Tag: uwupi

  • ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ – 6ನೇ ಕ್ಲಾಸ್ ಪಾಠ ಕೈಬಿಟ್ಟ ಸರ್ಕಾರ

    ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ – 6ನೇ ಕ್ಲಾಸ್ ಪಾಠ ಕೈಬಿಟ್ಟ ಸರ್ಕಾರ

    ಉಡುಪಿ: ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ ಎಂಬ ಆರೋಪಕ್ಕೆ ಆರನೇ ತರಗತಿಯ ಒಂದು ಪಾಠಕ್ಕೆ ಸರ್ಕಾರ ಕತ್ತರಿ ಹಾಕಲು ನಿರ್ಧರಿಸಿದೆ. ಸಮಾಜಶಾಸ್ತ್ರ ಪಠ್ಯದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ಅಂಶಗಳಿವೆ. ಅದು ಸತ್ಯಕ್ಕೆ ದೂರವಾದದ್ದು ಎಂಬ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಪಾಠವನ್ನು ಕೈ ಬಿಡಲು ಶಿಕ್ಷಣ ಸಚಿವರು ಆದೇಶ ನೀಡಿದ್ದಾರೆ.

    ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಅಂಶಗಳನ್ನು ಮಕ್ಕಳಿಗೆ ಪಠ್ಯ ಬೋಧಿಸುವುದು ಎಷ್ಟು ಸರಿ ಅನ್ನೊ ವಿಚಾರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು. ಉಡುಪಿಯ ಅದಮಾರು ಮಠದ ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಆಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

    ವಿವಾದಕ್ಕೆ ಕಾರಣವಾದ ಪಠ್ಯದ ಸಾರಾಂಶ:
    ಕೈ ಬಿಟ್ಟ ಪಾಠದಲ್ಲಿ ಉತ್ತರ ವೇದ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆ ಕುಂಠಿತವಾಯ್ತು. ಯಾಗಗಳಿಗೆ ಆಹಾರ ಧಾನ್ಯ- ಹಾಲು- ತುಪ್ಪಗಳನ್ನು ಹಾಕಿದ ಪರಿಣಾಮ ಆಹಾರದ ಅಭಾವವೂ ಉಂಟಾಯ್ತು. ಯಾಗ ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು ಜನ ಸಾಮಾನ್ಯರಿಗೆ ಇದು ಅರ್ಥವಾಗುತ್ತಿರಲಿಲ್ಲ.

    ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು ಎಂದು ಈ ಪಠ್ಯದಲ್ಲಿ ಹೇಳಲಾಗಿದೆ. ಅದಮಾರು ಶ್ರೀ ಈಶಪ್ರಿಯ ತೀರ್ಥರು ಈ ವಿಚಾರಗಳನ್ನು ಆಕ್ಷೇಪಿಸಿ, ಯಾಗಳಿಗೆ ಮಹತ್ವ ಇತ್ತಾದರೂ, ಅದಕ್ಕೂ ಒಂದು ನಿಯಮ ಇತಿಮಿತಿಗಳಿತ್ತು. ಈ ಕುರಿತು ಭಾಗವತದಲ್ಲಿ ಉಲ್ಲೇಖವಿದೆ. ಎಲ್ಲಾ ಸಾಧಕರಿಗೂ ಯಾಗದಿಂದಲೇ ಮುಕ್ತಿ ಎಂಬ ಅಭಿಪ್ರಾಯ ಇರಲಿಲ್ಲ. 5 ಸಾವಿರ ವರ್ಷಗಳ ಹಿಂದೆ ಬಂದ ಭಾಗವತದಲ್ಲಿಯೇ ಹೀಗೆ ಹೇಳಲಾಗಿದೆ. ಹಾಗಾಗಿ ಪಠ್ಯದಲ್ಲಿರುವ ಮಾತು ಸರಿಯಲ್ಲ ಎಂದು ಆಡಿಯೋದಲ್ಲಿ ತಿಳಿಸಿದ್ದರು. ಇದು ಶಿಕ್ಷಣ ಸಚಿವರ ಕೈಸೇರಿತ್ತು.

    ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆ ಪಠ್ಯವನ್ನೇ ಕೈ ಬಿಡೋದಾಗಿ ಹೇಳಿದ್ದಾರೆ. ಸಚಿವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಈ ಪಾಠ ಪುಸ್ತಕ ಈ ವರ್ಷ ಪ್ರಕಟವಾಗಿದ್ದಲ್ಲ, ಆದರೂ ಈ ವರ್ಷ ಈ ಪಾಠವನ್ನು ಮಾಡದಿರುವಂತೆ ಆದೇಶ ಮಾಡುತ್ತೇನೆ. ಮುಂದಿನ ವರ್ಷ ಪಠ್ಯ ಪುಸ್ತಕ ಪ್ರಕಟವಾಗುವಾಗ ಈ ಪಾಠ ತೆಗೆಸುತ್ತೇನೆ. ಈಗಾಗಲೇ ಪಠ್ಯ ಮುದ್ರಣವಾಗಿ ಮಕ್ಕಳಿಗೆ ತಲುಪಿದೆ. ಹಾಗಾಗಿ ಪಠ್ಯದಿಂದ ಹೊರತೆಗೆಯುವ ಮಾರ್ಪಾಡು ಮಾಡುವ ಹಾಗಿಲ್ಲ. ಈ ಬಗ್ಗೆ ವಿಷಾದವಿದೆ ಎಂದು ತಿಳಿಸಿದ್ದಾರೆ. ಹೊಸ ಧರ್ಮ ಉದಯದ ಬಗೆಗಿನ ವಿಚಾರ ಪಠ್ಯದಲ್ಲಿ ಮುಂದೆ ಮುದ್ರಣ ಆಗುತ್ತೋ ಇಲ್ಲವೋ ಎಂಬ ಬಗ್ಗೆ ಗೊಂದಲ ಇದೆ.

  • 10 ವರ್ಷದ ಬಾಲಕಿ ಒಂಟಿ ಕೈಯಲ್ಲಿ ತಯಾರಿಸ್ತಾಳೆ ಮಾಸ್ಕ್

    10 ವರ್ಷದ ಬಾಲಕಿ ಒಂಟಿ ಕೈಯಲ್ಲಿ ತಯಾರಿಸ್ತಾಳೆ ಮಾಸ್ಕ್

    – ವಿದ್ಯಾರ್ಥಿನಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಉಡುಪಿ: ಮನಸ್ಸಿದ್ದರೆ ಮಾರ್ಗ ಅನ್ನೋ ಗಾದೆ ಮಾತಿನಂತೆ ಇಲ್ಲೊಬ್ಬ ಬಾಲಕಿ ತನ್ನ ಒಂದೇ ಕೈಯಲ್ಲಿ ಮಾಸ್ಕ್ ತಯಾರು ಮಾಡುವ ಮೂಲಕ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

    ಹೌದು. ಉಡುಪಿಯ ಸಿಂಧೂರಿ(10) ಚಿಕ್ಕಂದಿನಿಂದಲೇ ತನ್ನ ಎಡಗೈ ತೋಳಿನ ಕೆಳ ಭಾಗವನ್ನು ಕಳೆದುಕೊಂಡಿದ್ದಾಳೆ. ಕೊರೊನಾ ಮಹಾಮಾರಿ ವಕ್ಕರಿಸಿದ ಬಳಿಕ ರಕ್ಷಣೆಗಾಗಿ ಇದೀಗ ಈಕೆ ತನ್ನ ಒಂದೇ ಕೈಯಲ್ಲಿ ಸುಮಾರು 15 ಮಾಸ್ಕ್ ತಯಾರಿಸಿದ್ದಾಳೆ. ಅಲ್ಲದೆ ತಾನು ತಯಾರಿಸಿದ ಮಾಸ್ಕ್ ಗಳನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಹಂಚಿದ್ದಾಳೆ.

    6ನೇ ತರಗತಿಯಲ್ಲಿ ಕಲಿಯುತ್ತಿರುವ ಸಿಂಧೂರಿ, ಕಲ್ಯಾಣಪುರ ಸಂತೆಕಟ್ಟೆಯಲ್ಲಿರುವ ಮೌಂಟ್ ರೋಸರಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಸ್ಕೌಟ್- ಬುಲ್ ಬುಲ್ ನಲ್ಲಿ ಸಕ್ರೀಯ ಸದಸ್ಯೆಯಾಗಿದ್ದಾಳೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಹೀಗಾಗಿ ಶಾಲೆಯ ಸ್ಕೌಟ್ ಹಾಗೂ ಗೈಡ್ಸ್ ವತಿಯಿಂದ 1 ಲಕ್ಷ ತಯಾರು ಮಾಡಿ ಜನರಿಗೆ ಹಂಚುವ ಗುರಿ ಹೊಂದಿದೆ.

    ಈ ಬಗ್ಗೆ ಮಾತನಾಡಿರುವ ಸಿಂಧೂರಿ, ಸ್ಕೌಟ್ ಹಾಗೂ ಗೈಡ್ಸ್ ವತಿಯಿಂದ 1 ಲಕ್ಷ ಮಾಸ್ಕ್ ತಯಾರು ಮಾಡಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಂಚುವ ಗುರಿ ಇದೆ. ಸದ್ಯ ನಾನು 15 ಮಾಸ್ಕ್ ಗಳನ್ನಷ್ಟೇ ಹೊಲಿದಿದ್ದೇನೆ. ನಾನು ಏನೇ ಕೆಲಸ ಮಾಡಬೇಕಾದರೂ ಒಂದು ಕೈ ಮಾತ್ರ ಬಳಸಬಹುದಾಗಿದೆ. ಹೀಗಾಗಿ ಒಂಟಿ ಕೈಯಲ್ಲಿ ಮಾಸ್ಕ್ ತಯಾರಿಸಲು ಮೊದ ಮೊದಲು ನನಗೆ ಮುಜುಗರವಾಗುತ್ತಿತ್ತು. ಆದರೆ ನನ್ನ ತಾಯಿ ನನಗೆ ಮಾಸ್ಕ್ ಸ್ಟಿಚ್ ಮಾಡಲು ಸಹಕರಿಸಿದರು. ಈಗ ನನ್ನ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಂಧೂರಿ ತಿಳಿಸಿದ್ದಾಳೆ.

    https://twitter.com/ShobhaBJP/status/1275085257201549313

    ಸದ್ಯ ಈ ವಿಕಲಚೇತನ ಬಾಲಕಿ ಮಾಸ್ಕ್ ತಯಾರಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈಗಾಗಲೇ 15 ಮಾಸ್ಕ್ ಸ್ಟಿಚ್ ಮಾಡಿಕೊಟ್ಟಿರುವ ತಾಯಿ ಮಗಳ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

  • ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

    ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

    – 20 ಲಕ್ಷ ಮೌಲ್ಯದ ಆಹಾರ ಕಿಟ್ ವಿತರಣೆ

    ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭ ಯಕ್ಷಗಾನ ಕಲಾವಿದರು ಸೇವಾ ಆಟ, ಸಾರ್ವಜನಿಕ ಪ್ರದರ್ಶನ ಇಲ್ಲದೆ ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ನಾಲ್ಕು ಜಿಲ್ಲೆಯ ಕಲಾವಿದರ ಸಹಾಯಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮುಂದೆ ಬಂದಿದೆ.

    ಕೊರೊನಾ ಆವರಿಸಿದ ನಂತರ ಯಕ್ಷಗಾನ ಮೇಳಗಳ ತಿರುಗಾಟವೆಲ್ಲ ರದ್ದಾಗಿದೆ. ಕರಾವಳಿ ಭಾಗದಲ್ಲಂತೂ ಯಕ್ಷಗಾನ ಕಲಾವಿದರಿಗೆ ಸೆಲೆಬ್ರಿಟಿ ಸ್ಥಾನಮಾನವಿದೆ. ಕಷ್ಟಕಾಲದಲ್ಲಿ ಬೇರೆಯವರಿಂದ ಸಹಾಯ ಯಾಚಿಸಲು ಕಲಾವಿದರಿಗೆ ಸ್ವಾಭಿಮಾನ ಬಿಡುವುದಿಲ್ಲ. ಕೊನೆಗೂ ಯಕ್ಷಗಾನ ಕಲಾವಿದರ ಕಷ್ಟ ಸರ್ಕಾರದ ಅರಿವಿಗೆ ಬಂದಿದೆ. ತಿರುಗಾಟ ಇಲ್ಲದೆ ನಲುಗಿ ಹೋಗಿರುವ ಕಲಾವಿದರಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಹಾರದ ಕಿಟ್ ವಿತರಿಸಿದ್ದಾರೆ.

    ಉಡುಪಿ ಯಕ್ಷಗಾನ ಕಲಾರಂಗದ ಮುತುವರ್ಜಿಯಿಂದ ವಿವಿಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ 1,800 ಕಲಾವಿದರನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೈ ಹಿಡಿದಿದೆ. ದೇಗುಲದ ವತಿಯಿಂದ ಯಕ್ಷಗಾನ ಕಲಾವಿದರಿಗೆ ದಿನಸಿ ಕಿಟ್ ಗಳ ವಿತರಣೆ ಮಾಡಲಾಯ್ತು. ಸುಮಾರು 20 ಲಕ್ಷ ಮೌಲ್ಯದ ಆಹಾರದ ಕಿಟ್ ಗಳನ್ನು ನೀಡಲಾಯ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಹಾಯ ಹಸ್ತಕ್ಕೆ ಚಾಲನೆ ನೀಡಿದರು. ದ.ಕ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದ ಕಲಾವಿದರಿಗೆ ನೆರವು ನೀಡಲಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗಸಂಸ್ಥೆಯ ಸಹಕಾರ ದಲ್ಲಿ ಕಿಟ್ ವಿತರಣೆ ಮಾಡಲಾಯ್ತು. ಕಿಟ್ ಹಂಚುವಾಗಲೂ ವಿಶೇಷ ಕ್ರಮ ಅನುಸರಿಸಲಾಗಿದೆ.

    ಕಲಾವಿದರನ್ನು ಕರೆಸಿಕೊಂಡು ಕಿಟ್ ನೀಡಿ ಅವರನ್ನು ಚಿಕ್ಕವರನ್ನಾಗಿಸದೆ, ಅವರಿದ್ದಲ್ಲಿಗೇ ಹೋಗಿ ಆಯಾ ಊರುಗಳಲ್ಲಿ ಕಿಟ್ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸಚಿವರು, ಯಕ್ಷಗಾನ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಇನ್ನೂ ಬಡತನದಲ್ಲಿದ್ದಾರೆ. ಯಕ್ಷಗಾನ ಸೇವೆ ನಡೆದರೆ ಮಾತ್ರ ಅವರ ಹೊಟ್ಟೆ ತುಂಬುವ ಪರಿಸ್ಥಿತಿ ಇದೆ. ಯಕ್ಷಗಾನದಲ್ಲಿ ಕಲಾವಿದರು ಕಷ್ಟದಲ್ಲಿರುವಾಗ ಅವರ ಕೈ ಹಿಡಿಯುವುದು ನಮ್ಮ ಕರ್ತವ್ಯ ಎಂದರು.

    ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಇ ಒ ಕೃಷ್ಣಮೂರ್ತಿ, ಮೇಳಗಳ ಯಜಮಾನ ಪಿ ಕಿಶನ್ ಹೆಗ್ಡೆ, ಕಲಾರಂಗದ ಪಧಿಕಾರಿಗಳಾದ ಎಸ್ ವಿ ಭಟ್, ಗಂಗಾಧರ ರಾವ್, ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ಎಚ್ ಎನ್ ಶೃಂಗೇಶ್ವರ, ರಾಜೇಶ್ ನಾವಡ, ಹೆಚ್ ಎನ್ ವೆಂಕಟೇಶ್, ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

    ಈ ಮೂಲಕ ಕಲಾವಿದರಿಗೆ ನೆರವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಸಚಿವರಿಗೆ, ದೇವಳದ ಆಡಳಿತ ಮಂಡಳಿಗೆ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕೃತಜ್ಞತೆ ಅರ್ಪಿಸಿದರು.

  • ಚಂದ್ರಗ್ರಹಣ 2020- ಉಡುಪಿ ಕೃಷ್ಣಮಠದಲ್ಲಿ ಯಾವುದೇ ಬದಲಾವಣೆ ಇಲ್ಲ

    ಚಂದ್ರಗ್ರಹಣ 2020- ಉಡುಪಿ ಕೃಷ್ಣಮಠದಲ್ಲಿ ಯಾವುದೇ ಬದಲಾವಣೆ ಇಲ್ಲ

    – ಗ್ರಹಣಕಾಲದಲ್ಲಿ ಭಕ್ತರೇನು ಮಾಡಬೇಕು?

    ಉಡುಪಿ: ಇಂದು ರಾತ್ರಿ 10.32 ರಿಂದ 2.47 ರವರೆಗೆ ಚಂದ್ರನ ಛಾಯಾ ಗ್ರಹಣವಿದೆ. ಕೆಲ ದೇವಸ್ಥಾನ ಮಠಗಳಲ್ಲಿ ಧಾರ್ಮಿಕ ವಿಧಿ-ವಿಧಾನ, ಪೂಜಾ ಪ್ರಕ್ರಿಯೆಗಳಲ್ಲಿ ಬದಲಾವಣೆ ಇದೆ. ಆದರೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಯಾವುದೇ ವ್ಯತ್ಯಾಸ, ಬದಲಾವಣೆ ಇಲ್ಲ.

    ಗ್ರಹಣ ಕಾಲದಲ್ಲಿ ವಿಶೇಷ ಪೂಜೆ, ಜಪ ತಪಗಳು ಇರುವುದಿಲ್ಲ. ಭೂಮಿಯ ದಟ್ಟನೆರಳಿನ ಭಾಗವನ್ನು ಮುಟ್ಟದೆ ಚಂದ್ರ ಹಾದು ಹೋಗುವುದರಿಂದ ಗ್ರಹಣ ಗೋಚರ ಇರೋದಿಲ್ಲ. ಕಣ್ಣಿಗೆ ಗೋಚರವಾಗುವಂತೆ ಚಂದ್ರನಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಉಡುಪಿಯಲ್ಲಿ ವೀಕ್ಷಣಾ ವ್ಯವಸ್ಥೆ ಕೂಡ ಮಾಡಿಲ್ಲ. ಹೀಗಾಗಿ ಕೃಷ್ಣಮಠದಲ್ಲಿ ಬದಲಾವಣೆ ಇಲ್ಲ.

    ಪಂಚಾಂಗದಲ್ಲಿ ಎಲ್ಲವೂ ಸ್ಪಷ್ಟವಿದೆ. ಚಂದ್ರನ ಛಾಯಾಕಲ್ಪವಿದೆ. ಭೂಮಿಯ ವಿರಳ ಛಾಯೆಯನ್ನು ಚಂದ್ರ ಪ್ರವೇಶ ಮಾಡಿ ಹೋಗುತ್ತಾನೆ. ಎಲ್ಲವೂ ಸಾಮಾನ್ಯದಂತೆ ಇರುತ್ತದೆ. ಖಗ್ರಾಸ ಖಂಡಗ್ರಾಸ ಪಾಶ್ರ್ವಗ್ರಹಣ ಆಗುತ್ತಿರುವುದರಿಂದ ದೊಡ್ಡ ವ್ಯತ್ಯಾಸ ದುಷ್ಪರಿಣಾಮ ಇರೋದಿಲ್ಲ ಎಂದು ಧಾರ್ಮಿಕ ವಿದ್ವಾಂಸ ವಿಷ್ಣುಮೂರ್ತಿ ಮಂಜಿತ್ತಾಯ ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಇದನ್ನೂ ಓದಿ: ದೇವಸ್ಥಾನಗಳಲ್ಲಿ ಗ್ರಹಣದ ವಿಶೇಷ ಪೂಜೆ ಇಲ್ಲ

    ಮಠದ ಭಕ್ತ ರಮೇಶ್ ಭಟ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಜ್ಯದ ಕೆಲಭಾಗದ ಜನ ಆಚರಿಸಬಹುದು. ಶಾಸ್ತ್ರದಲ್ಲಿ ಕೂಡ ಇದರ ಬಗ್ಗೆ ಉಲ್ಲೇಖ ಇಲ್ಲ. ನಮ್ಮ ನೆರಳಿನ ಮೇಲೆ ಹಾದು ಹೋದರೆ ಸಮಸ್ಯೆಯಿಲ್ಲ. ಜಪ-ತಪ ಮಾಡಿದರೆ ಯಾವುದೇ ನಷ್ಟ ಇಲ್ಲ. ಲಾಭವೇ ಆಗುವುದರಿಂದ ಮಾಡುವವರು ಮಾಡಬಹುದು ಎಂದು ಹೇಳಿದರು.

    ಮೂಕಾಂಬಿಕಾ ದೇವಸ್ಥಾನದಲ್ಲಿ ಗ್ರಹಣ ಪರ್ವಕಾಲದಲ್ಲಿ ಮಹಾ ಮಂಗಳಾರತಿ ನಡೆಯಲಿದೆ. ಇದನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸ ಇರೋದಿಲ್ಲ. ದೇವಸ್ಥಾನ ಮುಚ್ಚದೆ, ಅರ್ಚಕರು ಈ ಪೂಜೆ ನಡೆಸಲಿದ್ದಾರೆ. ಭಕ್ತರು ಆ ಹೊತ್ತಿಗೆ ದೇಗುಲದಲ್ಲಿ ಇರುವ ಸಾಧ್ಯತೆ ಕಡಿಮೆಯಿದೆ.

  • ವಾಗ್ಮೋರೆ ಖುಲಾಸೆಯಾದ್ರೂ ಆಶ್ಚರ್ಯವಿಲ್ಲ: ಪ್ರಗತಿಪರ ಚಿಂತಕ ಸಂಶಯ

    ವಾಗ್ಮೋರೆ ಖುಲಾಸೆಯಾದ್ರೂ ಆಶ್ಚರ್ಯವಿಲ್ಲ: ಪ್ರಗತಿಪರ ಚಿಂತಕ ಸಂಶಯ

    ಉಡುಪಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಯನ್ನು ಕೋರ್ಟ್ ತಾಂತ್ರಿಕ ಕಾರಣ ಕೊಟ್ಟು ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಅಂತ ವಿಮರ್ಷಕ, ಪ್ರಗತಿಪರ ಚಿಂತಕ ಜಿ ರಾಜಶೇಖರ್ ಸಂಶಯ ವ್ಯಕ್ತಗೊಳಿಸಿದರು.

    ಶನಿವಾರ ನಗರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸಂಸ್ಮರಣೆ ನಡೆಯಿತು. ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ವಿಚಾರವಾದಿ ಜಿ.ರಾಜಶೇಖರ್, ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದಿದ್ದಾರೆ. ಆರೋಪಿ ಪರಶುರಾಮ ವಾಗ್ಮೋರೆ ಓರ್ವ ಗಲಭೆಕೋರ. ಸಿಂಧಗಿಯಲ್ಲಿ ಪಾಕ್ ಧ್ವಜದ ವಿಚಾರದಲ್ಲಿ ಘರ್ಷಣೆಗೆ ಕಾರಣವಾಗಿದ್ದವ ಎಂದರು.

    ಧ್ವಜದ ಪ್ರಕರಣದಿಂದ ವಾಗ್ಮೋರೆ ಖುಲಾಸೆಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಗೌರಿ ಕೊಲೆಯ ಆರೋಪಿಗಳು ಬಿಡುಗಡೆಯಾಗಬಹುದು. ತಾಂತ್ರಿಕ ಕಾರಣ ಕೊಟ್ಟು ಕೋರ್ಟ್ ಬಿಡುಗಡೆ ಮಾಡಿದ್ರೂ ಆಶ್ಚರ್ಯವಿಲ್ಲ ಎಂದು ಸಂಶಯ ವ್ಯಕ್ತಪಡಿಸಿ, ಆ ಪ್ರಕರಣ ಕೂಡ ಹೀಗೆಯೇ ಬಿದ್ದೋಯ್ತು ಎಂದರು.

    ಮಹಾತ್ಮಾ ಗಾಂಧಿಯನ್ನು ಕೊಂದವರೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ ಮುಂತಾದ ವಿಚಾರವಾದಿಗಳನ್ನು ಕೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಆರ್ ಎಸ್ ಎಸ್ ಸಿದ್ಧಾಂತ ದೇಶದಲ್ಲಿ ಮುಸ್ಲಿಮರ ಹತ್ಯೆಗೆ ಕಾರಣವಾಗಿದೆ. ಗೌರಿ ಸೇರಿದಂತೆ ಎಲ್ಲಾ ಹತ್ಯೆಗಳು ಆರ್‍ಎಸ್‍ಎಸ್‍ನ ಸರಣಿ ಹತ್ಯೆಯೆಂದು ನಾವು ಭಾವಿಸುತ್ತೇವೆ ಎಂದು ಗಂಭೀರ ಆರೋಪ ಮಾಡಿದರು.

    ಹಿಂದುತ್ವದ ಅಮಲು ದೇಶವನ್ನು ಹಾಳುಗೆಡವುತ್ತಿದೆ. ಆರ್ ಎಸ್ ಎಸ್ ಎಸ್ ಒಂದು ದೇಶದ್ರೋಹಿ ಸಂಘಟನೆ ಅದನ್ನು ನಿಷೇಧ ಮಾಡಬೇಕಹ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಭಾರೀ ಮಳೆಗೆ ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಮನೆಗೆ ಬೆಂಕಿ – 1 ಲಕ್ಷ ನಷ್ಟ

    ಉಡುಪಿಯಲ್ಲಿ ಭಾರೀ ಮಳೆಗೆ ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಮನೆಗೆ ಬೆಂಕಿ – 1 ಲಕ್ಷ ನಷ್ಟ

    ಉಡುಪಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಕಡಿಯಾಳಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿದೆ. ಮನೆಯ ಭಾಗಶಃ ಹಾನಿಯಾಗಿದ್ದು ಸೊತ್ತುಗಳು ನಷ್ಟವಾಗಿದೆ.

    ಮುಕೇಶ್ ರಾವ್ ಎಂಬವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್​​ ಆಗಿದ್ದು ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ಟಿವಿ, ಫ್ಯಾನ್, ಕಪಾಟು, ಹಾರ್ಮೋನಿಯಂ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ದುರ್ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಪಕ್ಕದ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಭಾರೀ ಅವಘಡ ತಪ್ಪಿದೆ.

    ಸುಮಾರು 1 ಲಕ್ಷ ರೂಪಾಯಿಯಷ್ಟು ಮೊತ್ತದ ವಸ್ತುಗಳು ನಷ್ಟವಾಗಿದೆ. ಆಟೋ ಡ್ರೈವರ್ ಆಗಿರುವ ಮುಕೇಶ್ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಪರಿಹಾರ ಮೊತ್ತ ಕೊಡುವಂತೆ ಒತ್ತಾಯಿಸಲಾಗಿದೆ.

    ನಾನು 9 ಗಂಟೆಯಷ್ಟು ಹೊತ್ತಿಗೆ ಮನೆಗೆ ಬೀಗ ಹಾಕಿ ಹೋಗಿದ್ದೆ. 9.30ರ ಹೊತ್ತಿಗೆ ಫೋನ್ ಬಂತು. ಕೂಡಲೇ ಬಂದಿದ್ದೇನೆ. ಮನೆಗೆ ಬರುವಷ್ಟರಲ್ಲಿ ಬೆಂಕಿ ಆವರಿಸಿಕೊಂಡಿದ್ದು, 85 ರಿಂದ ಸುಮಾರು ಒಂದು ಲಕ್ಷದವರೆಗೆ ನಷ್ಟವಾಗಿದೆ ಅಂತ ಮುಕೇಶ್ ರಾವ್ ಹೇಳಿದ್ದಾರೆ.

    ಸ್ಥಳೀಯ ಮಣೀಂದ್ರ ಮಾತನಾಡಿ, ಬಡತನದ ಕುಟುಂಬದಲ್ಲಿ ಮುಕೇಶ್ ಜೀವನ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಕೂಡಲೇ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮಳೆ ಹಾನಿಯ ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಪರಿಹಾರ ಕೊಡಬೇಕಾಗಿದೆ ಎಂದರು.