸಿಂಗ್ ಸಂಶಯ ಹುಟ್ಟು ಹಾಕಿದ್ದಾರೆ.
ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಕಾಂಗ್ರೆಸ್‌ನ ವರುಣಾ ಕ್ಷೇತ್ರದಿಂದ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದೇಕೆ? ಇದು ಏನನ್ನು ಸೂಚಿಸುತ್ತದೆ? ಇಬ್ಬರು ಮಾಜಿ ಸಿಎಂಗಳು ತಂತ್ರಗಾರಿಕೆಯ ತಿಳುವಳಿಕೆ ಹೊಂದಿದ್ದಾರೆ ಎಂಬುದು ಇದರ ಅರ್ಥ. ರಾಜ್ಯದಲ್ಲಿ ಹೀಗಾಗಲು ಬಿಜೆಪಿ ವರಿಷ್ಠರು ಹೇಗೆ ಅವಕಾಶ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ತವರು ಕ್ಷೇತ್ರ ವರುಣಾದಿಂದ ಈ ಬಾರಿ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಆದರೆ ಪುತ್ರನ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ, ಈ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸಲ್ಲ ಎಂದು ಬಿಎಸ್‌ವೈ ತಿಳಿಸಿದ್ದಾರೆ. ಬಿಎಸ್‌ವೈ ಈ ನಿರ್ಧಾರ ನಾನಾ ಚರ್ಚೆಗೆ ಕಾರಣವಾಗಿದೆ.
‘ಹೊಂದಾಣಿಕೆ’ ರಾಜಕಾರಣ?
ವರುಣಾ ಕ್ಷೇತ್ರ 2008ರಲ್ಲಿ ಸೃಷ್ಟಿಯಾಯ್ತು. ಅಂದಿನಿಂದ 3 ಬಾರಿ ಚುನಾವಣೆ ನಡೆದಿದೆ. 3ರಲ್ಲಿ 2 ಬಾರಿ ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದಿದ್ದಾರೆ, 1 ಬಾರಿ ಯತೀಂದ್ರ ಗೆದ್ದಿದ್ದಾರೆ. ವರುಣಾದಲ್ಲಿ ಲಿಂಗಾಯತ ಮತದಾರರು ಹೆಚ್ಚಿದ್ದರೂ ಬಿಜೆಪಿ ಪ್ರಬಲ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ. ಲಿಂಗಾಯತರನ್ನೇ ಬಿಜೆಪಿ ಅಭ್ಯರ್ಥಿ ಮಾಡಿದ್ರೂ ಸಿದ್ದುಗೆ ಪೈಪೋಟಿ ಕೊಡಬಲ್ಲ ಒಬ್ಬರನ್ನೂ ಬಿಎಸ್‌ವೈ ಸ್ಪರ್ಧೆಗೆ ಇಳಿಸಿಲ್ಲ. 2008ರಲ್ಲಿ ಹೆಚ್‌ಡಿಕೆ ಅಧಿಕಾರ ನೀಡದೇ ವಚನ ಭ್ರಷ್ಟರಾದಾಗಿನಿಂದ ಸಿದ್ದು-ಬಿಎಸ್‌ವೈ ಒಂದಾದರು. ಜರ್ನಾದನ ರೆಡ್ಡಿ ವಿರುದ್ಧ ಸಿದ್ದು ತೊಡೆತಟ್ಟಿ ಸಮರಕ್ಕಿಳಿದಾಗಲೂ ಸಿದ್ದು ಜೊತೆ ಬಿಎಸ್‌ವೈ ಕಿತ್ತಾಟಕ್ಕೆ ಹೋಗಲಿಲ್ಲ ಎಂಬ ಮಾತಿದೆ. 2013ರಲ್ಲಿ ಕೆಜೆಪಿ ಕಟ್ಟಿ ಬಿಜೆಪಿಗೆ ಡ್ಯಾಮೇಜ್ ಆಗೋ ಹಾಗೆ ಮಾಡಿ ಸಿದ್ದು ಅಧಿಕಾರದ ಗದ್ದುಗೆ ಏರುವಂತೆ ಮಾಡಿದ್ದರು ಎನ್ನಲಾಗಿದೆ.
ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಯಡಿಯೂರಪ್ಪ ಸೀಟು ಬಿಟ್ಟುಕೊಟ್ಟಿದ್ದರು. ಸಮ್ಮಿಶ್ರ ಸರ್ಕಾರ ಮಾಡಿದಾಗಲೂ ಕುಮಾರಸ್ವಾಮಿ ವಿರುದ್ಧ ಬಿಎಸ್‌ವೈ ಗುಡುಗಿದರು. ಆದರೆ ಸಿದ್ದರಾಮಯ್ಯ ವಿರುದ್ಧ ಮಾತಾಡಲಿಲ್ಲ. ಕಳೆದ ಬಾರಿ ಯತೀಂದ್ರ ವಿರುದ್ಧ ವಿಜಯೇಂದ್ರ ಕಣಕ್ಕೆ ಇಳಿದೇ ಬಿಟ್ಟರು ಎನ್ನುವಾಗ ಮಗನ ಸ್ಪರ್ಧೆ ಇಲ್ಲ ಅಂತ ಘೋಷಿಸಿದರು. ಈ ಬಾರಿಯೂ ವಿಜಯೇಂದ್ರ ಹೆಸರು ವರುಣಾದಲ್ಲೂ ಕೇಳಿಬಂದರೂ ಬಿಎಸ್‌ವೈ ಹಿಂಪಡೆದಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಬೆಳಗಾವಿ: ಸಿದ್ದರಾಮಯ್ಯನವರನ್ನ ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ. ಬೇಕಾದರೆ ಜನರೇ ಸೋಲಿಸಬೇಕು. ನಲವತ್ತು ವರ್ಷಗಳಿಂದ ವರುಣಾ ಸಿದ್ದರಾಮಯ್ಯನವರ ಪರವಾಗಿ ಇರುವಂತಹ ಕ್ಷೇತ್ರವಾಗಿದೆ. ವರುಣಾದಲ್ಲಿ ಸೋಲುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಬೆಳಗಾವಿಯಲ್ಲಿ (Belagavi) ಹೇಳಿದ್ದಾರೆ.
ವರುಣಾದಲ್ಲಿ (Varuna) ಸಿದ್ದರಾಮಯ್ಯ ಸೋಲಿಸಲು ರಾಜಕೀಯ ಪಕ್ಷಗಳು ರಣತಂತ್ರ ರಚಿಸುತ್ತಿರುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರುಣಾಗೆ ನಾನು ಪ್ರಚಾರಕ್ಕೆ ಹೋಗುತ್ತೇನೆ. ಸಿದ್ದರಾಮಯ್ಯನವರು (Siddaramaiah) ಅಲ್ಲಿ ಶ್ರಮ ಪಡುವ ಅವಶ್ಯಕತೆ ಇಲ್ಲ. ಗೆಲುವು ಅವರ ಪರವಾಗಿಯೇ ಇದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಬಿಜೆಪಿ ನನ್ನ ಬಾಡಿಗೆ ಮನೆ, ಸ್ವಂತ ಮನೆಯಾದ ಕಾಂಗ್ರೆಸ್‌ಗೆ ಮರಳುವೆ- ಗೋಪಾಲಕೃಷ್ಣ
ಈಗಾಗಲೇ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆ ಆಗಿದೆ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಅವಕಾಶ ನೀಡುವುದು, ಬಿಡುವುದು ಹೈಕಮಾಂಡ್‍ಗೆ ಬಿಟ್ಟ ನಿರ್ಧಾರ. ಹೈಕಮಾಂಡ್ ಒಪ್ಪಿದರೆ ಎರಡನೇ ಪಟ್ಟಿಯಲ್ಲಿ ಘೋಷಣೆ ಆಗಲಿದೆ. ಬೆಂಗಳೂರಿನಿಂದ ಬಾದಾಮಿಗೆ ಬರಲು ಕಷ್ಟವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ವರುಣಾ ಅಥವಾ ಕೋಲಾರ ಕ್ಷೇತ್ರ ಬೆಂಗಳೂರಿನಿಂದ ಹತ್ತಿರವಿದೆ ಇಲ್ಲಿ ಸ್ಪರ್ಧಿಸಿದರೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ 10ಸ್ಥಾನ ಗೆಲ್ಲುತ್ತೇವೆ
ಬೆಳಗಾವಿ ಜಿಲ್ಲೆಯಲ್ಲಿ 10 ಕ್ಕೂ ಅಧಿಕ ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ. 12 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ. ಕೆಲವು ಕಡೆ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿಯೇ ಮಾಡುತ್ತಾರೆ. ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಆದರೆ ಇದರಿಂದ ಕಾಂಗ್ರೆಸ್ ಗೆಲುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬಂಡಾಯ ಅಭ್ಯರ್ಥಿಗಳನ್ನು ಸಂಧಾನ ಮಾಡಲು ರಾಜ್ಯಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಯಬಾಗ, ಸವದತ್ತಿ, ಕಿತ್ತೂರು, ಉತ್ತರ ಕ್ಷೇತ್ರಗಳಲ್ಲಿ ಗೊಂದಲವಿದೆ. ಭಾನುವಾರ ಸಂಧಾನ ಸಭೆ ನಡೆಯಲಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮೂರು ಬಾರಿ ಸರ್ವೇ ಮಾಡಿಸಿದ್ದು ಅದರ ರಿಪೋರ್ಟ್ ಕೂಡ ಅಂತಿಮವಾಗಲಿದೆ. ಸಂಧಾನಕ್ಕೆ ಪ್ರಯತ್ನಿಸುತ್ತೇವೆ ಸಂಧಾನಕ್ಕೆ ಒಪ್ಪದಿದ್ದರೆ ಅಂತಹವರನ್ನು ಕೈಬಿಡಲಾಗುತ್ತದೆ. ಬಿಜೆಪಿ (BJP) ಎಂಎಲ್‍ಸಿ ಕಾಂಗ್ರೆಸ್‍ಗೆ (Congress) ಎಂಬ ಊಹಾಪೋಹ ವಿಚಾರಕ್ಕೆ, ಲಕ್ಷ್ಮಣ ಸವದಿಯವರು ಜಿಲ್ಲಾ ಅಥವಾ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಲ್ಲಿಯೂ ಈ ಬಗ್ಗೆ ಹೇಳಿಲ್ಲ. ನಮ್ಮಲ್ಲಿ ಹತ್ತು ಜನ ಆಕಾಂಕ್ಷಿಗಳು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಬಿಟ್ಟ ಕಾರ್ಯಕರ್ತನಿಗೆ ನಯವಾದ ಬೆದರಿಕೆ ಹಾಕಿ ಮನವೊಲಿಸಿದ ಶಿವನಗೌಡ ನಾಯ್ಕ್
ಮೈಸೂರು: ಸಿದ್ದರಾಮಯ್ಯ (Siddaramaiah) ವಿರುದ್ಧ ವಿಜಯೇಂದ್ರ (Vijayendra) ಸ್ಪರ್ಧಿಸಲ್ಲ ಎಂಬ ಬಿ.ಎಸ್.ಯಡಿಯೂರಪ್ಪ (Yediyurappa) ಅವರ ಮಾತಿನ ಒಳಾರ್ಥಗಳು ಬೇರೆ ಇವೆ. ರಾಜ್ಯ ರಾಜಕೀಯದಲ್ಲಿ ಅದರಲ್ಲೂ ರಾಜ್ಯ ಬಿಜೆಪಿ ಒಳಗೆ ಈ ಬಗ್ಗೆ ತರಾವರಿ ವಿಶ್ಲೇಷಣೆ ನಡೆದಿದೆ.
ಬಿ.ವೈ.ವಿಜಯೇಂದ್ರ ವರುಣಾ (Varuna) ಕ್ಷೇತ್ರದ ಸ್ಪರ್ಧೆಯ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ ಮಾತಿನ ಒಳಗೆ ಹತ್ತಾರು ಗೂಢಾರ್ಥಗಳಿವೆ. ಮೊನ್ನೆ ತಾನೇ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದಿದ್ದ ಬಿಎಸ್‌ವೈ ನಿನ್ನೆ ದಿಢೀರನೆ ಯೂ ಟರ್ನ್ ತೆಗೆದುಕೊಂಡಿದ್ದಕ್ಕೆ ಅನೇಕ ಕಾರಣಗಳಿವೆ. ಈ ರೀತಿ ಯೂ ಟರ್ನ್ ತೆಗೆದುಕೊಳ್ಳುವ ಮೂಲಕ ಬಿಎಸ್‌ವೈ ಮಗನ ರಾಜಕೀಯ ಭವಿಷ್ಯವನ್ನು ಸೇಫ್ ಮಾಡಿದ್ದಾರೆ. ಜೊತೆಗೆ ಬಿಜೆಪಿ ಹೈಕಮಾಂಡ್‌ಗೂ (BJP High Command) ಚೆಕ್‌ಮೇಟ್ ಇಟ್ಟಿದ್ದಾರೆ. ಇದನ್ನೂ ಓದಿ: ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು; ಆದ್ರೆ ನಾನೇ ಬೇಡ ಎಂದಿದ್ದೇನೆ – ಬಿಎಸ್‌ವೈ
ಬಿ.ವೈ.ವಿಜಯೇಂದ್ರಗೆ ವರುಣಾದಲ್ಲಿ ಸ್ಪರ್ಧಿಸುವ ಆಸೆ ಇರೋದು ನಿಶ್ಚಿತ. ಹಾಗಂತ ಶಿಕಾರಿಪುರವನ್ನು ಬಿಡುವಂತಿಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಆದರೆ ಎರಡು ಟಿಕೆಟ್ ಪ್ರಸ್ತಾಪವನ್ನು ಬಿಎಸ್‌ವೈ ಆಗಲಿ ಅಥವಾ ವಿಜಯೇಂದ್ರ ಅವರೇ ಆಗಲಿ ಹೈಕಮಾಂಡ್ ಮುಂದಿಟ್ಟರೆ ಅವರು ಸಾಧ್ಯವೇ ಇಲ್ಲ ಅನ್ನೋದು ನಿಶ್ಚಿತ. ಆಗ ಹೈಕಮಾಂಡ್ ವರುಣಾಗೆ ನಿಲ್ಲಿ, ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇವೆ ಎನ್ನುವ ಸಾಧ್ಯತೆ ಹೆಚ್ಚಿದೆ. ಇದು ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಬಹು ಅಪಾಯಕಾರಿ. ಒಂದು ಬಾರಿ ಹುಟ್ಟೂರಿನ ಕ್ಷೇತ್ರ ಕೈತಪ್ಪಿ ಬಿಟ್ಟರೆ ಮುಗಿದೆ ಹೋಯ್ತು ಅನ್ನೋದು ಬಿಎಸ್‌ವೈರಂಥ ಬಹು ಅನುಭವಿ ರಾಜಕಾರಣಿಗೆ ಸ್ಪಷ್ಟವಾಗಿ ಗೊತ್ತಿದೆ.
ಈಗ ಸಿದ್ದರಾಮಯ್ಯರನ್ನು ವರುಣಾ ಕ್ಷೇತ್ರದಲ್ಲೇ ಕಟ್ಟಿ ಹಾಕಬೇಕಾದರೆ ಬಿಜೆಪಿಗೆ ಲಿಂಗಾಯತ ಬ್ರಹ್ಮಾಸ್ತ್ರ ಬೇಕೇ ಬೇಕು. ಆ ಬ್ರಹ್ಮಾಸ್ತ್ರ ಸದ್ಯಕ್ಕೆ ವಿಜಯೇಂದ್ರ ಮಾತ್ರ. ಆದರೆ ಬಿಎಸ್‌ವೈ ಶಿಕಾರಿಪುರದಿಂದ ಮಗ ಸ್ಪರ್ಧಿಸಲಿ ಅಂತಾ ಹೇಳಿರೋ ಕಾರಣ ಶಿಕಾರಿಪುರವನ್ನು ಬೇರೆ ಕಾರ್ಯಕರ್ತನಿಗೆ ನೀಡುವ ರಿಸ್ಕ್‌ನಂತೂ ಬಿಜೆಪಿ ಮಾಡಲ್ಲ. ಅಲ್ಲಿಗೆ ವರುಣಾಗೆ ಬ್ರಹ್ಮಾಸ್ತ್ರ ಬೇಕಾದರೆ ಅನಿವಾರ್ಯವಾಗಿ ವಿಜಯೇಂದ್ರಗೆ ಬಿಜೆಪಿ ಎರಡು ಟಿಕೆಟ್ ಕೊಡಲೇಬೇಕು. ಇಷ್ಟರ ಮಟ್ಟಿಗೆ ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಚೆಕ್‌ಮೇಟ್ ಬಿದ್ದಂತಾಗಿದೆ.
ಸಿದ್ದರಾಮಯ್ಯರನ್ನು ಕಟ್ಟಿ ಹಾಕಬೇಕಾದ ನಿರ್ಧಾರ ಕೈಗೊಳ್ಳುವ ಚೆಂಡು ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದೆ. ಸಿದ್ದರಾಮಯ್ಯರ ವಿಚಾರದಲ್ಲಿ ಅಷ್ಟೊಂದು ಜಿದ್ದು ಮಾಡೋದು ಬೇಡ ಅಂತಾ ಹೈಕಮಾಂಡ್‌ಗೆ ಅನ್ನಿಸಿದರೆ ನೆಪ ಮಾತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಹಾಕುತ್ತಾರೆ. ಇಲ್ಲವೆ ವಿಜಯೇಂದ್ರಗೆ ಡಬಲ್ ಟಿಕೆಟ್ ಕೊಡುತ್ತಾರೆ ಅಷ್ಟೆ.
ಮೈಸೂರು: ವರುಣಾದಿಂದ (Varuna) ವಿಜಯೇಂದ್ರ (Vijayendra) ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು. ಆದರೆ ನಾನೇ ವರುಣಾದಿಂದ ಸ್ಪರ್ಧೆ ಬೇಡವೆಂದು ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ತಿಳಿಸಿದರು.
ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಬಿಎಸ್‌ವೈ, ಈ ವಿಚಾರದಲ್ಲಿ ನಾನು ಹೈಕಮಾಂಡ್ ಮನವೊಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜಕೀಯ ಅಖಾಡದಲ್ಲಿ `ಡೆತ್’ ಚಾಲೆಂಜ್ – ಡಿಕೆ ಸುರೇಶ್ ವಿರುದ್ಧ ಸಿಡಿದ ಮುನಿರತ್ನ
ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ. ವರುಣಾ ಕ್ಷೇತ್ರದಿಂದ ಒಳ್ಳೆ ಅಭ್ಯರ್ಥಿ ಹಾಕುತ್ತೇವೆ. ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿಗೆ ಇತ್ತು. ಆದರೆ ನಾನೇ ಶಿಕಾರಿಪುರದಿಂದ ನಿಲ್ಲಬೇಕು ಅಂಥ ಹೇಳಿದ್ದೇನೆ. ಹೈಕಮಾಂಡ್‌ಗೆ ನಾನೇ ಈ ವಿಚಾರದಲ್ಲಿ ಮನವೊಲಿಸುತ್ತೇನೆ ಎಂದು ಹೇಳಿದರು.
ನಾನು ಶಿಕಾರಿಪುರದಿಂದ ಸ್ಪರ್ಧೆ ಮಾಡದ ಕಾರಣ ವಿಜಯೇಂದ್ರ ಅಲ್ಲಿಂದ ಸ್ಪರ್ಧೆ ಮಾಡಬೇಕು. ಇದು ನನ್ನ ನಿರ್ಧಾರ. ವಿಜಯೇಂದ್ರ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಶಿಕಾರಿಪುರ ನನ್ನನ್ನು ಸಿಎಂ ಮಾಡಿದ ಕ್ಷೇತ್ರ ಆ ಕ್ಷೇತ್ರವನ್ನ ಬಿಡಲು ಸಾಧ್ಯವಿಲ್ಲ. ವರುಣಾದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಬೇಡ ಎಂದು ಊಹಾಪೋಹಗಳಿಗೆ ತೆರೆ ಎಳೆದರು. ಇದನ್ನೂ ಓದಿ: ಈ ಕ್ಷೇತ್ರ ಗೆದ್ದ ಪಕ್ಷಕ್ಕೇ ರಾಜ್ಯಾಧಿಕಾರ – ಅಚ್ಚರಿಯಾದರೂ ನೀವು ನಂಬಲೇಬೇಕು
ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ ಪುತ್ರ ರಾಕೇಶ್‌ನನ್ನು (Rakesh Siddaramaiah) ಶಾಸಕನಾಗಿ ಕಾಣಲು ಬಯಸಿದ್ದರು. ರಾಜಕೀಯದಲ್ಲಿ ತಮ್ಮ ಉತ್ತರಾಧಿಕಾರಿ ಮಾಡುವ ಆಕಾಂಕ್ಷೆ ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು.
10 ವರ್ಷಗಳ ಹಿಂದೆಯೇ ಸಿದ್ದರಾಮಯ್ಯ ಅವರು ಹಲವಾರು ಬಾರಿ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ನಂತರ ತಮ್ಮ ನಿಲುವು ಬದಲಿಸಿಕೊಂಡಿದ್ದರು. 2016ರ ಫೆಬ್ರವರಿಯಲ್ಲಿ ನಡೆದ ಜಿಲ್ಲಾ ಹಾಗೂ ತಾ.ಪಂ. ಚುನಾವಣೆ ಕಾಲಕ್ಕೆ ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದರು. ಆಗ ರಾಕೇಶ್‌ಗೆ ತಾವು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂಬ ವಿಶ್ಲೇಷಣೆ ನಡೆದಿತ್ತು. ಎಲ್ಲವೂ ಸಿದ್ದರಾಮಯ್ಯ ಅವರ ಲೆಕ್ಕದಂತೆ ನಡೆದಿದ್ದರೆ 2018ರ ಚುನಾವಣೆಯಲ್ಲಿ ರಾಕೇಶ್ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಆದರೆ ವಿಧಿ ನಿಯಮ ಎಲ್ಲವನ್ನೂ ಉಲ್ಟಾ ಮಾಡಿತ್ತು.
ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರಿಗೆ ಇಬ್ಬರು ಪುತ್ರರು. ರಾಕೇಶ್ ಹಾಗೂ ಡಾ. ಎಸ್ ಯತೀಂದ್ರ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ವಿದ್ಯಾರ್ಥಿಯಾದ ಯತೀಂದ್ರ (Yathindra Siddaramaiah) ಬಹಿರಂಗವಾಗಿ ಎಂದೂ ಕಾಣಿಸಿಕೊಂಡವರಲ್ಲ. ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ಇದ್ದವರು. ಹೆಚ್ಚಾಗಿ ತಾಯಿ ಪಾರ್ವತಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು.
ಆದರೆ ರಾಕೇಶ್‌ರದ್ದು ‘ಆ್ಯಂಗ್ರಿ ಯಂಗ್‌ಮ್ಯಾನ್’ ಶೈಲಿ. 2004 ರಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 2ನೇ ಬಾರಿಗೆ ಉಪ ಮುಖ್ಯಮಂತ್ರಿಯಾದ ನಂತರ ವಿಧಾನಸೌಧದಲ್ಲಿ ಕಾಣಿಸಿಕೊಳ್ಳತೊಡಗಿದರು. ಸಮಾಜವಾದದಲ್ಲಿ ನಂಬಿಕೆ ಇರುವ ಸಿದ್ದರಾಮಯ್ಯ ಅವರು ಕುಟುಂಬ ರಾಜಕಾರಣ ಪ್ರೋತ್ಸಾಹಿಸುವವರಲ್ಲ. ಆದರೆ ರಾಕೇಶ್ ಬಹು ವರ್ಷಗಳ ಹಿಂದೆಯೇ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ತೀವ್ರ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಶಸ್ತ್ರಚಿಕಿತ್ಸೆಯೂ ಆಗಿತ್ತು. ಆತನ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಮಗ ಕೈತಪ್ಪಿ ಹೋಗಬಹುದು ಎಂಬ ಕಾರಣದಿಂದ ಹತ್ತಿರ ಬಿಟ್ಟುಕೊಂಡಿದ್ದರು. ಸ್ವಲ್ಪ ಮಟ್ಟಿನ ಪ್ರೀತಿ ತೋರಿಸುತ್ತಿದ್ದರು. ಆದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಕೊಡು, ಬೇರೆ ವಿಚಾರಗಳಿಗೆ ತಲೆ ಹಾಕಬೇಡ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಇದನ್ನೂ ಓದಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?
2016 ಜು.13 ರಂದು ತಮ್ಮ 39ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ರಾಕೇಶ್, ನನ್ನ ಮೇಲೆ ಅಪ್ಪನ ಪ್ರಭಾವವಿದೆ. ನಾನು ಅವರು ರಾಜಕೀಯದಿಂದ ನಿವೃತ್ತಿಯಾಗುವ ತನಕ ರಾಜಕಾರಣಕ್ಕೆ ಬರುವುದಿಲ್ಲ. ಇಲ್ಲದಿದ್ದಲ್ಲಿ ಅಪ್ಪ-ಮಕ್ಕಳ ರಾಜಕಾರಣ ಎಂಬ ಮಾತು ಬರುತ್ತದೆ. ಅವರು ಸೂಚಿಸಿದರೆ ಮಾತ್ರ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದರು. ಆದರೆ ಬೇಲ್ಜಿಯಂ ಪ್ರವಾಸಕ್ಕೆ ಹೋಗಿದ್ದಾಗ ಅನಾರೋಗ್ಯದಿಂದ ನಿಧನರಾದರು. ಅನಿವಾರ್ಯವಾಗಿ ರಾಜಕೀಯವೇ ಬೇಡ ಅಂತಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿಯಾದರು. ಇದನ್ನೂ ಓದಿ: ದೇವೇಗೌಡರ ಮಕ್ಕಳು ಜಗಳ ಆಡ್ತಾರೆ ಅಂದರೆ ನೀವು ಸುಳ್ಳಾಗ್ತೀರಾ: ಸಿ.ಎಂ ಇಬ್ರಾಹಿಂ
ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಚಿಕ್ಕಮ್ಮತಾಯಿ ಹೇಳಿದಂತೆ ಎರಡು ಕ್ಷೇತ್ರದಲ್ಲಿ ನಿಲ್ಲಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮ ಆದಿನಾಡು ಚಿಕ್ಕಮ್ಮತಾಯಿ ಈ ಹಿಂದೆ ಸಿದ್ದರಾಮಯ್ಯಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ನುಡಿದಿತ್ತು. ದೇವಿಯ ಮಾತಿಗೋ ಅಥವಾ ರಾಜಕೀಯ ಕಾರಣಕ್ಕೋ ಗೊತ್ತಿಲ್ಲ ಈಗ ಸಿದ್ದರಾಮಯ್ಯ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ದೇವಿ ಹೇಳಿದ್ದೇನು?
ಜನವರಿ ತಿಂಗಳಿನಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ (Yathindra Siddaramaiah) ಆದಿನಾಡು ಚಿಕ್ಕಮ್ಮತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಅರ್ಚಕ ಲಿಂಗಣ್ಣ ಮೈ ಮೇಲೆ ಚಿಕ್ಕಮ್ಮತಾಯಿ ಬಂದು ಸಿದ್ದರಾಮಯ್ಯ ಸ್ಪರ್ಧೆಯ ವಿಚಾರವಾಗಿ ಮಾತನಾಡಿತ್ತು.
ಕಾಂಗ್ರೆಸ್ (Congress) ಟಿಕೆಟ್ ಪಟ್ಟಿ ಶನಿವಾರ ಪ್ರಕಟವಾಗಿದ್ದು ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಟಿಕೆಟ್ ನೀಡಿದೆ. ಆದರೆ ಸಿದ್ದರಾಮಯ್ಯ ಅವರು ನಾನು ಎರಡು ಕಡೆ ಸ್ಪರ್ಧೆ ಮಾಡುವಂತೆ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ನಾನು ಕೋಲಾರದಲ್ಲೂ ಟಿಕೆಟ್ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ನಿರ್ಧಾರದ ಹಿಂದೆ ಆದಿನಾಡು ಚಿಕ್ಕಮ್ಮತಾಯಿ ಅಂದು ನುಡಿದ ಮಾತೇ ಕಾರಣ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರ ಬಂದಾಗ ಪತ್ನಿ, ಪುತ್ರನ ಜೊತೆ ಕೇಳಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ದೇವರನ್ನು ಹೆಚ್ಚಾಗಿ ನಂಬುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಎರಡು ಕಡೆ ಟಿಕೆಟ್ ಕೇಳಿದ್ದು ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಎಂಬ ಕುತೂಹಲ ಹೆಚ್ಚಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ಸೋಲು ಅನುಭವಿಸಿದ್ದರೆ, ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದರು.
ಒಂದೂವರೆ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್‌ಗೆ ಬಹುಮತ ಬಂದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಆಸೆಯಲ್ಲಿ ಇದ್ದಾರೆ. ಈ ಕಾರಣಕ್ಕೆ ಬಾದಾಮಿ ಬೆಂಗಳೂರು ಹಾಗೂ ಮೈಸೂರಿನಿಂದ ದೂರವಾಗುತ್ತದೆ ಎಂಬ ಕಾರಣ ನೀಡಿ ವರುಣಾದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.