Tag: vajpayee

  • ಬರಲಿದೆ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್

    ಬರಲಿದೆ ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕುರಿತಾದ ಸಿನಿಮಾ ಮಾಡಲು ನಿರ್ಮಾಪಕ ವಿನೋದ್ ಭಾನುಶಾಲಿ ಮುಂದಾಗಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿರುವ ಅವರು ಸೂಕ್ತ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಥೇಟ್ ವಾಜಪೇಯಿ ರೀತಿಯಲ್ಲಿ ಕಾಣುವಂತಹ ವ್ಯಕ್ತಿಗಾಗಿ ಅಥವಾ ಅವರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಕಲಾವಿದನಿಗಾಗಿ ಅವರು ಹುಡುಕಾಟ ಆರಂಭಿಸಿದ್ದಾರೆ.

    ಭಾರತ ಅಭಿವೃದ್ಧಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಕೊಟ್ಟ ಕೊಡುಗೆ ಅಪಾರ. ಅವರನ್ನು ಅಜಾತಶತ್ರು ಎಂದೇ ಕರೆಯಲಾಗುತ್ತಿತ್ತು. ಅವರ ನಡೆ, ನುಡಿ ಶ್ರೇಷ್ಠವಾದದ್ದು. ಅವರು ಕೇವಲ ರಾಜಕಾರಣಿ ಮಾತ್ರವಾಗಿರಲಿಲ್ಲ. ಕವಿ ಕೂಡ ಆಗಿದ್ದರು. ಅವರ ಭಾಷಣಗಳನ್ನು ಕೇಳಲೆಂದೇ ಲಕ್ಷಾಂತರ ಜನರು ಸೇರುತ್ತಿದ್ದರು. ಹಾಗಂತ ಅವರ ಬದುಕಿನ ಹಾದಿ  ಹೂವಿನ ಹಾದಿಯಾಗಿರಲಿಲ್ಲ. ಅನೇಕ ಏಳುಬೀಳುಗಳನ್ನೂ ಅವರು ಕಂಡಿದ್ದರು. ಅದೆಲ್ಲವನ್ನೂ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಿದ್ದಾರಂತೆ ನಿರ್ಮಾಪಕರು. ಇದನ್ನೂ ಓದಿ:ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ

    ಸ್ಕ್ರಿಪ್ಟ್ ಸಿದ್ಧವಾಗಿದ್ದು ನಿರ್ದೇಶಕರನ್ನೂ ಕೂಡ ಗೊತ್ತು ಮಾಡುತ್ತಿದ್ದಾರಂತೆ. ಇದೊಂದು ಬಯೋಪಿಕ್ ಆಗಿರುವುದರಿಂದ ವಾಜಪೇಯಿ ಅವರ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆಯಂತೆ. ಹಾಗಾಗಿ ಆ ಪಾತ್ರವನ್ನು ಸರಿಯಾದ ರೀತಿಯಲ್ಲಿ ತೂಗಿಸಿಕೊಂಡು ಹೋಗುವಂತಹ ನಟ ಅವರಿಗೆ ಬೇಕಾಗಿದೆಯಂತೆ. ನಟ ಸಿಕ್ಕ ತಕ್ಷಣವೇ ಉಳಿದ ಸಂಗತಿಗಳನ್ನು ಹೇಳಿಕೊಳ್ಳುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

    Live Tv

  • ರವಿಗೆ ನೆಹರು ಬಗ್ಗೆ ಏನು ಗೊತ್ತು, ಪ್ರಿಯಾಂಕ್ ಖರ್ಗೆಗೆ ವಾಜಪೇಯಿ ಆಡಳಿತ ಗೊತ್ತಾ : ವಿಶ್ವನಾಥ್ ಕಿಡಿ

    ರವಿಗೆ ನೆಹರು ಬಗ್ಗೆ ಏನು ಗೊತ್ತು, ಪ್ರಿಯಾಂಕ್ ಖರ್ಗೆಗೆ ವಾಜಪೇಯಿ ಆಡಳಿತ ಗೊತ್ತಾ : ವಿಶ್ವನಾಥ್ ಕಿಡಿ

    ಮೈಸೂರು: ಮಾಜಿ ಪ್ರಧಾನಿಗಳಾದ ನೆಹರು ಮತ್ತು ವಾಜಪೇಯಿ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಟ್ಟ ಬಿಜೆಪಿ, ಕಾಂಗ್ರೆಸ್ ಮುಖಂಡರ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹರಿಹಾಯ್ದಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೆಹರು ಅಧಿಕಾರದ ಅವಧಿಗಿಂತ ಹೆಚ್ಚಿನ ಅವಧಿ ಜೈಲಿನಲ್ಲಿ ಕಳೆದರು. ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಅವರ ಬಗ್ಗೆ ಸಿ.ಟಿ. ರವಿ ಅವರು ಅವಹೇಳನಕಾರಿ ಮಾತು ಯಾರು ಮೆಚ್ಚುವಂಥದಲ್ಲ. ಸಿ.ಟಿ. ರವಿಗೂ ಮತ್ತು ಬಿಜೆಪಿಗೂ ಈ ಮಾತು ಶೋಭೆ ತರುವುದಿಲ್ಲ ಎಂದಿದ್ದಾರೆ.

    ಸಿ.ಟಿ.ರವಿ ಅವರು ನೆಹರು ಬಗ್ಗೆ ಓದಿಕೊಳ್ಳಬೇಕು. ವಾಜಪೇಯಿ ಅವರು ನೆಹರು ನಿಧಾನರಾದಾಗ ಏನೂ ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರು ಅವರ ಬಗ್ಗೆ ವಾಜಪೇಯಿ ಅವರು ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ನೆಹರು ಅವರ ಬಗ್ಗೆ ಇಷ್ಟು ಲಘುವಾಗಿ ಮಾತಾಡಬಾರದು. ನಿಮಗೆ ನೆಹರು ಬಗ್ಗೆ ಏನೂ ಗೊತ್ತಿದೆ? ಏನೂ ತಿಳಿದು ಕೊಂಡಿದ್ದೀರಿ? ಭಾರತದ ಆಸ್ಮಿತೆ ನೆಹರು. ಭಾರತದ ಗರ್ವದ ಸಂಕೇತ ನೆಹರು. ಇಂತಹ ನೆಹರು ಬಗ್ಗೆ ನೀವು ಕೀಳಾಗಿ ಮಾತಾಡುವುದು ತಪ್ಪು. ಪ್ರಚಾರಕ್ಕಾಗಿ, ಯಾರನ್ನೋ ಓಲೈಸಲು ನೀವು ರೀತಿ ಮಾತಾಡಬೇಡಿ ಎಂದು ತಿಳಿ ಹೇಳಿದ್ದಾರೆ.

    ವಾಜಪೇಯಿ ಅವರನ್ನು ಕಾಂಗ್ರೆಸ್ ನಾಯಕರು ಕುಡುಕ ಎಂದಿದ್ದಾರೆ. ಇದು ಖಂಡನೀಯ. ನೆಹರು, ವಾಜಪೇಯಿ ಇಬ್ಬರು ಈ ದೇಶದ ಶ್ರೇಷ್ಠ ಆಡಳಿಗಾರರು. ಪ್ರಿಯಾಂಕ್ ಖರ್ಗೆ ತಮ್ಮ ತಂದೆ ನೋಡಿ ಮಾತಾಡುವುದು ಕಲಿಯಲಿ ಎಂದಿದ್ದಾರೆ. ಕರ್ನಾಟಕದಲ್ಲಿ ಐದು ಜನ ಮಾಜಿ ಸಿಎಂಗಳಿದ್ದಾರೆ. ನೀವು ಯಾಕೆ ಇದನ್ನು ಖಂಡಿಸುತ್ತಿಲ್ಲ? ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದು ಕೊಂಡಿದ್ದೀರಾ. ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಸಂವಿಧಾನದತ್ತ ಸಂಸದ ಸ್ಥಾನಕ್ಕೆ ಬೆಲೆ ಕೊಡದ ಶ್ರೀನಿವಾಸ್‍ರದ್ದು ವಿಕೃತ ಮನಸ್ಥಿತಿ: ಬಿಜೆಪಿ ಟೀಕೆ

    ನೆಹರು ಅವರ ತಂದೆ ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನೂ ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು

  • ಪ್ರಿಯಾಂಕ್ ಖರ್ಗೆ, ವಾಜಪೇಯಿ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಚ್ಚಾ: ರೇಣುಕಾಚಾರ್ಯ

    ಪ್ರಿಯಾಂಕ್ ಖರ್ಗೆ, ವಾಜಪೇಯಿ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಚ್ಚಾ: ರೇಣುಕಾಚಾರ್ಯ

    ದಾವಣಗೆರೆ: ಪ್ರಿಯಾಂಕ ಖರ್ಗೆ ವಾಜಪೇಯ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಚ್ಚಾ. ವಾಜಪೇಯಿಯವರ ಬಗ್ಗೆ ಟೀಕೆ ಮಾಡಲು ನಾಚಿಕೆಯಾಗಬೇಕು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

    ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಪ್ರಿಯಾಂಕ್ ಖರ್ಗೆ ಈ ಬಗ್ಗೆ ಕ್ಷಮೆ ಕೇಳಬೇಕು, ಇಲ್ಲದಿದ್ರೆ, ಅಧಿವೇಶನದಲ್ಲಿ ಸರಿಯಾದ ಉತ್ತರ ಕೊಡುತ್ತೇವೆ. ವಾಜಪೇಯಿ ಅವರು ಸಾಕಷ್ಟು ಜನಪರವಾದ ಕೆಲಸ ಮಾಡಿದವರು. ಇಡೀ ದೇಶವೇ ಮೆಚ್ಚುಕೊಳ್ಳುತ್ತಿದೆ. ಆದರೆ ಅಂತವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    ಚತುಷ್ಪಥ ರಸ್ತೆಗಳಿಗೆ ಇದ್ದ ವಾಜಪೇಯಿ ಹೆಸರನ್ನು ಕಿತ್ತಿಹಾಕಿದಾಗ ನಿಮ್ಮ ಪೌರುಷ, ಪುರುಷತ್ವ ಎಲ್ಲಿ ಹೋಗಿತ್ತು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾದಗ ಹೈವೆಗಿದ್ದ ವಾಜಪೇಯಿ ಅವರ ಹೆಸರನ್ನು ಕಿತ್ತಿಹಾಕಿದ್ದು ಇದೆ ಕಾಂಗ್ರೆಸ್‍ನವರಿಗೆ ನಾಚಿಕೆ ಆಗಬೇಕು. ವಾಜಪೇಯ ಅಜಾತಶತ್ರು ಅವರ ಬಗ್ಗೆ ಮಾತನಾಡಲು ಪ್ರಿಯಾಂಕ್‍ಗೆ ಯೋಗ್ಯತೆ ಇಲ್ಲ. ಕೂಡಲೇ ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

  • ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    – ಸಿ.ಟಿ ರವಿ ವಿರುದ್ಧ ಪ್ರಿಯಾಂಕ್ ಕಿಡಿ

    ಕಲಬುರಗಿ: ವಾಜಪೇಯಿವರು ಹೇವಿ ಡ್ರಿಂಕರ್ ಅಂತೆ, ಸಂಜೆಗೆ ಅವರಿಗೆ ಎರಡು ಪೆಗ್ ಡ್ರಿಂಕ್ ಬೇಕಾಗಿತ್ತಂತೆ. ಹಾಗಂತ ಎಲ್ಲಾ ಬಾರ್ ಗಳಿಗೂ ವಾಜಪೇಯಿ ಬಾರ್ ಅಂತಾ ಹಾಕ್ತೀರಾ ಎಂದು ಪ್ರಶ್ನಿಸುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಟಿ ರವಿಯವರ ಹುಕ್ಕಾ ಬಾರ್ ಹೇಳಿಕೆ ವಿಚಾರವಾಗಿ ಕಲಬುರಿಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಗರೇಟ್ ಸೇದುವುದು ಅಕ್ರಮನಾ? 2007ರಲ್ಲಿ ಒಂದು ಮ್ಯಾಗಜಿನ್‍ನಲ್ಲಿ ಸ್ಲೀಪಿಂಗ್ ಆನ್ ದಿ ವಿಲ್ ಎಂಬ ಆರ್ಟಿಕವೊಂದನ್ನು ಓದಿದ್ದೆ. ಅದರಲ್ಲಿ ವಾಜಪೇಯಿಯವರ ನಾಯಕತ್ವದಲ್ಲಿ ದೇಶ ಯಾಕೆ ಸರಿಯಾದ ರೀತಿಯಲ್ಲಿ ಹೋಗುತ್ತಿಲ್ಲ ಎಂಬುದರ ಬಗ್ಗೆ ಅವರ ವೈಯಕ್ತಿಕ ಜೀವನದ ವಿಚಾರಗಳಿತ್ತು. ವಾಜಪೇಯವರು ಹೆಚ್ಚು ಮದ್ಯಪಾನ ಮಾಡುತ್ತಿದ್ದರಂತೆ, ಅವರಿಗೆ ಸಂಜೆ ಹೊತ್ತು 2 ಗ್ಲಾಸ್ ವಿಸ್ಕಿ ಇರಲೇಬೇಕಾಗುತ್ತಂತೆ, ಸಿಗರೇಟ್ ಹಾಗೂ ಮದ್ಯಪಾನ ಮಾಡುವುದು ತಪ್ಪಲ್ಲ. ಹಾಗಂತ ನೀವು ಎಲ್ಲಾ ಬಾರ್‍ಗಳಿಗೂ ವಾಜಪೇಯಿ ಬಾರ್ ಎಂದು ಹೆಸರಿಡುತ್ತೀರಾ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಇಂದಿರಾ ಕ್ಯಾಂಟೀನ್ ಹೆಸ್ರು ಬದಲಾಯಿಸಿ ಅನ್ನೋದು ಬಿಜೆಪಿಯ ಚಿಲ್ಲರೆ ವಿಚಾರ: ಎಸ್.ಆರ್.ಪಾಟೀಲ್

    ಸಾಮಾನ್ಯವಾಗಿ ಆರ್‍ಎಸ್‍ಎಸ್‍ನಲ್ಲಿ ಇರುವವರು ಸಸ್ಯಾಹಾರಿಗಳು ಎಂದು ನಾವು ಭಾವಿಸುತ್ತೇವೆ. ಆದರೆ ವಾಜಪೇಯಿಯವರು ಮಾಂಸಹಾರಿ ಪ್ರಿಯರು. ಆದರೆ ಮಾಂಸ ಸೇವಿಸುವುದರಿಂದ ಗೌರವ ಕಡಿಮೆಯಾಗುತ್ತಾ? ಹಾಗಂತ ನೀವು ಎಲ್ಲಾ ಕಸಾಯಿಖಾನೆಗಳಿಗೆ ವಾಜಪೇಯಿ ಹೆಸರಿಡಲು ಆಗುತ್ತಾ? ಎಂದು ಹರಿಹಾಯ್ದಿದ್ದಾರೆ.

    ಬಿಜೆಪಿಯಲ್ಲಿರುವವರೆಲ್ಲಾ ಬಹಳ ಸಾಚಗಳು ಎಂದು ನಾವು ಭಾವಿಸುತ್ತೇವೆ. ಆದರೆ ಇತ್ತೀಚೆಗೆ ಸಿಡಿ ಪ್ರಕರಣದಿಂದ ದೇಶದ ಮರ್ರ್ಯಾದೆ ಹೋಗಿದೆ. ಕರ್ನಾಟಕ ಸಂಸದರು ಇಡೀ ದೇಶದಲ್ಲಿಯೇ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇವರು ಮಾತನಾಡುವುದರಿಂದ, ನಾವು ಮಾತನಾಡುವುದರಿಂದ ನೆಹರೂ ಘನತೆಯಾಗಲಿ, ವಾಜಪೇಯಿ ಘನತೆಯಾಗಲಿ ಕಡಿಮೆಯಾಗುವುದಿಲ್ಲ. ಯಾವಾಗ ಏನು ಮಾತನಾಡಬೇಕೆಂದು ತಿಳಿದುಕೊಂಡು ಮಾತನಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ

    ಮೊದಲನೇಯದಾಗಿ ಇವರಿಗೆ ಇವರ ನಾಯಕರ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಅವರ ಏನು ಕೊಡುಗೆ ಇದೆ ಅಂತ ಅವರ ಹೆಸರನ್ನು ಪ್ಲೈ ಓವರ್‍ಗೆ ಇಡುತ್ತಾರೆ..? ಗೋಡ್ಸೆಯನ್ನು ನಂಬುತ್ತಾರೆ. ಗಾಂಧಿಯವರನ್ನು ನಂಬಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದರೆ ಹಿಂಗೆ ಮಾತಾನಾಡುವುದು. ಇವರು ಅವಿವೇಕಿಗಳು, ಅವಿವೇಕಿತನದ ಪರಮಾವಧಿ ಇದು ಎಂದು ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹುಕ್ಕಾ ಬಾರ್ ಹೇಳಿಕೆ ನೀಡಿದ್ದ ಸಿ.ಟಿ ರವಿ..! 
    ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್‍ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.ಇದನ್ನೂ ಓದಿ: ಇಂದಿರಾ ಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್‍ಗೆ ಕೋಪ ಬಂದಿದೆ: ಸಿ.ಟಿ.ರವಿ

  • ವಿಶ್ವಾಸಮತ ಯಾಚನೆಗೆ ವಾಜಪೇಯಿ 10 ದಿನ ತೆಗ್ದುಕೊಂಡಿದ್ದರು- ರೇವಣ್ಣ

    ವಿಶ್ವಾಸಮತ ಯಾಚನೆಗೆ ವಾಜಪೇಯಿ 10 ದಿನ ತೆಗ್ದುಕೊಂಡಿದ್ದರು- ರೇವಣ್ಣ

    ಮೈಸೂರು: ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಮೊರೆ ಹೋದ ಸಚಿವ ಹೆಚ್.ಡಿ ರೇವಣ್ಣ ಸರ್ಕಾರ ಉಳಿಸಲು ಸಿಎಂ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

    ದೇವಿಯ ದರ್ಶನದ ಬಳಿಕ ಮಾತನಾಡಿದ ರೇವಣ್ಣ, ನೋಡ್ರಿ.. ಇದೇ ಬಿಜೆಪಿಯ ಈ ಹಿಂದಿನ ಪ್ರಧಾನಿ ವಾಜಪೇಯಿ ಅವರು ವಿಶ್ವಾಸ ಮತ ತೋರಿಸಲು ಹತ್ತು ದಿನ ಸಮಯ ತೆಗೆದು ಕೊಂಡಿದ್ದರು. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ವಿಶ್ವಾಸ ಮತಕ್ಕಾಗಿಯೇ ಮುಖ್ಯಮಂತ್ರಿ ಅವರು ಜುಲೈ 12ರಂದು ಕೇಳಿದರು. ಅಲ್ಲದೆ 12ರಂದು ಮೀಟಿಂಗ್ ಕೂಡ ಕರೆದಿದ್ದು, ಬಿಜೆಪಿಯವರು ಬಂದಿಲ್ಲ. ಜುಲೈ 18ರಂದು ಮತ್ತೆ ವಿಶ್ವಾಸಮತಕ್ಕೆ ಬಂದೆವು. ಆಗ ಸುಪ್ರೀಂಕೋರ್ಟ್ ಕೆಲವು ಡೈರೆಕ್ಷನ್ ನೀಡಿತ್ತು ಎಂದರು.

    ಇಲ್ಲಿ ಯಾರು ಕಾಲ ಹರಣ ಮಾಡುತ್ತಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

  • ಸಿದ್ದಗಂಗಾ ಮಠವನ್ನು ಪವಿತ್ರ ಸ್ಥಳ ಎಂದು ಬಣ್ಣಿಸಿದ್ದರು ಮಾಜಿ ಪ್ರಧಾನಿ ವಾಜಪೇಯಿ!

    ಸಿದ್ದಗಂಗಾ ಮಠವನ್ನು ಪವಿತ್ರ ಸ್ಥಳ ಎಂದು ಬಣ್ಣಿಸಿದ್ದರು ಮಾಜಿ ಪ್ರಧಾನಿ ವಾಜಪೇಯಿ!

    ತುಮಕೂರು: ಸಿದ್ದಗಂಗಾ ಹಲವು ‘ಗಂಗಾ’ಗಳ ಸಂಗಮ ಪ್ರವಾಹ. ಇಲ್ಲಿ ಕರ್ಮ ಗಂಗಾ, ಜ್ಞಾನ ಗಂಗಾ, ಗೌರವ ಗಂಗಾ ಹಾಗೂ ಕಾರುಣ್ಯಗಂಗಾಗಳು ಸಮರಸಗೊಂಡು ಹರಿಯುತ್ತಿವೆ. ಜ್ಞಾನ ಯಜ್ಞ ನಡೆದಿದ್ದು ಶತಮಾನಗಳ ಪರ್ಯಂತ ಮುಂದುವರೆದಿದೆ. ಪೂಜ್ಯ ಶ್ರೀ ಸ್ವಾಮೀಜಿಯವರ ರೂಪದಲ್ಲಿ ಆಧ್ಯಾತ್ಮಿಕ ಶಕ್ತಿ ಶ್ರೀಮಠದ ಪರಿಸರವನ್ನೆಲ್ಲಾ ಕ್ರಿಯಾಶೀಲಗೊಳಿಸಿದೆ. ಕೇವಲ ಭೌತಿಕವಾಗಿಯಲ್ಲ. ನೈತಿಕ ಶಕ್ತಿಯ ಸ್ಫೂರ್ತಿ ಇಲ್ಲಿನ ತಾಯಿ ಬೇರಾಗಿದೆ.

    ಮನುಷ್ಯ ಒಳ್ಳೆಯವನಾಗುವುದು ಮುಖ್ಯ. ಒಳ್ಳೆಯವನಾಗುವುದು ಹೇಗೆ? ಒಂದು ಶಿಕ್ಷಣದಿಂದ ಅಥವಾ ತರಬೇತಿಯಿಂದ, ಇನ್ನೊಂದು ಸಂಸ್ಕಾರದಿಂದ. ಸರ್ಕಾರಿ ಶಾಲೆಗಳು ಶಿಕ್ಷಣವನ್ನು ನೀಡುತ್ತವೆ. ಆದರೆ ಸಂಸ್ಕಾರವನ್ನು ಕೊಡಲಾರವು. ಈ ಎರಡೂ ಅಂದರೆ ಶಿಕ್ಷಣ ಮತ್ತು ಸಂಸ್ಕಾರ ಬೇರೆ ಬೇರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಕಾಲೇಜು ನೀಡುವ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದು. ಆದರೆ ಕಾಲೇಜನ್ನು ಬಿಟ್ಟ ನಂತರ ಎಂಥ ಜೀವನವನ್ನು ನಡೆಸಬೇಕೆಂಬುದನ್ನು ಅವರಿಂದ ಪಡೆಯಲಾಗುವುದಿಲ್ಲ. ಆದರೆ ಶ್ರೀ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದಾತ ಸಂಸ್ಕಾರಜೀವಿಯಾಗಿ ಹೊರಬರುತ್ತಾನೆ. ಅವನು ಉನ್ನತ ಯಶಸ್ಸು ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊರಬರುವುದಲ್ಲದೆ ಸಮಾಜಕ್ಕೆ ಉಪಕಾರಿಯಾಗಿ ಬಾಳುತ್ತಾನೆ. ಸಿದ್ದಗಂಗಾದಂತಹ ಕ್ಷೇತ್ರಗಳು ನಮಗೆ ಪವಿತ್ರ ಸ್ಥಳಗಳು. ಶ್ರೀಮಠ ತನ್ನ ಸೇವಾ ಚಟುವಟಿಕೆಗಳ ಮೂಲಕ ನೈತಿಕ ಜೀವನದ ಪ್ರಾಮುಖ್ಯತೆಯನ್ನು ಆಚರಿಸಿ ತೋರಿಸುತ್ತಿರುವುದು ಇತಿಹಾಸಕ್ಕೆ ಸುಯೋಗ್ಯವಾದ ನಿದರ್ಶನವಾಗಿದೆ. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಜಪೇಯಿ ದಿನಚರಿ ಹೀಗಿರುತ್ತಿತ್ತು..!

    ವಾಜಪೇಯಿ ದಿನಚರಿ ಹೀಗಿರುತ್ತಿತ್ತು..!

    ಟಲ್ ಬಿಹಾರಿ ವಾಜಪೇಯಿ ಅವರು ಶಿಸ್ತಿನ ಸಿಪಾಯಿ, ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಸಾಕಷ್ಟು ದೂರದವರೆಗೆ ಕಾಲ್ನಡಿಗೆಯಲ್ಲಿ ಸುತ್ತಾಡಿ ಬರುವುದು ಅವರ ದೈನಂದಿನ ಕ್ರಮವಾಗಿತ್ತು. ಅವರ ಸಾಕು ನಾಯಿಗಳ ಜೊತೆಗೂಡಿ ಸುತ್ತಾಡುವುದು ಒಂದು ವಿಶೇಷ. ಸುತ್ತಾಟದ ಅವಧಿಯಲ್ಲಿ ಯಾರೊಂದಿಗೂ ಮಾತನಾಡದೇ ಇರುವುದು ಅವರು ಅನುಸರಿಸಿಕೊಂಡು ಬಂದ ಕ್ರಮ. (ಪ್ರಧಾನಿಯಾದ ಮೇಲೆ ಬೆಳಗಿನ ವಾಯು ಸಂಚಾರ, ಅವರ ಬಂಗಲೆಯ ಸುತ್ತಮುತ್ತಲಿನ ಆವರಣದಲ್ಲಿ ಮಾತ್ರ ಮಾಡುತ್ತಿದ್ದರು).

    ಬೆಳಗಿನ ಸುತ್ತಾಟದ ನಂತರ ವಾರ್ತಾ ಪತ್ರಿಕೆಗಳನ್ನು ಓದುವುದು ಮತ್ತು ವ್ಯಂಗ್ಯ ಚಿತ್ರಗಳನ್ನು ಆಸಕ್ತಿಯಿಂದ ನೋಡುವುದು ಅವರ ನಿತ್ಯ ಪದ್ಧತಿಯಾಗಿತ್ತು. ಮನರಂಜನೆಗಾಗಿ ಸಂಗೀತ ಕೇಳುವುದು, ಉತ್ತಮ ಚಲನಚಿತ್ರಗಳನ್ನು ನೋಡಿ ಆನಂದಿಸುವುದು ಅವರ ಅಭ್ಯಾಸ. ಓದುವ ಚಟ ಅವರಿಗೆ ಬಹಳ. ಎಲ್ಲರೂ ಈ ಚಟ ಬೆಳೆಸಿಕೊಳ್ಳಬೇಕೆಂಬುದೇ ಅವರ ಆಶಯ, ಗ್ವಾಲಿಯರ್ ನ ಸ್ವಂತ ಮನೆಯಲ್ಲಿ ಸಾರ್ವಜನಿಕ ವಾಚನಾಲಯ ಪ್ರಾರಂಭಿಸುವ ಉದ್ದೇಶವೂ ಅವರಿಗಿತ್ತು..

    ಒಂಟಿಯಾಗಿ ಕುಳಿತು ಕವನ ರಚಿಸುವುದೆಂದರೆ ಅಟರ್‍ರವರಿಗೆ ಬಹಳ ಸಂತಸ. ತಾವು ಬರೆದ ಕವನಗಳನ್ನು ಅವರು ಯಾರಿಗೂ ತೋರಿಸುತ್ತಿರಲಿಲ್ಲ. ಆದರೆ ಅವರು ತಮ್ಮ ಹುಟ್ಟುಹಬ್ಬದಂದು ಮನೆ ಮಂದಿಗೆ ತಾವು ಬರೆದ ಕವನವನ್ನು ಕೊಡುಗೆಯಾಗಿ ನೀಡುವುದನ್ನು ಒಂದು ಸಂಪ್ರದಾಯವಾಗಿ ಮಾಡಿಕೊಂಡಿದ್ದರು. ಕವನ ಬರೆಯಲಿ, ಸ್ವಯಂಸೇವಕನಾಗಿ ದುಡಿಯಲಿ, ರಾಜಕಾರಣದಲ್ಲಿ ತೊಡಗಲಿ, ಪ್ರಧಾನಿಯ ಪಟ್ಟಕ್ಕೇರಲಿ, ಇವುಗಳೆಲ್ಲವುಗಳಿಗಿಂತ ಪ್ರಮಾಣಿಕತೆಯೇ ಮುಖ್ಯ ಎನ್ನುತ್ತಾರೆ.

    ಭಾರತದ ಯಾವ ರಾಜಕೀಯ ನಾಯಕನಲ್ಲೂ ಇರದ ಮಹಾನ್ ಆದರ್ಶ ಗುಣಗಳು ಇವರಲ್ಲಿ ಮನೆ ಮಾಡಿತ್ತು. ವಾಜಪೇಯಿ ಅವರು ಯಾವುದೇ ಸ್ಥಳಕ್ಕೆ ಬಂದು ಭಾಷಣ ಮಾಡುತ್ತಾರೆಂದರೆ ಆ ಸ್ಥಳಕ್ಕೆ ಲಕ್ಷಾಂತರ ಜನ ಬಂದು ಸೇರುತ್ತಿದ್ದರು. ಅವರ ಭಾಷಣಗಳು, ಕಾವ್ಯಮಯ, ಭಾಷಣ ಅತಿಮಹತ್ವದಾಗಿ ಎದ್ದು ಕಾಣುತ್ತದೆ. ರಾಜಕೀಯ ನಾಯಕರಲ್ಲಿ ಸಾಹಿತ್ಯ ಅಡಗಿರುತ್ತದೆಂದರೆ ಅದು ವಾಜಪೇಯಿ ಅವರ ಮನದಲ್ಲಿ ಕರಗತವಾಗಿತ್ತು. ಯಾವ ಕವಿಗಿಂತಲೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಅರ್ಥಪೂರ್ಣವಾಗಿ ಸಾಹಿತ್ಯವನ್ನು, ನಮ್ಮ ಪರಂಪರೆಯನ್ನು ಗಟ್ಟಿಯಾಗಿ ಹೇಳುವ ಭರವಸೆಯ ಮುತ್ಸದ್ಧಿ ನಾಯಕರಾಗಿದ್ದರು ವಾಜಪೇಯಿ.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ರಿಕೋದ್ಯಮಿಯೂ ಆಗಿದ್ದರು ಅಟಲ್‍ಜೀ

    ಪತ್ರಿಕೋದ್ಯಮಿಯೂ ಆಗಿದ್ದರು ಅಟಲ್‍ಜೀ

    ಟಲ್‍ಜೀಯವರು ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ `ಪ್ರಚಾರಕ’ರಾಗಿ ನಿಂತರು. ಲಕ್ನೋ ಸಮೀಪದ ಶಾಂಡಿಲಾ ಶಾಖೆಯಲ್ಲಿ ಅವರು ಕಾರ್ಯಾರಂಭ ಮಾಡಿದರು. ಬೆಳಗಿನ ವೇಳೆಯಲ್ಲಿ `ಶಾಖೆ’ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಕವನಗಳನ್ನು ರಚಿಸುತ್ತಿದ್ದರು. ಈ ಪ್ರಕಾರ ಸತತ ಒಂದು ವರ್ಷಕಾಲ ಸಂಘದ ಪ್ರಚಾರಕ್ಕಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಅವರ ಗಮನ ಪತ್ರಿಕೋದ್ಯಮದತ್ತ ಹರಿಯಿತು.

    ಪ್ರಾರಂಭದಲ್ಲಿ `ರಾಷ್ಟ್ರಧರ್ಮ’ ಎಂಬ ಮಾಸ ಪತ್ರಿಕೆಯನ್ನು ಪಂಡಿತ ದೀನದಯಾಳ್ ಉಪಾಧ್ಯಾಯರ ಜೊತೆಗೂಡಿ ಲಕ್ನೋದಲ್ಲಿ ಪ್ರಾರಭಿಸಿದ್ದರು. ಈ ಪತ್ರಿಕೆ ಪ್ರಾರಂಭವಾಗಿದ್ದು 1947ರಲ್ಲಿ. ಈ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಮುಂದೆ ಅಟಲ್‍ರವರ ಸಂಪಾದಕತ್ವದಲ್ಲಿ `ಪಾಂಚಜನ್ಯ’ ಎಂಬ ವಾರಪತ್ರಿಕೆ ಪ್ರಾರಂಭವಾಯಿತು. ಹೀಗೆ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಪಡದ ನಂತರ ಅಟಲ್‍ರವರು `ಸ್ವದೇಶ’ ಮತ್ತು `ಅರ್ಜುನ್’ ಎಂಬ ಎರಡು ದೈನಿಕ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಅಟಲ್‍ಜೀ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮನಸ್ಸಿನ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು ಎಂಬುದು ಆ ಕಾಲದ ವಾಚಕರ ಅನಿಸಿಕೆಯಾಗಿತ್ತು. ತೀಕ್ಷ್ಣ ಹಾಗೂ ನಿಖರವಾದ ಬರವಣಿಗೆ ಅವರದಾಗಿರುತ್ತಿತ್ತು.

    ದಿನದ ಕಾರ್ಯ ಮುಗಿದ ನಂತರ ಏಕಾಂತದಲ್ಲಿ ಕುಳಿತು ಕೊಳ್ಳುವುದು ಅವರ ಸ್ವಭಾವ. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯವುದು ಮತ್ತು ಸಂಜೆ ವೇಳೆಯಲ್ಲಿ ಒಳ್ಳೆಯ ಚಲನಚಿತ್ರ ನೋಡುವುದು ಅವರ ಹವ್ಯಾಸವಾಗಿತ್ತು. ಉತ್ತಮ ಚಲನಚಿತ್ರ ನೋಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರಾಣ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾರಂಗದ ಮೂಲಕ ಭಾರತೀಯರಲ್ಲಿ ರಾಷ್ಟ್ರೀಯತೆ, ಮೂಢನಂಬಿಕೆ, ಸಮಾಜದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರಾಗಿ ಜನಮನಕ್ಕೆ ಅರಿವು ತಲುಪಿಸಿದರು. ಮುಂದೆ ಪ್ರಧಾನಮಂತ್ರಿಯಾದಾಗ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=c6bRPaIlo1s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ಭಾರತದ ದೇಶದ ಮಹಾನ್ ರಾಜಕೀಯ ನಾಯಕರಾದ ಅಟಲ್‍ಜೀ ಅವರ ಜನನವಾದದ್ದು ಮಧ್ಯಪ್ರದೇಶದ ಗ್ವಾಲಿಯರ್ ನ ಶಿಂಧೆಯ ದಂಡು ಪ್ರದೇಶದಲ್ಲಿ. ಸುಸಂಸ್ಕೃತ ಮನೆತನದಲ್ಲಿ ಜನಿಸಿದರು. ಅವರು ಜನಿಸಿದ್ದು 1924ರ ಡಿಸೆಂಬರ್ 25 ರಂದು.

    ಅಟಲ್ ಅವರ ತಂದೆ ಕೃಷ್ಣಬಿಹಾರಿ ವಾಜಪೇಯಿ, ತಾಯಿ ಕೃಷ್ಣಾದೇವಿ. ತಂದೆ-ತಾಯಿ ಚಿಂತನೆ ಮಾಡಿ ಮಗುವಿಗೆ `ಅಟಲ್ ಬಿಹಾರಿ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ `ಗಟ್ಟಿ’ (ಕಾರ್ಯಸಾಧಕ) ಎಂದರ್ಥ. ಬಿಹಾರಿ ಎಂದರೆ `ವಿಚಾರ ಮಾಡುವವ’ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿಯಾಗಿದ್ದರು ಅಟಲ್ ಬಿಹಾರಿ.

    ಶಿಶುವಿನ ಚಂಚಲತೆ, ಹೊಳೆಯುವ ಕಣ್ಣುಗಳು, ದಷ್ಟ-ಪುಷ್ಟ ಶರೀರ, ಲವಲವಿಕೆಯ ಮುಖ ಸದಾ ಮುಗಳ್ನಗು ಮತ್ತು ಎಲ್ಲರೊಂದಿಗೂ ಬೆರೆಯುವ ಗುಣ ಅವರಲ್ಲಿತ್ತು. ಮಗುವನ್ನು ಒಮ್ಮೆ ನೋಡಿದರೆ ಸಾಕು ಯಾರಿಗಾದರೂ ಎತ್ತಿ ಮುದ್ದಾಡಬೇಕೆಂಬ ಆಸೆಯಾಗುತ್ತಿತ್ತು. ಹಾಗಿದ್ದರು ಅಟಲ್‍ರವರು.

    ಚಿಕ್ಕಂದಿನಿಂದಲೇ ಅಕ್ಷರದ ಜ್ಞಾನ ಬೆಳೆಸಿಕೊಳ್ಳುವ ಹಾಗೆ ಮನೆಯವರು ಪ್ರಯತ್ನಿಸುತ್ತಿದ್ದರು. ಹಾಗೇ ಬೇಗನೆ ಎಬ್ಬಿಸಿ ತಣ್ಣೀರು ಸ್ನಾನ ಮಾಡಿಸಿ ಜಪ-ತಪ, ಮಂತ್ರ ಪಠಣ, ರಾಮಾಯಣ, ಮಹಾಭಾರತ, ಗೀತೆ ಮತ್ತು ಶ್ರೀ ಮದ್ಭಾಗವತದ ಅಧ್ಯಯನದಲ್ಲಿ ತೊಡಗಿಸುತ್ತಿದ್ದರು ಮತ್ತು ಇತರೆ ಭಾಷೆಯ ಗ್ರಂಥಗಳನ್ನು ಅಭ್ಯಸಿಸಲು ಹೇಳುತ್ತಿದ್ದರು.

    ಬಾಲಕ ಅಟಲ್‍ರನ್ನು ನಂತರದ ದಿನಗಳಲ್ಲಿ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಮಾಡಿದ ಪಾಠ ತಿಳಿಯದೆ ಇದ್ದಾಗ ತನ್ನ ತಂದೆ ಸ್ವಂತ ಅಧ್ಯಾಪಕರಿರುವುದರಿಂದ ಅವರನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಅಟಲ್‍ಜೀ ಹಾತೊರೆಯುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಪಾಠಗಳಲ್ಲಿ ನಿರತರಾಗಿದ್ದರು.

    ಅಟಲ್‍ರವರು ಗ್ವಾಲಿಯರ್ ನಲ್ಲಿದ್ದ ಗೋರಖಿ ವಿದ್ಯಾಲಯದ ಮಿಡಲ್ ಪರೀಕ್ಷೆ ಪಾಸು ಮಾಡಿದರು. ಅಭ್ಯಾಸದಲ್ಲಿ ಅವರು ಯಾವತ್ತು ಹಿಂದೆ ಬೀಳದವರು. ಎಲ್ಲಾ ವಿದ್ಯಾರ್ಥಿಗಳಿಗಿಂತ ಪತ್ರಿಭಾವಂತ ವಿದ್ಯಾರ್ಥಿಯಾಗಿದ್ದರು. ಹೈಸ್ಕೂಲಿನಲ್ಲಿ ನಡೆಯುವ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಜಾಣತನದ ಮಾತು ಹಾಗೂ ನಡವಳಿಕೆಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಯಾವುದೇ ಪರೀಕ್ಷೆ ಇರಲಿ ಅದರಲ್ಲಿ ಕ್ಲಾಸಿಗೆ ಪ್ರಥಮ ರ‍್ಯಾಂಕ್ ಬರುತ್ತಿದ್ದರು. ಶಾಲಾ ಪಠ್ಯಪುಸ್ತಕಗಳಿಗಿಂತ ಆಧ್ಯಾತ್ಮಿಕ, ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕತೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚುಮೆಚ್ಚು, ಕಬಡ್ಡಿ ಎಂದರೆ ಅತಿ ಇಷ್ಟವಾದ ಆಟ. ಅವರೊಬ್ಬ ಉತ್ತಮ ಕಬ್ಬಡಿ ಪಟುವೂ ಹೌದು.

    ತಂದೆಯ ಕವಿತೆಗಳನ್ನು ಕೇಳಿ ಕೇಳಿ ತಾನು ಪ್ರಾಸಬದ್ಧವಾಗಿ ಹೇಳತೊಡಗಿದ, ಮಾತಿನ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ತಂದೆಯಿಂದ ಕಲಿತರು. ಹಾಗೇ ನಮ್ಮ ದೇಶದ ಹಬ್ಬ ಹರಿದಿನ ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಯಾಗಿ ಮೈಗೂಡಿಕೊಂಡು ಬೆಳೆದರು.

    ಅಟಲ್ ಜೀ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದಾಗ ಮನೆಯಲ್ಲಿ ಶುದ್ಧ ಭಾರತೀಯ ವಾತಾವರಣ, ಸುಸಂಸ್ಕೃತ, ಆಧ್ಯಾತ್ಮಕದ ಪರಿಸರ, ಆರ್ಯ ಸಮಾಜದ ನಾಯಕರು ಮತ್ತು ಕಾರ್ಯಕರ್ತರು ತಂದೆಯನ್ನು ಕಾಣಲು ಸದಾ ಬರುತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ ಆಗಮಿಸುತ್ತಿದ್ದರು. ವಂಶಾನುಕ್ರಮ ಮತ್ತು ಮನೆಯ ವಾತಾವರಣದ ಉಜ್ವಲ ರಾಷ್ಟ್ರಭಕ್ತಿ ಅವರಿಗೆ ದೊರೆತ ಪರಿಸರ ಅವರ ವ್ಯಕ್ತಿತ್ವದ ಮೇಲೆ ಸಾಕಷ್ಟು ಪರಿಣಾಮವನ್ನುಂಟು ಮಾಡಿತು. ಇದುವೇ ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.

    ಅಟಲ್ ಹೈಸ್ಕೂಲ್ ದಿನಗಳಿಂದಲೂ ಉತ್ತಮ ಭಾಷಣಕಾರರಾಗಿದ್ದರು. ಭಾಷಣಕಾರನ ಸತ್ವ, ಕತೆಗಾರಿಕೆ ಮತ್ತು ಗುಣಗಳು ಅಟಲ್‍ಗೆ ಅವರ ತಂದೆ ಮತ್ತು ತಾತನಿಂದ ಬಳುವಳಿಯಾಗಿ ಹರಿದು ಬಂದಿದೆ ಎನ್ನಬಹುದು. ಏಕೆಂದರೆ ಅವರಿಬ್ಬರೂ ಕೂಡ ಉತ್ತಮ ವಾಗ್ಮಿಗಳಾಗಿದ್ದರು.

    ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಚಾಟಿಯೇಟಿನಂತಹ ನುಡಿ ಅವರ ಮಾತುಗಾರಿಕೆಯಾಗಿತ್ತು. ಶಾಲಾ ದಿನಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಉತ್ತಮ ಸ್ಪರ್ಧೆಯನ್ನು ಮಾಡುತ್ತ ಬೆಳೆದ ಇವರಿಗೆ ಮನೆಯ ಕೌಟುಂಬಿಕ ವಾತಾವರಣ ವ್ಯಕ್ತಿತ್ವ ನಿರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=gopOVPqsjmU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೈಕಲ್ ಸವಾರಿ ಪ್ರಿಯರಾಗಿದ್ರು ಅಟಲ್

    ಸೈಕಲ್ ಸವಾರಿ ಪ್ರಿಯರಾಗಿದ್ರು ಅಟಲ್

    1971ರಲ್ಲಿ ಅಟಲ್ ಅವರು ಸಂಸತ್ ಸದಸ್ಯರಾಗಿದ್ದರು. ಗ್ವಾಲಿಯರ್ ಗೆ ಆಗಮಿಸಿದಾದ ರೈಲು ನಿಲ್ದಾಣದಿಂದ ನೇರವಾಗಿ ಟಾಂಗಾದಲ್ಲಿ ಮನೆಗೆ ಹೋದರು. ಗ್ವಾಲಿಯರ್ ನಲ್ಲಿ ಸ್ನೇಹಿತರ ಮತ್ತು ಸಹೋದರಿ ಮನೆಗೆ ಹೋಗಲು ತನ್ನ ಮನೆಯಲ್ಲಿ ಅಣ್ಣನಾದ ಪ್ರೇಮ ಬಿಹಾರಿ ಅವರ ಸೈಕಲ್ಲೊಂದಿತ್ತು. ಅದನ್ನೇರಿ ಸಹೋದರಿ ಮನಗೆ ಹೊರಟೇ ಬಿಟ್ಟರು. ಮಾರ್ಗ ಮಧ್ಯದಲ್ಲಿ ಗ್ವಾಲಿಯರ್ ಸಂಸ್ಥಾನದ ರಾಜಮಾತಾ ವಿಜಯ ರಾಜೇ ಸಿಂಧಿಯಾ ಅಟಲ್ ಜೀ ಸೈಕಲ್ ತುಳಿಯುತ್ತಾ ಹೋಗುವುದನ್ನು ಗಮನಿಸಿದರು.

    ತಮ್ಮ ಸಹಾಯಕನನ್ನು ಕಳುಹಿಸಿ ಅಟಲ್ ಅವರನ್ನು ಒಂದು ಕ್ಷಣ ನಿಲ್ಲುವಂತೆ ತಿಳಿಸಿದ್ದರು. ಏನಿದು ಅವಸ್ಥೆ. ನೀವು ಮೊದಲೇ ತಿಳಿಸಿದರೆ ನಾನು ಕಾರನ್ನು ಕಳುಸುತ್ತಿದ್ದೆ ಎಂದರು ರಾಜಮಾತಾ. ಅದಕ್ಕೆ ಉತ್ತರಿಸಿದ ಅಟಲ್ ಅವರು ಹೇಳಿದರು, ಪರವಾಗಿಲ್ಲ ನನಗೇನೂ ತೊಂದರೆ ಇಲ್ಲ. ಗ್ವಾಲಿಯರ್ ನ ಜನತೆಗೆ ನಾನು ಯಾರೆಂದು ಗೊತ್ತು, ಅವರನ್ನು ನಾನು ಬಲ್ಲೆ. ರಾಜಮಾತಾ ಅವರನ್ನು ಅಭಿನಂದಿಸಿ ಅಟಲ್ ಸೈಕಲ್ ಸವಾರನಾಗಿ ನಡೆದರು.

    ಅಷ್ಟೊಂದು ಸರಳ ಸ್ವಭಾವದ ವ್ಯಕ್ತಿಯಾಗಿದ್ದವರು ಇವರು. ವ್ಯಕ್ತಿ ಎಷ್ಟೇ ಉನ್ನತ ಶಿಖರಕ್ಕೇರಿದರೂ, ತನ್ನ ಮೂಲದ ಕಲ್ಪನೆ ಹೊಂದಿರಬೇಕು. ಅಂತವರು ಮಾತ್ರ ಎಂಥ ಸಮಸ್ಯೆಗಳನ್ನೂ ಎದುರಿಸಬಲ್ಲರು ಎಂಬುದನ್ನು ತಿಳಿಸಿ ಕೊಡುತ್ತದೆ ಅವರ ವ್ಯಕ್ತಿತ್ವ. ದೇಶದ ಬಡತನ, ಅಭಿವೃದ್ಧಿಯನ್ನು ಅರಿಯಬೇಕಾದರೆ ಎಲ್ಲಾ ರಾಜಕಾರಣಿಗಳು ಎಸಿ ಕಾರುಗಳನ್ನು ಬಿಟ್ಟು ಸೈಕಲ್ ನಡೆಸಬೇಕು. ಆಗ ನಿಜವಾಗಿಯೂ ಸಾಮಾನ್ಯ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಾಜಪೇಯಿ ಅವರು ಸೈಕಲ್ ನಡೆಸುವುದರೊಂದಿಗೆ ಕನಸಿನ ಭಾರತದ ಚಿಂತನೆಯ ಪೆಡಲ್‍ಗಳನ್ನು ತುಳಿಯುತ್ತಾ ಮುಂದೆ ಸಾಗಿ ಬಂದವರಾಗಿದ್ದಾರೆ.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)