Tag: Vajubhai Vala

  • ಅಂಜನಾದ್ರಿಗೆ ರಾಜ್ಯಪಾಲರ ಭೇಟಿ

    ಅಂಜನಾದ್ರಿಗೆ ರಾಜ್ಯಪಾಲರ ಭೇಟಿ

    ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದರ ಭಾಗವಾಗಿ ಇದೀಗ ಅಂಜನಾದ್ರಿಗೆ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಭೇಟಿ ನೀಡಿದರು.

    ರಾಜ್ಯಪಾಲರಿಂದ ವಿಶೇಷ ಪೂಜೆ: ನಿನ್ನೆ ಹಂಪಿ ಕನ್ನಡ ವಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲರು ಇಂದು ಬೆಳಗ್ಗೆ 7.40ಕ್ಕೆ ಅಂಜನಾದ್ರಿ (Anjanadri) ಗೆ ಭೇಟಿ ನೀಡಿದರು. ಅಂಜನಾದ್ರಿ ಬೆಟ್ಟ ಏರಲು ಸಾಧ್ಯವಾಗದ ಕಾರಣ ಜಿಲ್ಲಾ ಆಡಳಿತ ಅಂಜನಾದ್ರಿ ಬೆಟ್ಟದ ಕೆಳಗಡೆ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮೊದಲು ಪೂರ್ಣ ಕುಂಭದ ಮೂಲಕ ಅರ್ಚಕರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು. ಬಳಿಕ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್ – ನಾನು ಸಿಎಂ ಆಗ್ಬೋದು ಅಂದ ಪ್ರತಿಭಾ ಸಿಂಗ್

    ರಾಜ್ಯಪಾಲರ ಆಗಮನದ ಮುನ್ನ ಹೈಡ್ರಾಮಾ: ರಾಜ್ಯಪಾಲರು ಅಂಜನಾದ್ರಿ ಭೇಟಿ 7.40ಕ್ಕೆ ನಿಗದಿಯಾಗಿತ್ತು. ಇದಕ್ಕೂ ಅರ್ಧಗಂಟೆ ಪೂರ್ವದಲ್ಲಿ ಈ ಮುಂಚೆ ಅಂಜನಾದ್ರಿಯ ಪ್ರಧಾನ ಅರ್ಚಕರಾಗಿದ್ದ ವಿದ್ಯಾದಾಸ್ ಬಾಬಾ ಹಾಗೂ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ನಡುವೆ ಹೈಡ್ರಾಮಾ ನಡೆಯಿತು. ವಿದ್ಯಾದಾಸ್ ಬಾಬಾ ಗೆ ಜಿಲ್ಲಾ ಆಡಳಿತ ಅಂಜನಾದ್ರಿಯಲ್ಲಿನ ಆಂಜನೇಯನಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂಜೆ ಮಾಡಲು ಅವಕಾಶ ನೀಡಿದೆ. ಇದನ್ನೇ ಇಟ್ಟುಕೊಂಡು ವಿದ್ಯಾದಾಸ್ ಬಾಬಾ ರಾಜ್ಯಪಾಲರು ಪೂಜೆ ಸಲ್ಲಿಸುವ ಕೆಳ ಭಾಗಕ್ಕೆ ಬಂದು ನಾನು ಪೂಜೆ ಮಾಡುತ್ತೇನೆಂದು ಹೇಳಿದ್ದಾನೆ. ಆದರೆ ಇದಕ್ಕೆ ಜಿಲ್ಲಾ ಆಡಳಿತ ಒಪ್ಪಿಲ್ಲ. ಹೀಗಾಗಿ ವಿದ್ಯಾದಾಸ್ ಬಾಬಾ ಗಲಾಟೆ ಮಾಡಲು ಆರಂಭ ಮಾಡಿದ. ಈ ವೇಳೆ ಪೊಲೀಸರು ವಿದ್ಯಾದಾಸ್ ಬಾಬಾನನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ ಕೊನೆ ಗಳಿಗೆಯಲ್ಲಿ ವಿದ್ಯಾದಾಸ್ ಬಾಬಾ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿದ್ದರಿಂದ ಪ್ರಕರಣ ಸುಖಾಂತ್ಯವಾಯಿತು.

    ಅಂಜನಾದ್ರಿ ಬೆಟ್ಟ ಏರಿದ ಮುಸ್ಲಿಂ ಮಹಿಳೆಯರು: ಇತ್ತೀಚೆಗಷ್ಟೆ ಅಂಜನಾದ್ರಿಯಲ್ಲಿ ಧರ್ಮ ದಂಗಲ್ ಆರಂಭವಾಗಿತ್ತು. ಹಿಂದೂ ಧರ್ಮಿಯರನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣೆ ವೇದಿಕೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದಾದ ಒಂದು ವಾರದ ಆಗುವಷ್ಟರಲ್ಲೇ ಇದೀಗ ಮುಸ್ಲಿಂ ಧರ್ಮದ ಮಹಿಳೆಯರು ಅಂಜನಾದ್ರಿಗೆ ಭೇಟಿ ನೀಡಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಿಳೆಯರ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು 575 ಮೆಟ್ಟಿಲುಗಳನ್ನು ಹತ್ತುವ ಮೂಲಕ ಆಂಜನೇಯನ ದರ್ಶನ ಪಡೆದುಕೊಂಡರು. ಈ ಮೂಲಕ ಮುಸ್ಲಿಂ ಮಹಿಳೆಯರು ಭಾವೈಕ್ಯತೆ ಸಾರುವ ಕಾರ್ಯ ಮಾಡಿದ್ದಾರೆ.

    ಈ ಹಿಂದಿನ ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಸಹ ಅಂಜನಾದ್ರಿಗೆ ಭೇಟಿ ನೀಡಿದ್ದರು. ಇದೀಗ ಪ್ರಸ್ತುತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹ ಭೇಟಿ ನೀಡಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಪೂಜೆಯ ಬಳಿಕ ರಾಜ್ಯಪಾಲರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಆಂಜನೇಯನ ಫೋಟೋ ನೀಡಿ ಗೌರವಿಸಿದರು. ರಾಜ್ಯಪಾಲರ ಆಗಮನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ಮೂಲಕ ರಾಜ್ಯಪಾಲರ ಅಂಜನಾದ್ರಿ ಭೇಟಿಯನ್ನು ಯಶಸ್ವಿಗೊಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ವಿಧಾನ ಪರಿಷತ್ ಸಭಾಪತಿಗಳ ಕಾರ್ಯವೈಖರಿ ಇತರರಿಗೆ ಮಾದರಿ: ರಾಜ್ಯಪಾಲರಿಂದ ಶ್ಲಾಘನೆ

    ವಿಧಾನ ಪರಿಷತ್ ಸಭಾಪತಿಗಳ ಕಾರ್ಯವೈಖರಿ ಇತರರಿಗೆ ಮಾದರಿ: ರಾಜ್ಯಪಾಲರಿಂದ ಶ್ಲಾಘನೆ

    ಬೆಂಗಳೂರು: ಕಳೆದ ನಾಲ್ಕು ದಶಕಗಳಿಂದ ಸತತವಾಗಿ 7 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ಪ್ರಸ್ತುತ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನ ಸಾರಥ್ಯ ವಹಿಸಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಕಾರ್ಯವೈಖರಿ ಅನುಕರಣೀಯವಾಗಿದ್ದು, ಎಲ್ಲಾ ಪೀಠಾಸೀನಾಧಿಕಾರಿಗಳಿಗೆ ಮಾದರಿಯಾಗಿದೆ ಎಂದು ನಿರ್ಗಮಿತ ರಾಜ್ಯಪಾಲ ವಜೂಭಾಯಿ ವಾಲಾ ಶ್ಲಾಘಿಸಿದ್ದಾರೆ.

    ಆರು ವರ್ಷ ಹತ್ತು ತಿಂಗಳ ಕಾಲ ನಿರಂತರವಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ವಜೂಭಾಯಿ ವಾಲಾರವರನ್ನು ರಾಜಭವನದಲ್ಲಿಂದು ಭೇಟಿ ಮಾಡಿದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ನಿರ್ಗಮಿತ ರಾಜ್ಯಪಾಲರಿಗೆ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ವಾಜೂಭಾಯಿ ವಾಲಾರವರು, ಸಭಾಪತಿಗಳ ಸದನ ಕಲಾಪ ನಡೆಸುವ ಕಾರ್ಯ ಪದ್ಧತಿಯನ್ನು ಕೊಂಡಾಡಿದ ರಾಜ್ಯಪಾಲರು ನಾಲ್ಕು ದಶಕಗಳ ಸಮಾಜಮುಖಿ ಚಿಂತನೆಗಳು ಮತ್ತು ರಾಜಕೀಯ ಅನುಭವದಿಂದ ವಿಧಾನ ಪರಿಷತ್ತಿನ ಕಲಾಪಗಳನ್ನು ಅರ್ಥಪೂರ್ಣವಾಗಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

    ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್ತಿನಲ್ಲಿ ವರ್ತಮಾನದ ಸಮಸ್ಯೆಗಳ ಕುರಿತು ಚಿಂತನ ಮಂಥನ ನಡೆಯುತ್ತಿರುವುದರ ಜೊತೆಗೆ ಹಲವಾರು ಮೌಲ್ವಿಕ ವಿಚಾರಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ಇಡೀ ಸಮಾಜಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳ ಸಾರ್ಥಕ್ಯದ ಕುರಿತು ಸ್ಪಷ್ಟ ಸಂದೇಶ ನೀಡುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯಪಾಲ ವಜೂಭಾಯಿ ವಾಲಾ ನುಡಿದರು. ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

    ಹಿರಿಯ ಸದಸ್ಯರ ಅನುಭವ, ವಿಚಾರಧಾರೆ ಹಾಗೂ ಸದನದ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. ಆರು ವರ್ಷ ಹತ್ತು ತಿಂಗಳ ಕಾಲ ಕರ್ನಾಟಕದ ಜನತೆ ತಮಗೆ ನೀಡಿದ ಗೌರವ ಹಾಗೂ ಸಹಕಾರಕ್ಕೆ ನಿರ್ಗಮಿತ ರಾಜ್ಯಪಾಲರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.

  • ವಿಶ್ವವಿದ್ಯಾಲಯಗಳಲ್ಲಿ ಕೋವಿಡ್ ನಿರ್ವಹಣೆ- ಕುಲಪತಿಗಳ ಸಮಾವೇಶ ನಡೆಸಿದ ರಾಜ್ಯಪಾಲರು, ಡಿಸಿಎಂ

    ವಿಶ್ವವಿದ್ಯಾಲಯಗಳಲ್ಲಿ ಕೋವಿಡ್ ನಿರ್ವಹಣೆ- ಕುಲಪತಿಗಳ ಸಮಾವೇಶ ನಡೆಸಿದ ರಾಜ್ಯಪಾಲರು, ಡಿಸಿಎಂ

    – ಮೇ 1ರಿಂದ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಸೂಚನೆ
    – ಜಾಗೃತಿ ಅಭಿಯಾನಕ್ಕೆ ನೇತೃತ್ವ ವಹಿಸಲು ವಿಸಿಗಳಿಗೆ ನಿರ್ದೇಶನ

    ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ಕಟ್ಟಿಹಾಕುವ ಉದ್ದೇಶದಿಂದ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲ 33 ವಿಶ್ವವಿದ್ಯಾಲಯಗಳಲ್ಲೂ ಕಠಿಣ ಕೋವಿಡ್ ನಿರ್ವಹಣಾ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ರಾಜ್ಯಪಾಲ ವಜೂಭಾಯ್ ವಾಲ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕುಲಪತಿಗಳ ಸಮಾವೇಶ ನಡೆಸಿದರು.

    ರಾಜಭವನದಲ್ಲಿ ಬುಧವಾರ ಸಂಜೆ ರಾಜ್ಯಪಾಲರು ಕರೆದಿದ್ದ ಸಮಾವೇಶದಲ್ಲಿ ವಿಶ್ವವಿದ್ಯಾಲಯಗಳು, ಅವುಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಲ್ಲ ಕುಲಪತಿಗಳಿಗೆ ಸೂಚಿಸಲಾಯಿತು.

    ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಆಯಾ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಲಸಿಕೆ ಪಡೆಯಬೇಕು. ವಿದ್ಯಾರ್ಥಿಗಳ ಮನವೊಲಿಕೆ ಸೇರಿ ಅದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕುಲಪತಿಗಳು ಕೈಗೊಳ್ಳಬೇಕು ಎಂದು ರಾಜ್ಯಪಾಲರು ಮತ್ತು ಡಿಸಿಎಂ ಸೂಚಿಸಿದರು.

    ನಿರ್ವಹಣಾ ಸಮಿತಿ ರಚಿಸಿಕೊಳ್ಳಿ: ಗವರ್ನರ್
    ಪ್ರತಿಯೊಂದು ವಿವಿ ವ್ಯಾಪ್ತಿಯಲ್ಲಿ ಕುಲಪತಿ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ರಚನೆ ಮಾಡಿಕೊಳ್ಳಿ. ಎರಡನೇ ಅಲೆ ತಡೆಯುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಮೂಲಕ ಪೋಷಕರಿಗೂ ತಿಳಿವಳಿಕೆ ನೀಡಿ. ಎಲ್ಲರಿಗೂ ಲಸಿಕೆ ಕೊಡಿಸಿ. ಶೈಕ್ಷಣಿಕ ಚಟುವಟಿಕೆಗಳ ಸಾಧನೆಯ ಜತೆಗೆ ಕೋವಿಡ್ ಸಾಧನೆಯೂ ಮುಖ್ಯ. ಕೋವಿಡ್ ತಡೆಗಟ್ಟುವಲ್ಲಿ ವಿವಿಗಳ ಪಾತ್ರ ಮಹತ್ವದ್ದು ಎಂದು ರಾಜ್ಯಪಾಲರು ಒತ್ತಿ ಹೇಳಿದರು.

    ಆಯಾ ವಿವಿ ಕಾರ್ಯವ್ಯಾಪ್ತಿಯ ಪ್ರದೇಶದಲ್ಲಿ ಕೋವಿಡ್ ಕುರಿತಾಗಿ ಯಾವುದೇ ಸಹಕಾರ ಬೇಕಿದ್ದರೂ ತಪ್ಪದೇ ಮಾಡಬೇಕು ಎಂದು ಕುಲಪತಿಗಳಿಗೆ ರಾಜ್ಯಪಾಲರು ನಿರ್ದೇಶನ ನೀಡಿದರು.

    ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಿ
    ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈಗ ಚಟುವಟಿಕೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ಅಥವಾ ಸಿಬ್ಬಂದಿಯಲ್ಲಿ ಕೆಮ್ಮು, ಶೀತ, ಜ್ವರ ಇತ್ಯಾದಿ ರೋಗ ಲಕ್ಷಣ ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಪೇಕ್ಷೆ ಮಾಡಬಾರದು. ಒಂದು ವೇಳೆ ಪಾಸಿಟೀವ್ ರಿಸಲ್ಟ್ ಬಂದರೆ ತಕ್ಷಣದಿಂದಲೇ ಚಿಕಿತ್ಸೆ ಪಡೆಯಬೇಕು. ಈ ನಿಟ್ಟಿನಲ್ಲಿ ಕುಲಪತಿಗಳು, ಕುಲ ಸಚಿವರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸಲಹೆ ಮಾಡಿದರು.

    ಲಸಿಕೆ ಪಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ. ಆ ಮೂಲಕ ಅವರ ಪೋಷಕರನ್ನೂ ಮನವೊಲಿಸಿ. ಎಲ್ಲರಲ್ಲೂ ಜಾಗೃತಿ ಮೂಡಿಸಿ. ಆಯಾ ವಿವಿಗಳ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಿ. ಇಡೀ ರಾಜ್ಯದಲ್ಲಿ ಆರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರ ಜತೆಗೆ ಅವರವರ ಪೋಷಕರು ಲಸಿಕೆ ಪಡೆದರೆ ಅದೇ ಒಂದು ದೊಡ್ಡ ಮೈಲುಗಲ್ಲು ಆಗುತ್ತದೆ ಎಂದು ಡಿಸಿಎಂ ಕುಲಪತಿಗಳಿಗೆ ತಿಳಿಸಿದರು.

    ಆಯಾ ವಿವಿಗಳಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಕೋವಿಡ್ ನಿರ್ವಹಣೆಗಾಗಿ ಬಳಸಿಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಸೇರಿದಂತೆ 33 ವಿವಿಗಳ ಕುಲಪತಿಗಳು ಸೇರಿದಂತೆ ಇನ್ನಿತರೆ ಉನ್ನತ ಪ್ರತಿನಿಧಿಗಳು ಇದ್ದರು.

  • ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಮಂತ್ರಣ

    ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಮಂತ್ರಣ

    ಬೆಂಗಳೂರು: ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಇಂದು ರಾಜ್ಯಪಾಲರಾದ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ನಾಳೆ ವಿದುರಾಶ್ವತ್ಥದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲು ಆಮಂತ್ರಣ ನೀಡಿದರು.

    ರಾಜಭವನದಲ್ಲಿ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿದ ಅರವಿಂದ ಲಿಂಬಾವಳಿ ಪುಷ್ಪ ಗುಚ್ಚವನ್ನು ನೀಡಿ, ನಾಳೆ ವಿದುರಾಶ್ವತ್ಥದಲ್ಲಿ ನಡೆಯಲಿರುವ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿ ಕೇಳಿಕೊಂಡರು. ಈ ಸಂದರ್ಭ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಜೊತೆಗಿದ್ದರು.

    ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ ಮೂರು ಸ್ಥಳಗಳನ್ನು ಒಳಗೊಂಡಂತೆ ದೇಶದ 75 ಸ್ಥಳಗಳಲ್ಲಿ 75 ವಾರಗಳ ಕಾಲ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯನ್ನು ರಾಜ್ಯಪಾಲರೊಂದಿಗೆ ಸಚಿವರು ಮಾಹಿತಿ ಹಂಚಿಕೊಂಡರು.

  • ನಿಧಿ ಸಮರ್ಪಣೆ – ರಾಜ್ಯಪಾಲ ವಿಆರ್‌ ವಾಲಾರನ್ನು ಭೇಟಿಯಾದ ಹಿಂದೂ ಮುಖಂಡರು

    ನಿಧಿ ಸಮರ್ಪಣೆ – ರಾಜ್ಯಪಾಲ ವಿಆರ್‌ ವಾಲಾರನ್ನು ಭೇಟಿಯಾದ ಹಿಂದೂ ಮುಖಂಡರು

    ಬೆಂಗಳೂರು: ರಾಜ್ಯಪಾಲರಾದ ವಜುಭಾಯ್ ವಾಲಾ ಅವರನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಇಂದು ಹಿಂದೂ ಸಂಘಟನೆಯ ಮುಖಂಡರು ಭೇಟಿ ಮಾಡಿದರು.

    ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕರಾದ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಹಾಗೂ ಬೆಂಗಳೂರು ಉತ್ತರ ವಿಭಾಗ ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾದ ಮುನಿರಾಜು ಅವರು ಭೇಟಿ ಮಾಡಿದರು.

    ಈ ಸಂದರ್ಭದಲ್ಲಿ ರಾಜ್ಯಪಾಲರು ತಾವು ರಾಮ ಮಂದಿರದ ಕಾರಸೇವೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ವ್ಯಕ್ತಪಡಿಸಿದರು. ಇದೊಂದು ರಾಷ್ಟ್ರ ಕಾರ್ಯ, ರಾಮ ಮಂದಿರ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ದಿವಂಗತ ಸುರೇಶ್ ಅಂಗಡಿ ಕುಟುಂಬಕ್ಕೆ ರಾಜ್ಯಪಾಲರಿಂದ ಸಾಂತ್ವನ

    ದಿವಂಗತ ಸುರೇಶ್ ಅಂಗಡಿ ಕುಟುಂಬಕ್ಕೆ ರಾಜ್ಯಪಾಲರಿಂದ ಸಾಂತ್ವನ

    ಬೆಳಗಾವಿ: ಕೇಂದ್ರ ಸಚಿವ, ಬೆಳಗಾವಿ ಸಂಸದರಾಗಿದ್ದ ದಿ.ಸುರೇಶ್ ಅಂಗಡಿ ಮನೆಗೆ ರಾಜ್ಯಪಾಲ ವಜುಭಾಯಿ ವಾಲಾ ಭೇಟಿ ನೀಡಿದರು. ಬೆಳಗಾವಿಯ ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ರಾಜ್ಯಪಾಲರು, ಅಂಗಡಿ ಪತ್ನಿ, ತಾಯಿ ಹಾಗೂ ಮಕ್ಕಳನ್ನ ಭೇಟಿ ಮಾಡಿ ಸಾಂತ್ವನ ಹೇಳಿದರು.

    ರಾಣಿ ಚೆನ್ನಮ್ಮ ವಿವಿಯ ಘಟಿಕೋತ್ಸವ ಕಾರ್ಯಕ್ರಮ ಮುಗಿಸಿ ಸುರೇಶ್ ಅಂಗಡಿ ಮನೆಗೆ ಭೇಟಿದ ರಾಜ್ಯಪಾಲರು, ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಭಾವಚಿತ್ರಕ್ಕೆ ಪುಪ್ಪ ಅರ್ಪಿಸಿದರು. ಈ ವೇಳೆ ಪತ್ನಿ ಮಂಗಳಾ, ತಾಯಿ ಸೋಮವ್ವ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾಗೆ ಸಾಂತ್ವನ ಹೇಳಿದರು.

    ಸುರೇಶ್ ಅಂಗಡಿ ಉತ್ತಮ ಸಂಸದೀಯ ಪಟುವಾಗಿದ್ದರು. ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದರು ಎಂದು ಅಂಗಡಿ ಕಾರ್ಯಯನ್ನ ಕೊಂಡಾಡಿದರು. ಈ ವೇಳೆ ಪುತ್ರಿಯರ ಶಿಕ್ಷಣ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು, ಏನಾದ್ರು ಸಹಾಯ ಬೇಕಾದ್ರೆ ರಾಜ್ಯಪಾಲರ ಕಚೇರಿಯನ್ನ ಸಂಪರ್ಕಿಸುವಂತೆ ತಿಳಿಸಿದರು.

    ರಾಜ್ಯಪಾಲರ ಭೇಟಿ ವೇಳೆ ಸುರೇಶ್ ಅಂಗಡಿ ಪತ್ನಿ ಹಾಗೂ ತಾಯಿ ಕಣ್ಣೀರು ಸುರಿಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ರಾಜ್ಯಪಾಲರು ಸರಳತೆ ಮೆರೆದಿದ್ದು ವಿಶೇಷವಾಗಿತ್ತು.

    ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದರು. ಕೇಂದ್ರ ಸಚಿವ ಸಂಪುಟದ ರಾಜ್ಯ ರೈಲ್ವೇ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಅಧಿವೇಶನ ಆರಂಭವಾದಾಗ ಎಲ್ಲ ಸಂಸದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಂಗಡಿ ಅವರಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಹೀಗಾಗಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಸೆ.23ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದರು.

  • ಮಾಣಿಕ್ ಷಾ ಮೈದಾನದಲ್ಲಿ ಗಣತಂತ್ರದ ಸಂಭ್ರಮ

    ಮಾಣಿಕ್ ಷಾ ಮೈದಾನದಲ್ಲಿ ಗಣತಂತ್ರದ ಸಂಭ್ರಮ

    – ರಾಜ್ಯಪಾಲರಿಂದ ಧ್ವಜಾರೋಹಣ

    ಬೆಂಗಳೂರು: 71ನೇ ಗಣರಾಜ್ಯೋತ್ಸವದ ಅಂಗವಾಗಿ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಮೈದಾನದಲ್ಲಿ ರಾಜ್ಯಪಾಲ ವಿ.ಆರ್ ವಾಲಾ ಅವರು ಧ್ವಜಾರೋಹಣ ಮಾಡಿದ್ದಾರೆ.

    ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಆಗಮಿಸಿದ ರಾಜ್ಯಪಾಲ ವಿ.ಆರ್ ವಾಲಾ ಅವರನ್ನು ಸಿಎಂ ಬಿ.ಎಸ್.ಯಡಿಯೂಪ್ಪ ಅವರು ಸ್ವಾಗತ ಮಾಡಿದರು. ಬಳಿಕ ರಾಜ್ಯಪಾಲರು ತೆರೆದ ಜೀಪಿನಲ್ಲಿ ಮಾಣೆಕ್ ಷಾ ಮೈದಾದಲ್ಲಿ ಗೌರವರಕ್ಷಾ ವಂದನೆ ಸ್ವೀಕಾರ ಮಾಡಿದರು. ನಂತರ ಭಾರತೀಯ ವಾಯುಪಡೆಯಿಂದ ರಾಷ್ಟ್ರಧ್ವಜಕ್ಕೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ಮಾಡಿದ್ದು, ರಾಷ್ಟ್ರಗೀತೆ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ವೇಳೆ 44 ತುಕಡಿಗಳ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ. ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಕುರಿತು ಪಥ ಸಂಚಲನ ಮಾಡಲಾಗಿದೆ. ನಂತರ ರಾಜ್ಯಪಾಲರು ಭಾಷಣ ಆರಂಭ ಮಾಡಿ ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ. ರಾಜ್ಯಪಾಲ ವಿ.ಆರ್ ವಾಲಾ 10 ಪುಟಗಳ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆ, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಬಿಚ್ಚಿಟ್ಟರು.

    ಕರ್ನಾಟಕವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ ಅನುಷ್ಠಾನಗೊಳಿಸುತ್ತಿದೆ. ಅಪರಾಧ ತಡೆಯುವ ಹಾಗೂ ಅವುಗಳ ತನಿಖೆಯನ್ನು ತುರ್ತಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯಪದ್ಧತಿ ಸುಸಜ್ಜಿತಗೊಳಿಸುತ್ತಿದೆ. ಉತ್ತಮ ಆಡಳಿತ ನಿರ್ವಹಣೆ ಸೂಚ್ಯಂಕದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.

    ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉತ್ತರ ಕರ್ನಾಟಕದ ನೆರೆ ಬಗ್ಗೆ ಪ್ರಸ್ತಾಸಿದ್ದು, ನೆರೆಯಿಂದ ಬೆಳೆ, ಸಾರ್ವಜನಿಕರ ಆಸ್ತಿ-ಪಾಸ್ತಿ ನಾಶ ಆಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ 7 ಲಕ್ಷ ಜನರನ್ನ ಸ್ಥಳಾಂತರ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ಕೊಡಲಾಗಿದೆ. ಮನೆ ನಿರ್ಮಾಣಕ್ಕೆ 5 ಲಕ್ಷ ಭಾಗಶಃ ಮನೆಗಳ ದುರಸ್ತಿಗೆ 50 ಸಾವಿರ ಮಂಜೂರು ಮಾಡಿದೆ. ಎನ್‍ಡಿಆರ್‍ಎಫ್ ಈ ನಿಯಮ ಮೀರಿ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣ ನೀಡಿದೆ ಎಂದು ರಾಜ್ಯದ ಸಾಧನೆಯ ಬಗ್ಗೆ ತಿಳಿಸಿದರು.

    ಈ ಕಾರ್ಯಕ್ರಮ ವೀಕ್ಷಣೆಗೆ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 2 ಸಾವಿರ ಮಕ್ಕಳಿಂದ ಶಾಲಾ ಮಕ್ಕಳಿಂದ 3 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗರುಡ ಪಡೆಯಿಂದ ಆಂತರಿಕ ಭದ್ರತೆ ಕುರಿತು ಅಣಕು ಪ್ರದರ್ಶನ, ಆಕರ್ಷಕ ಬೈಕ್ ಸ್ಟಂಟ್ ಸಾಹಸ ಮತ್ತು ರಾಜ್ಯಪಾಲರಿಂದ ಸರ್ವೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

    ಪೊಲೀಸ್ ಬಂದೋಬಸ್ತ್:
    ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಗ್ರೌಂಡ್‍ನಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮಾಣಿಕ್ ಷಾ ಪರೇಡ್ ಗ್ರೌಂಡ್‍ನಲ್ಲಿ 10 ಕೆ.ಎಸ್.ಆರ್.ಪಿ ತುಕಡಿ, 01 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡಾ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ ಹಾಗೂ ಮೈದಾನದ ಸುತ್ತ 07 ಎ.ಎಸ್. ಚೆಕ್ ತಂಡಗಳ ನಿಯೋಜನೆ ಮಾಡಲಾಗಿದೆ.

  • ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಪ್ರಕರಣದ ವರದಿ ಕೇಳಿದ ರಾಜ್ಯಪಾಲರು

    ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಪ್ರಕರಣದ ವರದಿ ಕೇಳಿದ ರಾಜ್ಯಪಾಲರು

    ಮೈಸೂರು: ಫ್ರೀ ಕಾಶ್ಮಿರ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ರಾಜ್ಯಪಾಲರ ಭವನ ಕೂಡ ಎಂಟ್ರಿ ಕೊಟ್ಟಿದೆ. ಪ್ರಕರಣದ ಬಗ್ಗೆ ಸವಿಸ್ತಾರ ನೀಡುವಂತೆ ರಾಜ್ಯಪಾಲರು ವಿಶ್ವವಿದ್ಯಾಲಯದ ರಿಜಿಸ್ಟರ್ ಅವರಿಗೆ ಆದೇಶಿಸಿದ್ದಾರೆ. ಪ್ರಕರಣಕ್ಕೆ ಕಾರಣ ಏನು? ಇದಕ್ಕೆ ಹೊಣೆಗಾರರು ಯಾರು ಎಂಬುದನ್ನು ವಿವರವಾಗಿ ವರದಿ ನೀಡುವಂತೆ ಆದೇಶಿಸಿದ್ದಾರೆ.

    ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ನಡೆದ ಪ್ರತಿಭಟನಾ ವೇಳೆ ಫ್ರೀ ಕಾಶ್ಮಿರ ಪ್ಲೇ ಕಾರ್ಡ್ ಪ್ರದರ್ಶನ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟರ್ ಆರ್.ಶಿವಪ್ಪ ಅವರು ಪ್ರತಿಭಟನಾ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೈಸೂರು ವಿಶ್ವವಿದ್ಯಾಲಯದಿಂದ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರತ್ಯೇಕ ದೂರು ದಾಖಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಫ್ರೀ ಕಾಶ್ಮೀರ ಪ್ಲೇಕಾರ್ಡ್ ಪ್ರದರ್ಶಿಸಿದವರ ಮೇಲೆ ದೂರು ದಾಖಲು

    ಮಾನಸ ಗಂಗೋತ್ರಿಯ ಭದ್ರತಾ ಸಿಬ್ಬಂದಿಗೂ ನೋಟಿಸ್ ಜಾರಿಯಾಗಿದೆ. ಅನುಮತಿ ಇಲ್ಲದ ವ್ಯಕ್ತಿಗಳಿಗೆ ಪ್ರತಿಭಟನೆ ನಡೆಸಲು ಹೇಗೆ ಅವಕಾಶ ಕೊಟ್ಟಿದ್ದೀರಿ? ಇದು ಭದ್ರತಾ ಲೋಪ. ಇದಕ್ಕೆ ಕಾರಣ ನೀಡಿ ಎಂದು ನೋಟಿಸ್ ಜಾರಿಯಾಗಿದೆ.

  • ‘ಎ’ ಗ್ರೇಡ್ ಪಡೆಯದ ಕಾಲೇಜು, ವಿವಿಯನ್ನ ಮುಚ್ಚಿಬಿಡಿ ರಾಜ್ಯಪಾಲ ವಿ.ಆರ್.ವಾಲಾ ಸಲಹೆ

    ‘ಎ’ ಗ್ರೇಡ್ ಪಡೆಯದ ಕಾಲೇಜು, ವಿವಿಯನ್ನ ಮುಚ್ಚಿಬಿಡಿ ರಾಜ್ಯಪಾಲ ವಿ.ಆರ್.ವಾಲಾ ಸಲಹೆ

    ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಾದರೆ ಗುಣಮಟ್ಟ ಶಿಕ್ಷಣ ಅತ್ಯವಶ್ಯಕವಾಗಿ ಇರಬೇಕು. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಇಲ್ಲದೆ ಇದ್ದರೆ ಅಂತಹ ಕಾಲೇಜು ವಿಶ್ವವಿದ್ಯಾಲಯಗಳು ಅವಶ್ಯಕತೆ ಇಲ್ಲ. ಅವುಗಳನ್ನು ಮುಚ್ಚಿ ಬಿಡಿ ಅಂತ ರಾಜ್ಯಪಾಲ ವಿ.ಆರ್.ವಾಲಾ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದ್ದಾರೆ.

    ರಾಜಭವನದಲ್ಲಿ ನಡೆದ ನ್ಯಾಕ್ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ವಿ.ಆರ್.ವಾಲಾ, ಬಿ ಮತ್ತು ಸಿ ಗ್ರೇಡ್ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಉತ್ತಮ ಶಿಕ್ಷಣ ನೀಡಲು ಅವಕಾಶ ಕೊಡಬೇಕು. ಪ್ರತಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಕೊಡಿಸೋದು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕರ್ತವ್ಯ. ಅದನ್ನ ಮರೆಯೋ ಸಂಸ್ಥೆಗಳನ್ನ ಮುಚ್ಚೋದು ವಾಸಿ ಅಂದರು.

    ಪ್ರತಿ ಸಂಸ್ಥೆ ಎ ಗ್ರೇಡ್ ಮಾನ್ಯತೆಯನ್ನೆ ಹೊಂದಿರಬೇಕು. ಬಿ ಮತ್ತು ಸಿ ದರ್ಜೆಯ ಕಾಲೇಜು ವಿವಿಗಳಿಗೆ ಅವಕಾಶ ಕೊಡಿ. ಒಂದು ವೇಳೆ ಅವುಗಳು ಸುಧಾರಣೆ ಮಾಡದೇ ಇದ್ದರೆ ಅಂತಹ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನ ಕ್ಲೋಸ್ ಮಾಡಿ ಅಂತ ನ್ಯಾಕ್ ಸಂಸ್ಥೆಗೆ ಸಲಹೆ ನೀಡಿದರು.

    ನಮ್ಮ ದೇಶದಲ್ಲಿ ಯುವ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದ್ರೆ ಗುಣಮಟ್ಟ ಶಿಕ್ಷಣ ನಮ್ಮಲ್ಲಿ ಕಡಿಮೆ ಇದೆ. ಫ್ರಾನ್ಸ್, ಜಪಾನ್ ನಮಗಿಂತ ಚಿಕ್ಕ ರಾಷ್ಟ್ರ ಆದ್ರು ನಮ್ಮ ದೇಶಕ್ಕೆ ವಿಮಾನಗಳನ್ನ ಪೂರೈಕೆ ಮಾಡುತ್ತಿವೆ. ಇದಕ್ಕೆ ಕಾರಣ ಅಲ್ಲಿನ ಶಿಕ್ಷಣ. ಹೀಗಾಗಿ ಭಾರತದಲ್ಲೂ ಇದೇ ಮಾದರಿಯ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ ಅಂತ ತಿಳಿಸಿದರು

  • ನಾಡಿನ ರೈತರ ಭೇಟಿ ಮಾಡದ ರಾಜ್ಯಪಾಲರು ಗುಜರಾತಿ ಕಾರ್ಯಕ್ರಮದಲ್ಲಿ ಭಾಗಿ

    ನಾಡಿನ ರೈತರ ಭೇಟಿ ಮಾಡದ ರಾಜ್ಯಪಾಲರು ಗುಜರಾತಿ ಕಾರ್ಯಕ್ರಮದಲ್ಲಿ ಭಾಗಿ

    ಬೆಂಗಳೂರು: ಮಹದಾಯಿ ಹೋರಾಟಗಾರರನ್ನು ಭೇಟಿ ಮಾಡದ ರಾಜ್ಯಪಾಲರು ಇಂದು ಗುಜರಾತಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ಮಹದಾಯಿ ವಿಚಾರವಾಗಿ ಮನವಿ ಸಲ್ಲಿಸಲು ರೈತರು ರಾಜ್ಯಪಾಲರನ್ನು ಭೇಟಿಗೆ ಕಾಲಾವಕಾಶ ಕೇಳಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನೀಡಿರಲಿಲ್ಲ. ಇಂದು ವಜುಬಾಯಿ ವಾಲಾ ಸಿಲಿಕಾನ್ ಸಿಟಿಯ ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿ ನೆಡೆಯುತ್ತಿರುವ ಗುಜರಾತ್‍ನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    2 ದಿನದಿಂದ ಮಳೆ, ಗಾಳಿ, ಬಿಸಿಲಿನಲ್ಲಿ ಆಹೋರಾತ್ರಿ ಧರಣಿ ಮಾಡಿದ್ದ ರೈತರು ರಾಜ್ಯಪಾಲರನ್ನು ಭೇಟಿ ಮಾಡಲು ಶುಕ್ರವಾರದಿಂದ ಎರಡು ದಿನವು ರಾಜಭವನದ ಬಳಿ ತೆರಳಿದ್ದರು. ಆದರೆ ಹೋರಾಟಗಾರರನ್ನು ಕ್ಯಾರೆ ಅನ್ನದ ರಾಜ್ಯಪಾಲರು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಆದರೆ ಇಂದು ಸಂಜೆ ಗುಜರಾತಿಗರ ಖಾಸಗಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಬಾಯ್ ವಾಲ ಭಾಗವಹಿಸಿದ್ದಾರೆ.