Tag: Uttarakhanda

  • ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು..?

    ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು..?

    ಬೆಂಗಳೂರು: ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದವರ ಪೈಕಿ ಕರ್ನಾಟಕದ ಐವರು ಮೃತಪಟ್ಟಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಸಿಲುಕಿರುವ ಹಲವರ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆ ಕರ್ನಾಟಕದ ಸಚಿವ ಕೃಷ್ಣಬೈರೇಗೌಡ (Krishna Byre Gowda) ಅವರು ಉತ್ತರಾಖಂಡಕ್ಕೆ ತೆರಳಿದ್ದಾರೆ.

    ಡೆಹ್ರಾಡೂನ್‌ನ ಬಿಜಾಪುರ ಅತಿಥಿ ಗೃಹದಲ್ಲಿ ರಕ್ಷಿಸಲ್ಪಟ್ಟ 8 ಚಾರಣಿಗರನ್ನು ಭೇಟಿಯಾಗಲು ಸಚಿವರು ಹೋಗಿದ್ದಾರೆ. ಉತ್ತರಾಖಂಡದಲ್ಲಿ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಸಚಿವರು ವಿವರ ಹಂಚಿಕೊಂಡಿದ್ದಾರೆ. ಕರ್ನಾಟಕದಿಂದ ಚಾರಣಕ್ಕೆ ಹೊರಟಿದ್ದ ಸುಜಾತಾ ಮುಂಗುರವಾಡಿ (52), ಆಶಾ ಸುಧಾಕರ್ (72), ಸಿಂಧು ವಕೆಲಂ (45), ವಿನಾಯಕ ಮುಂಗುರವಾಡಿ, ಚಿತ್ರಾ ಪ್ರಣೀತ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ 9 ಮಂದಿ ಸಾವು

    ನಿಜಕ್ಕೂ ಅಲ್ಲಿ ಆಗಿದ್ದೇನು?
    ಡೆಹ್ರಾಡೂನ್‌ ಚಾರಣಿಗರ ತಂಡದೊಂದಿಗಿನ ಚರ್ಚೆಯಿಂದ ಸಂಗ್ರಹಿಸಿದ ಮಾಹಿತಿಯನ್ನು ಸಚಿವ ಕೃಷ್ಣಬೈರೇಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

    ಜೂನ್ 3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ.

    ಚಾರಣದ ಗಮ್ಯ ತಲುಪಿ ವಾಪಸ್‌ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಅವರು ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತವು ಪ್ರಾರಂಭವಾಗಿದೆ. ಸಂಜೆ 4 ಗಂಟೆಯ ಹೊತ್ತಿಗೆ ಹಿಮಪಾತವು ತೀವ್ರಗೊಂಡಿದೆ. ಸಂಜೆ 6 ಗಂಟೆ ವೇಳೆಗೆ ಇಬ್ಬರು ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದಾರೆ. ಹಿಮ ಮತ್ತು ಹಿಮಗಾಳಿಯು ಚಾರಣಿಗರು ವಾಪಸ್‌ ಶಿಬಿರಕ್ಕೆ ಹಿಂದಿರುಗುವುದನ್ನು ಅಸಾಧ್ಯಗೊಳಿಸಿದೆ. ಗೋಚರತೆಯೂ ಶೂನ್ಯಕ್ಕೆ ಇಳಿದಿದೆ.

    ಆ ರಾತ್ರಿ ಎಲ್ಲರೂ ಒಟ್ಟಿಗೆ ಕಳೆದಿದ್ದಾರೆ. ಆದರೆ, ಈ ವೇಳೆ ಹಿಮಗಾಳಿಯ ತೀವ್ರತೆಗೆ ಕೆಲವರು ಅದೇ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 4 ರ ಬೆಳಗ್ಗೆ, ಮೊಬೈಲ್ ಸಂಪರ್ಕ ಸಿಗಬಹುದಾದ ಸ್ಥಳಕ್ಕೆ ತಂಡದ ಮಾರ್ಗದರ್ಶಕ ತಲುಪಿದ್ದಾನೆ. ಈ ನಡುವೆ ಶಿಬಿರಕ್ಕೆ ಹಿಂತಿರುಗುವ ಸ್ಥಿತಿಯಲ್ಲಿದ್ದ ಕೆಲವು ಚಾರಣಿಗರು ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಬಿರದ ಕಡೆಗೆ ಹೊರಟಿದ್ದಾರೆ. ಮಾರ್ಗದರ್ಶಕ ಶಿಬಿರಕ್ಕೆ ಬಂದು, ಸಿಕ್ಕಿಬಿದ್ದ ಚಾರಣಿಗರನ್ನು ಕಾಪಾಡಲು ಬೇಕಾದ ಸಾಮಗ್ರಿಗಳೊಂದಿಗೆ ಮತ್ತೆ ಹಿಂತಿರುಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದವರ ರಕ್ಷಣೆಗೆ ಕ್ರಮ – ಕೃಷ್ಣಬೈರೇಗೌಡಗೆ ರಕ್ಷಣಾ ಕಾರ್ಯದ ಹೊಣೆ

    ಜೂನ್ 4 ರ ಸಂಜೆ ವೇಳೆಗೆ ಮಾರ್ಗದರ್ಶಿಯು ಫೋನ್ ಸಿಗ್ನಲ್ ಲಭ್ಯವಿರುವ ಸ್ಥಳವನ್ನು ತಲುಪಿಕೊಂಡಿದ್ದು, ಪರಿಸ್ಥಿತಿಯ ಬಗ್ಗೆ ಕರ್ನಾಟಕ ಪರ್ವತಾರೋಹಣ ಸಂಸ್ಥೆ ಮತ್ತು ಭಾರತೀಯ ಪರ್ವತಾರೋಹಣ ಒಕ್ಕೂಟ ಸಂಸ್ಥೆಗಳಿಗೆ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಜೂನ್ 4 ರ ರಾತ್ರಿ ವೇಳೆಗೆ ರಕ್ಷಣಾ ಕಾರ್ಯಾಚರಣೆಗಳ ಸಿದ್ಧತೆಗಳನ್ನು ಪ್ರಾರಂಭಿಸಿತ್ತು. ಭೂ ಸೇನೆ, ವಾಯುಪಡೆ, ಎಸ್‌ಡಿಆರ್‌ಎಫ್ ಮತ್ತು ವಿವಿಧ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳು ಜೂನ್ 5 ರ ಬೆಳಿಗ್ಗೆ 5 ಗಂಟೆ ವೇಳೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಸಚಿವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

    ಚಾರಣಕ್ಕೆ ಹೋಗಿದ್ದವರು ಇವರು
    ಭರತ್‌ ಬೊಮ್ಮನ ಗೌಡರ್‌, ಆಶಾ ಸುಧಾಕರ್‌, ಕೆ.ಪಿ.ಪದ್ಮನಾಭ, ವಿವೇಕ್‌ ಶ್ರೀಧರ್‌, ಸೌಮ್ಯಾ ಕನಾಲೆ, ಬಿ.ಎಸ್‌.ಜಯಪ್ರಕಾಶ್‌, ಎಸ್‌.ಸುಧಾಕರ್‌, ಸಿಂಧು ವಕೇಕಮಲ್‌, ರಿತಿಕಾ ಜಿಂದಾಲ್‌, ಎ.ನವೀನ್‌, ಎಸ್‌.ಶಿವ ಜ್ಯೋತಿ, ಎಂ.ಕೆ.ವಿನಯ್‌, ಶೀನಾ ಲಕ್ಷ್ಮಿ, ಕೆ.ಎನ್.ವೆಂಕಟೇಶ ಪ್ರಸಾದ್‌, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ, ಮಧು ಕಿರಣ್‌ ರೆಡ್ಡಿ, ಚಿತ್ರಾ ಪ್ರಣೀತ್‌, ವಿನಾಯಕ್‌ ಮುಂಗರ್‌ವಾಡಿ, ಸುಜಾತಾ ಮುಂಗುರ್‌ವಾಡಿ, ಸ್ಮೃತಿ ಡೋಲಸ್‌, ಅನಿಲ್‌ ಭಟ್ಟ. ಇದನ್ನೂ ಓದಿ:

  • ಹಿಂದೂಯೇತರರಿಗೆ ಪ್ರವೇಶವಿಲ್ಲ- 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಬ್ಯಾನರ್

    ಹಿಂದೂಯೇತರರಿಗೆ ಪ್ರವೇಶವಿಲ್ಲ- 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಬ್ಯಾನರ್

    – ದಕ್ಷಿಣಪಂಥಿ ಸಂಘಟನೆಯ ಹಿಂದೂ ಯುವ ವಾಹಿನಿಯಿಂದ ಅಳವಡಿಕೆ

    ಡೆಹರಾಡೂನ್: ಹಿಂದೂಯೇತರರು ದೇವಸ್ಥಾನದೊಳಗೆ ಪ್ರವೇಶಿಸುವಂತಿಲ್ಲ ಎಂದು ಹೇಳುವ ಬ್ಯಾನರ್ ಗಳನ್ನು ಉತ್ತರಾಖಂಡ್ ನಲ್ಲಿ ಹಾಕಲಾಗಿದೆ. ಡೆಹರಾಡೂನ್ ನಗರದ 150ಕ್ಕೂ ಅಧಿಕ ದೇವಸ್ಥಾನಗಳ ಮುಂದೆ ಈ ರೀತಿಯ ಫಲಕಗಳನ್ನ ಹಾಕಲಾಗಿದ್ದು, ಸಾರ್ವಜನಿಕದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ.

    ದಕ್ಷಿಣಪಂಥಿ ಸಂಘಟನೆ ಹಿಂದೂ ಯುವ ವಾಹಿನಿ ಈ ರೀತಿಯ ಬ್ಯಾನರ್ ಗಳನ್ನು ಹಾಕಿರೋದಾಗಿ ಒಪ್ಪಿಕೊಂಡಿದೆ. ಹಿಂದೂ ದೇವಸ್ಥಾನ ಅಥವಾ ಹಿಂದೂಗಳ ಧಾರ್ಮಿಕ ಕ್ಷೇತ್ರದ ಪರಿಸರಕ್ಕೆ ಅನ್ಯ ಧರ್ಮದವರು ಪ್ರವೇಶಿಸುವಂತಿಲ್ಲ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಚಕರಾತಾ ರಸ್ತೆ, ಸುದೋವಾಲಾ ಮತ್ತು ಪ್ರೇಮನಗರದ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಯಾಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಯುವ ವಾಹಿನಿಯ ಪ್ರದೇಶ ಅಧ್ಯಕ್ಷ ಗೋವಿಂದ್ ವಾದವಾ, ಅನ್ಯ ಕೋಮಿನವರು ಹಿಂದೂ ದೇವಾಲಯದೊಳಗೆ ಬಂದವರನ್ನ ಥಳಿಸಲಾಗುವುದು. ಥಳಿಸಿದ ಬಳಿಕ ಪೊಲೀಸರ ವಶಕ್ಕೆ ನೀಡಲಾಗುವುದು ಎಂದು ಹೇಳಿದ್ದಾರೆ. ಇತ್ತ ಸಾರ್ವಜನಿಕರು ಮತ್ತು ಚಿಂತಕರು, ಈ ಘಟನೆ ಹಿಂಸೆ ರೂಪ ಪಡೆದುಕೊಳ್ಳುವ ಮುನ್ನ ಪೊಲೀಸರೇ ಈ ಬ್ಯಾನರ್ ಗಳನ್ನು ತೆಗೆಯಬೇಕೆಂದು ಆಗ್ರಹಿಸಿದ್ದಾರೆ.

    ದೇವಸ್ಥಾನ ಅನ್ನೋದು ಹಿಂದೂ ಧರ್ಮದ ನಂಬಿಕೆ ಮತ್ತು ಆಸ್ಮಿತೆ. ದೇವಾಲಯವನ್ನ ಧ್ಯಾನದ ಕೇಂದ್ರ ಅಂದ್ರೆ ಶಾಂತಿ ಸಿಗುವ ಸ್ಥಳ. ಹಾಗಾಗಿ ಅನ್ಯ ಧರ್ಮದವರಿಗೆ ದೇವಾಲಯದ ಪರಿಸರದಲ್ಲಿ ಏನು ಕೆಲಸ? ಧರ್ಮ ರಕ್ಷಣೆಗಾಗಿ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಬ್ಯಾನರ್ ಅಳವಡಿಕೆಯನ್ನ ಗೋವಿಂದ್ ವಾದವಾ ಸಮರ್ಥಿಸಿಕೊಂಡಿದ್ದಾರೆ.

    ಇದು ಬಿಜೆಪಿ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ. ನಾಲ್ಕು ವರ್ಷಗಳಲ್ಲಿ ಏನು ಮಾಡದ ಕಮಲ ಸರ್ಕಾರ, ತನ್ನ ಹುಳುಕುಗಳನ್ನ ಮುಚ್ಚಿಕೊಳ್ಳಲು ಸಂಸ್ಕೃತಿಗೆ ಸಂಬಂಧಿಸಿದ ವಿವಾದಿತ ವಿಷಯಗಳನ್ನ ಮುನ್ನಲೆಗೆ ತಂದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

  • ತೀರ್ಥ್ ಸಿಂಗ್ ರಾವತ್ ಉತ್ತಾರಖಂಡ ಹೊಸ ಸಿಎಂ

    ತೀರ್ಥ್ ಸಿಂಗ್ ರಾವತ್ ಉತ್ತಾರಖಂಡ ಹೊಸ ಸಿಎಂ

    – ಸಂಜೆ 4 ಗಂಟೆಗೆ ಪದಗ್ರಹಣ

    ಡೆಹರಾಡೂನ್: ತೀರ್ಥ್ ಸಿಂಗ್ ರಾವತ್ ಉತ್ತಾರಖಂಡ ರಾಜ್ಯದ ಹೊಸ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದು, ಇಂದು ಸಂಜೆ 4 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸಂಸದರಾಗಿರುವ 56 ವರ್ಷದ ತೀರ್ಥ್ ಸಿಂಗ್ ರಾವತ್ 2013-15ರವರೆಗೆ ಉತ್ತಾರಖಂಡ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಶಾಸಕರಾಗಿಯೂ ತೀರ್ಥ್ ಸಿಂಗ್ ರಾವತ್ ಆಯ್ಕೆಯಾಗಿದ್ದರು.

    ತ್ರಿವೇಂದ್ರ ಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸಚಿವ ರಮೇಶ್ ಪೊಖ್ರಿಯಾಲ ನಿಶಾಂಕ್ ಮತ್ತು ಉತ್ತಾರಖಂಡ ಸಚಿವರಾದ ಧನ್ ಸಿಂಗ್ ರಾವತ್ ಹೆಸರುಗಳು ಸಿಎಂ ರೇಸ್ ನಲ್ಲಿ ಕೇಳಿ ಬಂದಿದ್ದವು. ಅಂತಿಮವಾಗಿ ರಾಜ್ಯ ಬಿಜೆಪಿ ನಾಯಕರ ಜತೆ ಚರ್ಚಿಸಿದ ಹೈಕಮಾಂಡ್ ತೀರ್ಥ್ ಸಿಂಗ್ ಅವರ ಹೆಸರನ್ನ ಅಂತಿಮಗೊಳಿಸಿದೆ.

    ರಾಜೀನಾಮೆ ಯಾಕೆ?

    ಬಿಜೆಪಿ ಶಾಸಕರು ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದರು. ಇವರೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ತಿಳಿಸಿದ್ದರು ಎನ್ನಲಾಗುತ್ತಿದೆ.ಕೋರ್ ಕಮಿಟಿ ಸಭೆ ನಡೆದ ಬೆನ್ನಲ್ಲೇ ಮಾ.08 ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು.

    ಒಟ್ಟು 69 ವಿಧಾನಸಭಾ ಕ್ಷೇತ್ರಗಳಿದ್ದು 2017ರ ವಿಧಾನಸಭೆಯಲ್ಲಿ ಬಿಜೆಪಿ 59 ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಏರಿತ್ತು. ಕಾಂಗ್ರೆಸ್ 11 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.

  • ‘ಈತ ನನ್ನ ಗಂಡ’ – 4 ಮಕ್ಕಳ ತಂದೆಗಾಗಿ ಸಹೋದರಿಯರ ಕಿತ್ತಾಟ

    ‘ಈತ ನನ್ನ ಗಂಡ’ – 4 ಮಕ್ಕಳ ತಂದೆಗಾಗಿ ಸಹೋದರಿಯರ ಕಿತ್ತಾಟ

    ಡೆಹ್ರಾಡೂನ್: ಇಬ್ಬರು ಸಹೋದರಿಯರು ಒಬ್ಬ ಪುರುಷನನ್ನು ತನ್ನ ಗಂಡ ಎಂದು ಹೇಳಿಕೊಂಡು ಜಗಳವಾಡಿರುವ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ವಿವಾಹೇತರ ವ್ಯಕ್ತಿ ತನ್ನ ಹೆಂಡತಿಯ ಸೋದರಸಂಬಂಧಿ ಸಹೋದರಿಯೊಂದಿಗೆ ಮದುವೆಯಾಗಿದ್ದಾನೆ. ನಂತರ, ಇಬ್ಬರು ಸಹೋದರಿಯರು ಅವರು ತಮ್ಮ ಪತಿ ಎಂದು ಹೇಳಿಕೊಂಡು ಜಗಳವಾಡಿದ್ದಾರೆ.

    ಪಶ್ಚಿಮ ಅಂಬರ್ ತಲಾಬ್ ನಿವಾಸಿಯಾದ ಮಹಿಳೆ 10 ವರ್ಷಗಳ ಹಿಂದೆ ಮೀರತ್‍ನ ಮಾವನಾ ಪಟ್ಟಣದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಈತ ತನ್ನ ಹೆಂಡತಿ ಸೋದರ ಸಂಬಂಧಿ ಸಹೋದರಿಯೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದನು. ಈ ವಿಚಾರವಾಗಿ ದಂಪತಿಗಳ ನಡುವೆ ವಾಗ್ವಾದ ನಡೆದ ನಂತರ ಈತ ತನ್ನ ಪತ್ನಿ ಮತ್ತು ಹೆತ್ತವರೊಂದಿಗೆ ವಾಸಿಸುತ್ತಿದ್ದನು. ಆದರೆ ನಾಲ್ಕು ತಿಂಗಳ ಹಿಂದೆ, ಈ ವ್ಯಕ್ತಿ ತನ್ನ ಹೆಂಡತಿಯ ಸಹೋದರಿಯೊಂದಿಗೆ ಮೀರತ್‍ಗೆ ಬಂದು ವಾಸವಾಗಿದ್ದನು. ನಾಪತ್ತೆಯಾಗಿರುವ ಪತಿಯ ಕುರಿತಾಗಿ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.

    ಮಹಿಳೆಯ ಒಂದು ದಿನ ರೂರ್ಕಿಯಾ ರೋಡ್ವೇಸ್ ನಿಲ್ದಾಣದಲ್ಲಿ ತನ್ನ ಪತಿ ಮತ್ತು ಸಹೋದರಿ ಒಟ್ಟಿಗೆ ಇರುವುದನ್ನು ನೋಡಿದ್ದಾಳೆ. ಮಹಿಳೆ ಪತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾಳೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಠಾಣೆಯಲ್ಲಿ ವಿಚಾರಣೆ ಮಾಡುವ ವೇಳೆಯಲ್ಲಿ ಸಹೋದರಿಯರಿಬ್ಬರು ತನ್ನ ಪತಿ ಎಂದು ಹೇಳಿಕೊಂಡಿದ್ದಾರೆ. ಇಬ್ಬರು ಪೊಲೀಸರ ಎದುರೆ ಜಗಳವನ್ನು ಆರಂಭಿಸಿದ್ದಾರೆ. ಮೀರತ್ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.