Tag: Vande Bharat Mission

  • ಒಂದೇ ಭಾರತ್ ಮಿಷನ್ ಅಡಿ 5 ಲಕ್ಷಕ್ಕೂ ಹೆಚ್ಚು ಮಂದಿ ಸ್ವದೇಶಕ್ಕೆ ವಾಪಸ್: ಕೇಂದ್ರ ಸರ್ಕಾರ

    ಒಂದೇ ಭಾರತ್ ಮಿಷನ್ ಅಡಿ 5 ಲಕ್ಷಕ್ಕೂ ಹೆಚ್ಚು ಮಂದಿ ಸ್ವದೇಶಕ್ಕೆ ವಾಪಸ್: ಕೇಂದ್ರ ಸರ್ಕಾರ

    ನವದೆಹಲಿ: ವಿದೇಶಗಳಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆ ಸ್ವದೇಶಕ್ಕೆ ಭಾರತೀಯರನ್ನು ಕರೆ ತರಲು ಆರಂಭಿಸಿದ ಒಂದೇ ಭಾರತ್ ಮಿಷನ್ ಕಾರ್ಯಚರಣೆ ಮೂಲಕ ಐದು ಲಕ್ಷ ಮಂದಿ ಭಾರತಕ್ಕೆ ವಾಪಸ್ ಆಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    860 ಏರ್ ಇಂಡಿಯಾ ವಿಮಾನಗಳು, 1,256 ಚಾರ್ಟರ್ಡ್ ವಿಮಾನಗಳು ಮತ್ತು ಎಂಟು ನೌಕಾ ಹಡಗುಗಳು ಮೂಲಕ 137 ದೇಶಗಳಿಂದ 5.03 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಈ ಕಾರ್ಯಾಚರಣೆಯಲ್ಲಿ ವೃದ್ದರು, ಆರೋಗ್ಯ ಸಂಬಂಧಿ ತೊಂದರೆಗೆ ಒಳಗಾದವರು, ಮಹಿಳೆಯರು ಮಕ್ಕಳು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ವೀಸಾ ಅವಧಿ ಮುಗಿದ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗಿದೆ.

    ಮೇ 7ರಿಂದ 15ರವರೆಗೆ ಮೊದಲ ಹಂತ, ಮೇ 17ರಿಂದ 22ರವರೆಗೆ ಎರಡನೇ ಹಂತದಲ್ಲಿ ಕಾರ್ಯಚರಣೆ ಮಾಡಲಾಗಿತ್ತು ಬಳಿಕ ಎರಡನೇ ಹಂತವನ್ನು ಜೂನ್ 10 ರವರೆಗೆ ವಿಸ್ತರಿಸಿತಲಾಗಿತ್ತು. ವಿದೇಶಗಳಲ್ಲಿನ ಭಾರತೀಯ ಬೇಡಿಕೆ ಹಿನ್ನೆಲೆ ಜೂನ್ 11ರಿಂದ ಜುಲೈ 2ರವರೆಗೆ ಮೂರನೇ ಹಂತದಲ್ಲಿ ಭಾರತೀಯರನ್ನು ವಾಪಸ್ ಕರೆತರಲಾಗಿದೆ.

    ಕೇರಳಕ್ಕೆ ಅತಿ ಹೆಚ್ಚು ಮಂದಿ ವಿದೇಶದಿಂದ ವಾಪಸ್ ಆಗಲಿದ್ದಾರೆ. ಇದನ್ನು ಬಿಟ್ಟರೆ ಉತ್ತರ ಪ್ರದೇಶ, ಬಿಹಾರ್, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶದಕ್ಕೆ ಹೆಚ್ಚು ಮಂದಿ ವಾಪಸ್ ಆಗಲಿದ್ದಾರೆ.

  • ಏರ್ ಲಿಫ್ಟ್‌ನಲ್ಲೂ ಕೇರಳದ ಲಾಬಿ, ವಿಮಾನವಿಲ್ಲದೆ ಲಕ್ಷಾಂತರ ಕನ್ನಡಿಗರು ಕಂಗಾಲು

    ಏರ್ ಲಿಫ್ಟ್‌ನಲ್ಲೂ ಕೇರಳದ ಲಾಬಿ, ವಿಮಾನವಿಲ್ಲದೆ ಲಕ್ಷಾಂತರ ಕನ್ನಡಿಗರು ಕಂಗಾಲು

    – ಕುವೈಟ್‍ನಿಂದ ರಾಜ್ಯಕ್ಕಿಲ್ಲ ಒಂದೂ ವಿಮಾನ

    ಮಂಗಳೂರು: ಕೊರೊನಾ ವಿಚಾರದಲ್ಲೂ ಕೇರಳ ಲಾಬಿ ಮಾಡುತ್ತಿದ್ದು, ವಿದೇಶದಲ್ಲಿ ಸಹ ಲಾಬಿ ಮಾಡುತ್ತಿದೆ. ಇದರಿಂದ ನೇರವಾಗಿ ಕರ್ನಾಟಕದಿಂದ ಹೋಗಿ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಎಫೆಕ್ಟ್ ಆಗುತ್ತಿದೆ.

    ಗಲ್ಫ್ ರಾಷ್ಟ್ರಗಳಲ್ಲಿ ರಾಜ್ಯದ 5 ಲಕ್ಷ ಕನ್ನಡಿಗರಿದ್ದಾರೆ. ಅದರಲ್ಲೂ ಕರಾವಳಿ ಮೂಲದವರೆ ಹೆಚ್ಚಿದ್ದಾರೆ. ಆದರೆ ಕೇರಳ ಲಾಬಿಯಿಂದ ಅವರು ಇದೀಗ ಅಲ್ಲೇ ಉಳಿದುಕೊಳ್ಳುವಂತಾಗಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಎರ್ ಲಿಫ್ಟ್‍ನಲ್ಲಿ ಕೇರಳ ಸರ್ಕಾರ ಲಾಬಿ ನಡೆಸುತ್ತಿರುವುದರಿಂದ ಕನ್ನಡಿಗರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಗಲ್ಫ್‍ನಿಂದ ಕೇರಳಕ್ಕೆ 10ಕ್ಕೂ ಹೆಚ್ಚು ವಿಮಾನಗಳು ಬಂದಿವೆ. 35ಕ್ಕೂ ಹೆಚ್ಚು ವಿಮಾನ ಸೇವೆಗಳು ಬುಕ್ ಆಗಿವೆ. ಆದರೆ ಕರ್ನಾಟಕಕ್ಕೆ ಬೆರಳೆಣಿಕೆಯ ವಿಮಾನಗಳು ಮಾತ್ರ ಬಂದಿದ್ದು, ಅದರಲ್ಲೂ ಕುವೈಟ್‍ನಲ್ಲಿ ಅತಂತ್ರರಾಗಿರುವ ಕನ್ನಡಿಗರಿಗೆ ಈವರೆಗೆ ಒಂದೂ ವಿಮಾನ ಸೇವೆ ಸಿಕ್ಕಿಲ್ಲ. ಹೀಗಾಗಿ ಕನ್ನಡಿಗರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಕೇಂದ್ರದಲ್ಲಿ ವಿದೇಶಾಂಗ ಇಲಾಖೆ ಸಹಾಯಕ ಸಚಿವರಾಗಿರುವ ಮುರಳೀಧರನ್ ಕೇರಳದ ಪ್ರಭಾವಿ ನಾಯಕರು. ಹೀಗಾಗಿ ಕೇರಳಕ್ಕೆ ಹೆಚ್ಚಿನ ವಿಮಾನಗಳನ್ನು ನೀಡಲಾಗುತ್ತಿದೆ. ಇನ್ನು ಕುವೈಟ್‍ನಲ್ಲಿ ಕೇರಳದವರು ಪ್ರಮುಖ ಹುದ್ದೆಯಲ್ಲಿದ್ದಾರೆ. ಹೀಗಾಗಿ ಅಲ್ಲಿಂದ ಕೇರಳಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ನಡುವೆ ಕನ್ನಡಿಗರನ್ನು ಕರೆತರುವಲ್ಲಿ ರಾಜ್ಯ ಸರ್ಕಾರ ಅಷ್ಟೊಂದು ಆಸಕ್ತಿ ವಹಿಸಿದಂತಿಲ್ಲ.

    ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅನಿವಾಸಿ ಕನ್ನಡಿಗರೊಂದಿಗೆ ವಿಡೀಯೋ ಕರೆ ಮಾಡಿ ಮಾತನಾಡಿ, ಇನ್ನು ಹತ್ತು ದಿನಗಳ ಒಳಗಾಗಿ ಕರೆಸಿಕೊಳ್ಳವ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಸದ್ಯ ಲಾಬಿಯಲ್ಲಿ ಕೇರಳದವರ ಕಣ್ಣಿಗೆ ಬೆಣ್ಣೆ ಕರ್ನಾಟಕದವರ ಪಾಲಿಗೆ ಸುಣ್ಣ ಎಂಬಂತಾಗಿದೆ. ತಕ್ಷಣ ಈ ಬಗ್ಗೆ ಕರ್ನಾಟಕದ ಸಂಸದರು ಮತ್ತು ಕೇಂದ್ರ ಸಚಿವರು ಗಮನ ಹರಿಸಿ ಗಲ್ಫ್‍ನಲ್ಲಿರುವ ಕನ್ನಡಿಗರ ಆಗಮನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.