Tag: Varun Gandhi

  • ಇದು ಹುಚ್ಚುತನವೋ ಅಥವಾ ದೇಶದ್ರೋಹವೋ – ಕಂಗನಾ ವಿರುದ್ಧ ವರುಣ್ ಗಾಂಧಿ ಕಿಡಿ

    ಇದು ಹುಚ್ಚುತನವೋ ಅಥವಾ ದೇಶದ್ರೋಹವೋ – ಕಂಗನಾ ವಿರುದ್ಧ ವರುಣ್ ಗಾಂಧಿ ಕಿಡಿ

    ನವದೆಹಲಿ: 2014ರಲ್ಲಿ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು, 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿಕೆ ನೀಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಇದು ಹುಚ್ಚುತನವೋ ಅಥವಾ ದೇಶದ್ರೋಹವೋ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕಂಗನಾ, ಭಾರತಕ್ಕೆ 1947 ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ. ನಾನು ರಾಷ್ಟ್ರೀಯತೆ, ಸೇನೆ ಮತ್ತು ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿ ಮಾತನಾಡುವಾಗ ನಾನು ಬಿಜೆಪಿಯ ಅಜೆಂಡಾವನ್ನು ಪಾಲಿಸುತ್ತೇನೆ ಎಂದು ಕೆಲವರು ಹೇಳುತ್ತಾರೆ. ನಾನು ಆ ರೀತಿ ಇಲ್ಲ. ನಾನು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ನಾನು ಕಲಾವಿದೆಯಾಗಿ ಅಲ್ಲ ಸಾಮಾನ್ಯ ಪ್ರಜೆಯಾಗಿ ಇರುತ್ತೇನೆ. ನಮ್ಮ ದೇಶ ಪ್ರಸ್ತುತ ದಿನಗಳಲ್ಲಿ ವಿಶ್ವಮಾನ್ಯತೆ ಪಡೆದುಕೊಳ್ಳುತ್ತಿದೆ ಎಂದಿದ್ದರು. ಇದನ್ನೂ ಓದಿ: ಗೃಹಿಣಿ, ಮಗುವಿನ ತಾಯಿಯಾಗಬಯಸಿದ್ದಾರಂತೆ ಕಂಗನಾ- ಬಾಳ ಸಂಗಾತಿ ಬಗ್ಗೆ ನಟಿ ಸುಳಿವು!

    ಕಂಗನಾ ಈ ಹೇಳಿಕೆಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿರುವ ವರುಣ್ ಗಾಂಧಿ, ಒಮ್ಮೆ ಮಹಾತ್ಮ ಗಾಂಧೀಜಿಯವರ ತ್ಯಾಗ ಮತ್ತು ತಪಸ್ಸಿಗೆ ಅವಮಾನ, ಮತ್ತೆ ಗಾಂಧೀಜಿ ಹಂತಕನಿಗೆ ಗೌರವ. ಈಗ ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆಯೇ ತಿರಸ್ಕಾರ ಮನೋಭಾವ ಈ ರೀತಿಯ ಆಲೋಚನೆಯನ್ನು ಹುಚ್ಚುತನ ಎನ್ನಬೇಕೋ ಅಥವಾ ದೇಶದ್ರೋಹ ಎಂದು ಕರೆಯಬೇಕೋ ಎಂದು ವರುಣ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

    ಕಂಗನಾ ಈ ರೀತಿ ಹೇಳಿಕೆ ಬಳಿಕ ಹಲವು ಮಂದಿ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಕಂಗನಾ ಈ ಹೇಳಿಕೆ ಮಹಾತ್ಮಾ ಗಾಂಧಿ, ಮಂಗಲ್ ಪಾಂಡೆ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್ ಸೇರಿದಂತೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅವಮಾನ ಎಂದು ಕಂಗನಾ ವಿರುದ್ಧ ನೆಟ್ಟಿಗರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಶಿವರಾಜ್ ತಂಗಡಗಿ

  • ರೈತರ ನೋವನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಬೇಕು: ವರುಣ್ ಗಾಂಧಿ

    ರೈತರ ನೋವನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಬೇಕು: ವರುಣ್ ಗಾಂಧಿ

    ನವದೆಹಲಿ: ರೈತರ ನೋವನ್ನು ಅರ್ಥಮಾಡಿಕೊಳ್ಳಲು ಮೊದಲು ಅವರ ಮಾತನ್ನು ಆಲಿಸಬೇಕು ಎಂದು ಪಕ್ಷದ ವಿರುದ್ಧ ಬಿಜೆಪಿಯ ಲೋಕಸಭಾ ಸಂಸದ ವರುಣ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ.

    ಇಂದು ಲಖಿಂಪುರ ಮತ್ತು ಪಿಲಿಭಿತ್ ಗಡಿಭಾಗದ ರೈತರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿದರು. ರೈತರ ನೋವಿಗೆ ಕಿವಿಗೊಡಬೇಕು. ರೈತರ ಕಷ್ಟಗಳನ್ನು ತಿಳಿದುಕೊಳ್ಳಲು ಮೊದಲು ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಸಿಗಲಿದೆ ಎಂಬುದಕ್ಕೆ ಕಾನೂನು ರಕ್ಷಣೆ ಬೇಕಾಗಿದೆ. ಇದರಿಂದ ಮಾತ್ರವೇ ಸಗಟು ಮಾರುಕಟ್ಟೆಯಲ್ಲಿ ರೈತರ ಶೋಷಣೆ ತಪ್ಪಲಿದೆ ಎಂದು ಹೇಳಿದರು. ಇದನ್ನೂ ಓದಿ:  ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ

    ಕಳೆದ ಕೆಲವು ದಿನಗಳಿಂದ ವರುಣಗಾಂಧಿ ಸತತವಾಗಿ ರೈತರ ಬೇಡಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್ 29ರಂದು ಮಂಡಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಪಿಲಿಭಿತ್ ಸೇರಿದಂತೆ 17 ಜಿಲ್ಲೆಗಳಲ್ಲಿ ರೈತ ತನ್ನ ಭತ್ತದ ಬೆಳೆಗೆ ತಾನೇ ಬೆಂಕಿ ಹಚ್ಚುತ್ತಿದ್ದಾನೆ ಎಂದು ಮಂಡಿ ನೌಕರರಿಗೆ ಹೇಳಿದ್ದರು. ಇದು ಇಡೀ ರಾಜ್ಯಕ್ಕೆ ದೊಡ್ಡ ಅವಮಾನ ಎಂದು ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀಟ್ ಫಲಿತಾಂಶ ಪ್ರಕಟ- ಇ-ಮೇಲ್‍ಗೇ ರಿಸಲ್ಟ್

  • ರೈತರ ಪರ ಧ್ವನಿ ಎತ್ತಿದ್ದ ವಾಜಪೇಯಿ ಭಾಷಣ ಹಂಚಿಕೊಂಡ ವರುಣ್ ಗಾಂಧಿ

    ರೈತರ ಪರ ಧ್ವನಿ ಎತ್ತಿದ್ದ ವಾಜಪೇಯಿ ಭಾಷಣ ಹಂಚಿಕೊಂಡ ವರುಣ್ ಗಾಂಧಿ

    ನವದೆಹಲಿ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರವನ್ನು ವಿರೋಧಿಸಿ ತಮ್ಮ ಸರ್ಕಾರದ ವಿರುದ್ಧವೇ ಬಿಜೆಪಿ ಸಂಸದ ವರುಣ್ ಗಾಂಧಿ ತೊಡೆತಟ್ಟಿದ್ದಾರೆ.

    1980ರಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡುತ್ತಾ, ರೈತರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣದ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರೈತರ ಪರ ಧ್ವನಿಯಾಗಿದ್ದಾರೆ. ಇದನ್ನೂ ಓದಿ: ಲಖೀಂಪುರ್ ರೈತರ ಹತ್ಯಾಕಾಂಡ ಪ್ರಕರಣ- ಅಶೀಶ್ ಮಿಶ್ರಾ SIT ವಶಕ್ಕೆ

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಯ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಬೆಂಬಲಕ್ಕೆ ನಿಂತಿರುವ ವರುಣ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಾಜಪೇಯಿ ಅವರ ಭಾಷಣದ ತುಣುಕೊಂದನ್ನು ಹಾಕಿಕೊಂಡು, ವಿಶಾಲ ಹೃದಯದ ನಾಯಕನಿಂದ ಜಾಣ್ಮೆಯ ಮಾತುಗಳು ಎಂದು ಶೀರ್ಷಿಕೆ ನೀಡಿದ್ದಾರೆ. ಈ ಮೂಲಕ ತಮ್ಮದೇ ಸರ್ಕಾರಕ್ಕೆ ಮುಜುಗರವಾಗುವಂತೆ ಮಾಡಿದ್ದಾರೆ. ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ- ಯುಪಿ ಸರ್ಕಾರದಿಂದ 45 ಲಕ್ಷ ರೂ.ಪರಿಹಾರ ಘೋಷಣೆ

    1980ರಲ್ಲಿ ಕಾಂಗ್ರೆಸ್ ಸರ್ಕಾರ ಕಾನೂನು ದುರುಪಯೋಗಪಡಿಸಿಕೊಂಡು ಅವರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಮತ್ತು ಶಾಂತಿಯುತ ಹೋರಾಟವನ್ನು ಭಗ್ನಗೊಳಿಸಲು ಪ್ರಯತ್ನ ಪಟ್ಟರೆ ರೈತರ ಹೋರಾಟದೊಂದಿಗೆ ನಾನು ಕೈ ಜೋಡಿಸಲು ನಾಚಿಕೆಪಡುವುದಿಲ್ಲ ಅವರೊಂದಿಗೆ ಹೋರಾಡುತ್ತೇನೆ ಎಂದು ವಾಜಪೇಯಿ ಹೇಳಿರುವುದು ಈ ವೀಡಿಯೋದಲ್ಲಿದೆ.

    ಈ ಮೊದಲು ರೈತರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವರುಣ್ ಗಾಧಿ ಪಟ್ಟುಹಿಡಿದಿದ್ದರು. ಇದನ್ನು ಗಮನಿಸಿ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈ ಬಿಡಲಾಗಿತ್ತು. ಇದೀಗ ಮತ್ತೆ ತಮ್ಮದೇ ಪಕ್ಷದ ವಿರುದ್ಧ ವರುಣ್ ಗಾಂಧಿ ಮತ್ತೊಮ್ಮೆ ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ: ಲಖಿಂಪುರ್ ಸಂತ್ರಸ್ತ ಕುಟುಂಬಗಳಿಗೆ ಹಣ ಬೇಕಿಲ್ಲ, ನ್ಯಾಯ ಬೇಕು: ಪ್ರಿಯಾಂಕಾ ಗಾಂಧಿ

  • ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು ಗೋಡ್ಸೆ ಜಿಂದಾಬಾದ್, ದೇಶಕ್ಕೆ ಅವಮಾನ: ವರುಣ್ ಗಾಂಧಿ

    ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು ಗೋಡ್ಸೆ ಜಿಂದಾಬಾದ್, ದೇಶಕ್ಕೆ ಅವಮಾನ: ವರುಣ್ ಗಾಂಧಿ

    ನವದೆಹಲಿ: ರಾಷ್ಟ್ರಪಿತನ ಜನ್ಮ ದಿನಾಚರಣೆಯಂದು ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಅವರು, ಬೇಜವಾಬ್ದಾರಿಯಿಂದ ಇಡೀ ದೇಶ ನಾಚಿಕೆಪಡುವಂತೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಭಾರತವು ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಆದರೆ ಮಹಾತ್ಮರು ತಮ್ಮ ಅಸ್ತಿತ್ವದ ಮೂಲಕ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಶಕ್ತಿಗೆ ಭದ್ರ ಬುನಾದಿ ಹಾಕಿದರು. ಅದು ಇಂದಿಗೂ ನಮ್ಮ ದೊಡ್ಡ ಶಕ್ತಿಯಾಗಿ ಉಳಿದಿದೆ. ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡುವುದು ಬೇಜವಾಬ್ದಾರಿಯಿಂದ ಕೂಡಿದ್ದು, ರಾಷ್ಟ್ರವನ್ನು ಅವಮಾನಿಸುತ್ತಿದ್ದಾರೆ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಟ್ವಿಟರ್‍ನಲ್ಲಿ ನಾಥೂರಾಮ್ ಗೋಡ್ಸೆ ಜಿಂದಾಬಾದ್ ಟ್ರೆಂಡಿಂಗ್ ಆಗಿದ್ದು, ಭಾರೀ ವಿವಾದ ಭುಗಿಲೆದ್ದಿದೆ. ವರುಣ್ ಗಾಂಧಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಕಾಂಗ್ರೆಸ್ ನಿಂದ ಅಸಂಬದ್ಧ ಸುಳ್ಳು ಹೇಳಿಕೆ- ಅಮರೀಂದರ್ ಸಿಂಗ್

    1948ರ ಜನವರಿ 30 ರಂದು ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಈ ತಪ್ಪಿನ ಶಿಕ್ಷೆಯಾಗಿ ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು. ಭಾರತ ವಿಭಜನೆಗೆ ಗಾಂಧಿಯೇ ಕಾರಣವೆಂದು ಗೋಡ್ಸೆ ದೂಷಿಸುತ್ತಿದ್ದರು.

  • ಪುತ್ರನನ್ನ ಸಂಪುಟದಿಂದ ಕೈ ಬಿಟ್ಟಿದ್ಯಾಕೆ ಪ್ರಶ್ನೆಗೆ ಉತ್ತರಿಸದ ಮನೇಕಾ ಗಾಂಧಿ

    ಪುತ್ರನನ್ನ ಸಂಪುಟದಿಂದ ಕೈ ಬಿಟ್ಟಿದ್ಯಾಕೆ ಪ್ರಶ್ನೆಗೆ ಉತ್ತರಿಸದ ಮನೇಕಾ ಗಾಂಧಿ

    ಲಕ್ನೋ: ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರನ್ನು ಈ ಬಾರಿ ನೂತನ ಮೋದಿ ಸಂಪುಟದಿಂದ ಕೈ ಬಿಡಲಾಗಿದೆ. ಈ ಸಂಬಂಧ ಸಂಪುಟದಿಂದ ಕೈ ಬಿಟ್ಟಿದ್ಯಾಕೆ ಪ್ರಶ್ನೆಗೆ ಉತ್ತರಿಸದೇ ಅವರು ನಡೆದಿದ್ದಾರೆ.

    ಈ ಬಾರಿ ಸುಲ್ತಾನಪುರ ಕ್ಷೇತ್ರದಿಂದ ಗೆಲುವು ದಾಖಲಿಸಿರುವ ಮನೇಕಾ ಗಾಂಧಿ ಅಲ್ಲಿಯ ಜನತೆಗೆ ಧನ್ಯವಾದ ತಿಳಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮನೇಕಾ ಗಾಂಧಿ, ನನ್ನನ್ನು ಸಂಪುಟದಿಂದ ಕೈ ಬಿಟ್ಟಿದ್ಯಾಕೆ ಪ್ರಶ್ನೆಗೆ ಸುಲ್ತಾನಪುರ ಕ್ಷೇತ್ರದ ಜನತೆ ಉತ್ತರ ನೀಡಲಿದ್ದಾರೆ. ಈ ಬಾರಿ ಪುತ್ರ ವರುಣ್ ಗಾಂಧಿ ಸಹ ಸೇರ್ಪಡೆಯಾಗಿಲ್ಲ ಎಂಬ ಪ್ರಶ್ನೆ ಕೇಳುತ್ತಿದ್ದಂತೆ, ಸರಿ ಇವಾಗ ನಾವಿನ್ನು ಹೊರಡುತ್ತೇವೆ ಎಂದು ಹೇಳಿ ಹೋಗಿದ್ದಾರೆ.

    ಕ್ಷೇತ್ರದ ಪ್ರತಿಯೊಂದು ಗ್ರಾಮಗಳನ್ನು ಅಭಿವೃದ್ಧಿಯತ್ತ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇನೆ. ಸಮಾಜದ ಪ್ರತಿಯೊಂದು ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಭೇದ ಭಾವ ಮಾಡದೇ ಕೆಲಸ ಮಾಡುತ್ತೇನೆ. ಅತಿ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ ಮತ್ತು ಸಚಿವರಾಗಿರುವರಿಗೆ ತಾತ್ಕಾಲಿಕ ಸ್ಪೀಕರ್ ಸ್ಥಾನ ನೀಡುವ ಸಾಧ್ಯತೆಗಳಿರುತ್ತವೆ ಎಂದು ಸ್ಪಷ್ಟಪಡಿಸಿದರು.

    ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ನಿಮ್ಮ ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಕುರಿತು ಪತ್ರಗಳನ್ನು ಬರೆದು ನೀಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. 2014ರಲ್ಲಿ ಫಿಲಿಭಿತ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮನೇಕಾ ಗಾಂಧಿ ಈ ಬಾರಿ ಸುಲ್ತಾನಪುರದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿದ್ದಾರೆ.

    ಸುಲ್ತಾನಪುರದಿಂದ ಕಣಕ್ಕಿಳಿದಿದ್ದ ಬಹುಜನ ಸಮಾಜವಾದಿ ಪಾರ್ಟಿಯ ಚಂದ್ರ ಭದ್ರ ಸಿಂಗ್ ಸೋನು ವಿರುದ್ಧ 14 ಸಾವಿರ ಮತಗಳ ಅಂತರದಲ್ಲಿ ಮನೇಕಾ ಗಾಂಧಿ ಗೆಲುವು ದಾಖಲಿಸಿದ್ದಾರೆ. ಬಿಎಸ್‍ಪಿಯ ಸೋನು ಕೆಲವು ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಮನೇಕಾ ಗಾಂಧಿ ಅವರಿಗೆ ಭಾರೀ ಸ್ಪರ್ಧೆಯನ್ನು ನೀಡಿದ್ದರು.

  • ಅಂತವರನ್ನ ಶೂ ಲೇಸ್ ಕಟ್ಟಲು ಇಟ್ಟುಕೊಳ್ಳುತ್ತೇನೆ: ವರುಣ್ ಗಾಂಧಿ

    ಅಂತವರನ್ನ ಶೂ ಲೇಸ್ ಕಟ್ಟಲು ಇಟ್ಟುಕೊಳ್ಳುತ್ತೇನೆ: ವರುಣ್ ಗಾಂಧಿ

    ಲಕ್ನೋ: ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದು, ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ಉತ್ತರ ಪ್ರದೇಶದ ಸುಲ್ತಾನ್‍ಪುರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ತಾಯಿ ಮನೇಕಾ ಗಾಂಧಿ ಪರ ವರುಣ್ ಗಾಂಧಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಶನಿವಾರ ನಡೆದ ಸಮಾವೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿ ಅಭ್ಯರ್ಥಿ ಚಂದ್ರ ಭದ್ರಾಸಿಂಗ್ ಹೆಸರನ್ನು ಪ್ರಸ್ತಾಪಿಸಿದ ವರುಣ್ ಗಾಂಧಿ, ಅಂತವರನ್ನು ನನ್ನ ಶೂ ಲೇಸ್ ಕಟ್ಟಲು ಇಟ್ಟುಕೊಂಡಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ವ್ಯಕ್ತಿತ್ವವೇ ಇಲ್ಲದ ಮನುಷ್ಯ ಬದುಕಿದ್ದೂ ಸತ್ತಂತೆ. ದೇವರನ್ನು ಹೊರತುಪಡಿಸಿ ನೀವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿಮಗೆ ಯಾರು ಏನನ್ನೂ ಮಾಡುವುದಿಲ್ಲ. ನಾನು ಸಂಜಯ್ ಗಾಂಧಿಯವರ ಪುತ್ರ. ಇಲ್ಲಿಯೇ ಇರುತ್ತೇನೆ ಎಂದು ಹೇಳಿದರು.

    ವರುಣ್ ಗಾಂಧಿಯವರು ಕಾಂಗ್ರೆಸ್‍ನ ಪ್ರಬಲ ನಾಯಕರಾಗಿದ್ದ ಸಂಜಯ್ ಗಾಂಧಿ ಅವರ ಪುತ್ರ. 1980ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ಮೃತಪಟ್ಟಿದ್ದರು.

    ವರುಣ್ ಗಾಂಧಿ 2014ರ ಲೋಕಸಭಾ ಚುನಾವಣೆಯಲ್ಲಿ ಸುಲ್ತಾನ್‍ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಈ ಬಾರಿ ತಾಯಿ ಮನೇಕಾ ಗಾಂಧಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ತಾಯಿಯ ಕ್ಷೇತ್ರವಾದ ಫಿಲಿಬಿತ್ ನಿಂದ ವರುಣ್ ಗಾಂಧಿ ಸ್ಪರ್ಧೆ ಮಾಡುತ್ತಿದ್ದಾರೆ.

  • ಮುಸ್ಲಿಮರು ನನಗೆ ವೋಟ್ ಹಾಕದೇ ಇದ್ರೂ ಕೆಲಸ ತೆಗೆದುಕೊಳ್ಳಿ: ವರುಣ್ ಗಾಂಧಿ

    ಮುಸ್ಲಿಮರು ನನಗೆ ವೋಟ್ ಹಾಕದೇ ಇದ್ರೂ ಕೆಲಸ ತೆಗೆದುಕೊಳ್ಳಿ: ವರುಣ್ ಗಾಂಧಿ

    ಲಕ್ನೋ: ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು (ಮುಸ್ಲಿಮರು) ನಮಗೆ ಮತ ನೀಡಬೇಕೆಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಅವರ ಪುತ್ರ, ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಮುಸ್ಲಿಂ ಮತದಾರರ ಮನವೊಲಿಸಲು ಮುಂದಾಗಿದ್ದಾರೆ.

    ಉತ್ತರ ಪ್ರದೇಶದ ಪಿಲಿಭಿತ್‍ನಲ್ಲಿ ಪ್ರಚಾರದ ವೇಳೆ ಮಾತನಾಡಿದ ವರುಣ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಯಾವುದೇ ಧರ್ಮ, ಜಾತಿ ಇಲ್ಲ. ಮುಸ್ಲಿಮರು ನನಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿಕೊಳ್ಳುತ್ತಿರುವೆ ಎಂದರು.

    ಮುಸ್ಲಿಮರು ನನಗೆ ಮತ ಹಾಕಿದರೆ ಭಾರೀ ಅಂತರದಿಂದ ಗೆಲುವು ಸಾಧಿಸುತ್ತೇನೆ. ಇದು ನನಗೆ ಬಹಳ ಖುಷಿ ತಂದು ಕೊಡುತ್ತದೆ. ಒಂದು ವೇಳೆ ಮತ ಹಾಕದಿದ್ದರೂ ಪರವಾಗಿಲ್ಲ. ನನ್ನಿಂದ ಕೆಲಸವನ್ನು ತೆಗೆದುಕೊಳ್ಳಬಹುದು. ನನ್ನ ಚಹಾದಲ್ಲಿ ನಿಮ್ಮ ಬಳಿ ಇರುವ ಸಕ್ಕರೆ ಸೇರಿದರೆ ಮತ್ತಷ್ಟು ಸಿಹಿಯಾಗುತ್ತದೆ. ನಾನೇನಾದರೂ ತಪ್ಪು ಹೇಳಿದ್ನಾ? ಮುಸ್ಲಿಮರು ನನ್ನ ಚಹಾದಲ್ಲಿ ಸಕ್ಕರೆ ಹಾಕುತ್ತೀರಾ ಎಂದು ಸಮಾವೇಶದಲ್ಲಿ ಸೇರಿದ್ದ ಮುಸ್ಲಿಂ ಮತದಾರರನ್ನು ಪ್ರಶ್ನಿಸಿದರು.

    ಮನೇಕಾ ಗಾಂಧಿ ಹೇಳಿದ್ದೇನು?:
    ಈ ಮೊದಲು ಸುಲ್ತಾನಪುರದ ಬಿಜೆಪಿ ಅಭ್ಯರ್ಥಿಯಾಗಿರುವ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.