Tag: varuna constituency

  • ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ತಡೆದದ್ದು ಸಿಎಂ ಸಿದ್ದು : ಪ್ರತಾಪ್ ಸಿಂಹ ಹೊಸ ಬಾಂಬ್

    ನಟ ಸುದೀಪ್ ಪ್ರಚಾರಕ್ಕೆ ಬಾರದಂತೆ ತಡೆದದ್ದು ಸಿಎಂ ಸಿದ್ದು : ಪ್ರತಾಪ್ ಸಿಂಹ ಹೊಸ ಬಾಂಬ್

    ಕಿಚ್ಚ ಸುದೀಪ್ (Sudeep) ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ಮಾಡಿದರು. ಬಹಿರಂಗ ಸಭೆ ಹಾಗೂ ರಾಲಿಗಳಲ್ಲೂ ಸುದೀಪ್ ಭಾಗಿಯಾದರು. ನಾನಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಸುದೀಪ್, ವರುಣಾ ಕ್ಷೇತ್ರಕ್ಕೆ ಹೋಗಿರಲಿಲ್ಲ. ಈ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ (Siddaramaiah) ಮೇಲೆ ಗುರುತರ ಆರೋಪ ಮಾಡಿದ್ದಾರೆ.

    ವರುಣಾ ಕ್ಷೇತ್ರದಲ್ಲಿ ( Varuna Constituency) ಸಿದ್ದರಾಮಯ್ಯನವರು ಗೆಲ್ಲುವುದಕ್ಕಾಗಿ ನಾನಾ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡರು. ತಮ್ಮ ಬಗ್ಗೆ ತೀಕ್ಷ್ಮವಾಗಿ ಪ್ರತಿಕ್ರಿಯೆ ಬಾರದಂತೆ ನೋಡಿಕೊಂಡರು. ಸುದೀಪ್ ಅವರು ವರುಣಾ ಕ್ಷೇತ್ರದ ಪ್ರಚಾರಕ್ಕೆ ಬಾರದಂತೆ ತಡೆಹಿಡಿದರು ಎಂದು ಸಿಂಹ ಆರೋಪಿಸಿದ್ದಾರೆ. ಇದನ್ನೂ ಓದಿ:ಸೋದರಳಿಯನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್

    ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುದೀಪ್ ಬಿಜೆಪಿಗೆ ಬೆಂಬಲಿಸಿದ್ದಕ್ಕಾಗಿ ಅನೇಕರು ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಬಿಜೆಪಿ ಪಕ್ಷದಲ್ಲಿತ್ತು. ಸುದೀಪ್ ಪತ್ರಿಕಾಗೋಷ್ಠಿ ಮಾಡಿ, ತಾವು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು. ಜಾತಿ ಲೆಕ್ಕಾಚಾರವನ್ನು ಗಣನೆಗೆ ತಗೆದುಕೊಂಡು ಸುದೀಪ್ ಅವರನ್ನು ಕೆಲ ಕ್ಷೇತ್ರಗಳಿಗೆ ಮಾತ್ರ ಪ್ರಚಾರಕ್ಕೆ ಕಳುಹಿಸಲಾಗಿತ್ತು.

    ಜಿದ್ದಾಜಿದ್ದಿನ ಕಣವಾಗಿದ್ದ ವರುಣಾ ಕ್ಷೇತ್ರಕ್ಕೆ ಸುದೀಪ್ ಬರಲಿಲ್ಲ. ಸುದೀಪ್ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಅತ್ತ ಮುಖ ಕೂಡ ಹಾಕಲಿಲ್ಲ. ಇದರ ಹಿಂದೆ ಸಿದ್ದರಾಮಯ್ಯನವರು ಇದ್ದರು ಎಂದು ಸಿಂಹ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಸಿದ್ದರಾಮಯ್ಯ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೋ ಕಾದು ನೋಡಬೇಕು.

  • ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಪರವಾಗಿ ವರುಣಾ ಕ್ಷೇತ್ರದಲ್ಲಿ (Varuna Constituency) ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ.

    ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಮ್ಯಾ (Ramya), ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ (Shivarajkumar) ಮತ್ತು ಸಿದ್ಧರಾಮಯ್ಯನವರಿಗೆ ಆಪ್ತರಾಗಿರುವ ದುನಿಯಾ ವಿಜಯ್ (Duniya Vijay) ಹಾಗೂ ನಿಶ್ಚಿಕಾ ನಾಯ್ದು ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಸಿದ್ದರಾಮಯ್ಯ ಪರ ಮತಯಾಚಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ – ನಿಶ್ವಿಕಾ ನಾಯ್ಡು

    ಈ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್, ಸಿದ್ದರಾಮಯ್ಯನವರು ಬಡವರಿಗಾಗಿ ಅನೇಕ ಕಾರ್ಯಕ್ರಮಗಳನ್ನ ನೀಡಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಹೇಳಿದ್ದಾರೆ.

    5 ವರ್ಷ ಪೂರ್ಣ ಆಡಳಿತ ಮಾಡಿದ್ದಾರೆ ಅಂದ್ರೆ ಭ್ರಷ್ಟರಹಿತ ಆಡಳಿತ ಅನ್ನೋದು ಗೊತ್ತಾಗುತ್ತೆ. ಹೊರಗಿನವರಿಗಿಂತ ನಮ್ಮೂರಿನವರು, ನಮ್ಮವರನ್ನ ಗೆಲ್ಲಿಸಬೇಕು. ಎಲ್ಲರೂ ಕೂಡ ಸಿದ್ದರಾಮಯ್ಯ ನವರಿಗೆ ಮತ ಹಾಕಿ. ಅವರು ಮತ್ತೆ ಸಿಎಂ ಆಗ್ಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಜಕೀಯ ಅಖಾಡಕ್ಕೆ ಅಪ್ಪು ಎಳೆತಂದ ಪ್ರತಾಪ್ ಸಿಂಹ : ನಟ ಶಿವಣ್ಣ ಪ್ರತಿಕ್ರಿಯೆ

    ಸಿದ್ದರಾಮಯ್ಯ ಪರ ಶಿವಣ್ಣ ಪ್ರಚಾರಕ್ಕೆ ಬಿಜೆಪಿ ನಾಯಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಣ್ಣ ಅವರ ಬಗ್ಗೆ ಯಾರೂ ಮಾತುನಾಡುವಂತಿಲ್ಲ. ಜೊತೆಗೆ ರಾಜಕೀಯ ವಿವಾದಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಏಕೆಂದರೆ ನಾನು ರಾಜಕೀಯಕ್ಕೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ – ನಿಶ್ವಿಕಾ ನಾಯ್ಡು

    ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ – ನಿಶ್ವಿಕಾ ನಾಯ್ಡು

    – ವರುಣಾ ಕ್ಷೇತ್ರದಲ್ಲಿ ಸ್ಯಾಂಡಲ್‌ವುಡ್‌ ನಟ-ನಟಿಯರ ಅಬ್ಬರದ ಪ್ರಚಾರ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಪರವಾಗಿ ವರುಣಾ ಕ್ಷೇತ್ರದಲ್ಲಿ (Varuna Constituency) ಗುರುವಾರ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭರ್ಜರಿ ಪ್ರಚಾರ ನಡೆಸಿದರು.

    ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಮ್ಯಾ (Ramya), ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಮತ್ತು ಸಿದ್ಧರಾಮಯ್ಯನವರಿಗೆ ಆಪ್ತರಾಗಿರುವ ದುನಿಯಾ ವಿಜಯ್ (Dunia Vijay) ಹಾಗೂ ನಿಶ್ಚಿಕಾ ನಾಯ್ದು ವರುಣಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಇದನ್ನೂ ಓದಿ: ಅಂಜನಾದ್ರಿ ಅಭಿವೃದ್ಧಿ ಮಾಡ್ತೇವೆ, ಯುವಕರಿಗೆ ಆಂಜನೇಯನ ವಿಚಾರಗಳ ಬೆಳೆಸಲು ವಿಶೇಷ ಕಾರ್ಯಕ್ರಮ: ಡಿಕೆಶಿ

    ಈ ವೇಳೆ ಪಬ್ಲಿಕ್‌ ಟಿವಿಯೊಂದಿಗೆ ಮಾತನಾಡಿದ ನಿಶ್ವಿಕಾ ನಾಯ್ಡು (Nishvika Naidu), ಸಿದ್ದರಾಮಯ್ಯ ಅಪ್ಪಾಜಿ ಪರ ಜನರ ಪ್ರೀತಿ ಉಕ್ಕಿ ಹರಿಯುತ್ತಿದೆ. ಜನರು ಅವರಿಗೆ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

    ಇದೇ ಮೊದಲ ಬಾರಿಗೆ ಚುನಾವಣಾ ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದು, ಇಲ್ಲಿ ನಮಗಿಂತಲೂ ಸಿದ್ದರಾಮಯ್ಯನವರ ಮೇಲೆ ಜನರ ಪ್ರೀತಿ ಜಾಸ್ತಿ ಇದೆ. ಕಾಂಗ್ರೆಸ್‌ ಪಕ್ಷ, ಅವರು ಮಾಡಿರುವ ಕೆಲಸಗಳ ಮೇಲೆ ಜನರು ನಂಬಿಕೆಯಿಟ್ಟಿದ್ದಾರೆ. ಪ್ರಚಾರಕ್ಕೆ ಬಂದಿದ್ದು ನನಗೂ ತುಂಬಾ ಖುಷಿಯಿದೆ ಎಂದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ಧರಾಮಯ್ಯ ಪರವಾಗಿ ರಮ್ಯಾ, ಶಿವಣ್ಣ ದುನಿಯಾ ವಿಜಯ್ ಕ್ಯಾಂಪೇನ್

    ಮುಂದೆ ರಾಜಕೀಯಕ್ಕೆ ಬರ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿಶ್ವಿಕಾ, ಸಮಾಜಕ್ಕೆ ಬೇರೆ ಬೇರೆ ರೀತಿಯಲ್ಲಿ ಸೇವೆ ಮಾಡಬಹುದು. ಸದ್ಯಕ್ಕೆ ನಾನು ಸಿನಿಮಾ ರಂಗದಲ್ಲಿದ್ದೇನೆ. ಜನರನ್ನು ರಂಜಿಸುವುದೂ ಒಂದು ಸೇವೆಯೇ, ಸದ್ಯಕ್ಕೆ ರಾಜಕೀಯಕ್ಕೆ ಬರುವ ಯೋಚನೆಯಿಲ್ಲ. ಮುಂದಿನದ್ದು ನೋಡೋಣ ಎಂದು ಮಾತು ಮುಗಿಸಿದರು.

  • ಮೇ 4ರಂದು ರಮ್ಯಾ, ಶಿವಣ್ಣ, ದುನಿಯಾ ವಿಜಯ್‌ರಿಂದ ವರುಣಾದಲ್ಲಿ ಸಿದ್ದು ಪರ ಪ್ರಚಾರ

    ಮೇ 4ರಂದು ರಮ್ಯಾ, ಶಿವಣ್ಣ, ದುನಿಯಾ ವಿಜಯ್‌ರಿಂದ ವರುಣಾದಲ್ಲಿ ಸಿದ್ದು ಪರ ಪ್ರಚಾರ

    ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪರವಾಗಿ ಗುರುವಾರ (ಮೇ 4) ರಂದು ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮೋಹಕ ತಾರೆ ರಮ್ಯಾ (Ramya), ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shivarajkumar) ಹಾಗೂ ನಟ ದುನಿಯಾ ವಿಜಯ್ (Duniya Vijay) ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಬೆಳಿಗ್ಗೆಯಿಂದ ಸಂಜೆವರೆಗೆ ವರುಣಾ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಸ್ಯಾಂಡಲ್‌ವುಡ್ ನಟರು ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಲಿದ್ದಾರೆ. ಇದನ್ನೂ ಓದಿ: ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ವಿಧಾನಸಭಾ ಚುನಾವಣೆಗೆ ದಿನಗಣನೆ ಬಾಕಿಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೆಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಅವರು ವರುಣಾದಲ್ಲಿ ಎರಡು ದಿನ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಯಮ್ಮನನ್ನ ಗೆಲ್ಲಿಸಿದ್ದು ಸರಿಯಲ್ಲ – ಸುಮಲತಾ ಗೆಲುವಿಗೆ ಸಿದ್ದು ಪಶ್ಚಾತಾಪ

    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಾಗಿರುವ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್‌ಕುಮಾರ್ ಹಾಗೂ ನಟ ದುನಿಯಾ ವಿಜಯ್ ಸಿದ್ದರಾಮಯ್ಯ ಅವರ ಪರ ಪ್ರಚಾರಕ್ಕಿಳಿಯುತ್ತಿದ್ದಾರೆ. ಈಗಾಗಲೇ ಕೆಲವು ದಿನಗಳಿಂದ ನಟ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಕೌಂಟರ್‌ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನ ಕಣಕ್ಕಿಳಿಸುತ್ತಿದೆ.

  • ಮಾವನ ಪರ ಪ್ರಚಾರಕ್ಕೆ ಧುಮುಕಿದ ಸಿದ್ದು ಸೊಸೆ

    ಮಾವನ ಪರ ಪ್ರಚಾರಕ್ಕೆ ಧುಮುಕಿದ ಸಿದ್ದು ಸೊಸೆ

    ಮೈಸೂರು: ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ (Varuna Constituency) ಮೊಟ್ಟ ಮೊದಲ ಬಾರಿಗೆ ಸಿದ್ದರಾಮಯ್ಯ (Siddaramaiah) ಕುಟುಂಬದಿಂದ ಮಹಿಳೆಯರು ಪ್ರಚಾರಕ್ಕಿಳಿದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ತಮ್ಮ ಸೊಸೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

    ವರುಣಾ ಕ್ಷೇತ್ರದ ತಾಯೂರು ಗ್ರಾಮ ಪಂಚಾಯ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸಿರುವ ಸೊಸೆ ಸ್ಮಿತಾ ರಾಕೇಶ್‌ ಸಿದ್ದರಾಮಯ್ಯ (Smita Rakesh Siddaramaiah) ಅವರು, ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ. ಇದೇ ವೇಳೆ ಈ ಬಾರಿ ಅತಿಹೆಚ್ಚು ಮತಗಳಿಂದ ಮಾವನವರನ್ನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

    ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಪರ ನಟಿ ರಮ್ಯಾ (Ramya) ಹಾಗೂ ನಟ ದುನಿಯಾ ವಿಜಯ್‌ (Duniya Vijay) ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ತಾವೂ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದು, ಅತ್ಯಧಿಕ ಮತಗಳಿಂದ ಸಿದ್ದರಾಮಯ್ಯ ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಅಣಿಗೊಳಿಸಲು ಮೋದಿ ರಣತಂತ್ರ – 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ಕುರಿತು `ಪಬ್ಲಿಕ್‌ ಟಿವಿ’ಯೊಂದಿಗೆ ಮಾತನಾಡಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯವರಿಗೆ ನನ್ನ ತಂದೆ ಕೊಟ್ಟ ಆಡಳಿತದಲ್ಲಿ ತಪ್ಪು ಹುಡುಕಲಾಗುತ್ತಿಲ್ಲ, ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡೋಕೆ ಆಗ್ತಿಲ್ಲ. ಹಾಗಾಗಿ ಜಾತಿ ವಿರೋಧಿ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟುವ ಪ್ರಯತ್ನವನ್ನ ಬಿಜೆಪಿ ಮಾಡ್ತಿದೆ. ಅದು ಯಶಸ್ವಿಯಾಗಲ್ಲ ಎಂದು ಹೇಳಿದ್ದರು.

  • ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಮೈಸೂರು: ಸಿದ್ದರಾಮಯ್ಯ (Siddaramaiah) ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ (V Srinivas Prasad) ಲೇವಡಿ ಮಾಡಿದ್ದಾರೆ.

    ವರುಣಾ ಕ್ಷೇತ್ರದಲ್ಲಿ (Varuna Constituency) ಸಿದ್ದರಾಮಯ್ಯ ಅಬ್ಬರದ ಪ್ರಚಾರದ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿನ (Rahul Gandhi) ನಿಲ್ಲಿಸಿಕೊಂಡು ಗುಡುಗಿದ್ರು, ಮೋದಿ ಮುಳುಗೇಹೋದರು ಅನ್ನೋಹಾಗೇ ಗುಡುಗಿದ್ರು. ಕೊನೆಗೆ ಏನಾಯ್ತು? ರಾಜ್ಯದಲ್ಲಿ ಕೇವಲ 1 ಸೀಟು ಗೆದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

    ಗುಡುಗಿ.. ಗುಡುಗಿ.. 30 ಸಾವಿರ ವೋಟ್‌ನಲ್ಲಿ ಸೋತರು. ವರುಣಾ ಕ್ಷೇತ್ರದಲ್ಲಿ 1 ಲಕ್ಷ ವೋಟ್ ಗೆಲ್ಲೋಕೆ ಸಾಧ್ಯನಾ? ಪ್ರತಿಪಕ್ಷ ನಾಯಕನಾಗಿ ಮಾತನಾಡುವ ಮಾತಾ ಅದು? ಸೋಮಣ್ಣ ಹೊರಗಿನವರು ಅನ್ನೋ ಸಿದ್ದರಾಮಯ್ಯ, ತಾವು ಬಾದಾಮಿಗೆ ಯಾಕೆ ಹೋದ್ರು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

    ಇದೇ ವೇಳೆ ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಬೇಡಿ ಅಂತಾ ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಫಲಿತಾಂಶದ ನಂತರ ಯೋಚನೆ ಮಾಡೋಣ ಅಂತಾ ಹೇಳಿದ್ದಾರೆ. ಫಲಿತಾಂಶದ ಮೇಲೆ ದಲಿತ ಸಿಎಂ, ಅಥವಾ ಲಿಂಗಾಯತ ಸಿಎಂ ಅನ್ನೋದು ನಿರ್ಧಾರವಾಗುತ್ತೆ. ಪಕ್ಷದ ವರಿಷ್ಠರು ಅದನ್ನ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

  • ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ, ನನ್ನ ಪ್ಯಾಂಟ್‌ ಹರಿದು ಹಾಕಿದ್ರು – ವಿ.ಸೋಮಣ್ಣ

    ಸಿದ್ದರಾಮಯ್ಯಗಾಗಿ ಒದೆ ತಿಂದಿದ್ದೇನೆ, ನನ್ನ ಪ್ಯಾಂಟ್‌ ಹರಿದು ಹಾಕಿದ್ರು – ವಿ.ಸೋಮಣ್ಣ

    ಚಾಮರಾಜನಗರ: 2006ರ ಚುನಾವಣೆಯಲ್ಲಿ (2006 Election) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೋಸ್ಕರ (Siddaramaiah) ಒದೆ ತಿಂದಿದ್ದೇನೆ ಎಂದು ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.

    ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಯಾರು? ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ನಾನೇ ಎಂಬ ಅಭಿಮಾನಿಗಳ ಮಾತು ಕೇಳಿ ಖುಷಿಯೂ ಆಗುತ್ತೆ, ನೋವು ಆಗುತ್ತೆ: ಸೋಮಣ್ಣ

    2006ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒದೆ ತಿಂದಿದ್ದೇನೆ. ಬರಿಮೈಯಲ್ಲಿ ದೇವಲಾಪುರದಿಂದ ಮೈಸೂರಿಗೆ ಹೋಗಿದ್ದೇನೆ. ಆವತ್ತು ನನ್ನ ಕಾರಿನ ಗ್ಲಾಸ್ ಒಡೆದಿದ್ರು, ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮುದಾಯದವರನ್ನೇ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು

    ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೇ ನನಗು ಅವರಿಗು ಇರೋ ವ್ಯತ್ಯಾಸ. ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರಿನೂ ಅಲ್ಲ, ನಾನೂ ಅಭ್ಯರ್ಥಿ, ಅವರೂ ಅಭ್ಯರ್ಥಿ. ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ, ಅವರು ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ ಎಂದ ಸೋಮಣ್ಣ, ನಾನು ವರುಣಾದಲ್ಲಿ ಸ್ಪರ್ಧೆ ಮಾಡ್ತಿರೋದು ವಿಧಿ ನಿಯಮ ಎಂದು ಹೇಳಿದ್ದಾರೆ.

  • ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

    ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

    ಮೈಸೂರು: ವರುಣಾ ಕ್ಷೇತ್ರದಲ್ಲಿ (Varuna Constituency) 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಹೇಳುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಭಯ, ಪುಕ್ಕಲುತನ ಕಾಡ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಪುಕ್ಕಲುತನ, ಭಯ ಕಾಡುತ್ತಿದೆ. ಹಾಗಾಗಿ 18 ವರ್ಷ ತುಂಬದ ಮೊಮ್ಮಗನ ಜೊತೆ ಪ್ರಚಾರಕ್ಕೆ ಬರುತ್ತಿದ್ದಾರೆ. ಕುಟುಂಬದವರನ್ನ ಕರೆದುಕೊಂಡು ಪೂಜೆ ಪುನಸ್ಕಾರ ಮಾಡಿ, ಸೆಂಟಿಮೆಂಟಾಗಿ ಮತ ಕೇಳ್ತಿದ್ದಾರೆ. ಭಯ ಮತ್ತು ಪುಕ್ಕಲುತನಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ

    ಸಿದ್ದರಾಮಯ್ಯ ಅವರೇ ನಿಮಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ನಿಮ್ಮ ಮೊಮ್ಮಗನನ್ನ ಉತ್ತರಾಧಿಕಾರಿ ಅಂತಾ ಸಂದೇಶ ನೀಡ್ತಿದ್ದೀರಿ. ಕಾಂಗ್ರೆಸ್‌ಗೆ ಹೋದಮೇಲೆ ನಿಮ್ಮಲ್ಲಿರುವ ನೈತಿಕತೆ ಸಿದ್ಧಾಂತ ಸತ್ತು ಹೋಯ್ತಾ? ನಾವು ಕಂಡ ಸಿದ್ದರಾಮಯ್ಯ ಜನರಿಗೆ ವೇದ, ಬೋಧನೆ ಮಾಡ್ತಾ ಇದ್ದವರು. ಆ ಸಿದ್ದರಾಮಯ್ಯ ಎಲ್ಲಿ ಹೋದ್ರು? ಕಾಂಗ್ರೆಸ್‌ಗೆ ಹೋದ ಬಳಿಕ ನಿಮ್ಮ ಸಿದ್ಧಾಂತ, ನೈತಿಕತೆಯನ್ನ ಕಾಂಗ್ರೆಸ್‌ಗೆ ಅಡವಿಟ್ಟರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇದು ನನ್ನ ಕೊನೇ ಚುನಾವಣೆ, 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ – ನಾಮಪತ್ರ ಸಲ್ಲಿಸಿ ಸಿದ್ದು ಮನವಿ

  • ಇದು ನನ್ನ ಕೊನೇ ಚುನಾವಣೆ, 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ – ನಾಮಪತ್ರ ಸಲ್ಲಿಸಿ ಸಿದ್ದು ಮನವಿ

    ಇದು ನನ್ನ ಕೊನೇ ಚುನಾವಣೆ, 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ – ನಾಮಪತ್ರ ಸಲ್ಲಿಸಿ ಸಿದ್ದು ಮನವಿ

    ಮೈಸೂರು: ವರುಣಾ ಕ್ಷೇತ್ರದಿಂದ (Varuna Constituency) ಕಣಕ್ಕಿಳಿದಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಬುಧವಾರ ಬೆಳಗ್ಗೆ ಹುಟ್ಟೂರು ಸಿದ್ದರಾಮನಹುಂಡಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಮನೆ ದೇವರು ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಂತರ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಿಗೂ ಭಕ್ತಿಭಾವದಿಂದ ಪೂಜೆ ಸಲ್ಲಿಸಿದ್ದಾರೆ.

    ಬಳಿಕ ನಂಜನಗೂಡಿನಲ್ಲಿ (Nanjangud) ನಡೆದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನಗೆ ಕೊನೆಯ ಚುನಾವಣೆ, ಹಾಗಾಗಿ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಏ.21, 22ರಂದು ದಾವಣಗೆರೆ, ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ

    ಇದು ನನ್ನ ಕೊನೆಯ ಚುನಾವಣೆ, ಆಮೇಲೆ ಯತೀಂದ್ರ, ಧವನ್ ರಾಕೇಶ್ ಇದ್ದಾರೆ. ಧವನ್‌ ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕು. ಓದು ಮುಗಿಸಿದ ನಂತರ ರಾಜಕಾರಣಕ್ಕೆ ಬರುತ್ತಾನೆ. ರಾಕೇಶ್‌ ಮೇಲೆ ಇದ್ದ ಪ್ರೀತಿಯನ್ನ ಅವನ ಮಗನ ಮೇಲೂ ತೋರಿಸುತ್ತಿದ್ದೀರಿ ಅದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ಬಿಜೆಪಿ (BJP) ಅವರು ಬೆಂಗಳೂರಿನ ನಿವಾಸಿ ಸೋಮಣ್ಣ (V Somanna) ಅವರನ್ನ ಕಣಕ್ಕಿಳಿಸಿದೆ. ಬಿಜೆಪಿ – ಜೆಡಿಎಸ್ (BJP-JDS) ಒಳ ಒಪ್ಪಂದ ಮಾಡಿಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಭಾರತಿ ಶಂಕರ್ ನನ್ನು ಕಣಕ್ಕೆ ಇಳಿಸಿರೋದು ದಲಿತರ ಮತ ಛಿದ್ರ ಮಾಡುವ ಷಡ್ಯಂತ್ರ. ನನ್ನನ್ನ ಸೋಲಿಸಲು ಬಿಜೆಪಿ-ಜೆಡಿಎಸ್‌ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ: ಜನರಲ್ಲಿ ಸುದೀಪ್‌ ಮನವಿ

    ಬಿಜೆಪಿಯಲ್ಲಿ ಹಿರಿಯರಿಗೆ ಗೌರವವಿಲ್ಲ, ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿಗೆ ಟಿಕೆಟ್‌ ಕೊಡಲಿಲ್ಲ. ಇಡೀ ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಪರ ಗಾಳಿ ಬೀಸಿದೆ. ವರುಣಾ ಜನತೆಗೆ ಎಷ್ಟೇ ಕೋಟಿ ಕೊಟ್ಟರೂ ಅದನ್ನ ಕಾಲಕಸದಂತೆ ಕಾಣುತ್ತಾರೆ ಅನ್ನೋದು ನನಗೆ ಗೊತ್ತಿದೆ. ಇದು ನನ್ನ ಕೊನೆಯ ಚುನಾವಣೆ, ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಹಾಗಾಗಿ ಈ ಬಾರಿ 1 ಲಕ್ಷ ಮತಗಳ ಅಂತರದಿಂದ ನನ್ನನ್ನ ಗೆಲ್ಲಿಸಬೇಕು ಎಂದು ಕೋರಿದ್ದಾರೆ.

  • ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!

    ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!

    – ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಗೆ ವರುಣಾ ಟಿಕೆಟ್ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ವಿಜಯೇಂದ್ರ ಕೂಡ ವರುಣಾ (Varuna Constituency) ದಿಂದಲೇ ಸ್ಪರ್ಧಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

    ವಿಜಯೇಂದ್ರ ಸ್ಪರ್ಧೆಗೆ ಯಡಿಯೂರಪ್ಪ (BS Yediyurappa) ರೆಡ್ ಸಿಗ್ನಲ್ ಕೊಟ್ಟರು. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್‍ವೈ ಹೇಳಿದರು. ಇದರ ಹಿಂದೆ ನಾನಾ ಲೆಕ್ಕಾಚಾರಗಳು ಇದ್ಯಾ ಅನ್ನೋ ಮಾತುಗಳು ಶುರುವಾಗಿದೆ. ವರುಣಾಕ್ಕೆ ವಿಜಯೇಂದ್ರ ಬಿಟ್ಟು ಕಾರ್ಯರ್ತರ ಹೆಸರನ್ನಷ್ಟೇ ಹೈಕಮಾಂಡ್‍ಗೆ ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಸೆಕೆಂಡ್ ಲಿಸ್ಟ್ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಬಂಡಾಯ- ಬಿಜೆಪಿ, ಜೆಡಿಎಸ್ ಸೇರ್ಪಡೆ ಸಾಧ್ಯತೆ

    ಪ್ರತಾಪ್, ಸದಾನಂದ, ಕಾ.ಪು.ಸಿದ್ದಲಿಂಗಸ್ವಾಮಿ ಹೆಸರುಗಳು ಶಿಫಾರಸು ಮಾಡಲಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರು ಶಿಫಾರಸ್ಸು ಮಾಡಿದ್ದರ ಅಸಲಿಯತ್ತೇನು..? ಯಡಿಯೂರಪ್ಪಗೆ ಬೆದರಿ ಶಿಫಾರಸ್ಸೋ..? ಅನ್ನೋ ಪ್ರಶ್ನೆಗಳು ಶುರುವಾಗಿದೆ. ಹೈಕಮಾಂಡ್ ಹೇಳಿದ್ರೆ ಮಾತ್ರ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್‍ವೈ ಹೇಳಿದ್ರು. ಹಾಗಾದ್ರೆ ಶಿಕಾರಿಪುರದ ಜೊತೆಗೆ ವರುಣಾ ಕ್ಷೇತ್ರ ಕೊಟ್ಟರೆ ಎರಡು ಕಡೆ ಸ್ಪರ್ಧೆ ಎಂಬ ಸಂದೇಶ ರವಾನಿಸಿದ್ರಾ..? ಅನ್ನೋ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ವರುಣಾದಲ್ಲಿ ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದದ ಅನುಮಾನವನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ವ್ಯಕ್ತಪಡಿಸಿದ್ದಾರೆ… ದೇವೇಗೌಡರು ಕೂಡ ಪರೋಕ್ಷವಾಗಿ ಅಡ್ಜೆಸ್ಟ್‍ಮೆಂಟ್ ರಾಜಕೀಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರು.

    ಇತ್ತ ಹೈಕಮಾಂಡ್ ಅಂಗಳಕ್ಕೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆ ಆಗಿದೆ. ಕ್ಷೇತ್ರವಾರು ತಲಾ ಮೂರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗಿದೆ. ಟಿಕೆಟ್‍ಗೆ ಇರುವ ವಯಸ್ಸಿನ ಮಿತಿ ಬಗ್ಗೆಯೂ ವರಿಷ್ಠರೇ ನಿರ್ಧರಿಸಬೇಕು. ಕೆಲವರ ಕುಟುಂಬಕ್ಕೆ ಟಿಕೆಟ್ ಕೊಡಬೇಕಾ ಬೇಡ್ವಾ ಅನ್ನೋದು ದೆಹಲಿಯಲ್ಲೇ ಇತ್ಯರ್ಥ ಆಗುತ್ತೆ. ಹಲವು ಕ್ಷೇತ್ರಗಳಲ್ಲಿರುವ ಆಡಳಿತ ವಿರೋಧಿ ಅಲೆ ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡಲಾಗುತ್ತೆ. ಜೊತೆಗೆ ಹಲವು ಹಾಲಿ ಶಾಸಕರ ವಿರುದ್ಧ ಇರುವ ಸ್ವಪಕ್ಷೀಯರ ವಿರೋಧ ಬಗ್ಗೆಯೂ ದೆಹಲಿಯಲ್ಲೇ ಡಿಸಿಷನ್ ಆಗಲಿದೆ. ಎಲ್ಲ ಸಮಸ್ಯೆ, ಮಾನದಂಡ, ಯೋಗ್ಯತೆ, ಜಾತಿ ನೋಡಿಕೊಂಡು ವರಿಷ್ಠರು ಟಿಕೆಟ್ ಹಂಚಲಿದ್ದಾರೆ. ಈ ವಾರಾಂತ್ಯ ಅಥವಾ ಮುಂದಿನ ವಾರದ ಮೊದಲೆರಡು ದಿನಗಳಲ್ಲೇ ಪಟ್ಟಿ ಪ್ರಕಟ ಆಗುವ ಸಾಧ್ಯತೆ ಇದೆ.