Tag: V.S.Ugrappa

  • Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

    Lok Sabha 2024: ‘ಲೋಕ’ ಸಮರಕ್ಕೆ ಬಳ್ಳಾರಿ ಅಖಾಡ ಸಜ್ಜು; ಕಾಂಗ್ರೆಸ್‌ಗೆ ಪ್ರತಿಷ್ಠೆ, ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ

    – ಬಿಜೆಪಿ ಟಿಕೆಟ್‌ ಸಿಗುವ ಆತ್ಮವಿಶ್ವಾಸದಲ್ಲಿ ಬಿ.ಶ್ರೀರಾಮುಲು
    – ‘ಕೈ’ ಪಾಳಯದಲ್ಲಿ ಟಿಕೆಟ್‌ಗಾಗಿ ಫೈಟ್‌

    ಒಂದು ಕಾಲದಲ್ಲಿ ಬಳ್ಳಾರಿ (Bellary Lok Sabha) ಎಂದರೆ ಕಾಂಗ್ರೆಸ್ ಭದ್ರಕೋಟೆ. ಕಾಲಾಂತರದಲ್ಲಿ ನಿಧಾನಗತಿಯಾಗಿ ಕಾಂಗ್ರೆಸ್‌ನಿಂದ ಬಿಜೆಪಿ ತೆಕ್ಕೆಗೆ ಬಂತು. ಸದ್ಯ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು (Lok Sabha Elections 2024) ಬಿಜೆಪಿ ಪ್ರತಿನಿಧಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿಯನ್ನು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಆದರೆ ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ.

    ಕ್ಷೇತ್ರ ಪರಿಚಯ
    ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು. ಕರ್ನಾಟಕದ ಈಶಾನ್ಯ ಭಾಗದಲ್ಲಿ ಈ ಜಿಲ್ಲೆಯಿದೆ. ಕಲ್ಯಾಣ ಕರ್ನಾಟಕಕ್ಕೆ ಬಳ್ಳಾರಿ ಸೇರಿದೆ. ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಖಂಡ ಜಿಲ್ಲೆಯಾಗಿದ್ದ ಬಳ್ಳಾರಿ, ಇದೀಗ (2021) ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಾಗಿ ಪ್ರತ್ಯೇಕಗೊಂಡಿದೆ. ಉಭಯ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎರಡು ಜಿಲ್ಲೆಗಳ ಕಾಂಗ್ರೆಸ್ ಆಕಾಂಕ್ಷಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ಎಂಟು ವಿಧಾನಸಭೆ ಕ್ಷೇತ್ರಗಳು
    ಬಳ್ಳಾರಿ ಕ್ಷೇತ್ರವು ಎಸ್ಟಿ ಮೀಸಲು ಕ್ಷೇತ್ರವಾಗಿದೆ (ಪರಿಶಿಷ್ಟ ಪಂಗಡ). ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ಸಂಡೂರು, ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನ ಹಳ್ಳಿ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

    ಸೋನಿಯಾಗಾಂಧಿ ವರ್ಸಸ್ ಸುಷ್ಮಾ ಸ್ವರಾಜ್
    ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ 1999ರ ಚುನಾವಣೆ ವೇಳೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್ (Sushma Swaraj) ಅವರು ಸೋನಿಯಾ ಗಾಂಧಿ (Sonia Gandhi) ವಿರುದ್ಧ ಸ್ಪರ್ಧೆ ಮಾಡುವ ಮೂಲಕ ಬಿಜೆಪಿಗೆ ಬುನಾದಿ ಹಾಕಿದ್ರು. ಅಂದು ಚುನಾವಣೆಯಲ್ಲಿ ಬಿಜೆಪಿ ಸೋತರೂ ಬಿಜೆಪಿ ಗಟ್ಟಿಯಾಗಲು ನಾಂದಿ ಹಾಡಿದ್ರು.

    ಬಿಜೆಪಿ ತೆಕ್ಕೆಗೆ ಬಳ್ಳಾರಿ
    ಬಳಿಕ 2004ರಲ್ಲಿ ನಡೆದ ಚುನಾವಣೆಯಲ್ಲಿ ಕರುಣಾಕರ ರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ರು. ಅಲ್ಲಿವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಬಿಜೆಪಿ (BJP) ತೆಕ್ಕೆಗೆ ಬಂತು. ನಂತರ 2009ರಲ್ಲಿ ಜೆ. ಶಾಂತಾ, 2014ರಲ್ಲಿ ಶ್ರೀರಾಮುಲು ಮತ್ತು 2019 ವೈ.ದೇವೇಂದ್ರಪ್ಪ ಗೆಲ್ಲುವ ಮೂಲಕ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗಟ್ಟಿಯಾಗಿದೆ. ಆದ್ರೆ 2018ರಲ್ಲಿ ಶ್ರೀರಾಮುಲು (Sriramulu) ರಾಜೀನಾಮೆಯಿಂದ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ ಗೆದ್ದಿದ್ದರು. ಆದ್ರೆ 2019 ರಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಿ ಸೋತ್ರು. ಇದನ್ನೂ ಓದಿ: ಕರ್ನಾಟಕ ಸೇರಿ 6 ರಾಜ್ಯಗಳ ಕೈ ಅಭ್ಯರ್ಥಿಗಳ ಪಟ್ಟಿ ಫೈನಲ್‌ – ಈ ಬಾರಿಯೂ ವಯನಾಡಿನಿಂದ ರಾಹುಲ್‌ ಸ್ಪರ್ಧೆ?

    ಬಿಜೆಪಿಯ ಹಾಲಿ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪಗೆ ವಯೋಮಾನದ ಕಾರಣ ಟಿಕೆಟ್ ನೀಡುವುದು ಅನುಮಾನ. ಹೀಗಾಗಿ ಈ ಬಾರಿ ಕಳೆದ ವಿಧಾನಸಭೆಯಲ್ಲಿ ಸೋತಿರುವ ಮಾಜಿ ಸಚಿವ ಶ್ರೀರಾಮುಲು ಅವರ ಹೆಗಲಿಗೆ ಜವಾಬ್ದಾರಿ ಬರಲಿದೆ. ಕಾರಣ, ಒಂದು ಕಡೆ ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮೇಲಾಗಿ ಇದೊಂದು ಮೀಸಲು ಕ್ಷೇತ್ರ ಆದ ಕಾರಣ, ಮೀಸಲು ಕ್ಷೇತ್ರದಲ್ಲಿ ಶ್ರೀರಾಮುಲು ಅವರನ್ನು ಬಿಟ್ಟು ಈಗ ಬೇರೆ ಬಲಿಷ್ಠ ನಾಯಕರ ಕೊರತೆ ಇದೆ. ಹೀಗಾಗಿ ಬಹುತೇಕ ಶ್ರೀರಾಮುಲು ಅವರ ಸ್ಪರ್ಧೆ ಬಳ್ಳಾರಿಯಿಂದ ಆಗುವ ಸಾಧ್ಯತೆ ಹೆಚ್ಚಿದೆ.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ (Devendrappa) ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ನ (Congress) ವಿ.ಎಸ್.ಉಗ್ರಪ್ಪ (V.S.Ugrappa) ವಿರುದ್ಧ 25,707 ಮತಗಳ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ 100 ರೂ. ಇಳಿಕೆ – ಮಹಿಳಾ ದಿನಾಚರಣೆಗೆ ಮೋದಿ ಗಿಫ್ಟ್‌

    ವಿಜಯನಗರ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
    ಗುಜ್ಜಲ್ ನಾಗರಾಜ,
    ನಾಗಮಣಿ ಜಿಂಕಾಲ್

    ಬಳ್ಳಾರಿ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
    ಬಿ.ನಾಗೇಂದ್ರ ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್
    ಮಾಜಿ ಸಂಸದ ವಿ.ಎಸ್.ಉಗ್ರಪ್ಪ

    ಅವಳಿ ಜಿಲ್ಲೆಯ ಶಾಸಕರು
    ಬಳ್ಳಾರಿ- ಕಾಂಗ್ರೆಸ್ – ಭರತ್ ರೆಡ್ಡಿ
    ಬಳ್ಳಾರಿ ಗ್ರಾಮಾಂತರ – ಕಾಂಗ್ರೆಸ್ ಬಿ ನಾಗೇಂದ್ರ
    ಸಂಡೂರು – ಕಾಂಗ್ರೆಸ್ – ಈ ತುಕಾರಾಂ
    ಕಂಪ್ಲಿ – ಕಾಂಗ್ರೆಸ್ – ಗಣೇಶ್
    ಹೊಸಪೇಟೆ – ಕಾಂಗ್ರೆಸ್ – ಹೆಚ್ ಆರ್ ಗವಿಯಪ್ಪಾ
    ಕೂಡ್ಲಿಗಿ – ಕಾಂಗ್ರೆಸ್ – ಎನ್ ಟಿ ಶ್ರೀನಿವಾಸ
    ಹಡಗಲಿ – ಬಿಜೆಪಿ ಕೃಷ್ಣ ನಾಯಕ್
    ಹಗರಿಬೊಮ್ಮನ ಹಳ್ಳಿ – ಜೆಡಿಎಸ್ ನೇಮಿರಾಜ್ ನಾಯಕ್

    ಮತದಾರರ ವಿವರ
    ಪುರುಷ ಮತದಾರರು : 8,71,991
    ಮಹಿಳಾ ಮತದಾರರು : 8,80,488
    ಇತರೆ- 232
    ಒಟ್ಟು ಮತದಾರರು : 17,52,632

    ಜಾತಿವಾರು ಲೆಕ್ಕಾಚಾರ (ಅಂದಾಜು)
    ಲಿಂಗಾಯತರು-3,50,000
    ಪರಿಶಿಷ್ಟ ಜಾತಿ- 3,15,000
    ಪರಿಶಿಷ್ಟ ಪಂಗಡ – 3,25,000
    ಕುರುಬ-2,20,000
    ಮುಸ್ಲಿಂ-2,00,000
    ಬಲಿಜ- 40,000
    ನೇಕಾರ-28,000
    ಯಾದವ- 39,000
    ಗಂಗಾಮತಸ್ಥ- 40,000
    ಉಪ್ಪಾರ- 28,000
    ಮಡಿವಾಳ-25,000
    ಬ್ರಾಹ್ಮಣ-28,000
    ರೆಡ್ಡಿ-20,000
    ಕಮ್ಮಾರ-25,000
    ವೈಶ್ಯರು-20,000
    ಇತರೆ-30,000

  • 40% ಕಮಿಷನ್ ರಾಜ್ಯ ಸರ್ಕಾರದ ಬಹುದೊಡ್ಡ ಸಾಧನೆ – ಬಿಜೆಪಿ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರ ಟೀಕೆ

    40% ಕಮಿಷನ್ ರಾಜ್ಯ ಸರ್ಕಾರದ ಬಹುದೊಡ್ಡ ಸಾಧನೆ – ಬಿಜೆಪಿ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರ ಟೀಕೆ

    ಚಿಕ್ಕಬಳ್ಳಾಪುರ: 40% ಕಮಿಷನ್ ರಾಜ್ಯ ಸರ್ಕಾರದ ಬಹುದೊಡ್ಡ ಸಾಧನೆ ಎಂದು ಟೀಕಿಸಿ, ಜುಲೈ 28 ರಂದು ದೊಡ್ಡಬಳ್ಳಾಪುರದಲ್ಲಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಬಿಜೆಪಿ ಸಾಧನಾ ಸಮಾವೇಶದ ವಿರುದ್ಧ ಕಾಂಗ್ರೆಸ್ ನಾಯಕರು ಕೆಂಡಕಾರಿದ್ದಾರೆ

    ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ ಹಾಗೂ ವಿ.ಎಸ್ ಉಗ್ರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾತನಾಡಿ, ಅದು ಸಾಧನಾ ಸಮಾವೇಶ ಅಲ್ಲ ಅದು ಶೂನ್ಯ ಸಮಾವೇಶ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಚಿವ ಜೆ.ಸಿ ಮಾಧುಸ್ವಾಮಿಗೆ ಆನೆಯಿಂದ ಮಾಲಾರ್ಪಣೆ

    ಉಗ್ರಪ್ಪ ಮಾತನಾಡಿ, ಕಳೆದ 1 ವರ್ಷದಲ್ಲಿ ಯಾವ ಸಾಧನೆ ರಾಜ್ಯ ಸರ್ಕಾರ ಮಾಡಿದೆ ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು. 40% ಕಮಿಷನ್ ಪಡೆಯೋದು ರಾಜ್ಯ ಸರ್ಕಾರದ ಬಹು ದೊಡ್ಡ ಸಾಧನೆ. ರೈತರು, ನಿರುದ್ಯೋಗಿಗಳು, ಮೂಲಭೂತ ಸೌಲಭ್ಯಗಳು, ಸಮಾಜದ ಯಾವ ವರ್ಗಕ್ಕೆ ಏನು ಮಾಡಿದ್ದಾರೆ? ಏನಾದ್ರೂ ಸಾಧನೆಗಳನ್ನು ಮಾಡಿದ್ರೇ ಅದನ್ನು ವೈಭವೀಕರಿಸಿಕೊಳ್ಳಲಿ. ರಾಜ್ಯ ಸರ್ಕಾರದಿಂದ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಅದೇ ಅವರ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ನಾ ಖಾವುಂಗಾ ನಾ ಖಾನೆ ದುಂಗಾ ಅಂತೀರಲ್ಲ ನಾಚಿಕೆ ಅಗಲ್ವಾ ಪ್ರಧಾನ ಮಂತ್ರಿ ಮೋದಿಗೆ. ರಾಜ್ಯದಲ್ಲಿ ಪಿಎಸ್‍ಐ ಹಗರಣದಿಂದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರದಿಂದ ಯಾರು ಹಗರಣದ ನೈತಿಕ ಜವಾಬ್ದಾರಿ ಹೊಣೆ ಹೊತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೆನಡಾ ಬಳಿಕ ಪಂಜಾಬ್‍ನಲ್ಲಿ ಗಾಂಧಿ ಪ್ರತಿಮೆ ಧ್ವಂಸ

    Live Tv
    [brid partner=56869869 player=32851 video=960834 autoplay=true]

  • ನಾಯಿಗೆ ಇರುವ ನಿಷ್ಠೆ ಸಿ.ಎಂ.ಇಬ್ರಾಹಿಂಗೆ ಇಲ್ಲ: ವಿ.ಎಸ್.ಉಗ್ರಪ್ಪ

    ನಾಯಿಗೆ ಇರುವ ನಿಷ್ಠೆ ಸಿ.ಎಂ.ಇಬ್ರಾಹಿಂಗೆ ಇಲ್ಲ: ವಿ.ಎಸ್.ಉಗ್ರಪ್ಪ

    ಶಿವಮೊಗ್ಗ: ಸಿ.ಎಂ.ಇಬ್ರಾಹಿಂ ನನ್ನ ಗಂಡಸುತನದ ಬಗ್ಗೆ ಪ್ರಶ್ನಿಸಿದ್ದಾರೆ. ನನ್ನ ಗಂಡಸುತನ ಏನು ಎಂಬುದು ಯಾರಿಗೆ ಗೊತ್ತಿದೆಯೋ ಅವರಿಗೆ ತಿಳಿದಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಸಿ.ಎಂ.ಇಬ್ರಾಹಿಂ ವಿರುದ್ದ ವಾಗ್ದಾಳಿ ನಡೆಸಿದರು.

    ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ.ಇಬ್ರಾಹಿಂ ನನ್ನನ್ನು ನಾಯಿಗೆ ಹೋಲಿಸಿದ್ದಾರೆ. ನಾಯಿಗೆ ಇರುವ ನಿಯತ್ತು, ನಿಷ್ಠೆ ನಿನಗೆ ಇಲ್ಲ. ನಿನಗೆ ಜನ್ಮ ಕೊಟ್ಟಿರುವ ಸಮುದಾಯದ ನಿಷ್ಠೆ ಸಹ ಇಲ್ಲ. ನಿನಗೆ ಪಕ್ಷಕ್ಕಾಗಲಿ, ಧರ್ಮಕ್ಕಾಗಲಿ ನಿಷ್ಠೆ ಇದೆಯಾ ಎಂದು ಉಗ್ರಪ್ಪ ಏಕವಚನದಲ್ಲಿಯೇ ಇಬ್ರಾಹಿಂ ಅವರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬುಧವಾರದಿಂದ ಪಿಯು, ಪದವಿ ಕಾಲೇಜು ಆರಂಭ

    ನಿನ್ನ ಧರ್ಮದ ಆಸ್ತಿಯನ್ನೇ ನುಂಗಿ ಹಾಕಿದ್ದೀಯಾ. ಮಂತ್ರಿ ಆಗಿದ್ದಾಗ ಭ್ರಷ್ಟಾಚಾರ ಮಾಡಿಯೇ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದ. ಬ್ಲ್ಯಾಕ್ ಮೇಲ್ ರಾಜಕಾರಣಿ ಯಾರಾದರೂ ಇದ್ದರೆ ಅದು ಇಬ್ರಾಹಿಂ. ಈತ ಬೆಳಗ್ಗೆ ಸಿದ್ದರಾಮಯ್ಯ ಅಂತಾನೆ. ಮಧ್ಯಾಹ್ನ ಯಡಿಯೂರಪ್ಪ ಅಂತಾನೆ. ಸಂಜೆ ಆದರೆ ಮತ್ತೊಬ್ಬರ ಜೊತೆ ಇರುತ್ತಾನೆ. ಇಂತಹ ಮನುಷ್ಯನಿಂದ ಪಕ್ಷಕ್ಕಾಗಲಿ, ಮತ್ತೊಬ್ಬರಿಗಾಗಲಿ ಉಪಯೋಗ ಇಲ್ಲ ಎಂದರು.

  • ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ: ವಿ.ಎಸ್ ಉಗ್ರಪ್ಪ

    ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ: ವಿ.ಎಸ್ ಉಗ್ರಪ್ಪ

    ಚಿತ್ರದುರ್ಗ: ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ ಎಂದು ಕಾಂಗ್ರೆಸ್‍ನ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೂತನ ಕೇಂದ್ರ ಸಚಿವ ಭಗವಂತ ಖೂಬಾ ಅವರ ಪರಿಚಯ ಮಾಡಿಕೊಡುವ ನೆಪದಲ್ಲಿ ನಡೆಸಿದ ಜನಾಶೀರ್ವಾದ ಯಾತ್ರೆ ವೇಳೆ ಯಾದಗಿರಿಯಲ್ಲಿ ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ. ಈ ಮೂಲಕ ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ. ಈ ಬಗ್ಗೆ ಜವಬ್ದಾರಿಯುತವಾದ ಸ್ಥಾನದಲ್ಲಿದ್ದೂ, ಶಾಂತಿ ಕದಡಿಸಿರುವ ಅವರ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ, ಅಥವಾ ತಪ್ಪಾಗಿದೆ ಇನ್ಮುಂದೆ ತಿದ್ದಿಕೊಳ್ಳುತ್ತೇವೆ ಎನ್ನಬೇಕಿದ್ದ ಗೃಹ ಸಚಿವರು ಅದರ ಬದಲಾಗಿ ಉಡಾಫೆ ಉತ್ತರ ನೀಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಕರ್ನಾಟಕ ರಾಜ್ಯದಲ್ಲಿ ಈ ಬಿಜೆಪಿ ಗುಂಡಿನ ಸಂಸ್ಕೃತಿ ಹುಟ್ಟು ಹಾಕುತ್ತಿದೆ ಎಂಬಂತೆ ಭಾಸವಾಗುತ್ತಿದ್ದು, ಇಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮುಂದೆ ಇನ್ಯಾರ ಮೇಲೆ ಹಾರಿಸ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಸಚಿವ ಈಶ್ವರಪ್ಪ, ಹಿಂದೆ ನಮ್ಮ ಸಂಖ್ಯೆ ಕಡಿಮೆ ಇದ್ದಾಗ ಒಂದು ಏಟು ಯಾರಾದರು ಹೊಡೆದರು ಕೂಡ ತಲೆತಗ್ಗಿಸಿಕೊಂಡು ಹೋಗಿ ಅಂತ ನಮ್ಮ ಹಿರಿಯರು ಹೇಳುತ್ತಿದ್ದರು. ಈಗ ಹಾಗೆಲ್ಲಾ ಆಗಲ್ಲ. ಯಾರಾದರು ಒಂದೇಟು ಹೊಡೆದರೆ, ನಾವು ಎರಡು ಏಟು ಹೊಡೆಯುತ್ತೇವೆ ಎಂದಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸಿ ಬಿಜೆಪಿ ನಾಯಕರಿಗೆ ನಾನು ಮನವಿಮಾಡುತ್ತೇನೆ ಗೂಂಡಾ ಹಾಗೂ ತಾಲಿಬಾನ್ ಸಂಸ್ಕೃತಿ ತೋರುವ ಮೂಲಕ ಶಾಂತಿಯುತವಾಗಿರುವ ಕರ್ನಾಟಕವನ್ನು ಬಿಹಾರ ಹಾಗೂ ಉತ್ತರ ಪ್ರದೇಶ ಮಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

    ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಮುಖಂಡರಾದ ಸಂಪತ್ ಕುಮಾರ್ ಇದ್ದರು.

  • ಬಿಎಸ್‍ವೈಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ನೀಡಬೇಕಿತ್ತು: ವಿ.ಎಸ್ ಉಗ್ರಪ್ಪ

    ಬಿಎಸ್‍ವೈಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ನೀಡಬೇಕಿತ್ತು: ವಿ.ಎಸ್ ಉಗ್ರಪ್ಪ

    – ಬಿಜೆಪಿಯಲ್ಲಿ ಎಲ್ಲಿದೆ ಶಿಸ್ತು..?
    – ಪ್ರಧಾನಿ ವಿರುದ್ಧ ವಾಗ್ದಾಳಿ
    – ಸರ್ಕಾರದ ವಿರುದ್ಧ ಹೆಚ್.ಎಂ ರೇವಣ್ಣ ಕಿಡಿ

    ಬೆಂಗಳೂರು: ಬಿಜೆಪಿಯಲ್ಲಿನ ಆಂತರಿಕ ಕಲಹದಿಂದ ರಾಜ್ಯದ ಜನರ ಬದುಕು ದುಸ್ಥರವಾಗಿದೆ. ಯಡಿಯೂರಪ್ಪನವರ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರು ಒತ್ತಾಯಿಸಿದ್ದಾರೆ.

    ಶುಕ್ರವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಈ ಇಳಿ ವಯಸ್ಸಿನಲ್ಲಿ ಇಂತಹ ಸ್ಥಿತಿ ಬರಬಾರದಾಗಿತ್ತು. ಯಡಿಯೂರಪ್ಪನವರಿಗೆ ಸ್ವಲ್ಪವಾದರೂ ಸ್ವಾಭಿಮಾನ ಇದ್ದಿದ್ದರೆ ಬಿಜೆಪಿಯಲ್ಲಿನ ಆಂತರಿಕ ವಿದ್ಯಾಮಾನಗಳನ್ನು ನೋಡಿ ರಾಜೀನಾಮೆ ನೀಡಬೇಕಿತ್ತು. ಆದರೆ ಯಡಿಯೂರಪ್ಪನವರು ಅಧಿಕಾರಕ್ಕೆ ಅಂಟಿಕೊಂಡಿರೋದು ನೋಡಿದರೆ ಅವರು ಅಧಿಕಾರ ಮತ್ತು ಲೂಟಿಯಲ್ಲಿ ತಲ್ಲೀನರಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಟೀಕಿಸಿದರು.

    ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಸಿಗುತ್ತಿಲ್ಲ. ಬೀಜ ಕೇಳಿದ ರೈತರಿಗೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳಾಗಲಿ ಅಥವಾ ಮಂತ್ರಿಗಳಾಗಲಿ ಎಲ್ಲಿದ್ದಾರೆ? ಇನ್ನು ನೂತನ ಶಿಕ್ಷಣ ನೀತಿ ಪ್ರಕಾರ 4 ವರ್ಷದ ಪದವಿಯಲ್ಲಿ ಕೇವಲ 1 ವರ್ಷ ಕನ್ನಡ ಭಾಷೆಗೆ ಅವಕಾಶ ನೀಡಿ ಮಾತೃದ್ರೋಹ ಬಗೆಯಲಾಗಿದೆ. ಮೇಕೆದಾಟು ಯೋಜನೆಗೆ ಗ್ರೀನ್ ಟ್ರಿಬ್ಯುನಲ್ ಅನುಮತಿ ನೀಡಿದ್ದರೂ ಅದರ ನೀರು ಬಳಕೆ ಮಾಡಿಕೊಳ್ಳಲು ಸರ್ಕಾರದ ನಿರ್ಧಾರ ಏನು ಎಂಬುದು ಗೊತ್ತಿಲ್ಲ. ಇದೆಲ್ಲವೂ ರಾಜ್ಯದಲ್ಲಿ ಜನಪರ ಸರ್ಕಾರ ಇಲ್ಲ ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದು ತಿಳಿಸಿದರು.

    ಬಿಜೆಪಿಯಲ್ಲಿ ಮೂರು ಬಣಗಳ ಕಚ್ಚಾಟ:
    ಬಿಜೆಪಿ ಸರ್ಕಾರ ಮೂರು ಬಣಗಳಾಗಿವೆ. ಯಡಿಯೂರಪ್ಪನವರ ಬದಲಾವಣೆ ಆಗಬಾರದು ಎಂದು ಒಂದು ವರ್ಗ, ಆಗಬೇಕು ಎಂದು ಮತ್ತೊಂದು ವರ್ಗ, ಪಕ್ಷದ ನಾಯಕರು ಹೇಳಿದಂತೆ ಕೇಳುತ್ತೇವೆ ಎಂದು ಮತ್ತೊಂದು ವರ್ಗ ಇದೆ. ಬಿಜೆಪಿ ಶಾಸಕ ವಿಶ್ವನಾಥ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಡಿಎ ಮುಖ್ಯಸ್ಥರ ವಿರುದ್ಧ ‘Corrupt Bastard’ ಎಂದು ಪದ ಬಳಕೆ ಮಾಡಿದ್ದಾರೆ. ಬಿಜೆಪಿಯ ಗುಂಪುಗಾರಿಕೆ ಯಾವ ಹಂತಕ್ಕೆ ಹೋಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? 420, ಕಳ್ಳರು, ರಾಕ್ಷಸರು, ಲೂಟಿಕೋರರು, ಅರೆ ಹುಚ್ಚರು ಎಂದೆಲ್ಲಾ ಪರಸ್ಪರ ನಿಂದಿಸುತ್ತಿದ್ದಾರೆ. ಬಿಜೆಪಿಯನ್ನು ಶಿಸ್ತಿನ ಪಕ್ಷ ಅಂತಾರೆ. ಎಲ್ಲಿದೆ ಶಿಸ್ತು ಎಂದು ಪ್ರಶ್ನಿಸಿದರು.

    ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಶಾಸಕ ಬೆಲ್ಲದ್ ಅವರು ಸಿಎಂ ಹಾಗೂ ಬೆಂಬಲಿಗರು ತಮ್ಮ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಹಾಗೂ ನನ್ನ ಎಲ್ಲ ಚಟುವಟಿಕೆಯನ್ನು ಹಿಂಬಾಲಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪ ಮಾಡುತ್ತಿರೋದು ನಾವಲ್ಲ, ಆಡಳಿತ ಪಕ್ಷದ ಹಾಗೂ ಆರ್ ಎಸ್‍ಎಸ್ ಹಿನ್ನೆಲೆಯ ಶಾಸಕರು. ಅಂದರೆ ನಮ್ಮ ರಾಜ್ಯದಲ್ಲಿ ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ಇಲ್ಲವಾಗಿದೆ ಎಂದರು.

    ಶೇ.25-30ರಷ್ಟು ಪರ್ಸೆಂಟ್ ಕಮಿಷನ್:
    ವಿಶ್ವನಾಥ್ ಅವರು ಹೇಳಿದಂತೆ ನೀರಾವರಿ ಇಲಾಖೆಯಲ್ಲಿ ಹಣಕಾಸೂ ಸಚಿವಾಲಯ ಹಾಗೂ ನೀರಾವರಿ ಮಂಡಳಿ ಅನುಮತಿ ಇಲ್ಲದೆ 20 ಸಾವಿರ ಕೋಟಿ ರೂಪಾಯಿಗಳ ಟೆಂಡರ್ ಕರೆಯಲಾಗಿದೆ. ಈ ಸರ್ಕಾರ ಕಂಟ್ರಾಕ್ಟರ್ ಪರ ಎಂದಿದ್ದಾರೆ. ಇದರಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸಿಎಂ ಹಾಗೂ ಅವರ ಮಗ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಬಿಜೆಪಿ ಪಕ್ಷದವರೇ ತಮ್ಮ ಸರ್ಕಾರಜಲ್ಲಿ ಶೇ. 25-30ರಷ್ಟು ಕಮಿಷನ್ ನಡೆಯುತ್ತಿದೆ ಎಂದಿದ್ದಾರೆ. ಅಂದರೆ ನೀರಾವರಿ ಇಲಾಖೆಯ ಈ ಟೆಂಡರ್ ನಲ್ಲಿ ಸುಮಾರು 5-6 ಸಾವಿರ ಕೋಟಿಯಷ್ಟು ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ತಿಳಿಸಿದರು.

    ನಾನು ತಿನ್ನುವುದಿಲ್ಲ, ತಿನ್ನಲು ಬಿಡಲ್ಲ ಅಂದಿದ್ದ ಮೋದಿಯವರೇ ಎಲ್ಲಿದ್ದೀರಾ? ಸಿದ್ದರಾಮಯ್ಯ ಸರ್ಕಾರ ಇದ್ದಾಗ 10 ಪರ್ಸೆಂಟ್ ಸರ್ಕಾರ ಅಂತ ಹೇಳಿದ್ದಿರಿ. ಅದಕ್ಕೆ ನಾನು ನೋಟಿಸ್ ಕೊಟ್ಟಾಗ ನಿಮಗೆ ಉತ್ತರ ನೀಡಲಾಗಲಿಲ್ಲ. ನಿಮ್ಮ ಶಾಸಕರೇ ಲೂಟಿಯ ಆರೋಪ ಮಾಡುತ್ತಿದ್ದಾರೆ. ಕೇಂದ್ರ ನಾಯಕರ ಪ್ರೋತ್ಸಾಹ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಹಾಗಾದರೆ ಇದರಲ್ಲಿ ಬಿಜೆಪಿಯ ಕೇಂದ್ರ ನಾಯಕರಿಗೆ ಎಷ್ಟು ಪರ್ಸೆಂಟ್ ಹೋಗುತ್ತಿದೆ? ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೂ ಕೊಳ್ಳೆ ಹೊಡೆಯಲು ಬಂದಿದ್ದಾರಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

    ಅಲ್ಪಮತದ ಸರ್ಕಾರ ಉಳಿಸಲು ಕುದುರೆ ವ್ಯಾಪಾರ:
    ಬಿಜೆಪಿಯ 128 ಶಾಸಕರ ಪೈಕಿ ಯಡಿಯೂರಪ್ಪನವರ ಪರ ಸಹಿ ಸಂಗ್ರಹದಲ್ಲಿ 65 ಶಾಸಕರು ಮಾತ್ರ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಗುಂಪುಗಾರಿಕೆ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ಸರ್ಕಾರ ಅಲ್ಪಮತದ ಸರ್ಕಾರವಾಗಿದೆ. ಮುಖ್ಯಮಂತ್ರಿಗಳ ಪರ ಬೆಂಬಲ ಪಡೆಯಲು ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ. ಯಡಿಯೂರಪ್ಪನವರ ಗುಂಪು ಶಾಸಕರ ಸೆಳೆಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದೆಲ್ಲದರಿಂದ ರಾಜ್ಯದ ಅಭಿವೃದ್ಧಿ ಕುಠಿತವಾಗಿದೆ. ಯಾವ ಮುಖ ಇಟ್ಟುಕೊಂಡು ಸರ್ಕಾರ ನಡೆಸುತ್ತಿದ್ದೀರಿ? ಎಂದು ಪ್ರಶ್ನಿಸಿದರು.

    ಗುಂಪುಗಾರಿಕೆ, ಕುದುರೆ ವ್ಯಾಪಾರ ಹಾಗೂ ಭ್ರಷ್ಟಾಚಾರಗಳ ಕಾರಣದಿಂದಾಗಿ ಈ ಕೂಡಲೇ ಸರ್ಕಾರವನ್ನು ವಜಾಗೊಳಿಸಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸುತ್ತೇನೆ. ಬಿಜೆಪಿಯವರ ಪ್ರಕಾರ 5-6 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ. ವಿಶ್ವನಾಥ್ ಅವರ ಪ್ರಕಾರ ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ನಲ್ಲಿ ಹಣ ಇಡಲಾಗಿದೆ, ಸಿಎಂ ಕುಟುಂಬದವರು ಕಿಯಾ ಕಾರ್ ಸ್ಟೇಟ್ ಏಜೆನ್ಸಿ ಪಡೆದಿದ್ದಾರೆ, ಮಾರಿಷಿಯಸ್ ಗೆ ಹೋಗಿ ಹಣವಿಟ್ಟು ಬಂದಿದ್ದಾರೆ ಎಂದು ಬಿಜೆಪಿ ನಾಯಕರೇ ಆರೋಪಿಸುತ್ತಿದ್ದಾರೆ. ನೀರಾವರಿ ಇಲಾಖೆ ಸೇರಿದಂತೆ ಈ ಎಲ್ಲ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

    ಬಳಿಕ ಮಾತನಾಡಿದ ಹೆಚ್.ಎಂ ರೇವಣ್ಣ, ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಎಲ್ಲ ರಂಗದಲ್ಲೂ ಭ್ರಷ್ಟಾಚಾರ ಜತೆಗೆ ಆಡಳಿತ ಕುಸಿದಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಏನಾಗುತ್ತಿದೆ, ಕೋವಿಡ್ ನಿರ್ವಹಣೆ ಹೇಗಿದೆ ಅಂತಲೂ ನಾವು ನೋಡುತ್ತಿದ್ದೇವೆ. ರಾಮಮಂದಿರ ಕಟ್ಟುತ್ತೇವೆ ಎಂದು ರಥಯಾತ್ರೆ ಮಾಡಿ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆಯಿಂದ ಹಣದವರೆಗೂ ದೇಣಿಗೆ ಪಡೆದರು. ಆದರೆ ಯಾವುದಕ್ಕೂ ಲೆಕ್ಕ ಇಲ್ಲ. ಸುಪ್ರೀಂ ಕೋರ್ಟ್ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದ ಮೇರೆಗೆ ರಚನೆಯಾದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಲ್ಲಿ 12,080 ಚ.ಮೀ ಜಮೀನನ್ನು 18.05 ಕೋಟಿ ರೂ.ಗೆ ಖರೀದಿ ಮಾಡಲಾಗಿದೆ ಎಂದರು.

    2021ರ ಮಾರ್ಚ್ 18ರಲ್ಲಿ ಈ ಭೂಮಿಯ ಮೂಲ ಮಾಲೀಕರು ಕೇವಲ 2 ಕೋಟಿಗೆ ರವಿ ತಿವಾರಿ ಮತ್ತು ಸುಲ್ತಾನ್ ಅನ್ಸಾರಿ ಮಾರುತ್ತಾರೆ. ಇದಾದ ಐದು ನಿಮಿಷದ ನಂತರ ಈ ಭೂಮಿಯನ್ನು ರವಿ ತಿವಾರಿ ಹಾಗೂ ಸುಲ್ತಾನ್ ಅನ್ಸಾರಿ ಅವರು 18.5 ಕೋಟಿ ರೂ.ಗೆ ಮಾರುತ್ತಾರೆ. ಈ ಟ್ರಸ್ಟ್ ನಲ್ಲಿರುವ ಬಿಜೆಪಿ ನಾಯಕರಾದ ಅನಿಲ್ ಮಿಶ್ರಾ, ಅಯೋಧ್ಯೆಯ ಮಾಜಿ ಮೇಯರ್ ಋಷಿಕೇಶ್ ಉಪದ್ಯಾಯ ಅವರು ಈ ಮಾರಾಟಕ್ಕೆ ಸಾಕ್ಷಿಯಾಗಿದ್ದಾರೆ. ಇವರು ರಾಮನ ಹೆಸರಿನಲ್ಲೂ ಹಗಲು ದರೋಡೆ ಮಾಡುತ್ತಿದ್ದಾರೆ. ಭಾರತ ಸಂಸ್ಕೃತಿ, ಹಿಂದೂ ಧರ್ಮ ಉಳಿಸುತ್ತೇವೆ ಎಂದು ಹೊರಟವರು ದೇವರ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಕೋವಿಡ್ ಸಮಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ 20 ಲಕ್ಷ ಕೋಟಿ ಪರಿಹಾರ ನೀಡುತ್ತೇವೆ ಎಂದರು. ಅದರಲ್ಲಿ ರಾಜ್ಯಕ್ಕೆ ಎಷ್ಟು ಬಂದಿದೆ, ಜನರಿಗೆ ಎಷ್ಟು ಸಿಕ್ಕಿದೆ ಲೆಕ್ಕವೇ ಇಲ್ಲ. ಇನ್ನು ರಾಜ್ಯ ಬಿಜೆಪಿ ಸರ್ಕಾರ 1200 ಕೋಟಿ ಘೋಷಿಸಿದ್ದು, ಇನ್ನೂ ಹಣ ಬಿಡುಗಡೆಯಾಗಿಲ್ಲ. ಇದರಲ್ಲಿ 11 ವಿಂಗಡಣೆಗಳಿವೆ. ಜೊತೆಗೆ ಆಧಾರ್, ಬ್ಯಾಂಕ್ ಖಾತೆ, ಬಿಪಿಎಲ್ ಸಂಖ್ಯೆ ನೀಡಬೇಕಾಗಿದೆ. ಇದರಿಂದ ಫಲಾನುಭವಿಗಳಿಗೆ ನೆರವು ತಲುಪದೆ, ಪರಿಹಾರ ಪ್ಯಾಕೇಜ್ ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿದೆ. ಈ ಸರ್ಕಾರ ಹಾಸಿಗೆ, ಔಷಧಿಗಳಲ್ಲಿ ಕಮಿಷನ್ ಪಡೆಯುತ್ತಿದೆ. ಈ ಸರ್ಕಾರದಲ್ಲಿ ಮಂತ್ರಿಗಳ ಸಮನ್ವಯತೆ ಇಲ್ಲವಾಗಿದೆ ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕ ಎಂ ರಾಮಚಂದ್ರಪ್ಪ, ಎಂ ಎ ಸಲೀಂ ಉಪಸ್ಥಿತರಿದ್ದರು.

  • ಡಿಸಿಎಂ ಕನಸು ಕಾಣುವ ಶ್ರೀರಾಮುಲು ಸತ್ಯ ಹೇಳಲಿ: ಉಗ್ರಪ್ಪ

    ಡಿಸಿಎಂ ಕನಸು ಕಾಣುವ ಶ್ರೀರಾಮುಲು ಸತ್ಯ ಹೇಳಲಿ: ಉಗ್ರಪ್ಪ

    -ಶ್ರೀರಾಮ ಒಂದು ವರ್ಗಕ್ಕೆ ಸೀಮಿತವಾಗಬಾರದು

    ಬಳ್ಳಾರಿ: ಉಪ ಮುಖ್ಯಮಂತ್ರಿಯ ಕನಸು ಕಾಣುತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಪಿಎ ಮಹೇಶ್ ಸಾವಿನ ಬಗ್ಗೆ ಸತ್ಯ ಹೇಳಲಿ ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.

    ಬಳ್ಳಾರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ಕೊರೊನಾ ಸೋಂಕು ನಿಯಂತ್ರಣ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿದೆ. ಈ ಹಿಂದೆ ನಮ್ಮ ಸಿದ್ದರಾಮಯ್ಯ ಸರ್ಕಾರ ಹತ್ತು ಪರ್ಸೆಂಟ್ ಸರ್ಕಾರವೆಂದು ಮೋದಿ ಅವರು ಹೇಳಿದ್ದರು. ಆಗ ಮೋದಿ ಮತ್ತು ಯಡಿಯೂರಪ್ಪ ಅವರಿಗೆ ನಾವು ನೋಟಿಸ್ ಕೊಟ್ಟಿದ್ದೀವಿ. ಅದಕ್ಕೆ ಉತ್ತರ ಈವರೆಗೂ ನೀಡಿಲ್ಲ. ಆದ್ರೆ ನಮಗೆ ನೋಟಿಸ್ ನೀಡಿದವರು ಅಧಿಕೃತ ವ್ಯಕ್ತಿಗಳಲ್ಲ ಎಂದು ರವಿಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಅವರು ಉಪಮುಖ್ಯಮಂತ್ರಿ ಕನಸು ಕಾಣೋ ಶ್ರೀರಾಮುಲು ನೂರಾರು ಲೂಟಿ ಹೊಡೆದಿದ್ದಾರೆ. ಶ್ರೀರಾಮುಲು ಪಿಎ ಮಹೇಶ್ ಅಸಹಜವಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಕಾನೂನು ಬಾಹಿರವಾಗಿ ಅಂತ್ಯಸಂಸ್ಕಾರ ಮಾಡಿದ್ದರ ಬಗ್ಗೆ ರವಿಕೃಷ್ಣ ರೆಡ್ಡಿ ದೂರು ಕೊಟ್ಟಿದ್ದಾರೆ. ಮಹೇಶ್ ರೆಡ್ಡಿ ಐದು ಕೋಟಿ ಅವ್ಯವಹಾರ ಮಾಡಿದ್ದಾರೆ. ಅವರ ಸಾವಿನ ಬಗ್ಗೆ ಶ್ರೀರಾಮುಲು ಉತ್ತರ ಕೊಡಬೇಕಿದೆ. ಈ ಬಗ್ಗೆ ಕೇಳಿದ್ರೆ ರಾಮುಲು ಅವರು ಮೌನ ತಾಳಿದ್ದಾರೆ. ಅಂದ್ರೆ ಮೌನ ಸಮ್ಮತಿ ಲಕ್ಷಣ ಎಂದಿದ್ದಾರೆ.

    ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡುತ್ತಿದ್ದಾರೆ. ಇದನ್ನು ನಾವು ಬೆಂಬಲಿಸುತ್ತೇವೆ. ಆದರೆ ರಾಮನ ಪರಿಕಲ್ಪನೆ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲ ವರ್ಗದ ಜನರಿಗೆ ಸೇರಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.

  • ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿಯಿವೆ 3 ಕುರಿ, 19 ಹಸು, 4 ಎತ್ತುಗಳು!

    ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳಿಯಿವೆ 3 ಕುರಿ, 19 ಹಸು, 4 ಎತ್ತುಗಳು!

    – ದೇವೇಂದ್ರಪ್ಪಗಿಂತ ಪತ್ನಿಯೇ ಶ್ರೀಮಂತ!
    – ಕೋಟಿ ಕೋಟಿ ರೂ. ಸಾಲ ಮಾಡಿದ್ದಾರೆ ಉಗ್ರಪ್ಪ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಳಿ ಸಾಕಷ್ಟು ಹಣವಿದೆ. ಅವರು ಬೇಕಾದಷ್ಟು ದುಡ್ಡು ಹಂಚುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದರು. ಆದರೆ ವೈ.ದೇವೇಂದ್ರಪ್ಪ ಬಳಿ ಹಣಕ್ಕಿಂತ ಹಸು, ಕುರಿ ಎತ್ತುಗಳಿದ್ದು ಆದಾಯ ತೆರಿಗೆ ಪಾವತಿದಾರರಲ್ಲ.

    ವೈ.ದೇವೇಂದ್ರಪ್ಪ ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಶ್ರೀಮಂತರಾಗಿದ್ದಾರೆ. ಅಷ್ಟೇ ಅಲ್ಲದೇ ಉಗ್ರಪ್ಪ ಅವರು ಕೋಟಿ ರೂ. ಸಾಲಗಾರರು ಕೂಡ ಆಗಿದ್ದಾರೆ.

    ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪ 67 ವರ್ಷದವರಾಗಿದ್ದು, 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 2.31 ಕೋಟಿ ರೂ. ಆಗಿದ್ದು, ಆದಾಯ ತೆರಿಗೆ ಪಾವತಿದಾರರಲ್ಲ. ದೇವೇಂದ್ರಪ್ಪ ಅವರ ಬಳಿ 1.50 ಲಕ್ಷ ರೂ. ನಗದು, 8.87 ಲಕ್ಷ ರೂ. ಮೌಲ್ಯದ ಚಿನ್ನ ಬೆಳ್ಳಿಯ ಆಭರಣ, ತಿಮ್ಮಲಾಪುರ, ಹಡಗಲಿ, ಮೈಸೂರು, ಬೆಂಗಳೂರು, ಅರಸಿಕೇರಿಯಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಜೊತೆಗೆ ದಾವಣಗೆರೆ ಹಾಗೂ ಅರಸಿಕೇರೆಯಲ್ಲಿ ಅಪಾರ್ಟಮೆಂಟ್ ಸೇರಿ 1.17 ಕೋಟಿ ರೂ. ಮೌಲ್ಯದ ಚಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್‍ನಲ್ಲಿ 32 ಲಕ್ಷ ರೂ. ಇಟ್ಟಿದ್ದು, 1.30 ಲಕ್ಷ ರೂ. ಸಾಲ ಪಡೆದಿದ್ದಾರೆ.

    ದೇವೇಂದ್ರಪ್ಪ ಪತ್ನಿ, ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯೆ ಸುಶೀಲಮ್ಮ ಆದಾಯ ತೆರಿಗೆ ಪಾವತಿದಾರರಾಗಿದ್ದು, 13.64 ಲಕ್ಷ ರೂ. ಆದಾಯ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್‍ಗಳಲ್ಲಿ 49.59 ಲಕ್ಷ ರೂ. ಹೊಂದಿದ್ದು, 18.15 ಲಕ್ಷ ರೂ. ಮೌಲ್ಯದ ಆಭರಣ ಅವರ ಬಳಿ ಇದೆ. 62.93 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 34.62 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಬಿ.ಎಸ್ಸಿ, ಎಲ್‍ಎಲ್‍ಬಿ ಪದವೀಧರರಾಗಿದ್ದಾರೆ. ಅವರ ಬಳಿ 2.77 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 8.05 ಕೋಟಿ ರೂ. ಸ್ಥಿರಾಸ್ತಿ ಇದೆ. ಜೊತೆಗೆ 2.2 ಕೆಜಿ ಚಿನ್ನಾಭರಣ ಹಾಗೂ 17 ಕೆಜಿ ಬೆಳ್ಳಿ ಹೊಂದಿದ್ದಾರೆ. ಉಗ್ರಪ್ಪ 2.22 ಕೋಟಿ ರೂ. ಸಾಲಗಾರರಾಗಿದ್ದು, ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

  • ಕಂಪ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಉಗ್ರಪ್ಪಗೆ ತರಾಟೆ

    ಕಂಪ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಉಗ್ರಪ್ಪಗೆ ತರಾಟೆ

    – ಶಾಸಕ ಗಣೇಶಗೆ ಶೀಘ್ರವೇ ಜಾಮೀನು ಕೊಡಿಸಿ

    ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನು ಪಕ್ಷದ ಕಾರ್ಯಕರ್ತರೇ ತರಾಟೆ ತೆಗೆದುಕೊಂಡ ಪ್ರಸಂಗ ಜಿಲ್ಲೆಯ ಕಂಪ್ಲಿಯಲ್ಲಿ ನಡೆದಿದೆ.

    ವಿ.ಎಸ್.ಉಗ್ರಪ್ಪ ಅವರು ಇಂದು ಕಂಪ್ಲಿಯಲ್ಲಿ ಸಮಾವೇಶ ಹಾಗೂ ಪ್ರಚಾರ ನಡೆಸಿದರು. ಈ ವೇಳೆ ಕೆಲವರು ಶಾಸಕ ಗಣೇಶ ಅವರಿಗೆ ಶೀಘ್ರವೇ ಜಾಮೀನು ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ನಿಮಗ್ಯಾಕೆ ನಾವು ಬೆಂಬಲ ಕೊಡಬೇಕು. ನಮ್ಮ ಶಾಸಕ ಗಣೇಶ್ ಅವರನ್ನು ಕರೆದುಕೊಂಡು ಬನ್ನಿ. ನಂತರ ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಕಿಡಿಕಾರಿದರು.

    ಈ ವೇಳೆ ಮಾತನಾಡಿ ಸಂಸದರು, ಶಾಸಕ ಗಣೇಶ್ ಪಿಎ ಹಾಗೂ ಈ ಭಾಗದ ಜನರು ಸಲ್ಲಿಸಿದ ಮನವಿಯನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಒಬ್ಬ ಮನುಷ್ಯ, ಸ್ನೇಹಿತನಾಗಿ ನಮ್ಮವರನ್ನು ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದ್ದೇನೆ. ರಾಮನಗರದ ಈಗಲ್‍ಟನ್ ರೆಸಾರ್ಟಿನಲ್ಲಿ ಘಟನೆ ನಡೆಯಬಾರದಿತ್ತು. ಶಾಸಕರಾದ ಆನಂದ್ ಸಿಂಗ್ ಹಾಗೂ ಕಂಪ್ಲಿಯ ಗಣೇಶ್ ಅವರ ಮಧ್ಯೆ ಉತ್ತಮ ಸಂಬಂಧವಿತ್ತು. ಆದರೆ ಈಗ ಅದು ಹಾಳಾಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಆನಂದ್ ಸಿಂಗ್ ಅವರ ಮನವೊಲಿಕೆಗೆ ಬಹಳ ಸಮಯ ಬೇಕಾಯಿತು. ಹೀಗಾಗಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಶಾಸಕರನ್ನು ಆದಷ್ಟು ಬೇಗ ಜಾಮೀನಿನ ಆಧಾರದ ಹೊರ ತರಲಾಗುತ್ತದೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

    ಏನಿದು ಪ್ರಕರಣ?:
    ಈಗಲ್ ಟನ್ ರೆಸಾರ್ಟಿನಲ್ಲಿ ಜನವರಿ 19ರ ರಂದು ರಾತ್ರಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಶಾಸಕ ಆನಂದ್ ಸಿಂಗ್ ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವೇಳೆ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಶಾಸಕ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿತ್ತು.

  • ಟಿಪ್ಪು ಸುಲ್ತಾನನ ಮೂಲ ಹೆಸರು ತಿಪ್ಪೇಸ್ವಾಮಿ: ಉಗ್ರಪ್ಪ

    ಟಿಪ್ಪು ಸುಲ್ತಾನನ ಮೂಲ ಹೆಸರು ತಿಪ್ಪೇಸ್ವಾಮಿ: ಉಗ್ರಪ್ಪ

    ಬಳ್ಳಾರಿ: ಟಿಪ್ಪು ಸುಲ್ತಾನನ ಮೂಲ ಹೆಸರು ತಿಪ್ಪೇಸ್ವಾಮಿಯಾಗಿದ್ದು ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನನೆಂದು ಬದಲಾವಣೆಯಾಗಿತ್ತೆಂದು ನೂತನ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

    ನಗರದ ಜೋಳದರಾಶಿ ದೊಡ್ಡನಗೌಡ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಟಿಪ್ಪು ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಇತ್ತೀಚೆಗೆ ಚಳ್ಳಕೆರೆ ತಾಲೂಕಿನ ಪ್ರಸಿದ್ಧ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಕ್ಷೇತ್ರಕ್ಕೆ ತೆರಳಿದ್ದೆ. ಆಗ ಅಲ್ಲಿನ ಜನರು ಟಿಪ್ಪುವಿನ ಬಗ್ಗೆ ಮಾಹಿತಿ ನೀಡಿದ್ದರು. ತಿಪ್ಪೇರುದ್ರಸ್ವಾಮಿಯವರ ವರಪ್ರಸಾದದಿಂದ ಹುಟ್ಟಿದವರೇ ಟಿಪ್ಪು ಸುಲ್ತಾನ್, ಮೊದಲು ಅವರಿಗೆ ತಿಪ್ಪೇಸ್ವಾಮಿ ಎಂದು ಹೆಸರನ್ನು ಇಟ್ಟಿದ್ದರು. ನಂತರ ಅದು ಟಿಪ್ಪು ಸುಲ್ತಾನನಾಗಿ ಬದಲಾಯಿತು ಎಂದು ಈಗಲೂ ಆ ಭಾಗದ ಜನರು ಹೇಳುತ್ತಾರೆ ಎಂದು ಹೇಳಿದರು.

     

    ಈ ಹಿಂದೆ ಹೈದರ್ ಆಲಿ ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಲು ಬಂದಾಗ, ದಾರಿಯಲ್ಲಿ ಜೀವೈಕ್ಯ ಸಮಾಧಿ ಆಗಿದ್ದ ಸ್ವಾಮಿಯ ಬಳಿ ಮಕ್ಕಳಿಲ್ಲದ ಹೈದರ್ ಮಕ್ಕಳ ಭಾಗ್ಯವನ್ನು ನೀಡೆಂದು ಕೇಳಿಕೊಂಡಿದ್ದರು. ಅಲ್ಲದೇ ಮಗುವಾದರೇ ನಿಮ್ಮ ಹೆಸರನ್ನೇ ಇಟ್ಟು ಮಂದಿರವನ್ನು ಕಟ್ಟಿಸುತ್ತೇನೆ ಎಂದು ಬೇಡಿಕೊಂಡಿದ್ದರು. ಸ್ವಾಮಿಯ ಅನುಗ್ರಹದಿಂದ ಹುಟ್ಟಿದವರೇ ಟಿಪ್ಪು ಸುಲ್ತಾನ್. ಇದಕ್ಕೆ ಸಾಕ್ಷಿ ಎಂಬಂತೆ ತಿಪ್ಪೇರುದ್ರ ಸ್ವಾಮಿಯ ದೇವಾಲಯ ಹಿಂದೂ ಮತ್ತು ಮುಸ್ಲಿಂ ಶೈಲಿಯಲ್ಲಿದೆ. ಈ ಮಂದಿರಕ್ಕೆ ಎಲ್ಲಾ ಮುಸ್ಲಿಂ ಬಾಂಧವರು ಬರುತ್ತಾರೆ. ದೇವಾಲಯದ ತೀರ್ಥ ಕುಡಿದು, ಗಂಧವನ್ನು ಹಚ್ಚುತ್ತಾರೆ. ಪ್ರತಿಯೊಬ್ಬ ಮುಸ್ಲಿಮರ ಮನೆಯಲ್ಲಿ ಸ್ವಾಮಿಯ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.

    ಯಾರೂ ಸಹ ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ರಾಮಾಯಣದಲ್ಲಿ ಸೀತೆ ಯಾವ ಜಾತಿ ಯಾರಿಗಾದರೂ ಗೊತ್ತಾ? ಸ್ವತಃ ಸೀತೆ ತಂದೆ ಜನಕ ಮಹರಾಜರಿಗೂ ಗೊತ್ತಿಲ್ಲ. ಯಾರಿಗೂ ಆಕೆಯ ಕುಲಾ-ಗೋತ್ರ ಗೊತ್ತಿಲ್ಲ. ಆದರೂ ಅವರ ಸದ್ಗುಣಗಳು ನಮಗೆಲ್ಲ ಆದರ್ಶವಾಗಿದೆ. ಟಿಪ್ಪು ಜಯಂತಿ ಆಚರಣೆಗೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಬಾರದು. ಅಲ್ಲದೇ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಟಿಪ್ಪು ಕೂಡ ಪ್ರಮುಖರೆಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ರವರೆ ಹೇಳಿದ್ದಾರೆ. ಹೀಗಾಗಿ ಇಂತಹ ಜಯಂತಿಗಳಲ್ಲಿ ಹುಳುಕನ್ನು ಹುಡುಕುವುದಕ್ಕಿಂತ ಅವರ ಆದರ್ಶ ಪಾಲಿಸಬೇಕೆಂದು ಅಭಿಪ್ರಾಯಪಟ್ಟರು.

    ಟಿಪ್ಪು ಜಯಂತಿ ಆಚರಣೆ ಮಾಡಿದ ಶ್ರೇಯಸ್ಸು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಆದರೆ ಇಂದು ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಈ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದರು. ಆದರೆ ಇಂದು ರಾಜಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆಂದು ಬಿಎಸ್ ಯಡಿಯೂರಪ್ಪನವರಿಗೆ ಪರೋಕ್ಷವಾಗಿ ಕುಟುಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ

    ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ

    ಬಳ್ಳಾರಿ: ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಸದ್ಯ ಉಗ್ರಪ್ಪ ಗೆಲುವು ಸಾಧಿಸಿದ ನಂತರ ಜನರಿಗೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ ಎಂದು ಹೇಳುತ್ತಾ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

    ಬಳ್ಳಾರಿ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ನಾನು ಬಳ್ಳಾರಿ ಜನರ ಮನೆ ಮಗನಾಗಿ, ತಮ್ಮನಾಗಿ ಕೆಲಸ ಮಾಡುವೆ. ಯಾವತ್ತೂ ಅಪ್ರಮಾಣಿಕವಾಗಿ ನಡೆದುಕೊಳ್ಳುವುದಿಲ್ಲ. ಈ ಗೆಲುವು ಬಳ್ಳಾರಿ ಜನರ ಗೆಲುವಾಗಿದೆ. ಯಾರೂ ದಬ್ಬಾಳಿಕೆ, ಸರ್ವಾಧಿಕಾರ ಧೋರಣೆಯ ವಿರುದ್ಧದ ಗೆಲುವು ಆಗಿದೆ. 2019ರ ಮೋದಿಯ ಜಿಎಸ್‍ಟಿ, ನೋಟು ನಿಷೇಧ, ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ಅಲೆಯಾಗಿದೆ. ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಮೋದಿ 39 ಸಾವಿರ ಕೋಟಿಯ ರಫೇಲ್ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.

    ನಾಲ್ಕು ತಿಂಗಳ ಅವಧಿಯಲ್ಲಿ ನನಗೆ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುವೆ. ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವೆ. ಪರಿಣಿತಿ ಹೊಂದಿದವರ ಸಂಪರ್ಕ ಸಾಧಿಸುವೆ. ಜನರ ಬಳಿ ಹೋಗಿ ಅವರ ಸಮಸ್ಯೆ ಅರಿತುಕೊಳ್ಳುವೆ. ಸಾರ್ವತ್ರಿಕ ಚುನಾವಣೆಗೂ ನಾನೇ ಅಭ್ಯರ್ಥಿಯಾಗುವ ಬಗ್ಗೆ ಪಕ್ಷದ ಆದೇಶಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

    ನಾನು ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ. ನನಗೆ ಸರ್ ಅನ್ನಬೇಡಿ. ನನ್ನನ್ನು ನಿಮ್ಮಲ್ಲಿ ಒಬ್ಬನಾಗಿ ಕರೆದರೆ ಸಾಕು. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇಲ್ಲೆ ಇರುವೆ. ನನ್ನ ಗೆಲುವಿಗೆ ಎಲ್ಲರ ಸಹಕಾರ. ಪ್ರಾಮಾಣಿಕ ಪ್ರಯತ್ನ ಕಾರಣವಾಯಿತು ಎಂದು ಹೇಳುತ್ತಾ ಶಾಸಕ ಶ್ರೀರಾಮುಲು ಹೇಳಿಕೆಗೆ ಉಗ್ರಪ್ಪ ತಿರುಗೇಟು ನೀಡಿದ್ದಾರೆ.

    ಜನಾದೇಶವನ್ನು ಲಘುವಾಗಿ ಪರಿಗಣಿಸಬಾರದು. ನಾನು ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬಳ್ಳಾರಿಗೆ ಪ್ಯಾಕೇಜ್ ಕೊಡುವುದರ ಬಗ್ಗೆ ನಾನು ಮಾತನಾಡಿಲ್ಲ. ಆದರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮಾಣಿಕ ಪ್ರಯತ್ನ ಮಾಡುವೆ. ಜನರಿಗೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv