Tag: vairamudi festival

  • ಅದ್ಧೂರಿಯಾಗಿ ನಡೆಯಿತು ವೈರಮುಡಿ ಉತ್ಸವ

    ಅದ್ಧೂರಿಯಾಗಿ ನಡೆಯಿತು ವೈರಮುಡಿ ಉತ್ಸವ

    – ಉತ್ಸವದಲ್ಲಿ ಭಾಗಿಯಾದ ಸುಧಾಮೂರ್ತಿ, ಯದುವೀರ್

    ಮಂಡ್ಯ: ವರ್ಷಕ್ಕೊಮ್ಮೆ ನಡೆಯುವ ವಿಶ್ವ ವಿಖ್ಯಾತ ವೈರಮುಡಿ ಉತ್ಸವದ ವೈಭವವನ್ನ ಕಣ್ತುಂಬಿಸಿಕೊಳ್ಳಲು ಸಾವಿರಾರು ಭಕ್ತ ಸಮೂಹವೇ ಹರಿದು ಬಂದಿತ್ತು. ಅಕ್ಷರಶಃ ಮೇಲುಕೋಟೆ ವೈರಮುಡಿ ಉತ್ಸವ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯ್ತು.

    ಮೇಲುಕೋಟೆಯ ವಿಶ್ವ ವಿಖ್ಯಾತ ಶ್ರೀ ಚಲುವ ನಾರಾಯಣಸ್ವಾಮಿಯ ಶ್ರೀ ವೈರಮುಡಿ ಕಿರೀಟ ಧಾರಣಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಉತ್ಸವ ಮೂರ್ತಿಯ ದರ್ಶನ ಪಡೆದು ಪುಣಿತರಾದರು. ಶನಿವಾರ ಬೆಳಗ್ಗೆ ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಮೇಲುಕೋಟೆಗೆ ತೆಗೆದುಕೊಂಡು ಬಂದರು. ನಂತರ ವೈರಮುಡಿ ಕಿರೀಟ, ಶಂಕ, ಗಧಾ, ಸೇರಿದಂತೆ ಪ್ರಮುಖ 14 ಆಭರಣಗಳಿಂದ ಉತ್ಸವ ಮೂರ್ತಿಗೆ ಅಲಂಕಾರ ಮಾಡಿ, ಮೆರವಣಿಗೆ ಮಾಡಲಾಯ್ತು.

    ಮೇಲುಕೋಟೆ ಉತ್ಸವ ಅಭಿವೃದ್ಧಿಗೆ ಇನ್ಫೋಸಿಸ್ ಫೌಂಡೇಶನ್ ಮುಂದಾಗಿತ್ತು. ಇದೇ ಮೊದಲ ಬಾರಿಗೆ ಉತ್ಸವದಲ್ಲಿ ಭಾಗಿಯಾಗದ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ಈ ಉತ್ಸವ ತುಂಬಾ ಚೆನ್ನಾಗಿದೆ. ಉತ್ಸವದಲ್ಲಿ ಹಬ್ಬದ ವಾತಾವರಣ ಅನಾವರಣಗೊಂಡಿದೆ ಅಂದರು. ಇನ್ನು ಯದುವೀರ್ ಒಡೆಯರ್ ಕೂಡ, ಈ ಉತ್ಸವ ಕುರಿತು ಸಂತಸ ವ್ಯಕ್ತಪಡಿಸಿದರು. ಈ ಕ್ಷೇತ್ರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಮೈಸೂರು ಅರಮನೆಗೂ ಈ ದೇವಸ್ಥಾನಕ್ಕೂ ಅವಿನಭಾವ ಸಂಬಂಧ ಇದೆ ಎಂದು ಹೇಳಿದರು.

    ಐತಿಹಾಸಿಕ ಹಿನ್ನೆಲೆಯುಳ್ಳ ವೈರಮುಡಿ ಉತ್ಸವ ಭಾರೀ ಪೊಲೀಸ್ ಬಿಗಿ ಭದ್ರತೆಯಲ್ಲಿ ಸುಸೂತ್ರವಾಗಿ ನಡೆಯಿತು. ಆದರೆ ಉತ್ಸವ ಆರಂಭಕ್ಕೂ ಮುನ್ನ ಕೆಲವು ಪೊಲೀಸರು ಮಾಧ್ಯಮದವರ ಮೇಲೆ ಅಂಧಾ ದರ್ಬಾರ್ ನಡೆಸಿದರು. ನಂತರ ಎಸ್‍ಪಿ ಶಿವ ಪ್ರಕಾಶ್ ಮಧ್ಯೆ ಪ್ರವೇಶಿಸಿ, ಮಾಧ್ಯಮದವರಿಗೆ ಮುಕ್ತ ವರದಿ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಲುಕೋಟೆಯಲ್ಲಿ ವೈರಮುಡಿ ವೈಭವ- ಎಲ್ಲೆಲ್ಲೂ ಚಲುವನಾರಾಯಣಸ್ವಾಮಿಯ ನಾಮಸ್ಮರಣೆ

    ಮೇಲುಕೋಟೆಯಲ್ಲಿ ವೈರಮುಡಿ ವೈಭವ- ಎಲ್ಲೆಲ್ಲೂ ಚಲುವನಾರಾಯಣಸ್ವಾಮಿಯ ನಾಮಸ್ಮರಣೆ

    ಮಂಡ್ಯ: ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ರಾತ್ರಿ ಸಾಕ್ಷಾತ್ ಭಗವಂತನೇ ಧರೆಗಿಳಿದ ಭಕ್ತಿ-ಭಾವ ಮೇಳೈಸಿತ್ತು. ವಿಶ್ವದಲ್ಲಿಯೇ ಪ್ರಸಿದ್ಧವಾದ ವೈರಮುಡಿ ಬ್ರಹ್ಮೋತ್ಸವದ ಸಡಗರ-ಸಂಭ್ರಮ ಎಲ್ಲೆ ಮೀರಿತ್ತು. ಶ್ರೀದೇವಿ-ಭೂದೇವಿಯರೊಂದಿಗೆ ರತ್ನಖಚಿತ ವೈರಮುಡಿ ಕಿರೀಟ ಧರಿಸಿ ಗರುಡಾರೂಢನಾದ ಶ್ರೀಚಲುವನಾರಾಯಸ್ವಾಮಿಯ ದರ್ಶನದಿಂದ ನೆರೆದಿದ್ದ ಜನಸ್ತೋಮ ಪಾವನರಾದರು.

    ಅಧಿಕಾರಿಗಳು ಹಾಗೂ ದೇವಸ್ಥಾನದ ಸ್ಥಾನಿಕರು ರಾಜಮುಡಿಯ ಚಿನ್ನಾಭರಣಗಳ ಪಾರ್ಕಾವಣೆ ಮಾಡಿ ದೇವರಿಗೆ ವೈರಮುಡಿಯನ್ನು ಧರಿಸಲಾಯಿತು. ಈ ವೇಳೆ ಯಾಗಶಾಲೆಯಲ್ಲಿ ಹೋಮ ನಡೆಸಿ ಗರುಡ ದೇವರ ಉತ್ಸವ ನಡೆಯುತ್ತಿದ್ದಂತೆ ಮಹಾಮಂಗಳಾರತಿಯೊಂದಿಗೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

    ಉತ್ಸವ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಹೊರಗೆ ನೆರೆದಿದ್ದ ಲಕ್ಷಾಂತರ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನೂಕುನುಗ್ಗಲಿನಲ್ಲಿ ಚಲುವನಾರಾಯಣಸ್ವಾಮಿಯ ದರ್ಶನ ಪಡೆದು ಧನ್ಯರಾದರು. ದೇವಾಲಯದ ಮುಖ್ಯದ್ವಾರದಿಂದ ಪ್ರಾರಂಭಗೊಂಡ ಉತ್ಸವ, ಮುಂಜಾನೆವರೆಗೂ ಚತುರ್ವೀದಿಗಳಲ್ಲಿ ವೈಭವದಿಂದ ಸಾಗಿತು. ದಕ್ಷಿಣ ಬದರೀಕಾಶ್ರಮ ಎಂದೇ ಪ್ರಸಿದ್ಧಿ ಪಡೆದ ಮಂಡ್ಯ ಜಿಲ್ಲೆಯ ಈ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು. ಕರ್ನಾಟಕವಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳು ಹಾಗೂ ಹೊರ ದೇಶದ ಭಕ್ತರು ಆಗಮಿಸಿ ಗೋವಿಂದ ನಾಮ ಸ್ಮರಣೆ ಮಾಡಿದ್ರು.

    ಬೆಟ್ಟದ ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ರಾಜಗೋಪುರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು. ಇಡೀ ಊರ ಬೀದಿಗಳು ದೀಪಗಳಿಂದ ಜಗಮಗಿಸಿ ಉತ್ಸವದ ರಂಗು ಹೆಚ್ಚಿಸಿತು. ಆದ್ರೆ ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವದಲ್ಲಿ ಮಳೆಯ ಸಿಂಚನವಾಯ್ತು. ತುಂತುರು ಮಳೆಯಲ್ಲೇ ಭಕ್ತರು ಚಲುವನಾರಾಯಣಸ್ವಾಮಿಯ ದರ್ಶನ ಪಡೆದು ಪುನೀತರಾದ್ರು. ಈ ಮಳೆ ರಾಜ್ಯದಲ್ಲಿ ತಲೆದೋರಿರುವ ಬರಗಾಲ ನೀಗಿ ಸಮೃದ್ಧಿಯನ್ನ ನೀಡಲಿದೆ. ಅದಕ್ಕೆ ಚಲುವನಾರಾಯಣಸ್ವಾಮಿಯ ಆಶಿರ್ವಾದ ಇದೆ ಎಂದು ಭಕ್ತಿಪರವಶರಾದ್ರು.

     

  • ರಾಜ್ಯಾದ್ಯಂತ ಶ್ರೀರಾಮನವಮಿ ಸಂಭ್ರಮ – ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ

    ರಾಜ್ಯಾದ್ಯಂತ ಶ್ರೀರಾಮನವಮಿ ಸಂಭ್ರಮ – ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ

    ಬೆಂಗಳೂರು/ಮಂಡ್ಯ: ರಾಜ್ಯಾದ್ಯಂತ ಇಂದು ಶ್ರೀರಾಮನವಮಿಯನ್ನ ಶ್ರದ್ಧಾಭಕ್ತಿಯಿಂದ ಆಚರಿಸಲಾಗ್ತಿದೆ. ಮುಂಜಾನೆಯೇ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಬಳ್ಳಾರಿ, ಕಲಬುರಗಿಯಲ್ಲಿ ಜನ ಈ ಬೇಸಿಗೆಯಲ್ಲಿ ಪಾನಕ, ನೀರುಮಜ್ಜಿಗೆ, ಕೋಸಂಬರಿಯನ್ನ ಸಿದ್ಧ ಮಾಡ್ತಿದ್ದಾರೆ.

    ಮಂಡ್ಯದ ಪಾಂಡವಪುರದ ಮೇಲುಕೋಟೆಯಲ್ಲಿ ಐತಿಹಾಸಿಕ ಚಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಮನೆ ಮಾಡಿದೆ. ಉತ್ಸವಕ್ಕೆ ಸಾವಿರಾರು ಜನರು ದೇಶದ ನಾನಾ ಭಾಗಗಳಿಂದ ಆಗಮಿಸಲಿದ್ದಾರೆ. ಚಲುವನಾರಾಯಣನಿಗೆ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿರೋ ವೈರಮುಡಿ ಮತ್ತು ಆಭರಣವನ್ನ ಅಧಿಕಾರಿಗಳ ಸಮ್ಮುಖದಲ್ಲಿ ಹೊರ ತೆಗೆಯಲಾಗುತ್ತೆ. ನಂತರ ವಿಶೇಷ ಪೂಜೆ ಬಳಿಕ ಬಿಗಿ ಭದ್ರತೆಯಲ್ಲಿ ರವಾನೆಯಾಗೋ ವೈರಮುಡಿ ಸಂಜೆ ವೇಳೆಗೆ ಮೇಲುಕೋಟೆಗೆ ತಲುಪಲಿದೆ.

    ಮೇಲುಕೋಟೆಗೆ ಕೊಂಡೊಯ್ಯೋ ದಾರಿಯುದ್ದಕ್ಕೂ ಗ್ರಾಮಸ್ಥರು, ಭಕ್ತರು ವೈರಮುಡಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ವೈರಮುಡಿ ಕಿರೀಟ ಧಾರಣೆಯೊಂದಿಗೆ ಬ್ರಹ್ಮೋತ್ಸವ ನಡೆಯಲಿದೆ.