Tag: Valentines Day

  • Valentine’s Day – ನಾವೇಕೆ ಪ್ರೀತಿಯಲ್ಲಿ ಬೀಳುತ್ತೇವೆ?

    Valentine’s Day – ನಾವೇಕೆ ಪ್ರೀತಿಯಲ್ಲಿ ಬೀಳುತ್ತೇವೆ?

    ಪ್ರೀತಿ (Love) ಎಂಬುದು ಮಾಯೆ.. ಅದು ಹುಟ್ಟಿದಾಗ ಗಾಳಿಯಲ್ಲಿ ತೇಲಾಡುವ ಅನುಭವ… ಎದೆಯಲ್ಲಿ ಪುಳಕ, ಅಸಹನೀಯ ಭಾರ. ಇದರ ಕೊನೆಯ ಹಂತವೇ ಮದುವೆ. ಆದ್ರೆ ಅದೆಷ್ಟು ಪ್ರೀತಿಗಳು ಮದುವೆಯವರೆಗೆ ತಲುಪುತ್ತವೆ ಹೇಳಿ? ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಹಿರಿಯರ ಅನುಮತಿಯೊಂದಿಗೆ ಆ ಪ್ರೀತಿಯನ್ನು ಮದುವೆಯ ಪೀಠದ ವರೆಗೆ ತೆಗುದುಕೊಂಡು ಹೋಗಬೇಕು. ಇಲ್ಲದಿದ್ದರೆ ನಿಮ್ಮ ಕೇವಲ ಆಕರ್ಷಣೆಯಿಂದ ಹುಟ್ಟಿದ ಭಾವನೆಯಾಗುತ್ತದೆ ಅಷ್ಟೇ.

    ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಹುಟ್ಟಬಹುದು. ಕೆಲವರಿಗೆ ದೇಹ ಸೌಂದರ್ಯ (Beauty) ಇಷ್ಟ. ಇನ್ನು ಕೆಲವರು ಅವರ ಗುಣಕ್ಕೆ ಫಿದಾ ಆಗುತ್ತಾರೆ, ಅದು ಹುಡುಗ ಆಗಿರಬಹುದು… ಹುಡುಗಿಯೂ ಆಗಿರಬಹುದು. ಒಂದಷ್ಟು ಮಂದಿ ತಮ್ಮ ಸೊಬಗಿನಿಂದಲೇ ಆಕರ್ಷಿತರಾಗುತ್ತಾರೆ. ನೀವು ಪ್ರೀತಿಯಲ್ಲಿ ಬಿದ್ದಾಗ ಮೆದುಳಿನಲ್ಲಿ ಸಾಕಷ್ಟು ಪ್ರಕ್ಷುಬ್ಧತೆ ಇರುತ್ತದೆ. ಅದೊಂದು ಮಾನಸಿಕ ಕಾಯಿಲೆಯಂತೆ. ಹೃದಯ ಬಡಿದ ಜೋರಾಗುತ್ತದೆ. ಕೈಕಾಲು ಕೆಲ ಕ್ಷಣಗಳು ಬೆವರುವುದು ಪ್ರೀತಿಯಲ್ಲಿ ಬೀಳುವ ಎಲ್ಲಾ ಲಕ್ಷಣಗಳಾಗಿವೆ. ಹಾಗಾದ್ರೆ ನಾವೇಕೆ ಪ್ರೀತಿಯಲ್ಲಿ ಬೀಳುತ್ತೇವೆ ಅನ್ನೋದನ್ನ ತಿಳಿಯಬೇಕಾದ್ರೆ ಮುಂದೆ ಓದಿ…

    ಪ್ರೀತಿಯಲ್ಲಿ ಬೀಳುವುದಕ್ಕೆ ಹಾರ್ಮೋನ್‌ಗಳೇ ಕಾರಣ
    ಪ್ರೀತಿಯಲ್ಲಿ ಬೀಳಲು ವಿಶೇಷವಾಗಿ ಕಾರಣವಾದ ನಾಲ್ಕು ಹಾರ್ಮೋನ್‌ಗಳು ಇವೆ. ಆ ಮೂರು ಹಾರ್ಮೋನ್‌ಗಳನ್ನು ನೋಡುವುದಾದರೆ ನೊರ್ಪೈನ್ಫ್ರಿನ್, ಡೋಪಮೈನ್, ಸೆರೊಟೋನಿನ್ ಮತ್ತು ಫೀನೈಲೆಥೈಲಮೈನ್. ಈ ನಾಲ್ಕು ಸೇರಿ ವ್ಯಕ್ತಿಯನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ.

    ನೊರ್ಪೈನ್ಫ್ರಿನ್ ಎಂಬ ಹಾರ್ಮೋನ್‌ ನೀವು ಇಷ್ಟಪಡುವ ಅಥವಾ ಪ್ರೀತಿಸುವವರನ್ನು ನೋಡಿದಾಗ ಹೃದಯ ಬಡಿತ ಜೋರಾಗುತ್ತದೆ. ಉದಾಹರಣೆಗೆ ತಮಿಳಿನ ʻ96ʼ ಸಿನಿಮಾದಲ್ಲಿ ಬರುವ ಒಂದು ದೃಶ್ಯದಂತೆ. ಹಾಗೆಯೇ ಡೊಪಮೈನ್‌ ತುಂಬಾ ಸಂತೋಷ ಉಂಟು ಮಾಡುತ್ತದೆ. ಆದ್ರೆ ಇವುಗಳಲ್ಲಿ ಮುಖ್ಯವಾದದ್ದು ಸೆರೊಟೋನಿನ್‌. ಇದು ಪ್ರೀತಿಯಲ್ಲಿ ಬಿದ್ದ ನಂತರ ನೀವು ಅವರ ಬಗ್ಗೆ ಹುಚ್ಚರಾಗುವಂತೆ ಮಾಡುತ್ತದೆ. ಅವರಿಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತೀರಿ. ಅಲ್ಲದೇ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವ ಭಾವನೆಯನ್ನೂ ಕೆರಳಿಸುತ್ತದೆ. ಇನ್ನೂ ಕೊನೆಯದ್ದಾಗಿ ಫಿನೈಲೆಥೈಲಮೈನ್ ಇದು ನೀವು ಇಷ್ಟಪಡುವ ವ್ಯಕ್ತಿಯ ಮೇಲೆ ವ್ಯಾಮೋಹ ಉಂಟುಮಾಡುತ್ತದೆ. ಅವರು ಹುಟ್ಟಿರೋದೇ ನನಗಾಗಿ ಎನಿಸುತ್ತದೆ. ಒಂದು ವೇಳೆ ಬೇರೆಯವರನ್ನ ಇಷ್ಟಪಟ್ಟರೆ ಅದು ನಿಮ್ಮಿಂದಿ ಸಹಿಸಲಾಗುವುದಿಲ್ಲ. ಈ ಹಾರ್ಮೋನ್‌ಗಳು ಒಟ್ಟಾಗಿ ನಿಮ್ಮನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತವೆ. ಉದಾಹರಣೆಗೆ ಉಪೇಂದ್ರ ಸಿನಿಮಾದಲ್ಲಿ ʻನೀನು ಅವನನ್ನೇ ಮದುವೆಯಾಗು, ನನ್ನನ್ನ ಲವ್‌ ಮಾಡು ಎಂದು ಹೇಳಿದಂತೆʼ.

    ಪ್ರೀತಿ ವಿಫಲವಾದರೆ ಈ ಹಾರ್ಮೋನ್‌ಗಳ ಮೇಲೆ ತೀವ್ರ ಪರಿಣಾಮವೂ ಬೀರುತ್ತದೆ. ಅವುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಖಿನ್ನತೆ ಉಂಟಾಗುತ್ತದೆ. ಅದಕ್ಕಾಗಿ ಪ್ರೀತಿಸಿದಷ್ಟೇ ಸಾಕಾಗುವುದಿಲ್ಲ. ಪ್ರೀತಿಯನ್ನು ಗೆಲ್ಲುವ ಶಕ್ತಿಯೂ ನಿಮ್ಮಲ್ಲಿರಬೇಕು.

    ಪ್ರೀತಿಯ ಮೂರು ಹಂತಗಳ ಬಗ್ಗೆ ನಿಮ್ಗೆ ಗೊತ್ತಾ?
    ಪ್ರೀತಿ ಹೇಗೆ ಹುಟ್ಟುತ್ತೆ ಅನ್ನೋದು ಗೊತ್ತಾದ ಮೇಲೆ ಪ್ರೀತಿಯ ಮೂರು ಹಂತಗಳನ್ನೂ ನೀವು ತಿಳಿಯಲೇಬೇಕು. ಪ್ರೇಮಿಗಳಿಗೆ ಈ ಅನುಭವ ನೈಜವಾಗಿಯೇ ಇದ್ದರೂ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರೀತಿಯ ಅನುಭವವನ್ನು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಮೊದಲನೆಯದ್ದು ಕಾಮ, 2ನೇಯದ್ದು ಆಕರ್ಷಣೆ, 3ನೇಯದ್ದು ವ್ಯಸನಿಗಳಾಗುವುದು. ಕಾಮ ಎಂಬುದು ಪುರುಷರಲ್ಲಿ ಟೆಸ್ಟೋಸ್ಟೆರಾನ್‌, ಮಹಿಳೆಯರಲ್ಲಿ ಈಸ್ಟ್ರೋಜೆನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆಕರ್ಷಣೆಯಿಂದ ಪ್ರೀತಿಸುವ ವ್ಯಕ್ತಿಯ ಪ್ರೀತಿಗಾಗಿ ಹಂಬಲಿಸುತ್ತಾರೆ. ಇನ್ನೂ 3ನೇ ಯದ್ದು ವ್ಯಸನಿಗಳಾಗುವುದು. ಇದು ಕೆಲವೊಮ್ಮೆ ದೀರ್ಘಕಾಲದ ಯೋಜನೆಗೆ ತಲುಪಿ ಮದುವೆಯಲ್ಲಿ ಮುಕ್ತಾಯವಾಗುತ್ತದೆ. ಇಲ್ಲವೇ ಪ್ರೇಮಕ್ಕೆ ದಾಸನಾಗಿ ದೈಹಿಕ ಸಂಪರ್ಕದಲ್ಲಿ ಮುಕ್ತಾಯವಾಗುತ್ತದೆ ಎನ್ನುತ್ತಾರೆ ಪ್ರಸಿದ್ಧ ಮಾನವಶಾಸ್ತ್ರಜ್ಞರು.

    ಪ್ರೇಮಿಗಳ ದಿನಾಚರಣೆ ಏಕೆ ಬೇಕು?
    ಪ್ರೀತಿಗೆ ಯಾರಿಗೆ ಯಾವ ರೀತಿಯಲ್ಲಾದರೂ ಇರಬಹುದು. ಪ್ರೇಮಿಗಳಿಗೆ ಪ್ರೀತಿ ಹುಟ್ಟಿದ ಮೇಲೆ ಆ ಮೊದಲ ಕ್ಷಣವನ್ನ ಸಂಭ್ರಮಿಸಲು ಅದಕ್ಕೂ ಒಂದು ದಿನಬೇಕಲ್ಲವೇ ಅದಕ್ಕಾಗಿಯೇ ಪ್ರತಿ ವರ್ಷ ಫೆ.7ರಿಂದ 14ರ ವರೆಗೆ ಪ್ರೇಮಿಗಳು ಒಂದೊಂದು ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. 1. ಗುಲಾಬಿ ದಿನ, 2. ಪ್ರಪೋಸ್ ಡೇ, 3. ಚಾಕೊಲೇಟ್ ಡೇ, 4. ಟೆಡ್ಡಿ ಡೇ, 5. ಪ್ರಾಮಿಸ್ ಡೇ, 6. ಹಗ್‌ ಡೇ, 7. ಕಿಸ್ ಡೇ, 8. ಲವ್‌ ಡೇ. ಈ ಒಂದು ವಾರಗಳಲ್ಲಿ ಪ್ರತಿಯೊಂದು ದಿನ ಒಂದೊಂದು ವಿಶೇಷ ಉಡುಗೊರೆ ನೀಡಿ ಪ್ರೇಮಿಗಳ ತಮ್ಮ ದಿನವನ್ನ ಆಚರಿಸುತ್ತಾರೆ.

  • ಜಗತ್ತಿನ ವಿವಿಧ ದೇಶಗಳಲ್ಲಿ ಪ್ರೇಮಿಗಳ ದಿನದ ಆಚರಣೆ ವಿಭಿನ್ನ! ಹೇಗೆ?

    ಜಗತ್ತಿನ ವಿವಿಧ ದೇಶಗಳಲ್ಲಿ ಪ್ರೇಮಿಗಳ ದಿನದ ಆಚರಣೆ ವಿಭಿನ್ನ! ಹೇಗೆ?

    ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ʻವ್ಯಾಲೆಂಟೆನ್ಸ್‌ ಡೇʼ ಇನ್ನೇನು ತುದಿಗಾಲಿನಲ್ಲಿದೆ. ಪ್ರೇಮಿಗಳ ದಿನಕ್ಕೆ ಸಾಂಕೇತಿಕವಾಗಿ ಈಗಾಗಲೇ ರೋಸ್‌ ಡೇ, ಪ್ರಪೋಸ್‌ ಡೇ, ಚಾಕೊಲೇಟ್‌ ಡೇ ನಡೆದು ಇದೀಗ ಪ್ರೇಮಿಗಳ ದಿನ ಬಂದೇ ಬಿಟ್ಟಿದೆ.

    ಪ್ರಪಂಚದಾದ್ಯಂತ ಪ್ರೇಮಿಗಳು ಈ ದಿನದಂದು ಹೂವು, ಉಡುಗೊರೆ, ಗ್ರೀಟಿಂಗ್ ಕಾರ್ಡ್‌ಗಳನ್ನು ನೀಡುವ ಮೂಲಕ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಭಾವನೆಯೊಂದಿಗೆ, ಒಬ್ಬರಿಗೊಬ್ಬರಲ್ಲಿರುವ ಕಾಳಜಿ, ಮಮಕಾರ, ನಂಬಿಕೆಯನ್ನು ಭಾವಿಸುತ್ತಾರೆ. ಇದು ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿಯೂ ನಡೆಯುವ ಪ್ರೀತಿ ಹಂಚಿಕೊಳ್ಳುವ ಹಬ್ಬವಾಗಿದೆ.

    ಪ್ರತಿಯೊಂದು ದೇಶದಲ್ಲಿಯೂ ವಿಭಿನ್ನವಾಗಿ ಆಚರಿಸಲಾಗುವ ಈ ಪ್ರೇಮಿಗಳ ಹೇಗಿರುತ್ತದೆ? ವಿಭಿನ್ನ ಸಂಪ್ರದಾಯ, ಸಡಗರದಿಂದ ಕೂಡಿದ್ದು, ಆಶ್ಚರ್ಯಕರವೂ ಆಗಿರುತ್ತದೆ.

    ಫಿನ್‌ಲ್ಯಾಂಡ್
    ಫಿನ್‌ಲ್ಯಾಂಡ್‌ನಲ್ಲಿ ಪ್ರೇಮಿಗಳ ದಿನ ಎಂದರೆ ಸ್ನೇಹಿತರ ದಿನ. ಸ್ನೇಹಿತರನ್ನು ಮೆಚ್ಚಿಸುವುದೇ ಈ ದಿನದ ಮೂಲ ಉದ್ದೇಶ. ಸ್ನೇಹಿತರು, ಪ್ರೀತಿ–ಪಾತ್ರರಿಗೆ ನಮ್ಮ ಪ್ರೀತಿ ಹೇಗಿರುತ್ತದೆ ಎಂದು ಸಣ್ಣ ಉಡುಗೊರೆಗಳು, ಇನ್ನಿತರ ಆಕರ್ಷಣೀಯ ವಸ್ತುಗಳನ್ನು ನೀಡುವ ಮೂಲಕ ಪರಸ್ಪರ ತೋರ್ಪಡಿಸುತ್ತಾರೆ.

    ಜಪಾನ್
    ಪ್ರೇಮಿಗಳ ದಿನದಂದು ಜಪಾನ್‌ನಲ್ಲಿ ಮಹಿಳೆಯರು ತಮ್ಮ ಸಂಗಾತಿಗೆ ಚಾಕೊಲೇಟ್ ಮತ್ತು ಆಭರಣಗಳನ್ನು ನೀಡಿ ಸತ್ಕಾರ ಮಾಡುತ್ತಾರೆ. ಆದರೆ ಜಪಾನ್‌ನಲ್ಲಿ ಪ್ರೇಮಿಗಳ ದಿನ ಫೆಬ್ರುವರಿ 14ಕ್ಕೆ ಮುಗಿಯುವುದಿಲ್ಲ. ಮುಂದುವರಿದು ಮಾರ್ಚ್ 14 ರಂದು ಶ್ವೇತ ದಿನವನ್ನು ಆಚರಿಸಲಾಗುತ್ತದೆ. ಆಗ ಪ್ರೇಮಿಗಳ ದಿನದಂದು ಉಡುಗೊರೆ ಪಡೆದ ಪುರುಷರು ಅದಕ್ಕೆ ಪ್ರತಿಯಾಗಿ ಈ ದಿನದಂದು ವಿಶೇಷ ಉಡುಗೊರೆಯನ್ನು ನೀಡುತ್ತಾರೆ.

    ಡೆನ್ಮಾರ್ಕ್, ನಾರ್ವೆ
    ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ, ಪ್ರೇಮಿಗಳ ದಿನವು ಕೇವಲ ಸಂಗಾತಿಗಳಿಗೆ ಮಾತ್ರವಲ್ಲ ಈ ದಿನದಂದು ಕುಟುಂಬದವರು, ಸ್ನೇಹಿತರು ಕೂಡ ಲವ್‌ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದರಲ್ಲಿ ತಮಾಷೆಯ ಕವನಗಳಿಂದ ಹೃದಯ ತಟ್ಟುವ ಸಂಭಾಷಣೆಗಳವರೆಗೆ ಬರೆಯಲಾಗುತ್ತದೆ. ಕೆಲವರು ಕಾಗದದ ಕಟ್-ಔಟ್‌ಗಳು ಮತ್ತು ಕವಿತೆಗಳನ್ನು ಒಳಗೊಂಡ ಅನಾಮಧೇಯ ಪತ್ರಗಳನ್ನೂ ಕಳುಹಿಸುತ್ತಾರೆ. ಅಲ್ಲಿನ ಭಾಷೆಯಲ್ಲಿ ಇದಕ್ಕೆ ಗೇಕೆಬ್ರೆವ್ ಅಥವಾ ಸ್ನೋಡ್ರಾಪ್ ಲೆಟರ್‌ ಎಂದು ಕರೆಯಲಾಗುತ್ತದೆ. ಈ ಪತ್ರವನ್ನು ಸ್ವೀಕರಿಸುವವರು ಯಾರು ಕಳುಹಿಸಿದ್ದು ಎಂದು ಸರಿಯಾಗಿ ಊಹಿಸಿದರೆ ಅವರು ಈಸ್ಟರ್ ಎಗ್ ಅನ್ನು ಗೆಲ್ಲುತ್ತಾರೆ.(ಒಂದು ರೀತಿಯ ಆಟ)

    ಫಿಲಿಫೈನ್ಸ್‌
    ಫಿಲಿಫೈನ್ಸ್‌ನಲ್ಲಿ ಪ್ರೇಮಿಗಳ ದಿನಾಚರಣೆ ಬಹಳ ವಿಶೇಷ. ಸಾಮೂಹಿಕ ವಿವಾಹಗಳ ಮೂಲಕ ಇಲ್ಲಿ ಅದ್ಧೂರಿಯಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇಲ್ಲಿನ ಸರ್ಕಾರವು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ‘ನನ್ನ ಒಪ್ಪಿಗೆ ಇದೆ‘ ಎಂದು ಹೇಳುವ ಮೂಲಕ ನೂರಾರು ದಂಪತಿ ಒಟ್ಟಿಗೆ ಪ್ರೇಮ ಅಥವಾ ಮದುವೆ ಮೂಲಕ ತಮ್ಮ ಪ್ರೀತಿಯನ್ನು ಮುಂದುವರಿಸುತ್ತಾರೆ.

    ದಕ್ಷಿಣ ಆಫ್ರಿಕಾ
    ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 15 ರಂದು ರೋಮನ್ ಹಬ್ಬ ʻಲುಪರ್ಕಾಲಿಯಾʼ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಪ್ರೇಮವನ್ನು ರಹಸ್ಯವಾಗಿ ಇಟ್ಟುಕೊಳ್ಳುವ ಬದಲು ಈ ದಿನದಂದು ಮಹಿಳೆಯರು ಧೈರ್ಯವಾಗಿ ತಾವು ಇಷ್ಟಪಟ್ಟ ಹುಡುಗನ ಹೆಸರನ್ನು ತೋಳುಗಳ ಮೇಲೆ ಅಂಟಿಸಿಕೊಳ್ಳುತ್ತಾರೆ. ಈ ರೀತಿ ಮಾಡುವುದು ಇಷ್ಟವಿಲ್ಲ ಎಂದವರು ಹೂಗಳು ಹಾಗೂ ಸಣ್ಣ ಉಡುಗೊರೆಗಳ ಮೂಲಕವೂ ಮನದ ಭಾವನೆಗಳನ್ನು ಹಂಚಿಕೊಳ್ಳಬಹುದು.

    ತೈವಾನ್‌
    ಪ್ರೀತಿ ವ್ಯಕ್ತಪಡಿಸುವ ವಿಚಾರದಲ್ಲಿ ತೈವಾನ್‌ನಲ್ಲಿ ಹೂಗಳು ಪ್ರಮುಖ ಪಾತ್ರ ವಹಿಸುತ್ತವೆ. ಪುರುಷರು ಪ್ರೇಮಿಗಳ ದಿನದಂದು ಮತ್ತು ಜುಲೈ 7 ರಂದು ದೊಡ್ಡ ಹೂಗುಚ್ಛಗಳನ್ನು ನೀಡುತ್ತಾರೆ. ಯಾರಾದರೂ 108 ಗುಲಾಬಿಗಳ ಹೂಗುಚ್ಛವನ್ನು ಪಡೆದರೆ ನಿಮಗೆ ಯಾರೋ ಪ್ರಪೋಸ್ ಮಾಡಲು ಸಿದ್ಧವಿದ್ದಾರೆ ಎಂಬ ಅರ್ಥ.

    ದಕ್ಷಿಣ ಕೊರಿಯಾ
    ದಕ್ಷಿಣ ಕೊರಿಯಾದಲ್ಲಿ ಪ್ರೇಮಿಗಳ ದಿನವು ಒಂದು ತಿಂಗಳ ಕಾಲ ನಡೆಯುವ ಆಚರಣೆಯಾಗಿದೆ. ಫೆಬ್ರವರಿ 14 ರಂದು, ಸಂಗಾತಿಗಳು ಚಾಕೊಲೇಟ್‌ಗಳು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ನಂತರ, ಮಾರ್ಚ್ 14 ರಂದು, ಜಪಾನ್‌ನ ಸಂಪ್ರದಾಯದಂತೆ ಅವರು ಶ್ವೇತ ದಿನವನ್ನು ಆಚರಿಸುತ್ತಾರೆ. ಅಂತಿಮವಾಗಿ ಏಪ್ರಿಲ್ 14 ರಂದು ಒಂಟಿ ಇರುವವರು ಕಪ್ಪು ದಿನ ಅಥವಾ ಬ್ಲ್ಯಾಕ್‌ ಡೇಯನ್ನು ಆಚರಿಸುತ್ತಾರೆ.

    ಬ್ರೆಜಿಲ್‌
    ಬ್ರೆಜಿಲ್‌ನಲ್ಲಿ, ಜೂನ್ 12 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ದಿಯಾ ದೋಸ್ ನಮೋರಡೋಸ್ ಎಂದು ಈ ದಿನವನ್ನು ಕರೆಯಲಾಗುತ್ತದೆ. ಅಮೆರಿಕದಲ್ಲಿರುವಂತೆ ಬ್ರೆಜಿಲಿಯನ್ನರು ಲಂಚ್‌, ಡಿನ್ನರ್‌ಗೆ ಹೊರಗೆ ಹೋಗುವುದು, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಥವಾ ತಮ್ಮ ಸಂಗಾತಿಯೊಂದಿಗೆ ವಿಶೇಷ ಡೇಟ್ ನೈಟ್ ಅನ್ನು ಆನಂದಿಸುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ.

    ಈ ರೀತಿ ಪ್ರತಿ ದೇಶದಲ್ಲಿಯೂ ವಿಭಿನ್ನವಾಗಿ ತಮ್ಮ ಪ್ರೀತಿಯ್ನನ್ನು ಹಂಚಿಕೊಳ್ಳುವ ಮೂಲಕ ಪ್ರೇಮಿಗಳ ದಿನ ಆಚರಿಸುತ್ತಾರೆ.

  • ‘ಅವಳು’ ಮರೆಯಲಾಗದ ನೆನಪು

    ‘ಅವಳು’ ಮರೆಯಲಾಗದ ನೆನಪು

    ದು, ತಿಂಡಿ, ಆಟ, ನಿದ್ದೆ, ಸ್ನೇಹ ಎಂದು ತನ್ನದೇ ಲೋಕದಲ್ಲಿದ್ದವಳು ಆಕೆ. ಅದೇ ಕಾಲೇಜು, ಅದೇ ಕ್ಲಾಸ್, ಅದೇ ಫ್ರೆಂಡ್ಸ್ ಅಂತ ಇದ್ದೊಳ ಕಣ್ಣಿಗೆ ಬಿದ್ದ ಹ್ಯಾಂಡ್ಸಮ್ ಹುಡ್ಗ. ಲೆಕ್ಚರ್ಸ್ ಪಾಠ ಮಾಡ್ತಾ ಇದ್ರು ಅವಳ ಕಣ್ಣು ಮಾತ್ರ ಅವನನ್ನು ಹುಡುಕ್ತಾ ಇತ್ತು. ಅವನು ಯಾವಾಗ ಕ್ಲಾಸ್ ಹತ್ರ ಬರುತ್ತಾನೆ ಅಂತಾ ಅವ್ಳು ಕಾಯ್ತಾ ಇರುತ್ತಿದ್ದಳು.

    ಅದ್ಯಾವ ಘಳಿಗೆಯಲ್ಲಿ ಇಬ್ಬರ ನೋಟ ಬೆರೆಯಿತೋ, ಅವರಿಬ್ಬರಿಗೂ ಅರಿವಿಲ್ಲದಂತೆ ಅವರ ಮನದೊಳಗೆ ಪ್ರೇಮದ ಆಗಮನವಾಯಿತು. ಪರಿಚಯವಾದರೂ ಮಾತನಾಡಲು ಅದೇನೋ ಸಂಕೋಚ. ಯಾವಾಗಲೂ ನೋಡುತ್ತಿದ್ದ ಮುಖವಾದರೂ ಮನಸ್ಸಿಗೆ ತುಂಬಾನೇ ಆಪ್ತವೆನಿಸುವ ನೋಟ. ಕಣ್ಣಲ್ಲೇ ಗಂಟಗಟ್ಟಲೆ ಮಾತನಾಡುತ್ತಿದ್ದರು.

    ಅವಳನ್ನು ನೋಡುತ್ತಿದ್ದರೆ ಇವನೊಳಗೆ ಸಣ್ಣ ಭಯ. ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟ ಅನುಭವ. ಹೇಗೋ ಶುರುವಾದ ಸ್ನೇಹ ಪ್ರೇಮಕ್ಕೆ ತಿರುಗಿದ ಪರಿಯ ಬಗ್ಗೆ ಇಬ್ಬರಿಗೂ ಅರಿವಿರಲಿಲ್ಲ. ಆದರೆ ಅವಳೆಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ ಕಾಳಜಿ. ಆಕೆಯನ್ನು ಪ್ರೇಮ ದೇವತೆಯಂತೆ ಪೂಜಿಸುತ್ತಿದ್ದನು. ಒಂದು ಕ್ಷಣ ಅವಳು ಕಾಣಲಿಲ್ಲವೆಂದರೂ ಕಂಗಾಲಾಗುವಂಥ ಮನಸ್ಥಿತಿ ಅವನದ್ದಾಗಿತ್ತು. ಅವರ ದೃಷ್ಟಿಯಲ್ಲಿ ದುಂಡಗಿದ್ದ ಪ್ರಪಂಚ ಹೃದಯಾಕಾರದಲ್ಲಿ ಕಾಣಿಸುತ್ತಿತ್ತು.

    ಶುದ್ಧ ಪ್ರೀತಿಗೆ ಸಾಕ್ಷಿ ಅವಳು, ಪರಿಶುದ್ಧ ಪ್ರೀತಿಗೆ ಅರ್ಥ ಅವಳು. ಅರ್ಥವಾಗದ ಪ್ರೀತಿಯ ವ್ಯಾಕರಣಕ್ಕೆ ನಿಘಂಟವಳು ಎಂದು ಆಕೆಯ ಗುಣಗಾನ ಮಾಡುತ್ತಿದ್ದನು. ಆತ ಆಕೆಯನ್ನು ಮನದರಿಸಿಯಾಗಿ ತನ್ನ ಹೃದಯದೊಳಗೆ ಕೂರಿಸಿಬಿಟ್ಟಿದ್ದ. ಆತನ ಪ್ರಶ್ನೆಗಳಿಗೆ ಆಕೆ ಕಣ್ಣ ಸನ್ನೆಯಲ್ಲೇ ಉತ್ತರಿಸುತ್ತಿದ್ದಳು. ಇಡೀ ಕಾಲೇಜಿನಲ್ಲೇ ಮುದ್ದಾದ ಜೋಡಿ ಎಂದು ಫೇಮಸ್ ಆಗಿದ್ದ ಪ್ರೇಮ ಪಕ್ಷಿಗಳು ತಮ್ಮದೇ ಏಕಾಂತದಲ್ಲಿ ತೇಲಾಡುತ್ತಿದ್ದರು.

    ಒಂದು ದಿನ ಹೀಗೆ ಅವರಿಬ್ಬರು ಕಾಲೇಜು ಮುಗಿಸಿ ನಡೆದು ಹೋಗ್ತಾ ಇದ್ರು. ಅಲ್ಲೇ ರಸ್ತೆ ಪಕ್ಕದಲ್ಲಿ ಆಕೆ ಫ್ರೆಂಡ್ಸ್ ಕಾಣಿಸುತ್ತಾರೆ. ಅವ್ಳು ಖುಷಿಯಿಂದ ಅವಸರದಲ್ಲಿ ರಸ್ತೆ ದಾಟುತ್ತಾಳೆ. ಆ ಹೊತ್ತಿಗೆ ಲಾರಿಯೊಂದು ಎಲ್ಲಿಂದ ಬಂತೋ ಗೊತ್ತಿಲ್ಲ. ಆಕೆಗೆ ಡಿಕ್ಕಿ ಹೊಡೆಯುತ್ತದೆ. ಕಣ್ಣು ಮಿಟುಕಿಸೋದ್ರ ಒಳಗೆ ಯಮ ಸ್ವರೂಪಿ ಲಾರಿ ಆಕೆಯ ಪ್ರಾಣ ಪಕ್ಷಿಯನ್ನೇ ತೆಗೆದುಕೊಂಡಿತ್ತು.

    ಅಲ್ಲೇ ಪಕ್ಕದಲ್ಲಿದ್ದ ಅವನಿಗೆ ಆ ದೃಶ್ಯ ಕಂಡು ಸಿಡಿಲು ಬಡಿದಂತಾಯಿತು. ಆಕೆ ಬಿದ್ದಿದ್ದ ಸ್ಥಳಕ್ಕೆ ಓಡಿ ಹೋಗ್ತಾನೆ. ಆದರೆ ವಿಧಿಯಾಟಕ್ಕೆ ಆಕೆ ಉಸಿರೇ ಚೆಲ್ಲಿದ್ದಳು. ಆಗಷ್ಟೇ ಚಿಗುರೊಡೆದ ಪ್ರೀತಿಯು ಅರಳುವ ಮುನ್ನವೇ ಬಾಡಿಹೋಯಿತು. ಆತನ ಮನದನ್ನೆಯು ಅಷ್ಟರಲ್ಲಾಗಲೇ ಕನಸಿನ ಲಹರಿಯತ್ತ ಪಯಣ ಬೆಳೆಸಿದ್ದಳು. ಯಮನಾಟಕ್ಕೆ ಬಲಿಯಾದ ಪ್ರೀತಿಯ ಕಂಡು ವರುಣ ದೇವನೇ ಕಣ್ಣೀರು ಹಾಕಿದನು.

  • Valentine’s Day – ಫೆ.14ರಂದು ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ?

    Valentine’s Day – ಫೆ.14ರಂದು ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ?

    ಪ್ರೀತಿ ಯಾರಿಗೆ ಯಾವಾಗ ಬೇಕಾದರೂ ಹುಟ್ಟಬಹುದು. ಕೆಲವರಿಗೆ ದೇಹ ಸೌಂದರ್ಯ ಇಷ್ಟ. ಇನ್ನು ಕೆಲವರು ಅವರ ಗುಣಕ್ಕೆ ಫಿದಾ ಆಗುತ್ತಾರೆ, ಅದು ಹುಡುಗ ಆಗಿರಬಹುದು… ಹುಡುಗಿಯೂ ಆಗಿರಬಹುದು. ಕೆಲವರು ಪ್ರೀತಿಯನ್ನು ಬಾಯ್ಬಿಟ್ಟು ಹೇಳಿದ್ರೆ, ಇನ್ನೂ ಕೆಲವರು ಪ್ರೀತಿಗೆ ಕಣ್‌ಸನ್ನೆಯ ನೋಟವೇ ಸಾಕು ಎನ್ನುತ್ತಾರೆ. ಇಂತಹ ಪ್ರೇಮಿಗಳಿಗೂ ತಮ್ಮ ಸಿಹಿ-ಕಹಿ ನೆನಪುಗಳನ್ನು ಅಚರಿಸಿಕೊಳ್ಳಲು ಒಂದು ದಿನ ಬೇಕಲ್ಲವೇ ಅದುವೇ ಫೆ.14ರ ದಿನ.

    ಅದೆಷ್ಟೋ ಪ್ರೇಮಿಗಳಿಗೆ ಈಗಲೂ ಕಾಯೆ ಫೆ.14ರ ದಿನವನ್ನು ವ್ಯಾಲೇಂಟಿನ್ ಡೇ ಎಂದು ಆಚರಿಸುತ್ತಾರೆ ಅಂತ ಗೊತ್ತೇ ಇಲ್ಲ. ಈ ಬಗ್ಗೆ ತಿಳಿಯಬೇಕಾದ್ರೆ ಮುಂದೆ ಓದಲೇಬೇಕು.

    ಆಚರಣೆ ಮಾಡುವುದೇಕೆ?
    ಪ್ರೇಮಿಗಳ ದಿನಾಚರಣೆಯು ಕ್ರಿ.ಶ.270ರಲ್ಲಿ 2ನೇ ಕ್ಲಾಡಿಯಸ್‌ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟೂ ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು.

    ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆ.14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು `ಇಂತಿ ನಿಮ್ಮ ವ್ಯಾಲೇಂಟಿನ್’ ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷದ ಫೆ.14ರ ದಿನವನ್ನು `ವ್ಯಾಲೇಂಟಿನ್ಸ್ ಡೇ’ (ಪ್ರೇಮಿಗಳ ದಿನ) ಎಂದು ಆಚರಣೆ ಮಾಡುತ್ತಾರೆ.

  • ಪ್ರೇಮಿಗಳ ದಿನಕ್ಕೆ ದುಬಾರಿಯಾದ ಗುಲಾಬಿ – ತೋಟದಲ್ಲೇ 1 ರೆಡ್ ರೋಸ್‌ಗೆ 25-30 ರೂ.

    ಪ್ರೇಮಿಗಳ ದಿನಕ್ಕೆ ದುಬಾರಿಯಾದ ಗುಲಾಬಿ – ತೋಟದಲ್ಲೇ 1 ರೆಡ್ ರೋಸ್‌ಗೆ 25-30 ರೂ.

    • ರೈತರಿಗೆ ಜಾಕ್‌ಪಾಟ್‌

    ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನ, ಪ್ರೀತಿಯ ನಲ್ಲ ನಲ್ಲೆಗೆ ಕೆಂಪು ಗುಲಾಬಿ (Red Rose) ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳೋದು ಸಾಮಾನ್ಯ. ಆದ್ರೆ ಇಷ್ಟು ದಿನ 5-6 ರೂಪಾಯಿ ಇರ್ತಿದ್ದ ಕೆಂಪು ಗುಲಾಬಿಯ ಬೆಲೆ ದಿಢೀರ್ ಅಂತ 25 ರಿಂದ 30 ರೂಪಾಯಿ ಆಗಿದೆ.

    ಇದರಿಂದ ಪ್ರೇಮಿಗಳ ಜೇಬಿಗೆ ಕತ್ತರಿಯಾದರೂ ಗುಲಾಬಿ ಬೆಳೆದ ರೈತರಿಗೆ (Farmers) ಝಣ ಝಣ ಕಾಂಚಾಣ ಎನ್ನುವಂತಾಗಿದ್ದು ಚಿಕ್ಕಬಳ್ಳಾಪುರದಲ್ಲಿ ಗುಲಾಬಿ ಬೆಳೆದ ರೈತರು ಖುಷಿಯಾಗಿದ್ದಾರೆ. ಇದನ್ನೂ ಓದಿ: ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು: ಗೂಗಲ್‌ ಎಕ್ಸ್‌ನ ಸೆಬಾಸ್ಟಿಯನ್ ಭವಿಷ್ಯ

    ಹೌದು. ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ. ಈ ದಿನಕ್ಕಾಗಿ ಪ್ರೇಮಿಗಳು ಕಾತುರದಿಂದ ಕಾಯ್ತಿರ್ತಾರೆ. ಪ್ರೀತಿಯ ನಲ್ಲ ನಲ್ಲೆಗೆ ರೆಡ್ ರೋಸ್ ಕೊಟ್ಟು ಲವ್ ಪ್ರಫೋಸ್ ಮಾಡೋಕೆ ತುದಿಗಾಲಲ್ಲಿ ನಿಂತಿರ್ತಾರೆ. ಹಾಗಾಗಿ ಎಲ್ಲೆಲ್ಲೂ ಈಗ ಪ್ರೀತಿಯ ರಾಯಭಾರಿ ರೆಡ್ ರೋಸ್ ಗೆ ಭಾರೀ ಡಿಮ್ಯಾಂಡ್. ಸ್ವತಃ ಗುಲಾಬಿ ಬೆಳೆದ ರೈತರ ತೋಟಗಳಿಗೆ ಭೇಟಿ ಕೊಡ್ತಿರೋ ವರ್ತಕರು ಒಂದು ಗುಲಾಬಿಗೆ 25 ರಿಂದ 30 ರೂಪಾಯಿ ಕೊಟ್ಟು ಖರೀದಿ ಮಾಡ್ತಿದ್ದಾರೆ.

    ಇನ್ನೂ ವರ್ತಕರೇ ತೋಟದಲ್ಲಿ 25 ರಿಂದ 30 ರೂಪಾಯಿ ಕೊಡ್ತಿದ್ದು. ಮಾರುಕಟ್ಟೆಯಲ್ಲಿ ಒಂದು ರೆಡ್ ರೋಸ್ ಬೆಲೆ 50 ರೂಪಾಯಿ ಆದ್ರೂ ಅಶ್ಚರ್ಯಪಡಬೇಕಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯನವ್ರು ರಾಜ್ಯದ ದೀರ್ಘಾವಧಿ ಸಿಎಂ ಆಗಲೆಂದು ಹಾರೈಸ್ತೇನೆ – ಪರಮೇಶ್ವರ್

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದ ರೈತ ಕೃಷ್ಣಾರೆಡ್ಡಿ ಸಹ ಎರಡೂವರೆ ಎಕೆರೆ ಫಾಲಿಹೌಸ್‌ನಲ್ಲಿ ಬಣ್ಣ ಬಣ್ಣದ ಗುಲಾಬಿಗಳನ್ನ ಬೆಳೆದಿದ್ದು ರೋಸ್‌ಗೆ ಭಾರೀ ಬೇಡಿಕೆ ಬಂದಿದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುಲಾಬಿ ಬೆಳೆಯಲಾಗುತ್ತಿದ್ದು ವಿದೇಶಗಳಿಗೂ ರೆಡ್ ರೋಸ್ ಕಳಿಸಲಾಗಿದೆ.

  • Fashion | ಕಪಲ್ ರಿಂಗ್ ಗಿಫ್ಟ್‌ ಕೊಟ್ಟು ಪ್ರೇಮಿಗಳ ದಿನ ಆಚರಿಸಿ

    Fashion | ಕಪಲ್ ರಿಂಗ್ ಗಿಫ್ಟ್‌ ಕೊಟ್ಟು ಪ್ರೇಮಿಗಳ ದಿನ ಆಚರಿಸಿ

    ವ್ಯಾಲೆಂಟೈನ್ಸ್ ಡೇಗೆ (Valentine’s Day) ಇನ್ನೊಂದೇ ದಿನ ಬಾಕಿಯಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಯೋಚನೆ ನೀವು ಮಾಡಿಯೇ ಇರುತ್ತೀರಿ. ಆದರೆ ಏನು ನೀಡುವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇದಕ್ಕೆ ಇರುವ ಒಂದು ಉತ್ತಮ ಆಯ್ಕೆ ಏನು ಅಂದ್ರೆ ಕಪಲ್ ರಿಂಗ್ಸ್.

    ಕೇವಲ ಯಾವುದೋ ಒಂದು ಸಾಮಾನ್ಯ ಉಂಗುರ ನಿಮ್ಮ ಹುಡುಗ ಅಥವಾ ಹುಡುಗಿಗೆ ನೀಡಿದರೆ ಚೆನ್ನಾಗಿರುತ್ತಾ? ಸ್ವಲ್ಪ ಯೋಚಿಸಿ. ನೀವು ನೀಡುವ ಉಡುಗೊರೆ ವಿಶೇಷವಾಗಿದ್ದರೆ ಮಾತ್ರವೇ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಬಹುದು ಅಲ್ಲವೇ? ಇತ್ತೀಚೆಗೆ ಕೆಲವು ಟ್ರೆಂಡ್‌ನಲ್ಲಿರುವ ಕಪಲ್ ರಿಂಗ್‌ಗಳ (Couple Rings) ಡಿಸೈನ್ ಹೀಗಿವೆ. ಇವುಗಳಲ್ಲಿ ನಿಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಆಯ್ಕೆ ಮಾಡಿ ಅಂತಹದ್ದನ್ನೇ ಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಅವರನ್ನು ಖುಷಿಪಡಿಸಬಹುದು. ಈಗಿನ ಟ್ರೆಂಡ್‌ನಲ್ಲಿರುವ ವಿವಿಧ ಡಿಸೈನ್‌ನ ಕಪಲ್ ರಿಂಗ್ಸ್ ಹೀಗಿವೆ…

    ಕಿಂಗ್ ಆಂಡ್ ಕ್ವೀನ್ ಕಪಲ್ ರಿಂಗ್ಸ್:
    ರಾಜ ಹಾಗೂ ರಾಣಿಯರ ಕಿರೀಟದ ವಿನ್ಯಾಸವಿರುವ ಉಂಗುರಗಳು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. ಪ್ರೇಮಿಗಳ ದಿನದಂದು ಇದನ್ನು ನಿಮ್ಮನ್ನು ಇಷ್ಟ ಪಡುವವರಿಗೆ ನೀಡಿದರೆ ಅವರು ಖಂಡಿತವಾಗಿಯೂ ವಿಶೇಷ ಅನುಭವ ಪಡೆಯುತ್ತಾರೆ. ನಿಜ ಜೀವನದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ರಾಜ ಅಥವಾ ರಾಣಿಯಂತೆ ನೋಡುತ್ತೀರಿ ಎಂಬ ಅರ್ಥವನ್ನೂ ಇದು ನೀಡುತ್ತದೆ.

    ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್:
    ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜೋಡಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವ ಜೋಡಿ ಉಂಗುರಗಳೆಂದರೆ ಅದು ಮ್ಯಾಗ್ನೆಟಿಕ್ ಹಾಫ್ ಹಾರ್ಟ್ ಕಪಲ್ ರಿಂಗ್ಸ್. ಎರಡು ಉಂಗುರಗಳನ್ನು ಒಟ್ಟಿಗೆ ತಂದಾಗ ಅಯಸ್ಕಾಂತದ ಸಣ್ಣ ತುಂಣುಕಿನಿಂದಾಗಿ ಉಂಗುರಗಳು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಅದೊಂದು ಸಂಪೂರ್ಣ ಹೃದಯದ ಆಕಾರ ಪಡೆಯುತ್ತದೆ. ಉಂಗುರಗಳನ್ನು ಬಿಡಿಸಿದಾಗ ಸಂಪೂರ್ಣ ಹೃದಯವೂ ಬಿಡಿಸಿಕೊಳ್ಳುತ್ತದೆ. ಪ್ರೀತಿಸುವವರು ಒಟ್ಟಾಗಿದ್ದಾಗ ಮಾತ್ರವೇ ಸಂಪೂರ್ಣವಾಗಲು ಸಾಧ್ಯ ಎಂಬ ವಿಶೇಷ ಸಂದೇಶ ಈ ಉಂಗುರಗಳು ನೀಡುತ್ತವೆ. ವಿಶೇಷ ಸಂದೇಶ ಸಾರುವ ಜೋಡಿ ಉಂಗುರಗಳನ್ನು ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆ ನೀಡುವುದರಿಂದ ಅವರೂ ಸಂತೋಷ ಪಡುತ್ತಾರೆ.

    ಹೆಸರು ಬರೆದ ಜೋಡಿ ಉಂಗುರಗಳು:
    ಉಂಗುರಗಳಲ್ಲಿ ಅಂದದ ಫಾಂಟ್‌ನಲ್ಲಿ ವೈಯಕ್ತಿಕ ಹೆಸರನ್ನು ಕೆತ್ತಿಸಿ, ಅದನ್ನು ಉಡುಗೊರೆ ನೀಡಿದರೆ ಸಂತೋಷ ಯಾರಿಗೆ ತಾನೇ ಆಗಲ್ಲ? ಉಡುಗೊರೆ ಪಡೆದುಕೊಂಡವರು ನೀಡಿದವರ ಹೃದಯದಲ್ಲಿ ಎಷ್ಟು ಮುಖ್ಯವಾದ ಸ್ಥಾನ ಕೊಟ್ಟಿದ್ದಾರೆ ಎಂಬುದು ಮನದಟ್ಟಾಗುವುದು ಖಂಡಿತಾ.

    ದೂರದ ಜೋಡಿಗಳ ಉಂಗುರ:
    ನಿಮ್ಮ ಪ್ರೀತಿ ಲಾಂಗ್ ಡಿಸ್ಟೆನ್ಸ್‌ನದ್ದಾ? ಹಾಗಿದ್ದರೆ ಈ ಉಂಗುರಗಳು ನಿಮಗಾಗಿಯೇ ಹೇಳಿ ಮಾಡಿಸಿರುವಂತಹವುಗಳು. ಜೋಡಿಗಳು ದೂರವಿದ್ದರೂ ಹೃದಯದಲ್ಲಿ ವಿಶೇಷ ಸ್ಥಾನ ನೀಡುವುದು ಸಾಮಾನ್ಯದ ಮಾತಲ್ಲ. ಅದನ್ನು ನಿಭಾಯಿಸುವುದು ಅಷ್ಟೇ ಕಷ್ಟಕರ. ಹೀಗಿರುವಾಗ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಭೂಮಿಯ ನಕ್ಷೆಯ ಚಿತ್ರವಿರುವ ಉಂಗುರವನ್ನೇ ಉಡುಗೊರೆ ಕೊಡಿ. ಅದನ್ನು ತೊಟ್ಟುಕೊಂಡವರು ಪ್ರತಿಬಾರಿ ಉಂಗುರವನ್ನು ಗಮನಿಸಿದಾಗ ನಿಮ್ಮನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ.

    ಜೋಡಿಗಳಿಗೆ ಲವ್ ಬರ್ಡ್ಸ್ ಉಂಗುರಗಳು:
    ನೀವು ಪರಿಸರ ಪ್ರೇಮಿಯೇ? ಪ್ರಾಣಿ-ಪಕ್ಷಿಗಳೆಂದರೆ ನಿಮಗೆ ಹಾಗೂ ನಿಮ್ಮ ಪ್ರೇಮಿಗೆ ಇಷ್ಟವೇ? ಹಾಗಿದ್ದರೆ ಲವ್ ಬರ್ಡ್ಸ್ ಚಿತ್ರವಿರುವ ಉಂಗುರಗಳನ್ನು ನೀಡಿ. ನಿಮ್ಮ ಪ್ರೀತಿ ಪಾತ್ರರು ಇದನ್ನು ಜೀವನದ ಅಮೂಲ್ಯ ಆಭರಣವೆಂದುಪರಿಗಣಿಸುತ್ತಾರೆ.

    ಹೆಸರಿನ ಮೊದಲ ಅಕ್ಷರದ ಕಪಲ್ ರಿಂಗ್‌ಗಳು:
    ಹೆಸರಿನ ಮೊದಲ ಅಕ್ಷರ ಹೊಂದಿರುವ ಕಪಲ್ ರಿಂಗ್ಸ್ ಹಿಂದಿನಿಂದಲೂ ಟ್ರೆಂಡ್ ಹುಟ್ಟಿಸಿರುವ ಉಂಗುರಗಳೇ ಆಗಿವೆ. ಆದರೆ ಅವುಗಳ ವಿನ್ಯಾಸಗಳಲ್ಲಿ ಬದಲಾವಣೆಗಳು ಬಂದಿವೆ. ಹೆಸರಿನ ಮೊದಲ ಅಕ್ಷರದ ಉಂಗುರಗಳು ಟ್ರೆಂಡಿಯಾಗಿ ಕಾಣಿಸುತ್ತವೆ. ಫ್ಯಾಶನ್‌ಪ್ರೇಮಿಗಳು ಈ ವಿನ್ಯಾಸದ ಉಂಗುರಗಳ ಉಡುಗೊರೆ ನೀಡುವುದು ಬೆಸ್ಟ್ ಚಾಯ್ಸ್.

    ಮ್ಯೂಜಿಕಲ್ ನೋಟ್‌ನ ಜೋಡಿ ಉಂಗುರಗಳು:
    ಸಂಗೀತವನ್ನು ಇಷ್ಟಪಡದವರು ಯಾರಿದ್ದಾರೆ? ಇಷ್ಟ ಇಲ್ಲ ಎನ್ನುವವರನ್ನು ಹುಡುಕುವುದೂ ಕಷ್ಟ. ಸಂಗೀತವನ್ನು ಇಷ್ಟ ಪಡುವ ಜೋಡಿಗಳು ತಮ್ಮ ಪ್ರೇಮಿಗಳಿಗೆ ಸಂಗೀತದ ಟಿಪ್ಪಣಿಗಳನ್ನು ನಮೂದಿಸಿರುವ ವಿನ್ಯಾಸದ ಉಂಗುರ ನೀಡಿದರೆ ಚೆನ್ನಾಗಿರುತ್ತದೆ.

    ನಿಮಗೂ ನಿಮ್ಮ ಪ್ರೇಮಿಗೂ ಈ ರೀತಿಯಾಗಿ ತಮ್ಮ ತಮ್ಮ ಟೇಸ್ಟ್‌ಗೆ ತಕ್ಕಂತಹ ಉಂಗುರಗಳನ್ನು ಉಡುಗೊರೆ ನೀಡಿ, ಈ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವಾಗಿಸಿಕೊಳ್ಳಿ.

  • 6ನೇ ಕ್ಲಾಸ್ ನಲ್ಲಿ ಲವ್: ನಟಿ ಹನಿ ರೋಸ್ ಬಿಚ್ಚಿಟ್ಟ ಪ್ರೇಮ್ ಕಹಾನಿ

    6ನೇ ಕ್ಲಾಸ್ ನಲ್ಲಿ ಲವ್: ನಟಿ ಹನಿ ರೋಸ್ ಬಿಚ್ಚಿಟ್ಟ ಪ್ರೇಮ್ ಕಹಾನಿ

    ಪ್ರೇಮಿಗಳ ದಿನಾಚರಣೆ (Valentine’s Day) ಸಂದರ್ಭದಲ್ಲಿ ತಮ್ಮ ಜೀವನದ ಫಸ್ಟ್ ಲವ್ ಬಗ್ಗೆ ಹಂಚಿಕೊಂಡಿದ್ದಾರೆ ದಕ್ಷಿಣದ ಖ್ಯಾತ ನಟಿ ಹನಿ ರೋಸ್. ತಾವು 6ನೇ ಕ್ಲಾಸ್ ನಲ್ಲಿ ಇರುವಾಗಲೇ 10ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನೊಬ್ಬ ತಮಗೆ ಲವ್ ಲೆಟರ್ (Love Letter) ಕೊಟ್ಟಿದ್ದ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

    ಹನಿ ರೋಸ್ ಈ ಹೇಳಿಕೆ ನೀಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಹರಿದು ಬಂದಿವೆ. ಇದು ಹೇಗೆ ಸಾಧ್ಯ? ಅದು 6ನೇ ತರಗತಿಯಲ್ಲಿ ಎಂದು ಹಲವರು ಕೇಳಿದ್ದಾರೆ. ಹನ್ನೆರಡನೇ ವಯಸ್ಸಲ್ಲಿ ಲವ್ ಲೆಟರ್ ಸಿಕ್ಕಿದ್ದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ಹನಿ ರೋಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಗಳನ್ನು ಹಾಕುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅವರು ನೆಗೆಟಿವ್ ಕಾಮೆಂಟ್  ಮತ್ತು ಅಶ್ಲೀಲ ಕಾಮೆಂಟ್ ಹಾಕುವವರ ವಿರುದ್ಧ ಧ್ವನಿ ಎತ್ತಿದ್ದರು. ಈ ರೀತಿಯ ಕಾಮೆಂಟ್ ಮಾಡುವವರು ಅದನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇವರ ಸಲುವಾಗಿ ಸಮಾಜವನ್ನು ದೂಷಿಸುವ ಅಗತ್ಯವಿಲ್ಲ ಎಂದಿದ್ದರು. ತಮ್ಮ ಫೋಟೋ ಮತ್ತು ಫೋಟೋಗೆ ಕೆಟ್ಟದ್ದಾಗಿ ಕಾಮೆಂಟ್ ಹಾಕುವವರ ಬಗ್ಗೆ ಬೇಸರವನ್ನೂ ವ್ಯಕ್ತ ಪಡಿಸಿದ್ದರು.

    ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹನಿ ರೋಸ್ (Honey Rose). ಇವರು ಮಾಡಿದ ಸಿನಿಮಾಗಳಿಗಿಂತ ಇವರ ಹಾಟ್ ಹಾಟ್ ಫೋಟೋಗಳು ಸಖತ್ ಸದ್ದು ಮಾಡುತ್ತವೆ. ನಡು ವಯಸ್ಸಿಗೆ ಹತ್ತಿರವಾಗಿರುವ ಹನಿ ಸೌಂದರ್ಯದ (Beauty) ಬಗ್ಗೆ ಹಲವರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಸ್ಪಷ್ಟನೆ ಕೊಟ್ಟರೂ ಈ ಪ್ರಶ್ನೆಗಳು ಮಾತ್ರ ನಿಲ್ಲದೇ ಇರುವುದಕ್ಕೆ ಹನಿಗೆ ಬೇಸರವಿದೆಯಂತೆ.

    ಮಾನಸ್ಟರ್, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ (Veera Simha Reddy) ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ (Balayya) ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ. ನೋಡಲು ಫಿಟ್ ಮತ್ತು ಮುದ್ದಾಗಿರೋ ಹನಿ ರೋಸ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅದಕ್ಕೆ ಅವರು ಇಷ್ಟು ಮುದ್ದಾಗಿ ಕಾಣ್ತಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡುತ್ತಲೇ ಇರುತ್ತದೆ.

    ಸೋಷಿಯಲ್ ಮೀಡಿಯಾದಲ್ಲಿ ಅವರ ಬೋಲ್ಡ್ ಫೋಟೋಗಾಗಿಯೇ ಕಾಯುವ ಫ್ಯಾನ್ಸ್ ಇದ್ದಾರೆ. ಹನಿ ರೋಸ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದು, ಇದೇ ಅವರ ಸೀಕ್ರೆಟ್ ಎಂದು ಅನೇಕರು ಆರೋಪಿಸಿದ್ರು. ನಟಿ ತಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ ಎಂದು ಸ್ಪಷ್ಟನೆ ಕೂಡ ನೀಡಿದ್ದರು. ನನಗೆ ದೇವರು ಈ ಅಂದ ಕೊಟ್ಟಿದ್ದು ಬಿಟ್ರೆ ಬೇರೇನೂ ಇಲ್ಲ ಎಂದಿದ್ದರು. ನಾನು ಯಾವುದೇ ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹೆಚ್ಚಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

     

    ಸದ್ಯ ‘ರಾಚೆಲ್’ (Rachel) ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಿನ್ನವಾಗಿರುವ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ನಟಿ ಫಸ್ಟ್ ಲುಕ್ ಕೂಡ ಅಭಿಮಾನಿಗಳ ಗಮನ ಸೆಳೆದಿದೆ. ಕನ್ನಡ, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ರಾಚೆಲ್ ಸಿನಿಮಾ ಮೂಡಿ ಬರಲಿದೆ.

  • ಸೌದಿ ಸುಂದರಿಯಿಂದ ಕವಿಯಾದೆ..!

    ಸೌದಿ ಸುಂದರಿಯಿಂದ ಕವಿಯಾದೆ..!

    ಅಂದು ಸ್ನಾತಕೋತ್ತರ ಪದವಿಯ ದ್ವಿತೀಯ ವರ್ಷದ ಮೊದಲ ದಿನ. ಎತ್ತ ನೋಡಿದರೂ, ಸೀರೆಯುಟ್ಟ ಯುವತಿಯರು, ಪಂಚೆ, ಶಲ್ಯ ಧರಿಸಿದ ಹುಡುಗರು. ನಾನೆಲ್ಲೋ ಯಾವುದೋ ಕಲ್ಯಾಣ ಮಂಟಪಕ್ಕೆ ಕಾಲಿಟ್ಟೆನೋ ಎನ್ನುವಂತೆ ಭಾಸವಾಗುತ್ತಿತ್ತು. ಅಷ್ಟರಲ್ಲಿ ಗುಂಪಿನಲ್ಲಿದ್ದ ನಮ್ಮ ಸ್ನೇಹಿತರು ಶಿಳ್ಳೆ ಹೊಡೆದು ನನ್ನನ್ನು ಕೂಗಿದರು. ದ್ವಿತೀಯ ವರ್ಷದ ಮೊದಲ ದಿನದ ಸಂಭ್ರಮ ಕೊಂಡಾಡಲು ಸ್ನೇಹಿತರ ಜೊತೆ ಸೇರಿದಾಕ್ಷಣ ನಿಂತ ಜಾಗದಲ್ಲಿ ಕಾಲುಗಳು ನಿಲ್ಲಲಿಲ್ಲ. ಯಾವುದೋ ಅರ್ಥವಾಗದ ಇಂಗ್ಲಿಷ್ ಗೀತೆಗಳಿಗೆ, ಬಾರದಿದ್ದರೂ ಡಾನ್ಸ್ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದೆವು.

    ಎರಡನೇ ದಿನದಿಂದ ತರಗತಿ ಆರಂಭವಾಯಿತು. ಅಂದು ನಾನು ಕಾಲೇಜು ಕ್ಯಾಂಟೀನ್‌ನಲ್ಲಿ ಕಾಫಿ ಕುಡಿದು 2ನೇ ವರ್ಷದಲ್ಲಿ ತರಗತಿ ಹೇಗಿರುತ್ತದೆ? ಅನ್ನೋದ್ರ ಬಗ್ಗೆ ವಿಜ್ಞಾನಿಗಳಂತೆ ಚರ್ಚಿಸುತ್ತಲೇ ತರಗತಿಯತ್ತ ಸ್ನೇಹಿತರೊಟ್ಟಿಗೆ ಹೆಜ್ಜೆ ಹಾಕಿದೆ. ನಾವು ಹೋಗುವಷ್ಟರಲ್ಲಿ ತರಗತಿ ಆರಂಭವಾಗಿತ್ತು. ಆದ್ದರಿಂದ ಬಾಗಿಲ ಬಳಿಯಲ್ಲಿ ನಿಂತು ಗುರುಗಳಿಗೆ ಕ್ಷಮೆ ಕೇಳಿ ಒಳಗೆ ಎಂಟ್ರಿ ಹಾಕೋಣ ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿ ಮಿಂಚಿನ ಬೆಳಕೊಂದು ಕಣ್ಣಿಗೆ ಅಪ್ಪಳಿಸಿದಂತೆ ಭಾಸವಾಯ್ತು. ಮೊದಲೇ ನನಗೆ ಕುತೂಹಲ ತಡೆಯಲಾಗಲಿಲ್ಲ. ಹಾಗಾಗಿ ತಕ್ಷಣವೇ ಹಿಂಬಾಲಿಸಿ ಹೊರಟೆ. ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ… ಪ್ರೇಮ ಪಕ್ಷಿಗಳಿಗೆ ಕನಸಿನ ದಿನ

    ಹಿಂಬಾಲಿಸಿ ಹೋಗುವಾಗ ನನ್ನ ಗೆಳೆಯನೊಬ್ಬ ʻಅದು ನಮ್ಮ ಜೂನಿಯರ್ ಹುಡುಗಿ ಕಣೋ’ ಅಂತ ಕೂಗಿಬಿಟ್ಟ. ಆಗ ಆಕೆ ನನ್ನನ್ನು ನೋಡಲು ತಿರುಗಿದ ರೀತಿ ಈಗಲೂ ನೆನಪಾಗುತ್ತದೆ. ಹೊಂಬೆಳಕಿನಂತಿದ್ದ ಮುಖಕ್ಕೆ ಕಿರೀಟದಂತಿದ್ದ ದುಪ್ಪಟ್ಟ ಕೊಂಚ ಸರಿಸಿ ತಿರುಗಿದಳು. ಅಬ್ಬಬ್ಬಾ! ಆಕ್ಷಣ ನನ್ನನ್ನು ನಾನೇ ಮರೆತುಬಿಟ್ಟೆ. ಹೊಳೆಯುತ್ತಿದ್ದ ಆಕೆಯ ಕಣ್ಣುಗಳನ್ನು ಕಂಡು ಮನಸ್ಸು ಗಾಳಿಯಲ್ಲಿ ಹಾರಾಡುತ್ತಿತ್ತು. ಪೂರ್ಣ ಚಂದಿರನಂತಿದ್ದ ಸೌದಿ ಅರೇಬಿಯಾ ಸುಂದರಿಯ ಮುಖ ನೋಡಿದೊಡನೆ ʻಕಮಲ ನಯನ ಕೋಮಲಾಂಗಿ, ನೀ ಅಂದದ ಬಿನ್ನಾಣ ಗಿತ್ತಿ, ಪ್ರೀತಿ ಪ್ರೇಮ ನನ್ನ ಮನೋವೃತ್ತಿʼ ಎಂದು ನನ್ನಲ್ಲೇ ಕವಿತೆಯ ಸಾಲುಗಳು ಹುಟ್ಟಲು ಪ್ರಾರಂಭಿಸಿದವು.

    ಕೊನೆಗೆ ನಾನು ತರತಿಯಲ್ಲಿ ಕೂರಬೇಕಾದ ನಾನು ಗುರುಗಳಿಗೆ ಸಾರಿ ಹೇಳಿದ್ರೆ ಆಯ್ತು ಅಂತ, ಆಕೆಯನ್ನ ಹಿಂಬಾಲಿಸಿ ಕ್ಯಾಂಟೀನ್‌ ಕಡೆಗೆ ಹೊರಟೆ. ಆದ್ರೆ ಆಕಸ್ಮಿಕವೋ ಏನೋ ಗೊತ್ತಿಲ್ಲ. ಮತ್ತೆ ಆ ಸುಂದರಿ ಅಲ್ಲಿಯೇ ಪ್ರತ್ಯಕ್ಷ. ನನ್ನ ಜೂನಿಯರ್‌ ಬೇರೆ ಆಕೆಯನ್ನ ಕರೆದು ನನ್ನ ಎದುರುಬದುರಾಗಿಯೇ ಕೂರಿಸಿದ. ಮತ್ತೆ ಆಕೆಯ ಕಣ್ಣುಗಳು ನನ್ನನ್ನು ಸೆಳೆಯುತ್ತಿದ್ದವು. ಈ ನಡುವೆ ಸಪ್ಲೇಯರ್ ಗಂಟೆಗೆ ನಾಲ್ಕು ಬಾರಿ ಬಂದು ‘ವಾಟ್ ಯು ವಾಂಟ್’ ಸ‌ರ್ ಅಂತಿದ್ದ. ನನಗೆ ಆಕೆಯೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲೇ ಇಲ್ಲ. ಅಂದಿನಿಂದ ಶುರು ಮಾಡ್ಡೆ ನೋಡಿ ಕವನ ಬರೆಯೋಕೆ. ನನ್ನ ಸ್ನೇಹಿತ ಕೊಟ್ಟ ‘ಅವಳೆಂದರೆ’ ಟೈಟಲ್‌ ಅನ್ನೇ ಇಟ್ಕೊಂಡು ಇವಳ ಮೇಲೆ ಕವಿತೆ ಬರೆಯೋಕೆ ಶುರು ಮಾಡ್ದೆ. ಬರೆಯಲು ಶುರು ಮಾಡಿದ ಒಂದೆರಡು ದಿನಗಳಲ್ಲೇ ನನ್ನ ಫಜೀತಿ ನೋಡೊಕಾಗದೇ ನನ್ನ ಜೂನಿಯರ್ಸ್ ಕೂಡ ಸಹಾಯ ಮಾಡಿದ್ರು. ಸ್ವಲ್ಪ ದಿನ ʻಹಾಯ್‌, ಹಲೋ, ಹ್ಯಾಡ್‌ ಯುವರ್‌ ಕಾಫಿ, ಟೀ, ಗುಡ್‌ಮಾರ್ನಿಂಗ್‌, ಗುಡ್‌ನೈಟ್‌ʼ ಇಷ್ಟರಲ್ಲೇ ಕಾಲ ಕಳೆಯುತ್ತಿತ್ತು. ಇದನ್ನೂ ಓದಿ: ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!

    ಯಾಕಂದ್ರೆ ಆಕೆ ಮಾತನಾಡ್ತಿದ್ದು ನನಗೆ ಅರ್ಥ ಆಗ್ತಿರಲಿಲ್ಲ. ನನ್ನ ಕನ್ನಡವಂತೂ ಆಕೆಗೆ ಏನೂ ಅಂತಾನೂ ಗೊತ್ತಾಗುತ್ತಿರಲಿಲ್ಲ. ನೀರಿಳಿಯದ ಗಂಟಲಿಗೆ ಕಡುಬು ತುರುಕಿದಂತಾಗುತ್ತಿತ್ತು ನನ್ನ ಸ್ಥಿತಿ. ಕೊನೆಗೆ ನನ್ನ ಸ್ನೇಹಿತರು ನನ್ನ ಕೌತುಕ ನೋಡಲಾರದೇ ಅವಳು ಮಾತನಾಡುತ್ತಿದ್ದುದನ್ನು ತಕ್ಷಣಕ್ಕೆ ನನಗೆ ಭಾಷಾಂತರಿಸುತ್ತಿದ್ದರು. ನಾನು ಹೇಳಿದ್ದನ್ನು ಅವಳಿಗೆ ಅನುವಾದ ಮಾಡ್ತಿದ್ರು. ಇದರಿಂದ ಆಕೆ ಮಾತನಾಡುವುದು ಅರ್ಥ ಮಾಡಿಕೊಳ್ಳುವುದು ತುಂಬಾನೆ ಸುಲಭವಾಯ್ತು.

    ಅವಳ ಭಾಷೆ ಅರ್ಥವಾಗುತ್ತಿದ್ದಂತೆ ನನಗೆ ಗೊತ್ತಿಲ್ಲದಂತೆ ಕವಿತೆಗಳು ನದಿಯಂತೆ ಹರಿಯಲಾರಂಭಿಸಿದವು. ‘ಅವಳೆಂದರೆ ತುಂತುರು ಹನಿಯಂತೆ, ಮುಟ್ಟಲು ಹೋದರೆ ಕೈಗೆ ಸಿಗದವಳು, ದಿಟ್ಟಿಸಿ ನೋಡಿದರೆ ಕಣ್ಣಿಗೆ ಕಾಣದವಳು, ಕಲ್ಪನೆಯಲ್ಲಿ ಹಾಗೊಮ್ಮೆ, ಹೀಗೊಮ್ಮೆ ಬಂದು ಹೋಗುವವಳ ಏನೆಂದು ಕರೆಯಲಿ, ಎಲ್ಲೆಂದು ಹುಡುಕಲಿ’ ಎಂದು ಸಾಲು ಸಾಗರದಂತೆ ಹರಿಯಿತು. ಕಾಲೇಜು ದಿನದ ಕೊನೆಯ ಫೇರ್ವೆಲ್‌ ಕಾರ್ಯಕ್ರಮದಲ್ಲಂತೂ ನಾನು ಆಕೆಯ ಎದುರೇ ಕುಳಿತು ಸಂಜೆವರೆಗೂ ಆಕೆಯ ಮುಖವನ್ನೇ ನೋಡುತ್ತಿದ್ದೆ. ಆಕೆ ನನಗಿಂತಲೂ ಚೆನ್ನಾಗಿರೋ ಹುಡ್ಗಿರಿದ್ದಾರೆ ನೋಡ್ರಿ ಎಂದು ಇಂಗ್ಲಿಷ್‌ನಲ್ಲಿ ಹೇಳುತ್ತಿದ್ದಳು. ನನ್ನ ಕಣ್ಣುಗಳಂತೂ ಆಕೆಯನ್ನು ಬಿಟ್ಟು ಮತ್ತೊಬ್ಬರನ್ನು ನೋಡಲೇ ಇಲ್ಲ. ಆದ್ರೆ ವಿಧಿಲಿಖಿತ ಅಷ್ಟೇ ಅನ್ನಿಸುತ್ತೆ. ನಾನು ಕೆಲಸ ಸಿಕ್ಕ ಸ್ವಲ್ಪ ದಿನಗಳಲ್ಲೇ ಆಕೆಗೆ ಪ್ರಪೋಸ್‌ ಮಾಡೋಣ ಅಂದುಕೊಂಡೆ. ಅದೇ ವೇಳೆ, ನನಗೆ ಕರೆ ಮಾಡಿ ಆಕೆಯ ಮದುವೆಯ ಆಹ್ವಾನವಿತ್ತಳು. ಅಲ್ಲಿಗೆ ಮೊದಲ ಕ್ರಶ್‌ ಪ್ರೇಮದ ಅಧ್ಯಾಯ ನನ್ನೊಳಗೇ ಮುಕ್ತಾಯವಾಯ್ತು. ಇದನ್ನೂ ಓದಿ: ನೈಜ ಪ್ರೀತಿ ಅಂದ-ಚಂದ ನೋಡಿ ಹುಟ್ಟಲ್ಲ..

    – ಮೋಹನ್‌ ಬಿ.ಎಂ

  • ವ್ಯಾಲೆಂಟೈನ್‌ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ವ್ಯಾಲೆಂಟೈನ್‌ ದಿನದ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

    ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಯಶ್- ರಾಧಿಕಾ ಪಂಡಿತ್ (Radhika Pandit) ಪ್ರೇಮಿಗಳ ದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ. ವ್ಯಾಲೆಂಟೈನ್ ದಿನದ ಸುಂದರ ಫೋಟೋಗಳನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ.‌ ‘ಕೆಜಿಎಫ್‌ 2’ (KGF 2) ನಟನ ಫ್ಯಾಮಿಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಫೆ.14 ಪ್ರೇಮಿಗಳ ಪಾಲಿಗೆ ವಿಶೇಷ ದಿನ. ಅದರಲ್ಲಿ ಪ್ರೀತಿಸಿ ಮದುವೆಯಾಗಿರುವ ಯಶ್ (Yash) ಮತ್ತು ರಾಧಿಕಾ ದಂಪತಿಗೂ ವಿಶೇಷ ದಿನ ಎಂದು ಹೇಳಿದರೆ ತಪ್ಪಾಗಲಾರದು. ಚಂದನವನದ ಆದರ್ಶ ಜೋಡಿ ಯಶ್ ಮತ್ತು ರಾಧಿಕಾ ಇಂದು ಲವ್ಲಿ ಆಗಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದ್ದಾರೆ. ಇದನ್ನೂ ಓದಿ:ಆಪ್ರೋ ಲುಕ್ ನಲ್ಲಿ ಧ್ರುವ ಸರ್ಜಾ: ಗೋವಾದಲ್ಲಿ ಕಾಣಿಸಿಕೊಂಡ ನಟ

    ದೂರದ ಊರಿನಲ್ಲಿ ಯಶ್ ಜೋಡಿ ತಮ್ಮ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಗೋಡೆಯ ಮೇಲೆ ಹಾರ್ಟ್ ಬಲೂನ್ ಹಾಕಿ ಕಲರ್‌ಫುಲ್ ಡ್ರೆಸ್ ಧರಿಸಿ ಮಿಂಚಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರು ಕಣ್ಣಿಗೆ ಕುಲ್ಲಿಂಗ್ ಗ್ಲ್ಯಾಸ್ ತೊಟ್ಟು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ನನ್ನ ಶಾಶ್ವತ ಪ್ರೇಮಿಗಳೊಂದಿಗೆ ವ್ಯಾಲೆಂಟೈನ್ಸ್‌ ಡೇ ಲಂಚ್‌ ಎಂದು ನಟಿ ಕ್ಯಾಪ್ಷನ್‌  ನೀಡಿದ್ದಾರೆ.

    ಇನ್ನೂ ‘ಟಾಕ್ಸಿಕ್’ (Toxic) ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಯಶ್ ತಮ್ಮ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಯಶ್ ಪಕ್ಕಾ ಫ್ಯಾಮಿಲಿಮೆನ್ ಎಂಬುದು ಗೊತ್ತಿರುವ ವಿಚಾರ. ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ಕೊಡೋದ್ರಲ್ಲಿ ಯಶ್ ಯಾವತ್ತೂ ಹಿಂದೆ ಬಿದ್ದಿಲ್ಲ.

    ರಾಧಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರೋದು ನೋಡಿ ಫ್ಯಾನ್ಸ್, ಅತ್ತಿಗೆ ಯಾವಾಗ ಮತ್ತೆ ಸಿನಿಮಾ ಮಾಡ್ತೀರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿಗೆ ಪ್ರಶ್ನೆ ಮಾಡಿದ್ದಾರೆ. ಸದ್ಯದಲ್ಲೇ ನಟಿ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಕೂಡ ಇದೆ. ರಾಧಿಕಾ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

  • ವ್ಯಾಲೆಂಟೈನ್ಸ್ ಡೇ… ಪ್ರೇಮ ಪಕ್ಷಿಗಳಿಗೆ ಕನಸಿನ ದಿನ

    ವ್ಯಾಲೆಂಟೈನ್ಸ್ ಡೇ… ಪ್ರೇಮ ಪಕ್ಷಿಗಳಿಗೆ ಕನಸಿನ ದಿನ

    ವ್ಯಾಲೆಂಟೈನ್ಸ್ ಡೇ (Valentines Day) ಪ್ರೀತಿಯ ಅನ್ವೇಷಣೆಯ ಸಮಯ. ಇಡೀ ಜಗತ್ತೇ ಇಷ್ಟ ಪಡುವ ಹಬ್ಬ ಅಂದರೂ ತಪ್ಪಾಗಲಾರದು. ಪ್ರೀತಿ, ಪ್ರೇಮ ಹಾಗೂ ಪ್ರಣಯ ಭಾವಗಳ ಗಾನ ವೈಭವದ ದಿನ, ಪ್ರೀತಿ ಮತ್ತು ಪ್ರೇಮದ ನದಿಗಳು ಹರಿಯುವ ಸುಮಧುರ ದಿನ, ಪ್ರೇಮಿಗಳು ಅವುಗಳ ಸೌಂದರ್ಯವನ್ನು ಅನುಭವಿಸುವ ದಿನ, ಈ ವ್ಯಾಲೆಂಟೈನ್ಸ್ ಡೇ.

    ಪ್ರೇಮ ಪಕ್ಷಿಗಳಿಗಂತೂ ಇದು ಕನಸಿನ ದಿನ. ಬಹುಕಾಲದಿಂದ ತಮ್ಮ ಪ್ರೀತಿಯನ್ನು ಪ್ರಕಟಿಸಬೇಕೆಂದ ಕಾತುರದಿಂದ ಕಾಯುತ್ತಿದ್ದ ಅತ್ಯಂತ ಉತ್ಸಾಹದ ಸಂದರ್ಭ. ಇಂತಹ ವಿಶೇಷ ಸಮಯದಲ್ಲಿ, ಪ್ರೀತಿ ಮತ್ತು ಪ್ರೇಮದ ಗಾನವನ್ನು ಹಾಡಿ ಖುಷಿಪಡುವವರು ಒಂದೆಡೆಯಾದರೆ, ತಮ್ಮ ಪ್ರೀತಿಯನ್ನು ಇನ್ನೊಬ್ಬರಿಗೆ ಧಾರೆಯೆರೆದು, ಚಿರಕಾಲ ಇನ್ನೊಬ್ಬರೊಂದಿಗೆ ಸುಖ ದುಃಖವನ್ನು ಹಂಚಿ, ಪ್ರೀತಿ ಮತ್ತು ಆತ್ಮೀಯತೆ ವಾತಾವರಣದಲ್ಲಿ ಬಾಳಿ ಬದುಕುವ ಬಗ್ಗೆ ಮಾತು ಕೊಡುವವರು ಇನ್ನೊಂದೆಡೆ. ಇದನ್ನೂ ಓದಿ: ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!

    ಪ್ರೀತಿ, ಪ್ರೇಮ, ಪ್ರಣಯ: ಈ ಮೂರೂ ಅಂಶಗಳು ಮಾನವನ ಬಾಳಿನಲ್ಲಿ ಅತ್ಯಂತ ಮುಖ್ಯವಾಗಿವೆ. ಪ್ರೀತಿ, ಒಂದು ವೈಯುಕ್ತಿಕ ಅನುಭವ. ಪ್ರತಿಯೊಬ್ಬರ ಅನುಭವವೂ ವಿಭಿನ್ನ. ಪದಗಳಲ್ಲಿ ವರ್ಣಿಸಲಾಗದ ಅನುಭವ ಅವು. ಅದೇ ರೀತಿ, ಪ್ರೇಮವು ಪರಸ್ಪರರ ಸಂಬಂಧದಿಂದ ಉಂಟಾಗುವ ಒಂದು ಪರಿಣಾಮ. ಯಾವಾಗ, ಯಾರ ಮೇಲೆ, ಹೇಗೆ ಪ್ರೇಮ ಉಂಟಾಗುತ್ತದೆ ಎಂದು ಹೇಳತೀರದು. ಕೊನೆಯದು ಪ್ರಣಯ. ಇದು ಒಬ್ಬ ವ್ಯಕ್ತಿಯಲ್ಲಿರುವ ಸ್ನೇಹದ ಆಳವನ್ನು ವ್ಯಾಖ್ಯಾನಿಸುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಎಂಬ ಈ ಮೂರು ಪದಗಳು ಪ್ರತಿಯೊಂದು ವ್ಯಕ್ತಿಯ ಬಾಳಿನ ಒಂದು ಭಾಗ. ಬಹುಶಃ ಪ್ರೇಮಿಗಳ ದಿನ, ಈ ಮೂರು ಅನುಭವಗಳ ಸಮ್ಮಿಲನಕ್ಕೆ ಸಾಕ್ಷಿಯಾಗುವ ದಿನ ಎಂದೇ ಹೇಳಬಹುದು.

    ಪ್ರೀತಿ ಎಲ್ಲರಿಗೂ ವಿಭಿನ್ನ ಅನುಭವ ನೀಡುತ್ತದೆ. ಇದು ಮನಸ್ಸಿನಾಳದಿಂದ ಹೊರ ಬರುವ ಭಾವನೆ. ಇದು ವ್ಯಕ್ತಿಗೆ ಹೊಸ ದೃಷ್ಟಿಯನ್ನು ತೋರಿಸಿ, ಸಂಬಂಧಗಳನ್ನು ರಚಿಸುತ್ತದೆ ಮತ್ತು ಬದಲಾವಣೆಯತ್ತ ಒಯ್ಯುತ್ತದೆ. ಪ್ರೇಮವು ಪ್ರೀತಿಯ ಅಭಿವ್ಯಕ್ತಿ. ಪ್ರೀತಿಯ ಅನುಭವವು ಹಿಂದಿನ ಸಂಭವಗಳಿಂದ ಹೊರಹೊಮ್ಮಿದ ಪ್ರತಿಕ್ರಿಯೆಯ ಭಾಗವಾದರೆ, ಪ್ರೇಮ ಅದರ ಮುಂದಿನ ಸ್ತರದಲ್ಲಿ ಅಂದರೆ ಇಬ್ಬರ ನಡುವಿನ ಸಂಬAಧದಲ್ಲಿ ಬಹುಪಾಲು ಸಂಭವಗಳನ್ನು ಹುಟ್ಟುಹಾಕುತ್ತದೆ. ಇನ್ನು, ಪ್ರೇಮ ಉನ್ನತ ಮಟ್ಟಕ್ಕೆ ಏರಿದಾಗ, ಇಬ್ಬರು ವ್ಯಕ್ತಿಗಳು ಇತರರ ಮೇಲಿನ ಪೂರ್ಣ ಆತ್ಮೀಯತೆ ಮತ್ತು ನಂಬಿಕೆಯ ಅಭಿವ್ಯಕ್ತಿಯಾಗಿ ಪರಸ್ಪರರನ್ನು ಹೆಚ್ಚು ಅರಿಯುವಂತೆ ಮಾಡುವ ಪ್ರಮೇಯವೇ ಪ್ರಣಯ.

    ವ್ಯಾಲೆಂಟೈನ್ಸ್ ಡೇ ದಿನದ ಸಂದರ್ಭದಲ್ಲಿ ಪ್ರೀತಿ ಮತ್ತು ಪ್ರೇಮದ ಆದರ್ಶಗಳನ್ನು ಬೆಳಗುವುದು ಮತ್ತು ಪ್ರೀತಿಯ ಬೆಳಕಿನ ಕಿರಣಗಳನ್ನು ಇತರರಿಗೆ ಹರಡುವುದು ಅತೀ ಮುಖ್ಯ. ವ್ಯಾಲೆಂಟೈನ್ಸ್ ಡೇ, ಪ್ರೀತಿಯ ಉಜ್ವಲ ಆದರ್ಶವನ್ನು ಮೆಚ್ಚುವ ಸಮಯ. ಈ ದಿನದಲ್ಲಿ ನಾವು ಸಹಾನುಭೂತಿ ಮತ್ತು ಪ್ರೀತಿಯ ಭಾವನೆಗಳನ್ನು ಹರಡುತ್ತೇವೆ. ಆದರೆ ಇದು ಕೇವಲ ಈ ಒಂದು ದಿನಕ್ಕೆ ಸೀಮೀತವಾಗುವುದಲ್ಲ. ಪ್ರೀತಿ ಮತ್ತು ಪ್ರೇಮದ ಭಾವನೆಗಳನ್ನು ನಾವು ನಮ್ಮ ಬದುಕಿನ ಪ್ರತಿಯೊಂದು ದಿನದಲ್ಲಿಯೂ ಅನುಭವಿಸಬಲ್ಲೆವು. ಇದನ್ನೂ ಓದಿ: ನೈಜ ಪ್ರೀತಿ ಅಂದ-ಚಂದ ನೋಡಿ ಹುಟ್ಟಲ್ಲ..

    ವ್ಯಾಲೆಂಟೈನ್ಸ್ ಡೇ ದಿನದ ಪ್ರಯುಕ್ತ, ಪ್ರೀತಿ, ಪ್ರೇಮ, ಪ್ರಣಯದ ಮಹತ್ವವನ್ನು ಮನುಷ್ಯರಿಗೆ ಮನವರಿಕೆ ಮಾಡಿಕೊಡುವುದು ಗಮನಾರ್ಹ. ಇದು ನಮ್ಮ ಸಂಬಂಧಗಳ ಅಗಾಧ ಸಾಮರ್ಥ್ಯವನ್ನು ಪುನಃ ಅರಿಯಲು ಅವಕಾಶ ಒದಗಿಸುತ್ತದೆ. ಈ ದಿನ, ಪ್ರೀತಿಯ ಉಜ್ವಲ ಆದರ್ಶವನ್ನು ಹರಡುವ ಸಮಯ. ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರ ನಡುವೆಯೂ ಆತ್ಮೀಯ ಭಾವನೆಗಳು ಬೆಳಗುತ್ತವೆ. ವ್ಯಾಲೆಂಟೈನ್ಸ್ ಡೇ ಎಂಬ ಈ ಸಂದರ್ಭದಲ್ಲಿ, ನಾವು ಪ್ರೀತಿಯ ಅಮೂಲ್ಯ ಭಾವನೆಗಳನ್ನು ಮೆಚ್ಚೋಣ ಮತ್ತು ಸಹಾನುಭೂತಿಯ ಮೂಲಕ ನಮ್ಮ ಪ್ರೀತಿಗೆ ಸಂತೋಷವನ್ನು ಮತ್ತು ಬೆಳಕನ್ನು ನೀಡೋಣ.

    – ಅಚ್ಯುತ್ ಆರ್ ಭಾರಧ್ವಾಜ್
    ಬಿವೋಕ್ ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು, ಉಜಿರೆ.