Tag: V.G Siddarth

  • ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

    ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

    ಕೋಲ್ಕತ್ತಾ: ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಸಾವಿನ ಸುದ್ದಿ ತಿಳಿದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ  ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ಧಾರ್ಥ್ ಅವರಿಗೆ ನೆಮ್ಮದಿಯಿಂದ ಉದ್ಯಮ ನಡೆಸಲು ತೆರಿಗೆ ಇಲಾಖೆ ಹಾಗೂ ಇತರೆ ಸಂಸ್ಥೆಗಳು ಬಿಡುತ್ತಿರಲಿಲ್ಲ. ಮನನೊಂದು ಈ ನಿರ್ಧಾರವನ್ನು ಸಿದ್ಧಾರ್ಥ್ ತೆಗೆದುಕೊಂಡಿದ್ದರು ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಶಾಂತಿಯುತವಾಗಿ ಆಡಳಿತ ನಡೆಸಿ, ದ್ವೇಷ ರಾಜಕಾರಣವನ್ನು ಬದಿಗಿಟ್ಟು ತನಿಖಾ ಸಂಸ್ಥೆಗಳನ್ನು ದೇಶದ ಭವಿಷ್ಯವನ್ನು ನಾಶಮಾಡದಂತೆ ನೋಡಿಕೊಳ್ಳಬೇಕಿದೆ ಎಂದು ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಸಂಸತ್ತಿನಲ್ಲಿ ಸಿದ್ಧಾರ್ಥ್ ಸಾವು ಪ್ರಸ್ತಾಪ – ತನಿಖೆಗೆ ಮನೀಷ್ ತಿವಾರಿ ಆಗ್ರಹ

    ಪೋಸ್ಟ್ ನಲ್ಲಿ ಏನಿದೆ?
    ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ದಾರ್ಥ್ ಅವರ ಅಕಾಲಿಕ ಹಾಗೂ ಅನಿರೀಕ್ಷಿತ ಮರಣದಿಂದ ತೀವ್ರ ಆಘಾತವಾಗಿದೆ. ಇದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಸಂಗತಿಯಾಗಿದೆ.

    ಸಿದ್ದಾರ್ಥ್ ಅವರಿಗೆ ತಮ್ಮ ಉದ್ಯಮವನ್ನು ನೆಮ್ಮದಿಯಿಂದ ನಡೆಸಲು ತೆರಿಗೆ ಇಲಾಖೆಯೂ ಸೇರಿದಂತೆ ನಾನಾ ಸಂಸ್ಥೆಗಳ ಕಿರುಕುಳದಿಂದ ಸಾಧ್ಯವಾಗಲಿಲ್ಲ ಎಂಬುದು ಅವರು ಬರೆದಿರುವ ಪತ್ರದಿಂದ ತಿಳಿದಿದೆ. ಈ ಬಗ್ಗೆ ಕೇಳಿದಾಗ ತುಂಬ ನೋವಾಯಿತು. ಅಂತಹ ಕಿರುಕುಳವನ್ನು ತಡೆದುಕೊಳ್ಳುವ ಶಕ್ತಿ ಅವರಿಗಿರಲಿಲ್ಲ. ಇದರಿಂದ ಅವರು ಹೆಚ್ಚು ಒತ್ತಡದಲ್ಲಿದ್ದರು ಎನ್ನಲಾಗಿದೆ. ದೇಶದಲ್ಲಿ ಉದ್ಯಮಿಗಳಿಗೆ ಉಂಟಾಗುತ್ತಿರುವ ಕಿರುಕುಳಗಳನ್ನು ತಡೆಯಲು ಏನಾದರೂ ಮಾಡಲೇಬೇಕಿದೆ. ರಾಜಕೀಯ ದ್ವೇಷ ಸಾಧನೆಗಾಗಿ ಕುದುರೆ ವ್ಯಾಪಾರ ಮತ್ತು ಕಿರುಕುಳ ನೀಡಲಾಗುತ್ತಿರುವ ವಿಚಾರ ಪ್ರತಿಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ:ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಒಂದೆಡೆ ದೇಶದ ಆರ್ಥಿಕ ಬೆಳವಣಿಗೆ ತೀವ್ರವಾಗಿ ಕುಸಿದಿದೆ. 2018-19ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.5.8ಕ್ಕೆ ಕುಸಿದಿತ್ತು. ಇದು ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ. ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಎನ್ನುವ ಹಾಗೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ಹಿಡಿದು ಬಿಎಸ್‍ಎನ್‍ಎಲ್ ವರೆಗೆ, ಏರ್ ಇಂಡಿಯಾದಿಂದ ರೈಲ್ವೇ ಇಲಾಖೆ ತನಕ ಎಲ್ಲಾ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ.

    ಸರ್ಕಾರದ ಈ ನಿರ್ಧಾರದಿಂದ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗುತ್ತಿದೆ. ಜನಸಾಮಾನ್ಯರು ತೊಂದರೆಯಲ್ಲಿ ಸಿಲುಕುತ್ತಿದ್ದಾರೆ. ಉದ್ಯಮ, ಕೃಷಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಸುವಲ್ಲಿಯೇ ದೇಶದ ಭವಿಷ್ಯ ಅಡಕವಾಗಿದೆ. ಉದ್ಯಮ ವಲಯವನ್ನು ನಿರಾಶೆಗೊಳಿಸಿದರೆ ದೇಶದಲ್ಲಿ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳ ಬೆಳವಣಿಗೆ ಇರುವುದಿಲ್ಲ. ಹೀಗಾಗಿ ಹೆಚ್ಚು ಹೆಚ್ಚು ಜನ ನಿರುದ್ಯೋಗಿ ಆಗುತ್ತಾರೆ. ಇದನ್ನೂ ಓದಿ:ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಸರ್ಕಾರವು ಶಾಂತಿಯುತವಾಗಿ ಕೆಲಸ ನಿರ್ವಹಿಕೊಂಡು ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ರಾಜಕೀಯ ದ್ವೇಷ ಹಾಗೂ ತನಿಖಾ ಸಂಸ್ಥೆಗಳು ದೇಶದ ಭವಿಷ್ಯವನ್ನು ನಾಶಗೊಳಿಸದಂತೆ ನೋಡಿಕೊಳ್ಳಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮಾನವಿ ಮಾಡುತ್ತಿದ್ದೇನೆ.

    ಈ ದುರದೃಷ್ಟಕರ ಸುದ್ದಿ ತಿಳಿದು ನನಗೆ ನಿಜಕ್ಕೂ ನೋವಾಗಿದೆ. ಸಿದ್ಧಾರ್ಥ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಜೊತೆ ನನ್ನ ಭಾವನೆ ಮತ್ತು ಮಾತುಗಳನ್ನು ತಿಳಿಸಬೇಕೆಂದು ಅನಿಸಿಕೆಗಳನ್ನು ಹಂಚಿಕೊಂಡೆ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/MamataBanerjeeOfficial/posts/2603989656335026

  • ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    – ವಿದ್ಯಾರ್ಥಿಯಾಗಿದ್ದಾಗ ಕಾರ್ಲ್ ಮಾರ್ಕ್ಸ್ ಅಭಿಮಾನಿ
    – 35 ಸಾವಿರ ನೀಡಿ ದೂರವಾಣಿ ಖರೀದಿ
    – ಬೆಂಗ್ಳೂರಲ್ಲಿ 5 ಲಕ್ಷಕ್ಕೆ 1 ಸೈಟ್

    ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಯುವಕರಾಗಿದ್ದಾಗ ಭಾರತೀಯ ಸೇನೆ ಸೇರುವ ಕನಸು ಕಂಡು ಪರೀಕ್ಷೆ ಸಹ ಬರೆದಿದ್ದರು. ಆದರೆ ಸೇನೆ ಸೇರುವ ಕನಸು ನನಸಾಗಲಿಲ್ಲ. ನಾನೊಬ್ಬ ಉದ್ಯಮಿ ಆಗುತ್ತೇನೆ ಎನ್ನುವ ಕನಸನ್ನು ಕಾಣದ ಸಿದ್ದಾರ್ಥ್ ಹಂತ ಹಂತವಾಗಿ ಬೆಳೆಯುತ್ತಾ ದೇಶದ ಅತಿ ದೊಡ್ಡ ಕಾಫಿ ಉದ್ಯಮಿಯಾಗಿ ಬೆಳೆದದ್ದೇ ಒಂದು ರೋಚಕ ಕಥೆ.

    ಕಾನ್ಪುರದ ಐಐಟಿನಲ್ಲಿ ನಡೆದ 2016ರ ಇ-ಸಮಿತ್ ಕಾರ್ಯಕ್ರಮದಲ್ಲಿ ವಿ.ಜಿ ಸಿದ್ಧಾರ್ಥ್ ಅವರು ತಾವು ಉದ್ಯಮಿಯಾಗಲು ಏನು ಪ್ರೇರಣೆ ಎನ್ನುವುದರ ಬಗ್ಗೆ ಹಂಚಿಕೊಂಡಿದ್ದರು.

    ನಾನು 18 ವರ್ಷದವನಿದ್ದಾಗ ಉದ್ಯಮಿ ಆಗುತ್ತೇನೆ ಎಂದು ಭಾವಿಸಿರಲಿಲ್ಲ. ನಾನೂ ಭಾರತೀಯ ಸೇನೆಗೆ ಸೇರಿ ಯೋಧನಾಗಿ ದೇಶಕ್ಕಾಗಿ ಹೋರಾಡಲು ಬಯಸಿದ್ದೆ. ನಾನು ಎನ್‍ಡಿಎ ಪರೀಕ್ಷೆಯನ್ನು ಕೂಡ ಬರೆದಿದ್ದೆ. ಆದರೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲನಾದೆ. ಇದೊಂದು ನನ್ನ ಜೀವನದಲ್ಲಿ ದೊಡ್ಡ ವಿಷಾದಕರ ಸಂಗತಿಯಾಗಿ ಇಂದಿಗೂ ಉಳಿದುಬಿಟ್ಟಿದೆ.

    ನಂತರ 20ರ ವಯಸ್ಸಿನಲ್ಲಿ ನಾನು ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕಾರ್ಲ್ ಮಾರ್ಕ್ಸ್ ಅವರಿಂದ ಪ್ರೇರಣೆಗೊಂಡು ಕಮ್ಯೂನಿಸ್ಟ್ ಪರ ಚಿಂತನೆ ಬೆಳೆಸಿದ್ದೆ. ಕಾರ್ಲ್ ಮಾರ್ಕ್ಸ್ ಅವರ ಸಿದ್ಧಾಂತ ನಿಜಕ್ಕೂ ಅದ್ಭುತವಾದಂತದ್ದು. ಅವರ ಸಿದ್ಧಾಂಗಳು ನನ್ನನ್ನು ಎಷ್ಟರ ಮಟ್ಟಿಗೆ ಪ್ರೇರೆಪಿಸಿತ್ತು ಎಂದರೆ ಆ ದಶಕದಲ್ಲಿ ನಾನು ಕಮ್ಯೂನಿಸ್ಟ್ ಪಕ್ಷದ ಸದಸ್ಯನಾಗಿದ್ದೆ. ರಷ್ಯಾದ ಇತಿಹಾಸ ಓದಿದಾಗ ಜನರು ಅಧಿಕಾರ ಸಿಕ್ಕ ಮೇಲೆ ಯಾವ ಕಾರಣಕ್ಕೆ ಅವರು ಅಧಿಕಾರಕ್ಕೆ ಬಂದಿದ್ದಾರೋ ಅದನ್ನು ಮರೆತು ಬಿಡುತ್ತಾರೆ ಎನ್ನುವುದು ಗೊತ್ತಾಯಿತು. ರಷ್ಯಾದ ಇತಿಹಾಸ ಓದಿದ ಬಳಿಕ ನಾನೂ ಕೂಡ ರಾಬಿನ್‍ಹುಡ್ ಆಗಬಹುದು, ಶ್ರೀಮಂತರಿಂದ ಸಂಪತ್ತನ್ನು ಪಡೆದು ಬಡವರಿಗೆ ನೀಡಬಹುದು ಎಂಬುದನ್ನ ತಿಳಿದೆ. ಅದನ್ನೇ ಯೋಚಿಸುತ್ತ ಅಂತಿಮ ವರ್ಷದ ಪದವಿ ಮುಗಿಸಿದೆ. ಈ ಸಂದರ್ಭದಲ್ಲಿ ದುಡ್ಡು ಮಾಡಲು ಆಗುವುದಿಲ್ಲ ಅಂತ ತಿಳಿಯಿತು.

    ನಾನು ಮೊದಲು ಜೆಮ್ ಫೈನಾಸ್‍ನಲ್ಲಿ ರಿಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡಲು ಆರಂಭಿಸಿದೆ. 1983-84ರಲ್ಲಿ ನಾನು ಡೈರಿ ಬರೆಯಲು ಶುರುಮಾಡಿದೆ. ಆಗ ಈ ದೇಶದ ಮಾರ್ಕೆಟ್ ಕ್ಯಾಪಿಟಲೈಸೆಷನ್ 30 ಸಾವಿರ ಕೋಟಿ ಇತ್ತು. ಆದರೆ ಈಗ ಫ್ಲಿಪ್‍ಕಾರ್ಟ್ ಮೌಲ್ಯವೇ ಅದಕ್ಕಿಂತ ಹೆಚ್ಚಾಗಿದೆ. ದೇಶದಲ್ಲಿ ಮಾರ್ಕೆಟ್ ಕ್ಯಾಪಿಟಲೈಸೆಷನ್ ಕಡಿಮೆ ಇತ್ತು. ರಿಸರ್ಚ್ ಅನಾಲಿಸ್ಟ್ ಆಗಿದ್ದರಿಂದ ಸುಮಾರು 30-40 ವಿವಿಧ ಉದ್ಯಮಗಳ ಬಗ್ಗೆ ತಿಳಿಯಲು ಅವಕಾಶ ದೊರಕಿತ್ತು. 1985ರ ಸಮಯದಲ್ಲಿ ತಂತ್ರಜ್ಞಾನಿಕ ಉದ್ಯಮಗಳು ಹೆಚ್ಚಾಗಿ ಇರಲಿಲ್ಲ. ಟೆಲಿಕಾಂ ಉದ್ಯಮ ಇರಲಿಲ್ಲ, ದೊಡ್ಡ ಮಟ್ಟದಲ್ಲಿ ರಿಟೇಲ್ ಇರಲಿಲ್ಲ. ಅಲ್ಲದೆ ಮುಂದಿನ 20 ವರ್ಷಕ್ಕೆ ಜಗತ್ತು ಹೇಗಿರುತ್ತೆ ಎನ್ನುವ ಬಗ್ಗೆ ಕಲ್ಪನೆ ಕೂಡ ಇರಲಿಲ್ಲ.

    2 ವರ್ಷ ಕೆಲಸ ಮಾಡಿದ ಬಳಿಕ ಕೆಲಸ ಬಿಟ್ಟು ನಾನು ನನ್ನ ಊರಿಗೆ ಹೋದೆ. ಅಲ್ಲಿ ನಾನು ಸ್ವಂತ ಉದ್ಯಮ ಆರಂಭಿಸಲು ಹಿಂದೆಯೇ ನಿರ್ಧರಿಸಿದ್ದೆ. 1870ನಿಂದಲೂ ನಮ್ಮ ಕುಟುಂಬ ಕಾಫಿ ಬೆಳೆ ಬೆಳೆದುಕೊಂಡು ಬಂದಿತ್ತು. ಸುಮಾರು 300 ಎಕ್ರೆಯಷ್ಟು ಕಾಫಿ ಬೆಳೆ ಹೊಂದಿದ್ದೆವು. ಅಲ್ಲದೆ ನಮ್ಮ ತಂದೆಗೆ ನಾನೊಬ್ಬನೇ ಮಗ ಆಗಿದ್ದರಿಂದ ಬೇರೆ ಕಡೆ ಹೋಗಿ ಕೆಲಸ ಮಾಡುವುದು ಬೇಡ ಎಂದಿದ್ದರು. ಯಾಕೆಂದರೆ ಸುಮಾರು 15 ರಿಂದ 20 ಲಕ್ಷ ವಾರ್ಷಿಕ ಆದಾಯವನ್ನು ತಮ್ಮ ತಂದೆ ಗಳಿಸುತ್ತಿದ್ದರು. ಆದರೆ 21 ವರ್ಷಕ್ಕೆ ಜೀವನಲ್ಲಿ ನಿವೃತ್ತಿ ಪಡೆಯಲು ನನಗೆ ಇಷ್ಟವಿರಲಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಆಸೆ ನನಗಿತ್ತು. ಆಗ ತಂದೆ ಹತ್ತಿರ ನಾನು ಏನಾದರೂ ಸ್ವಂತ ಉದ್ಯಮ ಮಾಡಬೇಕು ಎಂದು ಹೇಳಿದಾಗ ಅವರು ನನಗೆ ಸುಮಾರು 7.5 ಲಕ್ಷ ರೂ. ಕೊಟ್ಟು, ಒಂದುವೇಳೆ ನೀನು ಸೋತರೆ ವಾಪಸ್ ಬಂದುಬಿಡು. ಗೆದ್ದರೆ ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ಕಳುಹಿಸಿದರು.

    ನಮ್ಮ ಕಡೆಯ ಜನರಿಗೆ ಸ್ವಲ್ಪ ಸ್ವಾಭಿಮಾನ ಹೆಚ್ಚು, ಹೀಗಾಗಿ ಎಲ್ಲಾ ಹಣವನ್ನು ನಾನು ಕಳೆದುಕೊಳ್ಳಲು ಇಚ್ಛಿಸದೇ 1985ರಲ್ಲಿಯೇ ಬೆಂಗಳೂರಿನಲ್ಲಿ 5 ಲಕ್ಷಕ್ಕೆ 1 ಸೈಟ್ ಖರೀದಿಸಿದೆ. ಒಂದುವೇಳೆ ಬಿಸಿನೆಸ್‍ನಲ್ಲಿ ಹಣ ಕಳೆದುಕೊಂಡರೂ ಸ್ಪಲ್ಪ ಹಣ ಸೈಟ್‍ನಿಂದ ಮುಂದೆ ಸಿಗುತ್ತದೆ ಎಂದು ಯೋಚಿಸಿ ಉಪಾಯ ಮಾಡಿದ್ದೆ. ನನ್ನನ್ನು ನಂಬಿ ತಂದೆ ಹಣ ನೀಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಉಳಿದ 2.5 ಲಕ್ಷ ಹಣವನ್ನು ಇಟ್ಟುಕೊಂಡು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡೆ. ಬ್ರಿಟಾನಿಯಾ ಕಂಪನಿ ಮೇಲೆ ಇಕ್ವಿಟಿ ಮಾರ್ಕೆಟ್‍ನಿಂದ ಹಣ ಹೂಡಿದೆ. 1985-92ರವರೆಗೆ ಇಕ್ವಿಟಿ ಮಾರ್ಕೆಟ್‍ನಿಂದ ಸಾಕಷ್ಟು ಹಣ ಮಾಡಿದೆ. ಆಗ ತಂತ್ರಜ್ಞಾನ ಹೆಚ್ಚು ಮುಂದುವರಿದಿರಲಿಲ್ಲ. ಮೊಬೈಲ್ ಫೋನ್‍ಗಳು ಇರಲಿಲ್ಲ. ಕೇವಲ ಲ್ಯಾಂಡ್‍ಲೈನ್ಸ್ ಮಾತ್ರ ಇತ್ತು. ಆಗ ನಾನು 50 ಸಾವಿರ ಹಣವನ್ನು ಬ್ಯಾಂಕಿನಲ್ಲಿಟ್ಟು, 35 ಸಾವಿರ ನೀಡಿ ಲ್ಯಾಂಡ್‍ಲೈನ್ ಕನೆಕ್ಷನ್ ಪಡೆದೆ. ಬಳಿಕ ನನ್ನ ಕೈಯಲ್ಲಿ ಅಂದಾಜು 50 ಸಾವಿರ ಮಾತ್ರ ಉಳಿದಿತ್ತು. ಈ ಫೋನ್ ಮೂಲಕವೇ ಮುಂಬೈ, ದೆಹಲಿಯ ಜನರ ಜೊತೆ ಮಾತನಾಡುತ್ತಿದ್ದೆ.

    ಸಾಕಷ್ಟು ಹಣ ಮಾಡಿದ ಬಳಿಕ ನಾನು ಕಾಫಿ ಹಿನ್ನೆಲೆಯಿಂದ ಬಂದವನು, ಆ ಕ್ಷೇತ್ರದಲ್ಲೇ ಏನಾದರೂ ಮಾಡಬೇಕು ಎನ್ನುವ ಯೋಚನೆ ಬಂತು. ವಿಯೆಟ್ನಾಂ, ಬ್ರೆಜಿಲ್, ಕೊಲಂಬಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಅಂದಾಜು 40 ಲಕ್ಷ ಕಾಫಿ ಬೆಳೆಗಾರರು ಇದ್ದಾರೆ. ಅಲ್ಲದೆ ಭಾರತದಲ್ಲಿರುವ ಕಾಫಿ ಬೆಳೆಗಾರರಲ್ಲಿ 90 ಶೇ.ದಷ್ಟು ಮಂದಿ 5 ಹೆಕ್ಟೇರ್ ಗಿಂತ ಕಡಿಮೆ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದರು.

    ಆಗಿನ ಕಾಲದಲ್ಲಿ ಕಾಫಿಗಾಗಿ ರಿಟೇಲ್ ಮಾರ್ಕೆಟಿಂಗ್ ಇರಲಿಲ್ಲ. ಸರ್ಕಾರ ನಡೆಸುತ್ತಿದ್ದ ಕಾಫಿ ಬೋರ್ಡಿಗೆ ಬೆಳೆಗಾರರು ಕಾಫಿ ನೀಡುತ್ತಿದ್ದರು. ಆದರೆ ಭಾರತ ಸರ್ಕಾರ ರಷ್ಯಾದಿಂದ ಯುದ್ಧ ಟ್ಯಾಂಕ್ ಖರೀದಿಸಲು ಅವರಿಗೆ ಕಾಫಿ ಮಾರಾಟ ಮಾಡುತಿತ್ತು. ಹೀಗಾಗಿ ಆಗ 1 ಪೌಂಡ್ ಕಾಫಿಗೆ 35 ಸೆನ್ಸ್ ಬೆಲೆ ಮಾತ್ರ ಭಾರತೀಯ ಬೆಳೆಗಾರರಿಗೆ ಸಿಗುತ್ತಿತ್ತು. ಆದರೆ ವಿದೇಶದ 1 ಪೌಂಡ್ ಕಾಫಿಗೆ ಸುಮಾರು 1 ಡಾಲರ್ 29 ಸೆನ್ಸ್ ಬೆಲೆ ನೀಡಲಾಗುತ್ತಿತ್ತು. ಇಕ್ವೀಟಿ ಮಾರ್ಕೆಟ್‍ನಲ್ಲಿ ಹಣ ಮಾಡುತ್ತಲೇ ನಾನು ಸ್ಪಲ್ಪ ಹಣವನ್ನು ಕಾಫಿ ಪ್ಲಾಂಟೆಷನ್‍ಗೆ ಹಾಕಿದ್ದೆ. ಆದ್ದರಿಂದ 1992-93ರ ಹೊತ್ತಿಗೆ ನಾನು 5 ಸಾವಿರ ಎಕ್ರೆ ಕಾಫಿ ಪ್ಲಾಂಟೆಷನ್ ಮಾಡಿಕೊಂಡೆ. ಆಗ ಅರ್ಥಶಾಸ್ತ್ರಜ್ಞರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನನ್ನನ್ನು ಶ್ಲಾಘಿಸಿದ್ದರು. ನಾನು ಹಾಗೂ ನನ್ನ ಕೆಲ ಸ್ನೇಹಿತರು ಅವರ ಬಳಿ ಹೋಗಿ ಕಾಫಿ ಬೆಳೆಗಾರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿ ಭಾರತೀಯ ಕಾಫಿ ಬೆಲೆ ಹಾಗೂ ವಿದೇಶಿ ಬೆಲೆಯ ಚಾರ್ಟ್ ನೀಡಿದೆವು. ಆಗ ಅವರು ಈ ಬಗ್ಗೆ ಮೊದಲೇ ಯಾಕೆ ತಿಳಿಸಲಿಲ್ಲ ಎಂದಿದ್ದರು.

    ನಾನು ಆಕಸ್ಮಿಕವಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವನು ಆದರೆ 1995ರ ಹೊತ್ತಿಗೆ ನಾನು ಭಾರತದ ದೊಡ್ಡ ಟ್ರೇಡರ್ ಆದೆ. 15-20 ಲಕ್ಷ ಕೋಟಿ ರೂ. ಟ್ರೇಡಿಂಗ್‍ನಲ್ಲಿ ಲಾಭ ಬರುತ್ತಿತ್ತು. ಎಲ್ಲಿಯೂ ಕೂಡ ಸುಲಭವಾಗಿ ಹಣ ಬರಲ್ಲ. 3 ವರ್ಷದಲ್ಲಿ ಅತ್ಯಂತ ಹೆಚ್ಚು ಕಾಫಿ ಕಮಡಿಟಿ ಟ್ರೇಡಿಂಗ್ ಮಾಡುವ ಉದ್ಯಮಿಯಾಗುವುದು ಸುಲಭ ಇರಲಿಲ್ಲ. ನಂತರ ಸ್ವಂತ ಕಾಫಿ ಬ್ರಾಂಡ್ ಶುರುಮಾಡಿ ಯಶಸ್ವಿಯಾದೆ. ಸದ್ಯ ನಾನು ಸುಮಾರು 11 ರಾಷ್ಟ್ರಗಳಲ್ಲಿ ಕಾಫಿ ಟ್ರೇಡಿಂಗ್ ನಡೆಸುತ್ತಿದ್ದೇನೆ. ಅದರಿಂದ ಪ್ರತಿದಿನ ಸುಮಾರು 2.5 ಬಿಲಿಯನ್ ಡಾಲರ್ ಲಾಭ ಪಡೆಯುತ್ತಿದ್ದೇನೆ ಎಂದು ತಮ್ಮ ಉದ್ಯಮ ಹೇಗೆ ಆರಂಭವಾಯ್ತು ಎನ್ನುವುದನ್ನು ಸಿದ್ದಾರ್ಥ್ ವಿವರಿಸಿದ್ದರು.

  • ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    – ಕಾಫಿ ಸಾಮ್ರಾಟ ನಾಪತ್ತೆಯಾಗಿದ್ದ ಕುರಿತು ಮಲ್ಯ ಟ್ವೀಟ್‍

    ನವದೆಹಲಿ: ನಾನೂ ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

    ಭಾರತೀಯ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಸದ್ಯ ಮಲ್ಯ ಇಂಗ್ಲೆಂಡಿನಲ್ಲಿದ್ದಾರೆ. ಆದರೆ ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಸುದ್ದಿ ತಿಳಿದ ಕೂಡಲೇ ಟ್ವೀಟ್ ಮಾಡಿದ ಮಲ್ಯ, ತನಿಖಾ ಸಂಸ್ಥೆ ಹಾಗೂ ಬ್ಯಾಂಕುಗಳನ್ನು ದೂರಿದ್ದಾರೆ. ನಾನು ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ವಿ.ಜಿ. ಸಿದ್ಧಾರ್ಥ ಒಳ್ಳೆಯ ಮನುಷ್ಯ ಹಾಗೂ ಅದ್ಭುತ ಉದ್ಯಮಿಯಾಗಿದ್ದರು. ಅವರು ಬರೆದಿರುವ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ. ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೆ ದೂಡಬಹುದು. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದರೂ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ವರ್ತನೆಯಾಗಿದೆ ಎಂದು ಬರೆದು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್‍ಗಳ ವಿರುದ್ಧ ವಿಜಯ್ ಮಲ್ಯ ಕಿಡಿಕಾರಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ಕಾರ ಹಾಗೂ ಬ್ಯಾಂಕುಗಳು ಸಾಲವನ್ನು ಮರುಪಾವತಿಸಲು ಸಾಲಗಾರರಿಗೆ ಸಹಾಯ ಮಾಡುತ್ತವೆ. ನನ್ನ ವಿಷಯದಲ್ಲಿ ಅವರು ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ ಮತ್ತು ನನ್ನ ಆಸ್ತಿಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಾಣುವ ಪ್ರಕರಣ ಮೇಲ್ಮನವಿಗಾಗಿ ಕಾಯುತ್ತಿದೆ ಎಂದು ಬರೆದಿದ್ದಾರೆ.

    ಸೋಮವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ರಾತ್ರಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಹೊಯಿಗೆ ಬಜಾರ್‍ನಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

    https://www.youtube.com/watch?v=i3MTQLbm1KE