Tag: Varanasi

  • ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ

    ಶಾಲಾ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ

    ಸಾಂದರ್ಭಿಕ ಚಿತ್ರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 68ನೇ ವರ್ಷದ ಹುಟ್ಟುಹಬ್ಬವನ್ನು ಇಂದು ತಮ್ಮ ವಾರಾಣಾಸಿ ಕ್ಷೇತ್ರದ ಶಾಲಾಮಕ್ಕಳೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

    ಗುಜರಾತಿನ ಮೆಹ್ಸಾನ ಜಿಲ್ಲೆಯ ವಡ್ನಗರ್ ಎಂಬ ಸಣ್ಣ ಹಳ್ಳಿಯಿಂದ ನರೇಂದ್ರ ಮೋದಿ ಅವರ ಜೀವನ ಪಯಣ ಪ್ರಾರಂಭವಾಗಿದೆ. 1950ರ ಸೆಪ್ಟೆಂಬರ್  17 ನೇ ತಾರೀಖಿನಂದು ದಾಮೋದರ್ ದಾಸ ಮೋದಿ ಮತ್ತು ಹೀರಾಮೋದಿ ಅವರುಗಳ 6 ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಪ್ರಧಾನಿ ಕಾರ್ಯಾಲಯದ ಮಾಹಿತಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಳ್ಳಲಿದ್ದಾರೆ. ನಂತರ ತಮ್ಮ ಕ್ಷೇತ್ರವಾದ ವಾರಾಣಾಸಿಯ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಳಿಕ ತಮ್ಮ ಜೀವನದ 35 ನಿಮಿಷದ `ಚಲೋ ಜೀತೆ ಹೈನ್’ ಕಿರುಚಿತ್ರವನ್ನು ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.

    ವಾರಣಾಸಿಯಿಂದ ಗುಜರಾತ್‍ನ ಗಾಂಧಿನಗರಕ್ಕೆ ತೆರಳುವ ಅವರು ತಮ್ಮ 98 ವರ್ಷದ ತಾಯಿ ಹಿರಾಬೆನ್ ಅವರ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ನಂತರ ಸರ್ದಾರ್ ಸರೋವರ್ ಜಲಾಶಯವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಯವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್, ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯವ್ಯಕ್ತಿಗಳು ಪ್ರಧಾನಿಗಳ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಂದ್ರ ಸಚಿವೆಯನ್ನೇ ಚುಡಾಯಿಸಿದ ಪುಂಡರು!

    ಕೇಂದ್ರ ಸಚಿವೆಯನ್ನೇ ಚುಡಾಯಿಸಿದ ಪುಂಡರು!

    ವಾರಾಣಾಸಿ: ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರನ್ನು ಪುಂಡರು ಚುಡಾಯಿಸಿದ ಘಟನೆ ಉತ್ತರ ಪ್ರದೇಶದ ಅರೋಯ್ ಮತ್ತು ಮಿರ್ಜಾಮುರದ್ ನಡುವೆ  ನಡೆದಿದೆ.

    ಕಳೆದ ಸೋಮವಾರ ರಾತ್ರಿ ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಅನುಪ್ರಿಯಾ ಪಟೇಲ್‍ರವರು ಕಾಶಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ಸಾಗುತ್ತಿದ್ದರು. ಈ ವೇಳೆ ಅರೋಯ್ ಮತ್ತು ಮಿರ್ಜಾಮುರದ್ ನಡುವೆ ಪ್ರಯಾಣಿಸುತ್ತಿದ್ದಾಗ, ನೋಂದಣಿ ಇಲ್ಲದ ಕಾರಿನಲ್ಲಿ ಬಂದ ಮೂವರು ಯುವಕರು ಓವರ್ ಟೇಕ್ ಮಾಡುವ ವೇಳೆ ಸಚಿವೆಗೆ ಅಸಭ್ಯವಾಗಿ ಬೈದಿದ್ದಾರೆ. ಅಲ್ಲದೇ ಭದ್ರತಾ ಸಿಬ್ಬಂದಿಯವರ ಜೊತೆಗೂ ಅಸಭ್ಯ ರೀತಿಯಿಂದ ವರ್ತಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

    ಘಟನೆ ಕುರಿತು ಸಚಿವೆ ವಾರಣಾಸಿಯ ಎಸ್‍ಪಿ ಎಸ್ ಕೆ ಭಾರದ್ವಜ್ ಬಳಿ ದೂರು ನೀಡಿದ್ದಾರೆ. ನೋಂದಣಿ ಇಲ್ಲದ ಕಾರನಲ್ಲಿದ್ದ ಆರೋಪಿಗಳನ್ನು ಪತ್ತೆಹಚ್ಚುವಂತೆ ತಿಳಿಸಿದ್ದಾರೆ. ಕೂಡಲೇ ಜಾಗೃತರಾದ ಮಿರ್ಜಾಪುರದ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೇಂದ್ರದ ಸಚಿವೆಯರಿಗೆ ಚುಡಾಯಿಸುತ್ತಿರುವುದು ಇದೇ ಮೊದಲೆನಲ್ಲ. ಈ ಏಪ್ರಿಲ್‍ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೂ ಇಂತಹುದೆ ಅನುಭವವಾಗಿತ್ತು. ದೆಹಲಿ ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ಕಾರಿನಲ್ಲಿದ್ದ ಯುವತಿ ಮತ್ತು ಮೂವರು ಯುವಕರು ರೇಗಿಸಿದ್ದರು.

  • ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

    ದೇಶದಲ್ಲೇ ಮೊದಲು-ಯುಪಿ ವಿಮಾನನಿಲ್ದಾಣದ ರನ್‍ವೇ ಕೆಳಗಡೆ ಹೈವೇ!

    ವಾರಣಾಸಿ: ವಾರಣಾಸಿಯಿಂದ 26 ಕಿ.ಮಿ ದೂರದಲ್ಲಿರುವ ಬಾಬತ್‍ಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ತನ್ನ ರನ್‍ವೇ ಕೆಳಗಡೆ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಲಿದೆ.

    ಈ ಮೂಲಕ ರನ್‍ವೇ ಕೆಳಗೆ ಅಂಡರ್ ಪಾಸ್ ಹೈವೇ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಈ ವಿಮಾನ ನಿಲ್ದಾಣ ಪಾತ್ರವಾಗಲಿದೆ. ಅಂಡರ್‍ಪಾಸ್ ರಸ್ತೆ ನಿರ್ಮಾಣವು ವಿಮಾನಗಳ ರನ್‍ವೇಯನ್ನು, ವಿಮಾನಗಳ ನಿಲ್ದಾಣ ಪಥ ಹಾಗು ಹೆದ್ದಾರಿಯನ್ನು ನಾಲ್ಕು ರಸ್ತೆಗಳಾಗಿ ಪರಿವರ್ತಿಸುತ್ತದೆ.

    ಅಂಡರ್‍ಪಾಸ್ ರಸ್ತೆಗಳ ನಿರ್ಮಾಣ ಹಾಗೂ ವಿಮಾನಗಳ ರನ್‍ವೇ ವಿಸ್ತರಣೆ ಕಾರ್ಯ ವಾರಣಾಸಿ-ಲಖ್ನೋ ರಾಷ್ಟ್ರೀಯ ಹೆದ್ದಾರಿ 56 ರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದೆ. ಈಗಿರುವ ರನ್‍ವೇ 2750 ಮೀ. ಗಳಾಗಿದ್ದು ಸರಕು ಸಾಗಾಣಿಕೆ ಹಾಗೂ ಬೋಯಿಂಗ್ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ 4075ಮೀ ಗೆ ವಿಸ್ತರಿಸಬೇಕೆಂದು ಪ್ರಸ್ತಾಪಿಸಿದೆ. ಅದರಂತೆಯೇ ಈ ರನ್‍ವೇ ಹಾಗೂ ಅಂಡರ್‍ಪಾಸ್ ಕಾಮಗಾರಿಗಳೆರೆಡೂ ಏಕಕಾಲಕ್ಕೆ ಪ್ರಾರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರಕ್ರಿಯೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಕುರಿತಂತೆ ಇರುವ ದೀರ್ಘಾವಧಿ ಸಮಸ್ಯೆಗಳು ಪರಿಹಾರವಾಗಲಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಇರುವ ಹೆದ್ದಾರಿಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಸ್.ಬಿ ಸಿಂಗ್ ಹೇಳಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 56 ನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ 2013 ರಲ್ಲಿ ಅನುಮತಿ ನೀಡಿದ್ದರೂ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಹೆದ್ದಾರಿ ಪ್ರಾಧಿಕಾರವೂ ವಾರಣಾಸಿ- ಸುಲ್ತಾನ್‍ಪುರ ಗಳಲ್ಲಿ ಕಾಮಗಾರಿ ಪ್ರಾರಂಭಿಸಿತ್ತಾದರೂ ಪೂರ್ಣಗೊಳಿಸಲಾಗಲಿಲ್ಲ.  2014ರಲ್ಲಿ ಕೇಂದ್ರದಲ್ಲಾದ ಸಿಬ್ಬಂದಿ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆಗಳಿಂದಾಗಿ ಕಾಮಗಾರಿ ಭರದಿಂದ ಸಾಗಿದೆ.

    2014ರ ಮಾರ್ಚ್ 27 ರಂದು ನಾಗರಿಕ ವಿಮಾನಯಾನ ನಿರ್ದೇಶಕರು ಉತ್ತರ ಪ್ರದೇಶ ಸರಕಾರಕ್ಕೆ ಈ ಕುರಿತು ಪತ್ರವೊಂದನ್ನು ಕಳುಹಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. 2017 ರಲ್ಲಿ ಪ್ರಾಧಿಕಾರವು ಕಾಮಗಾರಿಗೆ ಅಗತ್ಯ ಭೂಮಿಯನ್ನು ಗುರುತಿಸಿದ ನಂತರ ಈಗ ಕಾಮಗಾರಿ ವೇಗವನ್ನು ಪಡೆದಿದೆ.

  • ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

    ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಐದು ತಿಂಗಳು ಬಚ್ಚಿಟ್ಟರು!

    ಲಕ್ನೋ: ತಂದೆಯ ಪಿಂಚಣಿ ಹಣಕ್ಕಾಗಿ ತಾಯಿಯ ಮೃತ ದೇಹವನ್ನು ಮಕ್ಕಳೇ ಐದು ತಿಂಗಳ ಕಾಲ ಬಚ್ಚಿಟ್ಟಿದ್ದ ಅಮಾನವೀಯ ಕೃತ್ಯವೊಂದು ಉತ್ತರಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ವಾರಣಾಸಿಯ ಕಬೀರ್ ನಗರದ ಅಮರಾವತಿ ದೇವಿ (70) ಮೃತಪಟ್ಟಿದ್ದರು. ತಾಯಿಯೇ ಮೃತಪಟ್ಟರೂ ನಾಲ್ವರು ಪುತ್ರರು ಹಾಗೂ ಅವರ ಪತ್ನಿಯರು ಪಿಂಚಣಿ ಹಣ ಪಡೆಯುವುದಕ್ಕಾಗಿ ಈ ಕೃತ್ಯ ಎಸಗಿದ್ದಾರೆ.

    ವ್ಯಕ್ತಿಯೊಬ್ಬರು 100 ನಂಬರ್ ಗೆ ಕರೆ ಮಾಡಿ, ಅಮರಾವತಿ ದೇವಿ ಅವರು ಇದೇ ವರ್ಷ ಜನವರಿ 12ರಂದು ಸಾವನ್ನಪ್ಪಿದ್ದಾರೆ. ಆದರೆ, ಮನೆಯವರು ನೆರೆಹೊರೆಯವರಿಗೆ ಅನುಮಾನ ಬಾರದಂತೆ ಮೃತ ದೇಹವನ್ನು ಬಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದರು. ನಂತರ ತನಿಖೆ ಕೈಗೊಂಡಿದ್ದರಿಂದ ಪ್ರಕರಣದ ಬೆಳಕಿಗೆ ಬಂದಿದೆ ಎಂದು ಭುಲ್ಪುರ್ ಸಂಚಾರ ಪೊಲೀಸ್ ಅಧಿಕಾರಿ ಎ.ಪಿ.ಸಿಂಗ್ ತಿಳಿಸಿದ್ದಾರೆ.

    ಮೃತರ ಪತಿ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರಿಂದ ಅಮರಾವತಿ ಅವರಿಗೆ ಪ್ರತಿ ತಿಂಗಳು 13,000 ಪಿಂಚಣಿ ಬರುತ್ತಿತ್ತು. ಇದನ್ನು ಪಡೆಯಲು ಅವರ ನಾಲ್ಕು ಜನ ಪುತ್ರರು ಮೃತ ದೇಹವನ್ನು ಇಟ್ಟುಕೊಂಡು, ಐದು ಖಾಲಿ ಚೆಕ್‍ಗಳಿಗೆ ಸಹಿ ಮಾಡಿಸಿಕೊಂಡಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ನಡೆದಿದ್ದು ಏನು:
    ಅಮರಾವತಿಯವರಿಗೆ ಐದು ಜನ ಪುತ್ರರು, ಓರ್ವ ಪುತ್ರಿ ಇದ್ದು, ನಾಲ್ವರು ಪುತ್ರರ ಜೊತೆ ವಾಸವಾಗಿದ್ದರು. ಕೊನೆಯ ಮಗ ಜ್ಯೋತಿ ಪ್ರಕಾಶ್ ಪ್ರತ್ಯೇಕ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಾರೆ.

    ಈ ವರ್ಷ ಜನವರಿಯಲ್ಲಿ ಅಮರಾವತಿ ಅವರು ಅನಾರೋಗ್ಯ ಒಳಗಾಗಿದ್ದರು. ಹೀಗಾಗಿ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸುಂದರ್ಲಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಆಸ್ಪತ್ರೆಯಲ್ಲಿ ಅಮರಾವತಿ ಅವರ ಆರೋಗ್ಯ ಸ್ವಲ್ಪ ಸುಧಾರಣೆ ಆಗುತ್ತಿದ್ದಂತೆ ಮಕ್ಕಳು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಮೃತಪಟ್ಟಿದ್ದಾರೆ. ಮೃತಪಡುವ ಮೊದಲೇ 5 ಖಾಲಿ ಚೆಕ್‍ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ದೇಹ ಕೊಳೆಯದಂತೆ ರಾಸಾಯನಿಕವನ್ನು ಸಿಂಪಡಿಸಿದ್ದಾರೆ. ಅಲ್ಲದೇ ನೆರೆಹೊರೆಯವರಿಗೆ ವಾಸನೆ ಬಾರದಂತೆ ಮನೆಯಲ್ಲಿ ಲೋಬಾನ ಹಾಕುತ್ತಿದ್ದರು. ಆರೋಪಿಗಳಿಗೆ ಅವರ ಪತ್ನಿಯರು ಸಾಥ್ ನೀಡಿದ್ದರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

    ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ನಿಗದಿತ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    https://youtu.be/jGIGG6iAd0Y

  • ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ಕಾಶಿಯಲ್ಲಿ ಪೊಲೀಸರಿಗೆ ಧೋತಿ-ಕುರ್ತಾ ಸಮವಸ್ತ್ರ ಕಡ್ಡಾಯ!

    ವಾರಾಣಸಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಹೊಸ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ.

    ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯ ಸಮೀಪ ಕಾರ್ಯ ನಿರ್ವಹಿಸುವ ಪೊಲೀಸರು ಕಡ್ಡಾಯವಾಗಿ ಧೋತಿ-ಕುರ್ತಾ ಧರಿಸಬೇಕೆಂಬ ನಿಯಮವನ್ನು ಜಾರಿಗೆ ಮಾಡಿ ಪೊಲೀಸ್ ಇಲಾಖೆ ಆದೇಶ ನೀಡಿದೆ.

    ಈ ಕುರಿತು ಮಾಹಿತಿ ನೀಡಿರುವ ವಾರಾಣಾಸಿಯ ಜ್ಞಾನವಾಪಿ ಎಸ್ಪಿ ಶೈಲೇಂದ್ರ ಕುಮಾರ್ ರೈ, ಈ ವಸ್ತ್ರ ಸಂಹಿತೆ ನಿಯಮ ದೇವಾಲಯದ ಗರ್ಭಗುಡಿಯ ಬಳಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಪೊಲೀಸರು ತಮ್ಮ ಸಾಮಾನ್ಯ ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಪೊಲೀಸರು ಬೆಲ್ಟ್ ಧರಿಸಿ, ಇಲಾಖೆ ಸಮವಸ್ತ್ರದಲ್ಲಿಯೇ ಗರ್ಭಗುಡಿ ಬಳಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಸದ್ಯ ಪೊಲೀಸ್ ಇಲಾಖೆಯ ಈ ಹೊಸ ನಿಯಮವನ್ನು ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿದೆ.

    ಈ ನಿಯಮ ಸೋಮವಾರದಿಂದಲೇ ಜಾರಿಯಾಗಿದ್ದು, ಧೋತಿ-ಕುರ್ತಾ ಧರಿಸಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡ ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಬನಾರಸ್ ಹಿಂದೂ ವಿವಿಯಲ್ಲಿ ಪ್ರತಿಭಟನೆ: ವಿದ್ಯಾರ್ಥಿಗಳಿಗೆ ಪೊಲೀಸರಿಂದ ಲಾಠಿಚಾರ್ಜ್

    ಬನಾರಸ್ ಹಿಂದೂ ವಿವಿಯಲ್ಲಿ ಪ್ರತಿಭಟನೆ: ವಿದ್ಯಾರ್ಥಿಗಳಿಗೆ ಪೊಲೀಸರಿಂದ ಲಾಠಿಚಾರ್ಜ್

    ವಾರಾಣಸಿ: ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‍ಸಿ) ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

    ಪೊಲೀಸರು ಓರ್ವ ವಿದ್ಯಾರ್ಥಿನಿ ಮತ್ತು ಮೂವರು ವಿದ್ಯಾರ್ಥಿ ಸೇರಿದಂತೆ ನಾಲ್ವರಿಗೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ವಿದ್ಯಾರ್ಥಿಗಳ ಜಡೆಯನ್ನು ಹಿಡಿದು ಎಳೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ವಾರಾಣಸಿ ಜಿಲ್ಲಾಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿಯರ ಮನೆಗೆ ಹೋಗಲು ಮುಂದಾಗಿದ್ದು, ಅವರನ್ನು ಭದ್ರತಾ ಪಡೆಗಳು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಆಕ್ರೋಶದಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಏನಿದು ಪ್ರಕರಣ?
    ಗುರುವಾರ ಬಿಎಚ್‍ಸಿ ಕ್ಯಾಂಪಸ್ ಹೊರಗಡೆ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿಯನ್ನು ಮೂವರು ಯುವಕರು ಬೈಕ್‍ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ದೂರು ನೀಡಲು ಹೋಗಿದ್ದರು. ಆದರೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಬದಲು ವಿದ್ಯಾರ್ಥಿನಿ ಹಾಸ್ಟೆಲ್‍ಯಿಂದ ಹೋಗುವ ಬರುವ ಸಮಯವನ್ನು ಪ್ರಶ್ನಿಸಿ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಅಧಿಕಾರಿಗಳ ಈ ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿಗಳು ಶುಕ್ರವಾರ ಕ್ಯಾಂಪಸ್‍ನ ಒಳಗಡೆ ಯಾರನ್ನು ಹೋಗಲು ಬಿಡದೆ ಮುಖ್ಯ ಗೇಟ್‍ಅನ್ನು ಮುಚ್ಚಿ ಹೊರಗಡೆ ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರು.

    ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಪ್ರಧಾನಿ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ಬೇಟಿ ಬಚಾವೊ, ಬೇಟಿ ಪಡಾವೊ ಅಭಿಯಾನದ ಬಗ್ಗೆ ಭಾಷಣಗಳನ್ನು ಮಾಡುತ್ತಾರೆ. ಆದರೆ ಬಿಎಚ್‍ಸಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ವಾಸ್ತವವಾಗಿ ನೋಡಬೇಕು ಎಂದು ಕೂಗಿ ಕೂಗಿ ಹೇಳುತ್ತಿದ್ದಾರೆ.