Tag: Valentines Day

  • ಪ್ರೇಮಿಗಳ ದಿನದಂದು ತೃತೀಯ ಲಿಂಗಿಯನ್ನು ಮದುವೆಯಾದ ಪ್ರೇಮಿ

    ಪ್ರೇಮಿಗಳ ದಿನದಂದು ತೃತೀಯ ಲಿಂಗಿಯನ್ನು ಮದುವೆಯಾದ ಪ್ರೇಮಿ

    ಇಂದೋರ್: ಮಧ್ಯಪ್ರದೇಶ ಪ್ರೇಮಿಯೊಬ್ಬ ತೃತೀಯ ಲಿಂಗಿಯನ್ನು ಪ್ರೀತಿಸಿ ಪ್ರೇಮಿಗಳ ದಿನದಂದು ಮದುವೆಯಾಗಿದ್ದಾನೆ.

    ಇಂದೋರ್ ನ ಜುನೇದ್ ಖಾನ್ ತೃತೀಯ ಲಿಂಗಿ ಜಯ ಸಿಂಗ್ ಪರಮಾರ್ ರನ್ನು ಮದುವೆಯಾಗಿದ್ದಾನೆ. ಈ ಮದುವೆಗೆ ಜುನೇದ್ ಖಾನ್ ಅವರ ಪೋಷಕರು ವಿರೋಧಿಸಿದ್ದರು. ವಿರೋಧದ ನಡುವೆಯೂ ಈ ಜೋಡಿ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಫೆಬ್ರವರಿ 14ರಂದು ಜುನೇದ್ ಹಾಗೂ ಜಯಾ ಸಿಂಗ್ ದೇವಸ್ಥಾನವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ಬಳಿಕ ಮುಸ್ಲಿಂ ಸಂಪ್ರದಾಯದಂತೆ ನಿಕಾ ಮಾಡಿಕೊಳ್ಳಲು ಈ ಜೋಡಿ ನಿರ್ಧರಿಸಿತ್ತು.

    2 ವರ್ಷಗಳ ಹಿಂದೆ ಜುನೇದ್‍ಗೆ ಜಯಾ ಸಿಂಗ್ ಮೇಲೆ ಪ್ರೀತಿ ಆಗಿದೆ. ಅಲ್ಲದೇ 15 ದಿನದ ಹಿಂದೆ ಆತ ಜಯಾ ಸಿಂಗ್‍ಗೆ ಪ್ರಪೋಸ್ ಮಾಡಿದ್ದಾನೆ. ಬಳಿಕ ಇಬ್ಬರು ಫೆ. 14ರಂದು ಮದುವೆ ಆಗಲು ನಿರ್ಧರಿಸಿದ್ದರು. ಈ ಜೋಡಿ ಈಗ ಮದುವೆ ಆಗಿದ್ದು, ಜುನೇದ್ ಕುಟುಂಬದವರು ತಮ್ಮ ಮದುವೆಯನ್ನು ಒಪ್ಪಿಕೊಳ್ಳಲಿ ಎಂದು ಇಬ್ಬರು ಇಚ್ಛಿಸುತ್ತಿದ್ದಾರೆ.

    ನನ್ನ ಕುಟುಂಬದವರು ನಮ್ಮಿಬ್ಬರ ಮದುವೆಯನ್ನು ಒಪ್ಪಿಕೊಳ್ಳಬೇಕು. ಅವರು ಒಪ್ಪದಿದ್ದರೆ ನಾನು ಜಯಾ ಸಿಂಗ್ ಜೊತೆಯಲ್ಲಿಯೇ ಇರುತ್ತೇನೆ. ನಾನು ಆಕೆಯನ್ನು ತುಂಬಾ ಇಷ್ಟಪಟ್ಟಿದ್ದೇನೆ ಹಾಗೂ ಆಕೆಯನ್ನು ಯಾವಾಗಲೂ ಖುಷಿಯಾಗಿರುಸುತ್ತೇನೆ ಎಂದು ಮಾಧ್ಯಮಕ್ಕೆ ಹೇಳಿದ್ದಾನೆ.

    ಜುನೇದ್ ಪೋಷಕರು ಈ ಮದುವೆಯನ್ನು ವಿರೋಧಿಸಿದರೂ ಕೂಡ ಅವರು ಅದನ್ನು ಯೋಚಿಸದೇ ನನ್ನನ್ನು ಮದುವೆ ಆಗಿದ್ದಾರೆ. ಜುನೇದ್ ಅವರ ಕುಟುಂಬ ಶೀಘ್ರದಲ್ಲೇ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಜಯಾ ಸಿಂಗ್ ಹೇಳಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

    ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

    ಹೈದರಾಬಾದ್: ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನದ ಪಾರ್ಕ್ ನಲ್ಲಿದ್ದ ಯುವಕ-ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಹೈದರಾಬಾದ್ ನಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ಅಂಗಡಿ, ಪಬ್ ಮತ್ತು ಕಚೇರಿಗಳನ್ನು ಮುಂಚಿತವಾಗಿ ಮುಚ್ಚಿಸಿ ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ವೇಳೆ ಹೈದರಾಬಾದಿನ ಕೊಂಡಲಕೋಯ ಆಕ್ಸಿಜನ್ ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ನೋಡಿದ್ದಾರೆ.

    ಕಾರ್ಯಕರ್ತರು ಅವರು ಬಳಿ ಹೋಗಿ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಮದುವೆಯಾಗಿ ಎಂದು ಬಲವಂತದಿಂದ ಯುವಕನಿಂದ ಯುವತಿಗೆ ಅರಿಶಿಣದ ದಾರ ಕಟ್ಟಿಸುವ ಮೂಲಕ ಮದುವೆ ಮಾಡಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಕಾರ್ಯಕರ್ತರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಹೈದರಾಬಾದ್ ನಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಜೋಡಿಯ ಮೇಲೆ ಕಣ್ಣಿಡಲು ರಾಜ್ಯದಾದ್ಯಂತ ಸುಮಾರು 30 ತಂಡಗಳನ್ನು ಕಳುಹಿಸುವ ಯೋಜನೆ ಇದೆ ಎಂದು ಮುಂಚಿತವಾಗಿವೇ ವಿಶ್ವ ಹಿಂದೂ ಪರಿಷತ್ ತಿಳಿಸಿತ್ತು. ಅಷ್ಟೇ ಅಲ್ಲದೇ ಪಾರ್ಕ್, ಶಾಪಿಂಗ್ ಮಳಿಗೆ ಹಾಗೂ ಮುಂತಾದ ಪ್ರತಿದಿನ ಓಡಾಡುವ ಸ್ಥಳಗಳನ್ನು ಹೊರತುಪಡಿಸಿ ಆಫೀಸ್ ಹೊರಗಡೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿತ್ತು.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆದ್ಕಲ್ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ದಂಪತಿ ತಾವು ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ ಎಂದು ಹೇಳಿ ದೂರು ನೀಡಲಿಲ್ಲ. ಆದರೂ ನವದಂಪತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ ಪಿವಿ ಪದ್ಮಜಾ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ ಎಂದಿದ್ದ ನಟನಿಗೆ ಕೊನೆಗೂ ಮ್ಯಾರೇಜ್ ಫಿಕ್ಸ್

    ನನ್ನ ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ ಎಂದಿದ್ದ ನಟನಿಗೆ ಕೊನೆಗೂ ಮ್ಯಾರೇಜ್ ಫಿಕ್ಸ್

    ಹೈದರಾಬಾದ್: ನನ್ನನ್ನು ಮದುವೆಯಾಗಲು ಯಾವುದೇ ಷರತ್ತುಗಳಿಲ್ಲ, ಈ ನಂಬರಿಗೆ ಕರೆ ಮಾಡಿ ಎಂದು ವಿಡಿಯೋ ಕಾಲ್ ಮೂಲಕ ಹೇಳಿಕೊಂಡಿದ್ದ ತಮಿಳು ನಟ ಆರ್ಯನಿಗೆ ಕೊನೆಗೂ ಮದುವೆ ಫಿಕ್ಸ್ ಆಗಿದೆ.

    ಹೌದು. ಪ್ರೇಮಿಗಳ ದಿನದಂದೇ ನಟ ತಮ್ಮ ಮದುವೆ ಹಾಗೂ ತಾನೂ ವಿವಾಹವಾಗುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಷರತ್ತಿಲ್ಲ, ನನ್ನನ್ನು ಮದ್ವೆಯಾಗಲು ಈ ನಂಬರಿಗೆ ಕರೆ ಮಾಡಿ: ನಟ ಆರ್ಯ

    ಟ್ವೀಟ್ ನಲ್ಲೇನಿದೆ..?
    ನಟ ಆರ್ಯ ಅವರು ಸಯ್ಯೇಷಾ ಸೈಗಲ್ ಜೊತೆ ಮಾರ್ಚ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿರುವ ಕುರಿತು ಟ್ವಿಟ್ ಮಾಡುವ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. “ಹ್ಯಾಪಿ ವ್ಯಾಲೆಂಟೈನ್ಸ್ ಡೇ ಮತ್ತು ಆಶೀರ್ವಾದಿಸಿ” ಎಂದು ಬರೆದು ತಾವು ಮದುವೆಯಾಗುತ್ತಿರುವ ಹುಡುಗಿ ಜೊತೆಗಿರುವ ಫೋಟೋ ಹಾಕಿದ್ದಾರೆ.

    “ನಮ್ಮ ಪೋಷಕರು ಮತ್ತು ಕುಟುಂಬದ ಆಶೀರ್ವಾದದಿಂದ, ನಿಮ್ಮೊಂದಿಗೆ ನಮ್ಮ ಬಾಳಿನ ಅತ್ಯಂತ ಸುಂದರವಾದ ದಿನವನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ. ನಾವು ಮುಂದಿನ ತಿಂಗಳು ಮಾರ್ಚ್ ನಲ್ಲಿ ಮದುವೆಯಾಗುತ್ತಿದ್ದೇವೆ. ನಮ್ಮ ಹೊಸ ಜೀವನ ಪ್ರಯಾಣಕ್ಕೆ ನಿಮ್ಮ ಪ್ರೀತಿಯ ಆಶೀರ್ವಾದ ಬೇಕೆಂದು” ದಂಪತಿ ಮನವಿ ಮಾಡಿಕೊಂಡಿದ್ದಾರೆ.

    ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿರುವ ಬಗ್ಗೆ ತಿಳಿಸಿದ್ದು, ಆದರೆ ತಮ್ಮ ಮದುವೆಯ ದಿನಾಂಕವನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಕಳೆದ ತಿಂಗಳಿನಿಂದ ಆರ್ಯ ಮತ್ತು ಸಯ್ಯೇಷಾ ಮದುವೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈಗ ಸ್ವತಃ ಆರ್ಯ ಅವರೇ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಾರ್ಚ್ 9 ರಂದು ಆರ್ಯ ಹಾಗೂ ಸಯ್ಯೇಷಾ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿದುಬಂದಿದೆ.

    ಸಯ್ಯೇಷಾ ಸೈಗಲ್ ಯಾರು?
    ಸಯ್ಯೇಷಾ ಅವರು ನಟ-ನಿರ್ಮಾಪಕ ಸುಮೇತ್ ಸೈಗಲ್ ಮತ್ತು ನಟಿ ಶಹೀನ್ ಬಾನು ಅವರ ಮಗಳಾಗಿದ್ದು, ಶಹೀನ್ ಅವರು ‘ಮಹಾ-ಸಂಗ್ರಮ್’ ಮತ್ತು’ ಆಯಿ ಮಿಲಾನ್ ಕಿ ರಾತ್’ ನಂತಹ ಸಿನಿಮಾಗಲ್ಲಿ ಹೆಸರುವಾಸಿಯಾಗಿದ್ದಾರೆ. 2018 ರ ‘ಘಜಿನಿಕಾಂತ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಯ್ಯೇಷಾ ಅವರು ನಟ ಆರ್ಯರನ್ನು ಭೇಟಿಯಾಗಿದ್ದರು.

    ಸದ್ಯಕ್ಕೆ ಈ ಜೋಡಿಯು ಮೋಹನ್ ಲಾಲ್ ಮತ್ತು ಸೂರ್ಯ ಅಭಿನಯಿಸಿರುವ ‘ಕಾಪ್ಪಾನ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಪ್ಪಾನ್’ ಅಕ್ಟೋಬರ್ 2019 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವ್ಯಾಲೆಂಟೈನ್ಸ್ ಡೇ ದಿನವೇ ಕಾಲೇಜ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

    ವ್ಯಾಲೆಂಟೈನ್ಸ್ ಡೇ ದಿನವೇ ಕಾಲೇಜ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

    ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿವಪ್ರಸಾದ್ ಪವಾರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಜಪರವಾಡಿ ಗ್ರಾಮದ ನಿವಾಸಿಯಾಗಿದ್ದು, ಬೆಳಗಾವಿಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ ನಲ್ಲಿ ಸಿವಿಲ್ ವಿಭಾಗದಲ್ಲಿ ಓದುತ್ತಿದ್ದನು. ಪ್ರೀತಿಸಿದ ಹುಡುಗಿ ಪ್ರೇಮ ನಿವೇದನೆಯನ್ನ ತಿರಸ್ಕರಿಸಿದ್ದಕ್ಕೆ ಕಾಲೇಜಿನ ನಾಲ್ಕನೇ ಮಹಡಿಯ ಮೇಲಿಂದ ಬಿದ್ದು ಶಿವಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ತರಗತಿಯಲ್ಲಿದ್ದಾಗ ಕೆಳಗೆ ಏನೋ ವಸ್ತು ಬಿದ್ದ ಶಬ್ದ ಕೇಳಿಬಂದಿತ್ತು. ಹೊರಗೆ ಬಂದು ನೋಡಿದಾಗ ಶಿವಪ್ರಸಾದ್ ಬಿದ್ದಿದ್ದನು ತಕ್ಷಣ ಆತನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಶಿವಪ್ರಸಾದ್ ಮೃತಪಟ್ಟಿದ್ದನು ಎಂದು ವಿದ್ಯಾರ್ಥಿ ಪ್ರಕಾಶ್ ಹೇಳಿದ್ದಾನೆ.

    ಶಿವಪ್ರಸಾದ್ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೊಬ್ಬಳನ್ನ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದನು. ಈ ಬಗ್ಗೆ ಯುವತಿ ತಮ್ಮ ಮನೆಯಲ್ಲಿ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ಹೇಳಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಕಳೆದ ಒಂದು ವರ್ಷದಿಂದ ಶಿವಪ್ರಸಾದ್ ತಲೆಕೆಡಿಸಿಕೊಂಡಿದ್ದನು. ಆಗಾಗ ಅವಳು ನನಗೆ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಡ ಹೇಳುತ್ತಿದ್ದನು. ಆದರೆ ಕಳೆದ ಒಂದು ತಿಂಗಳಿನಿಂದ ಬಹಳ ಆರಾಮಾಗಿದ್ದು, ಚೆನ್ನಾಗಿ ವ್ಯಾಸಂಗ ಮಾಡುತ್ತಿದ್ದನು. ತನ್ನ ಪ್ರೀತಿಯ ಬಗ್ಗೆ ಏನು ಹೇಳುತ್ತಿರಲಿಲ್ಲ. ಆದರೆ ಇಂದು ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಕೆಗೆ ಪ್ರಪೋಸ್ ಮಾಡಿದ್ದು, ಮತ್ತೆ ಆಕೆಯಿಂದ ಅದೇ ಉತ್ತರ ಬಂದಿರಬಹುದು. ಇದರಿಂದ ತನಗೆ ಸಿಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ಶಿವಪ್ರಸಾದ್ ಕಾಲೇಜಿನ ನಾಲ್ಕನೇ ಮಹಿಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಶಿವಪ್ರಸಾದ್ ರೂಮ್ ಮೇಟ್ ಕುಮಾರ್ ತಿಳಿಸಿದ್ದಾನೆ.

    ಸದ್ಯಕ್ಕೆ ಶಿವಪ್ರಸಾದ್ ಪ್ರೀತಿ ಮಾಡುವ ವಿಚಾರವನ್ನ ಆತನ ಗೆಳೆಯರು ಬಾಯಿ ಬಿಟ್ಟಿದ್ದಾರೆ. ಆದರೆ ನಿಜವಾಗಿಯೂ ಇಂದು ಆತ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡನಾ ಅಥವಾ ಆತ ಮೇಲಿಂದ ಹಾರುವ ಸಂದರ್ಭದಲ್ಲಿ ಆತನೊಂದಿಗೆ ಯುವತಿಯೂ ಇದ್ದಳೇ ಎನ್ನುವ ಅನುಮಾನಗಳು ಮೂಡುತ್ತಿವೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನದಂದು ಕಿಸ್ಸಿಂಗ್ ವಿಡಿಯೋ ಹಂಚಿಕೊಂಡ ಬಿಪಾಶಾ

    ಪ್ರೇಮಿಗಳ ದಿನದಂದು ಕಿಸ್ಸಿಂಗ್ ವಿಡಿಯೋ ಹಂಚಿಕೊಂಡ ಬಿಪಾಶಾ

    ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಪ್ರೇಮಿಗಳ ದಿನದಂದು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೆ ಮುತ್ತು ನೀಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲಿ ಬಿಪಾಶಾ ತಮ್ಮ ಪತಿ ಕರಣ್ ಬರೆದಿರುವ ಪ್ರೇಮ ಪತ್ರವನ್ನು ಓದುತ್ತಿದ್ದಾರೆ. ಬಳಿಕ ಖುಷಿಯಲ್ಲಿ ಅವರನ್ನು ತಬ್ಬಿಕೊಂಡು ಮುತ್ತು ನೀಡಿದ್ದಾರೆ. ಈ ವಿಡಿಯೋ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ವಿಡಿಯೋವನ್ನು ಬಿಪಾಶಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ನಾನು ಈ ದಿನಕ್ಕಾಗಿ ಪ್ರತಿ ವರ್ಷ ಕಾಯುತ್ತೇನೆ. ನಾನು ಪ್ರಪಂಚದ ಲಕ್ಕಿಯೆಷ್ಟ್ ಮಹಿಳೆ. ಕರಣ್ ನನಗೆ ಪ್ರತಿ ದಿನ ಪ್ರತಿ ಕ್ಷಣ ಸ್ಪೆಷಲ್ ಆಗಿ ಫೀಲ್ ಮಾಡಿಸುತ್ತಾನೆ” ಎಂದು ಬರೆದುಕೊಂಡಿದ್ದರು.

    ಬಿಪಾಶಾ ಬಸು ಅವರ ‘ಅಲೋನ್’ ಸಿನಿಮಾಗೆ ಕರಣ್ ನಾಯಕನಾಗಿ ನಟಿಸಿದ್ದರು. ಈ ಸಿನಿಮಾದ ವೇಳೆ ಇಬ್ಬರ ನಡುವೆ ಪ್ರೀತಿಯಲ್ಲಿ ಬೆಳೆದಿತ್ತು. ಬಳಿಕ 2016ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಪೋಸ್ ವಿಚಾರದಲ್ಲಿ ಗಲಾಟೆ – ಪ್ರೇಯಸಿಗಾಗಿ ಸ್ನೇಹಿತನಿಗೆ ಚಾಕು

    ಪ್ರಪೋಸ್ ವಿಚಾರದಲ್ಲಿ ಗಲಾಟೆ – ಪ್ರೇಯಸಿಗಾಗಿ ಸ್ನೇಹಿತನಿಗೆ ಚಾಕು

    ಚೆನ್ನೈ: ಒಂದೇ ಹುಡುಗಿಗೆ ಪ್ರಪೋಸ್ ಮಾಡುವ ವಿಚಾರದಲ್ಲಿ ಜಗಳ ನಡೆದಿದ್ದು, ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ತಮಿಳುನಾಡಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಕ್ಯಾಂಪಸ್ ನಲ್ಲಿ ನಡೆದಿದೆ.

    ಪ್ರಮೋದ್ ಕೌಶಿಕ್ ಹಲ್ಲೆಗೊಳಗಾದ ವಿದ್ಯಾರ್ಥಿ. ಮನೋಜ್ ಸ್ನೇಹಿತನಿಗೆ ಚಾಕು ಹಾಕಿದ ವಿದ್ಯಾರ್ಥಿ. ಇಬ್ಬರು ಮೂಲತಃ ಹರಿಯಾಣದವರಾಗಿದ್ದು, ಎಮ್‍ಟೆಕ್ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಸಂಜೆ ಸುಮಾರು 5.30ರ ಸಮಯದಲ್ಲಿ ಚೆನ್ನೈನ ಸೆಂಟ್ರಲ್ ಲೈಬ್ರರಿ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಮೋದ್ ಕೌಶಿಕ್ ಮತ್ತು ಮನೋಜ್ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇಂದು ಪ್ರೇಮಿಗಳ ದಿನವಾದ್ದರಿಂದ ತಮ್ಮ ಪ್ರೇಯಸಿಗೆ ಪ್ರಮೋಸ್ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಬುಧವಾರ ಸಂಜೆ ಲೈಬ್ರರಿ ಆವರಣದಲ್ಲಿ ಹುಡುಗಿಯ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕ್ಕೇರಿದ್ದು, ಕೋಪಗೊಂಡ ಮನೋಜ್ ಚಾಕುವಿನಿಂದ ಕೌಶಿಕ್ ಗೆ ಇರಿದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳದಲ್ಲಿದ್ದ ಸ್ನೇಹಿತರು ಕೂಡಲೇ ಹಲ್ಲೆಗೊಳಗಾದ ಕೌಶಿಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಕೌಶಿಕ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಮಾಹಿತಿ ತಿಳಿದು ಕೊಟ್ಟೂರು ಪುರಂ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ತನಿಖೆ ಮಾಡಲು ಪೊಲೀಸರು ಆರೋಪಿ ಮನೋಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ – ಹಸೆಮಣೆ ಏರಿದ ಐಎಎಸ್ ಅಧಿಕಾರಿಗಳು!

    ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ – ಹಸೆಮಣೆ ಏರಿದ ಐಎಎಸ್ ಅಧಿಕಾರಿಗಳು!

    ದಾವಣಗೆರೆ: ಪ್ರೇಮಿಗಳ ದಿನವೇ ದಾವಣಗೆರೆ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ಹಸೆಮಣೆ ಏರಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್ ಅಶ್ವತಿ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರೇಮ ವಿವಾಹವಾಗಿದ್ದಾರೆ.

    ಕೇರಳ ವಧು, ಆಂಧ್ರ ವರನಿಗೆ ಕರ್ನಾಟಕದಲ್ಲಿ ಪ್ರೀತಿ ಮೊಳಕೆಯೊಡೆದು ಪ್ರೇಮಿಗಳ ದಿನದಂದೇ ನವ ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಕೇವಲ ಅರ್ಧ ಗಂಟೆಯಲ್ಲಿ ಸರಳ ವಿವಾಹ ಮುಗಿದಿದ್ದು ಹೊಸ ಜೀವನಕ್ಕೆ ಅಧಿಕಾರಿಗಳು ಕಾಲಿಟ್ಟಿದ್ದಾರೆ.

    ಸಿಇಒ ಎಸ್ ಅಶ್ವತಿ ತವರೂರಾದ ಕೇರಳದ ಕೋಯಿಕ್ಕೊಡ್ ನಲ್ಲಿ ಮದುವೆಯಾಗಿದ್ದು, ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರ ಜೊತೆ ಸರಳ ವಿವಾಹ ಮಾಡಿಕೊಂಡರು. ಇದೇ ಫೆಬ್ರವರಿ 17 ಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‍ರ ಊರಾದ ಆಂಧ್ರದ ವಿಶಾಖಪಟ್ಟಣದ ನಿವಾಸದಲ್ಲಿ ಆರತಕ್ಷತೆ ನಡೆಯಲಿದೆ.

    ಡಾ. ಬಗಾದಿ ಗೌತಮ್ ಮತ್ತು ಎಸ್. ಅಶ್ವತಿ ಪರಸ್ಪರ ಪ್ರೀತಿಸುತ್ತಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾ. ಬಗಾದಿ ಗೌತಮ್ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಎಸ್. ಅಶ್ವತಿ ಜೊತೆಗೆ ಮದುವೆಯ ಮಾತುಕತೆ ನಡೆದಿತ್ತು. ರಾಜ್ಯದ ಪ್ರಮುಖ ಐಎಎಸ್ ಅಧಿಕಾರಿ ಮುಂದಾಳತ್ವದಲ್ಲಿ ಎರಡು ಕುಟುಂಬದ ಜೊತೆ ಮದುವೆ ಮಾತುಕತೆ ನಡೆದಿತ್ತು.

    ಪ್ರೀತಿ ಬಹಿರಂಗ ಆಗಿದ್ದು ಹೇಗೆ:
    ಬಗಾದಿ ಹಾಗೂ ಅಶ್ವತಿ ನಾಲ್ಕು ತಿಂಗಳ ಹಿಂದೆ ರಾಯಚೂರಿನಿಂದ ದಾವಣಗೆರೆಗೆ ಬಂದಿದ್ದರು. ಬಳಿಕ ಇಬ್ಬರು ಕೆಲವು ಸಭೆ-ಸಮಾರಂಭಗಳಲ್ಲಿ ಒಟ್ಟಿಗೆ ಭಾಗವಹಿಸುತ್ತಿದ್ದರು. ಆಗ ಅವರು ತಮ್ಮ ಪ್ರೀತಿಯ ಬಗ್ಗೆ ಯಾರಿಗೂ ಹೇಳಲಿಲ್ಲ. ಫೆ.1ರಂದು ಇಬ್ಬರು ನಮ್ಮ ಮದುವೆ ಎಂದು ಆಮಂತ್ರಣ ಪತ್ರಿಕೆ ಕೊಟ್ಟಾಗಲೇ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಆಗ ಇಬ್ಬರು ತಮ್ಮ ಪ್ರೀತಿ ಶುರುವಾಗಿದ್ದು ಹೇಗೆ ಎಂಬುದು ಎಲ್ಲರ ಬಳಿ ಹಂಚಿಕೊಂಡಿದ್ದರು.

    ಗೌತಮ್ 2009ನೇ ಬ್ಯಾಚ್‍ನ ಹಿರಿಯ ಐಎಎಸ್ ಅಧಿಕಾರಿ ಆದರೆ, ಅಶ್ವತಿ 2013ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಆಗಿದ್ದಾರೆ. ನಾಲ್ಕು ವರ್ಷದ ಹಿಂದೆಯೇ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಅಶ್ವತಿ ಕ್ಯಾಲಿಕಟ್‍ನ ಹಿರಿಯ ವಕೀಲರಾದ ಸೆಲ್ವಿರಾಜ್ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಪುಷ್ಪಾ ಅವರ ಪುತ್ರಿಯಾಗಿದ್ದು, ಕ್ಯಾಲಿಕಟ್‍ನಲ್ಲಿ ಪ್ರಾಥಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿದ್ದಾರೆ. ಬಳಿಕ ಮಣಿಪಾಲ್‍ನಲ್ಲಿ ತಮ್ಮ ಎಂಬಿಎಯನ್ನು ಮುಗಿಸಿದ್ದಾರೆ. ಅಶ್ವತಿ ಅವರಿಗೆ ಸಮಾಜ ಸೇವೆಯಲ್ಲಿ ಆಸಕ್ತಿ ಇರುವುದರಿಂದ ಅವರು ಐಎಎಸ್ ಪರೀಕ್ಷೆ ಬರೆದರು. ಆದರೆ ಮೊದಲೆರಡು ಬಾರಿ ಅವರು ಯಶಸ್ವಿಯಾಗಲಿಲ್ಲ. ಮೂರನೇ ಬಾರಿ ಅವರು ಐಎಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು.

    ಗೌತಮ್ ಕೃಷ್ಣ ರಾವ್ ಹಾಗೂ ಪಾವತಿಯ ಪುತ್ರನಾಗಿದ್ದು, ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು. ಬಳಿಕ ಆಂಧ್ರದ ರಂಗರಾಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಮುಗಿಸಿದ್ದರು. ಇದಾದ ಬಳಿಕ 2009ರಲ್ಲಿ ಐಎಎಸ್ ಪರೀಕ್ಷೆ ಬರೆದು ಬೆಳಗಾವಿಯಲ್ಲಿ ಸಿಇಒ ಆಗಿದ್ದರು. ಆದಾದ ಬಳಿಕ ಅವರು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ ದಾವಣಗೆರೆಗೆ ಬಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಗ್ನಿ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ಸೂರ್ಯ

    ಅಗ್ನಿ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ಸೂರ್ಯ

    ಬೆಂಗಳೂರು: ಕನ್ನಡ ಹೆಸರಾಂತ ಧಾರಾವಾಹಿಗಳಲ್ಲಿ ಒಂದಾದ ಅಗ್ನಿಸಾಕ್ಷಿಯ ಸಿದ್ದಾರ್ಥ್ ಖ್ಯಾತಿಯ ನಟ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜತೆ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದಾರೆ. ಮನೆಯವರೆಲ್ಲ ಮೆಚ್ಚಿದ ಚೈತ್ರಾ ಅವರ ಜೊತೆ ವಿಜಯ್ ಸಪ್ತಪದಿ ತುಳಿದಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಜನಪ್ರಿಯತೆ ಪಡೆದವರು. ಚೈತ್ರಾ ಅವರ ಸಾಫ್ಟ್ ವೇರ್ ಉದ್ಯೋಗಿಯಾದ್ದು, ಈ ಕಿರುತೆರೆ ಹಾಗೂ ಸಾಫ್ಟ್ ವೇರ್ ಜೋಡಿ ಅಗ್ನಿಸಾಕ್ಷಿಯಾಗಿ ನವ ಜೀವನವನ್ನು ಆರಂಭಿಸಲು ಜೊತೆಗೂಡಿದ್ದಾರೆ.

    ಈ ಹಿಂದೆ ಮಾಧ್ಯಮಗಳಲ್ಲಿ ವಿಜಯ್ ಸೂರ್ಯ ತಮ್ಮ ಮದುವೆಯ ಕುರಿತು ಹೇಳಿದ್ದರು. ಚೈತ್ರಾ ಮತ್ತು ನಮ್ಮ ಕುಟುಂಬದವರಿಗೆ 9 ವರ್ಷಗಳ ಹಿಂದೆ ಪರಿಚಯವಾಗಿತ್ತು ಆದರೆ ನಾನು ಚೈತ್ರಾರನ್ನು ಎರಡು ಬಾರಿ ಮಾತ್ರ ಭೇಟಿ ಮಾಡಿದ್ದೆ. ನಮ್ಮ ತಾಯಿ ಚೈತ್ರಾರನ್ನು ನೋಡಿ ಇಷ್ಟಪಟ್ಟು ಮದುವೆಯ ಬಗ್ಗೆ ಅವರ ಕುಟುಂಬದವರ ಮುಂದೆ ಪ್ರಸ್ತಾಪ ಮಾಡಿದ್ದರು. ಬಳಿಕ ಅವರು ಒಪ್ಪಿಗೆ ಸೂಚಿಸಿದ ಬಳಿಕ ಇಬ್ಬರ ಜಾತಕ ಹೊಂದಾಣಿಕೆಯಾಗಿದ್ದು, ಗುರು-ಹಿರಿಯರ ಸಮ್ಮುಖದಲ್ಲೇ ಮದುವೆಯಾಗಲಿದ್ದೇವೆ ಎಂದು ಹೇಳಿದ್ದರು.

    ಚೈತ್ರಾ ನಾನೊಬ್ಬ ನಟ ಎಂದು ಅಷ್ಟಾಗಿ ಚಿಂತಿಸಲಿಲ್ಲ. `ವ್ಯಕ್ತಿ ಯಾರು ಎನ್ನುವುದಕ್ಕಿಂತ ವ್ಯಕ್ತಿ ಹೇಗೆ’ ಎಂದು ಚೈತ್ರಾ ನೋಡುತ್ತಾರೆ. ನನ್ನ ನಟನಾ ಫೀಲ್ಡ್, ಅಲ್ಲಿನ ಸುದ್ದಿ, ಗಾಸಿಪ್‍ಗಳ ಬಗ್ಗೆ ಮುಂಚಿತವಾಗಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ವೃತ್ತಿಯಂತೆ ನಟನೆಯು ಒಂದು ವೃತ್ತಿ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ನನಗೆ ಇಷ್ಟವಾದರು ಎಂದು ವಿಜಯ್ ಸೂರ್ಯ ತಮ್ಮ ಪತ್ನಿ ಚೈತ್ರಾ ಬಗ್ಗೆ ಹೇಳಿದ್ದಾರೆ.

    ವಿಶೇಷವಾಗಿ ಪ್ರೇಮಿಗಳ ದಿನದಂದು ಈ ನವ ಜೋಡಿ ಸಪ್ತಪದಿ ತುಳಿದಿದ್ದು, ಇವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಬಂಧು – ಮಿತ್ರರು ಶುಭಹಾರೈಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ.

    ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಇಂದಿನ ಯುವಕ-ಯುವತಿಯರು ನಾಳಿನ ದೇಶದ ಭದ್ರಬುನಾದಿಯ ಆಧಾರ ಸ್ತಂಭವಾಗಿದ್ದಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿದ್ದು, ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಕಾರರು ಹೇಳಿದ್ದಾರೆ.

    ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಸರಿಸುವ ಮೂಲಕ ಭಾರತದ ಸಂಸ್ಕೃತಿ ಹಾಳು ಮಾಡುವಂತ ಯುವಕರಿಗೆ ಈ ರೀತಿ ಮದುವೆ ಮಾಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ನಗರದ ಸಂಜೀವಿನಿ ಹಾಗೂ ನೃಪತುಂಗ ಬೆಟ್ಟದ ಪಾರ್ಕ್‌ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನೋಡಿದ್ದೇವೆ. ಹೀಗಾಗಿ ಇದರಿಂದ ಬೇಸತ್ತು ವ್ಯಾಲೆಂಟೈನ್ಸ್ ಡೇ ಪ್ರಯುಕ್ತವಾಗಿ ಪ್ರೇಮಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿಯೇ ಮದುವೆ ಮಾಡಿಸಿ ಪಾಶ್ಚಾತ್ಯ ಸಂಪ್ರದಾಯಗಳನ್ನು ನಿಯಂತ್ರಣಕ್ಕೆ ತರುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಾಂಗಲ್ಯ ಹಾಗೂ ವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದು, ಅನೈತಿಕವಾಗಿ ವರ್ತಿಸಿದವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಸಂಘಟನೆ ಮುಖಂಡ ವಿಠ್ಠಲ ಪವಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

    ಪ್ರೇಮಿಗಳ ದಿನವೇ ಬೀದಿಗೆ ಬಂತು ಲವ್ ದೋಖಾ ವಾರ್..!

    ತುಮಕೂರು: ಇಂದು ಪ್ರೇಮಿಗಳ ದಿನಾಚರಣೆ. ಎಲ್ಲಾ ಪ್ರೇಮಿಗಳು ನನಗೆ ನೀನು, ನಿನಗೆ ನಾನು ಎಂದು ಪ್ರೇಮಲೋಕದಲ್ಲಿ ತೇಲುತ್ತಿದ್ದರೆ, ಇಲ್ಲೊಂದು ಪ್ರೇಮಿಗಳ ಜಗಳ ಬೀದಿಗೆ ಬಂದಿದೆ.

    ತುಮಕೂರು ನಗರದ ನಿವಾಸಿಗಳಾದ ನೇತ್ರಾವತಿ ಹಾಗೂ ರಂಗನಾಥ್‍ರ ಪ್ರೇಮ ಪ್ರಸಂಗ ಈಗ ಮಹಿಳಾ ಠಾಣಾ ಮೆಟ್ಟಿಲೇರಿದೆ. ರಂಗನಾಥ್ ಮತ್ತು ನೇತ್ರಾ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ಒಪ್ಪಿಗೆ ಇಲ್ಲದೆ ಇದ್ದುದರಿಂದ ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದರು.

    ಆದರೂ ನೇತ್ರಾವತಿ ಕೆಲ ತಿಂಗಳ ಬಳಿಕ ರಂಗನಾಥನ್ ನನ್ನು ಸಂಪರ್ಕಿಸಿ ಮತ್ತೆ ಅನೈತಿಕ ಸಂಬಂಧ ಮುಂದುವರಿಸಿದ್ದಾಳೆ. ನನ್ನ ಬಳಿಯಿಂದ ಸುಮಾರು 1.5 ಲಕ್ಷ ರೂ. ಪೀಕಿದ್ದಾಳೆ. ಬಳಿಕ ದುಡ್ಡು ವಾಪಸ್ ಕೊಡು ಎಂದು ಕೇಳಿದಾಗ ಆಕೆ ನಿರಾಕರಿಸಿದ್ದಾಳೆ ಎಂದು ರಂಗನಾಥ್ ಆರೋಪಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ.

    ಕೆಲ ಫೋಟೋ ಇಟ್ಟುಕೊಂಡು ರಂಗನಾಥ್ ತನ್ನನ್ನು ಬ್ಲಾಕ್‍ಮೇಲ್ ಮಾಡುತ್ತಾನೆ ಎಂದು ನೇತ್ರಾವತಿ ದೂರು ನೀಡಿದ್ದಾಳೆ. ಅಸಲಿಗೆ ಈ ಇಬ್ಬರೂ ವಿವಾಹಿತ ಪ್ರೇಮಿಗಳು ಪರಸ್ಪರ ತಮ್ಮ ಖಾಸಗಿ ಫೋಟೋಗಳನ್ನು ಮೊಬೈಲಲ್ಲಿ ಸೆರೆ ಹಿಡಿದು ಒಬ್ಬರಿಗೊಬ್ಬರು ಬ್ಲಾಕ್‍ಮೇಲ್ ಮಾಡಿಕೊಂಡಿದ್ದಾರೆ.

    ಇಬ್ಬರು ಪ್ರೇಮಿಗಳ ಜಗಳ ಮಹಿಳಾ ಠಾಣೆಯ ಮೆಟ್ಟಿಲೇರಿದ್ದು ಅಶ್ಲೀಲ ಫೋಟೋಗಳು ವೈರಲ್ ಆಗಿವೆ. ಆದರೆ ಈ ಪ್ರಕರಣದ ಕುರಿತು ಪ್ರಿಯಕರ ರಂಗನಾಥ್ ಪ್ರತಿಕ್ರಿಯೆ ನೀಡಿದರೆ, ನೇತ್ರಾವತಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv