Tag: Uttarakhand

  • ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಬಜರಂಗದಳ ಕಾರ್ಯಕರ್ತರಿಂದ ಅಂಗಡಿಗೆ ಬೆಂಕಿ

    ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಬಜರಂಗದಳ ಕಾರ್ಯಕರ್ತರಿಂದ ಅಂಗಡಿಗೆ ಬೆಂಕಿ

    ಡೆಹ್ರಾಡೂನ್: ಅಪ್ರಾಪ್ತನೊಬ್ಬ ಫೇಸ್‍ಬುಕ್ ನಲ್ಲಿ ಕೇದಾರನಾಥದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶಗೊಂಡ ಬಜರಂಗದಳ ಕಾರ್ಯಕರ್ತರು ಆತನ ಕುಟುಂಬದ ಅಂಗಡಿಯನ್ನೇ ಭಸ್ಮಗೊಳಿಸಿದ ಘಟನೆ ಉತ್ತರಾಖಂಡ್‍ನಲ್ಲಿ ನಡೆದಿದೆ.

    ಉತ್ತರಾಖಂಡ್ ನ ಗರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಕೇದರಾನಾಥ ದೇವಾಲಯದ ಬಗ್ಗೆ ಅಪ್ರಾಪ್ತ ಅವಹೇಳನಕಾರಿ ಫೋಟೋವೊಂದನ್ನು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದನು. ಇದರಿಂದ ಆಕ್ರೋಶಗೊಂಡ ಬಜರಂಗದಳ ಕಾರ್ಯಕರ್ತರು ಭಾನುವಾರ ಆತನ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಹಿಂದೂ ಪರ ಘೋಷಣೆಗಳನ್ನು ಕೂಗಿದ್ದಾರೆ.

    ಘಟನೆ ಸೂಕ್ಷ್ಮತೆಯನ್ನು ಅರಿತು ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸಿದ್ರು. ಪೋಸ್ಟ್ ಹಾಕಿದ ಆರೋಪಿಯನ್ನು ಹಿಡಿದು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ವರದಿಗಳ ಪ್ರಕಾರ ಯುವಕ ಕೇದರನಾಥ್ ದೇವಾಲಯದ ಅವಹೇಳನಕಾರಿ ಫೋಟೋದೊಂದಿಗೆ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ ಬಜರಂಗದಳ ಕಾರ್ಯಕರ್ತರು ಅಂಗಡಿಗೆ ಬೆಂಕಿ ಹಚ್ಚಿದ ನಂತರ ಅಂಗಡಿ ಮಾಲೀಕನಿಗಾಗಿ ಹುಡುಕಾಡುತ್ತಿದ್ದರು. ಆದ್ರೆ ಮಾಲೀಕ ಅಲ್ಲಿಂದ ಪರಾರಿಯಾಗಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವಿಡಿಯೋ ಮಾಡಿದ್ದು, ಆರೋಪಿಯನ್ನು ಬಂಧಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸೆರೆಹಿಡಿದ ವಿಡಿಯೋದಲ್ಲಿ ಬಜರಂಗ ದಳ ಕಾರ್ಯಕರ್ತರು ಹೇಳಿದ್ದಾರೆ.

    ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಪ್ರಾಫೆಟ್ ಮೊಹಮ್ಮದ್‍ರ ಬಗ್ಗೆ ಯುವಕನೊಬ್ಬ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಕಾರಣ ಭಾರೀ ಪ್ರತಿಭಟನೆ ನಡೆದು ಕೋಮು ಗಲಭೆ ಉಂಟಾಗಿತ್ತು.

  • ಬದರಿನಾಥ್‍ನಲ್ಲಿ ಹೆಲಿಕಾಪ್ಟರ್ ಪತನ- ರೋಟರ್ ಬ್ಲೇಡ್‍ಗಳು ತಗುಲಿ ಎಂಜಿನಿಯರ್ ಸಾವು, ಇಬ್ಬರು ಪೈಲೆಟ್‍ಗಳಿಗೆ ಗಾಯ

    ಬದರಿನಾಥ್‍ನಲ್ಲಿ ಹೆಲಿಕಾಪ್ಟರ್ ಪತನ- ರೋಟರ್ ಬ್ಲೇಡ್‍ಗಳು ತಗುಲಿ ಎಂಜಿನಿಯರ್ ಸಾವು, ಇಬ್ಬರು ಪೈಲೆಟ್‍ಗಳಿಗೆ ಗಾಯ

    ಡೆಹ್ರಾಡೂನ್: ಉತ್ತರಾಖಂಡ್‍ನ ಬದರಿನಾಥ್‍ನಲ್ಲಿ ಇಂದು ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಪೈಲೆಟ್‍ಗಳು ಗಾಯಗೊಂಡಿದ್ದಾರೆ.

    ಹೆಲಿಕಾಪ್ಟರ್‍ನ ಸಿಬ್ಬಂದಿವರ್ಗದ ಭಾಗವಾಗಿದ್ದ ಎಂಜಿನಿಯರ್ ಸಾವನ್ನಪ್ಪಿದ್ದು, ಇಬ್ಬರು ಪೈಲೆಟ್‍ಗಳಿಗೆ ಗಾಯವಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೃತ ಎಂಜಿನಿಯರ್ ವಿಕ್ರಮ್ ಲಂಬಾ ಅಸ್ಸಾಮ್ ನಿವಾಸಿಯಾಗಿದ್ದು, ರೋಟರ್ ಬ್ಲೇಡ್‍ಗಳು ತಗುಲಿದ ಪರಿಣಾಮ ಸಾವನ್ನಪ್ಪಿದ್ದಾರೆಂದು ಚಾಮೋಲಿಯ ಪೊಲೀಸ್ ವರಿಷ್ಠಾಧಿಕಾರಿ ತೃಪ್ತಿ ಭಟ್ ಹೇಳಿದ್ದಾರೆ.

    ಇಂದು ಬೆಳಿಗ್ಗೆ 7.45ರ ಸಮಯದಲ್ಲಿ ವಿಮಾನ ಟೇಕ್ ಆಫ್ ಆಗುವ ವೇಳೆ, ಅಗತ್ಯವಾದ ಗಾಳಿಯ ಒತ್ತಡವಿಲ್ಲದ ಕಾರಣ ಸಮತೋಲನ ಕಳೆದುಕೊಂಡು ಪತನಗೊಂಡಿದೆ. ಘಟನೆಯಲ್ಲಿ ಪುಣೆಯವರಾದ ಪೈಲೆಟ್ ಸಂಜಯ್ ವಾಸಿ ಅವರ ಬೆನ್ನಿಗೆ ಪೆಟ್ಟಾಗಿದೆ. ಕಾನ್ಪುರ ನಿವಾಸಿಯಾದ ಮತ್ತೊಬ್ಬ ಪೈಲೆಟ್ ಅಲ್ಕಾ ಶುಕ್ಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಲಿಕಾಪ್ಟರ್‍ನಲ್ಲಿದ್ದ ಯಾತ್ರಿಕರೆಲ್ಲರೂ ಗುಜರಾತ್‍ನ ವಡೋದರಾದವರಾಗಿದ್ದು, ಅವರವರ ಊರುಗಳಿಗೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪತನಗೊಂಡ ಅಗಸ್ಟಾ 119 ಹೆಲಿಕಾಪ್ಟರ್ ಮುಂಬೈ ಮೂಲದ ಖಾಸಗಿ ಆಪರೇಟರ್ ಕ್ರೆಸ್ಟಲ್ ಏವಿಯೇಷನ್‍ಗೆ ಸೇರಿದ್ದಾಗಿದ್ದು, ಹರಿದ್ವಾರಕ್ಕೆ ಹೊರಟಿತ್ತು ಎಂದು ವರದಿಯಾಗಿದೆ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

  • ಪ್ರವಾಸಿ ವಾಹನವನ್ನೇ ಅಟ್ಟಾಡಿಸಿಕೊಂಡು ಬಂದ ಆನೆ- ವೀಡಿಯೋ ವೈರಲ್

    ಪ್ರವಾಸಿ ವಾಹನವನ್ನೇ ಅಟ್ಟಾಡಿಸಿಕೊಂಡು ಬಂದ ಆನೆ- ವೀಡಿಯೋ ವೈರಲ್

    ಉತ್ತರಾಖಂಡ್: ನಾಯಿ ಅಟ್ಟಿಸಿಕೊಂಡು ಬಂದರೆ ನಾವು ಭಯಭೀತರಾಗುತ್ತೇವೆ. ಇನ್ನು ಆನೆಯೊಂದು ಜೀಪನ್ನೇ ಅಟ್ಟಿಸಿಕೊಂಡು ಬಂದರೆ ಪರಿಸ್ಥಿತಿ ಹೇಗಾಗಿರಬೇಡ. ಹೌದು. ಆನೆಯೊಂದು ಪ್ರವಾಸಿಗರ ಜೀಪನ್ನು ಅಟ್ಟಿಸಿಕೊಂಡು ಬಂದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರ ಜೀಪೊಂದು ಸಫಾರಿ ಮಾಡುತ್ತಿದ್ದಾಗ ಸುಮಾರು 500-800ಮೀ ಹತ್ತಿರದಿಂದ ಆನೆಯೊಂದು ಓಡಿಸಿಕೊಂಡು ಬಂದಿದೆ. ಇದರಿಂದ ಭಯಭೀತರಾದ ಜೀಪ್ ಡ್ರೈವರ್ ಇನ್ನಷ್ಟು ಸ್ಪೀಡಾಗಿ ವಾಹನವನ್ನು ಓಡಿಸಿದ್ದಾನೆ. ಒಂದಷ್ಟು ದೂರ ವಾಹನವನ್ನು ಓಡಿಸಿಕೊಂಡ ಆನೆಯು ಮತ್ತೆ ಅದೇ ದಾರಿಯಿಂದ ಹಿಂತಿರುಗಿದೆ.

    ವಿಡಿಯೋದಲ್ಲಿ ಆನೆಗಳ ಗುಂಪೊಂದು ರಸ್ತೆ ದಾಟುತ್ತಿರುವುದನ್ನು ಕಾಣಬಹುದು. ಜೀಪಿನ ಶಬ್ದ ಕೇಳಿಸಿದಾಗ ಆನೆಯೊಂದು ಘೀಳಿಟ್ಟು ಓಡಿಸುತ್ತಾ ಬಂದಿದೆ. ಒಟ್ಟಿನಲ್ಲಿ ಆನೆಯಿಂದ ಪಾರಾದ ಪ್ರವಾಸಿಗರು ಘಟನೆ ಬಳಿಕ ದೇವರಿಗೆ ಧನ್ಯವಾದ ಹೇಳುತ್ತಿದ್ದಾರೆ.

    ಉತ್ತರಾಖಂಡದ ಜಿಮ್ ಕಾರ್ಬೆಟ್ ಉದ್ಯಾನವು ರಾಜ್ಯದ ನೈನಿತಾನ್ ಜಿಲ್ಲೆಯಲ್ಲಿದೆ ಮತ್ತು ಅದು ಬಂಗಾಳ ಹುಲಿಗಳಿಗೆ ಹೆಸರಾಗಿದೆ.

    https://www.youtube.com/watch?v=NSDhnO4Mjvk

  • 100 ಅಡಿ ಆಳಕ್ಕೆ ಬಸ್ ಉರುಳಿ ಬಿದ್ದು 24 ಯಾತ್ರಿಕರ ದುರ್ಮರಣ

    100 ಅಡಿ ಆಳಕ್ಕೆ ಬಸ್ ಉರುಳಿ ಬಿದ್ದು 24 ಯಾತ್ರಿಕರ ದುರ್ಮರಣ

    ಡೆಹ್ರಾಡೂನ್: ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ಸೊಂದು 100 ಮೀಟರ್ ಆಳಕ್ಕೆ ಉರುಳಿ ಬಿದ್ದ ಪರಿಣಾಮ 24 ಮಂದಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

    ಉತ್ತರಾಖಂಡ್ ನ ಉತ್ತರಕಾಶಿಯ ಗಂಗೋತ್ರಿಯಿಂದ ಯಾತ್ರಿಕರಿದ್ದ ಬಸ್ ಹಿಂದಿರುಗುತ್ತಿದ್ದ ವೇಳೆ ನಲುಪಾಣಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಭಾಗೀರಥಿ ನದಿಗೆ ಉರುಳಿ ಬಿದ್ದಿದೆ.

    ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

    ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಬಸ್‍ನಲ್ಲಿದ್ದವರು ಮಧ್ಯಪ್ರದೇಶ ಮೂಲದವರಾಗಿದ್ದು, ಗಂಗೋತ್ರಿಯಿಂದ ರಿಷಿಕೇಶ್‍ಗೆ ಬರುವಾಗ 100 ಅಡಿ ಆಳದ ಕಂದಕಕ್ಕೆ ಬಿದ್ದು ಅವಘಢ ಸಂಭವಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಮೃತರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಐಟಿಬಿಪಿ, ಎಸ್‍ಡಿಆರ್‍ಎಫ್ ಪಡೆ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಪರ್ವತ ತುಂಬಾ ಕಡಿದಾದುದ್ದರಿಂದ ಮತ್ತಷ್ಟು ವಿಳಂಬವಾಗಿ ಬೆಳಗ್ಗೆವರೆಗೂ ಕಾರ್ಯಾಚರಣೆ ನಡೆದಿದೆ.

    ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಪ್ರತೀ ಕುಟುಂಬಕ್ಕೂ 1 ಲಕ್ಷ ಹಾಗೂ ಗಯಾಳುಗಳಿಗೆ 50,000 ಪರಿಹಾರ ಘೋಷಿಸಿದ್ದಾರೆ.

  • ವಿಡಿಯೋ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಗೋವನ್ನು ರಕ್ಷಿಸಿದ ರಕ್ಷಣಾ ತಂಡ

    ವಿಡಿಯೋ: ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಗೋವನ್ನು ರಕ್ಷಿಸಿದ ರಕ್ಷಣಾ ತಂಡ

    ಡೆಹ್ರಾಡೂನ್: ಉತ್ತರಾಖಂಡ್‍ನ ವಿಷ್ಣುಪ್ರಯಾಗ ಬಳಿ ಭಾರೀ ಭೂಕುಸಿತ ಸಂಭವಿಸಿ ಸಾವಿರಾರು ಯಾತ್ರಿಕರು ಸಂಕಷ್ಟದಲ್ಲಿ ಸಿಲುಕಿದ ಬೆನ್ನಲ್ಲೇ ಅತ್ತ ಹರಿದ್ವಾರದಲ್ಲಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೋಗುತ್ತಿರುವ ಗೋವೊಂದನ್ನು ರಕ್ಷಣೆ ಮಾಡಲಾಗಿದೆ.

    ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಗೋವು ಅಪಾಯದಿಂದ ಪಾರಾಗಲು ಕಷ್ಟಪಡುತ್ತಿರೋ ದೃಶ್ಯ ಮನಕಲಕುವಂತಿದೆ. ಗೋವು ನೀರಿನಲ್ಲಿ ಒದ್ದಾಡುತ್ತಿರೋ ಮಾಹಿತಿ ತಿಳಿದ ತಕ್ಷಣವೇ ರಾಜ್ಯ ವಿಪತ್ತು ತಂಡ ಸ್ಥಳಕ್ಕಾಗಮಿಸಿ ಗೋವಿಗೆ ಹಗ್ಗ ಕಟ್ಟುವ ಮೂಲಕ ಸುರಕ್ಷಿತವಾಗಿ ದಡ ಸೇರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಬಳಿ ಭಾರೀ ಭೂ ಕುಸಿತ ಸಂಭವಿಸಿದ್ದ ರಿಷಿಕೇಶ್ ಹಾಗೂ ಬದರೀನಾಥ್ ಸಂಪರ್ಕ ಕಲ್ಪಿಸುವ ಹೈವೇಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕನ್ನಡಿಗರು ಸೇರಿದಂತೆ ಸಾವಿರಾರು ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರು. ಹಾಥಿ ಪಹಾರ್ ಪರ್ವತದಿಂದ ಭಾರಿ ಗಾತ್ರದ ಬಂಡೆಗಳು ರಸ್ತೆಗೆ ಕುಸಿದು ಬಿದ್ದಿವೆ. ಚಮೋಲಿ ಜಿಲ್ಲೆಯ ಜೋಶಿ ಮಠದಿಂದ 5 ಕಿ.ಮೀ ದೂರದಲ್ಲಿ ಈ ಅನಾಹುತ ನಡೆದಿತ್ತು. ಜೋಶಿಮಠ, ಕರ್ಣಪ್ರಯಾಗ, ಪೀಪಲ್‍ಕೋಟಿ, ಗೋವಿಂದಘಾಟ್ ಮತ್ತು ಬದರಿನಾಥದಲ್ಲಿ ಯಾತ್ರಿಕರು ಸಿಲುಕಿದ್ದರು.

    https://www.youtube.com/watch?v=a2xJzk9G3Zo&feature=youtu.be

  • 250 ಮೀಟರ್ ಎತ್ತರದಿಂದ ನದಿಗೆ ಬಿತ್ತು ಬಸ್: 44 ಜನರ ಸಾವು

    250 ಮೀಟರ್ ಎತ್ತರದಿಂದ ನದಿಗೆ ಬಿತ್ತು ಬಸ್: 44 ಜನರ ಸಾವು

    ಶಿಮ್ಲಾ: ಖಾಸಗಿ ಬಸ್ಸೊಂದು ನದಿಯೊಳಗೆ ಬಿದ್ದ ಪರಿಣಾಮ 44 ಪ್ರಯಾಣಿಕರು ಸಾವನ್ನಪ್ಪಿರುವ ಭೀಕರ ಅಪಾಘತ ಹಿಮಾಚಲ ಪ್ರದೇಶದ ಚೋಪಲಾ ಎಂಬಲ್ಲಿ ನಡೆದಿದೆ.

    ರಾಜಧಾನಿ ಶಿಮ್ಲಾದಿಂದ 95 ಕಿ.ಮೀ. ದೂರದಲ್ಲಿ ಟೋನ್ಸ್ ನದಿಗೆ ಬಸ್ ಬಿದ್ದಿದೆ. ಬಸ್‍ನಲ್ಲಿ ಒಟ್ಟು 52 ರಿಂದ 55 ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದುವರೆಗೂ 10 ಮಹಿಳೆಯರು, 31 ಪುರುಷರು ಹಾಗು 3 ಮಕ್ಕಳ ಮೃತ ದೇಹಗಳು ಪತ್ತೆಯಾಗಿವೆ. ಇನ್ನು ಒಂದೆರೆಡು ಶವಗಳು ನದಿಯಲ್ಲಿ ಹರಿದು ಹೋಗಿರಬಹುದು ಎಂದು ಶಂಕಿಸಲಾಗಿದೆ.

    ಬಸ್‍ನಲ್ಲಿದ್ದ ಪ್ರಯಾಣಿಕರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ರಾಜ್ಯದವರು ಎಂದು ಹೇಳಲಾಗುತ್ತಿದೆ. ಯುಕೆ 66 ಪಿ 0045 ಎಂಬ ನಂಬರಿನ ಬಸ್ ಉತ್ತರಾಖಂಡ ರಾಜ್ಯದ ಟಿಯುನಿ ನಗರದಿಂದ ವಿಕಾಸ್‍ನಗರಕ್ಕೆ ಹೋಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಟೋನ್ಸ್ ನದಿ ಯಮುನಾ ನದಿಯ ಅತಿದೊಡ್ಡ ಉಪನದಿಯಾಗಿದ್ದು, ಉತ್ತರಾಖಂಡದ ಗರ್ಹವಾಲ್ ಪ್ರದೇಶದಿಂದ ಹಿಮಾಚಲ ಪ್ರದೇಶದಲ್ಲಿ ಈ ನದಿ ಹರಿಯುತ್ತದೆ.

     

  • ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ.

    2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ, ಇವಿಎಂಗಳ ಮೂಲಕ ಚುನಾವಣೆಯನ್ನು ಅನಾಯಾಸವಾಗಿ ನಡೆಸುವ ಭಾರತದ ಅನುಭವದಿಂದ ಕಲಿಯಲು ಆಸಕ್ತಿ ತೋರಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

    ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರಾದ ನಿಕೋಲೈ ಲೆವಿಚೆವ್ ಇವಿಎಂ ಮೂಲಕ ಓಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಫೆಬ್ರವರಿಯಲ್ಲಿ ಉತ್ತರಾಖಂಡ್‍ಗೆ ಭೇಟಿ ನೀಡಿದ್ದರು. ಅಲ್ಲದೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲೂ ಚುನಾವಣಾಯನ್ನ ವೀಕ್ಷಿಸಿದ್ದು, ಇವಿಎಂ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಮಾನವನ ಪಾತ್ರ ಕಡಿಮೆ ಇರೋದನ್ನ ನೋಡಿ ಪ್ರಭಾವಿತರಾಗಿದ್ದಾರೆ ಎಂದು ವರದಿಯಾಗಿದೆ.

    ಲೆವಿಚೆವ್ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ, ಇವಿಎಂ ತಂತ್ರಜ್ಞಾನ ಹಾಗೂ ಅದರ ಬಳಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ ಎಣಿಕೆಗೆ ಆಧುನಿಕ ಟ್ಯಾಬುಲೇಷನ್ ಪದ್ಧತಿಯನ್ನ ಅಭಿವೃದ್ಧಿಪಡಿಸಲು ಭಾರತಕ್ಕೆ ನೆರವಾಗಲಿದೆ ಎಂದು ವರದಿಯಾಗಿದೆ.

    ಮಿತ್ರರಾಷ್ಟ್ರಗಳು ಭಾರತದ ಚುನಾವಣಾ ಆಯೋಗದ ನೆರವು ಕೇಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಮತದಾರರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಬ್ಯಾಲೆಟ್ ಪೇಪರ್ ಕೊರತೆ ಉಂಟಾಗಿತ್ತು. ಆಗ ಭಾರತ ಹೆಚ್ಚುವರಿ ಬ್ಯಾಲೆಟ್ ಪೇಪರನ್ನ ಕಾಬುಲ್‍ಗೆ ಪೂರೈಕೆ ಮಾಡಿತ್ತು. ಭಾರತದಲ್ಲಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಎವಿಎಂ ಬಳಕೆ ಮಾಡಲಾಯ್ತು.

    ಮಧ್ಯಪ್ರದೇಶದ ಇವಿಎಂನಲ್ಲಿ ಲೋಪವಾಗಿದೆ ಎಂದು ತೋರಿಸಿ ದೇಶದೆಲ್ಲಡೆ ಸಂಚಲನಕ್ಕೆ ಕಾರಣವಾದ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

    ಇದನ್ನೂ ಓದಿ: ಇವಿಎಂ ಪರೀಕ್ಷೆ ವೇಳೆ ಎಸ್‍ಪಿಗೆ ಹಾಕಿದ ಮತ ಬಿಜೆಪಿಗೆ: ಕಾಂಗ್ರೆಸ್ ಗಂಭೀರ ಆರೋಪ

  • ಉತ್ತರಾಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತ್ರಿವೇಂದ್ರ ಸಿಂಗ್ ರಾವತ್

    ಉತ್ತರಾಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತ್ರಿವೇಂದ್ರ ಸಿಂಗ್ ರಾವತ್

    ಡೆಹ್ರಾಡೂನ್: ಪಂಚರಾಜ್ಯ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿದ್ದ ಉತ್ತರಾಖಂಡ್ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದ ಗದ್ದುಗೆ ಏರಿದೆ. ಉತ್ತರಾಖಂಡ್‍ನ 9ನೇ ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ರಾವತ್ ಗದ್ದುಗೆ ಏರಿದ್ದಾರೆ.

    ರಾಜ್ಯಪಾಲರಾದ ಕೃಷ್ಣ ಕಾಂತ್ ಪೌಲ್ ಪ್ರಮಾಣ ವಚನ ಬೋಧನೆ ಮಾಡಿದ್ರು. ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಭಾಗಿಯಾಗಿದ್ರು.

    ದೀರ್ಘ ಕಾಲ ಆರ್‍ಎಸ್‍ಎಸ್ ಪ್ರಚಾರಕರಾಗಿ ಕೆಲಸ ಮಾಡಿರುವ ತ್ರಿವೇಂದ್ರ ಸಿಂಗ್ ರಾವತ್ ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಅಮಿತ್ ಷಾ ಜೊತೆಗೂಡಿ ಸಾಕಷ್ಟು ಕೆಲಸ ಮಾಡಿದ್ರು. ತ್ರಿವೇಂದ್ರ ಸಿಂಗ್ ರಾವತ್ ಜೊತೆ ಎಲ್ಲರೂ ಈಶ್ವರನ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು. ನಿರ್ಗಮಿತ ಸಿಎಂ ಹರೀಶ್ ರಾವತ್ ಕೂಡ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದ್ರು.

    ಉತ್ತರಾಖಂಡ್‍ನಲ್ಲಿ 70 ಸ್ಥಾನಗಳಲ್ಲಿ 57 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

     

  • ಉತ್ತರಾಖಂಡ್‍ನಲ್ಲಿಂದು ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ

    ಉತ್ತರಾಖಂಡ್‍ನಲ್ಲಿಂದು ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣವಚನ

    – ಉತ್ತರಪ್ರದೇಶದ ಸಾರಥಿ ಯಾರು? ಇಂದು ನಿರ್ಧಾರ

    ನವದೆಹಲಿ: ಉತ್ತರಾಖಂಡ್‍ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಅಧಿಕಾರದ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

    ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ಮಾಜಿ ಸಂಘ ಪ್ರಚಾರಕರಾಗಿರುವ ರಾವತ್, ದೋಯ್‍ವಾಲಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದಾರೆ.

    ಬಿಜೆಪಿ ಪ್ರಚಂಡ ಜಯ ಸಾಧಿಸಿರುವ ಉತ್ತರಪ್ರದೇಶದಲ್ಲಿ ಸರ್ಕಾರದ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಮನೋಜ್ ಸಿನ್ಹಾ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ ಎಂದು ಸಿನ್ಹಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಿಎಂ ಯಾರಾಗ್ತಾರೆ ಎಂಬ ಬಗ್ಗೆ ಇವತ್ತು ಅಧಿಕೃತ ಘೋಷಣೆ ಹೊರಬೀಳಲಿದೆ.

    ಮಾರ್ಚ್ 11ರಂದು ಫಲಿತಾಂಶ ಬಂದಿತ್ತಾದರೂ ಯಾರನ್ನು ಸಿಎಂ ಮಾಡಬೇಕೆಂಬ ಲೆಕ್ಕಾಚಾರದಲ್ಲೇ ಬಿಜೆಪಿ ತೊಡಗಿಕೊಂಡಿತ್ತು. ಇಂದು ಲಕ್ನೋದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದರಲ್ಲಿ ಮನೋಜ್ ಸಿನ್ಹಾರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

    ಭಾನುವಾರ ಮಧ್ಯಾಹ್ನ 2.15ಕ್ಕೆ ಲಕ್ನೋದಲ್ಲಿರುವ ಉಪವನದಲ್ಲಿ ರಾಜ್ಯಪಾಲ ರಾಮ್‍ನಾಯ್ಕ್ ನೂತನ ಸಿಎಂ ಮತ್ತು ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾಕ್ಷಿಯಾಗಲಿದ್ದಾರೆ.

                                    

    ಸದ್ಯ ಸಿನ್ಹಾ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ ಮತ್ತು ದೂರಸಂಪರ್ಕ ಖಾತೆಯ ಸ್ವತಂತ್ರ ಸಚಿವರಾಗಿದ್ದಾರೆ. ಗಾಜಿಪುರ್ ಸಂಸದರಾಗಿರುವ ಮನೋಜ್ ಸಿನ್ಹಾ ಭೂಮಿಹಾರ್ ಸಮುದಾಯಕ್ಕೆ ಸೇರಿದವರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿರುವ ಸಿನ್ಹಾ 1959ರಲ್ಲಿ ಗಾಜಿಯಪುರದ ಮೋಹನ್‍ಪುರದಲ್ಲಿ ಜನಿಸಿದ್ದರು. 1996ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಇವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಸಿನ್ಹಾ ಪ್ರಾಮಾಣಿಕ, ದಕ್ಷ ಸಂಸದರಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ.

  • ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    – ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ

    ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.

    ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.

    ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.

    ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

    ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.