Tag: V.Somanna

  • ಖಾತೆ ಹಂಚಿಕೆ ಸಿಎಂ ಪರಮಾಧಿಕಾರ, ವಸತಿ ಖಾತೆ ಮತ್ತೆ ನಿಭಾಯಿಸುತ್ತೇನೆ: ವಿ.ಸೋಮಣ್ಣ

    ಖಾತೆ ಹಂಚಿಕೆ ಸಿಎಂ ಪರಮಾಧಿಕಾರ, ವಸತಿ ಖಾತೆ ಮತ್ತೆ ನಿಭಾಯಿಸುತ್ತೇನೆ: ವಿ.ಸೋಮಣ್ಣ

    ರಾಯಚೂರು: ಖಾತೆ ಹಂಚಿಕೆ ಸಿಎಂ ಪರಮಾಧಿಕಾರ, ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ವಸತಿ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ರಾಯಚೂರಿನಲ್ಲಿ ಹೇಳಿದ್ದಾರೆ.

    ಜಿಲ್ಲೆಯ ಪ್ರವಾಹ ಪರಿಸ್ಥಿತಿ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆಗೆ ರಾಯಚೂರಿಗೆ ಆಗಮಿಸಿರುವ ನೂತನ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಬಳಿಕ ಮಾತನಾಡಿ, ನನಗೆ ವಸತಿ ಖಾತೆ ಹೊಸದಲ್ಲ. ಕೊಟ್ಟ ಖಾತೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕು. ಯಾವುದೇ ಖಾತೆ ನೀಡಿದರು ಕೂಡ ಆ ಖಾತೆಗೆ ನಾವು ಶಕ್ತಿ ತುಂಬಬೇಕು ಎಂದರು. ಇದನ್ನೂ ಓದಿ: ಸಿಕ್ಕ ಖಾತೆಯಲ್ಲಿ ‘ಆನಂದ’ವಿಲ್ಲ – ಸಚಿವ ಆನಂದ್ ಸಿಂಗ್ ಅಸಮಾಧಾನ

    ನನಗೆ ಬಂಧಿಖಾನೆ ಖಾತೆ ಕೊಟ್ಟಾಗ ನಾನು ಕೆಲಸ ಮಾಡಿದ್ದೇನೆ. ಅದನ್ನು ಸಮರ್ಥವಾಗಿ ಎದುರಿಸಿ ಅಭಿವೃದ್ದಿ ಮಾಡಿದ್ದೇನೆ. ಖಾತೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ವಸತಿ ಖಾತೆಯನ್ನು ನಾನು ಮತ್ತೆ ನಿಭಾಯಿಸುತ್ತೇನೆ. ಖಾತೆ ಬಗ್ಗೆ ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಸೋಮಣ್ಣ, ಆನಂದ್ ಸಿಂಗ್ ನನ್ನ ಸಹೋದರ ಅವರ ಜೊತೆ ನಾನು ಮಾತನಾಡುತ್ತೇನೆ. ಯಾವುದೋ ಸಂದರ್ಭದಲ್ಲಿ ಮಾತನಾಡಿ ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ನಮ್ಮ ಜೊತೆ ಅವರನ್ನೂ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

    ಕೋವಿಡ್ ಹಾಗೂ ಪ್ರವಾಹದ ಕುರಿತು ಪರಿಸ್ಥಿತಿ ಅವಲೋಕಿಸಿ ಸಭೆ ನಡೆಸಲು ಸಿಎಂ ಸೂಚಿಸಿದ್ದಾರೆ. ಜಿಲ್ಲೆಯಲ್ಲಿನ ಪರಿಸ್ಥಿತಿ ಅವಲೋಕಿಸಲು ಬಂದಿದ್ದೇನೆ. ಎರಡು ದಿನ ನಾನು ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತೇನೆ. ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗ್ಗೆ ಪರಾಮರ್ಶಿಸುತ್ತೇನೆ ಎಂದು ಸೋಮಣ್ಣ ಎಂದರು.

  • ಅಶೋಕ್ ಜೊತೆ ವೈಮನಸ್ಸು ಇಲ್ಲ- ವಿ ಸೋಮಣ್ಣ

    ಅಶೋಕ್ ಜೊತೆ ವೈಮನಸ್ಸು ಇಲ್ಲ- ವಿ ಸೋಮಣ್ಣ

    – ಅಣ್ಣ, ತಮ್ಮ ಕಿತ್ತಾಡೋದು ಸಹಜ

    ಬೆಂಗಳೂರು: ಮಾಜಿ ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಮಧ್ಯೆ ಜಟಾಪಟಿ ವಿಚಾರವಾಗಿ ಪಬ್ಲಿಕ್ ಟಿವಿಗೆ ಮಾಜಿ ಸಚಿವ ವಿ ಸೋಮಣ್ಣ, ಏನೂ ಆಗಿಲ್ಲ, ಅಶೋಕ್ ಜೊತೆ ವೈಮನಸ್ಸು ಇಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

    ಪಬ್ಲಿಕ್ ಟವಿ ಜೊತೆಗೆ ಮಾತನಾಡಿದ ಅವರು, ನಾನು ಮಾತಾಡಿದ್ದು ಯಾವುದೋ ಕಾಲದಲ್ಲಿ. ಅನೇಕ ಸಲ ನನ್ನದೇ ಆದ ದೃಷ್ಟಿಕೋನದಲ್ಲಿರ್ತೇನೆ. ನಾನು ರಾಜಕೀಯಕ್ಕೆ ಬಂದಾಗ ಅಶೋಕ್ ಇನ್ನೂ ಮಂತ್ರಿ ಆಗಿರ್ಲಿಲ್ಲ, ಕೆಲವೊಂದು ವೇಳೆ ಕೆಲವು ವಿಚಾರ ಹೇಳಬೇಕಾಗುತ್ತದೆ. ಹೇಳಿದೀನಿ ಅಷ್ಟೇ. ಅಶೋಕ್ ಜತೆ ವೈಮನಸ್ಯ ಇಲ್ಲ. ನಾನು ರಾಜಕಾರಣ ಶುರು ಮಾಡಿ ಐವತ್ತು ವರ್ಷ ಆಯ್ತು, ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಜವಾಬ್ದಾರಿ ಕೊಟ್ರೆ ನಿಭಾಯಿಸ್ತೇನೆ ಎಂದು ತಿಳಿಸಿದ್ದಾರೆ.

    ಅಧಿಕಾರ ಕೊಡೋದು ಸಿಎಂ, ವರಿಷ್ಠರ ಪರಮಾಧಿಕಾರವಾಗಿದೆ. ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಬಿಜೆಪಿಗೆ ಬಂದು 12 ವರ್ಷ ಆಗಿದೆ. ನಾನು ದೆಹಲಿಗೆ ಹೋಗಲ್ಲ, ಅದರ ಅಗತ್ಯ ಇಲ್ಲ, ಮಂತ್ರಿಯಾದ ಮೇಲೆ ಒಂದೇ ಸಲ ದೆಹಲಿಗೆ ಹೋಗಿದ್ದು, ಅಶೋಕ್ ಜತೆ ಇದ್ದ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಮಾತಾಡಿದೀನಿ. ಅಶೋಕ್ ಜತೆ ವೈಮನಸ್ಸು ತಿಳಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ

    ಅಣ್ಣತಮ್ಮ ಕಿತ್ತಾಡೋದು ಸಹಜವಾಗಿದೆ. ಸಚಿವ ಸಂಪುಟ ಸಂದರ್ಭದಲ್ಲ ಇದು ಒಂದು ವರ್ಷದ ಹಿಂದೆ ಅಶೋಕ್ ಜತೆ ಫೋನಿನಲ್ಲಿ ಮಾತಾಡಿದ್ದಾಗಿದೆ. ಈಗ ಮಾತಾಡಿದ್ದಲ್ಲ, ನನ್ನ ಅಶೋಕ್ ಮಧ್ಯೆ ಆಸ್ತಿ ಪಾಸ್ತಿ ಜಗಳ ಇಲ್ಲ. ಅಶೋಕ್ ಜತೆ ಮಾತಾಡಿದ್ದು ಯಾವಾಗಲೋ ಆಗಿದೆ. ನನ್ನ ಅಶೋಕ್ ಮಧ್ಯೆ ವೈಯಕ್ತಿಕ ದ್ವೇಷ ಇಲ್ಲ, ನನ್ನ ಅಶೋಕ್ ಸ್ನೇಹ 35 ವರ್ಷ ಹಳೇಯದಾಗಿದೆ. ಯಾವುದೋ ಸಂದರ್ಭದಲ್ಲಿ ಅಶೋಕ್ ಜೊತೆ ಮಜಾಕ್ಕಾಗಿ ಹೀಗೆ ಮಾತಾಡಿದ್ದೆ. ಅದನ್ನೇ ನೀವು ನಮ್ಮಿಬ್ಬರ ಮಧ್ಯೆ ಹುಳಿ ಹಿಂಡೋದು ಬೇಡ ಎಂದು ಅಶೋಕ್ ಜತೆ ಫೋನ್ ಕರೆ ವಿಚಾರಕ್ಕೆ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭದ ಆತಂಕ- ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ

    ಜಗದೀಶ್ ಶೆಟ್ಟರ್ ನಿರ್ಧಾರ ನಾನು ಸ್ವಾಗತಿಸುತ್ತೇನೆ. ಶೆಟ್ಟರ್ ರಾಷ್ಟ್ರಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗಲೇ ಶೆಟ್ಟರ್ ಅವರಿಗೆ ಸಲಹೆ ಕೊಟ್ಟಿದ್ದೆ. ನೀವು ಹಿರಿಯರು, ಸಿಎಂ ಆಗಿದ್ದವರು ಸಚಿವರಾಗೋದು ಸರಿಯಲ್ಲ ಅಂತ ಆಗಲೇ ಸಲಹೆ ಶೆಟ್ಟರ್ ಅವರಿಗೆ ಕೊಟ್ಟಿದ್ದೆನೆ. ಕೆಲವು ಸಂದರ್ಭದಲ್ಲಿ ಕೆಲವು ವಿಚಾರ ನಾನು ನಿಷ್ಠುರವಾಗಿ ಹೇಳ್ತೀನಿ, ಶೆಟ್ಟರ್ ಇವತ್ತು ಕೈಗೊಂಡ ನಿರ್ಧಾರವನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಕೈಗೊಳ್ಳಿ ಅಂದಿದ್ದೆ. ಯಡಿಯೂರಪ್ಪ ಮುತ್ಸದ್ಧಿ, ತಮಗಿಂತ ಹಿರಿಯರು ಅಂತ ಶೆಟ್ಟರ್ ಮಂತ್ರಿಯಾದರು. ಉಳಿದ ಹಿರಿಯರ ವಿಚಾರ ಹೈಕಮಾಂಡ್ ನೋಡ್ಕೊಳ್ಳುತ್ತದೆ. ಹಿರಿಯರೂ ಇರ್ಬೇಕು, ಕಿರಿಯರೂ ಇರ್ಬೇಕು ಬೊಮ್ಮಾಯಿ ನಾನು ಆತ್ಮೀಯರು, ಪಟೇಲರ ಸರ್ಕಾರದಲ್ಲಿ ನಾನು ಮಂತ್ರಿ ಆಗಿದ್ದೆ. ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಬೊಮ್ಮಾಯಿಯವರಿಗೆ ನಮ್ಮ ಸಹಕಾರ ಇರುತ್ತದೆ ಎಂದಿದ್ದಾರೆ.

  • 70 ನೇ ವಸಂತಕ್ಕೆ ಕಾಲಿಟ್ಟ ವಿ.ಸೋಮಣ್ಣ-ಗುಡಿಸಲು ಮುಕ್ತ ರಾಜ್ಯ ಮಾಡೋದೆ ನನ್ನ ಗುರಿ

    70 ನೇ ವಸಂತಕ್ಕೆ ಕಾಲಿಟ್ಟ ವಿ.ಸೋಮಣ್ಣ-ಗುಡಿಸಲು ಮುಕ್ತ ರಾಜ್ಯ ಮಾಡೋದೆ ನನ್ನ ಗುರಿ

    ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕ ವಸತಿ ಸಚಿವ ವಿ ಸೋಮಣ್ಣ ಅವರು ಇಂದು 70 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ವಿಜಯನಗರದ ಶಾಸಕರ ಕಛೇರಿ ಮುಂಭಾಗದಲ್ಲಿ ಸರಳವಾಗಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಸಿಕೊಂಡಿದ್ದಾರೆ.  ಇದನ್ನೂ ಓದಿ: ನಾಯಕತ್ವ ಬದಲಾವಣೆ ಚರ್ಚೆ ನಮ್ಮಲ್ಲಿ ಆಗಿರುವುದು ನಿಜ: ಈಶ್ವರಪ್ಪ

    ಬಳಿಕ ಮಾತನಾಡಿದ ಅವರು, ಈ ಬಾರಿ ಹುಟ್ಟು ಹಬ್ಬ ಸಂಭ್ರಮ ಇಲ್ಲ. ಸಿದ್ದಗಂಗಾ ಶ್ರೀಗಳಾದ ಶಿವಕುಮಾರ್ ಸ್ವಾಮೀಜಿಗಳು ಮತ್ತು ಬಾಲಗಂಗಾಧರ ನಾಥ ಸ್ವಾಮಿಜಿ ಲಿಂಗೈಕ್ಯರಾದ ಮೇಲೆ ಆಚರಣೆ ನಿಲ್ಲಿಸಿದ್ದೇನೆ. ನಿನ್ನೆ ರಾತ್ರಿ ಸ್ಥಳೀಯ ಮುಖಂಡರು ಸಣ್ಣದೊಂದು ಪ್ರಚಾರ ಕೊಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಸಿದ್ದಗಂಗೆ ಶ್ರೀಗಳು ನನ್ನ ಹುಟ್ಟುಹಬ್ಬಕ್ಕೆ ಬರ್ತಾ ಇದ್ದರು. ಅವರು ಲಿಂಗೈಕ್ಯರಾದ ಮೇಲೆ ಅವರು ಇಲ್ಲ ಅನ್ನೊ ನೋವು ಕಾಡಬಾರದೆಂದು ಹುಟ್ಟುಹಬ್ಬ ಆಚರಣೆ ಮಾಡೋದು ನಿಲ್ಲಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ನಾನು ಮಂತ್ರಿಯಾಗಬೇಕೆಂದು ಬಿಜೆಪಿಗೆ ಬಂದವನಲ್ಲ: ಮಹೇಶ್ ಕುಮಟಳ್ಳಿ

    ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಜನ ಬರುತ್ತಾರೆ. ಇವತ್ತು ಬೇಡ ಅಂತ ಹೇಳಿದ್ದರು ಜನ ಬರುತ್ತಿದ್ದಾರೆ. ಕೊರೊನಾದಿಂದ ರಾಜ್ಯ ತತ್ತರಿಸಿದೆ. ಸಾಮಾಜಿಕ ಅಂತರದ ಬಗ್ಗೆ ನಾವೇ ಹೇಳ್ತೇವೆ. ಮತ್ತೆ ನಾವೇ ಆ ತಪ್ಪು ಆಗೋದು ಬೇಡ ಅಂತ ಕೆಲವು ವಿಷಯಗಳಿಗೆ ಕಡಿವಾಣ ಹಾಕಿದ್ದೆ. ಆದರೂ ಈ ರೀತಿ ಜನ ಬರ್ತಿದ್ದಾರೆ ಇದು ನನ್ನ ಮನಸ್ಸಿಗೂ ನೋವಾಗಿದೆ .ಮಾಧ್ಯಮಗಳ ಮುಖಾಂತರ ಸಾರ್ವಜನಿಕರನ್ನ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧಾರಾವಾಹಿ ನಟಿ ಚೈತ್ರಾ ರೈ ಸೀಮಂತ

    ನಾಲ್ಕು ದಶಕಗಳು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದೇನೆ, ಇರುವಷ್ಟು ದಿನ ಏನಾದರೂ ಮಾಡುವ ಆಸೆ ಇದೆ. ಗುಡಿಸಲಿನಲ್ಲಿ ವಾಸ ಮಾಡುವವರಿಗೂ ಮನೆ ಕಲ್ಪಿಸಲು ಮುಖ್ಯಮಂತ್ರಿಗಳು ನನಗೊಂದು ಅವಕಾಶ ಕೊಟ್ಟಿದ್ದಾರೆ. ಅದರಂತೆ ನಡೆಯುತ್ತೇನೆ. ಇದರ ಜೊತೆಗೆ ಮತ್ತೆ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಇದೆ. ಎಲ್ಲರು ಕೊರೊನಾ ನಿಯಮಗಳನ್ನ ಪಾಲಿಸಿ, ಕರ್ತವ್ಯ ನಿರ್ವಹಣೆ ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡೋಣ ಎಂದು ಕರೆ ನೀಡಿದ್ದಾರೆ.

     

  • ಸೂರಿಲ್ಲದ ಎಲ್ಲಾ ವರ್ಗದ ಜನರಿಗೂ ಮನೆ ಭಾಗ್ಯ: ಸಚಿವ ವಿ.ಸೋಮಣ್ಣ

    ಸೂರಿಲ್ಲದ ಎಲ್ಲಾ ವರ್ಗದ ಜನರಿಗೂ ಮನೆ ಭಾಗ್ಯ: ಸಚಿವ ವಿ.ಸೋಮಣ್ಣ

    ಚಿತ್ರದುರ್ಗ: ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕ್ರೀಡಾಂಗಣದಲ್ಲಿ ದೇವರಾಜ ಅರಸು ವಸತಿ ಯೋಜನೆಯಡಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ 4,448 ಮನೆಗಳಿಗೆ ಮಂಜೂರಾತಿ ಆದೇಶ ನೀಡಿ ಮಾತನಾಡಿದರು. ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಯಾರಿಗೆ ಸೂರಿಲ್ಲ ಅಂತಹ ಎಲ್ಲಾ ಜನಾಂಗದವರನ್ನು ಗುರತಿಸಿ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ಇದಕ್ಕಾಗಿ ಎಲ್ಲಾ ತಹಶೀಲ್ದಾರರು ಸ್ಥಳವನ್ನು ಗುರುತಿಸಿ ನಿವೇಶನ ನೀಡುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

    ಹಿರಿಯೂರು ಕ್ಷೇತ್ರದಲ್ಲಿ ಹೆಚ್ಚು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿದ್ದು ಇವರಿಗೆ ಸೂರನ್ನು ಕಲ್ಪಿಸಲು 4,448 ಜನರಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಮಂಜೂರಾತಿ ಆದೇಶ ನೀಡಲಾಗುತ್ತಿದೆ. ಇದಲ್ಲದೆ ಹಿರಿಯೂರು ಪಟ್ಟಣದಲ್ಲಿ ವಾಸಿಸುವವರಿಗೂ ಸುಮಾರು 3 ಸಾವಿರದಷ್ಟು ಮನೆಗಳನ್ನು ನೀಡಲಾಗುತ್ತಿದೆ. ಇಂತಹ ಬಡವರಿಗೆ ವಸತಿ ನೀಡಲಾಗುತ್ತಿರುವುದು ಬಹಳ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ:  ಬೆಳ್ಳಂದೂರು ಡಿನೋಟಿಫಿಕೇಷನ್ ಕೇಸ್: ಸಿಎಂ ಯಡಿಯೂರಪ್ಪಗೆ ಸಂಕಷ್ಟ

    ಈಗ ಮಂಜೂರಾತಿ ನೀಡಿರುವ ಮನೆಗಳ ನಿರ್ಮಾಣವನ್ನು ಆರು ತಿಂಗಳಲ್ಲಿ ಮುಕ್ತಾಯ ಮಾಡಬೇಕಾಗಿದ್ದು, ಇದಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಈ ತಾಲ್ಲೂಕನ್ನು ದತ್ತುಪಡೆದು ಯೋಜನೆಯಡಿ ಮಂಜೂರಾದ ಎಲ್ಲಾ ಮನೆಗಳನ್ನು ನಿಗಧಿತ ಅವಧಿಯಲ್ಲಿ ಮುಕ್ತಾಯ ಮಾಡಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಈ ಹಿಂದೆ ಬಸವ ವಸತಿ ಯೋಜನೆಯಡಿ ಮಂಜೂರಾತಿ ನೀಡಲಾಗಿದ್ದ ಮನೆಗಳಿಗೆ ವಿವಿಧ ಹಂತದ ಕಂತುಗಳನ್ನು ಬಿಡುಗಡೆ ಮಾಡಲಾಗಿರುವುದಿಲ್ಲ. ಆದರೆ ಯಾವ ಮನೆಗಳಿಗೆ ಸರಿಯಾದ ದಾಖಲೆ ಇದೆ, ಅದನ್ನು ವಿಷಲ್ ಆಪ್ಯ್‍ನಲ್ಲಿ ಅಪ್‍ಲೋಡ್ ಮಾಡಿದ 2 ನಿಮಿಷದಲ್ಲಿ ವಿವಿಧ ಹಂತದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನು ಯಾರು ಸಹ ತಡೆಹಿಡಿದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸರ್ಕಾರ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಅನುಕೂಲವಾಗಲೆಂದು ನೊಂದಣಿ ಇಲಾಖೆಯಲ್ಲಿ ಸಾಮಾನ್ಯರಿಗೆ 2 ಸಾವಿರ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ 1 ಸಾವಿರ ಕ್ರಯಪತ್ರ ಶುಲ್ಕ ಭರಿಸಿದಲ್ಲಿ ಕ್ರಯಪತ್ರವನ್ನು ಮಾಡಿಕೊಡಲಾಗುತ್ತದೆ, ಇದರ ನೊಂದಣಿಗೆ 120 ರೂ. ಮಾತ್ರ ನೊಂದಣಿ ಶುಲ್ಕವನ್ನು ನಿಗದಿ ಮಾಡಿದೆ ಎಂದರು.

    ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ 20,544 ಮನೆಗಳು ಮಂಜೂರಾಗಿದ್ದು ಒಟ್ಟು 1,67,500 ರೂ.ಗಳನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ. ಇದರಲ್ಲಿ 27500 ನರೆಗಾದಡಿ ಹಾಗೂ 20000 ಸ್ವಚ್ಚ ಭಾರತ ಅಭಿಯಾನದಡಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸುಮಾರು 5 ಲಕ್ಷ ಮನೆಗಳು ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಸೂರಿಲ್ಲದ ಎಲ್ಲರಿಗೂ ಮನೆಗಳು ದೊರೆಯಲಿವೆ ಎಂದು ತಿಳಿಸಿದರು.ಇದನ್ನೂ ಓದಿ: ಮೂರೇ ದಿನದಲ್ಲಿ 67 ಹಾವು ರಕ್ಷಣೆ ಮಾಡಿದ ರಾಯಚೂರಿನ ಉರಗ ತಜ್ಞರು

    ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಗೊಲ್ಲ, ದೊಂಬಿದಾಸರು, ಯಳವರು ಹಾಗೂ ಜೋಗಿ ಜನಾಂಗದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನರು ಇದ್ದಾರೆ. ಇವರಿಗಾಗಿ ದೇವರಾಜ ಅರಸು ವಸತಿ ಯೋಜನೆಯಡಿ 4,448 ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಬಗ್ಗೆ ಕಳೆದ ಒಂದೂವರೆ ವರ್ಷದ ಹಿಂದೆಯೇ ವಸತಿ ಸಚಿವರು ಮಂಜೂರಾತಿಗೆ ಕ್ರಮ ವಹಿಸಿದ್ದರ ಫಲವಾಗಿ ಮನೆಗಳು ಮಂಜೂರಾಗಿವೆ ಎಂದರು.

    ಅಲೆಮಾರಿಗಳಾಗಿದ್ದರಿಂದ ಇವರಿಗೆ ಸ್ವಂತ ಸೂರು ಇರುವುದಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅನೇಕ ಜನರು ಮನೆಗಾಗಿ ಕೇಳುತ್ತಿದ್ದರು. ಈ ಬಗ್ಗೆ ವಸತಿ ಸಚಿವರ ಗಮನಕ್ಕೆ ತಂದು ಇಷ್ಟು ಮನೆಗಳನ್ನು ಮಂಜೂರಾತಿ ಮಾಡಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣದ ಜೊತೆಗೆ ಸ್ವಂತ ಸೂರು ಅಷ್ಟೆ ಮುಖ್ಯವಾಗಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮೊದಲು ಹೊರ ಹೋಗುವ ಸ್ಪರ್ಧಿ ಯಾರು ಗೊತ್ತಾ?

    ಅಲೆಮಾರಿ ಜನಾಂಗದವರ ಜೊತೆಗೆ ಇತರೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಮನೆಗಳನ್ನು ನೀಡಲು ಸರ್ಕಾರದ ಗಮನ ಸೆಳೆಯಲಾಗುತ್ತದೆ. ವಸತಿ ಯೋಜನೆಯಡಿ ನೀಡಲಾಗುವ ಅನುದಾನದ ಜೊತೆಗೆ ತಾವು ಸಹ ಹಣವನ್ನು ಹಾಕಿ ಅತ್ಯುತ್ತಮವಾದ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ತಿಳಿಸಿದರು.

    ಯಾದವ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಾದ ಪರಶುರಾಂಗೌಡ, ಮಹದೇವ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್, ತಾಪಂ ಇಒ ಈಶ್ವರ ಪ್ರಸಾದ್, ಬಿಸಿಎಂ ಅಧಿಕಾರಿ ಅವೀನ್, ಮುಖಂಡರಾದ ಡಿ.ಟಿ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ: ಸೋಮಣ್ಣ

    ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ: ಸೋಮಣ್ಣ

    ಚಿತ್ರದುರ್ಗ: ಈ ಸಂದರ್ಭದಲ್ಲಿ ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಜಿಲ್ಲೆಯ ಹಿರಿಯೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಸಿಎಂ ಇಲಾಖೆಯಿಂದ 4,500 ಫಲಾನುಭವಿಗಳಿಗೆ ವಸತಿ ನಿರ್ಮಾಣದ ಕಾರ್ಯ ಆದೇಶ ಪತ್ರ ವಿತರಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯ ಕೆಲ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ವಿರೋಧ ಪಕ್ಷದವರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಎರಡು ವರ್ಷ ಸರ್ಕಾರ ಬಿಗಿಯಾಗಿ ಇರಲಿದೆ ಎಂದರು.

    ಸಿಎಂ ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕರಾಗಿದ್ದಾರೆ. ಉಳಿದ ಅವಧಿಗೂ ಬಿಎಸ್‍ವೈ ಅವರೇ ಸಿಎಂ ಆಗಿರುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದೆಲ್ಲವೂ ಗೌಣ. ಆದರೆ ಉತ್ತಮ ಕೆಲಸ ಮಾಡುತ್ತಿರುವ ಈ ಸರ್ಕಾರದ ಅಸ್ಥಿರಕ್ಕೆ ಯಾರು ಕೈ ಹಾಕಬಾರದು. ಈ ವಯಸ್ಸಿನಲ್ಲೂ ಯಡಿಯೂರಪ್ಪ ನಮ್ಮನ್ನು ಬಡಿದೆಬ್ಬಿಸುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

  • ಡಿಸಿಎಂ ಸವದಿ ಜೊತೆ ಆಹಾರ ಧಾನ್ಯ ವಿತರಿಸಿದ ಸಚಿವ ಸೋಮಣ್ಣ

    ಡಿಸಿಎಂ ಸವದಿ ಜೊತೆ ಆಹಾರ ಧಾನ್ಯ ವಿತರಿಸಿದ ಸಚಿವ ಸೋಮಣ್ಣ

    ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ವಾರ್ಡಿನ ಚಂದ್ರ ಬಡಾವಣೆಯಲ್ಲಿ ನೂತನವಾಗಿ ಮಂಜೂರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಉಪ ಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ ಸಚಿವರು, ಈಗಾಗಲೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರುತಿ ಮಂದಿರ ವಾರ್ಡ್ ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಯುನಾನಿ ಕಾಲೇಜಿನಲ್ಲಿ 200 ಹಾಸಿಗೆಗಳ ಹೈಟೆಕ್ ಸೆಂಟರನ್ನು ಸ್ಥಾಪಿಸಲಾಗಿದೆ. ಎಂ.ಸಿ. ಲೇಔಟ್ ಜೈಮುನಿರಾವ್ ವೃತ್ತದಲ್ಲಿ 200 ಹಾಸಿಗೆಗಳ ಆಸ್ಪತ್ರೆ ಸಜ್ಜುಗೊಳ್ಳುತ್ತಿದೆ. ಮಾರೇನಹಳ್ಳಿ ಬಳಿ 70 ಹಾಸಿಗೆಗಳ ಆಸ್ಪತ್ರೆ ಕೆಲವೇ ದಿನದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರಲ್ಲದೆ, ಗೋವಿಂದರಾಜನಗರ ರೆಫರಲ್ ಆಸ್ಪತ್ರೆ ಈ ಭಾಗದ ಬಡ ಜನರ ಸೇವೆಯಲ್ಲಿ ನಿರತವಾಗಿದೆ ಎಂದು ತಿಳಿಸಿದರು.

    ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದ ಸಚಿವ ಸೋಮಣ್ಣನವರು ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಇಂದಿನಿಂದ ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರತಿ ನಿತ್ಯ 18 ವಯಸ್ಸಿನ ನಂತರದ 4000 ಮಂದಿಗೆ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಸಚಿವ ಸೋಮಣ್ಣನವರು ಉಪ ಮುಖ್ಯಮಂತ್ರಿಗಳೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ನಾಗರಬಾವಿ ವಾರ್ಡಿನ ಚಂದ್ರ ಬಡಾವಣೆಯಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.

    ನಾಗರಬಾವಿ ವೃತ್ತದಲ್ಲಿ ಉಪ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರಧಾನ್ಯ ಕಿಟ್ ಗಳನ್ನು ವಿತರಿಸಿದರು. ದೇಶದ 80 ಕೋಟಿ ಜನರಿಗೆ ಪ್ರಧಾನಮಂತ್ರಿ ಮೋದಿ ಅವರು ಉಚಿತ ಆಹಾರಧಾನ್ಯಗಳನ್ನು ವಿತರಿಸಲು ಆದೇಶ ನೀಡಿದ್ದಾರೆ. ಇದರೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಬಡವರಿಗೆ ಉಪಯುಕ್ತವಾಗುವ ಹಲವಾರು ಪ್ಯಾಕೇಜುಗಳನ್ನು ಘೋಷಿಸಿದ್ದಾರೆ, ತಾವೂ ಸಹ ಈ ಕ್ಷೇತ್ರದ ಬಡ ಜನರಿಗೆ ಉತ್ತಮ ಗುಣಮಟ್ಟದ ಆಹಾರಧಾನ್ಯ ವಿತರಣೆ ಮಾಡುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಮುಂದುವರೆಯುವುದು ಎಂದು ಹೇಳಿದರು.

    ಈ ಸಂದರ್ಭದಲ್ಲಿ, ಯುವಮುಖಂಡ ಡಾ.ಅರುಣ್ ಸೋಮಣ್ಣ, ಮಂಡಲಾಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಉಮೇಶ್ ಶೆಟ್ಟಿ, ದಾಸೇಗೌಡ, ವಾಗೀಶ್, ಮೋಹನ್ ಕುಮಾರ್, ಡಾ.ರಾಜು, ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  • ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ – ವಿ.ಸೋಮಣ್ಣ

    ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ – ವಿ.ಸೋಮಣ್ಣ

    ಬೆಂಗಳೂರು: ರಾಜ್ಯದಲ್ಲಿ ಕಷ್ಟದಲ್ಲಿರುವ ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ ಎಂದು ವಸತಿ ಸಚಿವರಾದ ವಿ ಸೋಮಣ್ಣನವರು ಅಭಿಪ್ರಾಯಪಟ್ಟಿದ್ದಾರೆ.

    ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಗೋವಿಂದರಾಜ ನಗರ ವಾರ್ಡ್‍ನಲ್ಲಿ ಬಡವರು, ಬೀದಿ ಬದಿಯ ವ್ಯಾಪಾರಿಗಳು, ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿ ಬಳಿಕ ಮಾತನಾಡಿದ ಸೋಮಣ್ಣನವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9ವಾರ್ಡ್‍ಗಳಲ್ಲಿ ಆರ್ಥಿಕವಾಗಿ ಹಿಂದುಳಿದರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಸೋನ ಮಸೂರಿ ಅಕ್ಕಿ, ಎಣ್ಣೆ, ಬೇಳೆ ಮತ್ತು ಸಾಂಬಾರ್ ಪದಾರ್ಥ, ಸಕ್ಕರೆ ಗೋಧಿ ಉಪ್ಪು ಇನ್ನಿತರೆ ಆಹಾರ ಪದಾರ್ಥಗಳು ನೀಡಲಾಗುತ್ತಿದೆ ಎಂದರು. ಇದನ್ನೂ ಓದಿ: ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ- ಎಚ್ಡಿಕೆ ಕಿಡಿ

    ಬಡವರಿಗೆ ಅನ್ನ, ವಸತಿ, ಆರೋಗ್ಯ, ಮತ್ತು ಉದ್ಯೋಗವನ್ನು ಎಲ್ಲರಿಗೂ ಕಲ್ಪಿಸಬೇಕು ಎಂಬುದು ನನ್ನ ಗುರಿ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ 15ದಿನದಲ್ಲಿ ನೂತನ ಪೂಲೀಸ್ ರಾಣೆ ಆರಂಭಿಸಲಾಗುವುದು ಮತ್ತು ಮಾರೇನಹಳ್ಳಿ ವಾರ್ಡ್‍ನಲ್ಲಿ ಕೋವಿಡ್ ಸೋಂಕಿತರಿಗೆ 80 ಬೆಡ್‍ನ ಆಸ್ಪತ್ರೆ ಅತೀ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ. ಕೊವಿಡ್-19 ನಿಯಂತ್ರಣದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿರವರು ನವೆಂಬರ್ ವರಗೆ 80 ಕೋಟಿ ಬಿ.ಪಿ.ಎಲ್.ಕಾರ್ಡ್ ದಾರರಿಗೆ ಉಚಿತವಾಗಿ ಅಕ್ಕಿ ನೀಡಲಿದ್ದಾರೆ ಎಂದು ಹೇಳಿದರು.

    ದೇವರು ಮೆಚ್ಚುವ ಕೆಲಸ:
    ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಮಾತನಾಡಿ, ರಾಜ್ಯದಲ್ಲಿ ಸರ್ಕಾರದ ದಿಟ್ಟ ಕ್ರಮದಿಂದ ಕೊವಿಡ್-19 ಸೋಂಕು ನಿಯಂತ್ರಣದಲ್ಲಿ ಇದೆ. ಕೋವಿಡ್ ಮೂರನೇ ಅಲೆ ತಡೆಗಟ್ಟಲು 24 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಹಾಗೂ 5 ಸಾವಿರ ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ವಸತಿ ಸಚಿವರಾದ ವಿ.ಸೋಮಣ್ಣರವರು ಬಡಜನರಿಗೆ ನೆರವಾಗಲು ಆಹಾರ ಕಿಟ್ ವಿತರಣೆ ಮತ್ತು ಕೋವಿಡ್ ಉಸ್ತುವಾರಿಯಲ್ಲಿ ಸಾಂಕ್ರಮಿಕ ರೋಗ ನಿಯಂತ್ರಣ ಮಾಡಲು ಯಶ್ವಸಿಯಾಗಿದ್ದು, ಜನ ಮತ್ತು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಿಟ್ ವಿತರಣೆಯಲ್ಲಿ ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ ಅರುಣ್ ಸೋಮಣ್ಣ ಮತ್ತು ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಶ್ರೀಮತಿ ಶಂಕುತಲ ಡೊಡ್ಡಲಕ್ಕಪ್ಪ, ಜಯರತ್ನ, ಪಲ್ಲವಿ ಚನ್ನಪ್ಪ, ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡರು ಹಾಗೂ ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕರಾದ ಕ್ರಾಂತಿರಾಜು ಅವರು ಪಾಲ್ಗೊಂಡಿದ್ದರು.

  • ಬೆಂಗಳೂರಿನ ಒಂದು ಲಕ್ಷ ಕುಟುಂಬಗಳಿಗೆ ಕೇವಲ ಒಂದು ಲಕ್ಷ ರೂ.ಗಳಲ್ಲಿ ಮನೆ: ಸಚಿವ ವಿ.ಸೋಮಣ್ಣ

    ಬೆಂಗಳೂರಿನ ಒಂದು ಲಕ್ಷ ಕುಟುಂಬಗಳಿಗೆ ಕೇವಲ ಒಂದು ಲಕ್ಷ ರೂ.ಗಳಲ್ಲಿ ಮನೆ: ಸಚಿವ ವಿ.ಸೋಮಣ್ಣ

    ಬೆಂಗಳೂರು: ನಗರದಲ್ಲಿ ಮನೆ ಇಲ್ಲದವರಿಗೆ ಕೇವಲ 1 ಲಕ್ಷ ರೂ.ಗಳಲ್ಲಿ ಮನೆ ದೊರೆಕಿಸಿಕೊಡುವ ಮಹತ್ತರವಾದ ಪ್ರಧಾನಮಂತ್ರಿ ಆವಾಸ್ ಯೋಜನೆ ತೀವ್ರ ಗತಿಯಲ್ಲಿ ಅಭಿವೃದ್ಧಿಯ ಪಥದಲ್ಲಿದ್ದು, ವಸತಿರಹಿತರೆಲ್ಲರೂ ಸೂರು ಹೊಂದುವ ದಿನಗಳು ಸನಿಹದಲ್ಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

    ಸಚಿವರು ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡಿನಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಧಾನ್ಯ ಕಿಟ್’ಗಳನ್ನು ವಿತರಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ವಸತಿರಹಿತರಿಗೆ ನೀಡಲು 1 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ, ತಾವು ಸಚಿವರಾದ ನಂತರ 48,000 ಮನೆಗಳಿಗೆ ಚಾಲನೆ ನೀಡಲಾಗಿದ್ದು, ಇನ್ನು 6 ತಿಂಗಳಲ್ಲಿ ಅರ್ಹರಿಗೆ ವಿತರಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ ಸಚಿವರು, 5 ಲಕ್ಷ ರೂ. ಮೌಲ್ಯದ ಈ ಮನೆ ಮಾಲೀಕತ್ವ ಹೊಂದಲು ಫಲಾನುಭವಿಗಳು 1 ಲಕ್ಷ ರೂ. ನೀಡಿದರೆ ಸಾಕು, ಉಳಿದ ಮೊಬಲಗನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಸಾಲದ ಮೂಲಕ ಭರಿಸಲಾಗುವುದು ಎಂದು ತಿಳಿಸಿದರು.

    ಈ ತಿಂಗಳ 21ನೆಯ ದಿನಾಂಕದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ನಿತ್ಯ 4000 ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾಯಿಲೆಯಿಂದ ಯಾರೂ ಭಯಭೀತರಾಗಬೇಡಿ, ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಸಚಿವರು ಸಲಹೆ ಮಾಡಿದರು.

    ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿದ್ದು, ಸಚಿವ ಸೋಮಣ್ಣನವರು ಹಸಿದವರಿಗೆ ಅನ್ನ ನೀಡುವ ಹಾಗೂ ನೆಲೆ ಇಲ್ಲದವರಿಗೆ ಮನೆ ನೀಡುವ ಗಾರುಡಿಗ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ವಿಶ್ವನಾಥಗೌಡ, ಯುವನಾಯಕ ಡಾ.ಅರುಣ್ ಸೋಮಣ್ಣ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ದಾಸೇಗೌಡ, ವಾಗೀಶ್, ಶ್ರೀಮತಿ ಶಿಲ್ಪಾ ಶ್ರೀಧರ್, ಮೋಹನ್ ಕುಮಾರ್, ಸಿದ್ಧಾರ್ಥ್ ಮುಂತಾದ ಮುಖಂಡರು ಭಾಗವಹಿಸಿದ್ದರು.

  • ಪಂತರಪಾಳ್ಯದಲ್ಲಿ 10 ತಿಂಗಳಲ್ಲಿ 150 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿದ್ಧ: ವಿ. ಸೋಮಣ್ಣ

    ಪಂತರಪಾಳ್ಯದಲ್ಲಿ 10 ತಿಂಗಳಲ್ಲಿ 150 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿದ್ಧ: ವಿ. ಸೋಮಣ್ಣ

    ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡಿನ ಪಂತರಪಾಳ್ಯದಲ್ಲಿ 150 ಹಾಸಿಗೆಗಳ ಸಕಲ ಸೌಲಭ್ಯಗಳನ್ನು ಒಳಗೊಂಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇನ್ನು ಹತ್ತು ತಿಂಗಳ ಅವಧಿಯಲ್ಲಿ ಸಿದ್ಧಗೊಳ್ಳಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

    ಸಚಿವರು ಇಂದು ಆಸ್ಪತ್ರೆ ನಿರ್ಮಾಣವಾಗಲಿರುವ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಇನ್ನು 15 ದಿನಗಳಲ್ಲಿ ಮುಖ್ಯಮಂತ್ರಿಗಳು ಈ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದಿನ ಹತ್ತು ತಿಂಗಳಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಈ ಭಾಗದ ಜನರಿಗೆ ಉಚಿತ ಹಾಗೂ ಉತ್ತಮ ವೈದ್ಯೋಪಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಕೊರೊನಾ ವ್ಯಾಕ್ಸಿನ್‍ಗೆ ಆನ್‍ಲೈನ್ ನೋಂದಣಿ ಕಡ್ಡಾಯವಲ್ಲ

    ಕೊರೊನಾ ಸೋಂಕನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಕಾರ್ಯತತ್ಪರರಾಗಿದ್ದಾರೆ. ಅವರೊಂದಿಗೆ ಕೈ ಜೋಡಿಸುವ ಕೆಲಸವನ್ನು ಸಾರ್ವಜನಿಕರು ಮಾಡಬೇಕಾಗಿದೆ ಎಂದು ಹೇಳಿದ ಸಚಿವರು, ನಿಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಬಡವರು- ಶ್ರೀಮಂತರು ಎಂಬ ಬೇಧ ಭಾವವಿಲ್ಲದೆ, ಸಮನ್ವಯದ ಜೀವನ ನಡೆಸುವ ಮೂಲಕ ನಾವು ಕೊರೊನಾ ಮೇಲೆ ಜಯ ಸಾಧಿಸೋಣ ಎಂದು ವಿ.ಸೋಮಣ್ಣ ಈ ಸಂದರ್ಭದಲ್ಲಿ ಹೇಳಿದರು.

    ಪಂತರಪಾಳ್ಯ ನಿವಾಸಿಗಳಿಗೆ ಸಚಿವ ಸೋಮಣ್ಣನವರು ನೆರೆಯ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರೊಂದಿಗೆ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು. ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಸಮಯದಲ್ಲಿ ಅವರ ನೆರವಿಗೆ ವಿ.ಸೋಮಣ್ಣನವರು ಬಂದಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿದರು. ಇದನ್ನೂ ಓದಿ: ವಿದೇಶಕ್ಕೆ ತೆರಳುವ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆ ಪಡೆಯುವ ಅಂತರ ಕಡಿತ

    ಮಂಡಲಾಧ್ಯಕ್ಷ ವಿಶ್ವನಾಥ ಗೌಡ, ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್’ಗಳಾದ ದಾಸೆಗೌಡ, ಉಮಾ ಶಂಕರ್, ವಾಗೀಶ್ ಮತ್ತು ಡಾ.ಅರುಣ್ ಸೋಮಣ್ಣ ಉಪಸ್ಥಿತರಿದ್ದರು.

  • ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ: ವಿನೋದ್ ರಾಜ್ ಸಂತಾಪ

    ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ: ವಿನೋದ್ ರಾಜ್ ಸಂತಾಪ

    ನೆಲಮಂಗಲ: ಅತಿ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಚೇತನ ಸಂಚಾರಿ ವಿಜಯ್, ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ ಎಂದು ಹೇಳುತ್ತ  ವಿಜಯ್ ನಿಧನಕ್ಕೆ ಸ್ಯಾಂಡಲ್‍ವುಡ್ ನಟ ವಿನೋದ್ ರಾಜ್  ಸಂತಾಪ ಸೂಚಿಸಿದ್ದಾರೆ.

    ಬೆಂಗಳೂರು ಹೊರಹೊಲಯದ ನೆಲಮಂಗಲದಲ್ಲಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಚಾರಿ ವಿಜಯ್ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಹಾನ್ ಚೇತನ ಆಗಿದ್ದರು. ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ, ಚಿಕ್ಕ ವಯಸ್ಸಿನಲ್ಲೇ ನಮ್ಮೆಲ್ಲರನ್ನು ನೋವಿನ ಕಡಲಲ್ಲಿ ಬಿಟ್ಟು ಹೋದರು ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾವಿಬ್ಬರೂ ಬ್ಯಾಡ್ಮಿಂಟನ್ ಆಡ್ತಾ ಇದ್ವಿ, ತುಂಬಾ ದುಃಖವಾಗ್ತಿದೆ- ಪ್ರಜ್ವಲ್ ಸಂತಾಪ

    ಅವರ ಮನೆಯಲ್ಲಿ ಎಷ್ಟು ನೋವಿದೆಯೋ ಪ್ರತಿಯೊಬ್ಬ ಕಲಾವಿದನಲ್ಲೂ ಅಷ್ಟು ನೋವಿದೆ.  ಒಮ್ಮೆ ನ್ಯಾಷನಲ್ ಅವಾರ್ಡ್ ತೆಗೆದುಕೊಂಡಿದ್ದು ತಪ್ಪಾಯ್ತು ಅಂತ ಬೇಸರ ಹೊರಹಾಕಿದ್ದರು. ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕಾಗಿತ್ತು. ಅದೇ ರೀತಿಯಲ್ಲಿ ನಾನು ಕೂಡ ಅವಕಾಶ ಇಲ್ಲದೆ ವಾಪಸ್ ಬಂದವನು. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ, ಆತ್ಮಕ್ಕೆ ಶಾಂತಿ ಸಿಗಲೇಂದು ದೇವರಲ್ಲಿ ಪ್ರಾರ್ಥಿಸುವೆ ಎಂದುಕಂಬನಿ ಮಿಡಿದಿದ್ದಾರೆ.

    ವಿ.ಸೋಮಣ್ಣ ಸಂತಾಪ: 

    ಸಂಚಾರಿ ವಿಜಯ್ ನನಗೂ ಕೂಡ ಆತ್ಮೀಯರು. ಹಲವು ಭಾರಿ ವೈಯಕ್ತಿಕವಾಗಿ ಅವರನ್ನ ಭೇಟಿ ಮಾಡಿದ್ದೇನೆ. ಸಂಚಾರಿ ವಿಜಯ್‍ಗೆ ಸಂಚಾರಿ ವಿಜಯ್ ಒಬ್ಬರೇ ಸಾಟಿ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದ ಅವರು ಅಕಾಲಿಕ ಮರಣಕ್ಕೆ ತುತ್ತಾಗಿರೋದು ಮನಸ್ಸಿಗೆ ನೋವುಂಟು ಮಾಡಿದೆ. ಯಾರೇ ಆದರೂ ಕಾನೂನು ಮತ್ತು ಸುವ್ಯವಸ್ಥೆ ನಿರ್ಲಕ್ಷ್ಯ ಆದ್ರೆ ಏನಾಗುತ್ತೆ ಅನ್ನುವುದಕ್ಕೆ ಸಂಚಾರಿ ವಿಜಯ್ ಉದಾಹರಣೆಯಾಗಿದ್ದಾರೆ. ಸಂಚಾರಿ ವಿಜಯ್ ನಿಧನದಿಂದ ಕನ್ನಡ ಚಿತ್ರಂಗಕ್ಕೆ ತುಂಬಲಾಗದ ನಷ್ಟವಾಗಿದೆ. ರಾಜ್ಯದಲ್ಲಿ ಹತ್ತಾರು ಜನ ಸಂಚಾರಿ ವಿಜಯ್ ಆಗಬೇಕು. ವಿಜಯ್ ನಿಧನದಲ್ಲೂ ಕುಟುಂಬ ಸಾರ್ಥಕತೆ ಮೆರೆದಿದ್ದಾರೆ. ಮರಣದ ಬಳಿಕ ಅಂಗಾಂಗ ದಾನ ಮಾಡಿರೋದು ನೋವಿನಲ್ಲೂ ಆನಂದ ತಂದ ವಿಚಾರ. ಇಂತಹ ನಿರ್ಧಾರ ಕೈಗೊಂಡ ಅವರ ಕುಟುಂಬಕ್ಕೆ ಕೋಟಿ ಕೋಟಿ ಧನ್ಯವಾದಗಳು. ಕುಟುಂಬಕ್ಕೆ ಸಂಚಾರಿ ವಿಜಯ್ ಅಗಲಿಕೆ ನೋವನ್ನ ಮರೆಸುವ ಶಕ್ತಿ ದೇವರು ಕರುಣಿಸಲಿ, ವಿಜಯ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.