Tag: V.Somanna

  • ಮಡಿಕೇರಿಯಲ್ಲಿ ನಿರಾಶ್ರಿತರಿಗೆ 35 ಆಶ್ರಯ ಮನೆಗಳ ಹಸ್ತಾಂತರ

    ಮಡಿಕೇರಿಯಲ್ಲಿ ನಿರಾಶ್ರಿತರಿಗೆ 35 ಆಶ್ರಯ ಮನೆಗಳ ಹಸ್ತಾಂತರ

    ಕೊಡಗು: ಕಳೆದ ವರ್ಷ ಪ್ರಾಕೃತಿಕ ವಿಕೋಪಕ್ಕೆ ಸಿಕ್ಕಿ ಮನೆಗಳನ್ನು ಕಳೆದುಕೊಂಡವರಿಗ ಕಡೆಗೂ ಸೂರಿನ ಭಾಗ್ಯ ಸಿಕ್ಕಿದ್ದು, ಕರ್ಣಂಗೇರಿಯಲ್ಲಿ ಇಂದು 35 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

    ಮಡಿಕೇರಿ ತಾಲೂಕಿನ ಕರ್ಣಂಗೇರಿಯಲ್ಲಿ ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ನಿರ್ಮಿಸಿದ್ದ 35 ಆಶ್ರಯ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಉಸ್ತುವಾರಿ ಸಚಿವ ವಿ.ಸೋಮಣ್ಣ ಹಸ್ತಾಂತರಿಸಿದರು.

    ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಕೊಡಗು ಜಿಲ್ಲಾ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೆಯೇ ನೆರೆ ಸಂತ್ರಸ್ತರಿಗೆ ಮನೆಗಳ ಹಸ್ತಾಂತರಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈಗಾಗಲೇ ಕರ್ಣಂಗೇರಿಯಲ್ಲಿ 35 ಮನೆಗಳು ನಿರ್ಮಾಣವಾಗಿದ್ದು, ಮನೆಗಾಗಿ 100 ಅರ್ಜಿಗಳನ್ನು ಹಾಕಲಾಗಿದೆ.

    ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕೋಲಾರದಲ್ಲಿ ಕಳೆದ ಸಂಸತ್ ಚುನಾವಣೆಯಲ್ಲಿ ನನ್ನ ಸೋಲಿಗೆ ರಮೇಶ್ ಕುಮಾರ್ ಕಾರಣವೆಂದು ಪರಾಭವಗೊಂಡ ಸ್ವಪಕ್ಷದ ಕೆ.ಎಚ್.ಮುನಿಯಪ್ಪ ಅವರೇ ಹೇಳುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಬೇರೆಯವರ ಬಗ್ಗೆ ಮಾತನಾಡುತ್ತಾರೆ. ಇದು ರಾಜ್ಯಕ್ಕೆ ಬಂದಿರುವ ದುರ್ದೈವ ಎಂದು ಟೀಕಿಸಿದರು.

    ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ವೈಯಕ್ತಿಕವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮಗೆ ತಾವೇ ಪ್ರಶ್ನೆಗಳನ್ನು ಹಾಕಿಕೊಳ್ಳಲಿ. ಅವರೇ ಒಬ್ಬರು ಪಕ್ಷಾಂತರಿಯಾಗಿದ್ದುಕೊಂಡು ಪಕ್ಷಾಂತರ ಶಾಸಕರ ಬಗ್ಗೆ ಮಾತನಾಡುತ್ತಾರೆ. ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಬಿಜೆಪಿ-ಕೆಜೆಪಿ ವಿಭಜನೆಯಾದ ನಂತರ ಆಕಸ್ಮಿಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಆ ಅವಧಿಯಲ್ಲಿ 5 ವರ್ಷಗಳು ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನಾವು ಹಿಂದುಳಿದವರು ಹಾಗೂ ದಲಿತರ ಪರ ಇದ್ದೇವೆ ಎಂದು ಬರೀ ಭಾಷಣವನ್ನಷ್ಟೇ ಮಾಡಿದ್ದು ಬಿಟ್ಟರೆ ಬೆರೇನು ಮಾಡಲಿಲ್ಲ ಎಂದು ಕುಟುಕಿದರು.

    ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ಹೀನಾಯ ಸ್ಥಿತಿಗೆ ಸಿದ್ದರಾಮಯ್ಯನವರೇ ಕಾರಣ. ಹಿಂದುಳಿದ ವರ್ಗಗಳ ಜಾತಿ ಜನಗಣತಿಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ 188 ಕೋಟಿ ರೂ. ವ್ಯಯ ಮಾಡಿದರು. ಜಾತಿ ಗಣತಿಯ ವರದಿ ಸಿದ್ಧವಾಗಿದ್ದು ಸಿಎಂ ಅನುಮತಿ ಕೊಟ್ಟರೆ ಬಿಡುಗಡೆ ಮಾಡುತ್ತೇವೆ ಎಂದು ಆ ಸಂಸ್ಥೆಯ ಅಧ್ಯಕ್ಷರಾಗಿದ್ದ ಕಾಂತರಾಜು ಅವರೇ ಒಮ್ಮೆ ನನಗೆ ಹೇಳಿದ್ದರು. ವಿಧಾನ ಪರಿಷತ್‍ನಲ್ಲೂ ಜಾತಿ ಗಣತಿಯನ್ನು ನಾಳೆ, ನಾಡಿದ್ದು ಬಿಡುಗಡೆ ಮಾಡುತ್ತೇವೆ ಎನ್ನಲಾಗಿತ್ತು. ಹೀಗೆ ಹೇಳಿದ್ದು ಬಿಟ್ಟರೆ ಅದನ್ನು ಬಿಡುಗಡೆ ಮಾಡಲೇ ಇಲ್ಲ. ಇದೀಗ ಹಿಂದುಳಿದವರ ಬಗ್ಗೆ ಜೋರಾಗಿ ಮಾತನಾಡುತ್ತಿದ್ದು, ಹಿಂದುಳಿದವರ ಪರವಾಗಿ ಬಿಜೆಪಿ ಸರ್ಕಾರ ಇಲ್ಲ ಎಂದು ಆರೋಪಿಸುತ್ತಾ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ವರ್ಚಸ್ಸು ಕಡಿಮೆಯಾಗುತ್ತಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕಾಂಗ್ರೆಸ್‍ನಲ್ಲಿ ರಾಹುಲ್ ಗಾಂಧಿ ಅವರನ್ನು ಬಿಟ್ಟರೆ ಸಿದ್ದರಾಮಯ್ಯ ಅವರೇ ರಾಷ್ತ್ರೀಯ ಅಧ್ಯಕ್ಷರಾ? ಹಾಗಿದ್ದರೆ ಅವರೇ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗಬೇಕಿತ್ತು. ಸಮರ್ಥ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಆಗದ ಇವರಿಗೆಲ್ಲ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಯಾವ ಯೋಗ್ಯತೆ, ಅಧಿಕಾರವಿದೆ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

  • ಕೊಡಗು ಸಂತ್ರಸ್ತರಿಗೆ ಕೊನೆಗೂ ಒಲಿದ ಸೂರಿನ ಭಾಗ್ಯ

    ಕೊಡಗು ಸಂತ್ರಸ್ತರಿಗೆ ಕೊನೆಗೂ ಒಲಿದ ಸೂರಿನ ಭಾಗ್ಯ

    ಮಡಿಕೇರಿ: ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಮತ್ತು ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಸಾವಿರಾರು ಸಂತ್ರಸ್ತರ ಪೈಕಿ 35 ಜನರಿಗೆ ಕೊನೆಗೂ ಸ್ವಂತ ಸೂರು ಸೇರುವ ಭಾಗ್ಯ ಕೂಡಿ ಬಂದಿದೆ.

    ಕಳೆದ ವರ್ಷದ ಭೂಕುಸಿತದಲ್ಲಿ 1,040 ಜನರು ಮನೆ ಕಳೆದುಕೊಂಡಿದ್ದರು. 1,040 ಮನೆಗಳ ಪೈಕಿ ಕೇವಲ 35 ಮನೆಗಳ ಕಾಮಗಾರಿ ಮಾತ್ರವೇ ಪೂರ್ಣಗೊಂಡಿದ್ದು, ಅವುಗಳನ್ನು ನಾಳೆ (ಶುಕ್ರವಾರ) ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಸಂತ್ರಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ. ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ಅವರು ಕೂಡ ಸಾಥ್ ನೀಡಲಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಮತ್ತು ಪ್ರವಾಹದಲ್ಲಿ ಸಾವಿರಾರು ಮನೆಗಳು ನೆಲಸಮವಾಗಿದ್ದವು. ಸರ್ಕಾರ ಕೂಡಲೇ ಮನೆ ನಿರ್ಮಿಸಿ ಕೊಡುವುದಾಗಿ ಸಂತ್ರಸ್ತ ಕುಟುಂಬಗಳಿಗೆ ಭರವಸೆ ನೀಡಿತ್ತು. ಆದರೆ ಮನೆಗಳನ್ನು ಕಳೆದುಕೊಂಡು ವರ್ಷದ ಮೇಲೆ ಎರಡು ತಿಂಗಳು ಕಳೆದಿದ್ದರೂ ಸಂತ್ರಸ್ತರಿಗೆ ಸೂರು ಸೇರುವ ಭಾಗ್ಯ ಕೂಡಿ ಬಂದಿಲ್ಲ. ಮನೆ ಕಳೆದುಕೊಂಡವರಿಗಾಗಿ ಜಿಲ್ಲೆಯ ಕರ್ಣಂಗೇರಿ, ಜಂಬೂರು, ಗಾಳಿಬೀಡು, ಮದೆನಾಡು ಮತ್ತು ಬಿಳಿಗೇರಿಯಲ್ಲಿ ಒಟ್ಟು 840 ಮನೆಗಳನ್ನು ನಿರ್ಮಿಸಲು ಚಾಲನೆ ನೀಡಲಾಗಿತ್ತು. ವಿಪರ್ಯಾಸವೆಂದರೆ ಇದುವರೆಗೆ ಕರ್ಣಂಗೇರಿಯಲ್ಲಿ ಮಾತ್ರ 35 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ವಿದ್ಯುತ್ ಸಂಪರ್ಕ, ರಸ್ತೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯಿಂದ ಮನೆ ಸಿದ್ಧಗೊಂಡಿದೆ.

    ಈ ಹಿಂದೆ ಇದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಮನೆ ನಿರ್ಮಾಣಕ್ಕೆ ಚಾಲನೆ ನೀಡಿತ್ತು. 10 ತಿಂಗಳಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದ್ದ ಸರ್ಕಾರ ಕೊನೆಗೂ ಒಂದು ವರ್ಷ ಎರಡು ತಿಂಗಳ ಬಳಿಕ ಕೇವಲ 35 ಮನೆಗಳನ್ನು ನಿರ್ಮಿಸಿದೆ. ಇನ್ನೂ ಗಾಳಿ ಬೀಡು, ಜಂಬೂರು, ಮದೆನಾಡು ಮತ್ತು ಬಿಳಿಗೇರಿಗಳಲ್ಲಿ ಸಂತ್ರಸ್ತರಿಗಾಗಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಮನೆ ಹಸ್ತಾಂತರಿಸುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ.

    ವರ್ಷದ ಹಿಂದೆ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಇನ್ನೂ ಸ್ವಂತ ಸೂರು ಸೇರುವ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಕೆಲವರಿಗಾದರೂ ಮನೆಗಳು ಸಿಗುತ್ತಿವೆ, ಸಂತ್ರಸ್ತರಿಗೆ ನಾಳೆ ಮನೆಗಳು ಹಸ್ತಾಂತರ ಮಾಡಲಾಗುತ್ತಿದೆ. ಇದು ಖುಷಿಯ ವಿಚಾರವಾಗಿದೆ. ಬಾಕಿ ಉಳಿದ ಮನೆಗಳ ಕಾಮಗಾರಿ ಅದಷ್ಟು ಬೇಗ ಮುಗಿಸಿ ಸರ್ಕಾರ ಉಳಿದ ಸಂತ್ರಸ್ತರಿಗೆ ಮನೆ ನೀಡಲಿ ಎಂಬುವುದು ಕೊಡಗು ಹಾಗೂ ರಾಜ್ಯದ ಜನರ ಆಶಯವಾಗಿದೆ.

  • ನಿರಾಶ್ರಿತ ಕೇಂದ್ರದಿಂದ ಸಂತ್ರಸ್ತರನ್ನು ಹೊರ ಕಳುಹಿಸಲು ಸರ್ಕಾರದ ಪ್ಲಾನ್

    ನಿರಾಶ್ರಿತ ಕೇಂದ್ರದಿಂದ ಸಂತ್ರಸ್ತರನ್ನು ಹೊರ ಕಳುಹಿಸಲು ಸರ್ಕಾರದ ಪ್ಲಾನ್

    ಮಡಿಕೇರಿ: ಭೀಕರ ಪ್ರವಾಹದಿಂದಾಗಿ ಮನೆ, ಮಠ ಕಳೆದುಕೊಂಡಿರುವ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿ ವಾಸವಿದ್ದಾರೆ. ಇದೀಗ ಅವರನ್ನು ಹೊರಗೆ ಕಳುಹಿಸಲು ಸರ್ಕಾರ ಮುಂದಾಗಿದ್ದು, ಬಿಡಿಗಾಸು ನೀಡಿ ಸ್ಥಳಾಂತರಗೊಳ್ಳುವಂತೆ ಸೂಚಿಸುತ್ತಿದೆ.

    ಇತ್ತೀಚೆಗಷ್ಟೇ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ನಿರಾಶ್ರಿತರ ಕೇಂದ್ರಕ್ಕೆ ವಸತಿ ಸಚಿವ ಸೋಮಣ್ಣ ಭೇಟಿ ನೀಡಿದ್ದರು. ಈ ವೇಳೆ ಸೋಮಣ್ಣ ಅವರು ಹೇಳಿಕೆ ನೀಡಿದ್ದು, ಎರಡು ಕಂತುಗಳಲ್ಲಿ ನಿಮಗೆ 50 ಸಾವಿರ ರೂ. ಕೊಡುತ್ತೇವೆ. ನಿರಾಶ್ರಿತ ಶಿಬಿರದಿಂದ ಹೋಗಿ ಎಲ್ಲಾದರು ಇರಿ. ನಿರಾಶ್ರಿತ ಕೇಂದ್ರಗಳು ಶಾಲೆಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನೀವು ಹೊರಹೋಗಲು ನಾವು ಏನು ಮಾಡಬೇಕು ಹೇಳಿ ಎಂದು ಸಚಿವ ಸೋಮಣ್ಣ ಪ್ರಶ್ನಿಸಿದ್ದರು.

    ಹತ್ತು ತಿಂಗಳಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ. ಸದ್ಯ ಗುಡಿಸಲು ನಿರ್ಮಾಣಕ್ಕೆ 25 ಸಾವಿರದಂತೆ 2ಕಂತುಗಳಲ್ಲಿ 50 ಸಾವಿರ ಕೊಡುತ್ತೇವೆ. ನೀವು ನಿರಾಶ್ರಿತ ಕೇಂದ್ರದಿಂದ ಹೊರಹೋಗಿ ಎಲ್ಲಾದರೂ ಇರಿ ಎಂದು ಸೂಚಿಸಿದ್ದಾರೆ.

    ನದಿ ತಟದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿರುವ ಜಿಲ್ಲೆಯ 58 ಕುಟುಂಬಸ್ಥರಿಗೆ ಹೊರ ಹೋಗುವಂತೆ ಸೋಮಣ್ಣ ಸೂಚಿಸಿದ್ದಾರೆ. ಆದರೆ ಶಾಶ್ವತ ಸೂರು ಕಲ್ಪಿಸಿಕೊಡುವ ವರೆಗೆ ನಿರಾಶ್ರಿತ ಶಿಬಿರ ಬಿಟ್ಟು ಕದಲುವುದಿಲ್ಲ ಎಂದು ಸಂತ್ರಸ್ತರು ಹಠ ಹಿಡಿದಿದ್ದಾರೆ.

    ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹದಲ್ಲಿ ಕುಂಬಾರಗುಂಡಿ, ಬೆಟ್ಟಕಾಡು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರು ಮನೆಗಳನ್ನು ಕಳೆದುಕೊಂಡಿದ್ದಾರೆ. ಪ್ರಸ್ತುತ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ಬಹುತೇಕ ಕೇಂದ್ರಗಳು ಶಾಲಾ ಕಟ್ಟಡಗಳಲ್ಲೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಖಾಲಿ ಮಾಡಿ ಎಂದು ಸಚಿವರು ಮನವೊಲಿಸಲು ಯತ್ನಿಸಿದರು. ಆದರೆ ಸಂತ್ರಸ್ತರು ಒಪ್ಪಿಲ್ಲ. ಶಾಶ್ವತ ಸೂರು ಕಲ್ಪಿಸಿ ಕೊಡುವವರೆಗೆ ನಿರಾಶ್ರಿತರ ಕೇಂದ್ರ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

  • ಭೂಕುಸಿತಕ್ಕೊಳಗಾಗಿ ಕಣ್ಮರೆಯಾದವರ ಮನೆಗೆ ಸೋಮಣ್ಣ ಭೇಟಿ

    ಭೂಕುಸಿತಕ್ಕೊಳಗಾಗಿ ಕಣ್ಮರೆಯಾದವರ ಮನೆಗೆ ಸೋಮಣ್ಣ ಭೇಟಿ

    -4 ಲಕ್ಷದ 3 ಚೆಕ್ ಹಸ್ತಾಂತರಿಸಿ ಸಾಂತ್ವನ

    ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಭೂ ಕುಸಿತಕ್ಕೆ ಒಳಗಾಗಿ ಕಣ್ಮರೆ ಆದವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆ ಕುಟುಂಬಗಳಿಗೆ ಸಚಿವ ವಿ.ಸೋಮಣ್ಣ ತಲಾ 4 ಲಕ್ಷದ ಪರಿಹಾರ ಚೆಕ್ ವಿತರಿಸಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿತವಾದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಅಲ್ಲದೆ ಕಣ್ಮರೆಯಾದವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ 4 ಲಕ್ಷದ 3 ಚೆಕ್ ಹಸ್ತಾಂತರಿಸಿ ಸಾಂತ್ವನ ಹೇಳಿದರು.

    ಭೂ ಕುಸಿತದಿಂದ ತೋರಾ ಗ್ರಾಮದ ಪ್ರಭು ಕುಟುಂಬದ 3 ಮಂದಿ ಹಾಗೂ ಹರೀಶ್ ಕುಟುಂಬದ ಒಬ್ಬರು ಕಣ್ಮರೆ ಆಗಿದ್ದರು. ಹಲವು ದಿನಗಳು ನಿರಂತರವಾಗಿ ಎಷ್ಟೇ ಹುಡುಕಾಟ ನಡೆಸಿದರೂ ಕಣ್ಮರೆ ಆದವರ ಮೃತದೇಹದ ಸುಳಿವೇ ಪತ್ತೆಯಾಗಿರಲಿಲ್ಲ.

    ಈ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಮನವಿ ಪುರಸ್ಕರಿಸಿದ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿತ್ತು. ಆರಂಭದಲ್ಲಿ 1 ಲಕ್ಷ ನೀಡಿದ್ದರಿಂದ ಈಗ ತಲಾ 4 ಲಕ್ಷ ಚೆಕ್ ವಿತರಿಸಲಾಗಿದೆ.

    ಸಚಿವ ವಿ. ಸೋಮಣ್ಣ ಅವರೊಂದಿಗೆ ಶಾಸಕ ಕೆ.ಜಿ ಬೋಪಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಹಾಗೂ ಸಿಇಓ ಲಕ್ಷ್ಮಿಪ್ರಿಯ ಸಾಥ್ ನೀಡಿದರು.

  • ಚಂದನ್‍ ಶೆಟ್ಟಿ ತನ್ನ ಲವ್ ಕೇಸ್‌ನ್ನ ಮೈಸೂರು ದಸರಾದಲ್ಲಿ ತಂದ ಹಾಕಿ ತಲೆನೋವು ಕೊಟ್ಟ: ವಿ.ಸೋಮಣ್ಣ

    ಚಂದನ್‍ ಶೆಟ್ಟಿ ತನ್ನ ಲವ್ ಕೇಸ್‌ನ್ನ ಮೈಸೂರು ದಸರಾದಲ್ಲಿ ತಂದ ಹಾಕಿ ತಲೆನೋವು ಕೊಟ್ಟ: ವಿ.ಸೋಮಣ್ಣ

    ಮೈಸೂರು: ಗಾಯಕ ಚಂದನ್‍ ಶೆಟ್ಟಿ ತನ್ನ ಲವ್ ಕೇಸ್‌ನ್ನ ಮೈಸೂರು ದಸರಾದಲ್ಲಿ ತಂದ ಹಾಕಿ ತಲೆನೋವು ಕೊಟ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಚಂದನ್ ಶೆಟ್ಟಿ ಚಿಕ್ಕವನಿದ್ದಾಗಿನಿಂದ ನನಗೆ ಗೊತ್ತು. ಅವನ ಲವ್ ಕೇಸ್ ಅನ್ನು ಮೈಸೂರು ಯುವ ದಸರಾದಲ್ಲಿ ತಂದು ಹಾಕಿಬಿಟ್ಟ. ಅವನು ಎಲ್ಲಾದರೂ ಮಜಾ ತಗೋಬಹುದಿತ್ತು. ಅದನ್ನ ಬಿಟ್ಟು ವೇದಿಕೆ ಮೇಲೆ ಪ್ರಪೋಸ್ ಮಾಡಿ ನನಗೆ ಹಿಂಸೆ ಕೊಡುತ್ತಿದ್ದಾನೆ. ಇದು ಯಾರಿಗೆ ಬೇಕಿತ್ತು ಎಂದು ವ್ಯಂಗ್ಯವಾಡಿದರು.

    ಚಂದನ್ ಶೆಟ್ಟಿ ಫೋನ್ ಮಾಡಿ ತಪ್ಪಾಗಿದೆ ಎಂದು ಕೇಳಿಕೊಂಡ. ಆಗ ನಾನು, ಅಲ್ಲೋ ಚಂದನ್ ಶನಿದೇವರ ತರ ಬಂದು ಹೆಗಲು ಏರಿಬಿಟ್ಟೆಲ್ಲೋ. ನನ್ನ ಒಳ್ಳೆತನ ನೀನು ದೂರುಪಯೋಗ ಮಾಡಿಕೊಂಡೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದೆ. ಅವರ ತಾಯಿ ಕೂಡ ಫೋನ್ ಮಾಡಿ ಅರ್ಧ ಗಂಟೆ ಮಾತನಾಡಿ ಪಿಟೀಲು ಕೂಯ್ದರು ಎಂದು ಹೇಳಿದರು.

    ಯುವ ದಸರಾ ವೇದಿಕೆ ಚಂದನ್ ಶೆಟ್ಟಿ ತನ್ನ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ಸಮಾಧಾನ ಸಿಗುತ್ತಿಲ್ಲ. ಇಂತಹ ಘಟನೆಗಳಿಗೆ ನಾವೇ ಹೊಣೆ ಆಗುತ್ತೇವೆ. ಹೀಗಾಗಿ ನಿನ್ನೆ ರಾತ್ರಿ ಚಾಮುಂಡಿ ತಾಯಿ ದರ್ಶನ ಮಾಡಿ, ಇದಕ್ಕೊಂದು ಪರಿಹಾರ ನೀಡಮ್ಮ ಅಂತ ಬೇಡಿಕೊಂಡಿದ್ದೇನೆ. ನಾನು ನಿಂತಿದ್ದನ್ನು ಕಂಡು ಜನರು ಬೈಯಲು ಶುರು ಮಾಡಿದರು. ಹೀಗಾಗಿ ಅಲ್ಲಿಂದ ಹೊರಗೆ ಬಂದೆ ಎಂದು ಸುದ್ದಿಗೋಷ್ಠಿನಲ್ಲಿ ನಗೆ ಹರಿಸಿದರು.

    ಚಂದನ್‍ಶೆಟ್ಟಿ ಗೌರವ ಧನ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ, ತಂದೆ ಅಕ್ಟೋಬರ್ 8ರ ವರೆಗೆ ಆ ವಿಚಾರ ಬಿಟ್ಟುಬಿಡಿ. ಮೊದಲು ದಸರಾ ಮುಗಿಯಲಿ ಆಮೇಲೆ ಎಲ್ಲವನ್ನೂ ವಿಚಾರ ಮಾಡೋಣ. ಚಂದನ್ ಶೆಟ್ಟಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

  • ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

    ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

    ಉಡುಪಿ: ದಸರಾ ವೇದಿಕೆಯಲ್ಲಿ ಪ್ರಪೊಸ್ ಮಾಡಬಾರದು ಎಂಬ ನಿಯಮವಿದೆಯೇ? ಇದ್ದರೆ ತೋರಿಸಿ ಎಂದು ಸಚಿವ ಸೋಮಣ್ಣಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

    ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಮತ್ತು ನಟಿ ನಿವೇದಿತಾ ಗೌಡ, ಪ್ರಪೋಸ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು. ಸರ್ಕಾರಿ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ನಿಯಮ ಎಲ್ಲಿದೆ? ಅನಾವಶ್ಯಕವಾಗಿ ಇದನ್ನು ಎಳೆಯಬೇಡಿ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಮೇಲೆ ಕೇಸು ಹಾಕಿದ್ದು ತಪ್ಪು. ಸಂದರ್ಭ ಬಂದಿದೆ ಪ್ರಪೋಸ್ ಮಾಡಿದ್ದಾರೆ, ಒಪ್ಪಿಕೊಂಡಿದ್ದಾರೆ, ಸುದ್ದಿಯಾಗಿದೆ. ಅದನ್ನೇ ಬಹಳ ದೊಡ್ಡ ಅಪರಾಧ ಎಂದು ಬಿಂಬಿಸುವುದು ಸರಿಯಲ್ಲ ಎಂದರು.

    ಚಂದನ್ ನಿವೇದಿತಾರನ್ನು ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದಿರುವ ಸಚಿವ ಸೋಮಣ್ಣಗೆ ತಿರುಗೇಟು ನೀಡಿದ ಮುತಾಲಿಕ್, ನೂರಕ್ಕೆ ನೂರು ಚಂದನ್ ಮತ್ತು ನಿವೇದಿತಾಗೆ ಸಮಸ್ಯೆಯಾಗಲ್ಲ. ಇಬ್ಬರ ಮೇಲೆ ಚಾಮುಂಡೇಶ್ವರಿ ಆಶೀರ್ವಾದ ಇದೆ. ಇಷ್ಟಕ್ಕೂ ವೇದಿಕೆಯಲ್ಲಿ ಇಂತದ್ದು ಮಾಡಬಾರದು, ಇಂತದ್ದು ಮಾಡಬೇಕೆಂಬ ನಿಯಮಗಳಿದ್ದರೆ ಸೋಮಣ್ಣ ಅವರು ಹೇಳಲಿ. ಹೆಚ್ಚು ಎಳೆಯದೆ ಪ್ರಕರಣ ಮುಗಿಸಿಬಿಡಿ. ಕೇಸು ವಾಪಾಸ್ ಪಡೆಯಿರಿ. ಯುವ ಜೋಡಿಯ ದಾಂಪತ್ಯ ಜೀವನ ಸುಖಕರವಾಗಿ ನಡೆಯುತ್ತದೆ ಎಂದು ಮುತಾಲಿಕ್ ಹಾರೈಸಿದರು.

  • ದಸರಾ ಉದ್ಘಾಟನೆಗೆ ಇಲ್ಲ ಸಾರಾ – ಮೂರು ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಜಿಟಿಡಿ

    ದಸರಾ ಉದ್ಘಾಟನೆಗೆ ಇಲ್ಲ ಸಾರಾ – ಮೂರು ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಜಿಟಿಡಿ

    ಮೈಸೂರು: ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಅವರನ್ನು ಮೈಸೂರು ಜಿಲ್ಲಾಡಳಿತ ಅಕ್ಷರಶಃ ಮರೆತೇ ಬಿಟ್ಟಿದೆ.

    10 ದಿನಗಳ ದಸರಾದ ನಾನಾ ಕಾರ್ಯಕ್ರಮದಲ್ಲಿ ಸಾ.ರಾ ಮಹೇಶ್‍ಗೆ ಒಂದೇ ಒಂದು ಕಾರ್ಯಕ್ರಮದ ಉದ್ಘಾಟನೆಗೂ ಅವಕಾಶ ಇಲ್ಲ. ಆದರೆ ಜೆಡಿಎಸ್‍ನ ಮತ್ತೊಬ್ಬ ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಮೂರು ಕಾರ್ಯಕ್ರಮಗಳ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಣತಿಯಂತೆ ಜಿಲ್ಲಾಡಳಿತ ಈ ಕಾರ್ಯಕ್ರಮ ಪಟ್ಟಿ ಸಿದ್ಧ ಮಾಡಿದೆ. ದಸರಾ ಕಾರ್ಯಕ್ರಮದಲ್ಲಿ ಜಿಟಿಡಿಗೆ ಆದ್ಯತೆ ಸಿಕ್ಕಿದ್ದು ಸಾ.ರಾ.ಮಹೇಶ್ ಅವರನ್ನು ಸ್ಪಷ್ಟವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಉಸ್ತುವಾರಿ ಸಚಿವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಈ ಹಿಂದೆ ಹೇಳಿದ್ದರು.

    ಈ ಹೇಳಿಕೆಗೆ ಪೂರಕವಾಗಿ ಸಾ.ರಾ ಮಹೇಶ್‍ರನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ದೂರ ಇಟ್ಟಿದ್ದಾರೆ. ಆದರೆ ಜಿ.ಟಿ.ದೇವೇಗೌಡರ ದಸರಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

  • ಚಾಮುಂಡೇಶ್ವರಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಸೀರೆ – ಸೋಮಣ್ಣರಿಂದ ಮಹತ್ವದ ನಿರ್ಧಾರ

    ಚಾಮುಂಡೇಶ್ವರಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಸೀರೆ – ಸೋಮಣ್ಣರಿಂದ ಮಹತ್ವದ ನಿರ್ಧಾರ

    ಮೈಸೂರು: ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಅಂಬಾರಿ ಒಳಗೆ ಕೂರಿಸುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಸೀರೆ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣರಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

    ಇನ್ಮುಂದೆ ಪ್ರತಿ ದಸರಾದಲ್ಲೂ ಉತ್ಸವ ಮೂರ್ತಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಮೈಸೂರು ಸಿಲ್ಕ್ ಸೀರೆಯನ್ನೇ ಉಡಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಸೀರೆ ಉಡಿಸುವ ಬಗ್ಗೆಯ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.

    ಈ ಹಿಂದೆ ಸೀರೆ ಉಡಿಸುವ ವಿಚಾರಕ್ಕೆ ಜಟಾಪಟಿಯಾಗುತಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಟಾಪಟಿ ಉಂಟಾಗಿ ಅವತ್ತು ಮೈಸೂರು ಮೇಯರ್ ಆಗಿದ್ದ ಎಂ.ಜೆ ರವಿಕುಮಾರ್ ಹಾಗೂ ಸಿದ್ದರಾಮಯ್ಯ ಮನೆಯವರ ನಡುವೆ ಜಟಾಪಟಿ ಉಂಟಾಗಿತ್ತು.

    ಚಾಮುಂಡೇಶ್ವರಿ ವಿಗ್ರಹಕ್ಕೆ ಸೀರೆ ಉಡಿಸಲು ಪೈಪೋಟಿ ಉಂಟಾಗಿ ಕೊನೆಗೆ ವಿಗ್ರಹಕ್ಕೆ ಎರಡು ಸೀರೆಗಳನ್ನು ಉಡಿಸಲಾಗಿತ್ತು. ಇದೀಗ ಇವೆಲ್ಲಕ್ಕೂ ಬ್ರೇಕ್ ಹಾಕಿರುವ ಸಚಿವ ವಿ.ಸೋಮಣ್ಣ, ಈ ಬಗ್ಗೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್‍ಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಪರಂಪರೆ ಮುಂದುವರಿಸಲು ನಿರ್ಧಾರ ಮಾಡಲಾಗಿದೆ.

  • ಮುಳುಗಡೆಯಾದ ಜಾಗದಲ್ಲೇ ಮತ್ತೆ ಮನೆ ನಿರ್ಮಾಣ ಮಾಡಬೇಡಿ- ವಿ.ಸೋಮಣ್ಣ

    ಮುಳುಗಡೆಯಾದ ಜಾಗದಲ್ಲೇ ಮತ್ತೆ ಮನೆ ನಿರ್ಮಾಣ ಮಾಡಬೇಡಿ- ವಿ.ಸೋಮಣ್ಣ

    ಮೈಸೂರು: ಮುಳುಗಡೆಯಾದ ಪ್ರದೇಶದಲ್ಲೇ ಮತ್ತೆ ಮನೆ ನಿರ್ಮಾಣ ಮಾಡಿದರೆ ಏನೂ ಪ್ರಯೋಜನವಿಲ್ಲ. ಬೇರೆ ಜಾಗ ಗುರುತಿಸಿ ಮನೆ ನಿರ್ಮಾಣ ಮಾಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದು ಮುಳುಗಡೆಯಾದ ಜಾಗದಲ್ಲೇ ಹೊಸ ಮನೆ ನಿರ್ಮಿಸಲು ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪದೇ ಪದೇ ಮುಳುಗಡೆಯಾದ ಜಾಗದಲ್ಲಿ ಮನೆ ನಿರ್ಮಿಸಿದರೆ ಏನೂ ಪ್ರಯೋಜನವಿಲ್ಲ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ತಕ್ಷಣವೇ ಬೇರೆ ಜಾಗ ಗುರುತಿಸಿ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

    ಕಾಂಗ್ರೆಸ್‍ನಿಂದ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಸರ್ಕಾರದ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಹೇಗೆ ನಿಭಾಯಿಸಿದ್ದರು ಎಂಬುದು ಜನರಿಗೆ ಗೊತ್ತಿದೆ. ಅದೆಲ್ಲಾ ತೆರೆದ ಪುಸ್ತಕ. ಎಲ್ಲವನ್ನೂ ಈಗ ಬಿಡಿಸಿ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಸಂತ್ರಸ್ತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಪ್ರತಿಭಟನೆ ಮಾಡುವುದು ಅವರ ಕೆಲಸ ಮಾಡಲಿ. ದಸರಾ ಮುಗಿದ ಮೇಲೆ ಯಾವ ಯೋಜನೆಯಲ್ಲಿ ಹಿಂದಿನ ಸರ್ಕಾರದಲ್ಲಿ ಏನಾಗಿತ್ತು, ಈಗ ಏನಾಗಿದೆ ಎಂಬುದರ ಕುರಿತು ವಿವರಿಸುತ್ತೇನೆ ಎಂದು ಪ್ರತಿಭಟನೆ ಕುರಿತು ಟಾಂಗ್ ನೀಡಿದರು.

    ಅಕ್ಟೋಬರ್ 2ಕ್ಕೆ ಏರ್ ಶೋ ದಿನಾಂಕ ನಿಗದಿಯಾಗಿದ್ದು, ಯಾವ ಮಾದರಿಯಲ್ಲಿ ಏರ್ ಶೋ ನಡೆಯಲಿದೆ ಎಂಬುದು ಇನ್ನು ಅಂತಿಮವಾಗಿಲ್ಲ. ಈ ಕುರಿತು ಚರ್ಚಿಸಲು ರಕ್ಷಣಾ ಸಚಿವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಸಂಪೂರ್ಣ ಏರ್ ಶೋ ಪ್ಯಾಕೇಜ್ ನೀಡುವಂತೆ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ ಅವರಿಂದ ಇನ್ನೂ ಉತ್ತರ ಬಂದಿಲ್ಲ. ಈ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

  • ಚಾಮುಂಡಿ ಬೆಟ್ಟದಲ್ಲಿ ಮೋದಿ, ಯಡಿಯೂರಪ್ಪ, ಬಿಜೆಪಿ ಹೆಸರಿನಲ್ಲಿ ಜಿಟಿಡಿ ಅರ್ಚನೆ

    ಚಾಮುಂಡಿ ಬೆಟ್ಟದಲ್ಲಿ ಮೋದಿ, ಯಡಿಯೂರಪ್ಪ, ಬಿಜೆಪಿ ಹೆಸರಿನಲ್ಲಿ ಜಿಟಿಡಿ ಅರ್ಚನೆ

    ಮೈಸೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

    ಮೋದಿ ಅವರಿಗಾಗಿ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದರು. ಈ ವೇಳೆ ಜಿ.ಟಿ ದೇವೇಗೌಡ ಸೇರಿದಂತೆ ಸಂಸದ ಪ್ರತಾಪ್ ಸಿಂಹ, ಎಲ್. ನಾಗೇಂದ್ರ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.

    ಜಿ.ಟಿ ದೇವೇಗೌಡ ಅವರು ಬಿಜೆಪಿ ನಾಯಕರ ಜೊತೆ ಪೂಜೆಯಲ್ಲಿ ಭಾಗಿಯಾದರು. ಅಲ್ಲದೆ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಹೆಸರಿನಲ್ಲಿ ಅರ್ಚನೆ ಕೂಡ ಮಾಡಿಸಿದರು. ಸದ್ಯ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಯಕರು ಮೋದಿಗೆ ಶುಭ ಹಾರೈಸಿದರು.

    ಇಂದು ಪ್ರಧಾನಿ ನರೇಂದ್ರ ಮೋದಿ ಅವರು 69ನೇ ವಸಂತಕ್ಕೆ ಕಾಲಿಟ್ಟಿದ್ದು ಸಂತಸದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಖುಷಿಯಲ್ಲಿರುವ ಮೋದಿ ಅವರು ಇಂದು ಗುಜರಾತ್‍ಗೆ ತೆರಳಿ, ತಾಯಿಯ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಗಾಂಧಿನಗರದಿಂದ ನರ್ಮದಾ ಜಿಲ್ಲೆಯಲ್ಲಿರುವ ಕೆವಡಿಯಾ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

    ಅಲ್ಲಿ ನರ್ಮದಾ ನದಿ ತೀರದಲ್ಲಿರುವ ಏಕತಾ ಪ್ರತಿಮೆ ಹಾಗೂ ಸರ್ದಾರ ಸರೋವರ್ ಡ್ಯಾಂ ಯೋಜನೆ, ಕಾರ್ಯಕ್ರಮಗಳನ್ನು ಪರಿಶೀಲಿಸಲಿದ್ದಾರೆ. ಈ ಪ್ರವಾಸದಲ್ಲಿ ಮೋದಿ ಅವರು ನರ್ಮದಾ ನದಿಗೆ ಪೂಜೆ ಸಲ್ಲಿಸಲ್ಲಿದ್ದಾರೆ. ಜೊತೆಗೆ ಸರ್ದಾರ್ ಸರೋವರ ಡ್ಯಾಂ ನಿಯಂತ್ರಣ ಕೊಠಡಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.