Tag: V.G.Siddhartha

  • ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

    ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

    – ಕೊನೆಯ ಕ್ಷಣದಲ್ಲಿ ಪತ್ನಿ, ಮಗುವನ್ನ ನೆನೆದು ಈಜಿ ದಡ ಸೇರಿದ

    ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಕಾಣೆಯಾಗಿದ್ದ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ ನದಿಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.

    ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಆತ್ಮಹತ್ಯೆಗೆ ಯತ್ನಿಸಿದವರು. ಕೊನೆ ಕ್ಷಣದಲ್ಲಿ ಗಿರೀಶ್ ಪತ್ನಿ, ಮಗುವನ್ನು ನೆನೆದು ನಿರ್ಧಾರವನ್ನು ಬದಲಿಸಿ, ದಡದತ್ತ ಈಜಿಕೊಂಡು ಬಂದಿದ್ದಾರೆ. ಬಳಿಕ ಅವರನ್ನು ಮೀನುಗಾರರು ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.

    ಗಿರೀಶ್ ಅವರು ನಗರದ ಉರ್ವ ಸ್ಟೋರ್ ನಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗಿರೀಶ್ ಅವರ ಪತ್ನಿ ನಗರದ ಕೋರ್ಟ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಗಿರೀಶ್ ಅವರು ಪತ್ನಿ, ಮಗುವಿನೊಂದಿಗೆ ಉರ್ವ ಪಿಡಬ್ಲ್ಯುಡಿ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ.

    ಗಿರೀಶ್  ಭಾನುವಾರ ಸಂಜೆ ಮಂಗಳೂರಿನಿಂದ ಉಳ್ಳಾಲ ಕಡೆಗೆ ತೆರಳಿದ್ದಾರೆ. ಈ ವೇಳೆ ನೇತ್ರಾವತಿ ಸೇತುವೆಗೆ ಬಂದ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಪತ್ನಿ ಹಾಗೂ ಮಗು ನೆನಪಾಗಿ ಬದುಕಬೇಕು ಎಂದು ನಿರ್ಧರಿಸಿ, ಈಜಿ ದಡ ಸೇರಲು ಯತ್ನಿಸಿದ್ದರು. ಗಿರೀಶ್ ನದಿಗೆ ಹಾರಿದ್ದನ್ನು ಮೀನುಗಾರರು ನೋಡಿದ್ದರು. ಹೀಗಾಗಿ ಗಿರೀಶ್ ಈಜಿ ದಡದ ಕಡೆಗೆ ಬರುವುದನ್ನು ಕಂಡು ರಕ್ಷಣೆಗೆ ಮುಂದಾದರು. ಗಿರೀಶ್ ಅವರನ್ನು ರಕ್ಷಿಸಿ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಜುಲೈ 29ರಂದು ಮಂಗಳೂರು-ಉಳ್ಳಾಲ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಕಾಣೆಯಾಗಿದ್ದರು. ಎರಡು ದಿನಗಳ ಬಳಿಕ ಅಂದರೆ ಜುಲೈ 31ರಂದು ಸಿದ್ಧಾರ್ಥ್ ಅವರ ಮೃತ ದೇಹವು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಈಗ ಗಿರೀಶ್ ಅವರು ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಈ ಸೇತುವೆ ಸುಸೈಡ್ ಪಾಯಿಂಟ್ ಆಯಿತೆ ಎಂಬ ಚರ್ಚೆ ಎದ್ದಿದೆ.

  • ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದ್ದು, ಈ ಪತ್ರವನ್ನು ಕೆಫೆ ಕಾಫಿ ಡೇ(ಸಿಸಿಡಿ) ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲು ನಿರ್ಧರಿಸಿದೆ.

    ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು.ಈ ಸಭೆಯಲ್ಲಿ ಸಿದ್ಧಾರ್ಥ್ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಚರ್ಚೆ ನಡೆದಿದೆ.

    ಹಣಕಾಸು ವ್ಯವಹಾರ, ಲೆಕ್ಕ ಪರಿಶೋಧನೆ ಕಂಪನಿ ಇತರೇ ವಿಚಾರಗಳನ್ನು ತಿಳಿಸುವ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಸಿದ್ಧಾರ್ಥ್ ಅವರ ವೈಯಕ್ತಿಕ ಮಾಹಿತಿಗಳು ಇರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಗಂಭೀರವಾಗಿ ಸ್ವೀಕರಿಸಿದ್ದು ಕೂಲಂಕಷವಾಗಿ ತನಿಖೆ ಮಾಡಲು ನಿರ್ಧರಿಸಿದೆ ಎಂದು ಕಂಪನಿ ತಿಳಿಸಿದೆ.

    ಇಂದಿನ ಸಭೆಯಲ್ಲಿ ಎಸ್‍ವಿ ರಂಗನಾಥ್(ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ) ಅವರನ್ನು ಕಂಪನಿಯ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ನಿತಿನ್ ಬಾಗ್ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಕಾನೂನು ಸಲಹೆಗಾರರನ್ನಾಗಿ ಸಿರಿಲ್ ಅಮರಚಂದ್ ಮಂಗ್ಲದಾಸ್ ಅವರನ್ನು ನೇಮಿಸಲಾಗಿದೆ. ಮುಂದಿನ ಸಭೆಯನ್ನು ಆಗಸ್ಟ್ 8 ರಂದು ನಡೆಸಲು ತೀರ್ಮಾನಿಸಲಾಗಿದೆ.

  • ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಸೇತುವೆಯಿಂದ ಹಾರಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಹೇಳಿದ್ದೇನು?

    ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಸೇತುವೆಯಿಂದ ಹಾರಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಹೇಳಿದ್ದೇನು?

    ಮಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನದ ಬೆನ್ನಲ್ಲೇ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸ್ಥಳೀಯ ವ್ಯಕ್ತಿ ಸೈಮನ್ ತಾವು ನೋಡಿದ ದೃಶ್ಯಗಳ ಬಗ್ಗೆ ವಿವರಿಸಿದ್ದಾರೆ.

    ಸೈಮನ್ ಹೇಳಿದ್ದೇನು?
    ಸೋಮವಾರ ಸಂಜೆ 5.30ರ ವೇಳೆಗೆ ನಾನು ನದಿ ಬಳಿ ಮೀನು ಹಿಡಿಯಲು ಹೋಗಿದ್ದೆ. ರಾತ್ರಿ 7.30ರ ವೇಳೆಗೆ ಸೇತುವೆ ಬಳಿ ಶಬ್ದ ಕೇಳಿ ಬಂತು. ತಕ್ಷಣ ನೋಡಿದ ಕೂಡಲೇ ವ್ಯಕ್ತಿಯೊಬ್ಬರು ನದಿಗೆ ಹಾರಿದ್ದು, ಅಲ್ಲಿಂದ ಸ್ವಲ್ಪ ದೂರ ಸಾಗಿದ್ದು ಕಂಡು ಬಂತು. ನಾನು 6ನೇ ಪಿಲ್ಲರ್ ಬಳಿ ಇದ್ದೆ, ಅವರು 8ನೇ ಪಿಲ್ಲರ್ ಬಳಿ ಹಾರಿದ್ದರು.

    ಕೂಡಲೇ ಅವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದೆ. ಒಬ್ಬನೇ ಇದ್ದ ಕಾರಣ ನನಗೆ ಅವರು ಸಿಗಲಿಲ್ಲ. ಆದ್ದರಿಂದ ನನ್ನ ಪ್ರಯತ್ನ ವಿಫಲವಾಯಿತು. ಮೋಟರ್ ಇಲ್ಲದ ದೋಣಿಯಲ್ಲಿ ತೆರಳಿದ್ದೆ. ಬೇಗ ಹೋಗುವ ಪ್ರಯತ್ನ ಸಾಧ್ಯವಾಗಲಿಲ್ಲ. ಅವರು ಯಾವ ರೀತಿ ಇದ್ದರು, ಯಾವ ಬಟ್ಟೆ ಧರಿಸಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಇಂತಹದ್ದೆ ಸಂದರ್ಭದಲ್ಲಿ 6 ಮಂದಿಯನ್ನ ರಕ್ಷಣೆ ಮಾಡಿದ್ದೆ. ನಮಗೂ ಜೀವದ ಕುರಿತು ಆಸೆ ಇರುವುದರಿಂದ ನದಿಗೆ ಹಾರದೇ ದೋಣಿ ಮೂಲಕವೇ ಸಾಗುತ್ತೇವೆ. ಏಕೆಂದರೆ ನೀರಿನ ರಭಸ ಹೆಚ್ಚಾಗಿರುತ್ತದೆ.

    ಇದಕ್ಕೂ ಮುನ್ನ ಸಾಕಷ್ಟು ಮಂದಿ ಇಲ್ಲಿಯೇ ಬಂದು ಹಾರಿದ್ದರು. ಆದ್ದರಿಂದ ನಾನು ಸ್ಥಳೀಯವಾಗಿ ಮಾಹಿತಿ ನೀಡಿದ್ದೆ ಅಷ್ಟೇ. ಮಳೆ ಪ್ರಮಾಣ ಕಡಿಮೆ ಇರುವುದರಿಂದ ದೇಹ ಸಿಗುವ ಸಾಧ್ಯತೆ ಇದೆ. ಯಾವುದೇ ಮೃತ ದೇಹವಾದರೂ 24 ಗಂಟೆ ಬಳಿಕ ನೀರಿನಿಂದ ಮೇಲೆ ಬರುತ್ತದೆ. ಸಮುದ್ರಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಕಡಿಮೆ ಇದ್ದು, ನದಿಯಲ್ಲೇ ಸಿಗುವ ವಿಶ್ವಾಸ ಇದೆ. ಈ ಬಗ್ಗೆ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲರ ನಿರೀಕ್ಷೆ ಒಂದೇ ಇದೆ ಎಂದರು.

    https://www.youtube.com/watch?v=S8AvtIh5VB8