Tag: Vacation

  • ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

    ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

    ಉಡುಪಿ: ನ್ಯಾಶನಲ್ ಹೆಲ್ತ್ ಮಷೀನ್ (ಎನ್‍ಎಚ್‍ಎಂ)ನ 24,000 ಸಿಬ್ಬಂದಿ ರಾಜ್ಯದಲ್ಲಿ ಇಂದು ಗಾಂಧಿಗಿರಿ ಮಾಡಿದ್ದಾರೆ. ರಜೆ ತೆಗೆದುಕೊಳ್ಳದೆ ಹಾಜರಿ ಹಾಕದೆ ಸಂಬಳ ತೆಗೆದುಕೊಳ್ಳದೆ ಸೇವೆ ಮಾಡುತ್ತಿದ್ದಾರೆ.

    ಆರೋಗ್ಯ ಇಲಾಖೆಯ ಎನ್‍ಹೆಚ್‍ಎಂನ ಗುತ್ತಿಗೆ ಆಧಾರದ ಸಿಬ್ಬಂದಿಗೆ ಏಪ್ರಿಲ್ 1 ರಂದು ರಜೆ ಕೊಟ್ಟು ತಮ್ಮ ಹುದ್ದೆಯನ್ನು ರಿನಿವಲ್ ಮಾಡುವ ಉದ್ದೇಶವನ್ನು ಎನ್‍ಎಚ್‍ಎಂ ಹೊಂದಿತ್ತು. ಆದರೆ ರಾಜ್ಯದ 25 ಸಾವಿರ, ಉಡುಪಿ ಜಿಲ್ಲೆಯ 450 ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ. ಇವತ್ತು ರಜೆ ತೆಗೆದುಕೊಳ್ಳದೆ ದಿನಪೂರ್ತಿ ಉಚಿತ ಸೇವೆ ಮಾಡುತ್ತಿದ್ದಾರೆ. ತಮ್ಮ ಹಲವಾರು ವರ್ಷದ ಬೇಡಿಕೆ ಈ ವರ್ಷವೂ ಈಡೇರಿಸಿಲ್ಲ ಎಂದು ಸರ್ಕಾರ ಮತ್ತು ಯೋಜನೆಯ ನಿರ್ದೇಶಕರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಉಚಿತ ಸೇವೆ ಮಾಡುತ್ತಿದ್ದಾರೆ.

    ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಬ್ಬಂದಿ ಪ್ರತಿವರ್ಷ ಕಾಂಟ್ರ್ಯಾಕ್ಟ್ ಲೆಕ್ಕದಲ್ಲಿ ರಿನಿವಲ್ ಆಗುತ್ತಾ ಬರುತ್ತಾರೆ. ರಾಜ್ಯದಲ್ಲಿ ಸದ್ಯ ಮಹಾಮಾರಿ ಕೊರೊನಾದ ವಿಷಮ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ಕಾನೂನು ನಿಯಮ ಎಂದು ರಜೆ ನೀಡಲು ಎನ್‍ಎಚ್‍ಎಂ ನಿರ್ಧಾರ ತೆಗೆದುಕೊಂಡಿತ್ತು. ಇದರ ವಿರುದ್ಧ ಸಾಕಷ್ಟು ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಇಷ್ಟಾದರೂ ಇಲಾಖೆಯ ಅಧಿಕಾರಿಗಳು, ಸರ್ಕಾರ ತಮ್ಮ ಪಟ್ಟು ಸಡಿಲಿಸಿಲ್ಲ. ಇದೇ ಕಾರಣದಿಂದ ಉಡುಪಿ ಜಿಲ್ಲೆಯ ಸಿಬ್ಬಂದಿ ಗಾಂಧಿಗಿರಿ ಮಾಡಿದ್ದಾರೆ. ಸಂಬಳ ತೆಗೆದುಕೊಳ್ಳದೇ ರಜೆ ಮಾಡದೆ, ಹಾಜರಾತಿ ನಮೂದಿಸಿದೆ ಜಿಲ್ಲೆಯಾದ್ಯಂತ ಕೆಲಸ ಮಾಡುತ್ತಿದ್ದಾರೆ.

    ಆಶಾ ಕಾರ್ಯಕರ್ತೆಯರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಚೆಕ್ ಪೋಸ್ಟ್ ಹೀಗೆ ಎಲ್ಲ ಸ್ಥರದಲ್ಲಿ ಎನ್‍ಎಚ್‍ಎಂ ಸಿಬ್ಬಂದಿ ಉಚಿತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಬ್ಬಂದಿಯೊಬ್ಬರು ಮಾತನಾಡಿ, ಕೊರೊನಾ ಪ್ರಕರಣಗಳೆಲ್ಲ ಹತೋಟಿಗೆ ಬಂದ ಮೇಲೆಯಾದರೂ ನಮ್ಮ ಬೇಡಿಕೆ ಈಡೇರಿಸಿ ಎಂದು ಮನವಿ ಮಾಡಿದ್ದಾರೆ.

  • ರಜೆಗಾಗಿ ಎಸ್‍ಬಿಐ ನೌಕರನಿಂದ ಕೊರೊನಾ ಡ್ರಾಮಾ

    ರಜೆಗಾಗಿ ಎಸ್‍ಬಿಐ ನೌಕರನಿಂದ ಕೊರೊನಾ ಡ್ರಾಮಾ

    ಚಾಮರಾಜನಗರ: ಎಸ್‍ಬಿಐ ನೌಕರನೊಬ್ಬ ರಜೆ ಪಡೆಯಲು ಗಂಟಲು ನೋವು, ಶೀತ, ಕೆಮ್ಮು ಮತ್ತು ಜ್ವರ ಬಂದಿದೆ ಎಂದು ನಾಟಕವಾಡಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಗುಂಡ್ಲುಪೇಟೆ ಎಸ್‍ಬಿಐ ಬ್ಯಾಂಕ್ ನೌಕರ ಅನುರಾಗ್ ರಜೆಗಾಗಿ ಕೊರೊನಾ ಬಂದಿದೆ ಎಂದು ಡ್ರಾಮಾ ಮಾಡಿದ್ದಾರೆ. ಬ್ಯಾಂಕಿನಲ್ಲಿ ರಜೆ ನೀಡದ ಕಾರಣ ಕೊರೊನಾ ಲಕ್ಷಣಗಳು ಇವೆಯೆಂದು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನುರಾಗ್ ಡ್ರಾಮಾ ತಿಳಿಯದೆ ವೈದ್ಯರಿಂದ ತಪಾಸಣೆ ಕೂಡ ನಡೆದಿದೆ.

    ಪರೀಕ್ಷೆಯಲ್ಲಿ ಯಾವುದೇ ರೋಗ ಲಕ್ಷಣವಿಲ್ಲದ ಅನುರಾಗ್‍ರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಿದ್ದು, ಆತನಿಗೆ ಯಾವುದೇ ಸೋಂಕು ಇಲ್ಲ. ರಜೆ ಪಡೆಯುವ ಸಲುವಾಗಿ ಅನುರಾಗ್ ನಾಟಕವಾಡಿದ್ದಾನೆ ಎಂದು ಗುಂಡ್ಲುಪೇಟೆ ತಾಲೂಕು ವೈಧ್ಯಾದಿಕಾರಿ ಡಾ.ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

  • ಕೊರೊನಾ ಭೀತಿ ಎದುರಾದ್ರೇ ಶಾಲಾ-ಕಾಲೇಜಿಗೂ ರಜೆ ಘೋಷಣೆ: ಸುರೇಶ್ ಕುಮಾರ್

    ಕೊರೊನಾ ಭೀತಿ ಎದುರಾದ್ರೇ ಶಾಲಾ-ಕಾಲೇಜಿಗೂ ರಜೆ ಘೋಷಣೆ: ಸುರೇಶ್ ಕುಮಾರ್

    ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ದೆಹಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡರೆ ರಜೆ ಕೊಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ನೀಡಿದೆ.

    ಇದರ ಬೆನ್ನಲ್ಲೆ ಕೊರೊನಾ ಭೀತಿ ತೀರಾ ಹೆಚ್ಚಾದರೆ ಶಾಲೆಯಲ್ಲಿ ಹೆಚ್ಚಿನ ಮಕ್ಕಳಿಗೆ ಜ್ವರದಂತಹ ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ ಅಂತಹ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಈ ಮೊದಲು ಪಿಯುಸಿ ಪರೀಕ್ಷಾ ಕೊಠಡಿಯಲ್ಲಿ ಮೂವತ್ತು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ಬಾರಿ ಮಾತ್ರ ಹದಿನೈದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ. ಸಾಂಕ್ರಾಮಿಕ ರೋಗ ಭೀತಿಯಲ್ಲಿ ಬೆಂಜ್‍ಗಳನ್ನು ದೂರ ದೂರ ಇಡಲಾಗಿದ್ದು, ಮಾಸ್ಕ್ ಧರಿಸಲು ಅವಕಾಶ ಕೊಡಲಾಗಿದೆ.

  • ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

    ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

    ಬೆಂಗಳೂರು: 2020-21 ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ರಜೆ ದಿನಗಳ ವೇಳಾಪಟ್ಟಿಯನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಗಳಿಗೆ ಮಾಹಿತಿ ನೀಡಲು ಶಾಲಾ ಅವಧಿ ಮತ್ತು ರಜೆ ಅವಧಿಯನ್ನು ಪ್ರಕಟ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಜಗದೀಶ್ ನೂತನ ಶಾಲಾ ವೇಳಾಪಟ್ಟಿ ಆದೇಶ ಹೊರಡಿಸಿದ್ದಾರೆ.

    ಮೇ 29 ರಿಂದ 2020- 21 ನೇ ಸಾಲಿನ ಶಾಲೆಗಳ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿವೆ. ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅಕ್ಟೋಬರ್ 2 ವರೆಗೆ ನಡೆಯಲಿದೆ. ಶಾಲೆಗಳ ಎರಡನೇ ಅವಧಿ ಅಕ್ಟೋಬರ್ 26 ರಿಂದ ಏಪ್ರಿಲ್ 14,2021 ಕ್ಕೆ ಮುಕ್ತಾಯವಾಗಲಿದೆ. ದಸರಾ ರಜೆ ಅಕ್ಟೋಬರ್ 3 ರಿಂದ 25 ವರೆಗೆ ನೀಡಲಾಗುತ್ತದೆ. ಬೇಸಿಗೆ ರಜೆಯನ್ನ 2021 ಏಪ್ರಿಲ್ 15 ರಿಂದ 2021 ಮೇ 29 ವರೆಗೆ ನೀಡಲು ಇಲಾಖೆ ಸೂಚನೆ ನೀಡಲಾಗಿದೆ. ಈ ವರ್ಷ ಒಟ್ಟಾರೆ 240 ದಿನ ಶಾಲೆಗಳು ನಡೆಯಲಿದ್ದು, 77 ದಿನ ರಜೆ ಘೋಷಣೆ ಮಾಡಲಾಗಿದೆ. ಇನ್ನು ಕ್ರಿಸ್ ಮಸ್ ರಜೆಯನ್ನು ಡಿಸೆಂಬರ್ ತಿಂಗಳಲ್ಲಿ ನೀಡಲು ಜಿಲ್ಲಾ ಉಪ ನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ.

    ಏಪ್ರಿಲ್ 14 ರಂದು ನಡೆಯುವ ಅಂಬೇಡ್ಕರ್ ಜಯಂತಿಯನ್ನ ಬೇಸಿಗೆ ರಜೆ ಇದ್ದರು ಕಡ್ಡಾಯವಾಗಿ ಶಾಲೆಯಲ್ಲಿ ಆಚರಣೆ ಮಾಡಲು ಇಲಾಖೆ ಸೂಚನೆ ನೀಡಲಾಗಿದೆ. ಇದಲ್ಲದೆ ರಾಷ್ಟ್ರೀಯ ಹಬ್ಬಗಳನ್ನು ಕಡ್ಡಾಯವಾಗಿ ಅದೇ ದಿನದಂದೂ ರಜೆ ಇದ್ದರು ಆಚರಣೆ ಮಾಡಲು ಸೂಚನೆ ನೀಡಲಾಗಿದೆ. ಮುಷ್ಕರ ಇನ್ನಿತರ ಸಮಸ್ಯೆಯಿಂದ ಬೋಧನಾ ಅವಧಿ ಕಡಿಮೆ ಆದರೆ ಅದನ್ನ ಮುಂದಿನ ರಜೆ ದಿನಗಳಲ್ಲಿ ಪೂರ್ತಿ ದಿನ ಶಾಲೆ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

  • ನಿಲ್ಲದ ಕ್ಯಾರ್ ಆರ್ಭಟ – ಇಂದೂ ಶಾಲಾ ಕಾಲೇಜುಗಳಿಗೆ ರಜೆ

    ನಿಲ್ಲದ ಕ್ಯಾರ್ ಆರ್ಭಟ – ಇಂದೂ ಶಾಲಾ ಕಾಲೇಜುಗಳಿಗೆ ರಜೆ

    ಉಡುಪಿ: ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕ್ಯಾರ್ ಚಂಡಮಾರುತದ ಅಬ್ಬರ ಮುಂದುವರಿದಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುತ್ತಿದೆ.

    ಅರಬ್ಬಿ ಸಮುದ್ರ ಭೋರ್ಗೆರೆಯುತ್ತಿದ್ದು, ಕಡಲ ತೀರ ಪ್ರದೇಶ ಮನೆಗಳಿಗೆ ಬೃಹತ್ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ಹೀಗಾಗಿ ಇಂದು ಕೂಡ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಪ್ರವಾಹ ಎಚ್ಚರಿಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಿದ್ದ ದೀಪಾವಳಿ ರಜೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ತುರ್ತು ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸ್ಥಾನದಲ್ಲಿರುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

    ಚಂಡಮಾರುತ ಅತೀ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗ, ಮಹಾರಾಷ್ಟ್ರ ಮತ್ತು ಗೋವಾದ ತೀರ ಪ್ರದೇಶ, ಪಶ್ಚಿಮಬಂಗಾಳ, ಮೇಘಾಲಯ, ಅಸ್ಸಾಂನಲ್ಲಿ ಬಿರುಗಾಳಿ ಸಹಿತ ರಣಮಳೆ ಸುರಿಸಲಿದೆ. ಇನ್ನೂ ಎರಡ್ಮೂರು ದಿನ ಮಳೆಯಬ್ಬರ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

  • ಮಗಳ ಸಾವಿಗೂ ರಜೆ ಕೊಡದ ಅಧಿಕಾರಿ ಅಮಾನತು

    ಮಗಳ ಸಾವಿಗೂ ರಜೆ ಕೊಡದ ಅಧಿಕಾರಿ ಅಮಾನತು

    ಕೊಪ್ಪಳ: ಜಿಲ್ಲೆಯ ಗಂಗಾವತಿ ಬಸ್ ಡಿಪೋದಲ್ಲಿ ನಡೆದ ಅಮಾನವೀಯ ಘಟನೆಗೆ ಕಾರಣರಾದ ಅಸಿಸ್ಟೆಂಟ್ ಟ್ರಾಫಿಕ್ ಇನ್‍ಸ್ಪೆಕ್ಟರ್ ಹೇಮಾವತಿಯನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಲಾಗಿದೆ.

    ಕೆ.ಎಸ್.ಆರ್.ಟಿ.ಸಿಯ ಡಿಸಿ ಮೊಹ್ಮದ್ ಫಯಾಜ್, ಎಟಿಐ ಹೇಮಾವತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಬುಧವಾರದಂದು ಗಂಗಾವತಿ ಬಸ್ ಡೀಪೊದಲ್ಲಿ ಮಗಳ ಸಾವಿಗೂ ರಜೆ ಕೊಡದೆ ಬಸ್ ನಿರ್ವಾಹಕನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು.

    ಗಂಗಾವತಿ ಟು ಕೊಲ್ಲಾಪುರ ಬಸ್ ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಅವರ ಮಗಳು ಕವಿತಾ ಸಾವಿನ ಸುದ್ದಿ ಮುಚ್ಚಿಟ್ಟು ಅಧಿಕಾರಿ ಹೇಮಾವತಿ ಅಮಾನವೀಯವಾಗಿ ನೆಡೆದುಕೊಂಡಿದ್ದರು. ಡ್ಯೂಟಿಯಿಂದ ಇಳಿದ ನಂತರ ತಡವಾಗಿ ಮಂಜುನಾಥ್‍ಗೆ ಮಗಳ ಸಾವಿನ ಸುದ್ದಿ ತಿಳಿದಿದೆ.

    ಈ ಸಮಯದಲ್ಲಿ ಮನೆಗೆ ತೆರಳಲು ರೆಜೆ ಕೋರಿ ಮನವಿ ಮಾಡಿದರು. ರಜೆಯನ್ನು ನೀಡದೆ ಕೆಲಸಕ್ಕೆ ಹೋಗಲು ಹೇಮಾವತಿ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ಸುದ್ದಿಗೆ ಪ್ರತಿಕ್ರಿಯಿಸಿದ್ದ ಕೆ.ಎಸ್.ಆರ್.ಟಿ.ಸಿ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿತ್ತು.

    ಒಟ್ಟು ನಾಲ್ಕು ಟ್ವೀಟ್ ಮಾಡಿದ್ದ ಕೆಎಸ್‍ಆರ್‍ಟಿಸಿ, ಈ ವಿಷಯವು, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ, ಕೊಪ್ಪಳ ವಿಭಾಗಕ್ಕೆ ಸಂಬಂಧಿಸಿರುತ್ತದೆ. ಚಾಲಕನ ಮಗಳ ವಿಷಯ ತಿಳಿದ ಮೇಲೆಯೂ ಕರ್ತವ್ಯಕ್ಕೆ ಕಳುಹಿಸಲಾಗಿದೆ ಎಂಬುದು ಸತ್ಯವಲ್ಲ. ಸದರಿ ಚಾಲಕರು ಗಂಗಾವತಿಯಿಂದ ಕೊಲ್ಲಾಪುರ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಸ್ಸು ಗಂಗಾವತಿಯನ್ನು ಬಿಟ್ಟು ಎರಡು ಗಂಟೆಗಳಾದ ನಂತರ ಬಸ್ಸಿನ ಚಾಲಕರ ಸಂಬಂಧಿಕರೊಬ್ಬರಿಂದ ಗಂಗಾವತಿ ಘಟಕಕ್ಕೆ ದೂರವಾಣಿ ಕರೆ ಬಂದಿರುತ್ತದೆ. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಸಿಬ್ಬಂದಿಯು ಕರೆಯನ್ನು ಸ್ವೀಕರಿಸಿರುತ್ತಾರೆ. ಡಿಪೋದಲ್ಲಿ ಕರೆ ಸ್ವೀಕರಿಸಿದ ಟ್ರಾಫಿಕ್ ಅಸಿಸ್ಟೆಂಟ್ ಚಾಲಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

    ಆದರೆ, ದುರಂತದ ಬಗ್ಗೆ ಸದರಿ ಸಿಬ್ಬಂದಿಯು ಡಿಪೋದಲ್ಲಿ ಯಾರಿಗೂ ತಿಳಿಸಿಲ್ಲ. ಅವರು ಡಿಪೋ ಮ್ಯಾನೇಜರ್‍ ಗೆ ಹೇಳಿದ್ದರೆ, ಅವರನ್ನು ಸಂಪರ್ಕಿಸಲು ಶತಪ್ರಯತ್ನ ಮಾಡಿ, ಚಾಲಕರಿಗೆ ವಿಷಯ ಮುಟ್ಟಿಸಿ ಅವರನ್ನು ಕರೆಸಬಹುದಾಗಿತ್ತು. ನಾವು ಈ ಬಗ್ಗೆ ತನಿಖೆ ನಡೆಸಿ ಸದರಿ ಸಂಚಾರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿದ್ದೇವೆ. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ಬಗ್ಗೆ ಅತೀವ ದುಃಖ ವ್ಯಕ್ತಪಡಿಸುತ್ತದೆ. ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ, ಚಾಲಕ ಮತ್ತು ಅವರ ಪರಿವಾರದವರಿಗೆ ಈ ತುಂಬಲಾರದ ನಷ್ಟವನ್ನು ಭರಿಸುವ ಶಕ್ತಿ ನೀಡುವಂತೆ ದೇವರನ್ನು ಪ್ರಾರ್ಥಿಸುತ್ತೇವೆ ಎಂದು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಟ್ವೀಟ್ ಮಾಡಿದ್ದರು.

  • ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ – ಬೇಲೂರಿನ ವಿಷ್ಣು ಸಮುದ್ರ ಕೆರೆ ಭರ್ತಿ

    ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ – ಬೇಲೂರಿನ ವಿಷ್ಣು ಸಮುದ್ರ ಕೆರೆ ಭರ್ತಿ

    ಬೆಂಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಮಲೆನಾಡ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮತ್ತೆ ಎರಡು ದಿನಗಳ ಕಾಲ ರಜೆಯನ್ನು ವಿಸ್ತರಿಸಲಾಗಿದೆ.

    ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಮಲೆಯ ಮಾರುತ ಬಳಿ ಗುಡ್ಡ ಕುಸಿಯುತ್ತಿದೆ. ಪದೇ ಪದೆ ಗುಡ್ಡ ಕುಸಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದ್ದು, ಕುಸಿದ ಮಣ್ಣನ್ನು ತೆರವುಗೊಳಿಸುವ ಕಾರ್ಯವು ಸಹ ಅಷ್ಟೇ ಭರದಿಂದ ಸಾಗಿದೆ. ಧಾರಾಕಾರ ಮಳೆಯಾಗಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ‌ ಕುಸಿತ ಕಂಡಿರುವುದರಿಂದ 2 ದಿನಗಳ ಕಾಲ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಮಾಡಿದ್ದಾರೆ.

    ಕಾಫಿನಾಡಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯ ಎನ್ನುವಂತಹ ವಾತಾರಣ ನಿರ್ಮಾಣವಾಗಿದ್ದು, ಹೊರನಾಡಿನ ಎರಡೂ ಮಾರ್ಗವೂ ಬಂದ್ ಆಗಿದೆ. ಭಾರೀ ಮಳೆಯಿಂದ ಹೆಬ್ಬಾಳೆ ಸಂಪೂರ್ಣ ಬಂದ್ ಆಗಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹಳುವಳ್ಳಿ ಮಾರ್ಗವೂ ರಸ್ತೆ ಕುಸಿತದಿಂದ ಮುಚ್ಚಲ್ಪಟ್ಟಿದೆ. ಭೂ ಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

    ಭದ್ರೆಯ ಅಬ್ಬರಕ್ಕೆ ಹೆಬ್ಬಾಳೆ, ಮಳೆಗಾಳಿ ಅಬ್ಬರಕ್ಕೆ ಹಳುವಳ್ಳಿ ರಸ್ತೆಯೂ ಬಂದ್ ಆಗಿವೆ. ಇದರಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಸಂಪೂರ್ಣ ಬಂದ್ ಆದಂತಾಗಿವೆ.

    ಹಾಸನ: ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರ ಕೆರೆ ಭರ್ತಿಯಾಗಿದ್ದು, ಕೆರೆ ಉಕ್ಕಿ ಹರಿಯುತ್ತಿದೆ. ಕೆರೆ ಭರ್ತಿಯಾಗಿದ್ದರಿಂದ ನೀರು ಹೊರಗೆ ಹರಿಯುತ್ತಿದ್ದು, ಕೆರೆಯ ಬಳಿ ಇರುವ ಹತ್ತಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಇದರಿಂದ ಭತ್ತ ಹಾಗೂ ವಿವಿಧ ಬೆಳೆಗಳು ನೀರುಪಾಲಾಗಿವೆ. ಕೆರೆ ತುಂಬಿದ್ದರಿಂದ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಹಾಸನ ತಾಲೂಕಿನ ಅಗಸರಹಳ್ಳಿ ಸೇತುವೆ ಸಹ ಮುಳುಗಡೆಯಾಗಿದ್ದು, ಈ ಮಾರ್ಗದ ವಾಹನ ಸವಾರರು ಪರದಾಡುತ್ತಿದ್ದಾರೆ.

    ಸಕಲೇಶಪುರದಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಹೊಳೆಮಲ್ಲೇಶ್ವರ ದೇವಾಲಯ ಜಲಾವೃತಗೊಂಡಿದೆ. ಪಟ್ಟಣದ ಮೀನು ಮಾರುಕಟ್ಟೆ ಮತ್ತು ಆಝಾದ್ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಿರುಗಾಳಿ ಸಹಿತ ಮಳೆಗೆ ಮಲೆನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಇನ್ನೂ ಸಹ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದ್ದು, ಪ್ರವಾಹದ ಭೀತಿ ಇನ್ನೂ ಹೆಚ್ಚಾಗಿದೆ.

    ಉತ್ತರ ಕನ್ನಡ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಕಾರವಾರ ತಾಲೂಕಿನ ಕಿನ್ನರ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಕಾಳಿ ನದಿಯ ನೀರಿನ ಪ್ರವಾಹಕ್ಕೆ ಗ್ರಾಮಗಳು ಜಲಾವೃತಗೊಂಡಿವೆ.

  • ಮಳೆಯಬ್ಬರಕ್ಕೆ ಕರಾವಳಿ, ಮಲೆನಾಡಿನ ಜನ ತತ್ತರ – ಉಡುಪಿಯಲ್ಲಿ ಶಾಲಾ, ಕಾಲೇಜಿಗೆ ರಜೆ

    ಮಳೆಯಬ್ಬರಕ್ಕೆ ಕರಾವಳಿ, ಮಲೆನಾಡಿನ ಜನ ತತ್ತರ – ಉಡುಪಿಯಲ್ಲಿ ಶಾಲಾ, ಕಾಲೇಜಿಗೆ ರಜೆ

    ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕರಾವಳಿ ಭಾಗದ ಕುಮಟ ತಾಲೂಕಿನ ಕೂಜಳ್ಳಿ, ಕೋನಳ್ಳಿ ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕುಮಟ ತಾಲೂಕಿನ ಬಡಗಣಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

    ಹೆಚ್ಚಿನ ಮಳೆಯಾದಲ್ಲಿ ಮೂರಕ್ಕೂ ಹೆಚ್ಚು ಗ್ರಾಮಗಳು ಮುಳುಗುವ ಸಾಧ್ಯತೆ ಇದೆ. ಹೀಗಾಗಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಹೈ ಅಲರ್ಟ್ ಘೋಷಣೆ ಮಾಡಿದೆ.

    ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೇಡ್ ಅಲರ್ಟ್ ನಡುವೆ ತಲಕಾವೇರಿ ಭಾಗಮಂಡಲದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯಕ್ಕೆ ಉಡುಪಿಯ ಪೇಜಾವರ ಮಠಾದೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆ ಸಹಿತ ಚಳಿ ಇದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡವು ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

    ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಈ 24 ಗಂಟೆಯಲ್ಲಿ 135 ಮಿಲಿ ಮೀಟರ್ ಮಳೆ ಬಿದ್ದಿದೆ. ಕುಂದಾಪುರ ತಾಲೂಕಲ್ಲಿ ಅತೀ ಹೆಚ್ಚು 155 ಮಿಲಿಮೀಟರ್ ಮಳೆಯಾಗಿದೆ. ಉಡುಪಿಯಲ್ಲಿ 130, ಕಾರ್ಕಳದಲ್ಲಿ 90 ಮಿಲಿಮೀಟರ್ ಮಳೆಯಾಗಿದೆ. ಕಳೆದ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಉಡುಪಿ ನಗರದ ಕಲ್ಸಂಕ- ಬನ್ನಂಜೆ ವ್ಯಾಪ್ತಿಯ ಹತ್ತಾರು ಮನೆಗಳಿಗೆ ಕೃತಕ ನೆರೆ ನೀರು ನುಗ್ಗಿದೆ.

    ಬೈಲಕೆರೆಯ ಸುಮಾರು 15 ಮನೆಗಳಿಗೆ ಕಾಲುವೆಯ ನೀರು ನುಗ್ಗಿದೆ. ಮೂಡನಿಡಂಬೂರು ವ್ಯಾಪ್ತಿಯಲ್ಲಿ ಕಾಲುವೆ ಉಕ್ಕಿ ಹರಿದಿದೆ. ಗದ್ದೆಗಳೆಲ್ಲ ಜಲಾವೃತವಾಗಿದೆ. ಮಳೆ ನೀರು ರಸ್ತೆಯಲ್ಲೆಲ್ಲ ಹರಿದಿದ್ದು ವಾಹನ ಸಂಚಾರ ಮತ್ತು ಪಾದಾಚಾರಿಗಳಿಗೆ ಸಮಸ್ಯೆಯಾಗಿತ್ತು. ಅಂಬಾಗಿಲು ರಸ್ತೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಕೆಲಮನೆಗಳಿಗೆ ಜಲ ದಿಗ್ಭಂಧನವಾಗಿದೆ. ಐದು ದಿನಗಳಲ್ಲಿ ಜಿಲ್ಲೆಯಲ್ಲಿ 500 ಮಿಲಿಮೀಟರ್ ಮಳೆಯಾಗಿದ್ದು, ಮುಂಗಾರು ಪ್ರಬಲವಾಗಿರುವುದಕ್ಕೆ ಪ್ರೌಢಶಾಲೆಯವರೆಗೆ ಡಿಸಿ ರಜೆ ಘೋಷಣೆ ಮಾಡಿದ್ದರು. ಇಂದು ವಿಪರೀತ ಮಳೆಯಾಗಿದ್ದರಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಡಕ್ಕೆ ಮಣಿದು ಡಿಗ್ರಿ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದ್ದಾರೆ.

    ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಇನ್ನೂ ಎರಡು ದಿನ ಮಳೆಯಾಗಲಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಇದೇ ವೇಳೆ ಮಂಗಳೂರು – ಬೆಂಗಳೂರು ಸಂಚರಿಸುವ ಎಲ್ಲ ರೀತಿಯ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಕೇರಳದ ಕಣ್ಣೂರು ಮತ್ತು ಕಾರವಾರದಿಂದ ಬೆಂಗಳೂರಿಗೆ ಹೋಗುವ ರೈಲು ಸೇವೆಯನ್ನು ಮಂಗಳೂರಿನವರೆಗೆ ಮಾತ್ರ ನಡೆಸಲಾಗುತ್ತಿದೆ. ಇದರಿಂದ ರೈಲು ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.

  • ಕೊಡಗು, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ – ಕರಾವಳಿಯಲ್ಲಿ ಶಾಲೆಗಳಿಗೆ ರಜೆ

    ಕೊಡಗು, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ – ಕರಾವಳಿಯಲ್ಲಿ ಶಾಲೆಗಳಿಗೆ ರಜೆ

    ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ನದಿ, ಹಳ್ಳ, ಕೊಳ್ಳ, ತೊರೆಗಳು ತುಂಬಿ ಹರಿಯುತ್ತಿವೆ.

    ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ಇವತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಉಳ್ಳಾಲದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ತೀರಕ್ಕೆ ಬೃಹದಾಕಾರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ನೇತ್ರಾವತಿ, ಕುಮಾರಧಾರ ಸೇರಿದಂತೆ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ನಾಳೆ ತಗ್ಗು ಪ್ರದೇಶದಲ್ಲಿ ನೆರೆಯಾಗುವ ಭೀತಿಯಿದೆ. ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ಬಿದ್ದಿದೆ. ಜೂನ್ ನಲ್ಲಿ ಮುಂಗಾರು ದುರ್ಬಲವಾಗಿದ್ದು, ಜುಲೈನಲ್ಲಿ ಮಳೆ ರೈತರ ಕೈ ಹಿಡಿದಿದೆ.

    ಮತ್ತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಮಳೆಯಿಂದಾಗಿ ಹೊನ್ನಾವರದ ಕರ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮರಬಿದ್ದು 15 ತಾಸಿಗೂ ಹೆಚ್ಚುಕಾಲ ಮಂಗಳೂರು ಉಡುಪಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕರಾವಳಿ ಭಾಗದ ಹಲವು ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಕಾರವಾರದಲ್ಲಿ ಕೂಡ ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

    ಮಳೆ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಜುಲೈ 24ರವರೆಗೆ `ರೆಡ್ ಅಲರ್ಟ್` ಘೋಷಿಸಲಾಗಿದ್ದು, 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಿದ್ದು, ದೇವಭಾಗ್, ಶಿರವಾಡ, ಸೇರಿದಂತೆ ಹಲವು ಭಾಗದಲ್ಲಿ ಕಡಲಕೊರೆತ ಹೆಚ್ಚಾಗುತ್ತಿದೆ. ಸಮುದ್ರದ ಅಬ್ಬರಕ್ಕೆ ನಾಡದೋಣಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶ ಹಾಗೂ ನದಿ ತಡದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಕೊಡಗಿನಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರುತ್ತಿದೆ.

    ಬೆಂಗಳೂರಿನ ಹಲವೆಡೆ ರಾತ್ರಿಯೆಲ್ಲಾ ಮಳೆಯಾಗಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಗ್ಗೆಯಾದರೂ ಮಳೆ ನಿಲ್ಲದೆ ತುಂತುರು ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ರಸ್ತೆಗಳೆಲ್ಲ ನೀರು ನಿಂತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

  • ಮಗಳ ಮದ್ವೆಗೆ ಒಂದು ದಿನ ರಜೆ ಹಾಕಿದ ಹಿರಿಯ ಐಎಎಸ್ ಅಧಿಕಾರಿ

    ಮಗಳ ಮದ್ವೆಗೆ ಒಂದು ದಿನ ರಜೆ ಹಾಕಿದ ಹಿರಿಯ ಐಎಎಸ್ ಅಧಿಕಾರಿ

    ಬೆಂಗಳೂರು: ಒಬ್ಬ ಐಎಎಸ್ ಅಧಿಕಾರಿಯ ಮಗಳ ಮದುವೆ ಅಂದರೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಅಷ್ಟೇ ಅಲ್ಲದೆ ತಿಂಗಳುಗಳ ಕಾಲ ರಜೆ ಹಾಕಿ ವಿಶೇಷವಾಗಿ ಲಗ್ನಪತ್ರಿಕೆ ಮಾಡಿಸಿ ಅದನ್ನು ಕೊಡುತ್ತಾರೆ. ಆದರೆ ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ತಮ್ಮ ಮಗಳ ಮದುವೆಗೆ ಕೇವಲ ಒಂದೇ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ.

    ಇದೇ ಭಾನುವಾರ ವಿಜಯಭಾಸ್ಕರ್ ಅವರ ಮಗಳ ನಡೆಯಲಿದೆ. ವಿಜಯ ಭಾಸ್ಕರ್ ಅವರ ಮಗಳು ವೃತ್ತಿಯಲ್ಲಿ ವಕೀಲೆಯಾಗಿದ್ದು, ಉದ್ಯಮಿ ಗೌತಮ್ ಕುಮಾರ್ ಅವರನ್ನು ವರಿಸುತ್ತಿದ್ದಾರೆ. ಮದುವೆಯನ್ನು ಕೂಡ ಸರಳವಾಗಿ ಮಾಡಬೇಕೆಂದು ನಿರ್ಧಾರ ಮಾಡಿರುವ ವಿಜಯಭಾಸ್ಕರ್, ಮಲ್ಲೇಶ್ವರಂನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಸುತ್ತಿದ್ದಾರೆ.

    ಕಲ್ಯಾಣ ಮಂಟಪದ ದಿನದ ಬಾಡಿಗೆ 1,44,500 ರೂ. ಆಗಿದೆ. ಮದುವೆಗೂ ಯಾವುದೇ ಸರ್ಕಾರಿ ವಾಹನಗಳನ್ನು ಬಳಸದೆ ಖಾಸಗಿ ಟ್ರಾವೆಲ್ಸ್ ಮೂಲಕ ವಾಹನಗಳನ್ನು ಬಾಡಿಗೆಗೆ ತರಿಸುತ್ತಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯೂ ಕೂಡ ಸರಳವಾಗಿ ಮಾಡಿಸಿದ್ದಾರೆ.

    ಸಾಮಾನ್ಯ ಜನರಂತೆ ಮದುವೆಯ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಿಸಿದ್ದಾರೆ. ಕಾರ್ಡ್ ನಲ್ಲಿ ತಮ್ಮ ಹುದ್ದೆ ಹಾಗೂ ಅಧಿಕಾರವನ್ನು ಉಲ್ಲೇಖಿಸದೆ ಕೇವಲ ವಿಜಯಭಾಸ್ಕರ್ ಎಂದು ನಮೂದಿಸಿದ್ದಾರೆ. ತಮ್ಮ ಸಿಬ್ಬಂದಿಗೆ ಖುದ್ದು ಆಮಂತ್ರಣ ಕೊಟ್ಟು ಮದುವೆಗೆ ಬರುವಂತೆ ವಿನಂತಿಸಿದ್ದಾರೆ.