Tag: Valmiki Corp scam

  • ರಾಜ್ಯದಲ್ಲಿ ಇರೋದು ಹಗರಣಗಳಲ್ಲಿ ಮುಳುಗಿರುವ ಸರ್ಕಾರ: ನಿಖಿಲ್ ಕುಮಾರಸ್ವಾಮಿ

    ರಾಜ್ಯದಲ್ಲಿ ಇರೋದು ಹಗರಣಗಳಲ್ಲಿ ಮುಳುಗಿರುವ ಸರ್ಕಾರ: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ಸಿಎಂ ಸೇರಿ ಎಲ್ಲರೂ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Numaraswamy) ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ (BJP-JDS) ಪಾದಯಾತ್ರೆಯನ್ನು ಪಾಪ ತೊಳೆದುಕೊಳ್ಳಲು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಸಾಮಾನ್ಯವಾಗಿ ಪಾದಯಾತ್ರೆ ಮಾಡೋದು ಸರ್ಕಾರ ಬಂದು 4 ವರ್ಷ ಕಳೆದ ಮೇಲೆ. ಆ ಸಮಯದಲ್ಲಿ ಲೋಪದೋಷಗಳಾಗಿದ್ದರೆ, ಸಾರ್ವಜನಿಕರ ಪರವಾಗಿ ಹೋರಾಟ ಮಾಡೋದು ಸಹಜ. ರಾಜ್ಯದ ಹಿತಾಸಕ್ತಿಯಿಂದ ಸರ್ಕಾರದ ಅಕ್ರಮ ಖಂಡಿಸಿ ವಿಪಕ್ಷಗಳು ಪಾದಯಾತ್ರೆ, ಪ್ರತಿಭಟನೆ ಮಾಡ್ತೀವಿ. ಆದರೆ ಈ ಸರ್ಕಾರ ಒಂದೂವರೆ ವರ್ಷಗಳಿಂದ ಹಗರಣಗಳಲ್ಲೇ ಮುಳುಗಿದೆ ಎಂದು ಅವರು ಕಿಡಿಕಾರಿದ್ದಾರೆ.

    ಅನಿವಾರ್ಯವಾಗಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ಪಾದಯಾತ್ರೆ ಮಾಡಲು ದೂಡಿದೆ. ಎಸ್‌ಟಿ ಸಮುದಾಯದ ಹಣದ ವಾಲ್ಮೀಕಿ ಹಗರಣ (Valmiki Corp Scam) ಬೆಳಕಿಗೆ ಬಂದಿದೆ. 187 ಕೋಟಿ ರೂ. ಹಣ ರಾಜ್ಯದ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿದ್ದಾರೆ. ಅಧಿವೇಶನದಲ್ಲಿ ಸಿಎಂ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ. 187 ಕೋಟಿ ರೂ. ಅಲ್ಲ, 89 ಕೋಟಿ ರೂ. ಎಂದು. ಮತ್ತೊಂದು ಕಡೆ ಮುಡಾ ಅಕ್ರಮ. ಬಡವರಿಗೆ ಕೊಡಬೇಕಾದ ನಿವೇಶನಗಳಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ಮಾಡಿದ್ದಾರೆ. ಸ್ವತಃ ರಾಜ್ಯದ ಮುಖ್ಯಮಂತ್ರಿಗಳು, ಅವರ ಕುಟುಂಬ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

    ರೈತರಿಗೆ ಹಾಲಿನ ಪೊತ್ಸಾಹಧನವನ್ನು ಈ ಸರ್ಕಾರ 9 ತಿಂಗಳಿಂದ ಕೊಟ್ಟಿಲ್ಲ. 1200 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದೆ. 2013-18 ರಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು. ಅಂದು ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತು ಕೂಡಾ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಬೆಲೆ ಏರಿಕೆ. ಡೆಂಗ್ಯೂನಂತಹ ಸಣ್ಣ ಕಾಯಿಲೆಯನ್ನು ನಿಯಂತ್ರಣ ಮಾಡಲು ಈ ಸರ್ಕಾರಕ್ಕೆ ಆಗ್ತಾ ಇಲ್ಲ. ಅವರ ತಪ್ಪು ಮುಚ್ಚಿಕೊಳ್ಳಲು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಈ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಅವರು ಕುಟುಕಿದ್ದಾರೆ.

    ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾವು ಆಗ್ರಹಿಸುತ್ತೇವೆ. ನಾವು ರಾಜೀನಾಮೆ ಕೊಡಿ ಅಂತ ಹೇಳಿದ ತಕ್ಷಣ ಅವರು ರಾಜೀನಾಮೆ ಕೊಡಲ್ಲ. ಇದು ನ್ಯಾಯಾಂಗ ತನಿಖೆಯಲ್ಲಿ. ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

  • ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ

    ಮುಡಾ, ವಾಲ್ಮೀಕಿ ನಿಗಮದ ಹಗರಣ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ: ವಿಜಯೇಂದ್ರ

    -ಕಾಂಗ್ರೆಸ್‍ಗೆ ದಲಿತರ ವೋಟು, ನೋಟು, ಸಾವು ಬೇಕು: ಅಶೋಕ್

    ಬೆಂಗಳೂರು: ಸಾವಿರಾರು ಕೋಟಿ ರೂ. ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y Vijayendra) ಅವರು ಆಗ್ರಹಿಸಿದರು.

    ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಶಾಸಕರ ಭವನದ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು. ಸಿಎಂಗೆ ನಿಜವಾಗಿಯೂ ತಾಕತ್ತಿದ್ದರೆ ಮುಡಾ ಹಗರಣದ (MUDA scam) ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

    ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಾಗಿದ್ದಾರೆ. ಸಾವಿರಾರು ಕೋಟಿ ರೂ. ಬೆಲೆಬಾಳುವ ನಿವೇಶನಗಳಿಗೆ ಮೈಸೂರು ಮುಡಾ ಹಗರಣ ನಡೆದಿದೆ. ಈ ಹಗರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಹೋರಾಟ ನಡೆಸಿದ್ದೇವೆ. ಸದನದ ಒಳಗೆ ಕೂಡ ಹೋರಾಟ ಮುಂದುವರೆಯಲಿದೆ. ಅಲ್ಲದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ಸಿದ್ದರಾಮಯ್ಯನವರು (Siddaramaiah) ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದವರು. ಆದರೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಲ್ಲದೆ, ಅದೇ ಮೊತ್ತದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರದ ಬಂಡವಾಳ ಈ ಮೂಲಕ ಬಯಲಾಗಿದೆ ಎಂದಿದ್ದಾರೆ.

    ನಿಗಮದ ಅಧ್ಯಕ್ಷ ದದ್ದಲ್ ಕಾಣೆ
    ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಕೂರಲು ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ನಿಮ್ಮ ಮಾಜಿ ಸಚಿವ ನಾಗೇಂದ್ರ ಅವರು ಇ.ಡಿ. ಕಸ್ಟಡಿಯಲ್ಲಿದ್ದಾರೆ. ನಿಗಮದ ಅಧ್ಯಕ್ಷರೂ ಆದ ಶಾಸಕ ದದ್ದಲ್ ಕಾಣೆಯಾಗಿದ್ದಾರೆ. ಹಾಗಿದ್ದರೆ ಸಿಎಂ ಉತ್ತರ ಕೊಡಬೇಕಲ್ಲವೇ? ಅಧಿಕಾರಿಗಳು ಸೇರಿಕೊಂಡು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ್ದಾಗಿ ಹೇಳುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅವರ ಶಾಸಕರಿಗೆ ಕ್ಲೀನ್ ಚಿಟ್ ಕೊಡುವ ದುಸ್ಸಾಹಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಾಗಿ ಹೇಳಿ ಜನರ ಕಿವಿಗೆ ಹೂವು ಇಟ್ಟಿದ್ದರು. ಆದರೆ, ಅವರ ಬಂಡವಾಳ ಬಯಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

    ಮುಖ್ಯಮಂತ್ರಿಗಳು ನಿಜವಾಗಿ ಪ್ರಾಮಾಣಿಕರೇ ಆಗಿದ್ದರೆ, ನಿಷ್ಪಕ್ಷಪಾತ ತನಿಖೆ ಆಗಬೇಕೆಂದಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ ಕುರಿತು ಇ.ಡಿ ತಿಳಿಸಿದ ಹಿನ್ನೆಲೆಯಲ್ಲಿ ಇವೆರಡೂ ಹಗರಣಗಳ ಬಗ್ಗೆ ಸದನದಲ್ಲಿ ಉತ್ತರ ಕೊಡಬೇಕು. ವಾಲ್ಮೀಕಿ ನಿಗಮದ ಹಗರಣದ ಸಂಬಂಧ ನಾವು ನಿಲುವಳಿ ಸೂಚನೆ ಮಂಡಿಸುತ್ತಿದ್ದೇವೆ. ಇದರ ಕುರಿತು ಚರ್ಚೆ ಆಗಲೇಬೇಕು. ಸಿಎಂ ಉತ್ತರ ಕೊಡಲೇಬೇಕು ಎಂದು ಅವರು ಒತ್ತಾಯಿಸಿದರು.

    ಎಲ್ಲಾ ಹಗರಣವನ್ನೂ ಸಿಬಿಐ ತನಿಖೆಗೆ ಕೊಡಿ
    ಯಾವ ಸರ್ಕಾರ ಇದ್ದಾಗ ಮುಡಾದಲ್ಲಿ ಹಗರಣ ನಡೆದಿದ್ದರೂ ಎಲ್ಲಾ ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಿ. ಸಿಎಂ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ನಿಮಗೆ ಬೇಕಾದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಸಾಕಾಗುವುದಿಲ್ಲ. ಸಿಬಿಐ ತನಿಖೆಗೆ ಕೊಡಲೇಬೇಕು. ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಹೆದರಿಸುವ ಕೆಲಸ ಮಾಡದ್ದೀರಿ ಎಂದು ಅವರು ಕಿಡಿಕಾರಿದ್ದಾರೆ.

    ಎರಡೂ ಹಗರಣಗಳನ್ನು ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಅಲ್ಲಿನವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್‍ಗೆ ದಲಿತರ ಸಾವು ಬೇಕು
    ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ. ಕಾಂಗ್ರೆಸ್ಸಿಗರಿಗೆ ದಲಿತರ ಮತ ಬೇಕು. ದಲಿತರ ನೋಟು ಕೂಡ ಬೇಕು. ದಲಿತರ ಸಾವು ಬೇಕು. ಇದು ಕಾಂಗ್ರೆಸ್ ನೀತಿ. ಈ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಕಳಕೊಂಡಿದೆ. ಮಾನ ಮರ್ಯಾದೆ ಇದ್ದರೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಇವತ್ತು ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

  • ಸರ್ಕಾರ ಹಾಲು ಉತ್ಪಾದಕರ 657 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ: ಎನ್.ರವಿಕುಮಾರ್

    ಸರ್ಕಾರ ಹಾಲು ಉತ್ಪಾದಕರ 657 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ: ಎನ್.ರವಿಕುಮಾರ್

    ಬೆಂಗಳೂರು: ಸರ್ಕಾರ ಹಾಲು ಉತ್ಪಾದಕರ 657 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರ ಜೊತೆ ಈಗ ಬೆಲೆ ಏರಿಕೆ ಪರ್ವ ಆರಂಭಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ (N. Ravikumar) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ನೆಲಕಚ್ಚಿದೆ. ಸಿಎಂ, ಡಿಸಿಎಂ ಫೈಟ್ ನಡೆಯುತ್ತಿದೆ. ಈ ನಡುವೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ದೆಹಲಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಾರೆ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ – ಸಚಿವ ಜಮೀರ್

    ಜು.3ರಂದು ಸಿಎಂ ಮನೆಗೆ ಮುತ್ತಿಗೆ:
    ವಾಲ್ಮೀಕಿ ನಿಗಮದ ಅವ್ಯವಹಾರ (Valmiki Corp scam) ವಿಚಾರವಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಹೇಳಿಕೆ ನೀಡಿದ್ದಾರೆ. ನಿಗಮದಲ್ಲೇ ಅವ್ಯವಹಾರ ಆಗಿದೆ. ಕೂಡಲೇ ದದ್ದಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈ ಬಗ್ಗೆ ಶರಣ ಪ್ರಕಾಶ್ ಪಾಟೀಲ್ ಅವರ ಕಚೇರಿಯಲ್ಲಿಯೇ ಸಭೆ ನಡೆದಿದೆ. ಅವರೂ ಕೂಡ ರಾಜೀನಾಮೆ ನೀಡಬೇಕು. ಅವ್ಯವಹಾರದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಇದೇ ವಿಚಾರವಾಗಿ ನಮ್ಮ ಶಾಸಕರು ಜು.3ರಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

    ಗದಗದಲ್ಲಿ ಸರಗಳ್ಳತನ ಮಾಡ್ತಿದ್ದ ಅಮ್ಜದ್ ಅಲಿ ಹಾಗೂ ಸಹಚರರಿಂದ ಪೊಲೀಸರ ಮೇಲೆ ಹಲ್ಲೆ ನಡೆದ ವಿಚಾರವಾಗಿ, ನಾಲ್ಕು ಜನ ಪೊಲೀಸರ ಮೇಲೆ ಹಲ್ಲೆಯಾಗಿದೆ. ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮ್ಜದ್ ಅಲಿ ರಕ್ಷಣೆ ಮಾಡುವ ಕೆಲಸ ನಡೆದಿದೆ. ಇದರ ಹಿಂದೆ ಸರ್ಕಾರ ಇದೆಯಾ? ಎಸ್ಪಿ ಇದ್ದಾರಾ? ಯಾರಿದ್ದಾರೆ ಗೊತ್ತಿಲ್ಲ. ಒಟ್ಟಾರೆ ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.

    ಇನ್ನೂ ಜು.4ರಂದು ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಎರಡು ನಿರ್ಣಯ ತೆಗೆದುಕೊಳ್ಳಲಿದ್ದೇವೆ. ಕೇಂದ್ರದ ಬಿಜೆಪಿ ಸರ್ಕಾರ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದೆ. ಮೋದಿಯವರಿಗೆ ಅಭಿನಂದನೆ ಸಲ್ಲಿಸಲಿದ್ದೇವೆ. ಎರಡನೇಯದಾಗಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ. ಬೆಲೆ ಏರಿಕೆ, ಆಡಳಿತ ವೈಫಲ್ಯ, ಭ್ರಷ್ಟಾಚಾರ, ಸಿಎಂ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಿಸಬಾರದು ಎಂದು ನಿರ್ಣಯ ಮಾಡಲಿದ್ದೇವೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ನಾಲ್ಕು ಜನ ಕೇಂದ್ರದ ಸಚಿವರೂ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    1 ಕೋಟಿ ಲೀಟರ್‌ ಹಾಲು ಉತ್ಪಾದನೆ: ಸಿಎಂ

    ಹಾಲಿನ ದರದ ಬಗ್ಗೆ ಜೂ.29ರಂದು ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah), ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈನುಗಾರರಿಂದ ಖರೀದಿಸುವ ಹಾಲಿಗೆ ರೂ.3 ಹೆಚ್ಚಳ ನೀಡುತ್ತಿರುವುದು. ಉತ್ತಮ ಮುಂಗಾರಿನಿಂದಾಗಿ ಜಾನುವಾರುಗಳಿಗೆ ಹಸಿರು ಮೇವು ಲಭ್ಯವಾಗುತ್ತಿರುವುದು ಈ ಎಲ್ಲಾ ಕಾರಣದಿಂದಾಗಿ ಕಳೆದ ವರ್ಷ ನಿತ್ಯ ಸರಾಸರಿ 72 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಇಂದು ಒಂದು ಕೋಟಿ ಲೀಟರ್‌ಗೆ ತಲುಪಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು: ಪರಂ