Tag: Varanasi

  • ಮೋದಿ ಬಂದ ನಂತ್ರ ಕಾಶಿ ಬದಲಾಗಿದ್ಯಾ? ಜನ ಹೇಳೋದು ಏನು? ಗಂಗಾ ನದಿ ಹೇಗಿದೆ?

    ಮೋದಿ ಬಂದ ನಂತ್ರ ಕಾಶಿ ಬದಲಾಗಿದ್ಯಾ? ಜನ ಹೇಳೋದು ಏನು? ಗಂಗಾ ನದಿ ಹೇಗಿದೆ?

    ಅರುಣ್ ಬಡಿಗೇರ್
    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಗುಜರಾತಿನ ವಡೋದರದಿಂದ ಸ್ಪರ್ಧಿಸಿದ್ದ ಮೋದಿ ಈ ಬಾರಿ ವಾರಣಾಸಿಯಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ 5 ವರ್ಷದಲ್ಲಿ ಮೋದಿ ಆಡಳಿತದಲ್ಲಿ ಕಾಶಿಯಲ್ಲಿ ಏನು ಬದಲಾಗಿದೆ? ಗಂಗಾ ನದಿ ಎಷ್ಟು ಸ್ವಚ್ಛವಾಗಿದೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ಪ್ರಶ್ನೆಗೆ ಬುಲೆಟ್ ರಿಪೋರ್ಟರ್ ನಲ್ಲಿ ಉತ್ತರ ಸಿಕ್ಕಿದೆ. ಜನ ಹೇಳಿದ್ದು ಏನು? ಏನು ಆಗಬೇಕಿದೆ? ಜನ ಮತ್ತೆ ಮೋದಿಗೆ ವೋಟ್ ಹಾಕ್ತಾರಾ ಈ ಎಲ್ಲ ಪ್ರಶ್ನೆಗಳಿಗೆ ಜನ ನೀಡಿದ ಉತ್ತರ ಇಲ್ಲಿದೆ.

    ವಾರಣಾಸಿ ಹೆಸರು ಬಂದಿದ್ದು ಹೇಗೆ?
    ‘ವರುಣಾ’ ಮತ್ತು ‘ಅಸ್ಸಿ’ ನದಿಗಳ ಮಧ್ಯ ಭಾಗದಲ್ಲಿರುವುದರಿಂದ ಈ ಪ್ರದೇಶಕ್ಕೆ ವಾರಣಾಸಿ ಹೆಸರು ಬಂದಿದೆ. ಆರಂಭದಲ್ಲಿ ಇದನ್ನ ವರುಣಾಆಸಿ ಎಂದು ಕರೆಯಲಾಗುತಿತ್ತು. ಕಾಲ ಕ್ರಮೇಣ ಅದು ವಾರಣಾಸಿ ಆಗಿ ಬದಲಾಯ್ತು. ಹಾಗೆಯೇ ಬನಾರಸ್ ಹೆಸರು ಬರಲು ಹಿನ್ನೆಲೆಯಿದೆ. ‘ಬನಾ’ ಅಂದ್ರೆ ಹಿಂದಿಯಲ್ಲಿ ‘ತಯಾರಿದೆ’, ‘ರಸ’ ಅಂದ್ರೆ ‘ನವರಸ’ಗಳು. ಇಲ್ಲಿಗೆ ಬರುವವರಿಗೆ 9 ನವರಸಗಳು ಸಿದ್ಧವಾಗಿ ಸಿಗುತ್ತದೆ ಎನ್ನುವುದಕ್ಕೆ ಬನಾರಸ್ ಅಂತಾ ಕರೆಯುತ್ತಾರೆ.

    ಈ ಕ್ಷೇತ್ರ ಕಾಶಿ ವಿಶ್ವನಾಥನ ಸ್ಥಳ, ಶಿವನ ನಗರಿ ಎಂದು ಕರೆಯಲಾಗುತ್ತದೆ. 3500 ವರ್ಷಗಳ ಲಿಖಿತ ದಾಖಲೆ ಹೊಂದಿರೋ ಪುರಾತನ ನಗರಿ ಎಂದೇ ಕರೆಸಿಕೊಂಡಿದೆ. ಇಲ್ಲಿಗೆ 5,000ಕ್ಕೂ ಹೆಚ್ಚು ಪ್ರವಾಸಿಗರು ಪ್ರತಿ ನಿತ್ಯ ಬಂದು ಹೋಗುತ್ತಾರೆ.

    ಎಲ್ಲೆಂದರಲ್ಲಿ ಜೋತು ಬಿದ್ದ ವೈರ್‍ಗಳು, ಎಲ್ಲೆಂದರಲ್ಲಿ ಎಸೆಯುತ್ತಿದ್ದ ಪ್ಲಾಸ್ಟಿಕ್ ಚೀಲಗಳು, ಗಂಗಾ ನದಿಯ ತಟದಲ್ಲಂತೂ ನಿಲ್ಲಲು ಅಸಾಧ್ಯವಾಗುವ ರೀತಿಯಲ್ಲಿ ನೈರ್ಮಲ್ಯ, ವಾಸನೆಯಿಂದ ತುಂಬಿರುತ್ತಿತ್ತು. ಆದರೆ ಈಗ ಕಾಶಿ ಬದಲಾಗಿದೆ. ಈ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಮಾತುಗಳು ಕೇಳಿ ಬರುತ್ತಿವೆ.

    ಘಾಟ್‍ಗಳ ಸ್ವಚ್ಛತೆ ಆಗಿದ್ಯಾ?
    ಎಲ್ಲರೂ ಹೇಳುವ ಹಾಗೆ ಘಾಟ್‍ಗಳಲ್ಲಿ ಸ್ವಚ್ಛತೆ ಕಾಣಿಸುತ್ತಿದೆ. 2014ರಲ್ಲಿದ್ದ ಘಾಟ್‍ಗಳಿಗೂ ಈಗಿರುವ ಘಾಟ್‍ಗಳಿಗೂ ತುಂಬಾ ವ್ಯತ್ಯಾಸವಿದೆ. ಘಾಟ್‍ಗಳಲ್ಲಿ ಪ್ರತಿ 4 ಗಂಟೆಗಳಿಗೊಮ್ಮೆ ಕಸವನ್ನು ಗುಡಿಸಲಾಗುತ್ತದೆ. ಗಂಗಾ ನದಿಯಲ್ಲಿ ಎಸೆಯುವ ಹೂ, ತೆಂಗಿನಕಾಯಿ, ಪ್ಲಾಸ್ಟಿಕ್ ಕಸವನ್ನು ಬೋಟ್‍ನಲ್ಲಿ ಹೋಗಿ ಸ್ವಚ್ಛಗೊಳಿಸಲಾಗುತ್ತದೆ. ಇನ್ನು ಪ್ರತಿ ಘಾಟ್‍ಗಳಲ್ಲೂ ಎರಡೆರಡು ಕಸದ ಡಬ್ಬಿಗಳನ್ನ ಇಡಲಾಗಿದೆ. ಜೊತೆಗೆ ಘಾಟ್‍ನಲ್ಲಿರುವ ಅರ್ಚಕರು, ನಾವಿಕರು, ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತದೆ. ಆದರೂ ಕೆಲ ಜನರು ಸಿಕ್ಕ ಸಿಕ್ಕ ಕಡೆ ಹೂವು, ತೆಂಗಿನಕಾಯಿ, ಪ್ಲಾಸ್ಟಿಕ್ ಚೀಲ ಎಸೆದು ಹೋಗುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ.

    ಗಂಗಾ ನದಿ ಸ್ವಚ್ಛವಾಗಿದ್ಯಾ?
    ಘಾಟ್‍ಗಳಲ್ಲಿ ಸ್ವಚ್ಛತಾ ಕಾರ್ಯವೆಲ್ಲ ನಡೆಯುತ್ತಿದೆ. ಆದ್ರೆ, ವಾರಣಾಸಿಯಲ್ಲಿನ ಚರಂಡಿ ನೀರು ಇನ್ನೂ ಗಂಗಾ ನದಿಯನ್ನು ಸೇರುತ್ತಿದೆ. ಸುಮಾರು 175 ಕಡೆ ಇಂತಹ ಚರಂಡಿ ನೀರನ್ನು ಗಂಗಾ ನದಿಗೆ ಬಿಡುವ ಜಾಗಗಳಿವೆ. ಇದರಲ್ಲಿ ಪ್ರಮುಖ ಘಾಟ್‍ಗಳಲ್ಲಿನ ಈ ಮೋರಿ ನೀರನ್ನು ಬಿಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ ಆ ಎಲ್ಲ ಮೋರಿ ನೀರು ಘಾಟ್‍ಗಳನ್ನು ದಾಟಿ ಮುಂದೆ ಹೋದ ನಂತರ ಗಂಗಾ ನದಿಗೆ ದೊಡ್ಡ ಪ್ರಮಾಣದಲ್ಲಿ ಚರಂಡಿ ನೀರನ್ನು ಬಿಡಲಾಗುತ್ತದೆ. ಬಳಿಕ ಇದೇ ಗಂಗಾ ನದಿಯ ನೀರನ್ನ ಶುದ್ಧೀಕರಿಸಿ ವಾರಣಾಸಿಯ ಜನತೆ ಕುಡಿಯುವ ನೀರನ್ನಾಗಿ ಸರಬರಾಜು ಮಾಡಲಾಗುತ್ತದೆ.

    ಮೋದಿ ಬಂದ ನಂತರ ಘಾಟ್‍ಗಳಿಗೆ ಬೆಳಕಿನ ಅಲಂಕಾರ ಮಾಡಿಸಿದ್ರು, ಘಾಟ್‍ಗಳ ಸ್ವಚ್ಛತೆ ಮಾಡಿಸಿದ್ರು, ಆದ್ರೆ, ಘಾಟ್‍ಗಳಲ್ಲಿ ಕುಡಿಯುವ ನೀರಿಗಾಗಿ ಮಾಡಿಸಿದ ಟ್ಯಾಂಕ್‍ಗಳನ್ನು ಹಾಗೆ ಬಿಟ್ಟರು. ಪ್ರತಿ ಟ್ಯಾಂಕ್‍ಗಳಿಗೆ 5 ಲಕ್ಷ ಖರ್ಚಾಗಿದೆ. ಇನ್ನೂ ಗಂಗಾ ನದಿಗೆ ಬಿಡುವ ಕಲ್ಮಶ ನೀರನ್ನು ಮೊದಲು ನಿಲ್ಲಿಸಿ ಎನ್ನುವ ಮಾತನ್ನು ಇಲ್ಲಿನ ಸಾರ್ವಜನಿಕರು ಹೇಳುತ್ತಾರೆ. ನೋಡಲು ಚೆನ್ನಾಗಿದ್ದರೆ ಸಾಲದು, ಗಂಗಾ ನದಿಯೂ ಸ್ವಚ್ಛವಾಗಬೇಕು ಎನ್ನುವುದು ಜನರ ಕೂಗು.

    ವಿದ್ಯುತ್ ತಂತಿಗಳು
    ವಾರಣಾಸಿ ಗಲ್ಲಿ ಗಲ್ಲಿಗಳಿಂದ ಕೂಡಿದ ಜಾಗ. ಇಲ್ಲಿ ಒಂದು ಗಲ್ಲಿಯೊಳಗೆ ನುಗ್ಗಿದರೆ ಸಾಕು ಅದು ಇನ್ನೊಂದು ಜಾಗಕ್ಕೆ ತುಂಬಾ ಬೇಗನೆ ಮುಟ್ಟಿಸುತ್ತೆ, ಆದ್ರೆ ಸಿಕ್ಕಾಪಟ್ಟೆ ಇಕ್ಕಟ್ಟು ಇರುತ್ತೆ. ಇಂತಹ ಜಾಗದಲ್ಲೇ ಇಲ್ಲಿನ ಜನ ಬೈಕ್‍ನಲ್ಲಿ ಸವಾರಿ ಮಾಡ್ತಾರೆ. ಇಂತಹ ಜಾಗದಲ್ಲೇ ತರಕಾರಿ ಮಾರಲು ತಳ್ಳು ಗಾಡಿಯಲ್ಲಿ ಬರ್ತಾರೆ. ಈ ಜಾಗದಲ್ಲಿ ಸಂಚರಿಸುವುದೇ ಒಂದು ರೀತಿ ಚೆಂದ. ಇಂತಹ ಜಾಗದಲ್ಲಿ ಈ ಹಿಂದೆ ವಿದ್ಯುತ್ ಸಂಪರ್ಕಿಸುವ ತಂತಿಗಳು ಎಲ್ಲೆಂದರೆಲ್ಲಿ ತೂಗಾಡುತ್ತಿದ್ದವು, ಆದ್ರೆ ಇದೆಲ್ಲ ಈಗ ಬದಲಾಗಿದೆ. ಜೊತೆಗೆ ಕಾಶಿ ವಿಶ್ವನಾಥನ ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲೂ ಎಲ್ಲೆಂದರಲ್ಲಿ ಜೋತಾಡುತ್ತಿದ್ದ ವೈರ್‍ಗಳು ಈಗ ಭೂಮಿಯಡಿಯಲ್ಲಿ ಹೋಗಿವೆ. ಭೂಮಿಯ ಮೇಲ್ಭಾಗದಲ್ಲಿ ವಿದ್ಯುತ್ ದೀಪಗಳು ರಾರಾಜಿಸುತ್ತಿವೆ. ಇದು ಇಲ್ಲಿನ ಜನರ ಮನ ಸೆಳೆದಿದೆ. ಮಳೆಗಾಲ ಬಂದಾಗ ಯಾವಾಗ ಕೇಬಲ್‍ಗಳು ತುಂಡಾಗಿ ಬೀಳುತ್ತದೋ ಯಾವಾಗ ಶಾಕ್ ಹೊಡೆಯುತ್ತದೋ ಎನ್ನುವ ಭಯದಲ್ಲಿ ವಾಸಿಸುತ್ತಿದ್ದರಂತೆ. ಈಗ ಇದೆಲ್ಲ ಬದಲಾವಣೆ ನೋಡಿ ನಮಗೆ ತುಂಬ ಖುಷಿಯಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

    ವಿದ್ಯುತ್ ವ್ಯತ್ಯಯ ಇಲ್ಲ
    ಇಲ್ಲಿನ ಜನರು ಮೋದಿ ಮತ್ತು ಯೋಗಿ ಆದಿತ್ಯನಾಥ ಬಗ್ಗೆ ಇಷ್ಟೊಂದು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಲು ಕಾರಣ ಏನಂದ್ರೆ, ಅದು 24 ಗಂಟೆ ವಿದ್ಯುತ್ ಪೂರೈಕೆ. ಮುಂಚೆ ಇಲ್ಲಿ ದಿನಕ್ಕೆ 8 ರಿಂದ 10 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಆದ್ರೆ, ಈಗ ಇಲ್ಲಿ ವಿದ್ಯುತ್ ವ್ಯತ್ಯಯ ಇಲ್ಲದಿರೋದು ಜನರಿಗೆ ಮತ್ತಷ್ಟು ಮೋದಿ ಮೋದಿ ಅನ್ನುವಂತೆ ಮಾಡಿದೆ. ಆದರು ಇಲ್ಲಿ ಅಪರೂಪಕ್ಕೆ ಈಗ ದಿನಕ್ಕೆ ಒಂದೆರಡು ಗಂಟೆ ಕರೆಂಟ್ ಹೋಗುತ್ತದೆ. ಬೇಸಿಗೆಯಲ್ಲಿ ಇಲ್ಲಿನ 44-45 ಡಿಗ್ರಿ ಬಿಸಿಲನ್ನ ತಡೆದುಕೊಳ್ಳಲು ಫ್ಯಾನ್, ಕೂಲರ್, ಎಸಿ ಬೇಕಾಗುತ್ತದೆ. ಹಾಗಾಗಿ ಕರೆಂಟ್ ಇಲ್ಲದೆ ಇದ್ರೆ ಇಲ್ಲಿನ ಜನರ ಪಾಡು ಹೇಳೋ ಹಾಗೆ ಇಲ್ಲ. ಇನ್ನೂ ಅತೀ ಹೆಚ್ಚಾಗಿ ಇಲ್ಲಿ ಬಡವರ ಫ್ರಿಡ್ಜ್ ಮಡಿಕೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

    ಗುಂಡಿಗಳಿಂದ ಮುಕ್ತಿ ಕಂಡ ರಸ್ತೆಗಳು
    ನರೇಂದ್ರ ಮೋದಿ ಪ್ರಧಾನಿ ಅಂತಾ ವಾರಣಾಸಿ ಜನ ಮೋದಿ ಮೋದಿ ಅಂತಾ ಘೋಷಣೆ ಹಾಕುತ್ತಿಲ್ಲ. ಬದಲಾಗಿ ವಾರಣಾಸಿಯಲ್ಲಿ ಅಭಿವೃದ್ಧಿ ಆಗುತ್ತಿರುವುದರಿಂದ ಜನ ಮೋದಿಯನ್ನ ಪ್ರೀತಿಸೋಕೆ ಶುರು ಮಾಡಿದ್ದಾರೆ. ಮುಂಚೆ ಇಲ್ಲಿ ಗುಂಡಿಗಳಿಂದಲೇ ತುಂಬಿರುತ್ತಿದ್ದ ರಸ್ತೆಗಳು ಈಗ ನಯವಾಗಿ ಓಡುಡುವಂತಾಗಿವೆ. ವಿಮಾನ ನಿಲ್ದಾಣದಿಂದ ವಾರಣಾಸಿ ತಲುಪಲು ಸುಮಾರು 1 ಗಂಟೆ 45 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಕೇವಲ 45 ನಿಮಿಷದಲ್ಲಿ ವಾರಣಾಸಿ ತಲುಪಬಹದು. ಇದಕ್ಕಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಸೈಕಲ್ ಸವಾರರು, ಪ್ರಯಾಣಿಕರು ತುಂಬ ಸಂತಸ ವ್ಯಕ್ತಪಡಿಸುತ್ತಾರೆ.

    ಶೌಚಾಲಯಗಳ ನಿರ್ಮಾಣ:
    ಹಿಂದೆ ವಾರಣಾಸಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಭ್ಯಾಸವಾಗಿತ್ತು. ಇದರಿಂದ ಇಲ್ಲಿನ ಜನರು ಸೇರಿದಂತೆ ವ್ಯಾಪಾರಸ್ಥರು, ಪ್ರವಾಸಿಗರು ತುಂಬಾ ರೋಸಿ ಹೋಗಿದ್ದರು. ರಸ್ತೆ ಪಕ್ಕದಲ್ಲಿ ಓಡಾಡಬೇಕಾದರೂ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇತ್ತು. ಆದ್ರೆ ಈಗ ಪ್ರತಿ ಸರ್ಕಲ್‍ನಲ್ಲೊಂದು ಶೌಚಾಲಯಗಳನ್ನ ನಿರ್ಮಿಸಲಾಗಿದೆ. ಎಲ್ಲರಿಗೂ ಶೌಚಾಲಯ ಬಳಕೆಯ ಅರಿವು ಮೂಡಿದೆ. ಈ ಬೆಳವಣಿಗೆಯಿಂದ ಮೋದಿ ಜನರ ಮನಸ್ಸನ್ನು ಗೆದ್ದಿದ್ದಾರೆ.

    ಬದಲಾಗುತ್ತಿದ್ದಾರೆ ಜನ:
    ಕೇವಲ ಕಾಶಿ ಬದಲಾಗುತ್ತಿಲ್ಲ, ಕೇವಲ ವಾರಣಾಸಿ ಅಭಿವೃದ್ಧಿ ಕಾಣುತ್ತಿಲ್ಲ. ಇಲ್ಲಿನ ಜನರು ಬದಲಾಗುತ್ತಿದ್ದಾರೆ, ಅಭಿವೃದ್ಧಿ ಆಗುತ್ತಿದ್ದಾರೆ. ಮೊದಲು ಇಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದರು. ಆದ್ರೆ ಈಗ ಪ್ರತಿ ಅಂಗಡಿಯ ಮುಂಭಾಗದಲ್ಲಿ ಸ್ವತಃ ಅಂಗಡಿ ಮಾಲೀಕರೇ ಕಸದ ಡಬ್ಬಿಯನ್ನ ಇಟ್ಟಿರುತ್ತಾರೆ. ಎಲ್ಲೆಂದರಲ್ಲಿ ಬಿಸಾಕಿದರೆ ಅವರೇ ಬುದ್ಧಿ ಹೇಳುತ್ತಾರೆ. ಕಾರಿನಿಂದ ಗುಟ್ಕಾ ತಿಂದು ರ್ಯಾಪರ್ ಬಿಸಾಕುತ್ತಿದ್ದ ಚಾಲಕರು ಈಗ ಕಾರಿನಲ್ಲೇ ಗುಟಕಾ ರ್ಯಾಪರ್‍ಗಳನ್ನ ಇಟ್ಟುಕೊಳ್ಳುತ್ತಾರೆ, ಕಸದ ಡಬ್ಬಿ ಸಿಕ್ಕಾಗ ಅಲ್ಲಿ ಹಾಕುತ್ತಾರೆ. ಸ್ವಚ್ಛತೆಯನ್ನ ನೋಡಿ ಈಗ ತಾವು ಕೂಡ ಸ್ವಚ್ಛತೆ ಕಾಪಾಡೋದ್ರಲ್ಲಿ ನಿರತರಾಗಿದ್ದಾರೆ.

    ಟ್ರಾಫಿಕ್ ಜಾಮ್:
    ವಾರಣಾಸಿಯಲ್ಲಿನ ಟ್ರಾಫಿಕ್ ಜಾಮ್ ಬೆಂಗಳೂರನ್ನೂ ಮೀರಿಸುವಂತಿದೆ. ಬೆಂಗಳೂರಲ್ಲಿ ಕಾರುಗಳ ದರ್ಬಾರ್ ಇದ್ದರೆ ಇಲ್ಲಿ ಸೈಕಲ್ ರಿಕ್ಷಾ, ಆಟೋ, ಬ್ಯಾಟರಿ ಆಟೋ, ಬೈಕ್‍ಗಳು, ಕಾರುಗಳ ದರ್ಬಾರ್. ಇದರಲ್ಲಿ ಅತೀ ಮುಖ್ಯವಾಗಿ ಇಲ್ಲಿರುವ ಜನರಿಗೆ ಶಬ್ದಮಾಲಿನ್ಯದ ಅರಿವೇ ಇಲ್ಲದಂತಿದ್ದಾರೆ. ಒಂದು ಸಲ ರಸ್ತೆಗೆ ಹೋಗಿ ಬರುವಷ್ಟರಲ್ಲಿ ಕಿವಿ ಗುಂಯ್ ಅನ್ನೋದಂತೂ ಸತ್ಯ. ಹಾರ್ನ್ ಬಗ್ಗೆ ಇಲ್ಲಿರುವ ಜನರಿಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ.

  • ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ ಯಾಕೆ : ಸ್ಪಷ್ಟನೆ ಕೊಟ್ಟ ಪಿತ್ರೋಡಾ

    ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ ಯಾಕೆ : ಸ್ಪಷ್ಟನೆ ಕೊಟ್ಟ ಪಿತ್ರೋಡಾ

    ಜೈಪುರ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಿಯಾಂಕಾ ಗಾಂಧಿಯವರು ಏಕೆ ಸ್ಪರ್ಧೆ ಮಾಡಲಿಲ್ಲ ಎನ್ನುವುದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

    ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು, ವಾರಣಾಸಿಯಿಂದ ಸ್ಪರ್ಧಿಸಬಾರದು ಎನ್ನವುದು ಪ್ರಿಯಾಂಕ ಗಾಂಧಿಯವರ ಸ್ವಂತ ನಿರ್ಧಾರ. ಅದು ಪಕ್ಷದ ನಿರ್ಧಾರ ಅಲ್ಲ ಎಂದು ತಿಳಿಸಿದ್ದಾರೆ.

    ಪ್ರಿಯಾಂಕ ಗಾಂಧಿ ಅವರ ಜವಾಬ್ದಾರಿಯೇ ಬೇರೆ. ಒಂದು ಕ್ಷೇತ್ರದಿಂದ ಸ್ಪರ್ಧಿಸಿದರೆ ಬೇರೆ ಕಡೆ ಗಮನ ಹರಿಸಲು ಸಾಧ್ಯವಾಗುದಿಲ್ಲ. ಕೇವಲ ಒಂದೇ ಕ್ಷೇತ್ರದ ಮೇಲೆ ಗಮನ ಕೇಂದ್ರಿಕರಿಸುವುದಕ್ಕಿಂತ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂಬುದು ಅವರ ಅನಿಸಿಕೆಯಾಗಿದೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದರು.

    ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು. ಎಐಸಿಸಿ ಅಧ್ಯಕ್ಷ, ಸಹೋದರ ರಾಹುಲ್ ಗಾಂಧಿ ಅವರು ತಿಳಿಸಿದರೆ ನಾನು ವಾರಣಾಸಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸ್ವತಃ ಪ್ರಿಯಾಂಕ ಗಾಂಧಿ ಅವರು ಹೇಳಿದ್ದರು. ಅಷ್ಟೇ ಅಲ್ಲದೆ ಅವರ ಪತಿ ರಾಬರ್ಟ್ ವಾದ್ರಾ ಕೂಡ ಪ್ರಿಯಾಂಕ ಸ್ಪರ್ಧೆಯ ಬಗ್ಗೆ ಹೇಳಿಕೊಂಡಿದ್ದರು.

    ಎಲ್ಲ ಬೆಳವಣಿಗೆಯ ಬಳಿಕ ವಾರಣಾಸಿ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕರು ಅಜಯ್ ರಾಯ್ ಅವರ ಹೆಸರನ್ನು ಅಂತಿಮಗೊಳಿಸಿ, ಘೋಷಣೆ ಮಾಡಿದರು. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಎನ್‍ಡಿಎ ನಾಯಕರ ಸಮ್ಮುಖದಲ್ಲಿ ಇಂದು ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮತದಾನವು ಮೇ 19ರಂದು ನಡೆಯಲಿದ್ದು, ಮತ ಏಣಿಕೆಯು ಮೇ 23ರಂದು ನಡೆಯಲಿದೆ.

  • ವಾರಣಾಸಿಯಲ್ಲಿ ಮೋದಿ ರೋಡ್ ಶೋ – 1.5 ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್

    ವಾರಣಾಸಿಯಲ್ಲಿ ಮೋದಿ ರೋಡ್ ಶೋ – 1.5 ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್

    ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆದಿದ್ದ ಕಾಶಿ ರಸ್ತೆಯನ್ನು ಬರೋಬ್ಬರಿ ಒಂದೂವರೆ ಲಕ್ಷ ಲೀಟರ್ ನೀರು ಸುರಿದು ಫುಲ್ ಕ್ಲೀನ್ ಮಾಡಲಾಗಿದೆ.

    ದೇಗುಲ ನಗರಿಯ ಶೇ.30ರಷ್ಟು ಮಂದಿಗೆ ಕುಡಿಯಲು ನೀರಿಲ್ಲ. ಆದರೆ ಮೋದಿ ಬರುತ್ತಾರೆ ಎಂದು ಕುಡಿಯುವ ನೀರು ಬಿಟ್ಟು ಕಾಶಿ ರಸ್ತೆಯ ಸ್ವಚ್ಛತೆಯನ್ನು ಮಾಡಲಾಗಿದೆ. ವಾರಣಾಸಿ ಮುನ್ಸಿಪಲ್ ಕಾರ್ಪೋರೇಷನ್ 400 ಸಿಬ್ಬಂದಿಯಿಂದ ರೋಡ್ ಕ್ಲೀನ್ ಮಾಡಿಸಲಾಗಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

    ಪ್ರಧಾನಿ ಮೋದಿ ಕ್ಷೇತ್ರ ಕಾಶಿಯಲ್ಲಿ ಇದುವರೆಗೆ ಶೇ.70ರಷ್ಟು ಮನೆಗಳಿಗೆ ಮಾತ್ರ ಪೈಪ್‍ಲೈನ್ ಆಗಿದೆ. ಇನ್ನೂ ಶೇಕಡಾ 30ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಆದರೂ ಈ ರೀತಿ ಕುಡಿಯುವ ನೀರನ್ನು ರಸ್ತೆಯ ಸ್ವಚ್ಛತೆಗಾಗಿ ಬಳಸಿಕೊಂಡಿರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ.

    ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಕುಡಿಯುವ ನೀರಿನಲ್ಲಿ ಕ್ಲೀನ್ ಮಾಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆಯ ಪಕ್ಕದಲ್ಲಿದ್ದ ಗೋಡೆಯನ್ನು ಸಹ ಕುಡಿಯುವ ನೀರಿನಿಂದ ಸ್ವಚ್ಛ ಮಾಡಿಸಿದ್ದಾರೆ.

    ಪ್ರಧಾನಿ ಮೋದಿ ಅವರು ಸ್ವಚ್ಛತಾ ಅಭಿಯಾನವನ್ನು ವಾರಣಾಸಿಯಿಂದ ಪ್ರಾರಂಭಿಸಿದ್ದರು. ಹೀಗಾಗಿ ಪ್ರಧಾನಿ ಮೋದಿ ಬರುವ ದಾರಿ ಕಸದಿಂದ ಕೊಳಕಾಗಿದ್ದರೆ ಅದನ್ನು ನೋಡಿ ಮೋದಿ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ರೀತಿ ಕುಡಿಯುವ ನೀರನ್ನು ರಸ್ತೆ ಸ್ವಚ್ಛತೆಗಾಗಿ ವ್ಯರ್ಥ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

  • ಬಾದಲ್ ಕಾಲಿಗೆ ಬಿದ್ದ ನಮೋ – ನಾಮಪತ್ರ ಸಲ್ಲಿಕೆಯ ವೇಳೆ ಎನ್‍ಡಿಎ ಶಕ್ತಿ ಪ್ರದರ್ಶನ

    ಬಾದಲ್ ಕಾಲಿಗೆ ಬಿದ್ದ ನಮೋ – ನಾಮಪತ್ರ ಸಲ್ಲಿಕೆಯ ವೇಳೆ ಎನ್‍ಡಿಎ ಶಕ್ತಿ ಪ್ರದರ್ಶನ

    ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಶಿರೋಮಣಿ ಅಖಾಲಿ ದಳದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್(91) ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ವೇಳೆ ಎನ್‍ಡಿಎ ನಾಯಕರು ಸಹ ಸಾಥ್ ನೀಡಿ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸಿದ್ದಾರೆ.

    ಪ್ರಧಾನಿ ಮೋದಿ ತಮ್ಮ ನಾಮಪತ್ರವನ್ನು ಜಿಲ್ಲಾಧಿಕಾರಿ ಮುಂದೆ ಓದಿ ನಂತರ ಸಹಿ ಹಾಕಿ ಸಲ್ಲಿಕೆ ಮಾಡಿದರು.

    ಮೋದಿ ನಾಮಪತ್ರ ಸಲ್ಲಿಕೆಯ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸುಷ್ಮ ಸ್ವರಾಜ್ ಎನ್‍ಡಿಎ ನಾಯಕರಾದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಜೆಡಿಯು ನಾಯಕ ಬಿಹಾರ ಸಿಎಂ ನಿತೀಶ್ ಕುಮಾರ್, ಎಐಎಡಿಎಂಕೆ ನಾಯಕರಾದ ಓ ಪನ್ನೀರ್ ಸೆಲ್ವಂ ಮತ್ತು ತಂಬಿದೊರೈ, ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

    ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮೋದಿ, ಕಾಶಿಯ ಜನತೆ ನನ್ನ ಮೇಲೆ ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಮತ್ತೆ 5 ವರ್ಷ ಆಡಳಿತ ನಡೆಸಲು ಕಾಶಿಯ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಕಾಶಿಯಲ್ಲಿ ಮಾತ್ರ ಇಷ್ಟೊಂದು ದೊಡ್ಡ ರೋಡ್ ಶೋ ನಡೆಯಲು ಸಾಧ್ಯ ಎಂದು ಹೇಳಿದರು.

  • ವಾರಣಾಸಿಯಲ್ಲಿ ಮೋದಿ ವಿರುದ್ಧ ಕನ್ನಡಿಗ ಸ್ಪರ್ಧೆ!

    ವಾರಣಾಸಿಯಲ್ಲಿ ಮೋದಿ ವಿರುದ್ಧ ಕನ್ನಡಿಗ ಸ್ಪರ್ಧೆ!

     – ರಾಹುಲ್ ಗಾಂಧಿ ವಿರುದ್ಧವೂ ಕಣಕ್ಕೆ

    ನವದೆಹಲಿ: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಡಿಗ ಡಾ. ಶಿವಾನಂದ್ ಸ್ವರ್ಧೆ ಮಾಡುತ್ತಿದ್ದಾರೆ. ಅಲ್ಲದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಕಣಕ್ಕಿಳಿದಿದ್ದಾರೆ.

    ಡಾ. ಶಿವನಾಂದ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ವೈದ್ಯ ಹಾಗೂ ಪತ್ರಕರ್ತರಾಗಿದ್ದಾರೆ. ಇದೀಗ ಅವರು ವಾರಣಾಸಿಯಲ್ಲಿ ಮೋದಿ ಹಾಗೂ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಖಾಡಕ್ಕಿಳಿದಿದ್ದಾರೆ.

    ತನ್ನ ಸ್ಪರ್ಧೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಾನಂದ್, ರಾಜ್ಯ ಚುನಾವಣಾ ವೇಳೆ ರಾಜ್ಯದ ಎಲ್ಲ ಸಂಸದರು ಮೋದಿ ಮತ್ತು ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳುತ್ತಿದ್ದರು. ಸ್ಥಳೀಯ ಅಭ್ಯರ್ಥಿಗಳ ಅರ್ಹತೆ ಮೇಲೆ ಚುನಾವಣೆ ನಡೆಯಬೇಕಿತ್ತು. ಆದರೆ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಸಂಸದರು ಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಮತ ಹಾಕಿದ್ರೆ ನಾವು ನಮ್ಮೂರಿನ ಸಮಸ್ಯೆ ರಾಷ್ಟ್ರೀಯ ನಾಯಕರ ಮುಂದೆ ಹೇಳಲು ಸಾಧ್ಯವಿಲ್ಲ. ಚುನಾವಣೆ ಗೆದ್ದ ಮೇಲಂತೂ ನಮ್ಮ ಸಂಸದರು ಯಾವುದೇ ಕೆಲಸ ಮಾಡಲ್ಲ. ಹಾಗೂ ಪ್ರಮುಖ ಯೋಜನೆಗಳ ಬಗ್ಗೆ ರಾಷ್ಟ್ರೀಯ ನಾಯಕರ ಮುಂದೆ ತುಟಿ ಬಿಚ್ಚಿಯೂ ಮಾಯನಾಡುವುದಿಲ್ಲ. ಈ ವ್ಯವಸ್ಥೆಯನ್ನು ಬದಲಿಸಬೇಕು ಎನ್ನುವ ಉದ್ದೇಶದಿಂದ ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇವರು ಸ್ವರ್ಧೆ ಮಾಡುತ್ತಿರುವುದಾಗಿ ತಿಳಿಸಿದರು.

    ಇವರು ನಾಮಪತ್ರ ಸಲ್ಲಿಕೆ ಬಳಿಕ ಪ್ರಧಾನಿಗಳ ಗಮನಕ್ಕೆ ಈ ವಿಚಾರಕ್ಕೆ ಬಂದು ವ್ಯವಸ್ಥೆ ಬದಲಾದರೆ ಅದೇ ನನ್ನ ಗೆಲುವು ಎಂದು ಶಿವಾನಂದ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ವ್ಯವಸ್ಥೆ ವಿರುದ್ಧ ಬಂಡೆದ್ದು ಮೋದಿ ರಾಹುಲ್ ಗಾಂಧಿ ವಿರುದ್ಧ ಸ್ವರ್ಧೆ ಮಾಡಿರುವ ಶಿವನಂದ್ ಉದ್ದೇಶ ಈಡೇರುತ್ತಾ ಎಂಬುದನ್ನು ಕಾದು ನೋಡಬೇಕು.

  • ಎಲ್ಲಿ ನೋಡಿದರಲ್ಲಿ ಜನವೋ ಜನ – ಕಾಶಿಯಲ್ಲಿ ಮೋದಿ ಸುನಾಮಿ

    ಎಲ್ಲಿ ನೋಡಿದರಲ್ಲಿ ಜನವೋ ಜನ – ಕಾಶಿಯಲ್ಲಿ ಮೋದಿ ಸುನಾಮಿ

    ವಾರಣಾಸಿ: ಉತ್ತರ ಪ್ರದೇಶದ ಗಂಗೆಯ ಬೀಡು, ದೇಗುಲ ನಗರಿ, ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

    ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿದ್ದಾರೆ.

    ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನ ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.

    ಮಾಧ್ಯಮ ವರದಿಗಳ ಪ್ರಕಾರ ಅಂದಾಜು 4 ಲಕ್ಷಕ್ಕೂ ಅಧಿಕ ಜನ ಈ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಹಲವು ಕಿ.ಮೀ ಉದ್ದ ಜನಸಾಗರವೇ ಸೇರಿತ್ತು. ರಸ್ತೆಯ ಇಕ್ಕೆಲದಲ್ಲಿ, ಮಹಡಿಯಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರವೇ ಸೇರಿತ್ತು. ಒಂದು ರೀತಿಯಲ್ಲಿ ಕಾಶಿಯ ವಿಶ್ವನಾಥನ ಸನ್ನಿಧಿ ಕೇಸರಿಮಯವಾಗಿತ್ತು.

    ಬಿಹಾರದ ಧರ್ಬಂಗ್‍ನಲ್ಲಿ ಪ್ರಚಾರ ಮುಗಿಸಿ ಬರುವಲ್ಲಿ ತಡವಾದ ಕಾರಣ ಮಧ್ಯಾಹ್ನ 3 ಗಂಟೆಗೆ ಶುರುವಾಗಬೇಕಿದ್ದ ಈ ಮೆಗಾ ರೋಡ್‍ಶೋ ಸಂಜೆ 5.15ರ ಸುಮಾರಿಗೆ ಆರಂಭವಾಯಿತು.

    ಪ್ರಧಾನಿ ಮೋದಿ ಅವರ ಈ ರ‍್ಯಾಲಿಯಲ್ಲಿ ಭಾಗವಹಿಸುವಂತೆ ವಾರಣಾಸಿಯ ಪ್ರತಿಯೊಂದು ಮನೆಗೂ ತೆರಳಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದರು. ಮೋದಿ ಮೇಲಿನ ಅಭಿಮಾನ, ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಜನತೆ ಪ್ರಧಾನಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಶುಕ್ರವಾರ ಮೋದಿ ನಾಮಪತ್ರ ಸಲ್ಲಿಸಲಿದ್ದು, ಮೇ 19ಕ್ಕೆ ವಾರಣಾಸಿಯಲ್ಲಿ ಚುನಾವಣೆ ನಡೆಯಲಿದೆ.

  • ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ

    ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರ ಅವರು ಲೋಕಸಮರದಲ್ಲಿ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿಲ್ಲ.

    ಅಯೋಧ್ಯೆಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ನನಗೆ ಟಿಕೆಟ್ ನೀಡಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಸಹೋದರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನಗೆ ವಾರಣಾಸಿಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನನಗೆ ಖುಷಿಯಾಗುತ್ತೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದರು. ಹೀಗಾಗಿ ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಎಲ್ಲ ಸುದ್ದಿಗಳಿಗೆ ತೆರೆ ಬಿದ್ದಿದ್ದು, ಕಳೆದ ಬಾರಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಜಯ್ ರಾಯ್ ಅವರಿಗೆ ಪಕ್ಷ ಈ ಬಾರಿಯೂ ಟಿಕೆಟ್ ನೀಡಿದೆ.

    ಕಳೆದ ವಾರ ರಾಹುಲ್ ಗಾಂಧಿಗೆ ನಿಮ್ಮ ಸಹೋದರಿಯನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಸುವ ಯೋಚನೆ ಇದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಾಗ, ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಈ ವಿಷಯವನ್ನು ನಾನು ಸಸ್ಪೆನ್ಸ್ ಆಗಿ ಇಡುತ್ತೇನೆ. ಪ್ರತಿ ಬಾರಿಯೂ ಸಸ್ಪೆನ್ಸ್ ಕೆಟ್ಟದಾಗಿರಲ್ಲ ಎಂದಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ 371,784 ಮತಗಳ ಅಂತರದಿಂದ ಗೆದ್ದಿದ್ದರು. ಮೋದಿ 5,81,022 ಮತಗಳನ್ನು ಪಡೆದರೆ ಆಪ್ ಮುಖ್ಯಸ್ಥ ಕೇಜ್ರಿವಾಲ್ 2,09,238, ಅಜಯ್ ರಾಯ್ 75,614 ಮತಗಳನ್ನು ಪಡೆದಿದ್ದರು. ಒಟ್ಟು 10,30,685 ಮಂದಿ ಮತವನ್ನು ಚಲಾವಣೆ ಮಾಡಿದ್ದರು.

  • ಕಾಶಿ ವಿಶ್ವನಾಥನ ನಾಡಲ್ಲಿ ‘ನಮೋ’ ಕಹಳೆ-ನಾಮಪತ್ರ ಸಲ್ಲಿಕೆಗೂ ಮುನ್ನ ಮೋದಿ ಶಕ್ತಿ ಪ್ರದರ್ಶನ

    ಕಾಶಿ ವಿಶ್ವನಾಥನ ನಾಡಲ್ಲಿ ‘ನಮೋ’ ಕಹಳೆ-ನಾಮಪತ್ರ ಸಲ್ಲಿಕೆಗೂ ಮುನ್ನ ಮೋದಿ ಶಕ್ತಿ ಪ್ರದರ್ಶನ

    ನವದೆಹಲಿ: ಉತ್ತರ ಭಾರತದಲ್ಲಿ ಲೋಕ ಚುನಾವಣಾ ಅಬ್ಬರ ಜೋರಾಗುತ್ತಿದೆ. ದೇಶದ ಪುರಾತನ ನಗರ ವಾರಣಾಸಿಯಿಂದ ಪ್ರಧಾನಿ ಮೋದಿ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ನಾಳೆ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಇಂದು ಬೃಹತ್ ರೋಡ್ ಶೋ ನಡೆಸಲಿದ್ದಾರೆ.

    ದೇಶದ ಪ್ರಮುಖ ಪುಣ್ಯಕ್ಷೇತ್ರ, ಪುರಾತನ ನಗರ, ಪಾವನ ಧಾಮ ವಾರಣಾಸಿ. 2014ರ ಲೋಕಸಭೆ ಚುನಾವಣೆಯಲ್ಲಿ ವಡೋದರ ಮತ್ತು ವಾರಣಾಸಿಯಿಂದ ಕಣಕ್ಕೆ ಧುಮುಕಿದ್ದ ಮೋದಿ ಎರಡೂ ಕಡೆ ಭರ್ಜರಿಯಾಗಿ ಗೆದ್ದಿದ್ದರು. ನಂತರ ವಡೋದರಾ ಬಿಟ್ಟುಕೊಟ್ಟು ವಾರಣಾಸಿಯನ್ನು ಉಳಿಸಿಕೊಂಡಿದ್ದರು. ಈ ಬಾರಿ ಕೇವಲ ವಾರಣಾಸಿಯಿಂದ ಮಾತ್ರ ನರೇಂದ್ರ ಮೋದಿ ಕಣಕ್ಕೆ ಧುಮುಕಿದ್ದಾರೆ. ಹೀಗಾಗಿ ವಾರಣಾಸಿಯಲ್ಲಿ ಈಗ ಕಾಶಿ ವಿಶ್ವನಾಥನಿಗಿಂತ ಹೆಚ್ಚು ಮೋದಿಯೇ ಸದ್ದು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಇವತ್ತು ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

    ಬಿಹಾರದಲ್ಲಿನ ಚುನಾವಣಾ ಪ್ರಚಾರದ ಬಳಿಕ ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಗೆ ಆಗಮಿಸಲಿದ್ದಾರೆ. ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆಯ ಬಳಿಕ ಅದ್ಧೂರಿ ರೋಡ್ ಶೋಗೆ ಚಾಲನೆ ನೀಡಲಿದ್ದಾರೆ. ಬಳಿಕ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್, ಗ್ವಾಡಾಲಿಯಾ ಮೂಲಕ ಸಾಗಲಿರುವ ರೋಡ್ ಶೋ ಅಶ್ವಮೇಧ್ ಘಾಟ್‍ನಲ್ಲಿ ಸಂಜೆ ಗಂಗಾರತಿಯೊಂದಿಗೆ ಅಂತ್ಯವಾಗಲಿದೆ.

    ದೇಶವೇ ಬೆರಗುಗಣ್ಣಿನಿಂದ ನೋಡುತ್ತಿರುವ ವಾರಣಾಸಿಯಲ್ಲಿ ರೋಡ್ ಶೋ ಯಶಸ್ವಿಗೊಳಿಸಲು ಬಿಜೆಪಿ ಚಾಣಾಕ್ಯ ಅಮಿತ್ ಶಾ ಪ್ಲಾನ್ ರೂಪಿಸಿದ್ದು, ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೂ ತೆರಳಿ ಆಹ್ವಾನಿಸುತ್ತಿದ್ದಾರೆ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿಗೆ ಅವಕಾಶ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ರೋಡ್ ಶೋ ಬಳಿಕ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿಲಿದ್ದು, ಅದಕ್ಕೂ ಮುನ್ನ ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಬಿಹಾರದ ಸಿಎಂ ನಿತಿಶ್ ಕುಮಾರ್, ರಾಮವಿಲಾಸ್ ಪಾಸ್ವಾನ್ ಸೇರಿದಂತೆ ಬಿಜೆಪಿ ಮತ್ತು ಎನ್‍ಡಿಎ ಒಕ್ಕೂಟದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಈ ಮೂಲಕ ವಾರಣಾಸಿ ಇವತ್ತು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಲಿದೆ.

  • ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧ!

    ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧ!

    ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರು ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗಿದೆ.

    2019ರ ಚುನಾವನೆಯಲ್ಲಿ ಮೋದಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಪ್ರಿಯಾಂಕ ಅವರೇ ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸ್‍ನಲ್ಲಿ ಭಾರೀ ಲೆಕ್ಕಾಚಾರ ನಡೆದಿದೆ. ಈಗಾಗಲೇ ವಾರಣಾಸಿಯಾದ್ಯಂತ ಚುನಾವಣಾ ಪ್ರಚಾರ ಮಾಡಿರುವ ಪ್ರಿಯಾಂಕ ಸ್ಫರ್ಧೆಯ ಬಗ್ಗೆ ನಾಳೆ ವೇಳೆಗೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.

    ಪ್ರಿಯಾಂಕ ಗಾಂಧಿ ವಾದ್ರಾ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತರಾ ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರ ನೀಡಿದ್ದ ಕಾಂಗ್ರೆಸ್ ವಕ್ತಾರರೊಬ್ಬರು, ‘ಇನ್ನೇನು ನಾನು ಸ್ಪರ್ಧೆ ಮಾಡಲು ಆಗುತ್ತಾ’ ಎಂದು ಮರುಪ್ರಶ್ನೆ ಮಾಡಿ ಉತ್ತರಿಸಿದ್ದರು. ಆ ಬಳಿಕ ವಾರಣಾಸಿಯಲ್ಲಿ ಪ್ರಿಯಾಂಕ ಸ್ಪರ್ಧೆ ಬಗ್ಗೆ ಸುದ್ದಿ ಹೆಚ್ಚಾಗಿತ್ತು. ಒಂದೊಮ್ಮೆ ಪ್ರಿಯಾಂಕ ಗಾಂಧಿ ಅವರು ವಾರಣಾಸಿಯಲ್ಲಿ ಸ್ಪರ್ಧೆ ಮಾಡಿದರೆ 2019 ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರವಾಗಲಿದೆ. ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.

    ಇತ್ತ ಉತ್ತರ ಪ್ರದೇಶದ ಲಖನೌದಿಂದ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಏಪ್ರಿಲ್ 18 ಕ್ಕೆ ನಾಮಪತ್ರ ಸಲ್ಲಿಕೆಗೆ ಮುಗಿಯಲಿದ್ದು, ಕಾಂಗ್ರೆಸ್ ಅಥವಾ ಇತರೆ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿಲ್ಲ. ಮೇ. 6 ರಂದು ಮತದಾನ ನಡೆಯಲಿದೆ.

  • ಸಿನಿಮಾ ನೋಡಿ ಮನೆ ಬಿಟ್ಟು ಹೋದ ಯುವಕ

    ಸಿನಿಮಾ ನೋಡಿ ಮನೆ ಬಿಟ್ಟು ಹೋದ ಯುವಕ

    -ಲ್ಯಾಪ್‍ಟ್ಯಾಪ್ ನಿಂದ ಬೆಂಗ್ಳೂರು ಯುವಕ ದೆಹಲಿಯಲ್ಲಿ ಪತ್ತೆ!

    ಬೆಂಗಳೂರು: ಉನ್ನತ ವ್ಯಾಸಂಗಕ್ಕಾಗಿ ಹೊರ ರಾಜ್ಯದಿಂದ ಬಂದ ವಿದ್ಯಾರ್ಥಿಯೊಬ್ಬ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದು ಓದು ಮುಂದುವರಿಸಿದ್ದನು. ಆದರೆ ಇದ್ದಕ್ಕಿದ್ದ ಹಾಗೆ ಪತ್ರ ಬರೆದಿಟ್ಟು ನನ್ನನ್ನ ಹುಡುಕಬೇಡಿ, ಧನ್ಯವಾದಗಳು ಚಿಕ್ಕಪ್ಪ ಎಂದು ಕಾಣೆಯಾಗಿದ್ದನು. ಈಗ ವಿದ್ಯಾರ್ಥಿ ಪತ್ತೆಯಾಗಿದ್ದಾನೆ.

    ದೇವಾಂಶ್ ಪತ್ತೆಯಾಗಿರುವ ಯುವಕ. ಬಂಡೇಪಾಳ್ಯದ ಆರ್ಟ್ ಅಂಡ್ ಡಿಸೈನ್ ಕಾಲೇಜಿನಲ್ಲಿ ಓದುತ್ತಿದ್ದು, ವ್ಯಾಸಂಗಕ್ಕಾಗಿ ಅಂತ ಬಂದು ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದನು. ಆದರೆ ಖರ್ಚಿಗೆ ತನ್ನ ಎಟಿಎಂ ಕಾರ್ಡ್ ನಲ್ಲಿ 3 ಸಾವಿರ ಹಣ ಡ್ರಾ ಮಾಡಿಕೊಂಡು ಮನೆಯಲ್ಲಿ ತನ್ನ ಮೊಬೈಲ್ ಹಾಗೂ ಡೆಬಿಟ್ ಕಾರ್ಡ್ ಗಳನ್ನ ಬಿಟ್ಟು ಹೋಗಿದ್ದನು. ಈ ಹಿನ್ನೆಲೆಯಲ್ಲಿ ತಕ್ಷಣವೇ ಚಿಕ್ಕಪ್ಪ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಸಿನಿಮಾ:
    ಬೆಂಗಾಲಿಯ ಮಸಾನ್ ಸಿನಿಮಾ ನೋಡಿ ಪ್ರೇರಿತಗೊಂಡು ಚಿತ್ರದಲ್ಲಿ ಬರುವ ವಾರಣಾಸಿಯ ಸನ್ಯಾಸಿಗಳಿಗೆ ಮನಸೋತಿದ್ದನು. ದೇವಾಂಶ್ ತಾನು ಕೂಡ ಸನ್ಯಾಸಿಯಾಗಬೇಕು ಅಂದುಕೊಂಡಿದ್ದು, ವಾರಣಾಸಿಯ ಕೆಲ ಸಂಪ್ರದಾಯದ ಬಗ್ಗೆ ತಿಳಿದುಕೊಂಡು ಹೊರಟಿದ್ದನು. ಅಲ್ಲದೇ ಹೊರಡುವಾಗ ಹಿಂದಿಯಲ್ಲಿ ಪತ್ರ ಬರೆದಿಟ್ಟು ತೆರಳಿದ್ದನು. ಇದಾದ ಬಳಿಕ ತನ್ನ ಗೆಳೆಯರೊಂದಿಗೆ ಮಾತನಾಡಿ, ತನಗೆ ಗಾಂಜಾ ಬೇಕು ಎಂದಿದ್ದನು. ದೇವಾಂಶ್ ಗೆ ಗಾಂಜಾ ಚಟವಿದ್ದರೂ ಮನೆಯಲ್ಲಿ ಎಲ್ಲೂ ತೋರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.

    ಹುಡಕಾಟ:
    ಎಫ್‍ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದ ಬಂಡೇಪಾಳ್ಯ ಪೊಲೀಸರು, ಪ್ರತ್ಯೇಕ ತಂಡವನ್ನ ರಚಿಸಿ, ಎಲ್ಲಾ ರೈಲ್ವೇ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದರು. ಮತ್ತೊಂದೆಡೆ ಮನೆಯಲ್ಲಿ ಸಿಕ್ಕ ಪತ್ರ ಹಾಗೂ ಆತನ ಫೋನ್ ಬಗ್ಗೆ ಪರಿಶೀಲನೆ ಮಾಡಿದ್ದು, ಮನೆಯಲ್ಲಿ ಆತ ಉಪಯೋಗಿಸುತ್ತಿದ್ದ ಲ್ಯಾಪ್ ಟಾಪ್ ಪರಿಶೀಲನೆ ನಡೆಸಿದ್ದಾರೆ. ಆಗ ಲ್ಯಾಪ್ ಟಾಪ್ ನಲ್ಲಿ ಅತಿ ಹೆಚ್ಚು ಬಾರಿ ‘ಮಸಾನ್’ ಸಿನಿಮಾ ನೋಡಿದ್ದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಸನ್ಯಾಸತ್ವ ಕುರಿತು ಕೆಲ ರೀಸರ್ಚ್ ವರ್ಕ್ ಕೂಡ ಮಾಡಿದ್ದನು. ಜೊತೆಗೆ ವಾರಣಾಸಿಯಲ್ಲಿ ಯಾವ ರೀತಿ ಸನ್ಯಾಸಿಗಳು ಇರುತ್ತಾರೆ ಹಾಗೂ ಹೇಗಿರುತ್ತೆ ಅನ್ನೋದರ ಬಗ್ಗೆ ಅರಿತಿದ್ದನು. ಈ ಹಿನ್ನೆಲೆಯಲ್ಲಿ ಮೊದಲೇ ಸಿದ್ಧವಾಗಿ ಯುವಕ ದೇವಾಂಶ್ ಮನೆ ಬಿಟ್ಟು ಹೊರಟಿದ್ದನು.


    ಪೊಲೀಸರು ಗೋವಾ, ಡೆಲ್ಲಿ ರೈಲ್ವೆ ನಿಲ್ದಾಣದಲ್ಲಿ ವಿಚಾರಿಸಿದ್ದರು. ಅದಕ್ಕೂ ಮೊದಲು ಪೊಲೀಸರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದರ ಅನ್ವಯ ಬೆಂಗಳೂರಿನಿಂದ ವಾರಣಾಸಿಗೆ ಹೊರಟ ರೈಲಿನ ಬಗ್ಗೆ ವಿಚಾರಿಸಿದ್ದು, ಅದರ ಕಂಪ್ಲೀಟ್ ಡಿಟೇಲ್ಸ್ ಹೊರತೆಗೆದಿದ್ದರು. ದೇವಾಂಶ್ ನಾಪತ್ತೆಯಾದ ದಿನದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಸಿಸಿಟಿವಿ ಫೂಟೇಜ್ ನನ್ನು ಪರಿಶೀಲನೆ ನಡೆಸಿದ್ದಾರೆ. ಆಗ ದೇವಾಂಶ್ ಸಂಜೆ 4:20ಕ್ಕೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಕಾಣಿಸಿಕೊಂಡಿದ್ದನು.

    ಇದೇ ವೇಳೆ ಅಲ್ಲಿಂದ ಸುಮಾರು 5:20ಕ್ಕೆ ಮೆಜೆಸ್ಟಿಕ್ ನಿಂದ ವಾರಣಾಸಿಗೆ ರೈಲು ಹೊರಟಿತ್ತು. ಆ ರೈಲಿನಲ್ಲಿ ದೇವಾಂಶ್ ಹೋಗಿರಬಹುದು ಎಂಬ ಶಂಕೆ ಮೇರೆಗೆ ಎಲ್ಲಾ ಕಡೆ ಹುಡುಕಾಡಿದ್ದರು. ಅಲ್ಲಿನ ಆರ್ ಪಿಎಫ್ ಸಹಾಯದ ಮೇರೆಗೆ ದೆಹಲಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೂಲಕ ನಾಪತ್ತೆಯಾದ ಯುವಕನನ್ನ ಪತ್ತೆ ಹಚ್ಚುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv