Tag: V.Somanna

  • ನಾನು ಎಲ್ ಬೋರ್ಡ್ ಎಂದು ತಿಳಿಯಬೇಡಿ: ಎಚ್‍ಡಿಕೆಗೆ ಸೋಮಣ್ಣ ಟಾಂಗ್

    ನಾನು ಎಲ್ ಬೋರ್ಡ್ ಎಂದು ತಿಳಿಯಬೇಡಿ: ಎಚ್‍ಡಿಕೆಗೆ ಸೋಮಣ್ಣ ಟಾಂಗ್

    ಮೈಸೂರು: ನಾನು ಎಲ್ ಬೋರ್ಡ್ ಎಂದು ತಿಳಿಯಬೇಡಿ. ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ನನಗೂ ಕಾರ್ಯಕ್ರಮಗಳನ್ನು ಮಾಡಿದ ಅನುಭವಿದೆ. ಆದರೂ ಕಲಿಯುವುದು ಸಾಕಷ್ಟಿದೆ. ದಸರಾ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಲಹೆ ಕೊಡುವುದಿದ್ದರೂ ಕೊಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, 14 ತಿಂಗಳು ಕುಮಾರಸ್ವಾಮಿ ಅವರು ಯಾವ ರೀತಿ ಅಧಿಕಾರ ಮಾಡಿದ್ದರು ಎಂದು ಮೊದಲು ಅವಲೋಕನ ಮಾಡಿಕೊಳ್ಳಲಿ. ತಾಯಿ ಚಾಮುಂಡೇಶ್ವರಿ ಮುಂದೆ ನಿಂತುಕೊಂಡು ಯೋಚನೆ ಮಾಡಲಿ. ಯಾರು ಯಾರಿಗೂ ದೊಡ್ಡವರಲ್ಲ, ನಾನು ಎಲ್ ಬೋರ್ಡ್ ಅಲ್ಲ ಕಾರ್ಯಕ್ರಮ ಮಾಡಿದ ಅನುಭವ ನನಗಿದೆ. ಹಾಗೆಯೇ ಈ ಹಿಂದೆ ದಸರಾ ಉತ್ಸವವನ್ನು ನಡೆಸಿದ ನಾಯಕರ ಸಲಹೆಯನ್ನು ಪಡೆಯುತ್ತೇನೆ. ಒಂದು ವೇಳೆ ಕುಮಾರಸ್ವಾಮಿ ಅವರು ಏನಾದರೂ ಸಲಹೆ ನೀಡುವುದಾದರೆ ನೀಡಲಿ ಎಂದು ಟಾಂಗ್ ಕೊಟ್ಟರು.

    ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಯುವಕರಂತೆ ಸುತ್ತಾಡುತ್ತಿದ್ದಾರೆ. ಅವರೊಂದಿಗೆ ನಾವು ಕೂಡ ಹೋಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ಕುಮಾರಸ್ವಾಮಿ ಅವರು ಕೂಡ ಎರಡು ಬಾರಿ ಸಿಎಂ ಆಗಿದ್ದರು. ತಮ್ಮ ಕಾರ್ಯ ವೈಖರಿ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. 1996ರಲ್ಲಿ ಕುಮಾರಸ್ವಾಮಿ ರಾಜಕಾರಣಕ್ಕೆ ಬಂದವರು. ನಾನು 1983ರಲ್ಲಿಯೇ ರಾಜಕಾರಣಕ್ಕೆ ಬಂದಿದ್ದೇನೆ. ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರು. ಅದೃಷ್ಟ ಯಾರ ಅಪ್ಪನ ಮನೆ ಸ್ವತ್ತು ಅಲ್ಲ. ಅವರಿಗೆ ಅದೃಷ್ಟ ಇತ್ತು ಮುಖ್ಯಮಂತ್ರಿ ಆದರು ನಾನು ಮಂತ್ರಿಯಾದೆ ಅಷ್ಟೇ ಎಂದು ಹೇಳಿದರು.

    ಜಿಲ್ಲೆಯಲ್ಲಿರುವ ಸಮಸ್ಯೆಯನ್ನು ಪರಿಹರಿಸಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ಪ್ರವಾಹದಿಂದ ಆಗಿರುವ ಅನಾನುಕುಲವನ್ನು ಸರಿಪಡಿಸುವ ಕಾರ್ಯದಲ್ಲಿ ಸರ್ಕಾರ ತೊಡಗಿದೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ 32 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎನ್ನುವ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರವೂ ಕೂಡ ಇದಕ್ಕೆ ಸ್ಪಂಧಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

    ಸೋಮಣ್ಣ ಅವರು ಏನು ಇಲ್ಲೇ ಮನೆ ಕಟ್ಟುತ್ತಾರಾ? ಮಡಿಕೇರಿಯಲ್ಲಿ ನಾವು ಏನೆಲ್ಲಾ ಕಟ್ಟಿದ್ದೇವೆ ಎಂದು ಎಚ್‍ಡಿಕೆ ಅವರು ಹೇಳಿದ್ದರು. ಈ ಬಗ್ಗೆ ನನ್ನ ಬಳಿ ಎಲ್ಲಾ ಮಾಹಿತಿ ಇದೆ. ಅಂಕಿ ಅಂಶಗಳ ಸಮೇತ ದಾಖಲೆಗಳಿವೆ. ಕುಮಾರಸ್ವಾಮಿ ಸಾಯಬ್ರೆ ಈ ಬಗ್ಗೆ ಚರ್ಚೆ ಬೇಡ, ನಾನು ಈಗ ಇದರ ಕುರಿತು ಮಾತನಾಡಲ್ಲ ಎಂದರು.

    ದಸರಾ ಉತ್ಸವದ ಬಗ್ಗೆ ಮಾತನಾಡಿ, ದಸರಾ ಐತಿಹಾಸಿಕ ಪಾರಂಪರಿಕ ಆಚರಣೆ. ನಾನು ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಿಗೆ ಹೋಗಿದ್ದೇನೆ. ಈಗಲೂ ಹಲವು ಕಡೆ ಸುತ್ತಾಡಿ ಜಿಲ್ಲೆಯ ಬಗ್ಗೆ ತಿಳಿಯುತ್ತಿದ್ದೇನೆ. ದೇವೇಗೌಡರು ಈ ರಾಷ್ಟ್ರದ ಮಾಜಿ ಪ್ರಧಾನಿಗಳು. ಜಿ.ಟಿ ದೇವೇಗೌಡರು ಕೂಡ ಪ್ರಭಾವಿ ನಾಯಕರು. ಅವರಿಗೆ ದಸರಾ ಮಾಡಿ ಅನುಭವವಿದೆ. ರಾಮದಾಸ್, ಶ್ರೀನಿವಾಸ್ ಪ್ರಸಾದ್, ಮಹದೇವಪ್ಪ ಅವರಿಗೂ ದಸರಾ ಮಾಡಿ ಅನುಭವವಿದೆ. ನಾನು ಎಲ್ ಬೋರ್ಡ್ ಎಂದು ತಿಳಿದುಕೊಳ್ಳಬೇಡಿ. ನನಗೂ ಸ್ವಲ್ಪ ಅನುಭವವಿದೆ. ಆದರೂ ಕಲಿತುಕೊಳ್ಳೋದು ಕೂಡ ಸಾಕಷ್ಟಿದೆ. ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ಆದ್ದರಿಂದ ನನ್ನ ಮಿತ್ರರಾಗಿರುವ ಸಾರಾ ಮಹೇಶ್ ಅವರನ್ನೂ ಸಂಪರ್ಕಿಸಿದ್ದೇನೆ. ತನ್ವೀರ್ ಸೇಠ್ ಅವರನ್ನೂ ಸಂಪರ್ಕಿಸಿದ್ದೇನೆ. ನಾನು ಜಿಟಿಡಿ ಅವರನ್ನೂ ಸಂಪರ್ಕ ಮಾಡಿದ್ದೂ ನಿಜ. ಅವರ ಸಲಹೆ ಪಡೆದಿರುವುದು ನಿಜ. ಎಲ್ಲರ ಬಳಿ ಏನೇನು ಸಲಹೆ ನೀಡಿ, ಉತ್ಸವಕ್ಕೆ ಸಹಾಯ ಮಾಡಿ ಎಂದಿದ್ದೇನೆ. ದಸರಾ ಬಗ್ಗೆ ಕುಮಾರಸ್ವಾಮಿ ಸಲಹೆ ಇದ್ದರೂ ಕೊಡಲಿ. ಅದನ್ನು ಸ್ವೀಕರಿಸುತ್ತೇನೆ ಎಂದು ಮಾತಿನ ಚಾಟಿ ಬೀಸಿದ್ದಾರೆ.

    ಇದು ನಾಡಹಬ್ಬ ಎಲ್ಲರೂ ಮಾಡಬೇಕಾದ ಹಬ್ಬ. ಬರೀ ಅಧಿಕಾರಿಗಳು ಮಾತ್ರ ಮಾಡುವ ಹಬ್ಬವಲ್ಲ. ಇಡೀ ರಾಜ್ಯದವರು ಸೇರಿಕೊಂಡು ಮಾಡಬೇಕಾದ ಹಬ್ಬ. ಈ ಬಗ್ಗೆ ಅವರು ಅರಿತುಕೊಂಡರೆ ಒಳ್ಳೆದು. ಇದಕ್ಕಿಂತ ಅವರ ಬಗ್ಗೆ ಹೆಚ್ಚು ಏನು ಹೇಳಲ್ಲ. ಯಾರು ಏನು ಬೇಕಾದರೂ ಅಂದುಕೊಳ್ಳಲಿ. ಈ ಪಾರಂಪರಿಕ ನಾಡಹಬ್ಬ ಪ್ರತಿಒಬ್ಬರಿಗೂ ತಲುಪಬೇಕು ಎನ್ನುವುದೇ ಸಿಎಂ ಅವರ ಆಶಯವಾಗಿದೆ. ಆದ್ದರಿಂದ ನಾನು ಏನೇನು ಮಾಡಬೇಕೋ ಮಾಡುತ್ತಿದ್ದೇನೆ. ದಸರಾ ಯಶಸ್ವಿಯಾಗಲೂ ಎಲ್ಲರ ಸಹಕಾರ ಕೋರುತ್ತೇನೆ. ಯಾರ್ಯಾರು ಏನೇನು ಮಾತನಾಡಬೇಕೋ ಅದನ್ನು ಅ.8ರ ನಂತರ ಮಾತನಾಡಲಿ ಎಂದು ಸ್ಪಷ್ಟಪಡಿಸಿದರು. ಹಾಗೆಯೇ ಕೇಂದ್ರದ ನಾಯಕರಿಗೂ ದಸರೆಗೆ ಆಹ್ವಾನ ನೀಡಲಾಗುವುದು. ದಸರಾ ಮುಗಿದ ನಂತರ ಒಂದು ಕ್ಷಣ ವ್ಯರ್ಥ ಮಾಡದೇ ವಸತಿ ಇಲಾಖೆ ಕೆಲಸ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು.

  • ಜಂಬೂಸವಾರಿ ಮೊದಲೇ ಗಜಪಡೆಯ ಈಶ್ವರ ಆನೆ ಅರಣ್ಯಕ್ಕೆ ವಾಪಸ್

    ಜಂಬೂಸವಾರಿ ಮೊದಲೇ ಗಜಪಡೆಯ ಈಶ್ವರ ಆನೆ ಅರಣ್ಯಕ್ಕೆ ವಾಪಸ್

    ಮೈಸೂರು: ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಗಜಪಡೆಯ ಮೊದಲ ತಂಡದ ಸದಸ್ಯ ಈಶ್ವರ ಆನೆಯನ್ನು ಕಾಡಿಗೆ ಹಿಂದಕ್ಕೆ ಕಳುಹಿಸಲು ನಿರ್ಧರಿಸಿಲಾಗಿದೆ.

    ಇಂದು ನಡೆದ ದಸರಾ ಸಿದ್ಧತಾ ಸಭೆಯಲ್ಲಿ ಈಶ್ವರ ಆನೆ ಬಗ್ಗೆ ಸಚಿವ ಸೋಮಣ್ಣ ಆತಂಕ ವ್ಯಕ್ತಪಡಿಸಿದರು. ನಗರದ ವಾತಾವರಣಕ್ಕೆ ಈಶ್ವರ ಆನೆ ಹೊಂದಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆ ಅರಣ್ಯಾಧಿಕಾರಿಗಳ ಆನೆಯನ್ನು ವಾಪಸ್ ಕಾಡಿಗೆ ಬಿಡಲು ತೀರ್ಮಾನಿಸಿದ್ದಾರೆ. ಈಶ್ವರ ಆನೆ ಬದಲು ಗಜಪಡೆಗೆ ಪರ್ಯಾಯವಾಗಿ ಬೇರೆ ಆನೆ ತರಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.

    ಈಶ್ವರ ಆನೆ ವಿಚಾರವಾಗಿ ಸಾರ್ವಜನಿಕರಿಂದ ದೂರು ಬರುತ್ತಿರುವುದರಿಂದ ಈ ಬಗ್ಗೆ ಸೋಮಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇಂತಹ ದೂರುಗಳು ಬಂದಾಗ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆನೆಯನ್ನು ಬದಲಾಯಿಸಲೇ ಬೇಕಾಗುತ್ತದೆ ಎಂದು ಡಿಸಿಎಫ್(ಅರಣ್ಯ ಉಪ ಸಂರಕ್ಷಣಾಧಿಕಾರಿ) ಅಲೆಕ್ಸಾಂಡರ್ ಅವರು ತಿಳಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇದೇ ಮೊದಲ ಬಾರಿಗೆ ಈಶ್ವರ ಆನೆಯನ್ನು ದಸರಾ ಗಜಪಡೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಗರ ಪ್ರದೇಶದಲ್ಲಿ ಗಜಪಡೆ ತಾಲೀಮು ಆರಂಭಿಸಿದ ದಿನದಿಂದಲೂ ಈಶ್ವರ ಆನೆ ಗಾಬರಿಗೊಳ್ಳುತಿತ್ತು. ಆಗ ವೈದ್ಯರು ಹಾಗೂ ಅಧಿಕಾರಿಗಳು ದಿನ ಕಳೆಯುತ್ತಿದ್ದಂತೆ ಆನೆ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಪ್ರತಿದಿನ ತಾಲೀಮು ಮಾಡುತ್ತಿರುವಾಗಲೂ ಈಶ್ವರ ಆನೆ ನಗರದ ವಾತಾವರಣಕ್ಕೆ ಬೆಚ್ಚಿಬೀಳುತ್ತಿತ್ತು. ಹೊಸ ವಾತಾವರಣಕ್ಕೆ ಅದು ಹೊಂದಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಈಶ್ವರ ಆನೆಯನ್ನು ವಾಪಸ್ ಅರಣ್ಯಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    https://www.youtube.com/watch?v=ZSV-6_HpYQk

  • ಮೋದಿ, ಬಿಎಸ್‍ವೈಯನ್ನು ಮತ್ತೆ ಹೊಗಳಿ ಗೌಡ್ರ ಕುಟುಂಬದ ವಿರುದ್ಧ ಜಿಟಿಡಿ ಗುಡುಗು

    ಮೋದಿ, ಬಿಎಸ್‍ವೈಯನ್ನು ಮತ್ತೆ ಹೊಗಳಿ ಗೌಡ್ರ ಕುಟುಂಬದ ವಿರುದ್ಧ ಜಿಟಿಡಿ ಗುಡುಗು

    ಮೈಸೂರು: ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪರನ್ನ ಮತ್ತೆ ಹೊಗಳಿದ್ದಾರೆ. ಅಲ್ಲದೆ ಮಂತ್ರಿ ಸ್ಥಾನ ತೆಗೆದುಕೊಳ್ಳೋಕ್ಕೆ 1 ತಿಂಗಳು ಸಿಟ್ಟು ಮಾಡಿಕೊಂಡು ಸಾಕಾಗಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕುಟುಂಬದ ವಿರುದ್ಧ ಗುಡುಗಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಟಿಡಿ, ನರೇಂದ್ರ ಮೋದಿ ಅವರು ಈ ದೇಶಕ್ಕೆ ಬೇಕು ಎಂದು ನಾನು ಮೊದಲೇ ಹೇಳಿದ್ದೆ. ಅವರು ದೇಶದ ವ್ಯಕ್ತಿ ಹಾಗೂ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಮೋದಿ ಅವರು ಕಾಶ್ಮೀರ ಸಮಸ್ಯೆಯನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದೀರಿ. ಅವರು ದೇಶದ ಅಭಿವೃದ್ಧಿಯತ್ತ ನೋಡುತ್ತಿದ್ದಾರೆ. ಅವರ ಬಗ್ಗೆ ಒಳ್ಳೆಯ ಮಾತನಾಡಿದರೆ ಬಿಜೆಪಿ ಎಂದು ಹೇಳುತ್ತಾರೆ. ಆದರೆ ಮೋದಿ ಅವರು ಈ ದೇಶದ ವ್ಯಕ್ತಿ, ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ಒಳ್ಳೆಯದಾಗಿ ಮಾತನಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಬಂದ ಮೇಲೆ ಚೆನ್ನಾಗಿ ಮಳೆ ಬೆಳೆ ಆಗಿದೆ- ಬಿಎಸ್‍ವೈನ್ನು ಹಾಡಿಹೊಗಳಿದ ಜಿಟಿಡಿ

    ನಾನು ಯಡಿಯೂರಪ್ಪ ಅವರ ಬಗ್ಗೆ ಏಕೆ ಮಾತನಾಡುತ್ತೇನೆ ಎಂದರೆ, ನಾನು 36 ಸಾವಿರ ಮತಗಳ ಅಂತರದಲ್ಲಿ ಗೆದ್ದು ಮಂತ್ರಿ ಸ್ಥಾನ ತೆಗೆದುಕೊಳ್ಳಲು ಒಂದು ತಿಂಗಳು ಮುನಿಸು ಕಟ್ಟಿಕೊಂಡಿದೆ. ಆದರೆ ಯಡಿಯೂರಪ್ಪ ಅವರು ನಾನು ಸೋತಾಗ ಮನೆಗೆ ಕರೆಸಿಕೊಂಡು ನೀನು ಆಗಬೇಕೆಂದು ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರು. ಗೃಹ ಮಂಡಳಿ ಅಧ್ಯಕ್ಷ ಆದಾಗ ಸೋಮಣ್ಣ ಅವರು ವಸತಿ ಸಚಿವರಾಗಿದ್ದರು. ಇದು ಕಾಕತಾಳಿಯ ಈಗ ಅವರೇ ಉಸ್ತುವಾರಿ ಸಚಿವರಾಗಿದ್ದಾರೆ. ಅದು ನನ್ನ ಹಾಗೂ ಅವರ ಸ್ನೇಹ ಎಂದು ಜಿ.ಟಿ ದೇವೇಗೌಡ ಅವರು ಹೇಳಿದರು.

  • ದಸರಾ ಉಸ್ತುವಾರಿ ಬಿಟ್ಟು ಇಲ್ಲಿಗೆ ಬಂದಿದ್ದು ಯಾಕೆ – ಸೋಮಣ್ಣಗೆ ಸಿಎಂ ಕ್ಲಾಸ್

    ದಸರಾ ಉಸ್ತುವಾರಿ ಬಿಟ್ಟು ಇಲ್ಲಿಗೆ ಬಂದಿದ್ದು ಯಾಕೆ – ಸೋಮಣ್ಣಗೆ ಸಿಎಂ ಕ್ಲಾಸ್

    ಬೆಂಗಳೂರು: ನಿನಗೆ ಮೈಸೂರು ದಸರಾದ ಉಸ್ತುವಾರಿಯಾಗಿ ಮಾಡಿದ್ದೇನೆ. ಅದನ್ನು ಬಿಟ್ಟು ಇಲ್ಲಿಗೇಕೆ ಬಂದಿದ್ದಿಯಾ ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಾಷೆಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬಂದಿದ್ದ ಸಂದರ್ಭದಲ್ಲಿ ವಿ.ಸೋಮಣ್ಣ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮಾಷೆಯಾಗೆ ಕ್ಲಾಸ್ ತೆಗೆದುಕೊಂಡ ಸಿಎಂ, ನಿನಗೆ ಮೈಸೂರು ದಸರಾದ ಉಸ್ತುವಾರಿಯಾಗಿ ಮಾಡಿದ್ದೇನೆ. ಅದನ್ನು ಸರಿಯಾಗಿ ನೋಡಿಕೊಂಡು ಹೋಗಯ್ಯ ಅಂದ್ರೆ ಇಲ್ಲಿಗೆ ಯಾಕೆ ಬಂದಿದ್ದಿಯಾ ಎಂದು ಪ್ರಶ್ನಿಸಿದ್ದಾರೆ.

    ಯಾವಾಗ ನೋಡಿದರೂ ಸ್ವಾಮೀಜಿಗಳನ್ನೆ ಭೇಟಿ ಮಾಡುತ್ತಿರುತ್ತೀಯಾ, ಹೋಗಿ ಮೈಸೂರಿನಲ್ಲಿರು. ಸರಿಯಾಗಿ ದಸರೆಯ ಉಸ್ತುವಾರಿ ಮಾಡು. ಅಲ್ಲಿನ ಕುಂದು ಕೊರತೆಗಳನ್ನು ನಿಭಾಯಿಸು ಎಂದು ಸಚಿವ ಸೋಮಣ್ಣ ಅವರಿಗೆ ಸಿಎಂ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

    ನೆರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ನೀಡುವುದಕ್ಕೆ ಆರ್.ಅಶೋಕ್ ಅವರನ್ನು ಮೈಸೂರಿನ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ದಸರಾ ಗಜಪಡೆಗೆ ಚಾಲನೆ ನೀಡುವಾಗ ಸೋಮಣ್ಣ ಅವರು ಮೈಸೂರಿನ ಉಸ್ತುವಾರಿ ಆರ್.ಅಶೋಕ್ ಆದರೆ ನನಗೆ ಸಂತೋಷ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಿ ಸರ್ಕಾರ ವಿ.ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಆಗಿ ನೇಮಕ ಮಾಡಿ ಆದೇಶಿಸಿತ್ತು. ಮುಂದಿನ ತಿಂಗಳು ದಸರಾ ಬರುತ್ತಿರುವ ಕಾರಣ ತರಾತುರಿಯಲ್ಲಿ ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

  • ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿ ಧಗಧಗ – ಬಯಸಿದ ಖಾತೆ ಸಿಗದಿದ್ದಕ್ಕೆ ಭುಗಿಲೆದ್ದ ಭಿನ್ನಮತ

    ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿ ಧಗಧಗ – ಬಯಸಿದ ಖಾತೆ ಸಿಗದಿದ್ದಕ್ಕೆ ಭುಗಿಲೆದ್ದ ಭಿನ್ನಮತ

    – ಸಚಿವ ಸ್ಥಾನ ತೊರಿತಾರಾ ಹಿರಿಯರು?

    ಬೆಂಗಳೂರು: ಸಚಿವ ಸಂಪುಟ ರಚನೆಯಾಗಿ ಕೆಲ ದಿನಗಳ ಬಳಿಕ ಇದೀಗ ಖಾತೆ ಹಂಚಿಕೆಯೂ ಆಯ್ತು. ಆದರೆ ಖಾತೆ ಹಂಚಿಕೆ ಕೆಲವು ಸಚಿವರಿಗೆ ತೃಪ್ತಿ ತಂದಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

    ಹೌದು. ಖಾತೆ ಹಂಚಿಕೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನಗಳು ಸ್ಫೋಟಗೊಂಡಿದ್ದು, ಇದೀಗ ಸಿ.ಟಿ.ರವಿ, ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಜಗದೀಶ್ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಯಸಿದ ಖಾತೆಯೇ ಬೇರೆ, ಸಿಕ್ಕ ಖಾತೆಯೇ ಬೇರೆಯದ್ದಾಗಿದೆ. ಹೀಗಾಗಿ ಕೆಲವರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೆಳಲಾಗುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಸಿಟಿ ರವಿ ಹಾಗೂ ಆರ್ ಅಶೋಕ್ ಅವರು ಈಗಾಗಲೇ ತಮಗೆ ನೀಡಿದ್ದ ಸರ್ಕಾರಿ ಕಾರನ್ನು ವಾಪಸ್ ಮಾಡಿದ್ದಾರೆ ಎನ್ನಲಾಗಿದೆ.

    ಸಚಿವರುಗಳು ಕೇಳಿದ ಖಾತೆ ಯಾವುವು?
    * ಸಿ.ಟಿ ರವಿ ಕೇಳಿದ್ದು ಉನ್ನತ ಶಿಕ್ಷಣ – ಕೊಟ್ಟಿದ್ದು ಪ್ರವಾಸೋದ್ಯಮ, ಕನ್ನಡ/ಸಂಸ್ಕೃತಿ
    * ಆರ್.ಅಶೋಕ್ ಕೇಳಿದ್ದು ಬೆಂಗಳೂರು ನಗರಾಭಿವೃದ್ಧಿ – ಕೊಟ್ಟಿದ್ದು ಕಂದಾಯ
    * ಜಗದೀಶ್ ಶೆಟ್ಟರ್ ಕೇಳಿದ್ದು ಕಂದಾಯ – ಬೃಹತ್, ಮಧ್ಯಮ ಕೈಗಾರಿಕೆ
    * ವಿ.ಸೋಮಣ್ಣ ಕೇಳಿದ್ದು ನಗರಾಭಿವೃದ್ಧಿ – ಕೊಟ್ಟಿದ್ದು ವಸತಿ

    ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಜಗದೀಶ್ ಶೆಟ್ಟರ್ ಬಯಸಿದ್ದರು. ಆದರೆ ಅವರ ಪಾಲಿಗೆ ಬೃಹತ್/ಮಧ್ಯಮ ಕೈಗಾರಿಕಾ ಖಾತೆ ಸಿಕ್ಕಿದೆ. ತಮ್ಮ ಜಾಯಮಾನಕ್ಕೆ ಒಗ್ಗದ ಖಾತೆ ಕೊಟ್ಟಿದ್ದಾರೆ ಎಂದು ಶೆಟ್ಟರ್ ಅಳಲು ತೋಡಿಕೊಂಡಿದ್ದಾರೆ. ಇತ್ತ ವಿ ಸೋಮಣ್ಣ ಅವರು ನಗರಾಭಿವೃದ್ಧಿ ಇಲಾಖೆ ಕೇಳಿದ್ದರು. ಆದರೆ ಅವರಿಗೆ ವಸತಿ ಇಲಾಖೆ ಸಿಕ್ಕಿದೆ. ಈ ಹಿಂದೆಯೂ ವಸತಿ ಇಲಾಖೆಯನ್ನೇ ಸೋಮಣ್ಣ ನಿಭಾಯಿಸಿದ್ದರು. ಇದೆಲ್ಲಕ್ಕಿಂತ ಮೇಲಾಗಿ ಡಿಸಿಎಂ ಹುದ್ದೆಗೆ ತಮ್ಮನ್ನು ಪರಿಗಣಿಸಿಲ್ಲ. ತಮ್ಮ ಹಿರಿತನ, ಸಾಮಥ್ರ್ಯ ಪರಿಗಣಿಸಿಲ್ಲ ಎಂದು ಒಳಗೊಳಗೇ ಅತೃಪ್ತರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮೂವರು ಡಿಸಿಎಂ, ಬೊಮ್ಮಾಯಿಗೆ ಗೃಹ, ಸವದಿಗೆ ಸಾರಿಗೆ – ಯಾರಿಗೆ ಯಾವ ಖಾತೆ?

    ಒಟ್ಟಿನಲ್ಲಿ ಬಿಜೆಪಿ ಸಚಿವರಲ್ಲಿ ಈಗ ಖಾತೆ ಕಳವಳ ಉಂಟಾಗಿದೆ. ಬಯಸದ ಖಾತೆ ಸಿಕ್ಕಿದ್ದರಿಂದ ಹಿರಿಯ ಸಚಿವರು ಹೈಕಮಾಂಡ್ ನಿರ್ಧಾರದ ವಿರುದ್ಧವೇ ಸಿಡಿದು ನಿಂತಿದ್ದಾರೆ. ಖಾತೆ ಹಂಚಿಕೆ ಹಿರಿಯ ಸಚಿವರಿಗೆ ತೃಪ್ತಿ ತಂದಿಲ್ಲವೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ನಾಡಹಬ್ಬದಲ್ಲೂ ಬಿಜೆಪಿ ಭಿನ್ನಮತ ಸ್ಫೋಟ – ಸಚಿವ ಸ್ಥಾನ ವಂಚಿತ ರಾಮದಾಸ್ ಕಾರ್ಯಕ್ರಮಕ್ಕೆ ಗೈರು

    ನಾಡಹಬ್ಬದಲ್ಲೂ ಬಿಜೆಪಿ ಭಿನ್ನಮತ ಸ್ಫೋಟ – ಸಚಿವ ಸ್ಥಾನ ವಂಚಿತ ರಾಮದಾಸ್ ಕಾರ್ಯಕ್ರಮಕ್ಕೆ ಗೈರು

    – ಸರಿ ಹೋಗುತ್ತೆ ಎಂದ ಸೋಮಣ್ಣ

    ಮೈಸೂರು: ನಾಡಹಬ್ಬ ದಸರಾದಲ್ಲೂ ಬಿಜೆಪಿಯ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವ ಸ್ಥಾನ ವಂಚಿತ ಶಾಸಕ ಎಸ್.ಎ.ರಾಮದಾಸ್ ಎಲ್ಲ ಕಾರ್ಯಕ್ರಮಗಳಿಗೂ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಜಂಬೂ ಸವಾರಿಯಲ್ಲಿ ಭಾಗಿಯಾಗುವ ಮೊದಲ ಆರು ಆನೆಗಳ ತಂಡಕ್ಕೆ ಜಿಲ್ಲಾ ಉಸ್ತುವಾರಿ, ಸಚಿವ ವಿ.ಸೋಮಣ್ಣ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು. ಆನೆಗಳು ಒಂದೂವರೆ ತಿಂಗಳು ಅರಮನೆಯಲ್ಲಿಯೇ ಉಳಿದುಕೊಳ್ಳಲಿವೆ. ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಆನೆಗಳ ಪೂಜೆಗೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಗಜಪಡೆಯ ಸುತ್ತಲಿನ ಕಲಾ ತಂಡ ಹಾಗೂ ವಸ್ತುಗಳ ಪರಿಶೀಲನೆ ನಡೆಸಲಾಯ್ತು.

    ಗಜಪಡೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ವಿ.ಸೋಮಣ್ಣ, ಇನ್ನೆರಡು ದಿನ ಮೈಸೂರಿನಲ್ಲಿ ಉಳಿಯಲಿದ್ದೇನೆ. ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಬೆಳಗ್ಗೆಯಿಂದ ದೂರವಾಣಿ ಮಾಡುತ್ತಿದ್ದೇನೆ. ಆದ್ರೆ ರಾಮದಾಸ್ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. 28ರಂದು ಖುದ್ದಾಗಿ ರಾಮದಾಸ್ ಅವರನ್ನ ಭೇಟಿಯಾಗಿ ಮನವೊಲಿಸುತ್ತೇನೆ. ವರ್ಷಕ್ಕೊಮ್ಮೆ ಬರುವ ನಾಡಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕು. ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯು ಇಲ್ಲ. ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯೂ ಇಲ್ಲ ಎಂದರು.

    ಇಂದು ಮಧ್ಯಾಹ್ನ 12.30ರ ಅಭಿಜಿನ್ ಲಗ್ನದಲ್ಲಿ ಚಾಮುಂಡೇಶ್ವರಿ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರು ಗಜಪಡೆಗೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿದರು. ಗಜಪಡೆ ಸ್ವಾಗತದಲ್ಲಿ ಡಿಸಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

    https://www.youtube.com/watch?v=LwXO4sOBHTs

     

  • ಸೆ.29ರಂದು ನಾಡಹಬ್ಬ ದಸರಾಕ್ಕೆ ಚಾಲನೆ

    ಸೆ.29ರಂದು ನಾಡಹಬ್ಬ ದಸರಾಕ್ಕೆ ಚಾಲನೆ

    ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ದಸರಾ ಸಭೆ ನಡೆದಿದ್ದು, ದಸರಾ ಕಾರ್ಯಕಾರಿ ಸಮಿತಿ ಸಭೆ ನಂತರ ದಸರಾ ಮುಹೂರ್ತವನ್ನು ಘೋಷಣೆ ಮಾಡಿದ್ದಾರೆ.

    ಸೆಪ್ಟೆಂಬರ್ 29ರಂದು ಬೆಳಗ್ಗೆ ಸುಮಾರು 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಾಗುತ್ತದೆ.

    ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರಿಂದ ಈ ಬಾರಿಯ ದಸರಾ ಉದ್ಘಾಟನೆ ಮಾಡಿಸುತ್ತಿದ್ದು, ಅಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಿಸಲಾಗುತ್ತದೆ. ಅಕ್ಟೋಬರ್ 8ರಂದು 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ಮಾಡಲಾಗುತ್ತದೆ. ಅದೇ ದಿನ ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.

    ಪ್ರತಿ ವರ್ಷ ಮಾಡುವಂತಹ ವ್ಯವಸ್ಥೆಯಲ್ಲೇ ಈ ಬಾರಿಯ ಉತ್ಸವ ಇರಬಾರದು. ವಿಭಿನ್ನವಾದ ಕಾರ್ಯಕ್ರಮಗಳನ್ನು ಅಳವಡಿಸಬೇಕು, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳು, ಪಾಲಿಕೆಯವರಿಗೆ ಸೂಚಿಸಲಾಗಿದೆ. ಶಾಸಕರು ಒಟ್ಟಾಗಿ ನಾಡಹಬ್ಬಕ್ಕೆ ಯಾವುದೇ ತೊಂದರೆ ಆಗದಂತೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುವ ದಸರಾ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪ್ರಮುಖವಾದ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

  • ಮೈಸೂರಿಗೆ ವಿ. ಸೋಮಣ್ಣ ಉಸ್ತುವಾರಿ

    ಮೈಸೂರಿಗೆ ವಿ. ಸೋಮಣ್ಣ ಉಸ್ತುವಾರಿ

    ಮೈಸೂರು: ಸಚಿವ ವಿ. ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಆಗಿದ್ದು, ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.

    ಆದೇಶ ಪತ್ರದಲ್ಲಿ, ವಿ ಸೋಮಣ್ಣ, ಮಾನ್ಯ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಆದೇಶಿಸಿದೆ.

    ನೆರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ನೀಡುವುದಕ್ಕೆ ಆರ್. ಅಶೋಕ್ ಅವರನ್ನು ಮೈಸೂರಿನ ಉಸ್ತುವಾರಿ ಆಗಿ ಮಾಡಲಾಗಿತ್ತು. ಆಗ ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇಂದು ಬೆಳಗ್ಗೆ ದಸರಾ ಗಜಪಡೆಗೆ ಚಾಲನೆ ನೀಡುವಾಗ ಸೋಮಣ್ಣ ಅವರು ಮೈಸೂರಿನ ಉಸ್ತುವಾರಿ ಆರ್. ಅಶೋಕ್ ಆದರೆ ನನಗೆ ಸಂತೋಷ ಎಂದು ಹೇಳಿದ್ದರು. ಆದರೆ ಅಷ್ಟರಲ್ಲಿ ಸರ್ಕಾರ ವಿ. ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಆಗಿ ನೇಮಕ ಮಾಡಿ ಆದೇಶಿಸಿದೆ. ಮುಂದಿನ ತಿಂಗಳು ದಸರಾ ಬರುತ್ತಿರುವ ಕಾರಣ ತರಾತುರಿಯಲ್ಲಿ ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಎನ್ನಲಾಗಿದೆ.

  • ನಮ್ಮದು ಸಮ್ಮಿಶ್ರ ಸರ್ಕಾರ: ಸಚಿವ ವಿ.ಸೋಮಣ್ಣ

    ನಮ್ಮದು ಸಮ್ಮಿಶ್ರ ಸರ್ಕಾರ: ಸಚಿವ ವಿ.ಸೋಮಣ್ಣ

    ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪನವರದ್ದು ಸಮ್ಮಿಶ್ರ ಸರ್ಕಾರ ಎಂದು ಸಚಿವ ವಿ.ಸೋಮಣ್ಣ ಮೈಸೂರಿನ ವೀರನಹೊಸಳ್ಳಿಯಲ್ಲಿ ಹೇಳಿದ್ದಾರೆ.

    ಮೈಸೂರು ದಸರಾ ಗಜಪಡೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವರು, ಇದೊಂದು ಸಮ್ಮಿಶ್ರ ಸರ್ಕಾರ, ಯಾರಿಗೆ ಏನು ಸಿಗಬೇಕೋ ಅದು ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಸಿಗಲಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳು ಆರ್.ಅಶೋಕ್ ಅವರೊಂದಿಗೆ ತೆರಳಿ ರಾಮದಾಸ್ ಜೊತೆ ಗಜಪಡೆಗೆ ಪೂಜೆ ಸಲ್ಲಿಸಲು ಸೂಚಿಸಿದ್ದರು. ಸಿಎಂ ಸೂಚನೆಗೆ ಗಜಪಡೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗಿದೆ ಎಂದರು.

    ಸದ್ಯ 17 ಜನ ಸಚಿವರಾಗಿದ್ದೇವೆ. ಇನ್ನು 16 ಸ್ಥಾನಗಳು ಖಾಲಿ ಉಳಿದಿವೆ. ಹಾಗಾಗಿ ಯಾರಿಗೆ ಆದ್ಯತೆ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಾಮದಾಸ್ ಸಹ ಹಿರಿಯರು ಅನ್ನೋದಕ್ಕಿಂತ ನಮ್ಮ ಜೊತೆ ಕೆಲಸ ಮಾಡಿದ ನಾಯಕರು. ತಾಯಿಯ ಆಶೀರ್ವಾದದಿಂದ ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ಅಸಮಾಧಾನಿತ ಶಾಸಕರಿಗೆ ಭರವಸೆ ನೀಡಿದರು.

    ಮೊದಲ ತಂಡವಾಗಿ ಐದು ಅನೆಗಳು ಮೈಸೂರಿಗೆ ಪ್ರಯಾಣ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬರಬೇಕಾದ ನೂತನ ಸಚಿವರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಬರುವುದನ್ನು ಒಂದು ನಿಮಿಷವೂ ಕಾಯದೇ ಪುಷ್ಪಾರ್ಚಾನೆ ಮಾಡಿದ ಶಾಸಕ ಎಸ್.ಎ ರಾಮದಾಸ್, ಯಾರನ್ನು ಕಾಯುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳಿಗೆ ಹೇಳಿ ಪುಷ್ಪಾರ್ಚಾನೆ ಮಾಡಿದರು. ಎಲ್ಲ ಕಾರ್ಯಕ್ರಮಗಳು ಮುಗಿದ ಮೇಲೆ ತಡವಾಗಿ ಬಂದ ಸಚಿವಾರದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಅವರು ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

  • ಮೈತ್ರಿಯ ಹನಿಮೂನ್ ಫೇಲ್ ಆದ್ರೆ ನಾವೇನು ಮಾಡೋಕೆ ಆಗುತ್ತೆ: ವಿ.ಸೋಮಣ್ಣ ವ್ಯಂಗ್ಯ

    ಮೈತ್ರಿಯ ಹನಿಮೂನ್ ಫೇಲ್ ಆದ್ರೆ ನಾವೇನು ಮಾಡೋಕೆ ಆಗುತ್ತೆ: ವಿ.ಸೋಮಣ್ಣ ವ್ಯಂಗ್ಯ

    ಬೆಂಗಳೂರು: ರಸ್ತೆ, ಬೀದಿಯಲ್ಲಿ ಜಗಳ ಮಾಡಿಕೊಂಡು ನಾವು ಒಂದಾಗಿದ್ದೇವೆ ಎಂದು ಹನಿಮೂನ್ ಹೋಗಿದ್ದರು. ನಡುವೆಯೇ ಮೈತ್ರಿ ಸರ್ಕಾರದ ಹನಿಮೂನ್ ಫೇಲ್ ಆದ್ರೆ ನಾವೇನು ಮಾಡಲು ಸಾಧ್ಯ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ವ್ಯಂಗ್ಯ ಮಾಡಿದ್ದಾರೆ.

    ಮೈತ್ರಿ ಸರ್ಕಾರ ಗೊಂದಲ ಗೂಡಾಗಿರೋದು ಮಾತ್ರ ಸತ್ಯ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸುತ್ತಿದ್ದು, ಯಾರು ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರೆ. ಬಿಜೆಪಿ ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ಅನಾವಶ್ಯಕವಾಗಿ ಬಿಜೆಪಿ ಮೇಲೆ ಆರೋಪ ಮಾಡೋದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಡಬೇಕು. ಕೈಲಾಗದವರು ಮೈ ಪರಚಿಕೊಂಡ್ರೆ ನಾವೇನೂ ಮಾಡೋಕೆ ಆಗುತ್ತೆ. ನಾವೇನು ರಾಜಕೀಯ ಸನ್ಯಾಸಿಗಳಲ್ಲ ಎಂದು ಹೇಳುವ ಮೂಲಕ ಸರ್ಕಾರ ರಚನೆಯ ಸುಳಿವನ್ನು ನೀಡಿದರು.

    125 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಮತ್ತು 37 ಶಾಸಕರನ್ನು ಹೊಂದಿರುವ ಜೆಡಿಎಸ್ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಯಾವ ಟೈಮ್ ನಲ್ಲಿ ಏನಾಗುತ್ತೆ ಗೊತ್ತಿಲ್ಲ. ನಾವು ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಎಲ್ಲದಕ್ಕಿಂತ ದೊಡ್ಡವನು ಮೇಲೆ ಇದ್ದಾನೆ. ತುಂಬಾ ದಿನ ಪಾಪದ ಕೆಲಸ ಮಾಡೋದು ಒಳ್ಳೆಯದಲ್ಲ.ಪಾಪದ ಕೊಡದ ತುಂಬಿದಾಗ ಏನ್ ಆಗಬೇಕೋ ಅದು ಆಗುತ್ತೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಿ. ಸೋಮಣ್ಣ ಗುಡುಗಿದರು.