Tag: Uttarkand

  • ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಕೇದಾರನಾಥ್‌ ರೋಪ್‌ವೇಗೆ ಕೇಂದ್ರ ಅಸ್ತು – ಈ ರೋಪ್‌ವೇಯ ವಿಶೇಷತೆಯೇನು?

    ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸೋನ್‌ಪ್ರಯಾಗ್‌- ಕೇದಾರನಾಥ್‌ ಮತ್ತು ಹೇಮಕುಂಡ್‌ ಸಾಹಿಬ್‌- ಗೋವಿಂದಘಾಟ್‌ ನಡುವಿನ ರೋಪ್ವೇಗಳು ಮುಂದಿನ 4ರಿಂದ 6 ವರ್ಷಗಳೊಳಗೆ ಪೂರ್ಣಗೊಳಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

    ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಿಸಲಾಗುತ್ತದೆ. ಇದರಿಂದಾಗಿ 8 ಗಂಟೆ ಬೇಕಾಗಿದ್ದ ಪ್ರಯಾಣದ ಅವಧಿ ಕೇವಲ 40 ನಿಮಿಷಕ್ಕೆ ಇಳಿಯಲಿದೆ. ಈ ರೋಪ್‌ವೇಯು ಭಾರತದ ಉದ್ದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    ಕೇದಾರನಾಥ್‌ನಿಂದ ಸೋನ್‌ಪ್ರಯಾಗ್‌ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್‌ ಡಿಟ್ಯಾಚೇಬಲ್‌ ಗೊಂಡೋಲ (3ಎಸ್‌) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್‌ ಕಾರ್ ಹೊತ್ತೊಯ್ಯಲಿದೆ. ಹೇಮಕುಂಡ್‌ ಸಾಹಿಬ್‌ ಜಿ ಮತ್ತು ಗೋವಿಂದಘಾಟ್‌ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

    ರೋಪ್‌ವೇನ ವಿಶೇಷತೆ ಏನು?

    ಈ ರೋಪ್‌ವೇ 10 ಆಸನಗಳ ಕ್ಯಾಬಿನ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಕ್ಯಾಬಿನ್‌ಗಳನ್ನು ಮುಚ್ಚಿರುತ್ತದೆ. ಸ್ವಯಂಚಾಲಿತ ತೆರೆಯುವ ಮತ್ತು ಮುಚ್ಚುವ ಬಾಗಿಲುಗಳನ್ನು ಹೊಂದಿರುತ್ತದೆ. ಇವು ಒಂದು ಗಂಟೆಯಲ್ಲಿ 1,800 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ರೋಪ್‌ವೇ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ. ಮಳೆಗಾಲ, ಬೇಸಿಗೆ ಕಾಲದ ಸಮಯದಲ್ಲೂ ಕಾರ್ಯನಿರ್ವಹಿಸುತ್ತದೆ.

    ರೋಪ್‌ವೇ ನಿರ್ಮಾಣದ ಲಾಭವೇನು?
    ಹೇಮಕುಂಡ್‌ ಹಾಗೂ ಕೇದಾರನಾಥ ದೇವಸ್ಥಾನಕ್ಕೆ ತೆರಳುವ ದಾರಿ ಕಲ್ಲು ಬಂಡೆಗಳಿಂದ ಕೂಡಿದ್ದು, ಜನ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ವೃದ್ಧರನ್ನು ಕುದುರೆಗಳ ಮೇಲೆ ಕೂರಿಸಿಕೊಂಡು ಅಥವಾ ಹೊತ್ತುಕೊಂಡು ಹೋಗಲಾಗುತ್ತಿತ್ತು. ಭೂಕುಸಿತ ಸಂಭವಿಸಿದಾಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು. ಈ ರೋಪ್ ವೇಯು ಯಾತ್ರಾರ್ಥಿಗಳ ಪ್ರಯಾಣವನ್ನು ಸುಖಕರಗೊಳಿಸಲು ಹಾಗೂ ಎಲ್ಲಾ ಹವಾಮಾನದಲ್ಲೂ ಓಡಾಡಲು ಅನುಕೂಲವಾಗುತ್ತದೆ. ಇದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದ್ದರಿಂದ ಪ್ರಯಾಣದ ಸಮಯವೂ ಕಡಿಮೆಯಾಗಲಿದೆ.

    ವಿಶ್ವ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥಕ್ಕೆ 20 ಲಕ್ಷ ಯಾತ್ರಾಧಿಗಳು ಭೇಟಿ ನೀಡುತ್ತಾರೆ. ಇದೀಗ ಈ ದೇವಾಲಯಕ್ಕೆ ತೆರಳಲು ರೋಪ್ ವೇ ನಿರ್ಮಾಣ ಮಾಡುತ್ತಿರುವುದರಿಂದ ಭಕ್ತಾಧಿಗಳು ದುರ್ಗಮ ಹಾದಿಯಲ್ಲಿ ತೆರಳುವುದನ್ನು ತಪ್ಪಿಸುತ್ತದೆ.

    ಭಾರತದ ಮೊದಲ ರೋಪ್‌ವೇ

    1960ರಲ್ಲಿ ಭಾರತದ ಮೊದಲ ಆಧುನಿಕ ರೋಪ್‌ವೇ ಅನ್ನು ರಾಜ್‌ಗೀರ್‌ನಲ್ಲಿ ನಿರ್ಮಿಸಲಾಗಿತ್ತು. ಇದನ್ನು ಪ್ರಸಿದ್ಧ ಜಪಾನಿನ ಬೌದ್ಧ ಸನ್ಯಾಸಿ ಫ್ಯೂಜಿ ಅವರು ರಾಜ್‌ಗೀರ್‌ನ ವಿಶ್ವ ಶಾಂತಿ ಸ್ತೂಪಕ್ಕೆ ಉಡುಗೊರೆಯಾಗಿ ನೀಡಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.

    ಅರುಣಾಚಲದ ತವಾಂಗ್ ಬೌದ್ಧ ಧಾರ್ಮಿಕ ಸ್ಥಳದ ರೋಪ್‌ವೇಯನ್ನು ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿ 2010ರಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೋಪ್‌ವೇಗಳಲ್ಲಿ ಒಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಗುಲ್ಮಾರ್ಗ್‌ ರೋಪ್‌ವೇಯು ವಿಶ್ವದ 2 ನೇ ಅತಿ ಎತ್ತರದ ಕೇಬಲ್ ಕಾರನ್ನು ಹೊಂದಿದೆ. ಏಷ್ಯಾದ ಅತಿ ಎತ್ತರದ ಮತ್ತು ಉದ್ದವಾದ ಕೇಬಲ್ ಕಾರನ್ನು ಹೊಂದಿದೆ.

    ಕೇಬಲ್ ಲಿಫ್ಟ್ ಅನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕ್ರೊಯೇಷಿಯಾದ ಪಾಲಿಮ್ಯಾತ್ ಫೌಸ್ಟೊ ವೆರಾಂಜಿಯೊ ನಿರ್ಮಾಣ ಮಾಡಿದ್ದರು. ಮೊದಲ ಕಾರ್ಯಾಚರಣಾ ವೈಮಾನಿಕ ಲಿಪ್ಟ್ ಅನ್ನು 1644 ರಲ್ಲಿ ಪೋಲೆಂಡ್‌ನ ಗ್ಡಾನ್ಸ್ಕ್ ನಲ್ಲಿ ಆಡಮ್ ವೈಬೆ ನಿರ್ಮಿಸಿದ್ದರು. ಇದನ್ನು ಯುರೋಪಿಯನ್ ಇತಿಹಾಸದಲ್ಲಿ ಮೊದಲ ಕೇಬಲ್ ಲಿಫ್ಟ್ ಎಂದು ಕರೆಯಲಾಗಿತ್ತು.

  • ದೇವಭೂಮಿಯನ್ನು ದಾರುಲ್ ಭೂಮಿ ಮಾಡುವ ಕನಸು ಕಾಣುವವರಿಗೆ ಜನತೆ ಉತ್ತರ ನೀಡಲಿದ್ದಾರೆ: ಕೈಲಾಶ್ ವಿಜಯವರ್ಗಿಯ

    ದೇವಭೂಮಿಯನ್ನು ದಾರುಲ್ ಭೂಮಿ ಮಾಡುವ ಕನಸು ಕಾಣುವವರಿಗೆ ಜನತೆ ಉತ್ತರ ನೀಡಲಿದ್ದಾರೆ: ಕೈಲಾಶ್ ವಿಜಯವರ್ಗಿಯ

    ನವದೆಹಲಿ: ಉತ್ತರಾಖಂಡದಲ್ಲಿ ಮತದಾನದ ನಡುವೆಯೇ ಕಾಂಗ್ರೆಸ್ ಮಸೀದಿ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

    ದೇವಭೂಮಿಯನ್ನು ದಾರುಲ್ ಭೂಮಿಯನ್ನಾಗಿ ಮಾಡಲು ಆಲೋಚಿಸುವವರಿಗೆ ಜನತೆಯೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ತಿರುಗೇಟು ನೀಡಿದ್ದಾರೆ.

    ಉತ್ತರಾಖಂಡ ಕಾಂಗ್ರೆಸ್ ಭಾನುವಾರ ಸಂಜೆ ಪಿರಾನ್ ಕಲಿಯಾರ್ ಮಸೀದಿಯ ಚಿತ್ರವನ್ನು ಬಳಸಿ ಟ್ವೀಟ್ ಮಾಡಿದ ನಂತರ ಹೊಸ ವಿವಾದ ಭುಗಿಲೆದ್ದಿದೆ. ಕಾಂಗ್ರೆಸ್ ಪಿರಾನ್ ಕಲಿಯಾರ್ಗೆ ಬರುತ್ತಿದೆ ಉತ್ತರಾಖಂಡ ಕಾಂಗ್ರೆಸ್ ಟ್ವೀಟ್ ಮಾಡಿದೆ.

    ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಮುಸ್ಲಿಂ ಓಲೈಕೆ, ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಶುಕ್ರವಾರದ ನಮಾಜ್‍ಗಾಗಿ ರಜೆ ನೀಡುವುದಲ್ಲದೇ ಈಗ ಅದು ಮುಸ್ಲಿಂ ಹೆಸರಿನಲ್ಲಿ ಮತ ಕೇಳುತ್ತಿದೆ. ಉತ್ತರಾಖಂಡದ ಮಸೀದಿಯ ಜನರು ಮಾತ್ರವಲ್ಲದೆ ಐದು ರಾಜ್ಯಗಳ ಜನರು ದೇವಭೂಮಿಯನ್ನು ದಾರುಲ್ ಭೂಮಿಯನ್ನಾಗಿ ಮಾಡಲು ಯೋಚಿಸುತ್ತಿವೆ ಅಂತಹವರಿಗೆಲ್ಲಾ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಟ್ವೀಟ್ ಮಾಡಿದರು.

    ಉತ್ತರಾಖಂಡ ಕಾಂಗ್ರೆಸ್‍ನ ಟ್ವೀಟ್‍ನ ಸ್ಕ್ರೀನ್‍ಶಾಟ್ ಅನ್ನು ಹಂಚಿಕೊಂಡ ಲೋಕಸಭಾ ಸದಸ್ಯ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಚುನಾವಣೆ ಸಮೀಪಿಸುತ್ತಿರುವಾಗ, ಕಾಂಗ್ರೆಸ್‍ಗೆ ಅಂತಿಮವಾಗಿ ಒಂದೇ ಒಂದು ಆಯ್ಕೆ ಉಳಿದಿದೆ ಅದು ಕೋಮು ಧ್ರುವೀಕರಣ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ಉತ್ತರಾಖಂಡದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್‍ನ ಜಾತ್ಯತೀತತೆಯ ಮುಖವಾಡವನ್ನು ಕಳಚಿದೆ. ಇದಕ್ಕೆ ದೇವಭೂಮಿಯ ಜನರು ತಮ್ಮ ಮತದ ಮೂಲಕ ಉತ್ತರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ನೇಹಾ ಜೋಶಿ ಟ್ವೀಟ್ ಮಾಡಿ, ಅವರಿಗೆ ಧ್ರುವೀಕರಣವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ, ಈ ದೇಶದಲ್ಲಿ ಯಾವುದೇ ಪಕ್ಷ ಕೋಮುವಾದಿಯಾಗಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಉತ್ತರಾಖಂಡದ ಪಕ್ಷದ ಯುವ ಘಟಕದ ಉಸ್ತುವಾರಿ ತಜಿಂದರ್ ಪಾಲ್ ಸಿಂಗ್, ಮತದಾನ ಮಾಡುವ ಮೊದಲು ಕಾಂಗ್ರೆಸ್‍ನ ಮುಖದಿಂದ ಹಿಜಬ್ ಹೊರಬಂದಿದೆ ಎಂದಿದ್ದಾರೆ.

    ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಉತ್ತರಾಖಂಡದಲ್ಲಿ (ಯುಸಿಸಿ) ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ:  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

    70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಮತದಾನ ನಡೆಯುತ್ತಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ 81 ಲಕ್ಷಕ್ಕೂ ಹೆಚ್ಚು ಮತದಾರಿದ್ದು, 150 ಕ್ಕೂ ಹೆಚ್ಚು ಪಕ್ಷೇತರ ಅಭ್ಯರ್ಥಿಗಳನ್ನು ಒಳಗೊಂಡಂತೆ 632 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

    2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 11 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರಗಳಿಂದ ಗೆದ್ದಿದ್ದರು.

  • ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆ- ನವಜಾತ ಶಿಶು ಸಾವು

    ಡೆಹರಾಡೂನ್: ಸರ್ಕಾರಿ ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಹೆರಿಗೆಯ ನಂತರ ನವಜಾತ ಶಿಶು ಮೃತ ಪಟ್ಟಿರುವ ಘಟನೆ ಉತ್ತರಾಖಂಡದ ಡೆಹರಾಡೂನ್ ನ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.

    27 ವರ್ಷದ ಗರ್ಭಿಣಿಯು ಭಾನುವಾರ ಬೆಳಗ್ಗೆ ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಹೆರಿಗೆಯಾಗಿದೆ. ಇದನ್ನ ಕಂಡ ಆಕೆಯ ಅಜ್ಜಿ ವೈದ್ಯರಿಗೆ ವಿಷಯ ತಿಳಿಸಿ ನರ್ಸ್ ಹಾಗೂ ವೈದ್ಯರು ಸ್ಥಳಕ್ಕೆ ಬಂದು ಮಹಿಳೆಯನ್ನು ಹೆರಿಗೆ ಕೋಣೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಮೃತ ಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಹಿಂದೆಯೂ ಆಸ್ಪತ್ರೆಯಲ್ಲಿ ಬೆಡ್ ಇಲ್ಲದ ಕಾರಣ ಗರ್ಭಿಣಿಯೊಬ್ಬರು ಶೌಚಾಲಯದಲ್ಲಿಯೇ ಹೆರಿಗೆಯಾಗಿ ಮೃತ ಪಟ್ಟಿದ್ದರು. ಆಸ್ಪತ್ರೆಯಲ್ಲಿ ಇದು ಮೂರನೇ ಘಟನೆಯಾಗಿದ್ದು, ಜನರು ಆಸ್ಪತ್ರೆ ಸಿಬ್ಬಂದಿಯ ಮೇಲೆ ಅನುಮಾನ ಪಡುವಂತಾಗಿದೆ. ಈ ವಿಚಾರವಾಗಿ ಮಗುವಿನ ಸಾವಿನ ಕುರಿತು ವಿಚಾರಣೆ ನಡೆಸಬೇಕೆಂದು ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಗರ್ಭಿಣಿಗೆ 7 ತಿಂಗಳಾಗಿದ್ದು, ಮಗು ಸರಿಯಾಗಿ ಬೆಳವಣಿಗೆ ಆಗಿರಲಿಲ್ಲ. ಹಾಗಾಗಿ ಮಗುವಿಗೆ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೇ ಮೃತಪಟ್ಟಿದೆ. ಇದರಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವಿಲ್ಲ ಎಂದು ಸಿಬ್ಬಂದಿ ಹೇಳಿಕೆಯನ್ನ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews