Tag: varamahalakshmi festival

  • ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

    ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

    ಚಿಕ್ಕಬಳ್ಳಾಪುರ: ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ ಚಿಕ್ಕಬಳ್ಳಾಪುರದ ಹೂ ಬೆಳೆಗಾರರಿಗೆ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳು ಸಂತಸ ತಂದಿದೆ. ಮದುವೆ-ಮುಂಜಿ, ಸಭೆ ಸಮಾರಂಭಗಳ ಸೇರಿದಂತೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಹೂ ಗಳಿಗೆ ಭಾರೀ ಬೇಡಿಕೆ ಜೊತೆಗೆ ಬಂಪರ್ ಬೆಲೆಯೂ ಬಂದಿದೆ.

    ಸಾಲ ಮಾಡಿದ್ದ ರೈತರಿಗೆ ಈಗ ಕೈ ತುಂಬಾ ಕಾಸು ಸಿಗುತ್ತಿದ್ದು, ಹೂ ಬೆಳೆಗಾರರು ಸಖತ್ ಖುಷಿ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬರದನಾಡಾದರೂ ಇಲ್ಲಿನ ರೈತರು ಹೂ ಹಣ್ಣು ತರಕಾರಿ ಬೆಳೆಯೋದರಲ್ಲಿ ಫೇಮಸ್. ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿದ ರೈತರಿಗೆ ಕೈ ತುಂಬಾ ಕಾಸು ನೋಡೋದು ಕಷ್ಟವಾಗಿತ್ತು. ಈ ಬಾರಿ ಚಿಕ್ಕಬಳ್ಳಾಪುರ ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಸೇರಿದಂತೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಗ್ಲಾಡಿಯೋಲಸ್ ಬೆಳೆದಿದ್ದಾರೆ. ಈ ಗ್ಲಾಡಿಯೋಲಸ್ ಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಭಾರೀ ಬೇಡಿಕೆ ಬಂದಿದೆ.

    ಈ ಗ್ಲಾಡಿಯೋಲಸ್ ಹೈದರಾಬಾದ್, ಮುಂಬೈ, ಕೋಲ್ಕತ್ತಾ ಸೇರಿದಂತೆ ದೆಹಲಿಗೂ ಸಹ ರವಾನೆ ಮಾಡಲಾಗುತ್ತಿದೆ. 5 ಹೂವಿನ ಒಂದು ಕಟ್ಟು 50 ರೂಪಾಯಿಯವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ಲಾಡಿಯೋಲಸ್ ಬೆಳೆದ ರೈತರು ಕೈ ತುಂಬಾ ಕಾಸು ಎಣಿಸುವಂತಾಗಿದೆ ಅಂತ ರೈತ ಗಂಗರಾಜು ಹಾಗೂ ಮಂಜುನಾಥ್ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

    ಕೇವಲ ಗ್ಲಾಡಿಯೋಲಸ್ ಅಷ್ಟೇ ಅಲ್ಲದೆ ಅಲಂಕಾರಕ್ಕೆ ಅತಿ ಹೆಚ್ಚಾಗಿ ಬಳಸೋ ಜರ್ಬೇರಾವನ್ನ ಸಹ ಚಿಕ್ಕಬಳ್ಳಾಪುರ ತಾಲೂಕಿನ ವಿಜಯ್ ಕುಮಾರ್ ಎಂಬವರು ಬೆಳೆದಿದ್ದು, ಈ ಜರ್ಬೇರಾಗೂ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಫಾಲಿ ಹೌಸ್ ನಲ್ಲಿ ಬೆಳೆದಿರೋ ಬಣ್ಣ ಬಣ್ಣದ ತರಹೇವಾರಿ ಜರ್ಬೇರಾ ಒಂದು ಹೂ 20 ರೂಪಾಯಿಗೆ ಬಿಕರಿಯಾಗುತ್ತಿದ್ದು, 10 ಹೂವಿನ ಕಟ್ಟು 200 ರೂಪಾಯಿಗೆ ಸೇಲ್ ಆಗುತ್ತಿದೆ. ಕೆಲ ವ್ಯಾಪಾರಸ್ಥರೇ ತೋಟಕ್ಕೆ ಭೇಟಿ ನೀಡಿ ಕೇಳಿದಷ್ಟು ಹಣ ನೀಡಿ ಹೂ ಕಟಾವು ಮಾಡಿಕೊಳ್ಳುತ್ತಿದ್ದಾರೆ. ಸಾಲ ಸೋಲ ಮಾಡಿ ಇಷ್ಟು ದಿನ ಕಷ್ಟಪಟ್ಟಿದ್ದಕ್ಕೆ ಈಗ ಪ್ರತಿಫಲ ಸಿಕ್ತು ಅಂತ ರೈತ ವಿಜಯ್ ಕುಮಾರ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ

    ಗ್ಲಾಡಿಯೋಲಸ್ -ಜರ್ಬೇರಾ ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರದ ರೈತರು ಗುಲಾಬಿ, ಸೇವಂತಿಗೆ, ಚೆಂಡು ಹೂವನ್ನ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ 1 ಕೆಜಿ ಗುಲಾಬಿ 120 ರಿಂದ 150 ರೂ.ಗೆ, ಸೇವಂತಿಗೆ 120 ರಿಂದ 160 ರೂ.ಗೂ ಹಾಗೂ ಚೆಂಡು ಹೂ ಸಹ 50-60 ರೂ.ಗಳಿಗೆ ಮಾರಾಟವಾಗ್ತಿದ್ದು ಹೂ ಬೆಳೆದ ರೈತರ ಜೇಬು ತುಂಬುವಂತಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್

  • 2020 ಸತ್ವ ಪರೀಕ್ಷೆಯ ವರ್ಷ: ಸುದೀಪ್

    2020 ಸತ್ವ ಪರೀಕ್ಷೆಯ ವರ್ಷ: ಸುದೀಪ್

    ಬೆಂಗಳೂರು: 2020 ಸತ್ವ ಪರೀಕ್ಷೆಯ ವರ್ಷವಾಗಿದ್ದು, ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಲಿ ಎಂದು ಹಾರೈಸಿ ಅಭಿನಯ ಚಕ್ರವರ್ತಿ ಸುದೀಪ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಟ್ವೀಟ್ ಮೂಲಕ ಕನ್ನಡಿಗರಿಗೆ ಸುದೀಪ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ. ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಇಂದು ನಾಡಿನಾದ್ಯಂತ ಕೊರೊನಾ ಆತಂಕದ ನಡುವೆಯೂ ಜನರು ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತಿದ್ದಾರೆ. ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಕೊಂಡಿದ್ದಾರೆ. ದಟ್ಟಾರಣ್ಯದಲ್ಲಿ ವಿಕ್ರಾಂತ್ ರೋಣನ ಹುಡುಕಾಟದ ಸಣ್ಣ ಝಲಕ್ ರಿವೀಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.

  • ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

    ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

    -ಇತ್ತ ಕುರಿ ವ್ಯಾಪಾರ ಬಲು ಜೋರು

    ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ.

    ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ ಹಿನ್ನೆಲೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿಲ್ಲ ಅಂತ ಅಸಮಧಾನ ತೋಡಿಕೊಂಡಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬದ ವ್ಯಾಪಾರ ಒಂದು ಕಡೆಯಾದ್ರೆ ಇನ್ನೊಂದೆಡೆ ಬಕ್ರಿದ್ ಹಿನ್ನೆಲೆ ಕುರಿಗಳ ವ್ಯಾಪಾರವೂ ಜೋರಾಗಿದೆ. ರಾಯಚೂರು ನಗರಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಕುರಿಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಆತಂಕದ ನಡುವೆ ಬಕ್ರಿದ್ ಹಬ್ಬದ ಖರೀದಿ ಜೋರಾಗಿ ನಡೆದಿದೆ.

    ಆಗಸ್ಟ್ 1 ರಂದು ಬಕ್ರಿದ್ ಹಬ್ಬಕ್ಕೆ ಕುರ್ಬಾನಿ ನೀಡಲು ಮುಸ್ಲಿಂ ಬಾಂಧವರು ಕುರಿಗಳ ಖರೀದಿ ಮಾಡುತ್ತಿದ್ದಾರೆ. 12 ಸಾವಿರದಿಂದ 60 ಸಾವಿರ ರೂ. ವರೆಗೆ ಒಂದು ಕುರಿ ಮಾರಾಟ ನಡೆದಿದೆ. ಕೊರೊನಾ ವ್ಯಾಪಾಕವಾಗುತ್ತಿದ್ದರೂ, ಎಚ್ಚೆತ್ತುಕೊಳ್ಳದ ಜನತೆ ಹಬ್ಬದ ಸಂಭ್ರಮದ ಗುಂಗಿನಲ್ಲಿದ್ದಾರೆ.

     

  • ವರಮಹಾಲಕ್ಷ್ಮಿ ಹಬ್ಬ ಸಂಭ್ರಮ- ಮಾರ್ಕೆಟ್‍ಗಳಲ್ಲಿ ಜನವೋ ಜನ

    ವರಮಹಾಲಕ್ಷ್ಮಿ ಹಬ್ಬ ಸಂಭ್ರಮ- ಮಾರ್ಕೆಟ್‍ಗಳಲ್ಲಿ ಜನವೋ ಜನ

    ಬೆಂಗಳೂರು: ದೇಶದ ದೊಡ್ಡ ಹಬ್ಬ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಸಿಲಿಕಾನ್ ಸಿಟಿಯಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ.

    ಕೊರೊನಾ ಸಂಕಷ್ಟ ನಡುವೆಯೂ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರ್ಕೆಟ್‍ಗೆ ಜನರು ಮುಗಿಬಿದಿದ್ದಾರೆ. ನಗರದ ಮೈಸೂರು ರಸ್ತೆಯ ಫ್ಲೈ ಓವರ್ ಕೆಳಭಾಗದ ಮಾರ್ಕೆಟ್, ಗಾಂಧಿ ಬಜಾರ್ ಮಾರುಕಟ್ಟೆ, ಲಾಲ್ ಬಾಗ್ ಗಣೇಶ ದೇವಾಲಯ ಬಳಿಯ ಮಿನಿ ಹೂವಿನ ಮಾರುಕಟ್ಟೆ, ಆನೇಕಲ್ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜನರು ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದರು.

    ಕೊರೊನಾ ಸೋಂಕು ಹರಡುವ ಆತಂಕದ ನಡುವೆಯೂ ಹಲವರು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಖರೀದಿಗೆ ಮುಂದಾಗಿದ್ದು ಸಾಮಾನ್ಯ ದೃಶ್ಯವಾಗಿತ್ತು. ಹೂವು, ಬಾಳೆ-ಮಾವಿನ ಎಲೆ ಜೊತೆಗೆ ಹಣ್ಣುಗಳನ್ನು ಖರೀದಿ ಮಾಡಲು ಜನರು ಮುಂದಾಗಿದ್ದರು. ಮಾರ್ಕೆಟ್ ಪ್ರದೇಶದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿತ್ತು.

    ಕೊರೊನಾ ಹಿನ್ನೆಲೆಯಲ್ಲಿ ಖರೀದಾರರ ಸಂಖ್ಯೆ ಕಡಿಮೆ ಇದ್ದರು ಹೂವು, ಹಣ್ಣು ದರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ತಾವರೆ ಹೂ 100 ರೂ., ಬಾಳೆಕಂದು 60 ರೂ., ಮಲ್ಲಿಗೆ ಕೆಜಿ 800 ರೂ ರೂ., ಕನಕಾಂಬರ ಹೂ ಕೆಜಿಗೆ 2500 ರೂ., ಗುಲಾಬಿ ಹೂ ಕೆಜಿಗೆ 350 ರೂ. ದರದಲ್ಲಿ ಮಾರಾಟವಾಗುತ್ತಿತ್ತು.

    ಉಳಿದಂತೆ ನಾಳೆ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸೇವೆ ಮಾಡಿಸಲು ಅವಕಾಶವಿಲ್ಲ ಎನ್ನಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಲಭಿಸಲಿದೆ.

  • ಕರುನಾಡಿನೊಂದಿಗೆ ಸುಷ್ಮಾ ಸ್ವರಾಜ್ ಅವಿನಾಭಾವ ನಂಟು

    ಕರುನಾಡಿನೊಂದಿಗೆ ಸುಷ್ಮಾ ಸ್ವರಾಜ್ ಅವಿನಾಭಾವ ನಂಟು

    – ಕನ್ನಡದಲ್ಲೇ ಮಾತು, ವರಮಹಾಲಕ್ಷ್ಮೀ ಹಬ್ಬ ಆಚರಣೆ
    – ಬಳ್ಳಾರಿಯಲ್ಲಿ ನೀರವ ಮೌನ

    ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಕರ್ನಾಟಕದೊಂದಿದೆ ಅವಿನಾಭಾವ ಸಂಬಂಧ ಹೊಂದಿದ್ದರು. 1999ರಿಂದ ಪ್ರತಿ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರುವ ಸಂಪ್ರದಾಯ ಬೆಳೆಸಿಕೊಂಡಿದ್ದರು. ಆದರೆ ಇದೀಗ ಹಬ್ಬಕ್ಕೆ 2 ದಿನ ಇರುವಾಗಲೇ ಸುಷ್ಮಾ ಅವರು ಕೊನೆಯುಸಿರೆಳೆದಿದ್ದು, ಬಳ್ಳಾರಿಯಲ್ಲಿ ನೀರವ ಮೌನ ಆವರಿಸಿದೆ.

    1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಸೋನಿಯಾ ಗಾಂಧಿ ಅವರ ವಿರುದ್ಧ ಬಳ್ಳಾರಿ ಕ್ಷೇತ್ರದಲ್ಲಿ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ದರು. ಈ ವೇಳೆ ಕನ್ನಡವನ್ನು ಸಂಸ್ಕೃತ ಇಲ್ಲವೇ ಹಿಂದಿಯಲ್ಲಿ ಬರೆದುಕೊಂಡು ಕನ್ನಡದಲ್ಲಿಯೇ ಭಾಷಣ ಮಾಡುತ್ತಿದ್ದರು. ಈ ಭಾಷಣದ ಕ್ಯಾಸೆಟ್‍ಗಳನ್ನು ಲಕ್ಷಾಂತರ ಜನರು ಖರೀದಿಸಿ ಕೇಳಿದ್ದರು.

    ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿ ಅವರ ವಿರುದ್ಧ ಸ್ಪರ್ಧೆ ಮಾಡಿದಾಗ ರಾಜ್ಯದಲ್ಲಿ ಬಿಜೆಪಿಯು ಅಷ್ಟಾಗಿ ಗಟ್ಟಿಗೊಂಡಿರಲಿಲ್ಲ. ಪ್ರಚಾರದ ಮೂಲಕ ಬಳ್ಳಾರಿಯ ಜನರ ಮನ ಗೆದ್ದರು. ಆದರೆ ಚುನಾವಣೆಯಲ್ಲಿ ಸೋಲು ಕಂಡರು. ಸುಷ್ಮಾ ಸ್ವರಾಜ್ ಅವರ ಸ್ಪರ್ಧೆಯಿಂದಾಗಿ ರಾಜ್ಯದಲ್ಲಿ ಬಿಜೆಪಿ ಜನರ ಮನ ಹಾಗೂ ಮನೆ ತಲುಪಿತ್ತು.

    ಸುಷ್ಮಾ ಸ್ವರಾಜ್ ಅವರು ಚುನಾವಣಾ ಸಂದರ್ಭದಲ್ಲಿ ಬಳ್ಳಾರಿಯ ಹೃದ್ರೋಗ ತಜ್ಞರಾದ ಡಾ.ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಸಿದ್ದರು. ಆಗ ನಾನು ಸೋತರೂ ಸರಿ, ಗೆದ್ದರೂ ಸರಿ ತವರು ಮನೆಯಂತಿರುವ ಬಳ್ಳಾರಿಗೆ ಸಾಧ್ಯವಾದಷ್ಟು ವರ್ಷ ಬರುತ್ತೇನೆ. ಪ್ರತಿ ವರಮಹಾಲಕ್ಷ್ಮಿ ಪೂಜೆಯನ್ನು ಬಳ್ಳಾರಿಯಲ್ಲೇ ಮಾಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಪ್ರತಿ ವರ್ಷವೂ ಬಳ್ಳಾರಿಗೆ ಬಂದು ವರಮಹಾಲಕ್ಷ್ಮಿ ಪೂಜೆ ಮಾಡುತ್ತಿದ್ದರು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಶಾಸಕ ಶ್ರೀರಾಮುಲು ಅವರ ಮನೆಗೂ ಭೇಟಿ ನೀಡಿ, ಪೂಜೆಯಲ್ಲಿ ಭಾಗವಹಿಸುತ್ತಿದ್ದರು.

    https://www.youtube.com/watch?v=cBEdU1ss17Q

  • ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ತಯಾರಿ ಹೇಗೆ ಮಾಡಬೇಕು?

    ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ತಯಾರಿ ಹೇಗೆ ಮಾಡಬೇಕು?

    ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಮಾಸವಾಗಿದೆ. ಪ್ರತಿಯೊಂದು ಹಬ್ಬದಲ್ಲಿ ಮನೆಯಲ್ಲಿ ಸಡಗರ ಸಂಭ್ರಮದಿಂದ ಕೂಡಿರುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

    ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ
    ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ.

    ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

    ವ್ರತ ಹೇಗೆ ಮಾಡಬೇಕು?
    ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.

    ಶುಕ್ರವಾರ ವರಮಹಾಲಕ್ಷ್ಮಿಯನ್ನು ಬ್ರಾಹ್ಮೀ ಲಗ್ನದಲ್ಲಿ ಪ್ರತಿಷ್ಠಾಪನೆ ಮಾಡಬೇಕು, ಮುಂಜಾನೆ 4:30 ರಿಂದ 5.30 ರವರೆಗೂ ಬ್ರಾಹ್ಮೀ ಲಗ್ನದ ಮುಹೂರ್ತವಿದೆ. ಇದೇ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಸಲ್ಲಿಸಬೇಕು. ಈ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ.

    ಲಕ್ಷ್ಮಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮಿಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮಿ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ, ಎಲ್ಲವನ್ನು ಇಡುತ್ತಾರೆ.

    ಬಿಲ್ವ ವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮಿ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.

    ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ. ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನಕಾರಕನಾದ ಗಣಪತಿಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ. ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುತ್ತಾರೆ. ಇದೇ ರೀತಿ ಮದುವೆಯಾದ ಹೆಣ್ಣು ಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ವ್ರತವನ್ನು ಮುಗಿಸುತ್ತಾರೆ.

  • ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ಬೆಂಗಳೂರು: ಬಿಡಿಎ ಬ್ರೋಕರ್‍ವೊಬ್ಬರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಕಂತೆ ಕಂತೆ ನೋಟುಗಳು ಹಾಗೂ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನ ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಿಡಿಎ ಬ್ರೋಕರ್ ಸುರೇಶ್ ಅಲಿಯಾಸ್ ಸೂರಿ ಮನೆಯಲ್ಲಿ ಗರಿಗರಿ ನೋಟುಗಳ ಕಂತೆ ಮೇಲೆ ಲಕ್ಷ್ಮೀ ವಿಗ್ರಹವಿಟ್ಟು ಪೂಜೆ ಮಾಡಲಾಗಿದೆ. ಸೂರಿ ಎಚ್‍ಎಸ್‍ಆರ್ ಲೇಔಟ್ ಬಿಡಿಎ ವಿಭಾಗದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ನರ್ ಕಟ್ಟಿಂಗ್ ಸೂರಿ ಎನ್ನುವ ಅಡ್ಡ ಹೆಸರಿದೆ. ಇದೀಗ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ಪೂಜೆಗೆ ಸಾಲಾಗಿ ಜೋಡಿಸಿರುವ ಹಣದ ಮುಂದೆ ರಾಜಾರೋಷವಾಗಿ ಫೋಸ್ ಕೊಟ್ಟು ಪೀಕಲಾಟಕ್ಕೆ ಸಿಲುಕಿದಂತಾಗಿದೆ.

    ಕಾರ್ನರ್ ಕಟಿಂಗ್ ಸೈಟ್, ಬದಲಿ ಸೈಟ್ ಹೆಸರಿನಲ್ಲಿ ಸೂರಿ ಕೋಟ್ಯಾಂತರ ರುಪಾಯಿ ಹಣ ಗಳಿಕೆ ಮಾಡಿದ್ದಾರೆ ಎನ್ನುವ ಆರೋಪ ಈಗ ಬಲವಾಗಿ ಕೇಳಿಬಂದಿದೆ. ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್‍ಗಳಾಗಿ ಕನ್ವರ್ಟ್ ಮಾಡಿ ಮಾರಿದ್ದ ಆರೋಪ ಇವರ ಮೇಲಿದೆ.

     

  • ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್

    ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್

    ರಮಹಾಲಕ್ಷ್ಮೀ ಹಬ್ಬ ಬಂತು. ಹೆಣ್ಣುಮಕ್ಕಳಿಗಂತೂ ಸೀರೆ ಉಟ್ಟು ಚೆಂದವಾಗಿ ಅಲಂಕಾರ ಮಾಡ್ಕೊಂಡು ಓಡಾಡೋದೇ ಒಂದು ಸಂಭ್ರಮ. ಹಬ್ಬಕ್ಕೆ ಸಿಂಗರಿಸಿಕೊಳ್ಳುವಾಗ ಲೂಸ್ ಹೇರ್ ಇರಬೇಕಾ? ಜಡೆ ಹಾಕಬೇಕಾ ಅಥವಾ ಡಿಫರೆಂಟ್ ಹೇರ್‍ಸ್ಟೈಲ್ ಮಾಡ್ಕೋಬೇಕಾ ಅನ್ನೋದೇ ದೊಡ್ಡ ಕನ್‍ಫ್ಯೂಷನ್. ಡೋಂಟ್ ವರಿ, ಅದಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್. ನಿಮಗೆ ಯಾವುದು ಇಷ್ಟವಾಗುತ್ತದೋ ಆ ಹೇರ್‍ಸ್ಟೈಲ್ ಮಾಡಿಕೊಂಡು ಹಬ್ಬಕ್ಕೆ ಮಿಂಚಿಬಿಡಿ.

    1. ಸಿಂಪಲ್ ಫಿಶ್‍ಟೇಲ್ ಜಡೆ


    ಇದನ್ನು ಹೇಳಿಕೊಡಬೇಕಿಲ್ಲ. ಕಾಲೇಜು ಹುಡುಗೀರು ಈಗ ಫಿಶ್‍ಟೇಲ್ ಹಾಕೋದು ತುಂಬಾನೆ ಕಾಮನ್. ಉದ್ದ ಕೂದಲಿದ್ರೆ ಫಿಶ್ ಟೇಲ್ ಜಡೆ ಮತ್ತಷ್ಟು ಚೆನ್ನಾಗಿ ಕಾಣುತ್ತೆ. ನಿಮ್ಮ ಮುಖಕ್ಕೆ ಒಪ್ಪುವಂತೆ ಸೈಡಿಗೆ ಬೈತಲೆ ತೆಗದುಕೊಳ್ಳಿ ಅಥವಾ ಬಫ್ ಹಾಕಿ ಹಿಂದಕ್ಕೆ ಬಾಚಿಕೊಳ್ಳಿ. ಮುಂಗುರುಳಿಗಾಗಿ ಸ್ವಲ್ಪ ಕೂದಲನ್ನ ಹಾಗೇ ಬಿಡಿ. ನಂತರ ಬಲಕ್ಕೆ ಅಥವಾ ಎಡಕ್ಕೆ ಜಡೆ ಹೆಣೆದುಕೊಳ್ಳಿ. ರಬ್ಬರ್ ಬ್ಯಾಂಡ್ ಹಾಕಿದ ನಂತರ ಜಡೆಯ ಪ್ರತಿ ಹೆಣೆಯನ್ನ ಹಿಡಿದೆಳೆದು ಅಗಲವಾಗಿಸಿ. ಮುಂದೆ ಬಿಟ್ಟಿರುವ ಕೂದಲನ್ನ ಕರ್ಲ್ ಮಾಡಿ ಅಥವಾ ಸಣ್ಣಗೆ ಹೆಣೆದು ಸೈಡಿಗೆ ಪಿನ್ ಮಾಡಿ. ಜಡೆಯ ಮೊದಲ ಹೆಣೆಯ ಬಳಿ ಚಿಕ್ಕ ರೋಸ್ ಮುಡಿದುಕೊಳ್ಳಿ ಅಥವಾ ಹೇರ್ ಆಕ್ಸಸರಿ ಬಳಸಿ ಸ್ಟೈಲ್ ಮಾಡಿಕೊಳ್ಳಿ.

    2. ಫ್ರೆಂಚ್ ನಾಟ್

    ಇದು ಎಂಥವರಿಗೂ ಸೂಟ್ ಆಗುವಂತಹ ಹೇರ್‍ಸ್ಟೈಲ್. ಡೀಪ್ ನೆಕ್ ಬ್ಲೌಸ್ ಅಥವಾ ಹೈ ನೆಕ್‍ಬ್ಲೌಸ್ ಯಾವುದೇ ಧರಿಸಿದ್ರೂ ಫ್ರೆಂಚ್ ನಾಟ್ ಹೇರ್‍ಸ್ಟೈಲ್ ಮಾಡಿಕೊಂಡ್ರೆ ತುಂಬಾ ಚೆನ್ನಾಗಿ ಕಾಣುತ್ತದೆ. ಫ್ರೆಂಚ್ ನಾಟ್ ಹಾಕೋದನ್ನ ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ.

    https://www.youtube.com/watch?v=8vg07qjX5qU

    3. ಟ್ವಿಸ್ಟ್


    ಬನ್ ಅಥವಾ ಜಡೆ ಹಾಕಿಕೊಳ್ಳೊದು ಇಷ್ಟವಿಲ್ಲ ಎಂದಾದ್ರೆ ಲೂಸ್ ಹೇರ್‍ಗೆ ಒಂದು ಟ್ವಿಸ್ಟ್ ಕೊಡಿ. ಕೂದಲನ್ನ ಬ್ಲೋ ಡ್ರೈ ಮಾಡಿ ಅಥವಾ ಸ್ಟ್ರೇಟ್ನಿಂಗ್ ಮಾಡಿ ನಂತರ ಈ ಹೇರ್‍ಸ್ಟೈಲ್‍ಗಳನ್ನ ಮಾಡಿಕೊಳ್ಳೋದು ಸೂಕ್ತ. ಇದು ನಿಮಗೆ ಯಂಗ್ ಲುಕ್ ನೀಡುತ್ತದೆ. ಮೇಲ್ಭಾಗದಲ್ಲಿ ಟ್ವಿಸ್ಟ್ ಮಾಡಿ ಸ್ಟೈಲ್ ಮಾಡಿ ಕೂದಲ ತುದಿಯಲ್ಲಿ ಕರ್ಲ್ಸ್  ಮಾಡಿಕೊಳ್ಳಿ.

    4. ಲೋ ಬನ್

    ತುಂಬಾ ಕ್ಲಾಸಿ ಲುಕ್ ಬೇಕಾದಲ್ಲಿ ಈ ಹೇರ್‍ಸ್ಟೈಲ್ ಖಂಡಿತ ಟ್ರೈ ಮಾಡಿ. ಇದಕ್ಕೆ ನಿಮ್ಮ ಕೂದಲನ್ನ ನೀಟಾಗಿ ಬಾಚೋದು ತುಂಬಾ ಮುಖ್ಯ. ನಿಮ್ಮದು ಗುಂಗುರು ಕೂದಲಾದ್ರೆ ಸ್ಟ್ರೇಟ್ನಿಂಗ್ ಮಾಡಿಕೊಂಡು ನಂತರ ಈ ಹೇರ್‍ಸ್ಟೈಲ್ ಮಾಡಿಕೊಳ್ಳಿ.

    5. ಸಖತ್ ಸಿಂಪಲ್

    ಮೆಸ್ಸಿ ಬನ್ ನಂತಹ ಲುಕ್ ಬೇಕಾದ್ರೆ ಈ ಹೇರ್‍ಸ್ಟೈಲ್ ಹೇಳಿಮಾಡಿಸಿದ್ದು. ತುಂಬಾ ಸಿಂಪಲ್ ಆಗಿರೋ ಈ ಹೇರ್‍ಸ್ಟೈಲ್ ಮಾಡೋದು ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ. ಹೇರ್‍ಸೈಲ್ ಮಾಡಿಕೊಂಡ ನಂತರ ಚೆಂದದ ಹೇರ್ ಆಕ್ಸೆಸರಿ ಅಥವಾ ಕೃತಕ ಹೂ ಬಳಸಿದ್ರೆ ಇದರ ಅಂದ ಇಮ್ಮಡಿಗೊಳ್ಳುತ್ತೆ.

    6. ಟ್ರೆಡಿಷನಲ್ ಲುಕ್

    ಹಬ್ಬದ ದಿನ ಹೂ ಮುಡಿದುಕೊಂಡು ಸಾಂಪ್ರದಾಯಿಕವಾಗಿ ಕಾಣ್ಬೇಕು ಅನ್ನೋದಾದ್ರೆ ಸಿಂಪಲ್ ಆಗಿ ಒಂದು ಬನ್ ಹಾಕಿಕೊಂಡು ಮಲ್ಲಿಗೆ ದಿಂಡಿನಿಂದ ಸಿಂಗರಿಸಿಕೊಳ್ಳಿ. ರೋಸ್‍ಪೆಟಲ್ ಅಥವಾ ಮೊಗ್ಗು ಬಳಸಿ ಮಾಡೋ ದಿಂಡುಗಳು ಈಗಿನ ಟ್ರೆಂಡ್, ಅದನ್ನ ಟ್ರೈ ಮಾಡಿ.

    ಈ ಎಲ್ಲಾ ಹೇರ್‍ಸ್ಟೈಲ್‍ಗಳನ್ನ ನೀವು ಹಬ್ಬಕ್ಕೆ ಮಾತ್ರವಲ್ಲದೆ ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೂ ಟ್ರೈ ಮಾಡಬಹುದು.