Tag: Valentines Day

  • ಬೆಂಗಳೂರಿನ ರೋಸ್‌ಗಳಿಗೆ ವಿದೇಶಗಳಲ್ಲಿ ಡಿಮ್ಯಾಂಡ್ – 14 ದಿನದಲ್ಲಿ 10 ಕೋಟಿ ರೂ. ವಹಿವಾಟು

    ಬೆಂಗಳೂರಿನ ರೋಸ್‌ಗಳಿಗೆ ವಿದೇಶಗಳಲ್ಲಿ ಡಿಮ್ಯಾಂಡ್ – 14 ದಿನದಲ್ಲಿ 10 ಕೋಟಿ ರೂ. ವಹಿವಾಟು

    – ಪ್ರೇಮಿಗಳ ದಿನದಲ್ಲಿ ಒಂದೇ ದಿನಕ್ಕೆ 1 ಕೋಟಿಗೂ ಹೆಚ್ಚು ಆದಾಯ

    ಬೆಂಗಳೂರು: ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಬೆಂಗಳೂರಿನ ರೋಸ್‌ಗಳಿಗೆ ಕೇವಲ ಭಾರತವಲ್ಲ, ವಿದೇಶದೆಲ್ಲೆಡೆ ಭಾರೀ ಡಿಮ್ಯಾಂಡ್ ಉಂಟಾಗಿದೆ. ಒಂದು ದಿನಕ್ಕೆ 7-8 ಲಕ್ಷ ರಾಜಧಾನಿಯ ರೋಸ್‌ಗಳು ಮಾರಾಟವಾಗಿ, ದಿನವೊಂದಕ್ಕೆ ಒಂದು ಕೋಟಿಗೂ ಹೆಚ್ಚು ಆದಾಯ ಬಂದಿದ್ದು, ಹೊಸ ದಾಖಲೆ ನಿರ್ಮಿಸಿದೆ.

    ನಿನ್ನೆ ಪ್ರೇಮಿಗಳ ದಿನ. ಪ್ರೀತಿಸುವ ಹೃದಯಗಳು ಇನ್ನಷ್ಟು ಸನ್ನಿಹವಾಗುವ ಕಾಲ. ಈ ಹಿನ್ನೆಲೆ ಪ್ರೀತಿಗೆ ಸಂಕೇತವಾಗಿರುವ ಗುಲಾಬಿ ಹೂಗಳಿಗೆ ಸಿಲಿಕಾನ್ ಸಿಟಿಯಲ್ಲಿ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ಅದರಲ್ಲೂ, ಬೆಂಗಳೂರಿನ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಗುಲಾಬಿಗಳಿಗೆ ಕೇವಲ ದೇಶವಲ್ಲ ವಿದೇಶಗಳಿಂದಲೂ ಬೇಡಿಕೆ ಬಂದಿದೆ.

    ನಮ್ಮ ಬೆಂಗಳೂರಿನ ಡಚ್ ರೋಸ್‌ಗಳು ದುಬೈ, ಸಿಂಗಾಪುರ್, ಮಲೇಶಿಯಾ, ನ್ಯೂಜಿಲೆಂಡ್ ಸೇರಿದಂತೆ ವಿದೇಶಗಳಿಗೂ ಹೋಗಿದೆ. ಹೆಬ್ಬಾಳದ ಅಂತರರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು ನಿಯಮಿತದಲ್ಲಿ ಭರ್ಜರಿ ಡಿಮ್ಯಾಂಡ್ ಉಂಟಾಗಿದೆ.

    ಫೆಬ್ರವರಿ 1 ರಿಂದ 14 ರವರೆಗೂ 82 ಲಕ್ಷಕ್ಕೂ ಹೆಚ್ಚು ರೋಸ್‌ಗಳು ಮಾರಾಟವಾಗಿದ್ದು, 10 ಕೋಟಿಗೂ ಹೆಚ್ಚು ವಹಿವಾಟು ಕೇಂದ್ರದಲ್ಲಿ ನಡೆದಿದೆ. ಒಂದು ದಿನಕ್ಕೆ ಒಂದು ಕೋಟಿಗೂ ಹೆಚ್ಚು ಆದಾಯ ಬಂದಿದೆ. ಈ ಕೇಂದ್ರದ ಫ್ಲವರ್‌ಗಳ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  • ಆಚರಿಸಿ… ಪ್ರಬುದ್ಧ ಪ್ರೇಮಿಗಳ ದಿನಾಚರಣೆ

    ಆಚರಿಸಿ… ಪ್ರಬುದ್ಧ ಪ್ರೇಮಿಗಳ ದಿನಾಚರಣೆ

    ದಿನವನ್ನು ಯಾವ ಪ್ರೇಮಿಗಳು ಮರೆಯುವುದುಂಟೇ…? ಪ್ರೇಮಿಗಳ ದಿನಾಚರಣೆ ಬಂದರೆ ಬಹಳಷ್ಟು ಮಂದಿ ಪ್ರೇಮಿಗಳು ಹೇಗೆ ಈ ದಿನವನ್ನು ಸ್ಪೆಷಲ್ ಆಗಿ ಆಚರಿಸಬಹುದು ಎನ್ನುವ ಯೋಚನೆ ಮಾಡುವುದು ಸಹಜ. ಪ್ರೀತಿಸುವವರಿಗೆ ತಮ್ಮ ಸಮಯವನ್ನು ತನ್ನ ಸಂಗಾತಿಯೊಂದಿಗೆ ಕಳೆಯಲು ಇದೊಂದು ವಿಶೇಷ ದಿನವಾದರೂ, ನಿಜವಾದ ಪ್ರೇಮಿಗಳಿಗೆ ಪ್ರತಿದಿನವೂ ಅವರದೇ ದಿನ.. ಆಲ್ವಾ? ಏನಂತೀರಿ?

    ಪ್ರೀತಿಯನ್ನು ಕವಿಗಳು, ಪ್ರೇಮಿಗಳು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಆದರೆ ವಾಸ್ತವ ಬದುಕಿನಲ್ಲಿ ಪ್ರೀತಿಯ ವ್ಯಾಖ್ಯಾನವೇ ಬೇರೆ… ಇತ್ತೀಚಿನ ಹದಿಹರೆಯದವರು ಪ್ರೀತಿಸುವ ಬಗೆಯನ್ನು ನೋಡಿದರೆ ನಿಜವಾಗಿ ಆತಂಕವಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಹುಟ್ಟಿದ ಪ್ರೀತಿ, ಮುಂದೆ ಪ್ರಾಯ ಪ್ರಬುದ್ಧರಾದಾಗ ಇರುವುದಿಲ್ಲ. ಇಲ್ಲಿ ಎಲ್ಲರೂ ಹಾಗೆಯೇ ಎಂದೇನಿಲ್ಲ.. ಹದಿಹರೆಯದಲ್ಲಿ ಮೂಡಿದ ಪ್ರೀತಿಯ ಮೊಗ್ಗು ಬಾಳಸಂಗಾತಿಯಾಗಿ ಸಂತೋಷವಾಗಿ ಇರುವವರು ಬಹಳಷ್ಟು ಮಂದಿ ಇದ್ದಾರೆ. ಇದನ್ನೂ ಓದಿ: ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

    ಆದರೆ ಇತ್ತೀಚಿಗಿನ ಯುವಜನತೆ ಪ್ರೀತಿ ಎಂಬ ಪದವನ್ನು ಬಹಳ ತಪ್ಪಾಗಿ ಅರ್ಥೈಯಿಸಿ ಕೊಳ್ಳುತ್ತಿದ್ದಾರೆ. ಇನ್ಸ್ಟಾ, ಫೇಸ್ಬುಕ್‌ನಲ್ಲಿ ಪರಿಚಯವಾದ ಪ್ರೀತಿ, ಇನ್ನೆಲ್ಲೋ ಕ್ಷುಲ್ಲಕ ಕಾರಣಕ್ಕೆ ಮುರಿದು ಬೀಳುತ್ತದೆ. ಇಬ್ಬರ ನಡುವಿನ ಆಕರ್ಷಣೆಯನ್ನು, ಓಲೈಸುವುದನ್ನೋ, ಮುದ್ದು ಮಾಡುವುದನ್ನೋ ಪ್ರೀತಿ-ಪ್ರೇಮ ಎನ್ನುವ ಭಾವನೆ ಇದೆ. ಏನಿದ್ದರೂ, ಇದೆಲ್ಲಾ ಕೇವಲ ಕ್ಷಣಿಕ ಅಷ್ಟೇ.

    ಇಂದಿನ ಯುವಜನತೆಗೆ ಪ್ರಬುದ್ಧ ಪ್ರೀತಿಯ ಅರಿವೇ ಇಲ್ಲ… ಪ್ರೀತಿ ಅಂದ್ರೆ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವುದು.. ಪರಸ್ಪರ ಬೆಂಬಲಕ್ಕೆ ನಿಲ್ಲುವುದು, ಹೊಂದಾಣಿಕೆ, ತ್ಯಾಗ. ಬಹಳ ಮುಖ್ಯವಾಗಿ ಪರಸ್ಪರ ಗೌರವಿಸುವುದು. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

    ಈಗಿನ ಪ್ರೀತಿ ಹೇಗಿದೆ .. ಬರ್ತಡೇ ನೆನಪಿಲ್ಲ ಎಂದರೆ ಬ್ರೇಕಪ್, ಗಿಪ್ಟ್ ಕೊಟ್ಟಿಲ್ಲ, ಕೇಕ್ ತಂದಿಲ್ಲ, ಇದು ಅತಿರೇಕವಾಗಿ ಜಗಳಮಾಡಿಕೊಂಡು ಅದ್ಯಾವ ಮಟ್ಟಕ್ಕೆ ತಲುಪುತ್ತೋ ಊಹಿಸಲೂ ಅಸಾಧ್ಯ. ಪ್ರಬುದ್ಧ ಪ್ರೀತಿಯಲ್ಲಿ ಇದೆಲ್ಲ ಕ್ಷುಲ್ಲಕ ಕಾರಣವಷ್ಟೆ. ಪ್ರೀತಿ ಒಮ್ಮೆ ಮಾತ್ರ ಆಗುತ್ತೋ..ಅಥವಾ ಪದೇ ಪದೇ ಆಗುತ್ತೋ.. ಒಂದು ರೀತಿ ಚಂಚಲ ಮನಸ್ಸು ಈಗಿನ ಹದಿಹರೆಯದವರದ್ದು.

    ಫೇಸ್‌ಬುಕ್, ಇನ್ಸ್ಟಾದಲ್ಲಿ ಪರಿಚಯವಾಗಿ ಒಟ್ಟಿಗೆ ಪಾರ್ಕ್ ಸುತ್ತಿ, ಸಿನಿಮಾ ನೋಡಿ, ರಾತ್ರಿ ಇಡಿ ಮೆಸೇಜ್ ಮಾಡಿ ದಿನಗಳು ಕಳೆದು ಹೋಗುತ್ತಿವೆ. ಇಷ್ಟೆಲ್ಲ ಆಗಿ ಇಬ್ಬರು ಹತ್ತಿರವಾಗುವ ಮೊದಲೇ ಬ್ರೇಕಪ್ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳು ಟಿನೇಜ್ ಹುಡುಗ ಹುಡುಗಿಯರ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲಿ ಕಾಣುವ ಕಾಲ್ಪನಿಕ ಕತೆಗಳು ಒಬ್ಬರನ್ನೊಬ್ಬರನ್ನು ಅಮಾನುಷವಾಗಿ ಕೊಲ್ಲುವ ಮಟ್ಟಿಗೆ ಹೋಗಿ ತಲುಪುತ್ತದೆ ಎಂದರೆ, ಪರಿಣಾಮವನ್ನು ನಾವು-ನೀವು ಊಹಿಸಬಹುದು. ಪ್ರೀತಿ ಪ್ರೇಮದ ಅಮಲಿನಲ್ಲಿ ಬಿದ್ದು ತಪ್ಪು ಹೆಜ್ಜೆ ಇಟ್ಟು, ಮೊಗ್ಗು ಅರಳುವ ಮುನ್ನವೇ ಮಸಣದ ಹಾದಿ ಹಿಡಿದಿರುವುದನ್ನು ನೋಡಿದ್ದೇವೆ. ಇದನ್ನೂ ಓದಿ: ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!

    ಪ್ರೀತಿ ಮಾಡಿ ಕೊನೆಗೆ ಮನೆಯವರ ಒಪ್ಪಿಗೆ ಇಲ್ಲದೆ ಬೇರೆ ದಾರಿಹಿಡಿದಿದ್ದೂ ಇದೆ. ಪ್ರಾಯ ಪ್ರಬುದ್ಧರಾದ ಮಕ್ಕಳಿಗೆ ಕಿವಿ ಮಾತನ್ನು ಪೋಷಕರೂ ಕೊಡಬೇಕಾಗಿರುವುದು ಇಂದಿನ ಅನಿವಾರ್ಯತೆ ಕೂಡ. ಯಾವುದು ಆಕರ್ಷಣೆ.. ಯಾವುದು ನಿಜವಾದ ಪ್ರೀತಿ ಎಂಬುದನ್ನು ತಿಳಿಸಬೇಕು.

    ಅಮ್ಮನ ಮಮತೆಯಲ್ಲಿ ಹೇಗೆ ಮುಗ್ಧ ನಿಷ್ಕಲ್ಮಶವಾಗಿರುತ್ತೋ..ಅದೇ ರೀತಿ ಪ್ರೀತಿಯಲ್ಲೂ ಇರಬೇಕು. ಈಗಿನ ಕಾಲೇಜು ಹುಡುಗ ಹುಡುಗಿಯರ ನಡುವೆ ಹುಟ್ಟುವ ಪ್ರೀತಿ ಕೇವಲ ಆಕರ್ಷಣೆಗೆ ಸೀಮಿತವಾಗಿದೆ. ಪ್ರೀತಿಗೆ ಯಾವುದೇ ಜಾತಿ-ಭೇದವಿಲ್ಲ ನಿಜ.. ಆದರೆ ಅಂಧವಲ್ಲ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

    ಹಾಗಾಗಿ ಪ್ರೀತಿ- ಪ್ರೇಮ ಕೇವಲ ಎರಡಕ್ಷರದ ಪದಗಳಲ್ಲಿ ಮುಗಿದು ಹೋಗಬಾರದು. ವರ್ಷ ಪೂರ್ತಿ ನೆನಪಿಟ್ಟುಕೊಳ್ಳುವ ಸಂಭ್ರಮದ ದಿನ ಆಗಿರಬೇಕು. ಸಿ.ಅಶ್ವಥ್ ಹಾಡಿದ ‘ಹಿಂದೆ ಹೇಗೆ ಚಿಮ್ಮುತಿತ್ತು…ಕಣ್ಣ ತುಂಬ ಪ್ರೀತಿ ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ’ ಈ ಹಾಡು ಹೆಚ್ಚು ಪ್ರಸ್ತುತ ಕಾಲಕ್ಕೆ ಹೆಚ್ಚು ಸಹ್ಯವೆನಿಸುತ್ತದೆ.. ಪ್ರಬುದ್ಧ ಪ್ರೇಮಿಗಳಿಗೆ ಪ್ರತಿದಿನವೂ ವ್ಯಾಲೆಂಟೈನ್ಸ್ ಡೆ… ಇದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.. ಒಬ್ಬರಿಗೊಬ್ಬರು ಅರಿತು ಬಾಳುವುದು ಜೀವನ…

  • ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

    ಮನಸಿನೊಡತಿ ಜೊತೆಗಿನ ಪ್ರತಿ ಕ್ಷಣವೂ ಪ್ರೇಮಿಗಳ ದಿನವೇ!

    ರೆಯ, ಹುಮ್ಮಸ್ಸು, ಆಕರ್ಷಣೆ, ಪ್ರೀತಿ-ಪ್ರೇಮ.. ಈ ಪ್ರಾಯವೇ ಹಾಗೆ. ಮನಸ್ಸು ಹುಚ್ಚಾಟದ ಕೋತಿಯಂತೆ ಆಡುತ್ತೆ. ಹಿಡಿತಕ್ಕೆ ಸಿಗದಷ್ಟು ನುಣುಪು. ಸರಿ-ತಪ್ಪುಗಳ ಗೊಡವೆಗೇ ಹೋಗದಷ್ಟು ಸ್ಪೀಡು. ತಾನು ಮಾಡಿದ್ದೆಲ್ಲವೂ ಸರಿ ಅನ್ನೋ ಪಾಸಿಟಿವ್‌ ಮೈಂಡ್‌ ಕಾಣೋದು ಈ ಹಂತದಲ್ಲೇ. ಗೆಳೆಯ-ಗೆಳತಿಯರೊಟ್ಟಿಗೆ ಕಳೆಯುವ ಸಮಯ. ಅದೊಂದು ಬೆಚ್ಚನೆಯ ಅನುಭವ. ‘ನೋಡೋ ಮಗಾ.. ಆ ಹುಡುಗಿ ಎಷ್ಟು ಚೆನ್ನಾಗಿದ್ದಾಳೆ’ ಅನ್ನೋದು. ಹುಡುಗಿಯರೂ ಅಷ್ಟೆ, ‘ನೋಡೇ.. ಅವ್ನು ಎಷ್ಟು ಚಂದ ಅಲ್ವಾ’?.. ಇಷ್ಟಾದ್ರೆ ಸಾಕು. ಅದೇನೊ ಹೇಳ್ತಾರಲ್ಲ, ‘Love At First Sight’ ಅಂತ.

    ಪ್ರಾಯದ ಹುಡುಗ/ಹುಡುಗಿಯರ ಗುಣವೇ ಭಿನ್ನ. ಪ್ರೀತಿಯಲ್ಲಿ ಬೀಳುವವರೆಗೆ ಒದ್ದಾಡುತ್ತಾರೆ. ಒಮ್ಮೆ ಲವ್ವಲ್ಲಿ ಬಿದ್ರೆ ಸಾಕು, ತಾವಿರುವ ಪ್ರಪಂಚವನ್ನೇ ಮರೆತಂತೆ ಪ್ರೇಮಲೋಕದಲ್ಲಿ ತೇಲುತ್ತಾರೆ. ತಮ್ಮ ಯಾವುದೇ ಕೆಲಸದಲ್ಲಿ ಪ್ರೇಮಿಯನ್ನು ನೆನಪಿಸಿಕೊಳ್ಳದೇ ಇರಲಾರದಷ್ಟು ಪ್ರೀತಿ ಇಟ್ಟಿರುತ್ತಾರೆ. ಪ್ರೀತಿಯಲ್ಲಿ ಬಿದ್ದಾಗ ಮೊದಮೊದಲು ಚಾಟಿಂಗ್‌, ಆಮೇಲೆ ಡೇಟಿಂಗ್‌ನಲ್ಲಿ ಪರಸ್ಪರರು ಪ್ರೀತಿ ಹಂಚಿಕೊಂಡು ಸಾಗೋದು. ಇದನ್ನೂ ಓದಿ: 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

    ಮನಸ್ಸಿಗೆ ಒಪ್ಪುವ ಗೆಳೆಯ/ಗೆಳತಿ ಸಿಕ್ಕರೆ ಸಾಕು. ಜಗತ್ತಿನ ಪರಿವೇ ಇಲ್ಲವೆಂಬಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಕೈ ಕೈ ಹಿಡಿದು ಸುತ್ತಾಡುವುದು, ಕ್ಯಾಂಟೀನ್‌ನಲ್ಲಿ ಕುಳಿತು ಒಬ್ಬರಿಗೊಬ್ಬರು ಕೈತುತ್ತು ತಿನ್ನಿಸುವುದು, ಹೋದಲ್ಲಿ ಬಂದಲ್ಲಿ ಕೇರ್‌ ಟೇಕರ್‌ರಂತೆ ಜೊತೆಯಾಗಿ ಇರುವುದು. ಈ ಸಾಂಗತ್ಯ ಸದಾ ಬೇಕು ಅನ್ನೋ ಹಂಬಲ.

    ಈ ಪ್ರೀತಿ ಅನ್ನೋದೇ ಹಾಗೆ. ಸಮರ್ಪಣಾ ಭಾವದ ಸಂಕೇತ. ಅವನಿಗಾಗಿ/ಅವಳಿಗಾಗಿ ಏನು ಬೇಕಾದರೂ ಮಾಡುತ್ತೀನಿ ಅನ್ನೋ ಹುಚ್ಚು ಹಠ. ಮನೆಯವರಿಗೆ ಸುಳ್ಳು ಹೇಳುವ ಬುದ್ದಿ ಬರೋದು ಈ ಹಂತದಲ್ಲೇ. ಲವ್ವರ್‌ ಭೇಟಿಯಾಗಬೇಕು ಎನಿಸಿದರೆ, ‘ಅಮ್ಮ ಇವತ್ತು ನಮಗೆ ಸ್ಪೆಷಲ್‌ ಕ್ಲಾಸ್‌ ಇದೆ’ ಅಂತ ಸುಳ್ಳು ಹೇಳೋದು. ಖರ್ಚಿಗೆ ಪಾಕೆಟ್‌ ಮನಿ ಬೇಕು ಅಂದ್ರೆ, ‘ಅಪ್ಪ ನಮ್ಮ ಕಾಲೇಜಲ್ಲಿ ಫೀಸ್‌ ಕಲೆಕ್ಟ್‌ ಮಾಡ್ತಿದ್ದಾರೆ’ ಅಂತ ಹೇಳಿ ಹಣ ಪಡೆದು ಎಂಜಾಯ್‌ ಮಾಡುವುದು. ಇದನ್ನೂ ಓದಿ: ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!

    ಈಗಿನದ್ದೆಲ್ಲಾ ಫೆಬ್ರವರಿ 14thಗೆ ಸೀಮಿತವಾದ ಪ್ರೀತಿಯಲ್ಲ, 24*7 ಪ್ರೀತಿ. ಹೊರಗಡೆ ಪ್ರೇಮಿ ಜೊತೆ ಸಮಯ ಕಳೆಯುವುದು. ಮನೆಗೆ ಹೋದರು ಕೂಡ ಮೊಬೈಲ್‌ನಲ್ಲಿ ಚಾಟಿಂಗ್‌. ಫೋನ್‌ ಕಾಲ್‌, ವೀಡಿಯೋ ಕಾಲ್‌ಗೆ ಲೆಕ್ಕವಿಲ್ಲ. ಒಟ್ಟಾರೆ ಬಿಡುವಿನ ಸಮಯವೆಲ್ಲ ಲವ್ವರ್‌ಗೆ ಮೀಸಲು. ಅರೆಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಪ್ತತೆ.

    ಸಮಯ ಸಿಕ್ಕಾಗ ಲವ್ವರ್‌ ಜೊತೆ ಜಾಲಿ ರೈಡ್‌, ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ. ಫುಟ್‌ಪಾತ್‌ನಲ್ಲಿ ಪಾನೀಪೂರಿ, ಐಸ್‌ಕ್ರೀಮ್‌ ಸವಿಯೋದು. ಪಾರ್ಕ್‌ನಲ್ಲಿ ಸುತ್ತಾಡೋದು. ನೆನಪಿನ ಪುಟದಲ್ಲಿ ಉಳಿಯುವಂತೆ ಪ್ರೇಮಿ ಜೊತೆ ಸಮಯ ಕಳೆಯೋದು.

    ಪ್ರೀತಿ ಅಂದ್ರೆ ಅದಷ್ಟೇ ಅಲ್ಲ. ಸುಖ-ದುಃಖವನ್ನು ಪ್ರೇಮಿಯೊಂದಿಗೆ ಹಂಚಿಕೊಳ್ಳಬೇಕೆನ್ನುವ ಭಾವವನ್ನು ಕಲಿಸುತ್ತದೆ. ಅದೇನೋ, ಮನಸ್ಸಿಗೆ ತುಂಬಾ ಖುಷಿಯಾದಾಗ ಅವನೊಂದಿಗೆ/ಅವಳೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ದುಃಖವಾದರೆ, ಪ್ರೇಮಿಯೊಂದಿಗೆ ಹೇಳಿಕೊಂಡಾಗಲೇ ಒಂದಷ್ಟು ಸಮಾಧಾನ. ನನ್ನ ಜೊತೆಯಲ್ಲಿ ಒಬ್ಬರು ಇದ್ದಾರೆ ಅನ್ನೋ ಭಾವ ಮೂಡಿಸುತ್ತದೆ. ಇದನ್ನೂ ಓದಿ: ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

    ಸದಾ ಪ್ರೀತಿಯ ಗುಂಗಲ್ಲಿ ಇರೋರಿಗೆ ವಿಶೇಷ ದಿನ ಎಂದೇನಿಲ್ಲ. ಮನಸ್ಸಿನ ಒಡೆಯ/ಒಡತಿ ಜೊತೆ ಕಳೆಯುವ ಪ್ರತಿ ಕ್ಷಣವೂ ಅವರಿಗೆ ಪ್ರೇಮಿಗಳ ದಿನವೇ.

  • 389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

    389 ರೂ. ಕೊಟ್ರೆ ಪ್ರೇಮಿಗಳ ದಿನಕ್ಕೆ ಬಾಡಿಗೆ ಬಾಯ್ ಫ್ರೆಂಡ್ – ಏನಿದು ಆಫರ್?

    -ಸ್ಕ್ಯಾನ್‌ ಮಾಡಿ, ಪೇ ಮಾಡಿದ್ರೆ ಸುಲಭವಾಗಿ ಮೊಬೈಲ್ ಆಕ್ಸಿಸ್

    ಬೆಂಗಳೂರು: ಬಾಡಿಗೆಗೆ ಬಾಯ್ ಫ್ರೆಂಡ್ ಸಿಗುತ್ತಾನೆ ಎಂದು ಪೋಸ್ಟರ್ ಅಂಟಿಸಿ, ವಂಚಕರು ಪ್ರೇಮಿಗಳ ದಿನವನ್ನು (Valentines Day) ಅಸ್ತ್ರ ಮಾಡಿಕೊಂಡಿದ್ದಾರೆ.

    ನಗರದಲ್ಲಿ ಎಲ್ಲರೂ ಪ್ರೇಮಿಗಳ ದಿನದ ಸಂಭ್ರಮದಲ್ಲಿರುವಾಗ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ವ್ಯಾಲೆಂಟೈನ್ಸ್ ಡೇಗೆ ಬಾಯ್ ಫ್ರೆಂಡ್ ಬೇಕಾ? ಹಾಗಾದ್ರೆ ಜಸ್ಟ್ ಸ್ಕ್ಯಾನ್ ಮಾಡಿ, ಪೇ ಮಾಡಿ ಎಂದಿದ್ದಾರೆ. ಯಾಮಾರಿ ಸ್ಕ್ಯಾನ್‌ ಮಾಡಿ, ಪೇ ಮಾಡಿದರೆ, ಸಂಪೂರ್ಣವಾಗಿ ನಿಮ್ಮ ಮೊಬೈಲ್ ಆಕ್ಸೆಸ್ ವಂಚಕರ ಕೈಗೆ ತಲುಪಲಿದೆ.ಇದನ್ನೂ ಓದಿ:

    ಬಾಡಿಗೆಗೆ ಬಾಯ್ ಫ್ರೆಂಡ್ ಸಿಗುತ್ತಾನೆ ಎಂದು ನಗರದ ಹಲವು ಕಡೆ ಪೋಸ್ಟರ್ ಅಂಟಿಸಿರುವುದು ಬೆಳಕಿಗೆ ಬಂದಿದೆ. ಪೋಸ್ಟರ್‌ನಲ್ಲಿ ಇರುವ ಸ್ಕ್ಯಾನರ್‌ಗೆ ಕೇವಲ 389 ರೂ. ಪೇ ಮಾಡಿದರೆ ಸಾಕು. ಸೆಲೆಬ್ರೇಷನ್‌ಗಾಗಿ ಒಂದು ದಿನಕ್ಕೆ ಬಾಯ ಫ್ರೆಂಡ್ ಲಭ್ಯ ಎಂದು ಉಲ್ಲೇಖಿಸಿದ್ದಾರೆ.

    ಇದೀಗ ಜಯನಗರ, ಬನಶಂಕರಿ ಭಾಗದಲ್ಲಿ ಪೋಸ್ಟರ್ ಭಾರೀ ಸದ್ದು ಮಾಡುತ್ತಿದ್ದು, ಜಯನಗರ 8ನೇ ಬ್ಲಾಕ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪೋಸ್ಟರ್ ಅಂಟಿಸಿದ್ದಾರೆ. ರಸ್ತೆ ಹತ್ತಿರದ ಕಾಂಪೌಂಡ್ ಗೋಡೆಗಳ ಮೇಲೆಯೂ ಪೋಸ್ಟರ್ ಹಾಕಿದ್ದಾರೆ.

    ವೈರಲ್ ಆಗುತ್ತಿರುವ ಪೋಸ್ಟರ್‌ನಲ್ಲಿ `Rent A Boyfriend For 389, Scan Me’ ಎಂದು ಬರೆದಿದ್ದಾರೆ. ಈ ಪೋಸ್ಟರ್ ನೋಡಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಎಕ್ಸ್‌ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ:

  • ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ಬೆಳಗಾವಿ: ಕರ್ನಾಟಕದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಮಕ್ಕಳೇ ಲವ್ ಜಿಹಾದ್‌ಗೆ ತುತ್ತಾಗಿದ್ದಾರೆ. ಆ ಪೊಲೀಸ್ ಅಧಿಕಾರಿಗಳು  ನಮ್ಮ ಬಳಿ ಬಳಿ ಸಹಾಯ ಕೇಳಿದ್ದಾರೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ (Pramod Muthalik) ಹೇಳಿದ್ದಾರೆ.

    ಪ್ರೇಮಿಗಳ ದಿನದಂದು (Valentine’s Day) ಲವ್ ಜಿಹಾದ್ (Love Jihad) ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಲವ್ ಜಿಹಾದ್ ತಡೆಯಲು ಈಗಾಗಲೇ ಸಹಾಯವಾಣಿ ತೆರೆದಿದ್ದೇವೆ. ಲವ್ ಜಿಹಾದ್ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರೇಮಿಗಳ ದಿನದಂದು ಯುವತಿಯರು‌ ತ್ರಿಶೂಲ‌ ಹಾಗೂ ಖಾರದ ಪುಡಿ ಇಟ್ಟುಕೊಂಡು ಓಡಾಡಬೇಕು. ಹಿಂದೂ ಸಮಾಜದ ಹಿತದೃಷ್ಟಿಯಿಂದ ತ್ರಿಶೂಲ ಧಿಕ್ಷೆ ನೀಡಲಾಗಿದೆ. ಲವ್ ಜಿಹಾದ್ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ ಎಂದರು. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ

    ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಕೊಲೆ ಮಾಡಲಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಗಂಭೀರ ಕಾನೂನುಗಳಿಲ್ಲದೆ ಮಹಿಳೆಯರು ಇಂದು ಪರಿಪತಪಿಸುವಂತಾಗಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಶಿಕ್ಷೆ ಆಗಬೇಕಿದೆ ಎಂದು ಆಗ್ರಹಿಸಿದರು.

    ಈಗಾಗಲೇ ನಮ್ಮ ಸಹಾಯವಾಣಿಯ ಮೂಲಕ‌ 40% ರಷ್ಟು ಲವ್ ಜಿಹಾದ್ ತಡೆಯಲಾಗಿದೆ. 100 ಕಡೆಗಳಲ್ಲಿ ತ್ರಿಶೂಲ‌ ಧಿಕ್ಷಾ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

  • ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ – ರೇಂಜ್ ರೋವರ್‌ನಲ್ಲಿ ಬಂದಿಳಿದ ಪವಿತ್ರಾ ಗೌಡ

    ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ – ರೇಂಜ್ ರೋವರ್‌ನಲ್ಲಿ ಬಂದಿಳಿದ ಪವಿತ್ರಾ ಗೌಡ

    ಬೆಂಗಳೂರು: ಕೊಲೆ ಕೇಸ್‌ನಲ್ಲಿ ಜೈಲಿನಿಂದ ರಿಲೀಸ್ ಆದ ಬಳಿಕ ಪವಿತ್ರಾ ಗೌಡ (Pavithra Gowda) ಬಿಸಿನೆಸ್‌ನತ್ತ ಮುಖ ಮಾಡಿದ್ದಾರೆ. ಕಳೆದ ೮ ತಿಂಗಳಿಂದ ಮುಚ್ಚಿದ್ದ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು (Red Carpet Studio) ರೀಲಾಂಚ್ ಮಾಡಿದ್ದಾರೆ.

    ನಟ ದರ್ಶನ್ (Darshan) ಗೆಳತಿ ಪವಿತ್ರಾ ಗೌಡ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ವ್ಯವಹಾರಗಳತ್ತ ಗಮನ ಹರಿಸಿದ್ದಾರೆ. ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ಪ್ರಾರಂಭಿಸಿದ್ದರು. ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಸ್ಟುಡಿಯೋಗೆ ಇಂದು ಮರುಚಾಲನೆ ನೀಡಲಾಗಿದೆ. ಇದನ್ನೂ ಓದಿ: ನಮ್ಮ ಸುತ್ತ ಒಳ್ಳೆಯ ಸ್ನೇಹಿತರಿರೋದು ಮುಖ್ಯ: ಚರ್ಚೆಗೆ ಗ್ರಾಸವಾಯ್ತು ಪವಿತ್ರಾ ಗೌಡ ಪೋಸ್ಟ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಜೈಲು ಸೇರಿದ್ದರು. ಜೈಲಿಗೆ ಹೋದ ಬಳಿಕ ಸ್ಟುಡಿಯೋ ಕ್ಲೋಸ್ ಆಗಿತ್ತು. ಪ್ರೇಮಿಗಳ ದಿನದ ಪ್ರಯುಕ್ತ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಮಾಡಿದ್ದಾರೆ. ಸ್ಟುಡಿಯೋಗೆ ಪವಿತ್ರಾ ಗೌಡ ರೇಂಜ್ ರೋವರ್ ಕಾರ್‌ನಲ್ಲಿ ಬಂದು ಗಮನ ಸೆಳೆದರು.

    ಪವಿತ್ರಾ ಗೌಡ, ಸ್ಟುಡಿಯೋದಲ್ಲಿ ಗಣಹೋಮ, ಕಾರ್ಯಸಿದ್ಧಿ ಹೋಮ ಮಾಡಿಸಿದ್ದಾರೆ. ಈ ರೀಲಾಂಚ್ ಕಾರ್ಯಕ್ರಮಕ್ಕೆ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವು: ಕಾಶಿಯಲ್ಲಿ ಪವಿತ್ರಾ ಗೌಡ

  • ಡ್ಯಾಂಡ್ರಫ್ ಜಾಹೀರಾತಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರುಷ್ಕಾ! – ಇಬ್ಬರ ಲವ್‌ ಸ್ಟೋರಿಯನ್ನು ನೀವು ಓದಲೇಬೇಕು

    ಡ್ಯಾಂಡ್ರಫ್ ಜಾಹೀರಾತಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರುಷ್ಕಾ! – ಇಬ್ಬರ ಲವ್‌ ಸ್ಟೋರಿಯನ್ನು ನೀವು ಓದಲೇಬೇಕು

    ಇಂದು ಪ್ರೇಮಿಗಳ ದಿನಾಚರಣೆ. ಈ ದಿನಾಚರಣೆಯಂದು (Valentine’s Day) ಹಲವರು ಪ್ರೇಮ ಕಥೆಗಳನ್ನು ನೀವು ಓದಿರಬಹುದು. ಈ ಪಟ್ಟಿಗೆ ನೀವು ಓದಲೇಬೇಕಾದ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಪ್ರೇಮ ಕಥೆ ಯಾವುದು ಎಂದರೆ ವಿರಾಟ್‌ ಕೊಹ್ಲಿ (Virat kohli) ಮತ್ತು ಅನುಷ್ಕಾ (Anushka Sharma) ಲವ್‌ ಸ್ಟೋರಿ. ಸೆಲೆಬ್ರಿಟಿಗಳು ಲವ್‌ (Love) ಮಾಡಿ ನಂತರ ಬ್ರೇಕಪ್‌ ಆಗುವುದು ಇಂದು ಹೊಸದೆನಲ್ಲ. ಆದರೆ ವಿರಷ್ಕಾ ಜೋಡಿ ಪ್ರೀತಿ ಮಾಡಿ ಮದುವೆಯಾಗುವುದರ ಜೊತೆ ಈಗಲೂ ಅನ್ಯೋನ್ಯವಾಗಿದ್ದಾರೆ. ಈ ಮೂಲಕ ನಿಜವಾದ ಪ್ರೇಮಿಗಳಿಗೆ ಆದರ್ಶವಾಗಿದ್ದಾರೆ.

    ವಿರಾಟ್‌ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರು ಸೆಲೆಬ್ರಿಟಿಗಳು. ಈ ಇಬ್ಬರು ಸ್ಟಾರ್‌ಗಳು ಮೊದಲು ಭೇಟಿಯಾಗಿದ್ದು ಡ್ಯಾಂಡ್ರಫ್ ಜಾಹೀರಾತಿನಲ್ಲಿ. 2013ರಲ್ಲಿ ಟಿವಿ ಜಾಹೀರಾತಿನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಆರ್‌ಸಿಬಿ ತಂಡದ ನಾಯಕನಾಗಿದ್ದರೆ ಅನುಷ್ಕಾ ಬಾಲಿವುಡ್‌ ಬೇಡಿಕೆಯ ನಟಿಯಾಗಿದ್ದರು.

    ಜಾಹೀರಾತಿನಲ್ಲಿ ಇಬ್ಬರ ನಟನೆಯ ಕೆಮಿಸ್ಟ್ರಿ ವರ್ಕ್‌ ಆಯಿತು. ಪರಸ್ಪರ ಫೋನ್‌ ನಂಬರ್‌ ಬದಲಾವಣೆ ಆಯಿತು. ಆರಂಭದಲ್ಲಿ ಇಬ್ಬರು ಕದ್ದು ಮುಚ್ಚಿ ಡೇಟ್‌ ಮಾಡಲು ಆರಂಭಿಸಿದರು. ಈ ವೇಳೆ ವಿರಾಟ್‌ ಕೊಹ್ಲಿ ಟೀಂ ಇಂಡಿಯಾದ (Team India) ಸ್ಟಾರ್‌ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದರು. ಪರಿಣಾಮ ಕದ್ದು ಮುಚ್ಚಿ ಸಾರ್ವಜನಿಕ ಸ್ಥಳಗಳಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೋದರೂ ಜನರು ಗುರುತು ಹಿಡಿಯುತ್ತಿದ್ದರು ಜೊತೆಗೆ ಮಾಧ್ಯಮಗಳ ಕ್ಯಾಮೆರಾದ ಕಣ್ಣು ಇವರನ್ನು ಸೆರೆ ಹಿಡಿಯುತ್ತಿದ್ದವು. ಇಬ್ಬರ ಬಗ್ಗೆ ಅಂತೆ ಕಂತೆ ಸುದ್ದಿಗಳು ಪ್ರಕಟವಾಗುತ್ತಿದ್ದಂತೆ ಕೊಹ್ಲಿ ಮತ್ತು ಅನುಷ್ಕಾ ಸಾರ್ವಜನಿಕವಾಗಿಯೇ ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಇದನ್ನೂ ಓದಿ: ಕಣ್ಣೀರಿಟ್ಟ ಕಿಂಗ್‌ ಕೊಹ್ಲಿ – ಪ್ರೀತಿಯ ಅಪ್ಪುಗೆ ನೀಡಿ ಸಾಂತ್ವನ ಹೇಳಿದ ಅನುಷ್ಕಾ

    2014ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಮುಂಬೈಗೆ ಲ್ಯಾಂಡ್‌ ಆದ ಕೊಹ್ಲಿ ತಮ್ಮ ನಿವಾಸಕ್ಕೆ ಹೋಗಿರಲಿಲ್ಲ. ಮೊದಲು ಹೋಗಿದ್ದು ಪ್ರಿಯತಮೆ ಅನುಷ್ಕಾ ಮನೆಗೆ. ಆ ವರ್ಷವೇ ನ್ಯೂಜಿಲೆಂಡ್ ಪ್ರವಾಸದ ಬಳಿಕ ವಿರಾಟ್ ಮನೆಗೂ ಅನುಷ್ಕಾ ಭೇಟಿ ನೀಡಿ ಸರ್‌ಪ್ರೈಸ್‌ ನೀಡಿದ್ದರು. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಹೆಚ್ಚು ಸುದ್ದಿಯಾಗಿದ್ದು 2014-15 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ. ಧೋನಿ ಟೆಸ್ಟ್‌ ಕ್ರಿಕೆಟಿಗೆ ನಿವೃತ್ತಿ ನಿರ್ಧಾರ ತೆಗೆದುಕೊಂಡಾಗ ಕೊಹ್ಲಿಗೆ ನಾಯಕತ್ವ ಪಟ್ಟ ಸಿಕ್ಕಿತು. ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಗ್ಯಾಲರಿಯಲ್ಲಿ ಕುಳಿತು ವಿರಾಟ್ ಹುರಿದುಂಬಿಸುತ್ತಿದ್ದರು. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ ವೇಳೆ ಶತಕ ಬಾರಿಸಿದ ಬಳಿಕ ವಿರಾಟ್ ಬ್ಯಾಟ್ ಮೂಲಕ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಸಹ ನೀಡಿದ್ದರು. ಇದನ್ನೂ ಓದಿ: Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    ಇಬ್ಬರು ಪ್ರೇಮಿಗಳ ಬಗ್ಗೆ ಅಂದಿನ ಟೀಂ ಇಂಡಿಯಾದ ಕೋಚ್‌ ಆಗಿದ್ದ ರವಿಶಾಸ್ತ್ರಿ ಮಾಧ್ಯಮದ ಬಳಿಯೂ ಹಂಚಿಕೊಂಡಿದ್ದರು. ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದರು. ಈ ವೇಳೆ ಅವರು ನನ್ನ ಬಳಿ ಬಂದು ಪ್ರವಾಸದ ಸಂದರ್ಭದಲ್ಲಿ ಪತ್ನಿಯರನ್ನು ಮಾತ್ರ ಕರೆದುಕೊಂಡು ಬರಲು ಬಿಸಿಸಿಐ ನುಮತಿ ನೀಡುತ್ತದೆ. ಆದರೆ ನಾನು ನನ್ನ ಗೆಳತಿಯನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದ್ದರು. ಕೊಹ್ಲಿಯಿಂದ ಈ ಪ್ರಸ್ತಾಪ ಬರುತ್ತಿದ್ದಂತೆ ನಾನು ಬಿಸಿಸಿಐ ಜೊತೆ ಕರೆ ಮಾಡಿ ಅನುಷ್ಕಾಗೆ ಬರಲು ಅನುಮತಿ ನೀಡಿದ್ದೆ ಎಂದು ತಿಳಿಸಿದ್ದರು.

    ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಡಿಯನ್ ಹೈ ಕಮಿಷನ್‌ಗೆ ಭೇಟಿ ನೀಡಿದಾಗಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲೂ ಫ್ಲೈಯಿಂಗ್ ಕಿಸ್ ನೀಡಿ ಅನುಷ್ಕಾಗೆ ಸರ್‌ಪ್ರೈಸ್‌ ನೀಡಿದ್ದರು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಎಫ್‌ಸಿ ಗೋವಾ ತಂಡದ ಮಾಲೀಕರಾಗಿದ್ದ ಕೊಹ್ಲಿ ಅವರು ಅನುಷ್ಕಾ ಜೊತೆಗೂಡಿ ತಂಡವನ್ನು ಹುರಿದುಂಬಿಸುತ್ತಿದ್ದರು. ಆರ್‌ಸಿಬಿ ಪಂದ್ಯಗಳಲ್ಲಿ ಭಾಗವಹಿಸಿ ಕೊಹ್ಲಿಗೆ ಅನುಷ್ಕಾ ಚಿಯರ್‌ ಮಾಡುತ್ತಿದ್ದರು. ಆದರಲ್ಲೂ ಕೊಹ್ಲಿ ಬೇಗನೇ ಔಟಾದರೆ ಅನುಷ್ಕಾ ಬಹಳ ಬೇಜಾರ್‌ ಆಗುತ್ತಿದ್ದರು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ವೈರಲ್‌ ಆಗುತ್ತಿತ್ತು.

    ಯುವರಾಜ್ ಸಿಂಗ್ ಹಾಗೂ ಮಾಜಿ ವೇಗಿ ಜಹೀರ್ ಖಾನ್ ವಿವಾಹ ಸಮಾರಂಭದಲ್ಲೂ ಇಬ್ಬರು ಜೊತೆಯಾಗಿ ಡ್ಯಾನ್ಸ್‌ ಮಾಡಿ ರಂಜಿಸಿದ್ದರು. 2015 ಮತ್ತು 2016 ರಲ್ಲಿ ಕೊಹ್ಲಿ ಆಟ ಮಂಕಾಗಿತ್ತು. ಕೊಹ್ಲಿ ಕಳಪೆ ಆಟಕ್ಕೆ ಅನುಷ್ಕಾನೇ ಕಾರಣ ಎಂದು ಕ್ರಿಕೆಟ್‌ ಅಭಿಮಾನಿಗಳು ಟೀಕಿಸಲು ಆರಂಭಿಸಿದ್ದರು. ಪದೇ ಗ್ಯಾಲರಿಯಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿರುವುದರಿಂದ ವಿರಾಟ್ ಕೆಟ್ಟ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಮಾತುಗಳು ಬರತೊಡಗಿತು. ಜೊತೆ ಅನುಷ್ಕಾ ಶರ್ಮಾ ಅವರ ಪೇಜ್‌ನಲ್ಲೂ ಕೆಟ್ಟ ಕೆಟ್ಟ ಕಮೆಂಟ್‌ಗಳು ಬರತೊಡಗಿತು. ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ವಿರುದ್ಧ ಟ್ರೋಲ್‌ಗಳು ಹೆಚ್ಚಾಯಿತು.

    ಟೀಕೆಗಳು ಜಾಸ್ತಿ ಆಗುತ್ತಿದ್ದಂತೆ ಅನುಷ್ಕಾ ಪರ ಮಾತನಾಡಿದ ಕೊಹ್ಲಿ, ಟ್ರೋಲ್ ಮಾಡುವ ಜನರಿಗೆ ನಾಚಿಕೆಯಾಗಬೇಕು. ಆಕೆ ಯಾವತ್ತೂ ತನಗೆ ಧನಾತ್ಮಕ ಚಿಂತನೆಯನ್ನು ನೀಡಿದ್ದಾಳೆ ಎಂದು ಬರೆದು ‘SHAME’ ಎಂದು ಬರೆದಿರುವ ಪೋಸ್ಟರ್‌ ಅನ್ನು ಪೋಸ್ಟ್‌ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. 2016 ರಲ್ಲಿ ಮಾಡಿದ ಈ ಟ್ವೀಟ್‌ ಅನ್ನು 98 ಸಾವಿರ ಮಂದಿ ಲೈಕ್‌ ಮಾಡಿದ್ದರೆ 35 ಸಾವಿರ ಜನ ರಿಟ್ವೀಟ್‌ ಮಾಡಿ ಕೊಹ್ಲಿಗೆ ಬೆಂಬಲ ನೀಡಿದ್ದರು.

    ಲವ್‌ ಸ್ಟೋರಿ ಚರ್ಚೆಯಾಗುತ್ತಿದ್ದಂತೆ ಇಬ್ಬರು ಪರಸ್ಪರ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ್ದರು. ಅಷ್ಟೇ ಅಲ್ಲದೇ ಇಬ್ಬರೂ ಸಾರ್ವಜನಿಕವಾಗಿ ಕಾಣಿಸುವುದನ್ನು ನಿಲ್ಲಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಇಬ್ಬರ ಮಧ್ಯೆ ಬ್ರೇಕಪ್‌ ಆಗಿದೆ ಎಂಬ ವದಂತಿಯೂ ಬರತೊಡಗಿತು. ಮತ್ತೆ ನಮ್ಮ ವಿರುದ್ಧ ನೆಗೆಟಿವ್‌ ಅಭಿಪ್ರಾಯ ಬರಬಾರದು ಎಂದು ಇವರಿಬ್ಬರೂ ಉದ್ದೇಶಪೂರ್ವಕವಾಗಿ ಈ ನಿರ್ಧಾರ ಕೈಗೊಂಡಿದ್ದರು ಎಂಬ ಮಾತು ನಂತರ ಬಂದಿತ್ತು. ಕೆಲ ದಿನಗಳಲ್ಲಿ ಇಬ್ಬರು ಪರಸ್ಪರ ಫಾಲೋ ಮಾಡಿಕೊಂಡರು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್‌ ವದಂತಿಗೆ ಬ್ರೇಕ್‌ ಹಾಕಿದರು.

    ಅಂತಿಮವಾಗಿ ಡಿಸೆಂಬರ್ 2017 ರಲ್ಲಿ ವಿರುಷ್ಕಾ (ವಿರಾಟ್‌+ ಅನುಷ್ಕಾ) ಜೋಡಿ ಇಟಲಿಯ ಟಸ್ಕನಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಈ ಮದುವೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಜನವರಿ 2021 ರಲ್ಲಿ ಮಗಳು ವಾಮಿಕಾ ಜನಿಸಿದರೆ, ಫೆಬ್ರವರಿ 2024 ರಲ್ಲಿ ಅಕಾಯ್ ಜನಿಸಿದ್ದ.

    ಹಲವು ಸಂದರ್ಶನಗಳಲ್ಲಿ ವಿರಾಟ್‌ ಕೊಹ್ಲಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಅನುಷ್ಕಾ ಬಂದಾಗಿನಿಂದ ನನ್ನಲ್ಲಿರುವ ಸಾಕಷ್ಟು ನೆಗೆಟಿವ್‌ ಯೋಚನೆಗಳು ದೂರ ಆಗಿದೆ. ನನಗೆ ಅನುಷ್ಕಾ ತುಂಬಾ ಕಫರ್ಟ್‌ ಜೋನ್‌ ಆಗಿದ್ದಾಳೆ ಎಂದು ಪತ್ನಿಯ ಮೇಲಿನ ಪ್ರೀತಿಯನ್ನು ವಿರಾಟ್‌ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

     

     

  • ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!

    ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು!

    ಹೆಚ್ಚೆಂದರೆ ಇದು 8ನೇ ತಿಂಗಳು ಪ್ರಾರಂಭವಾಗುತ್ತಾ ಬಂತು. ಇದೊಂದು ನೆಪ ಅದರಲ್ಲೊಂದು ನೆನಪು. ನೆನಪಿನಲ್ಲೊಂದು ಕಾಡುವ ನೋವು. ಕಣ್ಣೆರಡಕ್ಕೂ ಕಾತುರ ಕಣ್ಣುಂಬಿಕೊಳ್ಳಲು, ನಾ ನಾಡುವ ಪ್ರತಿ ಮಾತುಗಳು ನನ್ನಲ್ಲೇ ಭಯ ಹುಟ್ಟಿಸುತ್ತಿದೆ. ಇದೊಂದು ನನ್ನದೇ ಆಯ್ಕೆ. ನನ್ನ ಯಶಸ್ಸಿನ ಹಾದಿಗೆ ಇದೊಂದು ಹೆಜ್ಜೆ ಮಾತ್ರ.

    ಆಸೆಯಿಂದ ನನ್ನದೇ ನಿರ್ಧಾರದೊಂದಿಗೆ ದೂರದಲ್ಲೊಂದು ಊರಿಗೆ ಬಂದು ಓದುತ್ತಿರುವೆ. ಆದರೆ ಇದೆಲ್ಲವೂ ನನ್ನ ಹಸಿವನ್ನು ನೀಗಿಸಿ ಉಸಿರನ್ನು ನೀಡುತ್ತಿದೆ. ಇದೆಲ್ಲದರ ಮಧ್ಯೆ ಕಾಡುವ ನೆನಪೊಂದೇ ಅದು ಅವನು. ನನ್ನ ಬದುಕಿಗೆ ಉಸಿರಾದವನು. ನನ್ನ ಕನಸಿಗೆ, ಯಶಸ್ಸಿಗೆ ದಾರಿಯಾದವನು. ನನ್ನೆಲ್ಲಾ ನೋವಲ್ಲೂ ಮರುಕಳಿಸುವ ನೆನಪು ಅವನದ್ದು. ನಾ ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು. ನನ್ನೆಲ್ಲಾ ಆಸ್ತಿತ್ವಕ್ಕೆ ಅವನೇ ರಾಯಭಾರಿ ಅವನೇ ರೂವಾರಿ, ಮಾತಾಡುವ ಮಾತಿನಲ್ಲೂ ಪ್ರತಿಧ್ವನಿಸುವ ಸ್ವರ ಅವನದು.

    ಹೀಗೊಂದು ದಿನ ಕೋವಿಡ್ ಸಮಯ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದು ಒಂದು ಜವಾಬ್ದಾರಿಯಾಗಿತ್ತು. ಆ ದಿನ ನಾನು ವ್ಯಾಕ್ಸಿನೇಷನ್ ಮಾಡಿಸಿಕೊಂಡು ಖುಷಿಯಲ್ಲಿ ಬಂದೆ. ಆ ದಿನ ರಾತ್ರಿ ಕಣ್ಮುಚ್ಚಿದರೂ ಕಣ್ತೆರೆದರೂ ಬಿಸಿ ಅನುಭವ, ದೇಹದ ಸುತ್ತಮುತ್ತ ಅದೊಂದು ಕೆಂಡಾಮಂಡಲದ ಭಾವ. ಹೌದು, ಆ ರಾತ್ರಿ ವಿಪರೀತ ಜ್ವರ. ನನ್ನ ಈ ಏರಿಳಿತದ ನಡುವೆ ಬಂದದ್ದು ಅವನು, ನನ್ನ ತಲೆಗೆ, ಅಂಗಾಲಿಗೆ ಎಣ್ಣೆ ಸವರಿ, ಮಸಾಜ್ ಮಾಡಿ ನನಗೊಂದು ಕಾಳಜಿಯ ನಗು ನೀಡಿ ಹೋದದ್ದು ಅವನು.

    ತನ್ನ ಕೈ ಹಿಡಿದು ಜಗತ್ತಿನಲ್ಲಿರುವ ಪ್ರತಿಯೊಂದು ರೀತಿಯ ಏರುಪೇರುಗಳ ಬಾಗಿಲನ್ನು ತೋರಿಸಿ, ನನ್ನನ್ನು ಯಶಸ್ಸಿನ ಬಾಗಿಲೊಳಗೆ ಬಿಟ್ಟು ತನ್ನನ್ನು ನನ್ನೊಳಗೆ ಕಂಡ ಜೀವಿಯದು. ದೂರದಲ್ಲಿರುವ ಜೀವದ ನಗುವನ್ನು ಕಣ್ಮುಚ್ಚಿ ನೆನೆದು ಕಣ್ತುಂಬಿಕೊಳ್ಳುತ್ತಿರುವೆ.

    ಬಾಡಿಗೆ ನಗುವೊಂದನ್ನು ಹೊತ್ತು ತಿರುಗುತ್ತಿರುವ ನನಗೆ ಅವನ ಸ್ವಂತಿಕೆಯ ನಗುವೊಂದು ಬೇಕಾಗಿದೆ. ನನ್ನೆಲ್ಲಾ ಆಸೆಗಳಿಗೆ ತನ್ನ ಕನಸುಗಳನ್ನು ಧಾರೆಯರೆದವ ಅವನು, ಇರುವ ತನಕ ಒಮ್ಮೆ ಬದುಕಿಬಿಡುವೆ ಅವನ ಕನಸುಗಳೇ ನನ್ನ ಆಸೆಯೆಂಬಂತೆ!

    ಹೌದು. ಎಲ್ಲವೂ ಅವನೇ, ಅವನಿಂದಲೇ, ಅವನಿಗಾಗಿಯೇ..

    ಅಮ್ಮ ನನ್ನ ಹಸಿವಾದರೆ, ಅಪ್ಪ ನನ್ನ ಉಸಿರು ನನ್ನೆಲ್ಲಾ ಕನಸಿಗೂ ಉಸಿರು ತುಂಬಿಸಿ ಸ್ಫೂರ್ತಿ ನೀಡುವುದು ಅವನು .

    ಅವನು ಅವನೇ ನನ್ನ ಅಪ್ಪ… ನನ್ನೊಲುಮೆಯ ಅಂತರಾತ್ಮ ಅವನು!

  • ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

    ಪ್ರೇಮವೆಂದರೆ ನನ್ನ ಪಾಲಿಗೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!

    – ಗೋಪಾಲಕೃಷ್ಣ 

    ವಳು ನನ್ನ ಕಣ್ಣಿಗೆ ಮೊದಲು ಬಿದ್ದ ಆ ನೆನೆಪಿದೆ ನೋಡಿ, ಅದನ್ನು ನೆನೆದರೆ ಅಲ್ಲೆ ಟೀ ಕುಡಿಯುತ್ತಿದ್ದ ಅದೇ ದೃಶ್ಯ ಕಣ್ಣಿಗೆ ಕಟ್ಟುತ್ತದೆ! ಕಾರ್ಮೋಡ ಕವಿದ ಸಂಜೆ, ಹನಿ ಹನಿ ಮಳೆ, ಗುಡುಗು…. ನವೀಲೇ ಆ ಸಂಭ್ರಮಕ್ಕೆ ಸಿಕ್ಕು ನಲಿವಂತೆ, ನೀಲಿ ಸೀರೆ ಉಟ್ಟು ಎದುರಿಗೆ ಮುಗುಳ್ನಗೆಯ ಮಿಂಚನ್ನು ಹಂಚಿ ಹೋಗಿದ್ದಳು! ನನ್ನನ್ನು ಕದ್ದು!

    ಆ ಕೇವಲ ಸ್ಟೇಟಸ್‌ನಂತೆ 30 ಸೆಕೆಂಡ್‌ ಕಳೆದು ಹೋದ ಕ್ಷಣಗಳು… ಅವಳನ್ನು ಮತ್ತೆ ಮತ್ತೆ ಹುಡುಕಿ ಕಣ್ತುಂಬಿಕೊಳ್ಳುವಂತೆ ನನ್ನನ್ನು ಪ್ರೇರೇಪಿಸುತ್ತಿತ್ತು. ಆದರೆ ಅದಾದ ಮೇಲೆ ಮತ್ತೆ ಅವಳನ್ನು ನೋಡಿದ್ದು ಒಂದು ವರ್ಷವಾದ್ಮೇಲೆ! ಅವಳ್ಯಾರು, ಹೆಸರು ಏನು ಗೊತ್ತಿಲ್ಲ, ಪ್ರೇಮವೋ (Love) ಎನೋ ಅರಿವಿಲ್ಲ. ಅವಳನ್ನು ಮತ್ತೆ ನೋಡ್ಬೇಕು, ಮಾತಾಡ್ಸಬೇಕು ಅಂತಾನೇ ಕಾಯ್ತಿದ್ದೆ ಅಷ್ಟೇ! ಅದೇ ಜಾಗ ಒಂದು ವರ್ಷದ ಬಳಿಕ ಕಣ್ಣಿಗೆ ಬಿದ್ದ ಅವಳು, ಸೀದಾ ಬಂದು ಮಾತಾಡಿಸಿದ್ಲು!

    ತುಂಬಾ ಪರಿಚಿತಳಂತೆ.. ಇಷ್ಟು ದಿನ ಎಲ್ಲೋ ಹೋಗಿದ್ದೆ..? ಅದೇ ಅವಳ ಮೊದಲ ಮಾತು.. ಆಮೇಲೆ ಜೀವದ ಭಾಗವೇ ಆಗಿ ಹೋದಳು. ಹೀಗೆ ಕೆಲವು ವರ್ಷಗಳು ಕಳೆದ ಮೇಲೆ ಅದ್ಯಾವ ದೃಷ್ಟಿ ಬಿತ್ತೋ ಗೊತ್ತಿಲ್ಲ, ಎದೆಯ ಬನಕ್ಕೆ ಬಂದಿದ್ದ ಪ್ರೇಮದ ನವಿಲು ಒಂದಷ್ಟು ಕಾಲ ನನ್ನ ಕಣ್ಣಿಗೆ ಸೌಂದರ್ಯದ ರಸದೌತಣ ನೀಡಿ ಮಿಂಚಿನಂತೆಯೇ ಮಾಯವಾಯಿತು!

    ಈಗ ಅವಳ ನೆನಪು ನನ್ನ ಬಳಿ ಮಾತಾಡದ ದಿನವೇ ಇಲ್ಲ! ಪ್ರೇಮವೆಂದರೆ ಬರಿ ನೆನಪುಗಳೇ ಎನ್ನುವಷ್ಟು ರಾಶಿ ನೆನಪುಗಳನ್ನು ಅವಳು ಉಳಿಸಿ ಹೋಗಿದ್ದಾಳೆ. ಅದರಲ್ಲಿ ಅವಳ ಸೀರೆಯ ಮೇಲಿದ್ದ ಕಸೂತಿಯ ನವಿಲಿನಿಂದ ಜಾರಿದ ಗರಿಯೊಂದು ಹಾಗೇ ಕಾಡುವ ಮುದ್ದಾದ ನೆನಪುಗಳಲ್ಲಿ ಒಂದಾಗಿ ಉಳಿದು ಬಿಟ್ಟಿದೆ! ಅದರ ಕಚಗುಳಿಯೇ ನನ್ನನ್ನು ಆಗಾಗ ನಗಿಸುತ್ತದೆ. ಚುಚ್ಚಿ ಅಳಿಸುತ್ತದೆ. ಶಾಯಿಗೆ ಅದ್ದಿ ಕವಿಯಾಗಿ ಬರೆಸುತ್ತದೆ..!

    ಹೀಗೆ ನನ್ನ ಪಾಲಿಗೆ ಪ್ರೇಮವೆಂದರೆ ಅವಳ ಸೀರೆಯ ಮೇಲಿದ್ದ ಜಾರಿದ ನವಿಲ ಗರಿ!! ಅದು ಸದಾ ಮುಂಗಾರು ಮಿಂಚಿಗೆ ಸಿಕ್ಕು ನಲಿವ ಸಂಭ್ರಮವೇ!                                                                                                                                                                  

  • Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

    ಫೆಬ್ರವರಿ ಅಂದ್ರೆ ಮೊದಲು ನೆನಪಾಗುವುದೇ ಪ್ರೇಮಿಗಳ ದಿನ. ಫೆ. 7ರಿಂದ 14ರವರೆಗೆ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತದೆ. ರೋಸ್ ಡೇ ಇಂದ ಪ್ರಾರಂಭವಾಗುವ ಪ್ರೇಮಿಗಳ ದಿನಾಚರಣೆ ವ್ಯಾಲೆಂಟೈನ್ಸ್ ಡೇಯಲ್ಲಿ ಕೊನೆಗೊಳ್ಳುತ್ತದೆ. ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳು ತಮ್ಮ ಪ್ರೇಯಸಿಗೆ ಅಥವಾ ಪ್ರಿಯಕರನಿಗೆ ವಿಭಿನ್ನವಾದ ರೀತಿಯಲ್ಲಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.

    ಪ್ರೀತಿ ಒಂದು ಮಧುರವಾದ ಭಾವನೆ, ಪ್ರೀತಿ ಇಲ್ಲದೆ ಬಹುಶಃ ಜಗತ್ತಿನಲ್ಲಿ ಯಾರೂ ಬದುಕಲು ಸಾಧ್ಯವೇ ಇಲ್ಲ. ನಿಮ್ಮಲ್ಲಿ ಇರುವ ಪ್ರೀತಿಯ ಭಾವನೆ ನಿಮ್ಮ ಸಂಗಾತಿಯಲ್ಲಿ ಕೂಡ ಇರಬೇಕು, ಆಗಲೇ ಅದು ಪರಿಶುದ್ಧ ಪ್ರೀತಿ ಎನಿಸಿಕೊಳ್ಳುತ್ತದೆ. ಈಗಿನ ಪೀಳಿಗೆಯ ಯುವಕರು ಅಥವಾ ಯುವತಿಯರು ಸೋಶಿಯಲ್ ಮೀಡಿಯಾದಲ್ಲೇ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಮೂಲಕ ಪ್ರಪೋಸ್ ಮಾಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

    ಹಿಂದಿನ ಕಾಲದಲ್ಲಿ ಈಗಿನ ತರ ಆಂಡ್ರಾಯ್ಡ್ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳು ಇರ್ಲಿಲ್ಲ. ಆಗಿನ ಕಾಲದಲ್ಲಿ ಪ್ರೇಮ ಪತ್ರ ಬರೆಯುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಹಾಗಿದ್ದರೆ ಮೊದಲ ಪ್ರೇಮ ಪತ್ರ ಬರೆದವರು ಯಾರು ಎಂಬುದು ನಿಮಗೆ ಗೊತ್ತಾ? ಇಲ್ಲಾಂದ್ರೆ ಇಂದು ನಾವು ತಿಳಿಸಿಕೊಡುತ್ತೇವೆ.

    ಮೊದಲ ಪ್ರೇಮ ಪತ್ರಗಳ ಬಗ್ಗೆ ಮಾತನಾಡಿದಾಗ, ಅವುಗಳು ಭಾರತೀಯ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನುವುದು ತಿಳಿದುಬರುತ್ತದೆ. ಹೌದು, ಮೊದಲ ಪ್ರೇಮ ಪತ್ರವನ್ನು ಸುಮಾರು 2,000 ವರ್ಷಗಳ ಹಿಂದೆ ಬರೆಯಲಾಗಿದೆ ಎಂದು ಉಲ್ಲೇಖಗಳು ತಿಳಿಸಿವೆ.

    ವಿದರ್ಭ ರಾಜಕುಮಾರಿ ರುಕ್ಮಿಣಿಯು ಶ್ರೀಕೃಷ್ಣನಿಗೆ ಮೊದಲ ಪ್ರೇಮ ಪತ್ರ ಬರೆದಳು ಎನ್ನಲಾಗಿದೆ. ಮಹರ್ಷಿ ವೇದವ್ಯಾಸರು 7 ಸುಂದರ ಶ್ಲೋಕಗಳೊಂದಿಗೆ ಬರೆದ ಶ್ರೀಮದ್ ಭಗವದ್ಗೀತೆಯ ಸರ್ಗದ 10 ನೇ ಅಧ್ಯಾಯದ, 52ರ ಭಾಗದಲ್ಲಿ ಇದು ಉಲ್ಲೇಖವಾಗಿದೆ. ಅದರಂತೆ ರುಕ್ಮಿಣಿಯು ತನ್ನ ಸ್ನೇಹಿತೆ ಸುನಂದಾ ಮೂಲಕ ಈ ಪ್ರೇಮ ಪತ್ರವನ್ನು ಶ್ರೀಕೃಷ್ಣನಿಗೆ ಕಳುಹಿಸಿದಳು.

    ಪುರಾಣದ ಕಥೆಯ ಪ್ರಕಾರ, ರುಕ್ಮಿಣಿ ಶ್ರೀ ಕೃಷ್ಣನ ಗುಣಗಳು ಮತ್ತು ಧೈರ್ಯದ ಬಗ್ಗೆ ತಿಳಿದುಕೊಂಡು ಅವನನ್ನು ಪ್ರೀತಿಸಲು ಪ್ರಾರಂಭಿಸಿದಳು. ಕೃಷ್ಣನನ್ನೇ ಮದುವೆಯಾಗಬೇಕೆಂದು ಕೂಡ ಬಯಸಿದ್ದಳು. ಆದರೆ, ರುಕ್ಮಿಣಿಯ ಸಹೋದರ ಅವಳನ್ನು ತನ್ನ ಸ್ನೇಹಿತ ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಲು ಬಯಸಿದನು. ಇದು ರುಕ್ಮಿಣಿಗೆ ಇಷ್ಟವಿರಲಿಲ್ಲ. ಅದಕ್ಕಾಗಿಯೇ ರುಕ್ಮಿಣಿ ಶ್ರೀಕೃಷ್ಣನಿಗೆ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ರುಕ್ಮಿಣಿಯ ಪ್ರೇಮ ಪತ್ರವನ್ನು ಓದಿದ ಕೃಷ್ಣ ವಿದರ್ಭಕ್ಕೆ ತೆರಳಿ ರುಕ್ಮಿಣಿಯನ್ನು ಅಲ್ಲಿಂದ ಅಪಹರಿಸಿ ಕರೆದುಕೊಂಡು ಹೋದನು.

    ಹಿಂದೆಲ್ಲಾ ಪ್ರೇಮ ನಿವೇದನೆಗೆ ಇದಿದ್ದು ಒಂದೇ ಮಾರ್ಗ, ಅದು ಲವ್‌ ಲೆಟರ್‌. ಕಾಲ, ತಂತ್ರಜ್ಞಾನ ಬದಲಾದಂತೆ ಪ್ರೇಮದ ಪರಿಭಾಷೆಯು ಬದಲಾಗಿದೆ. ಲವ್‌ಲೆಟರ್‌ಗಳು ಬರೆಯುವುದಿರಲಿ ಮೆಸೇಜ್‌ ಕೂಡ ಟೈಪ್‌ ಮಾಡುವ ಕಾಲ ಈಗಿಲ್ಲ. ಈಗೆಲ್ಲಾ ಮೀಮ್ಸ್‌, ಇಮೋಜಿ, ಜಿಫ್‌ಗಳ ಕಾಲ. ಎಲ್ಲ ಭಾವನೆಗಳು ಅದರಲ್ಲಿಯೇ ವಿನಿಮಯವಾಗುತ್ತದೆ.

    ಪ್ರೇಮಪತ್ರ ಬರೆಯುವುದು ಒಂದು ಕಲೆ. ಇದನ್ನು ಎಲ್ಲರಿಂದಲೂ ಬರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಮನದ ಮಾತನ್ನು ಅಕ್ಷರ ರೂಪಕ್ಕೆ ಇಳಿಸಲು ಯಾವ ಕಲೆಯೂ ಬೇಡ ಅಲ್ಲವೇ?