Tag: Varanasi

  • ಡಿಸೆಂಬರ್‌ ಅಂತ್ಯಕ್ಕೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಕಾರ್ಯಾರಂಭ

    ಡಿಸೆಂಬರ್‌ ಅಂತ್ಯಕ್ಕೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಕಾರ್ಯಾರಂಭ

    ಬೆಂಗಳೂರು: ಕರ್ನಾಟಕ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಸಂಬಂಧ ಉತ್ತರ ಪ್ರದೇಶದ ವಾರಣಾಸಿಗೆ ಕೈಗೊಂಡಿದ್ದ ಪ್ರವಾಸ ಫಲಪ್ರವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಸುಮಾರು 3 ಸಾವಿರ ಮೆಟ್ರಿಕ್ ಟನ್ ರೇಷ್ಮೆಗೆ ಬೇಡಿಕೆ ಇದೆ. ಸುಮಾರು 18,189 ಕುಟುಂಬಗಳು ರೇಷ್ಮೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಆದರೆ ಕೇವಲ 258 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಮಾತ್ರ ಉತ್ಪಾದಿಸಲಾಗುತ್ತಿದೆ. ಹಾಗಾಗಿ ಕರ್ನಾಟಕದ ಸೇರಿದಂತೆ ಬೇರೆ ರಾಜ್ಯಗಳ ಮೇಲೆ ಬನರಾಸ್ ನೇಕಾರರು ಅವಲಂಬಿತರಾಗಿದ್ದಾರೆ. ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದ್ದು, ಕರ್ನಾಟಕ ರೇಷ್ಮೆ ಮಂಡಳಿಯ ಮಾರುಕಟ್ಟೆಯನ್ನು ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

    ನವೆಂಬರ್ 18 ರಂದು ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಉತ್ತರ ಪ್ರದೇಶ ಸರ್ಕಾರದ ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ರೀಲರ್ಸ್ ಹಾಗೂ ನೇಕಾರರ ಜೊತೆ ಸಭೆ ನಡೆಸಿ, ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಸಮಗ್ರ ಚರ್ಚೆ ನಡೆಸಲಾಯಿತು.

    ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ ಯುಪಿ ಸರ್ಕಾರ ತಕ್ಷಣ ಸ್ಪಂದಿಸಿದೆ. ವಾರಣಾಸಿಯ ಸಾರಂಗ್ ತಲಾಬ್‌ನಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ(ಕೆಎಸ್‌ಎಂಬಿ) ಜಾಗ ನೀಡಿದ್ದು, ಅಲ್ಲಿ ಮಳಿಗೆ ತೆಗೆದು ರೇಷ್ಮೆ ಮಾರುಕಟ್ಟೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಯುಪಿ ಸರ್ಕಾರ, ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ರಾಜ್ಯ ಸರ್ಕಾರದ ನಡುವೆ MOU ಮಾಡಿಕೊಳ್ಳಲಾಗುತ್ತದೆ. ಒಡಂಬಡಿಕೆ ಪ್ರಕ್ರಿಯೆಗಳು ಪೂರ್ಣವಾದ ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಮಾರುಕಟ್ಟೆ ಪ್ರಾರಂಭಿಸಲಾಗುತ್ತದೆ.

    ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚಿದ್ದರೂ ಉತ್ತರ ಪ್ರದೇಶದಲ್ಲಿ ಕೇವಲ 7,984 ಎಕರೆಯಲ್ಲಿ‌ ಮಾತ್ರ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಹಾಗಾಗಿ , ಉತ್ತರ ಪ್ರದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಸಿದ್ದಪಡಿಸಿದ್ದ ವರದಿ ಸಲ್ಲಿಸಲಾಯಿತು. ಇದನ್ನೂ ಓದಿ: ರಾಜಸ್ಥಾನ- ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಗೆಹ್ಲೋಟ್‌

    ಕರ್ನಾಟಕದಲ್ಲಿ ಬಳಸುತ್ತಿರುವ ತಂತ್ರಜ್ಞಾನ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆಯಿಂದ ಉತ್ಪಾದಿಸಲಾಗುತ್ತಿರುವ ಉಪ ಉತ್ಪನ್ನಗಳ ಬಗ್ಗೆಯೂ ತಿಳಿಸಿಕೊಡಲಾಯಿತು. ಅಲ್ಲದೇ ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಅಗತ್ಯವಿರುವ ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

    ಇದಲ್ಲದೇ, ಬನರಾಸ್ ಸೀರೆ ನೇಯ್ಗೆಗೆ ಹೆಸರುವಾಸಿ ಆಗಿರುವ ಲಲ್ಲಾಪುರ ಪ್ರದೇಶಕ್ಕೆ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ನೇಕಾರರ ಜೊತೆ ಮಾತುಕತೆ ನಡೆಸಿದರು. ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪಿಸುತ್ತಿರುವ ಮಾಹಿತಿ ನೀಡಿ, ಕರ್ನಾಟಕದ ರೇಷ್ಮೆಯನ್ನು ಖರೀದಿಸುವಂತೆ ನೇಕಾರರನ್ನು ಮನವೊಲಿಸಿದರು.

    ಮಾರುಕಟ್ಟೆ ಸ್ಥಾಪನೆ:
    ಬನರಾಸ್ ಸೀರೆ ನೇಯ್ಗೆಗೆ ಸೇರಿದಂತೆ ವಾರಣಾಸಿ ನೇಕಾರರಿಗೆ ಅಗತ್ಯವಿರುವ ಗುಣಮಟ್ಟದ ರೇಷ್ಮೆ ಪೂರೈಸಲು ಕೆಎಸ್‌ಎಂಬಿ ಸಿದ್ಧವಿದೆ. ಈ ಬಗ್ಗೆ ಉತ್ತರ ಪ್ರದೇಶದ ಅಧಿಕಾರಿಗಳ ಜೊತೆ ಉತ್ತಮವಾದ ಸಭೆಯಾಗಿದ್ದು, ತಕ್ಷಣವೇ ಮಾರುಕಟ್ಟೆಗೆ ಜಾಗ ಗುರುತಿಸಿದ್ದಾರೆ. ಎಂಒಯು ಸೇರಿದಂತೆ ಎಲ್ಲಾ‌ ಕಾನೂನುನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯದೊಳಗೆ ಕರ್ನಾಟಕ ಮಾರುಕಟ್ಟೆ ಆರಂಭಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕರ್ನಾಟಕ ರೇಷ್ಮೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿಕೊಡುವ ನಮ್ಮ ಯೋಚನೆಗೆ ವಾರಣಾಸಿ ಪ್ರವಾಸವೂ ಫಲಪ್ರದವಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಚಿವ ಡಾ.ನಾರಾಯಣ ಗೌಡ ಅವರ ನೇತೃತ್ವದ ನಿಯೋಗದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಎಂಡಿ ಅನುರಾಧ ಸೇರಿದಂತೆ 9 ಜನರ ಅಧಿಕಾರಿಗಳು ವಾರಣಾಸಿಗೆ ತೆರಳಿದ್ದರು.

  • ಕೆಎಸ್‍ಎಂಬಿ ಬ್ರಾಂಚ್‍ಗೆ ಜಾಗ ಗುರುತಿಸಿದ ಯುಪಿ ಸರ್ಕಾರ

    ಕೆಎಸ್‍ಎಂಬಿ ಬ್ರಾಂಚ್‍ಗೆ ಜಾಗ ಗುರುತಿಸಿದ ಯುಪಿ ಸರ್ಕಾರ

    ವಾರಣಾಸಿ: ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ರೇಷ್ಮೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸ್ಪಂದಿಸಿದೆ.

    ವಾರಣಾಸಿಯ ಸಾರಂಗ್ ತಲಾಬ್ ಪ್ರದೇಶದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಶಾಖೆ ತೆರೆಯಲು ಯುಪಿ ಸರ್ಕಾರ ಜಾಗ ನೀಡಲು ಒಪ್ಪಿದೆ. ಸಾರಂಗ್ ತಲಾಬ್ ಪ್ರದೇಶದಲ್ಲಿ ಕೆಎಸ್‍ಎಂಬಿ ಶಾಖೆ ತೆರೆಯಲು ಒಪ್ಪಿಗೆ ನೀಡಲಾಗಿದ್ದು, ಕಟ್ಟಡದ ಜಾಗಕ್ಕೆ ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

    ಕೆಎಸ್‍ಎಂಬಿ ಕಚೇರಿ ಹಾಗೂ ಗೋದಾಮಿಗೆ ನೀಡಲು ಉದ್ದೇಶಿತ ಕಟ್ಟಡ ಪರಿಶೀಲನೆ ನಡೆಸಿ, ಶೀಘ್ರವೇ ಯುಪಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡು, ಕೂಡಲೇ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಇದನ್ನೂ ಓದಿ: ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ತೆಗೆಯಿರಿ – ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

  • 108 ವರ್ಷ ನಂತ್ರ ಕಾಶಿಗೆ ಅನ್ನಪೂರ್ಣೆ ವಿಗ್ರಹ

    108 ವರ್ಷ ನಂತ್ರ ಕಾಶಿಗೆ ಅನ್ನಪೂರ್ಣೆ ವಿಗ್ರಹ

    ವಾರಣಾಸಿ: ಅನ್ನಪೂರ್ಣೆ ವಿಗ್ರಹ ಕೆನಡಾದಿಂದ 108 ವರ್ಷ ನಂತರ ಕಾಶಿಗೆ ಮರಳಿ ತಂದಿದ್ದ ವಿಗ್ರಹವನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ನಿನ್ನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಷ್ಠಾಪನೆ ಮಾಡಿದ್ದಾರೆ.

    ಈ ವಿಗ್ರಹಲವು 18ನೇ ಶತಮಾನದ್ದಾಗಿದ್ದು, ಸುಮಾರು 108 ವರ್ಷಗಳ ಹಿಂದೆ ಕಳವಾಗಿತ್ತು. ಬಳಿಕ ಕೆನಡಾದಲ್ಲಿ ಪತ್ತೆ ಆಗಿದ್ದ ಮೂರ್ತಿ, ಮೋದಿ ಸರ್ಕಾರದ ಪ್ರಯತ್ನದ ಫಲವಾಗಿ ಭಾರತಕ್ಕೆ ಮರಳಿದೆ. ಇದನ್ನೂ ಓದಿ:  ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ

    17 ಸೆಂ.ಮೀ ಎತ್ತರ, 9 ಸೆಂ.ಮೀ ಅಗಲ, 4 ಸೆಂ.ಮೀ ದಪ್ಪವಿರುವ ಈ ವಿಗ್ರಹವನ್ನು ಇರಿಸಲಾಗಿದ್ದ ಬೆಳ್ಳಿಯ ಪಲ್ಲಕ್ಕಿಗೆ ಯೋಗಿ ಆದಿತ್ಯನಾಥ್ ಅವರು ಸ್ವತಃ ಹೆಗಲ ನೀಡಿದರು. ಮಂತ್ರೋಚ್ಚರಣೆಯೊಂದಿಗೆ ದೇವಾಲಯ ಈಶಾನ್ಯ ಭಾಗದಲ್ಲಿ ಅನ್ನಪೂರ್ಣಾ ದೇವಿ ವಿಗ್ರಹ ಸೇರಿದಂತೆ ಈ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

    108 ವರ್ಷಗಳ ಹಿಂದೆ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಕಾಶಿಯಿಂದ ಕಳವು ಮಾಡಲಾಗಿತ್ತು. ಇದು ಕೈಯಿಂದ ಕೈಗೆ ಬದಲಾವಣೆ ಹೊಂದುತ್ತಾ ಕಡೆಗೆ ಕೆನಡಾದ ವಿಶ್ವವಿದ್ಯಾನಿಲಯದ ವಸ್ತು ಸಂಗ್ರಹಾಲಯ ತಲುಪಿತ್ತು. ಕೆನಡಾ ವಿಶ್ವವಿದ್ಯಾನಿಲಯದಿಂದ ವಿಗ್ರಹ ಮರಳಿಸುವ ಭಾರತ ಸರ್ಕಾರದ ಮನವಿಗೆ ಮನ್ನಣೆ ಸಿಕ್ಕಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

  • ನಿರಾಣಿ ಬೆನ್ನಲ್ಲೇ ಅರವಿಂದ ಬೆಲ್ಲದ್ ವಾರಾಣಸಿ ಭೇಟಿ

    ನಿರಾಣಿ ಬೆನ್ನಲ್ಲೇ ಅರವಿಂದ ಬೆಲ್ಲದ್ ವಾರಾಣಸಿ ಭೇಟಿ

    ಬೆಂಗಳೂರು: ಜುಲೈ 26ಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡುತ್ತಿದ್ದಾರೆ ಎಂದು ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಸಿಎಂ ಆಕಾಂಕ್ಷಿಗಳು ಕ್ಷೇತ್ರ ಭೇಟಿಯಲ್ಲಿ ಬ್ಯುಸಿಯಾಗಿದ್ದಾರೆ.

    ಹೌದು. ಇತ್ತೀಚೆಗಷ್ಟೇ ಗಣಿ ಸಚಿವ ಮುರುಗೇಶ್ ನಿರಾಣಿಯವರು ವಾರಾಣಸಿಗೆ ಹೋಗಿ ಬಂದಿದ್ದರು. ಇದೀಗ ಈ ಬೆನ್ನಲ್ಲೇ ಶಾಸಕ ಅರವಿಂದ್ ಬೆಲ್ಲದ್ ಅವರು ವಾರಾಣಸಿಗೆ ಭೇಟಿ ನೀಡಿದ್ದಾರೆ.

    ಸಿಎಂ ನಿರ್ಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಇನ್ನು 6 ದಿನ ಮಾತ್ರ ಇರಲಿದ್ದಾರೆ. ಇತ್ತ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಬೆಲ್ಲದ್ ಹೆಸರು ಕುಡ ಕೇಳಿ ಬಂದಿದೆ. ಹೀಗಾಗಿ ಬೆಲ್ಲದ್ ಕಾಶಿಯಾತ್ರೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಇದೀಗ ನಿರಾಣಿ ಬಳಿಕ ಬೆಲ್ಲದ್ ‘ಕಾಶಿ’ ಯಾತ್ರೆ ಮಾಡಿರುವುದು ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರವನ್ನು ಕೆಳಗಿಳಿಸಿದರೆ ಬಿಜೆಪಿ ಸರ್ವನಾಶ: ಶ್ರೀ ಕಾರದವೀರಬಸವ ಸ್ವಾಮೀಜಿ

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾ ನಿರ್ಗಮನಕ್ಕೆ ವೇದಿಕೆ ಸಜ್ಜಾಗಿದೆ. ಮುಂದಿನ ಸೋಮವಾರದಿಂದ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಶುರುವಾಗೋದು ನಿಶ್ಚಿತವಾಗುತ್ತಿದ್ದಂತೆ ಮಠಾಧೀಶರು ಎಂಟ್ರಿಯಾಗಿದ್ದಾರೆ. 35ಕ್ಕೂ ಹೆಚ್ಚು ಸ್ವಾಮೀಜಿಗಳು ಸಿಎಂ ಭೇಟಿಯಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಒತ್ತಡ ಹೇರಿದ್ದಾರೆ.

    ಲಿಂಗಾಯತ ಪ್ರಬಲ ನಾಯಕನನ್ನು ಅಧಿಕಾರದಿಂದ ಕೆಳಗಿಳಿಸಿದ್ರೆ, ಪಕ್ಷ ಸರ್ವನಾಶ ಆಗೋದು ಖಚಿತ ಅಂತ ಹೈಕಮಾಂಡ್‍ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದರ ನಡುವೆ ಯಡಿಯೂರಪ್ಪ ಪರವಾಗಿ ಒಂದೆರಡು ದಿನಗಳಲ್ಲಿ 500ಕ್ಕೂ ಹೆಚ್ಚು ಮಠಾಧೀಶರು ಬೆಂಗಳೂರಲ್ಲಿ ಸಭೆ ಸೇರಲು ತೀರ್ಮಾನಿಸಿದ್ದಾರೆ.

  • ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ಹಕ್ಕಿಗೆ ಕಾಳು ನೀಡಿದ ಧವನ್ – ಮಾಡದ ತಪ್ಪಿಗೆ ದಂಡ ಪಾವತಿಸಿದ ನಾವಿಕ

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ವಾರಾಣಸಿ ಪ್ರವಾಸದಲ್ಲಿದ್ದಾರೆ. ಶಿಖರ್ ಧವನ್ ಮಾಡಿದ ತಪ್ಪಿಗೆ ನಾವಿಕ ಶಿಕ್ಷೆ ಅನುಭವಿಸುವಂತಾಗಿದೆ.

    ಗಂಗಾ ನದಿಯಲ್ಲಿ ದೋಣಿ ವಿಹಾರದ ವೇಳೆ ಶಿಖರ್ ಧವನ್ ಸೈಬಿರಿಯನ್ ಹಕ್ಕಿಗಳಿಗೆ ಆಹಾರ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶಿಖರ್ ಧವನ್ ಶೇರ್ ಸಹ ಮಾಡಿಕೊಂಡಿದ್ದರು. ಹಕ್ಕಿ ಜ್ವರದ ನಿಯಂತ್ರಣಕ್ಕಾಗಿ ಸರ್ಕಾರ ಪಕ್ಷಿಗಳಿಗೆ ಆಹಾರ ನೀಡದ ಕುರಿತು ಕೆಲ ಮಾರ್ಗಸೂಚಿಗಳನ್ನ ತಂದಿದೆ. ಆದ್ರೆ ಶಿಖರ್ ಧವನ್ ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆ ನಾವಿಕ ಸೋನು ಸಹಾನಿ ಮತ್ತು ಬೋಟ್ ಮಾಲೀಕ ಪ್ರದೀಪ್ ಸಾಹಾನಿ ದಂಡ ಪಾವತಿಸಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಿದೆ. ಹಾಗಾಗಿ ವಾರಾಣಸಿ ನದಿ ದಡದಲ್ಲಿರುವ ಪಕ್ಷಿಗಳಿಗೆ ಆಹಾರ ನೀಡದಂತೆ ಸ್ಥಳೀಯ ಆಡಳಿತ ಮಂಡಳಿ ಕೆಲ ನಿಯಮಗಳನ್ನ ರೂಪಿಸಿತ್ತು.

    ವಾರಾಣಸಿಗೆ ಆಗಮಿಸಿದ್ದ ಧವನ್, ಕಾಲಭೈರವ ಮಂದಿರಕ್ಕೆ ತೆರಳಿ ದರ್ಶನ ಪಡೆದು, ಸಂಜೆ ಗಂಗಾ ಆರತಿಯಲ್ಲಿಯೂ ಭಾಗಿಯಾಗಿದ್ದರು. ಗಂಗಾ ನದಿಯಲ್ಲಿ ಬೋಟಿಂಗ್ ವೇಳೆ ಹಕ್ಕಿಗಳಿಗೆ ಕಾಳು ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಫೋಟೋ ವೈರಲ್ ಬಳಿಕ ವಾರಾಣಸಿ ಕಲೆಕ್ಟರ್ ನಾವಿಕರಿಗೆ ದಂಡ ವಿಧಿಸುವಂತೆ ಆದೇಶಿಸಿದ್ದರು

  • ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನ ಕೊಂದ ಮಕ್ಕಳು

    ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನ ಕೊಂದ ಮಕ್ಕಳು

    -ಬ್ಯಾಟ್, ಸ್ಟಂಪ್ ಗಳಿಂದ ಹಲ್ಲೆ
    -ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಅಂಕಲ್

    ಲಕ್ನೋ: ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನು ಮಕ್ಕಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯ ಸಿಕರೌಲಿ ಗ್ರಾಮದಲ್ಲಿ ನಡೆದಿದೆ. ಸೆಪ್ಟೆಂಬರ್ 18ರಂದು ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಗಾಯಾಳು ಮೃತಪಟ್ಟಿದ್ದಾರೆ.

    30 ವರ್ಷದ ತುಷಾರ್ ಕಾಂತ್ ಉರ್ಫ್ ಸೋನು ಸೋದರರ ಮಕ್ಕಳಿಂದಲೇ ಕೊಲೆಯಾದ ವ್ಯಕ್ತಿ. ನಾಲ್ವರು ಸೋದರರಲ್ಲಿ ತುಷಾರ್ ಕೊನೆಯವರು. ಸೆಪ್ಟೆಂಬರ್ 18ರಂದು ಮೀನಿನ ಖಾದ್ಯ ತಂದಿದ್ದ ತುಷಾರ್, ಹಿರಿಯ ಸೋದರನ ಜೊತೆ ಮನೆಯ ಮೇಲೆ ಕುಳಿತಿ ತಿನ್ನುತ್ತಿದ್ದರು. ನಮಗೆ ಊಟಕ್ಕೆ ಕರೆದಿಲ್ಲ ಎಂದು ಇನ್ನಿಬ್ಬರ ಸೋದರನ ಮಕ್ಕಳು ಬ್ಯಾಟ್, ಸ್ಟಂಪ್ ಗಳಿಂದ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ತುಷಾರ್ ಹಿರಿಯ ಸೋದರ ಪೊಲೀಸರಿಗೆ ಮಾಹಿತಿ ನೀಡಿ, ತಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ತುಷಾರ್ ಆರೋಗ್ಯ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬಿಹೆಚ್‍ಯು ಟ್ರಾಮ್ ಸೆಂಟರ್ ನಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ತುಷಾರ್ ಭಾನುವಾರ ನಿಧನರಾಗಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • 4 ವರ್ಷ ಪ್ರೀತಿಸಿ ಬೇರೊಬ್ಬನ ಜೊತೆ ಮದ್ವೆ-ಪ್ರಿಯಕರ ಆತ್ಮಹತ್ಯೆ

    4 ವರ್ಷ ಪ್ರೀತಿಸಿ ಬೇರೊಬ್ಬನ ಜೊತೆ ಮದ್ವೆ-ಪ್ರಿಯಕರ ಆತ್ಮಹತ್ಯೆ

    -ಡೆತ್ ನೋಟ್ ಬರೆದು, ಶೂಟ್ ಮಾಡ್ಕೊಂಡ

    ಲಕ್ನೋ: ಪ್ರೇಯಸಿ ಬೇರೊಬ್ಬನನ್ನ ಮದುವೆಯಾಗಿದ್ದಕ್ಕೆ ನೊಂದ ಪ್ರಿಯಕರ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಯುವಕ ಆತ್ಮಹತ್ಯೆಗೆ ಶರಣಾಗಿದಗ್ದು, ಶನಿವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

    ಕಪಸೆಟಿ ಕ್ಷೇತ್ರದ ಸರಾಂವ್ ಗ್ರಾಮದ ಅಜಯ್ ಕುಮಾರ್ ಜಯಸ್ವಾಲ್ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಜಯಸ್ವಾಲ್ ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಲಾಕ್‍ಡೌನ್ ಬಳಿಕ ಗ್ರಾಮಕ್ಕೆ ಆಗಮಿಸಿದ್ದ ಅಜಯ್ ಅಜ್ಜನ ಜೊತೆಯಲ್ಲಿಯೇ ವಾಸವಾಗಿದ್ದನು. ಅಜಯ್ ನಾಲ್ಕು ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದನು. ಕೆಲ ದಿನಗಳ ಹಿಂದೆ ಪ್ರೇಯಸಿಯ ಮದುವೆ ಬೇರೊಬ್ಬನ ಜೊತೆಯಾಗಿತ್ತು. ಇದರಿಂದ ಮಾನಸಿಕ ಒತ್ತಡದಲ್ಲಿ ಸಿಲುಕಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

    ಶುಕ್ರವಾರ ಕುಟುಂಬಸ್ಥರೊಂದಿಗೆ ಅಜಯ್ ಊಟ ಮಾಡಿದ್ದನು. ಊಟದ ಬಳಿಕ ಬಹು ಸಮಯದವರೆಗೆ ಎಲ್ಲರ ಜೊತೆ ಮಾತನಾಡಿ ತನ್ನ ಕೋಣೆ ಸೇರಿಕೊಂಡಿದ್ದನು. ರಾತ್ರಿ ಸುಮಾರು 2 ಗಂಟೆಗೆ ಅಜಯ್ ತನ್ನ ಲೈಸೆನ್ಸ್ ಗನ್ ನಿಂದ ಶೂಟ್ ಮಾಡಿಕೊಂಡಿದ್ದಾನೆ. ಬೆಳಗ್ಗೆ ಆತನಿಗೆ ಚಹಾ ನೀಡಲು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಅಜಯ್ ಆತ್ಮಹತ್ಯೆಗೆ ಬಳಸಿದ್ದ ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣೆಯಲ್ಲಿ ಡೆತ್ ನೋಟ್ ಲಭ್ಯವಾಗಿದ್ದು, ಪ್ರೀತಿಯಲ್ಲಿ ನೊಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆಜಯ್ ಹೇಳಿದ್ದಾನೆ.

    ಕಳೆದ ನಾಲ್ಕು ವರ್ಷಗಳಿಂದ ಅಜಯ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಸಹ ಇಬ್ಬರು ನಿರ್ಧರಿಸಿದ್ದರು ಎನ್ನಲಾಗಿದೆ. ಆದ್ರೆ ಕುಟುಂಬದವರ ಒತ್ತಡದಲ್ಲಿ ಸಿಲುಕಿದ ಯುವತಿ ಬೇರೆ ಮದುವೆ ಆಗಿದ್ದಾಳೆ ಎಂದು ವರದಿಯಾಗಿದೆ.

  • ಮಹಾಭಾರತ ಯುದ್ಧ 18 ದಿನ, ಕೊರೊನಾ ವಿರುದ್ಧ ದೇಶದ ಸಮರ 21 ದಿನ: ಮೋದಿ

    ಮಹಾಭಾರತ ಯುದ್ಧ 18 ದಿನ, ಕೊರೊನಾ ವಿರುದ್ಧ ದೇಶದ ಸಮರ 21 ದಿನ: ಮೋದಿ

    ನವದೆಹಲಿ: ಕೊರೊನಾ ವೈರಸ್ ಅಟ್ಟಹಾಸದ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ಆಯ್ದ ಪ್ರಜೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಮಹಾಭಾರತ ಯುದ್ಧ 18 ದಿನಗಳು ನಡೆಯಿತು. ಆದ್ರೆ ಕೊರೊನಾ ವೈರಸ್ ವಿರುದ್ಧ ದೇಶ ಯುದ್ಧ ಮಾಡಿ ಜಯಗಳಿಸಲು 21 ದಿನಗಳು ಬೇಕಾಗುತ್ತೆ ಎಂದು ದೇಶದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಭಾರತದಾದ್ಯಂತ ಲಾಕ್‍ಡೌನ್ ಘೋಷಣೆಯಾದ ಬಳಿಕ ಮೋದಿ ಅವರು ನಡೆಸುತ್ತಿರುವ ಮೊದಲ ವಿಡಿಯೋ ಕಾನ್ಫರೆನ್ಸ್ ಇದಾಗಿದ್ದು, ದೇಶವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದರು. ಮಹಾಭಾರತ ಯುದ್ಧ 18 ದಿನ ನಡೆಯಿತು, ಆದರೆ ದೇಶ ಕೊರೊನಾ ವಿರುದ್ಧ ನಡೆಸುತ್ತಿರುವ ಸಮರ 12 ದಿನ ನಡೆಯಬೇಕಿದೆ. ಈ ಯುದ್ಧದಲ್ಲಿ ದೇಶವನ್ನ ಗೆಲ್ಲಿಸೋದೇ ನಮ್ಮ ಗುರಿ ಎಂದು ಪ್ರಧಾನಿ ಹೇಳಿದರು.

    ಅಷ್ಟೇ ಅಲ್ಲದೇ ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ. ಕೊರೊನಾ ವೈರಸ್ ಶ್ರೀಮಂತ, ಬಡವ ಎಂದು ನೋಡುವುದಿಲ್ಲ. ದಯಮಾಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಮೋದಿ ಅವರು ಮನವಿ ಮಾಡಿಕೊಂಡರು.

    ಹಾಗೆಯೇ ವಾಟ್ಸಪ್ ಸಹಯೋಗದೊಂದಿಗೆ ಸರ್ಕಾರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಮೂಲಕ ಕೊರೊನಾ ವೈರಸ್ ಬಗ್ಗೆ ಸರಿಯಾದ ಮಾಹಿತಿ ಪಡೆಯುವಲ್ಲಿ ಜನರಿಗೆ ಸಹಕಾರಿಯಾಗಲಿದೆ. 9013151515 ಈ ನಂಬರ್ ಗೆ ‘ನಮಸ್ತೆ’ ಎಂದು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ವಾಟ್ಸಪ್ ಮಾಡಿದರೆ ನಿಮಗೆ ತಕ್ಷಣ ಪ್ರತಿಕ್ರಿಯಿಸಲಾಗುತ್ತದೆ. ಆಗ ಕೊರೊನಾ ವೈರಸ್ ಬಗ್ಗೆ ಇರುವ ಗೊಂದಲ, ಮಾಹಿತಿಗಳನ್ನು ವಾಟ್ಸಪ್ ಮೂಲಕವೇ ಪಡೆಯಬಹುದು ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮತರಾರರಿಗೆ ಮೋದಿ ಅವರು ತಿಳಿಸಿದರು.

  • ಕೊರೊನಾ ಎಫೆಕ್ಟ್- ವಿಶ್ವನಾಥನಿಗೆ ಮಾಸ್ಕ್ ಹಾಕಿದ ಅರ್ಚಕರು

    ಕೊರೊನಾ ಎಫೆಕ್ಟ್- ವಿಶ್ವನಾಥನಿಗೆ ಮಾಸ್ಕ್ ಹಾಕಿದ ಅರ್ಚಕರು

    – ಭಕ್ತರಲ್ಲಿ ಜಾಗೃತಿ ಮೂಡಿಸಲು ಕ್ರಮ
    – ಮೂರ್ತಿ ಸ್ಪರ್ಶಿಸದಂತೆ ಭಕ್ತರಿಗೆ ಸೂಚನೆ

    ವಾರಾಣಸಿ: ಭಾರತಕ್ಕೆ ಕೊರೊನಾ ವೈರಸ್ ಒಕ್ಕರಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸರ್ಕಾರ ಸಲಹೆ ನೀಡುತ್ತಿದೆ. ಇದರ ಬೆನ್ನಲ್ಲೇ ವಾರಾಣಸಿಯಲ್ಲಿ ದೇವಸ್ಥಾನದ ಅರ್ಚಕರು ಶಿವಲಿಂಗಕ್ಕೆ ಮಾಸ್ಕ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.

    ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶ್ವನಾಥನಿಗೆ ಅಲ್ಲಿನ ಅರ್ಚಕರು ಮಾಸ್ಕ್ ಹಾಕಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಮೂರ್ತಿಯನ್ನು ಸ್ಪರ್ಶಿಸದಂತೆ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜ್ವರ, ಕೆಮ್ಮು ಇದ್ರೆ ತಿರುಪತಿಗೆ ಬರಲೇ ಬೇಡಿ- ಟಿಟಿಡಿ

    ದೇಶಾದ್ಯಂತ ಕೊರೊನಾ ವೈರಸ್ ಹರಡಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವನಾಥನಿಗೆ ಮಾಸ್ಕ್ ಹಾಕಿದ್ದೇವೆ. ಇದರಲ್ಲಿ ವಿಶೇಷವೇನಿಲ್ಲ ಚಳಿಗಾಲವಿದ್ದಾಗ ಹೇಗೆ ಬಟ್ಟೆ ಹಾಕುತ್ತೇವೆ, ಬಿಸಿಲಿನ ಸಂದರ್ಭದಲ್ಲಿ ಹೇಗೆ ಫ್ಯಾನ್, ಎಸಿ ಹಾಕುತ್ತೇವೋ ಹಾಗೇ ಇದೀಗ ವಿಶ್ವನಾಥನ ಮೂರ್ತಿಗೆ ಮಾಸ್ಕ್ ಹಾಕಿದ್ದೇವೆ ಅಷ್ಟೆ ಎಂದು ದೇವಸ್ಥಾನದ ಅರ್ಚಕ ಕೃಷ್ಣ ಆನಂದ್ ಪಾಂಡೆ ತಿಳಿಸಿದ್ದಾರೆ.

    ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಯಾವುದೇ ಕಾರಣಕ್ಕೂ ಮೂರ್ತಿಯನ್ನು ಸ್ಪರ್ಶಿಸಿ ನಮಸ್ಕರಿಸದಂತೆ ಭಕ್ತರಲ್ಲಿ ತಿಳಿಸಿದ್ದೇವೆ. ಯಾರೋ ಒಬ್ಬರು ಕೊರೊನಾ ಇರುವ ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ, ಅದನ್ನು ಮತ್ತೊಬ್ಬರು ಮುಟ್ಟಿದರೆ ಅವರಿಗೂ ಹರಡುತ್ತದೆ. ಹೀಗಾಗಿ ಮೂರ್ತಿಯನ್ನು ಸ್ಪರ್ಶಿಸದಂತೆ ಮನವಿ ಮಾಡಿದ್ದೇವೆ ಎಂದು ಪಾಂಡೆ ವಿವರಿಸಿದ್ದಾರೆ.

    ಅಲ್ಲದೆ ಈ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಇಲ್ಲಿನ ಅರ್ಚಕರು ಮಾಸ್ಕ್ ಧರಿಸಿಯೇ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ದಾರೆ.

  • ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ-ಬಿಎಸ್‍ವೈ

    ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಧಾನಿ ಮೋದಿ-ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರದಮದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಸಿಎಂ ಕೂಡ ಸಮಾರಂಭದಲ್ಲಿ ಪಾಲ್ಗೋಳ್ಳುವ ನಿಟ್ಟಿನಲ್ಲಿ ಶನಿವಾರ ಸಂಜೆ ವಾರಣಾಸಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸಿಎಂ ಕೈಮುಗಿದು ಮನವಿ ಮಾಡಿದ್ರೂ ನೆರೆ ಪರಿಹಾರದ ಬಗ್ಗೆ ಏನೂ ಮಾತನಾಡದ ಮೋದಿ 

    ಸಿಎಂ ಯಡಿಯೂರಪ್ಪ ಅವರು ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನಿಂದ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ರಾತ್ರಿ ವಾರಣಾಸಿಯಲ್ಲೇ ವಾಸ್ತವ್ಯ ಹೂಡಲಿದ್ದು, ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ಭಾಗವಹಿಸಲಿದ್ದಾರೆ.

    ಪ್ರಧಾನಿ ಮೋದಿ ಅವರು ಸಮಾರಂಭದಲ್ಲಿ 18 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಭಾಷಾಂತರಗೊಂಡ ‘ಸಿದ್ಧಾಂತ ಶಿಖಾಮಣಿ’ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಿದ್ಧಾಂತ ಶಿಖಾಮಣಿ ಕೃತಿಯು ವೀರಶೈವ ಧರ್ಮದ ಧರ್ಮಗ್ರಂಥವಾಗಿದೆ.

    ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಯಡಿಯೂರಪ್ಪ ಅವರು ತುಮಕೂರಿನಲ್ಲಿ ಕಳೆದ ತಿಂಗಳು ನಡೆದ ಕಿಸಾನ್ ಸಮ್ಮಾನ್ ನಾಲ್ಕನೇ ಹಂತದ ಹಣ ಬಿಡುಗಡೆಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಕೈ ಮುಗಿದು ನೆರೆ ಪರಿಹಾರದ ಹಣಕ್ಕಾಗಿ ಮನವಿ ಮಾಡಿಕೊಂಡಿದ್ದರು. ಆದರೆ ಪ್ರಧಾನಿ ಮೋದಿ, ಪರಿಹಾರ ನೀಡುವ ಕುರಿತಾಗಿ ಯಾವುದೇ ಮಾತನಾಡಿರಲಿಲ್ಲ.

    ಪ್ರಧಾನಿ ಮೋದಿ ಜೊತೆಗೆ ಭಾನುವಾರ ವೇದಿಕೆ ಹಂಚಿಕೊಳ್ಳುತ್ತಿರುವ ಸಿಎಂ ಯಡಿಯೂರಪ್ಪ ಅವರು ನೆರೆ ಪರಿಹಾರಕ್ಕಾಗಿ ಮತ್ತೆ ಮನವಿ ಸಲ್ಲಿಸುತ್ತಾರಾ? ಸಂಪುಟ ಪುನಾರಚನೆ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.