Tag: V.Somanna

  • ಇನ್ನೊಂದು ವಾರದಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ: ಸೋಮಣ್ಣ ಭವಿಷ್ಯ

    ಇನ್ನೊಂದು ವಾರದಲ್ಲಿ ಮುನಿರತ್ನ ಮಂತ್ರಿಯಾಗಲಿದ್ದಾರೆ: ಸೋಮಣ್ಣ ಭವಿಷ್ಯ

    ಬೆಂಗಳೂರು: ಇನ್ನೊಂದು ವಾರದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಮಂತ್ರಿಯಾಗಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ.

    ಆರ್ ಆರ್ ನಗರ ವ್ಯಾಪ್ತಿಯಲ್ಲಿ ಇಂದು ಕೂಡ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಮುಂದುವರಿದಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೋಮಣ್ಣ, ಮುಂದಿನ ಎಂಟು ಹತ್ತು ದಿನಗಳಲ್ಲಿ ಮುನಿರತ್ನ ಸಚಿವರಾಗುತ್ತಾರೆ. ಪಕ್ಷತೀತವಾಗಿ ಜಾತ್ಯತೀತವಾಗಿ ಮುನಿರತ್ನ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಸುಭೀಕ್ಷ ಸರ್ಕಾರ ಬರಬೇಕು ಒಳ್ಳೆಯ ಕೆಲಸ ಆಗಬೇಕಾದರೆ ಇಂತಹ ಶಾಸಕರು ಬರಬೇಕು. ಇನ್ನೊಂದು ವಾರದಲ್ಲಿ ಅವರು ಮಂತ್ರಿ ಆಗಲಿ. ಬಳಿಕ ರಾಜರಾಜೇಶ್ವರಿ ದೇವರ ದರ್ಶನವನ್ನ ನಾವಿಬ್ಬರು ಒಟ್ಟಿಗೆ ಮಾಡ್ತೇವೆ ಎಂದರು.

    ಒಟ್ಟಿನಲ್ಲಿ ಬೆಂಗಳೂರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ವಿಚಾರದ ಬೆನ್ನಲ್ಲೇ ಸಚಿವರು ಭವಿಷ್ಯ ನುಡಿದಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ಲಾಕ್‍ಡೌನ್ ಎಫೆಕ್ಟ್- ಕೆಲ ತರಕಾರಿ ಬೆಲೆ ದುಬಾರಿ

    ವಾರ್ಡ್ ನಂಬರ್ 160 ರ ಪಟ್ಟಣಗೆರೆ ಜಯಣ್ಣ ಸರ್ಕಲ್ ಲ್ಲಿ ಶಾಸಕ ಮುನಿರತ್ನ ಅವರು ಫುಡ್ ಕಿಟ್ ವಿರತಣೆ ಕಾರ್ಯಕ್ರಮ ನಡೆದಿದೆ. ಕಳೆದ ಹಲವು ದಿನದಿಂದ ಕ್ಷೇತ್ರದಾದ್ಯಂತ ಕೊರೊನಾ ಸಂಕಷ್ಟಕ್ಕೆ ಒಳಗಾಗದವರಿಗೆ ಶಾಸಕರು ಆಹಾರ ಕಿಟ್ ವಿತರಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಸಾಮಾಜಿಕ ಅಂತರದೊಂದಿಗೆ ಕಿಟ್ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು ಭಾಗಿಯಾಗಿದ್ದಾರೆ.

  • ನನಗೆ ಕೆಲಸ ಮಾಡುವ ಕಾಯಿಲೆ, ಅವರಿಗೆ ದೆಹಲಿಗೆ ಹೋಗುವ ಕಾಯಿಲೆ- ಸಚಿವ ಸೋಮಣ್ಣ

    ನನಗೆ ಕೆಲಸ ಮಾಡುವ ಕಾಯಿಲೆ, ಅವರಿಗೆ ದೆಹಲಿಗೆ ಹೋಗುವ ಕಾಯಿಲೆ- ಸಚಿವ ಸೋಮಣ್ಣ

    ಮೈಸೂರು: ನನಗೆ ಕೆಲಸ ಮಾಡುವ ಕಾಯಿಲೆ ಅವರಿಗೆ ದೆಹಲಿಗೆ ಹೋಗುವ ಕಾಯಿಲೆ ಇದೆ ಎಂದು ತಡರಾತ್ರಿಯೇ ಶಾಸಕ ಅರವಿಂದ್ ಬೆಲ್ಲದ್ ರಾಷ್ಟ್ರ ರಾಜಧಾನಿಗೆ ಪಯಣ ಬೆಳೆಸಿರುವ ವಿಚಾರಕ್ಕೆ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ.

    ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಇಂದು ಭೇಟಿ ನೀಡಿ ಸುತ್ತೂರು ಶ್ರೀಗಳ ಜೊತೆ ಚರ್ಚೆ ಪ್ರಸಕ್ತ ವಿದ್ಯಾಮನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ದೆಹಲಿಗೆ ಹೋಗಿದ್ದಾರೆ, ಹೋಗಿಲ್ಲ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ವರ್ಲ್ಡ್​ ಚೆಸ್ ಚಾಂಪಿಯನ್ ಜೊತೆಗೆ ಕಿಚ್ಚನ ಆಟ

    ನಾನು ನನ್ನ ಬುದ್ದಿವಂತಿಕೆಯನ್ನು ಕೊರೊನಾ ನಿಯಂತ್ರಣಕ್ಕೆ ಬಳಸುತ್ತಿದ್ದೇನೆ. ಕೆಲವರು ಆ ಬುದ್ದಿವಂತಿಕೆಯನ್ನು ಬೇರೆಯದಕ್ಕೆ ಬಳಸುತ್ತಿದ್ದಾರೆ. ಯಾವ ಕಾರಣಕ್ಕೆ ದೆಹಲಿಗೆ ಹೋಗುತ್ತಿದ್ದಾರೆ ಆ ಪುಣ್ಯಾತ್ಮರನ್ನೇ ಕೇಳಬೇಕು. ನನ್ನನ್ನು ಸೇರಿದಂತೆ ಪ್ರತಿಯೊಬ್ಬರಿಗೂ ಒಂದೊಂದು ಕಾಯಿಲೆ ಇದೆ. ನನಗೆ ಕೆಲಸ ಮಾಡುವ ಕಾಯಿಲೆ ಅವರಿಗೆ ದೆಹಲಿಗೆ ಹೋಗುವ ಕಾಯಿಲೆ. ಆ ಕಾಯಿಲೆಯ ಮದ್ದು ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದನ್ನೂ ಓದಿ: ದೆಹಲಿ ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ: ಅರವಿಂದ ಬೆಲ್ಲದ್

    ಇದು ಕೊರೊನಾ ನಿಯಂತ್ರಣ ಮಾಡಬೇಕಾದ ಸಮಯ. ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಸರಿಯಲ್ಲ. ಸಿಎಂ ಯಡಿಯೂರಪ್ಪ ಪ್ರತಿ ಜಿಲ್ಲೆ ಜಿಲ್ಲೆ ತಿರುಗುತ್ತಿದ್ದಾರೆ. ಎಲ್ಲವನ್ನೂ ಹೈ ಕಮಾಂಡ್ ಗಮನಿಸುತ್ತಿದೆ. ಹೈಕಮಾಂಡ್ ಇದಕ್ಕೆಲ್ಲಾ ಒಂದು ಅಂಕಿತ ಹಾಕಬೇಕಿದೆ ಎಂದಿದ್ದಾರೆ.

  • ಕೊಡಗಿನಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ, ಭೂ ಕುಸಿತದ ಭೀತಿ- ಸೋಮಣ್ಣ ಆತಂಕ

    ಕೊಡಗಿನಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ, ಭೂ ಕುಸಿತದ ಭೀತಿ- ಸೋಮಣ್ಣ ಆತಂಕ

    ಮಡಿಕೇರಿ: ಮಳೆಗಾಲ ಆರಂಭವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ 77 ಗ್ರಾಮಗಳಿಗೆ ಪ್ರವಾಹ ಮತ್ತು ಭೂಕುಸಿತದ ಭೀತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.

    ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಸಂಬಂಧಿತ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 77 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತದಿಂದ ಭಾದಿತವಾಗುವ ಸಾಧ್ಯತೆ ಇದ್ದು, 2,878 ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅವರೆಲ್ಲರನ್ನೂ ಸ್ಥಳಾಂತರ ಮಾಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

    ಕೋವಿಡ್ ಸೋಂಕು ಇರುವುದರಿಂದ ಈ ಬಾರಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು. ಅಲ್ಲದೆ ಅವರನ್ನು ಸ್ಥಳಾಂತರ ಮಾಡುವ ಮೊದಲು ಸ್ವ್ಯಾಬ್ ಟೆಸ್ಟ್ ಮಾಡಿ ಬಳಿಕ ಸ್ಥಳಾಂತರ ಮಾಡಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆಗಾಲಕ್ಕೂ ಮೊದಲೇ ಅಪಾಯ ಎದುರಾಗುವ ಗ್ರಾಮಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಅಧಿಕಾರಿಗಳು, ಕೊಡಗಿಗೆ ಈ ಬಾರಿಯೂ ಅಪಾಯ ತಪ್ಪಿದ್ದಲ್ಲ ಎಂಬ ಸುಳಿವು ನೀಡಿದ್ದಾರೆ.

  • ರಾಜ್ಯದಲ್ಲಿ ಹತ್ತು ಲಕ್ಷ ಮನೆ ನಿರ್ಮಿಸುವ ಗುರಿ: ಸೋಮಣ್ಣ

    ರಾಜ್ಯದಲ್ಲಿ ಹತ್ತು ಲಕ್ಷ ಮನೆ ನಿರ್ಮಿಸುವ ಗುರಿ: ಸೋಮಣ್ಣ

    ತುಮಕೂರು: ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ಸರ್ಕಾರವು ರಾಜ್ಯದಲ್ಲಿ ಸುಮಾರು ಹತ್ತು ಲಕ್ಷಗಳ ಮನೆಗಳನ್ನು ನಿರ್ಮಿಸುವ ಮಹತ್ತರ ಗುರಿ ಹೊಂದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ನಗರದ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆದ್ಯತೆಗನುಸಾರವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು ಮೂರು ಲಕ್ಷ ಮನೆಗಳನ್ನು ನಿರ್ಮಿಸಿ ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗದ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.

    ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವವರ ಜೊತೆಗೆ ಸರ್ಕಾರ ಸದಾ ಇರುತ್ತದೆ. ಈಗಾಗಲೇ ಕೊರೊನಾ ಪರಿಹಾರವನ್ನೂ ಸಹ ಘೋಷಿಸಿದ್ದು, ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸರ್ಕಾರವು ಕೆಲವು ವರ್ಗಗಳಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಪತ್ರಕರ್ತರಿಗೂ ಇದೇ ರೀತಿ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂಬ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಅನೇಕ ಪತ್ರಕರ್ತರು ಸಂಕಷ್ಟದ ಸ್ಥಿತಿಯಲ್ಲಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಸಚಿವರ ಭೇಟಿ ಸಂದರ್ಭದಲ್ಲಿ ಸಂಸದ ಬಸವರಾಜ್, ಪಾಲಿಕೆ ಮೇಯರ್ ಕೃಷ್ಣಪ್ಪ, ನಗರ ಶಾಸಕ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಕುಂದರನಹಳ್ಳಿ ರಮೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

  • ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ, ಲಾಕ್‍ಡೌನ್ ಅವಶ್ಯವಿಲ್ಲ: ಸೋಮಣ್ಣ

    ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ, ಲಾಕ್‍ಡೌನ್ ಅವಶ್ಯವಿಲ್ಲ: ಸೋಮಣ್ಣ

    ದಾವಣಗೆರೆ: ಪ್ರಸ್ತುತ ಜೂನ್ 7ರ ವರೆಗೆ ಲಾಕ್‍ಡೌನ್ ಇದೆ. ಈ ಲಾಕ್‍ಡೌನ್ ಮುಗಿಯಲು ಇನ್ನೂ ಏಳೆಂಟು ದಿನಗಳು ಇವೆ. ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ, ಈಗಾಗಲೇ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಶೇ.10ಕ್ಕಿಂತ ಇಳಿಕೆಯಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಜಿಲ್ಲೆಯ ಹರಿಹರದಲ್ಲಿ ಮಾತನಾಡಿದ ಅವರು, ಅವಶ್ಯಕತೆ ಇದ್ದರೆ ಮಾತ್ರ ಜನ ಮನೆಯಿಂದ ಹೊರ ಬರಬೇಕು, ಜನರು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವ ವರೆಗೆ ಸೋಂಕು ಇರುತ್ತದೆ. ಲಾಕ್‍ಡೌನ್ ಮುಂದುವರಿಸಬೇಕು ಎನ್ನುವುದನ್ನು ಸಿಎಂ ಈಗಾಗಲೇ ಹೇಳಿದ್ದಾರೆ, ಅದಕ್ಕೆ ನಮ್ಮ ಸಹಮತ ಇದೆ. ಒಂದು ವಾರಗಳ ಕಾಲ ಮುಂದುವರಿಸಿದರೆ, ಬಳಿಕ ಲಾಕ್‍ಡೌನ್ ಅಗತ್ಯ ಅರ್ಥವಾಗುತ್ತದೆ ಎಂದು ಲಾಕ್‍ಡೌನ್ ವಿಸ್ತರಣೆ ಬಗ್ಗೆ ಮನೆ ಮಾಡಿದ್ದ ಗೊಂದಲಕ್ಕೆ ತೆರೆ ಎಳೆದರು.

    ಪದೇ ಪದೇ ಪೋಸ್ಟ್ ಮಾರ್ಟಂ ಮಾಡುವ ಅವಶ್ಯಕತೆ ಇಲ್ಲ, ಯಾರೋ ಮಾತನಾಡುತ್ತಾರೆ ಎಂದರೆ ಆಗಲ್ಲ, ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದರು.

    ಬಿಜೆಪಿ ದೊಡ್ಡ ಹಾಗೂ ಪಕ್ಷ ಶಿಸ್ತಿನ ಪಕ್ಷ, ಯಡಿಯೂರಪ್ಪನವರ ಬಗ್ಗೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ, ಪದೇ ಪದೇ ತೌಡು ಕುಟ್ಟುವ ಕೆಲಸ ಬೇಡ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ರಾಜ್ಯಾಧ್ಯಕ್ಷರು ಹೇಳಿದ್ದಾರೆ, ಅಧ್ಯಕ್ಷರಿಗಿಂತ ನಾವೇನು ದೊಡ್ಡವರಲ್ಲ, ಅಧ್ಯಕ್ಷರು ಏನು ಹೇಳಿದರೂ ಅದು ಆಗಲೇ ಬೇಕು ಎನ್ನುವುದು ಎಲ್ಲರ ಬಯಕೆ, ಹೈಕಮಾಂಡ್ ಪ್ರತಿಯೊಂದನ್ನೂ ಗಮನಿಸುತ್ತಿದೆ ಎಂದರು.

  • ಚೋಳನಗರದಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

    ಚೋಳನಗರದಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಚೋಳನಗರದ ರಾಜೀವ್‍ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದೊಂದಿಗೆ ಪರಿವರ್ತಿಸಲಾಗಿರುವ 100 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಸತಿ ಸಚಿವ ವಿ.ಸೋಮಣ್ಣನವರು ಇಂದು ಉದ್ಘಾಟಿಸಿದರು.

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, ಖಾಸಗಿ ಸಹಭಾಗಿತ್ವದೊಂದಿಗೆ ರಾಜೀವ್‍ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ನುರಿತ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಮತ್ತು ಆಧುನಿಕ ಸೌಲಭ್ಯದೊಂದಿಗೆ ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ದಿನದ ಇಪ್ಪತ್ತುನಾಲ್ಕು ಗಂಟೆಯೂ ಮೂರು ಪಾಳಿಯಲ್ಲಿ ಈ ಆಸ್ಪತ್ರೆ ಕೋವಿಡ್ ಸೋಂಕಿತರ ನೆರವಿಗೆ ಬರಲಿದೆ ಎಂದರು.

    ದಂತ ವೈದ್ಯಕೀಯ ಆಸ್ಪತ್ರೆಯನ್ನು 100 ಹಾಸಿಗೆಗಳ ಕೋವಿಡ್ ಆಸ್ಪತ್ರೆಯಾಗಿ ರೂಪಿಸಿರುವುದರಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ವರದಾನವಾಗಿ ಪರಿಣಮಿಸಲಿದೆ. ಆಸ್ಪತ್ರೆಯಲ್ಲಿ 15 ಹೆಚ್’ಬಿಯು/ಐಸಿಯು ಹಾಸಿಗೆಗಳು ತಕ್ಷಣಕ್ಕೆ ಲಭ್ಯವಿದೆಯಲ್ಲದೆ, 40 ಆಮ್ಲಜನಕ ಸೌಲಭ್ಯವನ್ನು ಒಳಗೊಂಡ ಹಾಸಿಗೆಗಳು ಸೋಂಕಿತರ ಸೇವೆಗೆ ಸಜ್ಜಾಗಿವೆ. ರಕ್ತ ಪರೀಕ್ಷೆ, ಕ್ಷಕಿರಣ ಸೌಲಭ್ಯದಂತಹ ವ್ಯವಸ್ಥೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಒಂದೆರಡು ದಿನಗಳಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಸ್ಥಳೀಯ ಶಾಸಕರಾದ ಶ್ರೀ ಭೈರತಿ ಸುರೇಶ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ವೇದಾ ಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

  • ಬಡವರು, ಕೂಲಿ ಕಾರ್ಮಿಕರ ಬಗ್ಗೆ ಸಿಎಂ ಶೀಘ್ರವೇ ತೀರ್ಮಾನ ಮಾಡಲಿದ್ದಾರೆ: ಸೋಮಣ್ಣ

    ಬಡವರು, ಕೂಲಿ ಕಾರ್ಮಿಕರ ಬಗ್ಗೆ ಸಿಎಂ ಶೀಘ್ರವೇ ತೀರ್ಮಾನ ಮಾಡಲಿದ್ದಾರೆ: ಸೋಮಣ್ಣ

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಡವರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

    ಇಂದು ಗೋವಿಂದರಾಜನಗರ ಬಿಜಿಎಸ್ ಗ್ರೌಂಡ್ ನಲ್ಲಿ ಬಾಲಗಂಗಾಧರನಾಥ ಕಂಚಿನ ಪ್ರತಿಮೆ ಅನಾವರಣ ಮಾಡಿ ಬಳಿಕ ಮಾತನಾಡಿದ ಸಚಿವರು, ನಗರಕ್ಕೆ 60 ಸಾವಿರ ವ್ಯಾಕ್ಸಿನ್ ಬಂದಿದೆ. ಇಂದು ವ್ಯಾಕ್ಸಿನ್‍ಗೆ ತೊಂದರೆ ಆಗಲ್ಲ. ಎರಡು ದಿನಗಳಲ್ಲಿ ವ್ಯಾಕ್ಸಿನ್ ಸಮಸ್ಯೆ ಬಗೆಹರಿಯಲಿದೆ. ಜನರು ಅಸಡ್ಡೆ ಮಾಡಿದ್ರು. ಈಗ ಬೇಡಿಕೆ ಮಾಡ್ತಾ ಇದ್ದಾರೆ. ತಜ್ಞರ ಸಮಿತಿ ಈಗ ಸಲಹೆ ನೀಡಿದೆ ಎಂದರು.

    ಲಸಿಕೆ ವಿಚಾರವಾಗಿಯೂ ನಮ್ಮ ಅನುಭವನದ ಪ್ರಕಾರ ಲೆಕ್ಕಚಾರ ಸರಿ ಆಗಲಿಲ್ಲ. ಈ ಬಾರಿ ಲಾಕ್‍ಡೌನ್ ವಿಭಿನ್ನ ಆಗಿದೆ. ಅಕ್ಕಿ ಕೊಡಲು ನ್ಯಾಯ ಬೆಲೆ ಅಂಗಡಿಗೆ ಸೂಚನೆ ಇದೆ. ವ್ಯಾಪಾರ ಮಾಡಲು ತರಕಾರಿ, ಹಾಲಿಗೆ ಅವಕಾಶ ಇದೆ. ಹಾಗೆಯೇ ಬಡವರು ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಸಿಎಂ ಶೀಘ್ರವೇ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.

    ಲಸಿಕೆ ಇಲ್ಲ ಸಾಯಬೇಕಾ ಎಂಬ ಸದಾನಂದಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೊಂದು ಬಾರಿ ಉದ್ವೇಗ ಆಗುವುದು ಸಹಜ. ಸಿಎಂ ಆಗಿದ್ದವರು ಈ ರೀತಿ ಮಾತನಾಡಲ್ಲ. ಲೋಕರೂಢಿಯಾಗಿ ಮಾತನಾಡಿ ಸಮಸ್ಯೆ ಮಾಡಿಕೊಳ್ಳಲ್ಲ. ಅವರು ಮಾತನಾಡಿರುವ ಬಗ್ಗೆ ನಾನೇ ಕ್ಷಮೆ ಕೇಳುವೆ ಎಂದರು.

    ಇಂದು ಬಸವ ಜಯಂತಿಯಾಗಿದ್ದು, ಜಗತ್ತಿಗೆ ಪ್ರೇರಣೆ ನೀಡುವ ಗುರುಗಳು. ಬಾಲಗಂಗಾಧರ ನಾಥ ಸ್ವಾಮೀಜಿಗಳ ಪುತ್ಥಳಿ ಬದಲಾವಣೆ ಮಾಡಿ ಹೊಸದಾದ ಪುತ್ಥಳಿ ಅನಾವರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮ ಬೇಕಿತ್ತಾ..? ಪರಿಸ್ಥಿತಿ ಗಂಬೀರತೆ ನನಗೆ ಅರ್ಥ ಆಗಿದೆ. ಇವತ್ತು ಸಾಂಕೇತಿಕವಾಗಿ ಮಾಡಿದ್ದಿವಿ. ಆದರೂ ಜನರು ಬಂದಿದ್ದಾರೆ. ನೋವಿನ ಮಧ್ಯೆ ಪುತ್ಥಳಿ ಅನಾವರಣ ಮಾಡಲೇಬೇಕಿತ್ತು ಎಂದು ಸಚಿವರು ಹೇಳಿದರು.

  • ಕೊಡಗಿನಲ್ಲಿ ಅಗತ್ಯ ವಸ್ತುಗಳ ಖರೀದಿ ದಿನದಲ್ಲಿ ಬದಲಾವಣೆ: ವಿ.ಸೋಮಣ್ಣ

    ಕೊಡಗಿನಲ್ಲಿ ಅಗತ್ಯ ವಸ್ತುಗಳ ಖರೀದಿ ದಿನದಲ್ಲಿ ಬದಲಾವಣೆ: ವಿ.ಸೋಮಣ್ಣ

    ಮಡಿಕೇರಿ: ಕೊಡಗಿನಲ್ಲಿ ಅಗತ್ಯ ವಸ್ತುಗಳ ಖರೀದಿ ದಿನದಲ್ಲಿ ಸಚಿವ ವಿ.ಸೋಮಣ್ಣ ಬದಲಾವಣೆ ತಂದಿದ್ದಾರೆ.

    ಕೋವಿಡ್ ನಿಯಂತ್ರಣ ಮಾಡುವುದಕ್ಕೆ ಈ ಹಿಂದೆ ಜಿಲ್ಲಾಡಳಿತ ಜನ ಸಾಮಾನ್ಯರಿಗೆ ಅಗತ್ಯವಸ್ತುಗಳನ್ನು ಕೊಂಡುಕೊಳ್ಳುಲು ವಾರದಲ್ಲಿ ಎರಡು ಅವಕಾಶ ಮಾಡಿಕೊಡಲಾಗಿತ್ತು. ಮಂಗಳವಾರ ಹಾಗೂ ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಅವಕಾಶ ನೀಡಲಾಗಿತ್ತು. ಅದರೆ ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ನಿರ್ಧಾರ ಮಾಡಿ ಇನ್ಮುಂದೆ ಕೊಡಗಿನಲ್ಲಿ ಸೋಮವಾರ ಮತ್ತು ಶುಕ್ರವಾರ ಮಾತ್ರ ಜನರು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಲಾಗುವುದು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

    ಇನ್ನೂ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಮೆಡಿಕಲ್ ಕಾಲೇಜಿನಲ್ಲಿ 50 ಬೆಡ್ ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಳ್ಳಲಾಯಿತು. ಕೊಡಗು ಜಿಲ್ಲೆಗೆ ಅಗತ್ಯವಿರುವ ವೈದ್ಯರು, ದಾದಿಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ವಿರಾಜಪೇಟೆ ಕೋವಿಡ್ ಆರೈಕೆ ಕೇಂದ್ರದಲ್ಲಿ 51 ಆಕ್ಸಿಜನ್ ಬೆಡ್ ಗಳು ಈಗ ಇದೆ. ಹೆಚ್ಚುವರಿಯಾಗಿ 31 ಬೆಡ್ ಗಳನ್ನು ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ರು.

  • ಹೋಮ್ ಐಸೋಲೇಶನಲ್ಲಿರುವ ಸೋಂಕಿತರ ಆರೋಗ್ಯ, ಚಲನವಲನಗಳ ಮೇಲೆ ನಿಗಾ ಇಡಿ: ಸೋಮಣ್ಣ

    ಹೋಮ್ ಐಸೋಲೇಶನಲ್ಲಿರುವ ಸೋಂಕಿತರ ಆರೋಗ್ಯ, ಚಲನವಲನಗಳ ಮೇಲೆ ನಿಗಾ ಇಡಿ: ಸೋಮಣ್ಣ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿವೆ. ಹೀಗಾಗಿ ಕೊಡಗಿನಲ್ಲಿ ಉಲ್ಬಣಿಸಲಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

    ಈಗಾಗಲೇ ಜಿಲ್ಲೆಯಲ್ಲಿ ನಿತ್ಯ 250 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಸಾವಿರ ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 80 ಜನರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಉಳಿದ ಎಲ್ಲರನ್ನೂ ಹೋಮ್ ಐಸೋಲೇಷನ್ ಮಾಡಲಾಗಿದೆ. ಆದರೆ ಹೋಮ್ ಐಸೋಷನ್ ನಲ್ಲಿ ಇರುವ ಕೋವಿಡ್ ರೋಗಿಗಳ ಆರೋಗ್ಯದ ಬಗ್ಗೆ ಸರಿಯಾದ ಮೇಲ್ವಿಚಾರಣೆ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿಬಂದಿದ್ದು, ಅಂತಹ ಪ್ರತಿಯೊಬ್ಬರ ಆರೋಗ್ಯದ ಸ್ಥಿತಿ ಹೇಗಿದೆ ಎನ್ನುವ ಕುರಿತು ಮಾಹಿತಿ ನೀಡುವಂತೆ ಸಚಿವ ಸೋಮಣ್ಣ ಸಭೆಯಲ್ಲೇ ಸೂಚಿಸಿದರು.

    ಸರಿಯಾದ ಮಾಹಿತಿ ಸಿಗದಿದ್ದಾಗ, ಜಿಲ್ಲೆಯ ಐದು ತಾಲೂಕಿನ ತಹಶೀಲ್ದಾರ್ ಗಳ ನೇತೃತ್ವದಲ್ಲಿ ಹೆಲ್ಪ್ ಲೈನ್ ತೆರೆದು ತಕ್ಷಣವೇ ಕೋವಿಡ್ ಸೋಂಕಿತರ ಆರೋಗ್ಯ ಮತ್ತು ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೆ ಜಿಲ್ಲೆಯಲ್ಲಿರುವ ಆಕ್ಸಿಜನ್ ಪೂರೈಕೆ ಮತ್ತು ಆಕ್ಸಿಜನ್ ಬೆಡ್‍ಗಳು ಎಷ್ಟಿವೆ ಎಂಬ ಮಾಹಿತಿಯನ್ನು ಸಚಿವ ಸೋಮಣ್ಣ ಕೇಳಿದರು. ತಾಲೂಕು, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೇರ್ ಸೆಂಟರ್ ಗಳಲ್ಲೂ 300 ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. 24 ವೆಂಟಿಲೇಟರ್ ಸಿದ್ಧ ಇವೆ ಎಂದು ಕೊಡಗು ಡಿಎಚ್‍ಓ ಮಾಹಿತಿ ನೀಡಿದರು.

    ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವ ಎಲ್ಲರಿಗೂ ಪಾಸಿಟಿವ್ ಬರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಳವಾಗಲಿವೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಜಿಲ್ಲೆಯಲ್ಲಿರುವ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಿತ್ಯ ಕನಿಷ್ಟ 100 ಜನರ ಕೋವಿಡ್ ಟೆಸ್ಟ್ ಮಾಡಬೇಕು ಮತ್ತು ವ್ಯಾಕ್ಸಿನ್ ವಿತರಣೆ ಮಾಡುವಂತೆ ಸೂಚಿಸಿದರು. 32 ಇಲಾಖೆಗಳ ಅಧಿಕಾರಿಗಳನ್ನು ಎಡಿಸಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಕೋವಿಡ್ ನಿರ್ವಹಣೆಗೆ ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

    ಕೋವಿಡ್ ವಿಚಾರದಲ್ಲೂ ರಾಜಕಾರಣ ಬೇಡ

    ಕೋವಿಡ್ ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋತಿವೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕಾರಣ ಮಾಡುವುದನ್ನು ಬಿಡಲಿ. ಕೋವಿಡ್ ನಿಭಾಯಿಸುವಲ್ಲಿ ನಾವು ಸೋತಿದ್ದೇವೆ ಎನ್ನುವುದಾದರೆ, ಅವರದ್ದೇ ಸರ್ಕಾರವಿರುವ ಪಂಜಾಬ್ ನಲ್ಲಿ ಯಾಕೆ ಅವರಿಗೆ ಕೋವಿಡ್ ನಿಯಂತ್ರಿಸಲು ಆಗಿಲ್ಲ. ಅಲ್ಲಿ ಕನಿಷ್ಟ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಬರುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸ್ಥಿತಿ ಏನಾಗಿದೆ, ದೆಹಲಿಯಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ? ಮೊದಲು ಅವರ ಕಾರ್ಯಕ್ರಮಗಳಲ್ಲಿ ಸರಿಯಾಗಿ ಕೋವಿಡ್ ನಿಯಮಗಳನ್ನು ಪಾಲಿಸುವುದನ್ನು ಕಲಿತುಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.

  • ಜ್ಞಾನ ದೀವಿಗೆ- ಕೊಡಗಿನ 471 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಜ್ಞಾನ ದೀವಿಗೆ- ಕೊಡಗಿನ 471 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

    ಮಡಿಕೇರಿ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಜ್ಞಾನ ದೀವಿಗೆ ಕಾರ್ಯಕ್ರಮದ ಮೂಲಕ ಕೊಡಗು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ 471 ಉಚಿತ ಟ್ಯಾಬ್ ವಿತರಿಸಲಾಯಿತು.

    ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಬ್ಯಾಂಕ್ ನೋಟ್ ಪೇಪರ್ ಮೀಲ್ ವ್ಯವಸ್ಥಾಪಕ ಅನಂತ್ ಹೆಗ್ಡೆ, ಬ್ಯಾಂಕ್ ನೋಟ್ ಪೇಪರ್ ಮಿಲ್ ಕಂಪನಿ ಸೆಕ್ರೆಟರಿ ಲಕ್ಷ್ಮೀಶ್ ಬಾಬು, ರೋಟೆರಿಯನ್ ಗಣಪತಿ ಹಾಗೂ ಸುದೀಪ್ ಅವರು ಟ್ಯಾಬ್ ಗಳನ್ನು ವಿತರಿಸಿದರು. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗಿರುವುದರಿಂದ ಕೇವಲ 10 ಮಕ್ಕಳಿಗೆ ಸಾಕೇಂತಿಕವಾಗಿ ಟ್ಯಾಬ್ ವಿತರಿಸಲಾಯಿತು.

    ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ಟ್ಯಾಬ್ ಕಂಡು ಖುಷಿ ಪಟ್ಟರು. ದಿನೇ ದಿನೇ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದರಿಂದ ಶಾಲೆಗಳಿಗೆ ಹೋಗಲು ಭಯ ಪಡುವ ಪರಿಸ್ಥಿತಿ ಇದೆ. ಆನ್‍ಲೈನ್ ತರಗತಿಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ವರ್ಷದ ಪರೀಕ್ಷೆ ಹೇಗೆ ಬರೆಯುವುದು ಎಂಬ ಚಿಂತೆ ಕಾಡುತ್ತಿತ್ತು. ಈಗ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಆರ್ ಬಿಐ ಅವರ ಸಹಾಯದಿಂದ ಟ್ಯಾಬ್ ನೀಡಿರುವುದು ಸಹಾಯವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತಾನಾಡಿ, ಮಕ್ಕಳ ಭವಿಷ್ಯದ ಚಿಂತನೆ ಮಾಡಿದ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಮಾಧ್ಯಮ ಮನಸು ಮಾಡಿದರೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಬಹುದು. ಈ ನಿಟ್ಟಿನಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಅರ್.ರಂಗನಾಥ್ ಅವರು ಮಾಡುತ್ತಿರುವ ಸೇವೆ ಇತಿಹಾಸದ ಪುಟದಲ್ಲಿ ಸೇರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.