Tag: Valmiki Case

  • ಗಣಿ ನಾಡಲ್ಲಿ ‘ಕೈ’ ನಾಯಕರ ಬೆವರಿಳಿಸಿದ ಇಡಿ – ಮಹತ್ವದ ದಾಖಲೆಗಳು ವಶಕ್ಕೆ

    ಗಣಿ ನಾಡಲ್ಲಿ ‘ಕೈ’ ನಾಯಕರ ಬೆವರಿಳಿಸಿದ ಇಡಿ – ಮಹತ್ವದ ದಾಖಲೆಗಳು ವಶಕ್ಕೆ

    ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ (Bellary) ಬುಧವಾರ ಬೆಳ್ಳಂಬೆಳಗ್ಗೆ ಇಡಿ (ED) ಅಧಿಕಾರಿಗಳು ಕೈ ಶಾಸಕರು ಹಾಗೂ ಸಂಸದರಿಗೆ ಶಾಕ್ ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Scam) ನೂರಾರು ಕೋಟಿ ಹಣ ಹೊಡೆದು, ಆ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸುವಲ್ಲಿ ಕೈ ಜನಪ್ರತಿನಿಧಿಗಳ ಕೈವಾಡ ಇದೆ ಎಂದು ನಾಲ್ವರು ಶಾಸಕರು ಹಾಗೂ ಓರ್ವ ಸಂಸದರಿಗೆ ಇಡಿ ಅಧಿಕಾರಗಳು ಬುಧವಾರ ಇಡೀ ದಿನ ಡ್ರಿಲ್ ಮಾಡಿದ್ದಾರೆ. ಸತತ 15 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಈ ಹಿಂದೆ ಇಡಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಒಂದಷ್ಟು ದಿನ ಮಾಜಿ ಸಚಿವ ನಾಗೇಂದ್ರ, ಅವರ ಆಪ್ತರು ಜೈಲಿನಲ್ಲಿದ್ದು ಬೇಲ್ ಪಡೆದಿದ್ದರು. ಇನ್ನೇನು ಇಡಿ ತನಿಖೆ ಮುಗೀತು ಎಂದು ನಿರಾಳರಾಗಿ ಮೈಮರೆತಿದ್ದವರಿಗೆ ಇಡಿ ಮತ್ತೆ ಶಾಕ್ ಕೊಟ್ಟಿದೆ. ಇಡಿ ಅಧಿಕಾರಿಗಳ ದೊಡ್ಡ ಪಡೆ ಬಳ್ಳಾರಿ ಲೋಕಸಭಾ ವ್ಯಾಪ್ತಿಯ ಐವರು ಶಾಸಕರು, ಓರ್ವ ಸಂಸದರಿಗೆ ಮೈಚಳಿ ಬಿಡಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.

    ಬಳ್ಳಾರಿ ಸಂಸದ ಇ.ತುಕಾರಾಂ ಸಂಡೂರು ನಿವಾಸ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಬೆಂಗಳೂರು ನಿವಾಸ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ನಿವಾಸ, ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ನಿವಾಸ ಹಾಗೂ ಕೂಡ್ಲಿಗಿ ಶಾಸಕ ಎನ್.ಟಿ ಶ್ರೀನಿವಾಸ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ನಡೆಸಿ ಸುಧೀರ್ಘ 15 ಗಂಟೆಗಳ ವಿಚಾರಣೆ ನಡೆಸಿದರು. ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ

    ಕಳೆದ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಕೆಯಾಗಿದೆ ಎನ್ನುವ ಆರೋಪ ಇತ್ತು. ಅಷ್ಟೇ ಅಲ್ಲದೇ ಕಳೆದ ಬಾರಿ ನಾಗೇಂದ್ರ ಆಪ್ತ ಸಹಾಯಕ ಮನೆ ಮೇಲೆ ದಾಳಿ ಮಾಡಿದಾಗ, ಗಣೇಶ್, ತುಕಾರಾಂ, ಭರತ್ ರೆಡ್ಡಿ, ನಾಗೇಂದ್ರ, ಎನ್.ಟಿ ಶ್ರೀನಿವಾಸ್‌ಗೆ ಹಣ ಸಂದಾಯ ಆಗಿರುವ ಬಗ್ಗೆ ಬರೆದಿಟ್ಟ ಡೈರಿ ಸಿಕ್ಕಿತ್ತು. ಅದೇ ಆಧಾರದ ಮೇಲೆ ಇಡಿ ದಾಳಿ ನಡೆಸಿ ಇಡೀ ದಿನ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಸರಣಿ ಅಪಘಾತ – ಬೈಕ್ ಸವಾರನಿಗೆ ಗಾಯ

    ಎಲ್ಲರಿಗೂ ಒಂದೇ ಮಾದರಿಯ 28 ಪ್ರಶ್ನೆ:
    ಎಲ್ಲರನ್ನೂ ಅವರ ಮನೆಗಳಲ್ಲೇ ಲಾಕ್ ಮಾಡಿದ್ದ ಇಡಿ ಅಧಿಕಾರಿಗಳು 15 ತಾಸಿಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದರು. ಎಲ್ಲರನ್ನೂ ಪ್ರತ್ಯೇಕವಾಗಿ ಕೂರಿಸಿ ಒಂದೇ ಮಾದರಿಯ 28 ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರಗಳನ್ನ ನಮೂದಿಸಲಾಗಿದೆ. ಅಲ್ಲದೇ ಕಳೆದ ಎರಡು ವರ್ಷಗಳ ಬ್ಯಾಂಕ್ ಖಾತೆಗಳ ವ್ಯವಹಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೊತೆಗೆ ನಾಗೇಂದ್ರ ಆಪ್ತ ಡೈರಿಯಲ್ಲಿ ಬರೆದಿದ್ದ ಹೆಸರು ಹಾಗೂ ಹಣದ ವಿವರದ ಕಾಪಿ ತೋರಿಸಿ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಎಲ್ಲರ ಮೊಬೈಲ್ ವಶಕ್ಕೆ ಪಡೆದು ಡಿಲೀಟೆಡ್ ಮೆಸೇಜ್‌ಗಳನ್ನು ರಿಟ್ರೀವ್ ಮಾಡಲಾಗಿದೆ. ದಾಳಿಗೆ ಒಳಗಾಗದ ಎಲ್ಲಾ ಶಾಸಕರು ಹಾಗೂ ಸಂಸದರ ಮನೆಯಿಂದ ಒಂದಷ್ಟು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ನಡುವೆ ದಾಳಿಗೊಳಗಾದ ಶಾಸಕರು ಸಂಸದರಿಗೆ ಹೆಚ್ಚಿನ ವಿಚಾರಣೆ ಎದುರಿಸಲು ತಿಳಿಸಲಾಗಿದೆ. ಬೆಂಗಳೂರಿನ ಇಡಿ ಕಚೇರಿಗೆ ಬರುವಂತೆ ಸೂಚನೆ ನೀಡಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ. ಇದನ್ನೂ ಓದಿ: ಧಾರಾಕಾರ ಮಳೆಗೆ 101 ಬಾಗಿಲುಗಳುಳ್ಳ 160 ವರ್ಷಗಳ ಕಟ್ಟಡ ಕುಸಿತ

    ಇಡಿ ದಾಳಿಗೆ ಒಳಗಾಗಿ, ವಿಚಾರಣೆ ಎದುರಿಸಿದ ಬಳಿಕ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್ ಮಾಡಿಲ್ಲ. ಏನೇ ದಾಖಲಾತಿ ಕೇಳಿದ್ರೂ ಕೊಡುತ್ತೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಉಡುಪಿ | ಭಾರೀ ಮಳೆಗೆ ರೈಲ್ವೇ ಸೇತುವೆ ಬಳಿಯೇ ಭೂಕುಸಿತ

  • ವಾಲ್ಮೀಕಿ ನಿಗಮದ 40 ಕೋಟಿ ರೂ. ಹಣ ಖಜಾನೆಯಿಂದ ನೇರವಾಗಿ ಬೇರೆ ಖಾತೆಗಳಿಗೆ: ಸ್ಪಷ್ಟೀಕರಣ ಕೇಳಿದ ಬೊಮ್ಮಾಯಿ

    ವಾಲ್ಮೀಕಿ ನಿಗಮದ 40 ಕೋಟಿ ರೂ. ಹಣ ಖಜಾನೆಯಿಂದ ನೇರವಾಗಿ ಬೇರೆ ಖಾತೆಗಳಿಗೆ: ಸ್ಪಷ್ಟೀಕರಣ ಕೇಳಿದ ಬೊಮ್ಮಾಯಿ

    ನವದೆಹಲಿ: ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಸುಮಾರು 40 ಕೋಟಿ ರೂ. ಹಣ ನೇರವಾಗಿ ರಾಜ್ಯ ಸರ್ಕಾರದ ಖಜಾನೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸ್ಪಷ್ಟೀಕರಣ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ.

    ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ಆಳ‌ ಮತ್ತು ಅಗಲ ನೋಡಿದರೆ ಹೊಸ ತಿರುವುಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಅಂತ್ಯಾನೇ ಇಲ್ಲ ಅಂತ ಅನಿಸುತ್ತದೆ. ಈಗಾಗಲೇ ಹಲವಾರು ಅಕೌಂಟ್‌ಗಳನ್ನು ತೆರೆದು ಹೈದರಾಬಾದ್‌ಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಅದು ಹಣಕಾಸು ಇಲಾಖೆಗೆ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಜೈಲೇ ಗತಿ – ಆ.3 ರವರೆಗೆ ನ್ಯಾಯಾಂಗ ಬಂಧನ

    ನಮಗೆ ಇತ್ತೀಚೆಗೆ ಒಂದು ಮಾಹಿತಿ ಬಂದಿದೆ. ಮಾ.31 ರಂದು ನೇರವಾಗಿಯೇ ರಾಜ್ಯ ಸರ್ಕಾರದ ಖಜಾನೆಯಿಂದ ಸುಮಾರು 40 ಕೋಟಿ ರೂ. ಅಧಿಕೃತ ಖಾತೆಗೆ ಹೋಗದೇ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇದೆ. ಇದು ಹೇಗೆ ಹೊರಗೆ ಬಂದಿದೆ ಎಂದರೆ, ಪೇಮೆಂಟ್ ಮಾಡಿರುವ ಚಲನ್ ಅನು ಕಂಪ್ಯೂಟರ್‌ನಿಂದ ತೆಗೆದು ಹಾಕುವ ಪಯತ್ನವಾಗಿದೆ. ಆ ಹಿನ್ನೆಲೆಯಲ್ಲಿ ಖಜಾನೆಯಲ್ಲಿ ಸ್ವಲ್ಪ ಗಲಿಬಿಲಿಯಾಗಿದೆ. ಹೀಗಾಗಿ ಈ ವಿಷಯ ಹೊರಗೆ ಬಂದಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ವಿಧಾನಸಭೆಯಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಪಾಲ್ಮೀಕಿ ನಿಗಮಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ? ಮಾ.31 ಕ್ಕೆ ಖಜಾನೆಯಿಂದ ಹಣ ಬಿಡುಗಡೆಯಾಗಿದೆಯಾ? ಬಿಡುಗಡೆಯಾಗಿದ್ದರೆ ಯಾವ ಖಾತೆಗೆ ಬಿಡುಗಡೆಯಾಗಿದೆ. ಚಲನ್ ನಾಶ ಮಾಡುವ ಪ್ರಯತ್ನ ನಡೆದಿದೆಯೋ ಇಲ್ಲವೋ ಎನ್ನುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಗೋವಿಂದ ಕಾರಜೋಳ ಹಾಜರಿದ್ದರು. ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ವಿಧಾನಸಭೆ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಗೆ ಮುಂದಾದ ಸರ್ಕಾರ: ಸಚಿವಾಲಯದ ಅಧಿಕಾರಿ ವರ್ಗ ವಿರೋಧ

  • ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಜೈಲೇ ಗತಿ – ಆ.3 ರವರೆಗೆ ನ್ಯಾಯಾಂಗ ಬಂಧನ

    ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಜೈಲೇ ಗತಿ – ಆ.3 ರವರೆಗೆ ನ್ಯಾಯಾಂಗ ಬಂಧನ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Case) ಬಹುಕೋಟಿ ಹಗರಣದಲ್ಲಿ ಕಾಂಗ್ರೆಸ್‌ನ (Congress) ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಜೈಲೇ ಗತಿಯಾಗಿದೆ. ಆ.3 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

    ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ನಾಗೇಂದ್ರ (Nagendra) ಅವರನ್ನು ಇಂದು ಕೋರ್ಟ್‌ಗೆ ಇ.ಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಇದನ್ನೂ ಓದಿ: ಪ್ರಜ್ವಲ್, ಸೂರಜ್ ರೇವಣ್ಣ ಅರ್ಜಿ ವಿಚಾರಣೆ ಇಂದು – ಸಹೋದರರಿಗೆ ಸಿಗುತ್ತಾ ಜಾಮೀನು?

    ಪ್ರಕರಣದಲ್ಲಿ ಈಗಾಗಲೇ 5 ದಿನಗಳಂತೆ ಎರಡು ಬಾರಿ ಈಗಾಗಲೇ ಇ.ಡಿ ಕಸ್ಟಡಿಗೆ ಪಡೆದಿತ್ತು. ಆದರೆ ಅಕ್ರಮದ ಬಗ್ಗೆ ಇ.ಡಿ ಅಧಿಕಾರಿಗಳ ಪ್ರಶ್ನೆಗೆ ನಾಗೇಂದ್ರ ಸರಿಯಾಗಿ ಉತ್ತರಿಸಿಲ್ಲ. ಹೀಗಾಗಿ ಮತ್ತೆ ಕಷ್ಟಡಿಗೆ ಕೇಳಲು ಇಡಿ ಸಿದ್ಧತೆ ನಡೆಸಿತ್ತು.

    ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಅವರ ಬಂಧನವಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಒತ್ತಡ ಸೃಷ್ಟಿಯಾದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಸೈನಿಕರಿಗೆ ಅಪಮಾನ ಮಾಡಿದ್ದಾರೆ: ಹೆಚ್‌ಡಿಕೆ

  • ವಾಲ್ಮೀಕಿ ನಿಗಮದ ಹಗರಣ ಬಿಟ್ಟು ಸಿಎಂ ಬೇರೆ ವಿಷಯ ಮಾತಾಡುತ್ತಾರೆ, ಹಗರಣ ಮುಚ್ಚಿಹಾಕುವ ಪ್ರಯತ್ನ: ಆರ್.ಅಶೋಕ್

    ವಾಲ್ಮೀಕಿ ನಿಗಮದ ಹಗರಣ ಬಿಟ್ಟು ಸಿಎಂ ಬೇರೆ ವಿಷಯ ಮಾತಾಡುತ್ತಾರೆ, ಹಗರಣ ಮುಚ್ಚಿಹಾಕುವ ಪ್ರಯತ್ನ: ಆರ್.ಅಶೋಕ್

    – ಮುಖ್ಯಮಂತ್ರಿಯೇನು ಕತ್ತೆ ಕಾಯುತ್ತಿದ್ದರಾ ಎಂದು ವಿಪಕ್ಷ ನಾಯಕ ಪ್ರಶ್ನೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Case) ಹಗರಣವನ್ನು ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅವರ 40 ವರ್ಷಗಳ ಶುದ್ಧ ಹಸ್ತದ ಮುಖವಾಡ ಕಳಚಿ ಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ (R.Ashok) ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಚ್ಚಿಹಾಕುವ ಸ್ಪಷ್ಟ ತೀರ್ಮಾನವನ್ನು ಕಾಂಗ್ರೆಸ್‌ ಮಾಡಿದೆ. ಅದಕ್ಕೆ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah). ಎಲ್ಲ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿದ್ದಾರೆ. ಎಲ್ಲ ಅಧಿಕಾರಿಗಳೇ ಮಾಡಿದ್ದರೆ, ಮುಖ್ಯಮಂತ್ರಿಯೇನು ಕತ್ತೆ ಕಾಯುತ್ತಿದ್ದರೇ? ಆ ಅಧಿಕಾರಿ ಹಿಂದೆಯೇ ತಪ್ಪು ಮಾಡಿದ್ದರೆ ಅದೇ ಹುದ್ದೆಯಲ್ಲಿ ಉಳಿಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶಿರೂರಿಗೆ ಹೆಚ್‍ಡಿಕೆ ಭೇಟಿ ವಿಚಾರ ಸುದ್ದಿಯಾಗದಂತೆ ಸರ್ಕಾರದಿಂದ ತಡೆ – ಜೆಡಿಎಸ್ ಆರೋಪ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದ್ದು, ಅವರೆಷ್ಟು ಶುದ್ಧ ಹಸ್ತರು ಎಂದು ಬಯಲಾಗಿದೆ. ರಾಜ್ಯದ ಜನರ ಹಣವನ್ನು ಕಳ್ಳ ಖಾತೆಯಲ್ಲಿ ಇಟ್ಟಿದ್ದು ರಾಜ್ಯ ಸರ್ಕಾರ. ಇದರಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪಾತ್ರವೇ ಇಲ್ಲ. ಬ್ಯಾಂಕ್‌ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಆದರೆ ಸರ್ಕಾರ ವಿಶೇಷ ತನಿಖಾ ದಳಕ್ಕೆ ನೀಡಿ ಮುಚ್ಚಿಹಾಕಿದ್ದಾರೆ ಎಂದರು.

    ಸಿಎಂ ಸಿದ್ದರಾಮಯ್ಯ ಪುಟಗಟ್ಟಲೆ ಜಾಹೀರಾತು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ, ಜಾತಿ ಬಗ್ಗೆ ಹೇಳಿದ್ದಾರೆ. ನಿರ್ದಿಷ್ಟ ಜಾತಿಯ ವಿರುದ್ಧ ಯಾವುದೇ ಆಪಾದನೆ ಮಾಡಬಾರದು ಎಂದು ಸಂವಿಧಾನದಲ್ಲೇ ತಿದ್ದುಪಡಿ ಮಾಡಲಿ. ಸಿಎಂ ಸಿದ್ದರಾಮಯ್ಯ ಬೆಚ್ಚಿ ಬಿದ್ದಿರುವುದರಿಂದ ಹೀಗೆ ಮಾತಾಡುತ್ತಿದ್ದಾರೆ. 40 ಕ್ಕೂ ಅಧಿಕ ದಾಖಲೆಗಳನ್ನು ನಾನು ಕೊಟ್ಟಿದ್ದು, ಈ ಬಗ್ಗೆ ಸಿಎಂ ಸ್ಪಷ್ಟೀಕರಣ ಕೊಡದೆ ಎಲ್ಲಕ್ಕೂ ಪದ್ಮನಾಭ ಕಾರಣ ಎಂದು ಹೇಳಿದ್ದಾರೆ ಎಂದರು.

    ಸಚಿವರ ತಪ್ಪಿಲ್ಲ ಎಂದ ಮೇಲೆ ಬಿ.ನಾಗೇಂದ್ರ ರಾಜೀನಾಮೆ ಯಾಕೆ ಕೊಟ್ಟರು? ಹಾಗಾದರೆ ಸಿಎಂ ಅವರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟಿದ್ದಾರೆ ಎಂದರ್ಥ. ಲೋಕಸಭೆ ಚುನಾವಣೆಗಾಗಿ ನಾಗೇಂದ್ರ ಹಾಗೂ ಬಸವನಗೌಡ ದದ್ದಲ್‌ ಶ್ರಮ ವಹಿಸಿ, ಕಾಂಗ್ರೆಸ್‌ ಪಕ್ಷಕ್ಕಾಗಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕಳುಹಿಸಿದ್ದಾರೆ ಎಂದರು.

    ತನಿಖೆ ಮಾಡಿ
    ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆ ಎಂದು ಆರೋಪ ಮಾಡಿ, ಅಧಿಕಾರಕ್ಕೆ ಬಂದು 15 ತಿಂಗಳಾದರೂ 40 ಪರ್ಸೆಂಟ್‌ ಆರೋಪದ ತನಿಖೆ ಇನ್ನೂ ಮುಗಿಸಿಲ್ಲ. ಹಿಂದಿನ ಸರ್ಕಾರ ಹಗರಣ ಮಾಡಿದ್ದರೆ, ಅದನ್ನು ತನಿಖೆ ಮಾಡಲು ಇಷ್ಟು ಸಮಯ ಬೇಕೆ ಎಂದು ಪ್ರಶ್ನೆ ಮಾಡಿದರು.

    ಬಿಜೆಪಿಗೆ ಯಾವ ಒತ್ತಡವೂ ಇಲ್ಲ. ಆದರೆ ರಾಜ್ಯದ ಜನರ ಒತ್ತಡ ಮಾತ್ರ ಇದೆ. ಜನರಿಗಾಗಿ ಹಾಗೂ ದಲಿತರಿಗಾಗಿ ಈ ಮಟ್ಟಕ್ಕೆ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ದಲಿತರ ಹಣ ವಾಪಸ್‌ ಸಿಗಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಪಕ್ಷದ ಉದ್ದೇಶ ಎಂದು ತಿಳಿಸಿದರು.

    ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದ 21 ಹಗರಣಗಳನ್ನು ನಾವೇ ತನಿಖೆ ಮಾಡುತ್ತೇವೆ. ಅವರು ಅಧಿಕಾರದಿಂದ‌ ಕೆಳಕ್ಕಿಳಿದು ನಮಗೆ ಅಧಿಕಾರ ನೀಡಲಿ ಎಂದು ಸವಾಲು ಹಾಕಿದರು.

    ತಾರತಮ್ಯ
    ಬ್ರ್ಯಾಂಡ್ ಬೆಂಗಳೂರು ಆಗಬೇಕೆಂದರೆ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಎಲ್ಲರ‌‌ ಬಳಿ ಚರ್ಚೆ ಮಾಡಿ ಅನುದಾನ ನೀಡಲಿ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿತ್ತು. ಅದೇ ರೀತಿ ಕಾಂಗ್ರೆಸ್ ಕೂಡ ನಡೆದುಕೊಳ್ಳಲಿ. ಈಗಾಗಲೇ‌ ನಗರದಲ್ಲಿ ಕಸದ ರಾಶಿ ಹೆಚ್ಚಿದ್ದು, ವಿಲೇವಾರಿ ಮಾಡಲು ಕೂಡಲೇ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.

  • ವಾಲ್ಮೀಕಿ ಹಗರಣ; ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡ ಹಣದ ವಿವರ ನೀಡಿದ ಸಿಎಂ

    ವಾಲ್ಮೀಕಿ ಹಗರಣ; ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡ ಹಣದ ವಿವರ ನೀಡಿದ ಸಿಎಂ

    – ಎಸ್‌ಐಟಿಯಿಂದ 85.25 ಕೋಟಿ ಜಪ್ತಿ; ಯಾವ ಆರೋಪಿಯಿಂದ ಎಷ್ಟು ಹಣ ವಶಕ್ಕೆ? ಇಲ್ಲಿದೆ ಮಾಹಿತಿ..

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Case) ಹಗರಣದ ಹಣವನ್ನು ಎಸ್‌ಐಟಿ ಮುಟ್ಟುಗೋಲು ಹಾಕಿಕೊಂಡಿರುವ ಅಂಕಿ-ಅಂಶವನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ.

    ಚಿನ್ನ ಇತರೆ ಬೆಲೆಬಾಳುವ ವಸ್ತು ಸೇರಿದಂತೆ ಎಸ್‌ಐಟಿ ಒಟ್ಟು 85,25,07,698 ರೂ. ಹಣ ಜಪ್ತಿ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ. ಅಂಕಿ-ಅಂಶದ ವಿವರ ಹೀಗಿದೆ. ಇದನ್ನೂ ಓದಿ: ಇದೇನು ವಿಧಾನಸಭೆಯಾ, ನಿಮ್ಹಾನ್ಸಾ? – ಹಾಡು ಹೇಳಿದ ಬಿಜೆಪಿ ಶಾಸಕರ ವಿರುದ್ಧ ಸ್ಪೀಕರ್ ಗರಂ

    ಪ್ರಕರಣದ ಆರೋಪಿಗಳಾದ ಸತ್ಯನಾರಾಯಣ ವರ್ಮಾ, ಜೆ.ಜಿ.ಪದ್ಮನಾಭ, ನಾಗೇಶ್ವರ ರಾವ್‌, ಚಂದ್ರಮೋಹನ್‌, ಜಿ.ಕೆ.ಜಗದೀಶ್‌ ಅವರಿಂದ ಒಟ್ಟು 14,33,35,000 ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಚಂದ್ರಮೋಹನ್‌ ಮತ್ತು ಜಿ.ಕೆ.ಜಗದೀಶ್‌ ಅವರಿಂದ ಕ್ರಮವಾಗಿ 207 ಮತ್ತು 47.6 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

    ವಿವಿಧ 217 ಬ್ಯಾಂಕ್‌ ಅಕೌಂಟ್‌ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ. ಮೊತ್ತವನ್ನು ಫ್ರೀಜ್‌ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಸ್‌ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಚಿನ್ನ ಇದ್ದ ಬ್ಯಾಗನ್ನು ಪಕ್ಕದ ಮನೆಗೆ ಎಸೆದ ಅಧಿಕಾರಿ

    ಸತ್ಯನಾರಾಯಣ ವರ್ಮಾ, ಲ್ಯಾಂಬೋರ್ಗಿನಿ ಉರುಸ್‌ ಎಂಬ ಕಾರನ್ನು ಬಿಗ್‌ಬಾಯ್ಸ್‌ ಟಾಯ್ಸ್‌ ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಎಸ್‌ಐಟಿ ಆ ಕಾರನ್ನು ವಶಕ್ಕೆ ಪಡೆದಿದೆ. ಸದರಿ ಕಂಪನಿಯು ಕಾರನ್ನು ವಾಪಸ್‌ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

    ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್‌ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್‌ಐಟಿ ತನ್ನ ವಶಕ್ಕೆ ಪಡೆದಿದೆ. ಈ ಕಾರನ್ನೂ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್‌ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.

    ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಿಂದ ಎಸ್‌.ಟಿ ನಿಗಮದ ಖಾತೆಗೆ 5 ಕೋಟಿ ಮರಳಿಸಿರುತ್ತದೆ. ಇದನ್ನೂ ಓದಿ: ವಿಧಾನಸಭೆ ಲಾಂಜ್‌ನಲ್ಲಿ ಶಾಸಕರ ವಿಶ್ರಾಂತಿಗೆ recliner chair ವ್ಯವಸ್ಥೆ: ಸ್ಪೀಕರ್ ಹೊಸ ಐಡಿಯಾ

    ಯೂನಿಯನ್‌ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ 46 ಕೋಟಿಗೂ ಹೆಚ್ಚು ಹಣ ರತ್ನಾಕರ್‌ ಬ್ಯಾಂಕ್‌ನಲ್ಲಿದೆ. ಈ ಹಣವನ್ನೂ ನಮ್ಮ ಎಸ್‌ಐಟಿ ತಂಡವು ಫ್ರೀಜ್‌ ಮಾಡಿದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

  • ಬಿಜೆಪಿ ಸೇರಿದರೆ ಸಾಥ್ ಖೂನ್ ಮಾಫ್: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಬಿಜೆಪಿ ಸೇರಿದರೆ ಸಾಥ್ ಖೂನ್ ಮಾಫ್: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    – ವಾಲ್ಮೀಕಿ ನಿಗಮ ಪ್ರಕರಣ ಇ.ಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ಎಂದು ಸಚಿವ ಆರೋಪ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Case) ಪ್ರಕರಣದ ಇ.ಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಹೆಸರು ಹೇಳಿ ಎಂದು ಒತ್ತಡ ಹಾಕಲಾಗುತ್ತಿದೆ. ಹಣ ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಅಂತಾ ಹೇಳಲು ಒತ್ತಡ ಹಾಕಲಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ

    ಬೋವಿ ನಿಗಮದಲ್ಲಿ 120 ಕೋಟಿ ಹಗರಣ ಆಗಿದೆ. ಅದರ ಬಗ್ಗೆ ಇ.ಡಿ ಯಾಕೆ ಕಾಳಜಿ ವಹಿಸಿಲ್ಲ? ದೇವರಾಜ ಅರಸು ಟ್ರಕ್ ಟರ್ಮಿನಲ್ ಪ್ರಕರಣದಲ್ಲಿ ಇ.ಡಿ ಯಾಕೆ ಗಮನ ಹರಿಸಿಲ್ಲ. ಕೆಐಎಡಿಬಿ ದುಡ್ಡು ಸೇಲಂಗೆ ಹೋಗಿದೆ. ಇದರ ಬಗ್ಗೆ ಯಾಕೆ ಇ.ಡಿ ಆಸಕ್ತಿ ವಹಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಯವರ ಸ್ಟ್ಯಾಂಡರ್ಡ್‌ ಆಪರೇಟಿಂಗ್ ಪ್ರೊಸಿಜರ್ ಇದು. ಕಳೆದ 10 ವರ್ಷಗಳಲ್ಲಿ ಎಷ್ಟು ಸರ್ಕಾರಗಳನ್ನು ಬಿಜೆಪಿಯವರು ಬೀಳಿಸಿದ್ದಾರೆ ನೋಡಿ. 2016ರಲ್ಲಿ ಉತ್ತರಾಖಂಡ, 2019ರಲ್ಲಿ ಕರ್ನಾಟಕ, ಗುಜರಾತ್‌ನಲ್ಲಿ ನಮ್ಮ ಎಂಎಲ್‌ಎಗಳ ಖರೀದಿ ಮಾಡಿದ್ರು. ಸಿಕ್ಕಿಂನಲ್ಲಿ ಎಂಎಲ್‌ಎಗಳ ಖರೀದಿ. 2014 ರಿಂದ 440 ಎಂಎಲ್‌ಎಗಳನ್ನು ಖರೀದಿ ಮಾಡಲಾಗಿದೆ. ಮೆಜಾರಿಟಿ ಇದ್ರೂ ಕೂಡ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ಸರ್ಕಾರಗಳನ್ನು ಕೆಡವಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉದ್ಯೋಗ ಕಲ್ಪಿಸುವ ವಿಧೇಯಕ ತಡೆಹಿಡಿದು ಕನ್ನಡಿಗ, ಕರ್ನಾಟಕಕ್ಕೆ ಅಪಮಾನ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

    ಮಣಿಪುರ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹೀಗೆ 60 ಬಾರಿ ಶಾಸಕರ ಖರೀದಿ ನಡೆದಿದೆ. ಯಾರು ಹೋಗೋದಿಲ್ಲ, ಅವರ ಮೇಲೆ ಹೆಚ್ಚು ಒತ್ತಡ ತರುವುದು. ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಐಟಿ, ಇ.ಡಿ ಕೇಸ್ ಇದೆ. 2019 ರಿಂದ ಇದುವರೆಗೆ ಯಡಿಯೂರಪ್ಪ ಮೇಲೆ ಯಾವುದೇ ವಿಚಾರಣೆ ಯಾಕೆ ನಡೆಯುತ್ತಿಲ್ಲ. ರೆಡ್ಡಿ ಬ್ರದರ್ಸ್ ಮೇಲೆ ಐಟಿ ಕೇಸ್ ಇತ್ತು. ಆದರೆ ಈಗ ಅವರು ಪಕ್ಷ ಸೇರಿದ ಮೇಲೆ ಯಾವುದೂ ಇಲ್ಲ. ಬಿಜೆಪಿ ಸೇರಿದರೆ ಸಾಥ್ ಖೂನ್ ಮಾಫ್ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    14 ವಿರೋಧ ಪಕ್ಷದವರು ಸುಪ್ರೀಂ ಕೋರ್ಟ್‌ನಲ್ಲಿ ಪಿಟಿಷನ್ ಹಾಕಿದ್ದಾರೆ. ಇದಕ್ಕೆ ಉತ್ತರ ಕೇಂದ್ರ ನೀಡಿಲ್ಲ. 3000 ರೇಡ್‌ಗಳನ್ನು ಐಟಿ ಇಡಿ ಮಾಡಿದೆ. ಅದರಲ್ಲಿ ಕೇವಲ 25% ಪ್ರಾಸಿಕ್ಯುಷನ್‌ಗೆ ಹೋಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಜೈಲೂಟದಿಂದ ಇಂದು ಮುಕ್ತಿ ಸಿಗುತ್ತಾ? – ಹೈಕೋರ್ಟ್‌ನಲ್ಲಿ ಭವಿಷ್ಯ

  • ವಾಲ್ಮೀಕಿ ನಿಗಮ ಅಕ್ರಮ; ಯಾರೆಷ್ಟೇ ದೊಡ್ಡವರಾದರೂ ಸಿಬಿಐ, ಇಡಿ ತನಿಖೆ ನಡೆದೇ ನಡೆಯಲಿದೆ: ಬಿ.ವೈ.ವಿಜಯೇಂದ್ರ

    ವಾಲ್ಮೀಕಿ ನಿಗಮ ಅಕ್ರಮ; ಯಾರೆಷ್ಟೇ ದೊಡ್ಡವರಾದರೂ ಸಿಬಿಐ, ಇಡಿ ತನಿಖೆ ನಡೆದೇ ನಡೆಯಲಿದೆ: ಬಿ.ವೈ.ವಿಜಯೇಂದ್ರ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Case) ಹಗರಣದಲ್ಲಿ ಶಾಸಕರು, ಮಾಜಿ ಮಂತ್ರಿಗಳು ಮಾತ್ರವಲ್ಲದೇ ಕೆಲವು ಸಚಿವರು ಭಾಗಿಯಾಗಿದ್ದಾರೆ. ಇವೆಲ್ಲವೂ ಬಹಿರಂಗವಾಗಿದ್ದು, ರಾಜ್ಯದ ಜನತೆ ಮುಂದೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದರು.

    ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಗರಣದಲ್ಲಿ ಯಾರು ಕೂಡ ತನಿಖೆಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಯಾರೆಷ್ಟೇ ದೊಡ್ಡವರಾದರೂ ಸಿಬಿಐ ಮತ್ತು ಇಡಿ ಮುಂದಕ್ಕೆ ಹೋಗಬೇಕಾಗುತ್ತದೆ. ಅವರದೇ ಆದ ರೀತಿಯಲ್ಲಿ ತನಿಖೆ ನಡೆಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಿನ 50-60 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಎಂ.ಬಿ ಪಾಟೀಲ್ ಘೋಷಣೆ

    ಒಂದೆಡೆ ಸಿಬಿಐ ತನಿಖೆ ನಡೆದಿದೆ. ಇನ್ನೊಂದೆಡೆ ಪ್ರತ್ಯೇಕವಾಗಿ ರಾಜ್ಯದಿಂದ ಎಸ್‍ಐಟಿ ತನಿಖೆ ನಡೆಸುತ್ತಿದೆ. ನಾಗೇಂದ್ರ ಅವರು ಈಗಾಗಲೇ ಇಡಿ ಕಸ್ಟಡಿಯಲ್ಲಿದ್ದಾರೆ. ವಾಲ್ಮೀಕಿ ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ಅವರು ನಿನ್ನೆ ಸದನಕ್ಕೆ ಹಾಜರಾಗಿದ್ದರು. ಯಾರು ಎಲ್ಲಿದ್ದಾರೆಂಬುದು ಮುಖ್ಯವಲ್ಲ. ಅದಕ್ಕಿಂತ ಹೆಚ್ಚಾಗಿ ನಾಗೇಂದ್ರರ ಜೊತೆಗೆ ದದ್ದಲ್ ಅವರ ಪಾತ್ರವೂ ಇದೆ ಎಂಬುದು ಬಹಿರಂಗವಾಗಿದೆ ಎಂದು ವಿಜಯೇಂದ್ರ ವಿವರಿಸಿದರು.

    ಕಾವೇರಿ ನೀರು- ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದಿರಿ:
    ಕಾವೇರಿ ನದಿ ನೀರಿನ ಸಂಬಂಧ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಕರೆದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡಿನಲ್ಲಿ ಏನು ಮಾಡುತ್ತಾರೆ ಎಂಬುದು ಮುಖ್ಯವಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಕರೆದ ಸಭೆಯಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿದ್ದೇವೆ. ಯಾವುದೇ ಕಾರಣಕ್ಕೂ ರಾಜ್ಯದ, ಅದರಲ್ಲೂ ವಿಶೇಷವಾಗಿ ಮೈಸೂರು ಭಾಗದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ – 7ನೇ ವೇತನ ಆಯೋಗದ ಶಿಫಾರಸು ಜಾರಿ: ಸಿಎಂ ಘೋಷಣೆ

    ಪ್ರತಿ ವರ್ಷವೂ ಕ್ಯಾತೆ ತೆಗೆಯುವ ತಮಿಳುನಾಡು:
    ತಮಿಳುನಾಡು ಸರ್ಕಾರ ಪ್ರತಿ ಸಂದರ್ಭದಲ್ಲೂ, ಪ್ರತಿ ವರ್ಷವೂ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಟ್ರಿಬ್ಯೂನಲ್‍ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ವಾದ ಮಂಡಿಸಬೇಕು. ಇದಕ್ಕಾಗಿ ಸೂಕ್ತ ನ್ಯಾಯವಾದಿಗಳನ್ನು ನೇಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಆ ನಿಟ್ಟಿನಲ್ಲಿ ಅವರು ಸಮರ್ಪಕ ನಿರ್ಧಾರ ಕೈಗೊಳ್ಳುವ ವಿಶ್ವಾಸ ನಮಗೂ ಇದೆ ಎಂದರು.

  • ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಗದ್ದಲ – ಸಿಎಂ, ಸಚಿವರ ವಿರುದ್ಧ ಬಿಜೆಪಿ ನಾಯಕರ ಕಿಡಿ

    ಸದನದಲ್ಲಿ ವಾಲ್ಮೀಕಿ ನಿಗಮ ಹಗರಣ ಗದ್ದಲ – ಸಿಎಂ, ಸಚಿವರ ವಿರುದ್ಧ ಬಿಜೆಪಿ ನಾಯಕರ ಕಿಡಿ

    – ನೀವು ಲೂಟಿಕೋರರು: ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ
    – ಸಿಎಂ ರಾಜೀನಾಮೆಗೆ ಆರ್.ಅಶೋಕ್ ಆಗ್ರಹ

    ಬೆಂಗಳೂರು: ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ ಸರ್ಕಾರ ಹಾಗೂ ವಿಪಕ್ಷ ನಾಯಕರ ಗದ್ದಲಕ್ಕೆ ಕಾರಣವಾಯಿತು. ಸದನದಲ್ಲಿ ಜಟಾಪಟಿಯೂ ತಾರಕಕ್ಕೆ ಏರಿತ್ತು.

    ಬಿಜೆಪಿ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ಸದನದಲ್ಲಿ ಕಾಂಗ್ರೆಸ್‌ನವರು ಯಾರೂ ಇಲ್ಲ, ಸಿಎಂ ಇಲ್ಲ, ಸಚಿವರು ಇಲ್ಲ ಎಂದು ಅಸಮಾಧಾನ ಹೊರಹಾಕಿದರು. ಖುದ್ದು ಸಿಎಂ ಮೇಲೆ ಆರೋಪವಿದೆ. ಆದರೆ ಇದರ ಚರ್ಚೆ ವೇಳೆ ಸಿಎಂ ಇಲ್ಲ. ಇದೇನಾ ಅವರ ಜವಾಬ್ದಾರಿ? ಸದನ ನಡೀತಿದೆ, ಸದನಕ್ಕೆ ಬರಲು ಸಿಎಂಗೆ ಪುರುಸೊತ್ತಿಲ್ವಾ? ಕರೆಸಿ ಸಿಎಂನಾ ಎಂದು ಕಿಡಿಕಾರಿದರು.

    ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೌದು.. ನೀವು ಲೂಟಿ ಮಾಡಿದ್ದಕ್ಕೆ ಜನ ನಮ್ಮನ್ನ ಇಲ್ಲಿ ಕೂರಿಸಿರೋದು. ನೀವು ಮಾಡಬಾರದ ಲೂಟಿ ಮಾಡಿದ್ದಕ್ಕೆ ನಿಮ್ಮನ್ನ ಜನ ಅಲ್ಲಿ ಕೂರಿಸಿರೋದು. ನೀನು ಲೂಟಿ ಮಾಡುವವರ ಪಿತಾಮಹ ಅಂತಾ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಡಿಸಿಎಂ ನನ್ನ ಹೆಸರು ಹೇಳಿ ಆರೋಪ ಮಾಡಿದ್ದಾರೆ. ಹಿಟ್ ಅಂಡ್ ರನ್ ಹೇಳಿಕೆ ಕೊಟ್ಟಿದ್ದಾರೆ. ನಾನು ಮಾಡಬಾರದ್ದು ಏನು ಮಾಡಿದ್ದೀನಿ ಅಂತಾ ಡಿಕೆಶಿವಕುಮಾರ್ ಹೇಳಬೇಕು. ನಾವು ನಿಮ್ಮ ಹಾಗೆ ಓಡಿ ಹೋಗಲ್ಲ. ಇಲ್ಲೇ ಇರ್ತೇವೆ. ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿ ಶಾಸಕರು ಪಟ್ಟು ಹಿಡಿದರು. ಆಡಳಿತ ಹಾಗೂ ವಿಪಕ್ಷ ನಾಯಕರ ಗದ್ದಲ ಏರ್ಪಟ್ಟಿತು.

    ನಿಗಮದ ಅಕ್ರಮ ಪ್ರಕರಣ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಸಿಎಂ ಅವರು 187 ಕೋಟಿ ಅಕ್ರಮ ವರ್ಗಾವಣೆ ಆಗಿಲ್ಲ. ವರ್ಗಾವಣೆ ಆಗಿರೋದು 89.62 ಕೋಟಿ ಅಂದ್ರು. ಅಲ್ಲಿಗೆ ಅಕ್ರಮ ವರ್ಗಾವಣೆ ಆಗಿರೋದನ್ನ ಸಿಎಂ ಒಪ್ಪಿಕೊಂಡ ಹಾಗಾಯ್ತಲ್ಲ. ಎಂಜಿ ರಸ್ತೆಯಲ್ಲಿ ಕಳ್ಳತನಕ್ಕೆ ಅಂತಾನೇ ಖಾತೆ ತೆರೆದು 187 ಕೋಟಿ ಕದ್ದು ವರ್ಗಾವಣೆ ಮಾಡಿದ್ದಾರೆ. ಕಳವು ಮಾಡಲು 187 ಕೋಟಿ ವರ್ಗಾವಣೆ ಮಾಡಿದ್ರೆ ಹಗರಣ ಸಹ 187 ಕೋಟಿ ಅಷ್ಟೇ ಆಗಿದೆ ಅಂತರ್ಥ. ಸಿಎಂ 89.62 ಕೋಟಿ ಅಂತಾ ಹೇಗೆ ಹೇಳ್ತಾರೆ? ಇದು ಪಕ್ಕಾ 187 ಕೋಟಿ ಅಕ್ರಮನೇ. ಕದ್ದು ಇನ್ನೊಂದು ಕಡೆ ಇಟ್ಟಿದ್ದಾರೆ ಅಂದ್ರೆ ಅದು ನಿಗಮದ ಹಣ ತಾನೇ? ಈ ಕಳ್ಳತನ ಸಿಎಂಗೆ ಗೊತ್ತಿದ್ರೂ ಅವರದ್ದೇ ತಪ್ಪು ಗೊತ್ತಿಲ್ಲ ಅಂದ್ರೂ ಅವರದ್ದೇ ತಪ್ಪು. ಯಾಕಂದ್ರೆ ಸಿಎಂ ಅವರೇ ಯಜಮಾನರು ಎಂದು ಆರೋಪಿಸಿದರು.

    ವಾಲ್ಮೀಕಿ ಪ್ರಕರಣದಲ್ಲಿ ಎಸ್‌ಐಟಿ ವಿಫಲ ಆಗಿದೆ. ನಾಗೇಂದ್ರ ಎಸ್‌ಐಟಿ ವಿಚಾರಣೆ ಎದುರಿಸಿ ನಗ್ತಾ ಹೋಗ್ತಾರೆ, ನಗ್ತಾ ಬರ್ತಾರೆ. ಅದೇ ರೇವಣ್ಣ ಎಸ್‌ಐಟಿ ವಿಚಾರಣೆಗೆ ಮುನ್ನ ಬೇಲ್ ಬೇಲ್ ಅಂತಾ ಓಡ್ತಾರೆ. ಇದು ಎಸ್‌ಐಟಿ ವೈಫಲ್ಯ. ವಾಲ್ಮೀಕಿ ಪ್ರಕರಣ ಮುಚ್ಚಿ ಹಾಕಲು ಎಸ್‌ಐಟಿ ರಚನೆ ಆಗಿದೆಯಾ? ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಎಸ್‌ಐಟಿ ಏನ್ ಮಾಡ್ತಿದೆ. ನಾಗೇಂದ್ರಗೆ ಒಂದು ಕಾನೂನು ಬೇರೆಯವರಿಗೆ ಒಂದು ಕಾನೂನಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

    ಅಶೋಕ್ ಮಾತಿಗೆ ಶಾಸಕ ರಿಜ್ವಾನ್ ಅರ್ಷದ್ ಆಕ್ಷೇಪ ವ್ಯಕ್ತಪಡಿಸಿದರು. ಈ ಪ್ರಕರಣ, ಆ ಪ್ರಕರಣ ಒಂದೇನಾ? ಅಲ್ಲಿ ನೂರಾರು ಮಹಿಳೆಯರ ಮಾನ ಹೋಗಿದೆ. ಮಹಿಳೆಯರ ಮಾನದ ಬಗ್ಗೆ ಚಿಂತೆ ಇಲ್ವಾ? ಪದೇ ಪದೇ ಎರಡರ ತುಲನೆ ಮಾಡಿ ಮಾತಾಡ್ತಿದ್ದಾರೆ ಅಶೋಕ್. ರೇವಣ್ಣ ಪ್ರಕರಣ ಗಂಭೀರ ಅಲ್ವಾ ಎಂದು ಪ್ರಶ್ನಿಸಿದರು.

    ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ. ವಾಲ್ಮೀಕಿ ಜನಾಂಗದ ಶಾಪ ಸರ್ಕಾರಕ್ಕೆ ತಟ್ಟಬಾರದು ಅಂದ್ರೆ ಕೂಡಲೇ 187 ಕೋಟಿ ವಾಪಸ್ ಪಡೆಯಿರಿ. ಪ್ರಕರಣದ ಸಿಬಿಐ ತನಿಖೆ ಆಗಬೇಕು. ಇದು ಸಿಎಂ ಹಣಕಾಸು ಇಲಾಖೆಗೆ ಬರುತ್ತೆ, ಸಿಎಂ ನೈತಿಕ ಹೊಣೆ ಹೊರಬೇಕು. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಅಶೋಕ್ ಆಗ್ರಹಿಸಿದರು. ಮೇಜು ಕುಟ್ಟಿ ಬಿಜೆಪಿ ಸದಸ್ಯರು ಸ್ವಾಗತಿಸಿದರು.

    ಸಿಎಂ ರಾಜೀನಾಮೆಗೆ ಅಶೋಕ್ ಒತ್ತಾಯಿಸಿದ್ದಕ್ಕೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಮತ್ತೆ ಗದ್ದಲ ಶುರುವಾಯಿತು. ಅಶೋಕ್ ಚರ್ಚೆ ಮುಗಿದ ಬೆನ್ನಲ್ಲೇ ವಾಕ್ಸಮರ ತಾರಕಕ್ಕೇರಿತು.

  • ಬಸನಗೌಡ ದದ್ದಲ್‌ಗೆ ಇ.ಡಿ ಬಂಧನ‌ ಭೀತಿ – ರಾಯಚೂರಿನಿಂದ ಅವಸರದಲ್ಲಿ ಹೊರಟಿದ್ದೆಲ್ಲಿಗೆ?

    ಬಸನಗೌಡ ದದ್ದಲ್‌ಗೆ ಇ.ಡಿ ಬಂಧನ‌ ಭೀತಿ – ರಾಯಚೂರಿನಿಂದ ಅವಸರದಲ್ಲಿ ಹೊರಟಿದ್ದೆಲ್ಲಿಗೆ?

    ರಾಯಚೂರು: ಮಹರ್ಷಿ ವಾಲ್ಮೀಕಿ ನಿಗಮದ (Valmiki Case) 187 ಕೋಟಿ ರೂಪಾಯಿ ಹಗರಣದ ಪ್ರಕರಣ ಹಿನ್ನೆಲೆ ಇ.ಡಿ‌ ಬಂಧನ ಭೀತಿಯಲ್ಲಿರುವ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ರಾತ್ರೋರಾತ್ರಿ ರಾಯಚೂರಿಗೆ (Raichuru) ಆಗಮಿಸಿ ಬೆಳಗ್ಗೆಯೇ ನಗರದಿಂದ ಕಾಲ್ಕಿತ್ತಿದ್ದಾರೆ.

    ಬೆಳಗ್ಗೆ ಯಾರನ್ನೂ ಭೇಟಿಯಾಗದೆ ಮನೆಯಿಂದ ಅವಸರಲ್ಲಿ ಕಾರು ಹತ್ತಿ ಪ್ರಯಾಣ ಮಾಡಿದ್ದಾರೆ. ಮಾಧ್ಯಮದವರಿಂದ ತಪ್ಪಿಸಿಕೊಂಡು ವೇಗವಾಗಿ ಕಾರಿನಲ್ಲಿ ಹೊರಟು ಹೋಗಿದ್ದಾರೆ. ‌ಮಂತ್ರಾಲಯ ರಸ್ತೆ ಮಾರ್ಗವಾಗಿ ಬೆಂಗಳೂರು ಕಡೆಗೆ ತಮ್ಮ‌ ಆಪ್ತರ ಜೊತೆ ಹೊರಟಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ ಕೇಸ್‌: 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ಹೇಗೆ? ಇಂಚಿಂಚು ಮಾಹಿತಿ ಬಿಚ್ಚಿಟ್ಟ ED!

    ಮಾರ್ಗಮಧ್ಯೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೆಸುಗೂರಿನಲ್ಲಿ ಕೆಲ ಕಾರ್ಯಕರ್ತರನ್ನ ಭೇಟಿಯಾಗಿ ಮುಂದೆ ತೆರಳಿದ್ದಾರೆ. ತಮ್ಮ ಕಾರನ್ನ ಬಿಟ್ಟು ಕಾರ್ಯಕರ್ತನ ಕ್ರೇಟಾ ಕಾರ್‌ನಲ್ಲಿ ಬಸನಗೌಡ ದದ್ದಲ್‌ (Basanagouda Daddal) ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

    ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ದದ್ದಲ್‌ಗೆ ಈಗಾಗಲೇ ಜಾರಿ ನಿರ್ದೇಶನಾಲಯ (Enforcement Directorate) ನೋಟಿಸ್‌ ನೀಡಿದೆ. ಇ.ಡಿ ಬಂಧನ ಭೀತಿಯಲ್ಲಿರುವ ಶಾಸಕರಿದ್ದಾರೆ. ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರರನ್ನು ಬಂಧಿಸಿರುವ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಬಾರದು: ಪರಮೇಶ್ವರ್

  • ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ

    ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ (Valmiki Case) ನಿಗಮದಲ್ಲಿನ ಕೋಟ್ಯಂತರ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ನಾಗೇಂದ್ರ (Nagendra) ಅವರನ್ನು ಹೆಚ್ಚಿನ ವಿಚಾರಣೆಗೆ 6 ದಿನಗಳ ಕಾಲ ಇ.ಡಿ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

    ಹೆಚ್ಚಿನ ವಿಚಾರಣೆ, ಮಹಜರು ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಾಗೇಂದ್ರ ಅವರನ್ನು ಯಲಹಂಕದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಜು.18 ರ ವರೆಗೆ ಇ.ಡಿ ಕಸ್ಟಡಿಗೆ ನೀಡಿ ನ್ಯಾಯಾದೀಶರು ಆದೇಶಿಸಿದ್ದಾರೆ. ಬಳಿಕ ನ್ಯಾಯಾಧೀಶರ ಮನೆಯಿಂದ ಶಾಂತಿನಗರದಿಂದ ಇ.ಡಿ ಕಚೇರಿಗೆ ಆರೋಪಿಯನ್ನು ಇ.ಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ: ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗಕ್ಕೆ ಸಜ್ಜು!

    ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಕಾಂಗ್ರೆಸ್‌ ಶಾಸಕ ನಾಗೇಂದ್ರರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶುಕ್ರವಾರ ಬಂಧಿಸಿದರು. ಬಳಿಕ ರಾತ್ರಿ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಇ.ಡಿ ಅಧಿಕಾರಿಗಳು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಿದರು. ಆದರೆ 6 ದಿನ ಕಸ್ಟಡಿಗೆ ನ್ಯಾಯಾಧೀಶರು ನೀಡಿದ್ದಾರೆ. ಜು.18 ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಬಿಡಿಎ ಅಕ್ರಮ ಕೇಸ್ ಮುಚ್ಚಿಹಾಕಲು ಲಂಚ ಪಡೆದ ಆರೋಪ – ಸಿಸಿಬಿ ಅಧಿಕಾರಿ ಯತೀಶ್ ಅಮಾನತು

    ನ್ಯಾಯಾಧೀಶರ ಮುಂದೆ ನಾಗೇಂದ್ರ ಅವರು ಅನಾರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದರು. ಬಿಪಿ, ಜೊತೆಗೆ ಸುಸ್ತು ಇದೆ ಎಂದರು. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿದಿನ ಮೂರು ಗಂಟೆ ವಿಚಾಣೆಗೆ ಅವಕಾಶ ನೀಡಲಾಗಿದೆ. ವಿಚಾರಣೆ ಬಳಿಕ 30 ನಿಮಷಗಳ ಕಾಲ ವಿಶ್ರಾಂತಿ ನೀಡಬೇಕು. ಪ್ರತಿದಿನ ವೈದ್ಯಕೀಯ ತಪಾಸಣೆ ಮಾಡುವಂತೆ ನ್ಯಾಯಾಧೀಶರು ತಿಳಿಸಿದ್ದಾರೆ.