Tag: Uttarakhand

  • ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಉತ್ತರಾಖಂಡ್ ರಕ್ಷಣಾ ಕಾರ್ಯಚರಣೆ ಸ್ಫೂರ್ತಿ -ಚಹಾ ಮಾರುವವನ ಪುತ್ರಿ ಭಾರತೀಯ ವಾಯುಸೇನೆಗೆ ಆಯ್ಕೆ!

    ಭೋಪಾಲ್: ಭಾರತೀಯ ವಾಯುಸೇನೆ ನಡೆಸುವ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಮಿಮುಚ್ ಜಿಲ್ಲೆಯಿಂದ ಚಹಾ ಮಾರಾಟ ಮಾಡುವವನ ಪುತ್ರಿ ನೇಮಕಗೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಅಂಚಲ್ ಗಂಗ್ವಾಲ್(24) ಆಯ್ಕೆಗೊಂಡ ಯುವತಿ. ಮೂಲತಃ ಮಿಮುಚ್ ಜಿಲ್ಲೆಯವರಾದ ಅಂಚಲ್ ವಾಯುಸೇನೆ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಆಯ್ಕೆಯಾದ ಒಬ್ಬಳೆ ಒಬ್ಬ ಯುವತಿ. ಇವರ ತಂದೆ ಸುರೇಶ್ ಗಂಗ್ವಾಲ್ ಮಿಮುಚ್‍ನ ಬಸ್ ನಿಲ್ದಾಣದ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಚಲ್, ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ 2013ರ ಉತ್ತರಾಖಂಡ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಪ್ರೇರೇಪಣೆಗೊಂಡು ಅಂದೇ ಭಾರತೀಯ ಸೇನೆಗೆ ಸೇರಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆ. ಆದರೆ ನನ್ನ ಕುಟುಂಬ ನನ್ನನ್ನು ಓದಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಾನು ಭಾರತೀಯ ವಾಯುಸೇನೆಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.

    ಭಾರತೀಯ ವಾಯುಸೇನಾ ಪರೀಕ್ಷೆಯು ಅಷ್ಟು ಸುಲಭವಾಗಿರಲಿಲ್ಲ. ನಾನು ಹಲವು ವರ್ಷಗಳಿಂದ 5 ಭಾರೀ ಪರೀಕ್ಷೆ ಬರೆದಿದ್ದರೂ ಆಯ್ಕೆಗೊಂಡಿರಲಿಲ್ಲ. ಈ ವರ್ಷ ಬರೆದ ಪರೀಕ್ಷೆಯಲ್ಲಿ ಜೂನ್ 6ರ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ತಂದೆ, ನಾನು ಬಸ್ ನಿಲ್ದಾಣದ ಹತ್ತಿರ ಚಹಾ ವ್ಯಾಪಾರ ಮಾಡುತ್ತಿದ್ದು, ಎಲ್ಲರೂ ನಾಮದೇವ್ ಟೀ ಸ್ಟಾಲ್ ಎಂದೇ ಗುರುತಿಸುತ್ತಾರೆ. ಮಗಳ ಈ ಸಾಧನೆಗೆ ಬರುವ ಗ್ರಾಹಕರು ಅಭಿನಂದನೆ ಸಲ್ಲಿಸಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಆರ್ಥಿಕ ಸಂಕಷ್ಟದ ನಡುವೆಯೂ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಮಗ ಎಂಜಿನಿಯರಿಂಗ್ ಮಾಡುತ್ತಿದ್ದು, ಮಗಳು 12 ನೇ ತರಗತಿ ಓದುತ್ತಿದ್ದಾಳೆ. ಇಬ್ಬರಿಗೂ ಕೋಚಿಂಗ್ ನೀಡಲು ಸಾಲ ಮಾಡಿ ಸೇರಿಸಿದ್ದೆ ಎಂದು ಈ ವೇಳೆ ಹೇಳಿಕೊಂಡರು.

    ದೇಶಾದ್ಯಂತ ಒಟ್ಟು 6 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು,  ಕೇವಲ 22 ಮಂದಿ ಆಯ್ಕೆಗೊಂಡಿದ್ದಾರೆ ಇದರಲ್ಲಿ ಅಂಚಲ್‍ ಕೂಡ ಒಬ್ಬರಾಗಿದ್ದಾರೆ. ವಾಯುಸೇನಾ ಪಡೆಯು ಅಂಚಲ್‍ಗೆ ಜೂನ್ 30ರೊಳಗಾಗಿ ಹೈದರಾಬಾದ್‍ನ ದುಂಡಿಗಲ್ ಬಳಿ ಇರುವ ಭಾರತೀಯ ವಾಯುಸೇನಾ ಅಕಾಡೆಮಿಗೆ ಸೇರುವಂತೆ ಸೂಚಿಸಿದೆ.

  • ಚಿರತೆ ದಾಳಿಯಿಂದ ಬಾಲಕ ಸಾವು: ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಾಡಿಗೆ ಬೆಂಕಿ!

    ಚಿರತೆ ದಾಳಿಯಿಂದ ಬಾಲಕ ಸಾವು: ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಾಡಿಗೆ ಬೆಂಕಿ!

    ಸಾಂದರ್ಭಿಕ ಚಿತ್ರ

    ಡೆಹ್ರಾಡೂನ್: ಚಿರತೆ ಬಾಲಕನನ್ನು ಎಳೆದುಕೊಂಡು ಹೋಗಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಕಾಡಿಗೆ ಬೆಂಕಿ ಇಟ್ಟ ಘಟನೆ ಉತ್ತರಾಖಂಡ್‍ನ ಬಗೇಶ್ವರ ಜಿಲ್ಲೆಯ ಹರಿನಗರ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ ಗ್ರಾಮದ ಮೇಲೆ ದಾಳಿ ನಡೆಸಿದ ಚಿರತೆ ಬಾಲಕನನ್ನು ಎಳೆದು ಕೊಂಡು ಹೋಗಿತ್ತು. ಚಿರತೆ ಎಳೆದುಕೊಂಡು ಹೋಗಿದ್ದಕ್ಕೆ ಗ್ರಾಮಸ್ಥರು ರೊಚ್ಚಿಗೆದ್ದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರ ಬೆಳಗ್ಗೆ ಅರಣ್ಯ ಪ್ರದೇಶದ ಸಮೀಪ ಕಚ್ಚಿ ತಿಂದಿರುವ ಬಾಲಕನ ಮೃತದೇಹ ಪತ್ತೆಯಾಗಿತ್ತು.

    ದೀಪಕ್(7) ದಾಳಿಗೊಳಗಾಗಿ ಮೃತಪಟ್ಟ ಬಾಲಕ. ಹರಿನಗರ ಗ್ರಾಮದ ದೀವಾನ್ ರಾಮ್‍ರ ಮಗನಾಗಿದ್ದು, ಸೋಮವಾರ ಸಂಜೆ ಮನೆಯ ಬಳಿ ಚಿರತೆಯೊಂದು ದಾಳಿ ನಡೆಸಿತ್ತು. ಈ ವೇಳೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ತಾಯಿಯು ಮಗುವಿನ ಚೀರಾಟ ಕೇಳಿ ಹೊರಬಂದು ನೋಡಿದಾಗ ಚಿರತೆ ಮಗುವನ್ನು ಕಾಡಿನ ಕಡೆಗೆ ಎಳೆದೊಯ್ದಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ರೊಚ್ಚಿಗೆದ್ದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ.

    ಬಾಲಕನ ಶವ ಸಿಕ್ಕ ಹಿನ್ನೆಲೆ ಗ್ರಾಮಸ್ಥರು ಒಟ್ಟುಗೂಡಿ  ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಚಿರತೆಯನ್ನು ಕೊಲ್ಲಬೇಕೆಂದು ಪಟ್ಟುಹಿಡಿದಿದ್ದಾರೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ಆರ್ ಕೆ ಸಿಂಗ್ ತಿಳಿಸಿದ್ದಾರೆ.

    ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಒಟ್ಟು 8-9 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಚಿರತೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ. ದೀಪಕ್ ಕುಟುಂಬಕ್ಕೆ ರೂ.3ಲಕ್ಷ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

    ಚಿರತೆ ದಾಳಿಯು ಇದೇ ಮೊದಲಲ್ಲ ಕಳೆದ ಮಾರ್ಚ್ ತಿಂಗಳಲ್ಲಿ ಇದೇ ಚಿರತೆ ದಾಳಿ ಮಾಡಿ 4 ವರ್ಷದ ಮಗುವನ್ನು ಕೊಂದಿತ್ತು. ಒಟ್ಟು 2 ಮಕ್ಕಳನ್ನು ಕೊಂದು ಹಾಕಿದ ಚಿರತೆಯನ್ನು ನರಹಂತಕ ಚಿರತೆಯೆಂದು ಘೋಷಣೆ ಮಾಡುವಂತೆ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಅನುಮತಿ ಕೇಳಿದ್ದೇವೆ ಎಂದು ಹೇಳಿದರು.

    ಚಿರತೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾ ಅಧಿಕಾರಿಯಾದ ಡಿವಿಎಸ್ ಖಾಟಿಯವರು ಕೂಡಲೇ ಚಿರತೆಯನ್ನು ಕೊಲ್ಲುವಂತೆ ಆದೇಶ ನೀಡಿದ್ದಾರೆ. ಅಲ್ಮೋರದಿಂದ ಶೂಟರ್ಸ್ ತಂಡವು ಆದಷ್ಟು ಬೇಗ ಬಗೇಶ್ವರ್ ತಲುಪಿ ಹಂತಕ ಚಿರತೆಯನ್ನು ಗುಂಡಿಟ್ಟು ಕೊಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

  • ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಯುವಕನನ್ನು ರಕ್ಷಿಸಿದ ಸಿಖ್ ಪೊಲೀಸ್

    ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಯುವಕನನ್ನು ರಕ್ಷಿಸಿದ ಸಿಖ್ ಪೊಲೀಸ್

    ರಾಮನಗರ್: ಸಿಖ್ ಪೊಲೀಸ್ ಅಧಿಕಾರಿಯೊಬ್ಬರು ಉದ್ರಿಕ್ತ ಜನರು ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಅತನನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

    ಗಗನ್ ದೀಪ್ ಸಿಂಗ್ ಯುವಕನ ಜೀವ ಉಳಿಸಿದ ಪೊಲೀಸ್ ಅಧಿಕಾರಿ. ಉತ್ತರಾಖಂಡದ ರಾಮನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ಕರ್ತವ್ಯದ ವೇಳೆ ಠಾಣೆಗೆ ಕರೆ ಬಂದ ತಕ್ಷಣ ಪ್ರತಿಕ್ರಿಯಿಸಿದ ಗಗನದೀಪ್ ಸಿಂಗ್ ಯವಕನನ್ನು ರಕ್ಷಿಸಿದ್ದಾರೆ.

    ಏನಿದು ಘಟನೆ: ಮುಸ್ಲಿಂ ವ್ಯಕ್ತಿಯೊಬ್ಬ ಅನ್ಯಕೋಮಿನ ಯುವತಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಒಂದು ಕೋಮಿನ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಾಕಷ್ಟು ಜನ ವ್ಯಕ್ತಿಯ ಸುತ್ತಲು ಸೇರಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.

    ಈ ಕುರಿತು ಮಾಹಿತಿ ಪಡೆದ ಪೊಲೀಸ್ ಅಧಿಕಾರಿ ಗಗನ್‍ದೀಪ್ ಸಿಂಗ್ ಸ್ಥಳಕ್ಕೆ ಧಾವಿಸಿ ಉದ್ರಿಕ್ತ ಗುಂಪಿನ ಮಧ್ಯೆ ನುಗ್ಗಿ ಯುವಕನನ್ನು ರಕ್ಷಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

    https://twitter.com/akdwaaz/status/999687129797050370?

  • ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಪಾಕ್‍ನಲ್ಲಿ ಅಡುಗೆ ಕೆಲಸ ಮಾಡಿ ಭಾರತದ ರಹಸ್ಯವನ್ನು ಐಎಸ್‍ಐಗೆ ತಿಳಿಸಿದ!

    ಡೆಹ್ರಾಡೂನ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.

    ಆರೋಪಿಯನ್ನು ಉತ್ತರಾಖಂಡದ ಪಿತ್ತೋರ್‍ಗಢ ಜಿಲ್ಲೆಯ ಕಿರೊಲಾ ಗ್ರಾಮದ ರಮೇಶ್ ಸಿಂಗ್ ಕನ್ಯಾಲ್ (43) ಎಂದು ಗುರುತಿಸಲಾಗಿದೆ. ಅವನು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್‍ಗೆ (ಐಎಸ್‍ಐ)ಗೆ ರಾಷ್ಟ್ರೀಯ ಭದ್ರತಾ ಮಾಹಿತಿಯನ್ನು ನೀಡುತ್ತಿದ್ದ ಎಂದು ವರದಿಯಾಗಿದೆ.

    ಉತ್ತರ ಪ್ರದೇಶದ ಎಟಿಎಸ್‍ನ ಐದು ಜನರ ತಂಡವು ಆರೋಪಿಯನ್ನು ಆತನ ಮನೆಗೆ ತೆರಳಿ ಬಂಧಿಸಿದೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎಟಿಎಸ್ ಕಸ್ಟಡಿಗೆ ನೀಡಿದೆ.

    ಬೇಹುಗಾರಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಎಟಿಎಸ್‍ನ ಜನರಲ್ ಇನ್ಸ್ ಪೆಕ್ಟರ್ ಆಸೀಂ ಅರುಣ್ ತಿಳಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ರಾಯಭಾರಿಯ ನಿವಾಸದಲ್ಲಿ ಅಡುಗೆ ಕೆಲಸಕ್ಕಾಗಿ ಆರೋಪಿಯನ್ನು ನಿಯೋಜಿಸಲಾಗಿತ್ತು. 2015 ರಿಂದ 2017ರ ವರೆಗೆ ಅಲ್ಲಿ ಕೆಲಸ ಮಾಡುತ್ತಿದ್ದಾಗ ಐಎಸ್‍ಐ ಈತನನ್ನು ಸಂಪರ್ಕಿಸಿ ಹಣದ ಆಸೆ ತೋರಿಸಿದೆ. ಈ ಆಸೆಗೆ ಬಲಿಯಾದ ಈತ ಭಾರತದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಐಎಸ್‍ಐಗೆ ನೀಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಪಿತ್ತೋರ್‍ಗಢ ಜಿಲ್ಲಾ ಪೊಲೀಸರಿಗೆ ಸಿಕ್ಕಿತ್ತು.

    ಸೇನೆಯ ಗುಪ್ತಚರ ಇಲಾಖೆ ಈತನ ಚಟುವಟಿಕೆಯ ಮೇಲೆ ಕಣ್ಣಿಟ್ಟ ಬಳಿಕ ಎಟಿಎಸ್‍ಗೆ ತಿಳಿಸಿತ್ತು. ಈಗ ಎಟಿಎಸ್ ರಮೇಶ್ ಸಿಂಗ್ ಕನ್ಯಾಲ್ ಬಳಿಯಿದ್ದ ಪಾಕಿಸ್ತಾನದ ಸಿಮ್ ಕಾರ್ಡ್ ಹಾಗೂ ಮೊಬೈಲ್‍ನ್ನು ವಶಪಡಿಸಿಕೊಂಡಿದೆ.

    ಆರೋಪಿ ಸಹೋದರ ಕೂಡ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕನ್ಯಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

    ಬಿಸಿಯೂಟ ಕಳಪೆಯಾಗಿದೆ ಅಂದಿದ್ದ ವಿದ್ಯಾರ್ಥಿಗೆ ರಾಡ್‍ನಿಂದ ಹಲ್ಲೆಗೈದ ಪ್ರಾಂಶುಪಾಲೆ!

    (ಸಾಂದರ್ಭಿಕ ಚಿತ್ರ)

    ಡೆಹ್ರಾಡೂನ್: ಬಿಸಿಯೂಟದ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ ವಿದ್ಯಾರ್ಥಿಯ ಮೇಲೆ ಪ್ರಾಂಶುಪಾಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದಿದೆ.

    ಡೆಹ್ರಾಡೂನ್ ಜಿಲ್ಲೆಯ ಓಲ್ಡ್ ದಲಾನ್‍ವಾಲಾ ಪ್ರದೇಶ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ 5ನೇ ತರಗತಿಯ 11 ವರ್ಷದ ರಾಹುಲ್ ಹಲ್ಲೆಗೆ ಒಳಗಾದ ವಿದ್ಯಾರ್ಥಿಯಾಗಿದ್ದಾನೆ.

    ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಊಟ ನೀಡಲಾಗುತ್ತದೆ. ಈ ಊಟದ ಗುಣಮಟ್ಟ ಕಳಪೆಯಾಗಿದೆ ಎಂದು ರಾಹುಲ್ ಪ್ರಾಂಶುಪಾಲೆ ನಸ್ರೀನ್ ಬಾನೋಗೆ ದೂರು ನೀಡಿದ್ದ. ಸಮಸ್ಯೆಯನ್ನು ಅರಿತು ಬಗೆಹರಿಸುವ ಬದಲು ಕೋಪಗೊಂಡ ಆರೋಪಿ ಬಾನೋ ಕಬ್ಬಿಣದ ರಾಡ್‍ನಿಂದ ವಿದ್ಯಾರ್ಥಿ ರಾಹುಲ್‍ಗೆ ಮನಬಂದಂತೆ ಥಳಿಸಿದ್ದಾಳೆ

    ಮಾರಣಾಂತಿಕ ಹಲ್ಲೆಯಿಂದಾಗಿ ರಕ್ತಸ್ರಾವ ಉಂಟಾಗಿ ರಾಹುಲ್ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಸ್ನೇಹಿತರು ಆತನ ಮನೆಗೆ ಎತ್ತಿಕೊಂಡು ಹೋಗಿದ್ದಾರೆ. ಆಘಾತಕ್ಕೆ ಒಳಗಾದ ಪೋಷಕರು ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕ  ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಬಾಲಕನ ತಂದೆ ಧರ್ಮೆಂದ್ರ ಅವರು ಆರೋಪಿಯಾಗಿರುವ ನಸ್ರೀನ್ ಬಾನೋ ವಿರುದ್ಧ ಪಾಸ್ವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ಕೇದಾರನಾಥ ಸನ್ನಿಧಿಯಲ್ಲಿ ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ – ಅಭಿಮಾನಿಗಳು ಗರಂ

    ಕೇದಾರನಾಥ ಸನ್ನಿಧಿಯಲ್ಲಿ ಬಾಹುಬಲಿ ಚೆಲುವೆ ಅನುಷ್ಕಾ ಶೆಟ್ಟಿ – ಅಭಿಮಾನಿಗಳು ಗರಂ

    ಡೆಹ್ರಾಡೂನ್: ಬಾಹುಬಲಿಯ ಚೆಲುವೆ, ಭಾಗಮತಿ ನಟಿ ಅನುಷ್ಕಾ ಶೆಟ್ಟಿ ಅವರು ಉತ್ತರಾಖಂಡದ ಕೇದಾರನಾಥ ಸನ್ನಿಧಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದಾರೆ.

    ಬಾಹುಬಲಿ ಸಿನಿಮಾದಲ್ಲಿ ದೇವಾಸೇನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆ ಪಾತ್ರರಾಗಿರುವ ಅನುಷ್ಕಾ ಶೆಟ್ಟಿ ಕೇದಾರನಾಥ ಶಿವನ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಅನುಷ್ಕಾ ಅವರು ತಾವು ಉಳಿದುಕೊಂಡಿದ್ದ ಸ್ಥಳದಿಂದ ಸುಮಾರು 17 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ದೇವಾಸ್ಥಾನಕ್ಕೆ ಹೋಗಿದ್ದಾರೆ.

    ಮುಂಜಾನೆ ಸುಮಾರು 4 ಗಂಟೆಗೆ ನಡೆಯಲು ಆರಂಭಿಸಿದ್ದು, 8 ಗಂಟೆಗೆ ದೇವಾಸ್ಥಾನಕ್ಕೆ ತಲುಪಿದ್ದಾರೆ. ಅಲ್ಲಿ ಶಿವನ ದರ್ಶನ ಪಡೆದಿದ್ದು, ವಿಶೇಷ ಪೂಜೆ ಮಾಡಿಸಿದ್ದಾರೆ.

    ಪೂಜೆ ಮುಗಿಸಿ ಹಿಂದಿರುಗುವಾಗ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಮೊದಮೊದಲು ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ನಂತರ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದನ್ನು ನಿರಾಕರಿಸಿ ಹೊರಟು ಹೋಗಿದ್ದಾರೆ. ಇದರಿಂದ ಅಭಿಮಾನಿಗಳು ಅನುಷ್ಕಾ ಮೇಲೆ ಗರಂ ಆಗಿದ್ದಾರೆ.

    ಕೇದಾರನಾಥ ಸನ್ನಿಧಿಯಲ್ಲಿ ಭದ್ರತೆ ಸಮಸ್ಯೆ ಇದ್ದುದ್ದರಿಂದ ಅನುಷ್ಕಾ ಸೆಲ್ಫಿಗೆ ನಿಕಾರಿಸಿದ್ದಾರೆ. ನಂತರ ಅವರ ಅಲ್ಲಿಂದ ಅರ್ಧದಾರಿಯವರೆಗೆ ನಡೆದುಕೊಂಡು ಹೋಗಿದ್ದಾರೆ. ಇನ್ನು ಅರ್ಧದಾರಿಯಲ್ಲಿ ಕುದುರೆಯನೇರಿ ಹೋಗಿದ್ದಾರೆ.

    ಬಾಹುಬಲಿ ಸಿರೀಸ್ ಚಿತ್ರದ ಬಳಿಕ ಅನುಷ್ಕಾ ಅವರು, ಜಿ. ಅಶೋಕ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿರುವ ಭಾಗಮತಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯ ಚಿತ್ರವಾಗಿದ್ದು, ಥ್ರಿಲ್ಲರ್ ಹಾರರ್ ಹೂರಣವಿದೆ. ವಂಶಿ ಕೃಷ್ಣರೆಡ್ಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಅನುಷ್ಕಾ ವಿಭಿನ್ನ ಶೇಡ್‍ಗಳಲ್ಲಿ ಕಂಗೊಳಿಸಿದ್ದಾರೆ.

  • ಬಿಜೆಪಿ ಸಂಸದ ಪೋಖ್ರಿಯಾಲ್ ಮಗಳು ಈಗ ಸೇನೆಯಲ್ಲಿ ವೈದ್ಯೆ!

    ಬಿಜೆಪಿ ಸಂಸದ ಪೋಖ್ರಿಯಾಲ್ ಮಗಳು ಈಗ ಸೇನೆಯಲ್ಲಿ ವೈದ್ಯೆ!

    ಡೆಹ್ರಾಡೂನ್: ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ರಮೇಶ್ ಪೋಖ್ರಿಯಾಲ್ ಸೇನಾ ಸಮವಸ್ತ್ರದಲ್ಲಿರುವ ತಮ್ಮ ಮಗಳ ಜೊತೆಗಿನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೇನೆಯನ್ನು ಸೇರುವ ಮೂಲಕ ನನ್ನ ಮಗಳು ಡಾ ಶ್ರೇಯಾಸಿ ನಿಶಾಂಕ್ ಉತ್ತರಾಖಂಡ್ ಸಂಸ್ಕೃತಿಯನ್ನು ಮುಂದುವರೆಸಿದ್ದಾಳೆ ಎಂದು ಹೆಮ್ಮೆಯಿಂದ ಬರೆದು ಮಾರ್ಚ್ 31ರಂದು ಟ್ವೀಟ್ ಮಾಡಿದ್ದರು.

    ಎಂಬಿಬಿಎಸ್ ಶಿಕ್ಷಣವನ್ನು ಹಿಮಾಲಯನ್ ವೈದ್ಯಕೀಯ ಕಾಲೇಜ್ ನಲ್ಲಿ ಮುಗಿಸಿದ್ದಾಳೆ. ದೇಶ ಸೇವೆಗಾಗಿ ಸೇನೆ ಸೇರುವ ನಿರ್ಧಾರ ಮಾಡಿರುವುದು ಸಂತೋಷ ತಂದಿದೆ. ಡಾ ಶ್ರೇಯಾಸಿ ರೂರ್ಕಿ ಸೇನಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾಳೆ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮ ಎಂದು ಅವರು ಬರೆದುಕೊಂಡು ಮಗಳನ್ನು ಅಭಿನಂದಿಸಿದ್ದರು.

    ಕೇದಾರನಾಥ್ ಚಾರಣದ ವೇಳೆ ಸೇವೆಗೆ ಸೇರುವಂತೆ ಮಗಳಿಗೆ ತಂದೆ ಪೋಖ್ರಿಯಾಲ್ ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಮಗಳ ಸಾಧನೆಗೆ ಮಾಜಿ ಸೇನಾ ಮುಖ್ಯಸ್ಥ, ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವ ಜನರಲ್ ವಿಕೆ ಸಿಂಗ್ ಶುಭಾಶಯ ತಿಳಿಸಿದ್ದಾರೆ.

  • ಲಕ್ಷಾಂತರ ರೂ. ಸಂಬಳ ನೀಡುತ್ತಿದ್ದ ಅಮೆರಿಕ ಕಂಪನಿಯ ಕೆಲಸ ಬಿಟ್ಟು ಸೇನೆಗೆ ಸೇರಿದ ಟೆಕ್ಕಿ

    ಲಕ್ಷಾಂತರ ರೂ. ಸಂಬಳ ನೀಡುತ್ತಿದ್ದ ಅಮೆರಿಕ ಕಂಪನಿಯ ಕೆಲಸ ಬಿಟ್ಟು ಸೇನೆಗೆ ಸೇರಿದ ಟೆಕ್ಕಿ

    ಡೆಹ್ರಾಡೂನ್: ತನ್ನ ಮನಸ್ಸಿನ ಮಾತು ಕೇಳಿ, ದೇಶ ಸೇವೆ ಮಾಡಲು ಅಮೆರಿಕ ಕಂಪನಿ ನೀಡಿದ ಕೆಲಸ ತೊರೆದು ಯುವಕನೊಬ್ಬ ಭಾರತೀಯ ಸೈನ್ಯವನ್ನು ಸೇರಿದ್ದಾರೆ.

    ಬರ್ನಾನ ಯಾದಗಿರಿ ಎಂಬವರೇ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇರಿರುವ ಯುವಕನಾಗಿದ್ದು, ಶನಿವಾರ ಡೆಹ್ರಾಡೂನ್‍ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ ತರಬೇತಿ ಪೂರ್ಣಗೊಳಿಸಿ ಸೇನೆಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

    ಬರ್ನಾನ ಯಾದಗಿರಿ ಅವರ ತಂದೆ ಬರ್ನಾನ ಗುನ್ನಯ್ಯ ಹಲವು ವರ್ಷಗಳಿಂದ ಹೈದರಾಬಾದ್‍ನ ಸಿಮೆಂಟ್ ಕಾರ್ಖಾನೆಯಲ್ಲಿ 100 ರೂ. ಪಡೆದು ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಡೆಹ್ರಾಡೂನ್ ನಲ್ಲಿ ಶನಿವಾರ ನಡೆದ ಪರೇಡ್ ನಂತರ ಮಾತನಾಡಿದ ಬರ್ನಾನ್ ತನ್ನ ತಂದೆ ತುಂಬ ಸರಳ ವ್ಯಕ್ತಿಯಾಗಿದ್ದು, ನಾನು ಮಿಲಿಟರಿಯಲ್ಲಿ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿರುವುದಾಗಿ ತಿಳಿದಿದ್ದಾರೆ. ಆದರೆ ಮಿಲಿಟರಿ ಅಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಆದರೆ ನಮ್ಮ ಪೋಷಕರು ಉತ್ತಮ ಸಂಬಳ ದೊರೆಯುವ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಸೈನ್ಯಕ್ಕೆ ಸೇರಿ ತಪ್ಪು ಮಾಡುತ್ತಿದ್ದೀಯಾ ಎಂದು ಎಚ್ಚರಿಸಿದರು. ಆದರೆ ನಾನು ಇಷ್ಟಪಟ್ಟಿದ್ದರೆ ಕಾರ್ಪೋರೆಟ್ ಸಂಸ್ಥೆಯಲ್ಲಿ ಕೆಲಸ ಪಡೆದು ಉತ್ತಮ ಸಂಬಳ ಪಡೆಯಬಹುದಿತ್ತು. ಆದರೆ ನನಗೆ ಸೈನ್ಯದಲ್ಲಿ ಸೇರಿ ಸೇವೆ ಮಾಡಬೇಕೆಂಬ ಕನಸು ಕಂಡಿದ್ದೆ ಅದನ್ನು ಸಾಧಿಸಿದ್ದೇನೆ. ಸೈನ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ನನ್ನ ಕರ್ತವ್ಯಗಳನ್ನು ಪಾಲಿಸುತ್ತೇನೆ ಎಂದರು.

    ಅಂದಹಾಗೇ, ಬರ್ನಾನ ಯಾದಗಿರಿ ಬಾಲ್ಯದಿಂದಲೂ ಕಡು ಬಡತನದಲ್ಲಿ ಬೆಳೆದ ಯುವಕ, ವಿದ್ಯಾಬ್ಯಾಸ ಸಮಯದಲ್ಲಿ ಸರ್ಕಾರ ನೀಡುವ ಪ್ರೋತ್ಸಹ ಹಣದಲ್ಲೇ ಪದವಿ ಪಡೆದವರು. ಅದರೂ ದೇಶ ಸೇವೆ ಮಾಡಬೇಕೆಂಬ ಕನಸಿನಿಂದ ಇಂಜಿನಿಯರ್ ಪದವಿ ಪಡೆದು, ಕ್ಯಾಟ್ (ಸಿಎಟಿ) ಪರೀಕ್ಷೆಯಲ್ಲಿ ಶೇ.93.4 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೇ ಅಮೆರಿಕದ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನೀಡಿದ ಉದ್ಯೋಗವನ್ನು ನಿರಾಕರಿಸಿದ್ದಾರೆ. ಇಂದೋರ್ ನ ಐಐಎಂ ಸಂಸ್ಥೆಯು ಇವರಿಗೆ ಉದ್ಯೋಗ ನೀಡಿತ್ತು.

    ತಮ್ಮ ಮಗ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸೈನ್ಯದ ಸಮವಸ್ತ್ರ ಧರಿಸಿದನ್ನು ಕಂಡು ತಂದೆ ಬರ್ನಾನ ಗುನ್ನಯ್ಯ ಅವರ ಕಣ್ಣುಗಳು ಸಂತೋಷ ತುಂಬಿ ಬಂದಿತ್ತು.

     

  • ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ- ದೆಹಲಿಯಲ್ಲಿ ಕಂಪನದ ಅನುಭವ

    ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ- ದೆಹಲಿಯಲ್ಲಿ ಕಂಪನದ ಅನುಭವ

    ನವದೆಹಲಿ: ಉತ್ತರಾಖಂಡ್‍ನಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ಬುಧವಾರದಂದು ದೆಹಲಿ ಹಾಗೂ ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ.

    ಉತ್ತರಾಖಂಡ್‍ನ ಪೂರ್ವ ಡೆಹ್ರಾಡೂನ್ ನಿಂದ 121 ಕಿ.ಮೀ ದೂರದ ರುದ್ರಪ್ರಯಾಗದಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ರಾತ್ರಿ 8:49 ರ ಸಮಯದಲ್ಲಿ 30 ಕಿ.ಮೀ ಭೂ ಆಳದಲ್ಲಿ ಭೂಕಂಪನ ಸಂಭವಿಸಿದೆ.

    ಕಳೆದ 24 ಗಂಟೆಯ ಅವಧಿಯಲ್ಲಿ ಉತ್ತರಾಖಂಡ್‍ನಲ್ಲಿ ಎರಡನೇ ಬಾರಿಗೆ ಭೂಕಂಪನವಾಗಿದೆ. ಮಂಗಳವಾರ 3.3 ತೀವ್ರತೆಯ ಭೂಕಂಪನ ಸಂಭವಿಸಿದ ಕುರಿತು ವರದಿಯಾಗಿತ್ತು. ಉತ್ತರಾಖಂಡ್‍ನ ರೂರ್ಕಿ, ಡೆಹ್ರಾಡೂನ್ ಜೊತೆಗೆ ಉತ್ತರ ಪ್ರದೇಶ ಹಾಗೂ ಹರಿಯಾಣದ ಕೆಲವು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ನಂತರ ಡೆಹ್ರಾಡೂನ್ ನಲ್ಲಿ ಹಲವು ಜನರು ತಮ್ಮ ಮನೆ ಹಾಗೂ ಕಟ್ಟಡಗಳಿಂದ ಹೊರಗೆ ಓಡಿಬಂದಿದ್ದಾರೆಂದು ವರದಿಯಾಗಿದೆ.

    ಭೂ ಕಂಪನದಿಂದ ಹಾನಿಯಾಗಿರುವ ಕುರಿತು ಯಾವುದೇ ವರದಿ ಬಂದಿಲ್ಲ. ಭೂಕಂಪನ ಅನುಭವವಾದ ಕೆಲವೇ ಕ್ಷಣಗಳಲ್ಲಿ ಹಲವರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

  • ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಂಗಾ ನದಿ ಸ್ಪಚ್ಛತೆಯ ವರದಿ ಕೇಳಿದ ಎನ್‍ಜಿಟಿ

    ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಂಗಾ ನದಿ ಸ್ಪಚ್ಛತೆಯ ವರದಿ ಕೇಳಿದ ಎನ್‍ಜಿಟಿ

    ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಹಾಗೂ ಉತ್ತರ ಪ್ರದೇಶ ಯೋಗಿ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು ಗಂಗಾ ನದಿ ಸ್ಪಚ್ಛತೆಯನ್ನು ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಕೇಳಿದೆ.

    ಈ ಹಿಂದೆ ಎನ್‍ಜಿಟಿ ಕೇಂದ್ರಕ್ಕೆ ಗಂಗಾ ನದಿಯ ಗೋಮುಖ ದಿಂದ ಉನ್ನೋ ಪ್ರದೇಶದ ಸ್ಪಚ್ಛತ ಕಾರ್ಯವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿತ್ತು. ಗಂಗಾ ನದಿಯ ಹರಿಯುವ ಪ್ರದೇಶದ ಸುತ್ತಲಿನ 100 ಮೀ ಅಂತರವನ್ನು ಹಸಿರು ಪೀಠವು `ನೋ ಡೆವಲಪ್‍ಮೆಂಟ್ ಜೋನ್’ ಎಂದು ಘೋಷಣೆ ಮಾಡಿತ್ತು. ಅಲ್ಲದೇ ನದಿಯ ದಡಗಳಲ್ಲಿ 500 ಮೀ ಒಳಗೆ ಯಾವುದೇ ರೀತಿಯ ಕಸವನ್ನು ಎಸೆದಂತೆ ಸೂಚನೆಯನ್ನು ನೀಡಿತ್ತು.

    ಎನ್‍ಜಿಟಿಯ ನ್ಯಾಯಪೀಠದ ಅಧ್ಯಕ್ಷ ನ್ಯಾ. ಸ್ವತಂತರ್ ಕುಮಾರ್ ಗಂಗಾ ನದಿಯ ಉತ್ತರ ಪ್ರದೇಶದಿಂದ ಕಾನ್ಪುರ ವರೆಗಿನ ಫೇಸ್-2 ಸ್ಪಚ್ಛತಾ ಯೋಜನೆ ಆರಂಭಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿವಂತೆ ತಿಳಿಸಿದ್ದಾರೆ.

    ಗಂಗಾ ನದಿ ಸ್ಪಚ್ಛತೆಯ ಕುರಿತು ನ್ಯಾಯಧೀಕರಣ ನೀಡಿರುವ ಸೂಚನೆಗಳ ಮೇಲೆ ಆರಂಭಿಸಲಾಗಿರುವ ಯೋಜನೆಗಳು ಪೂರ್ಣಗೊಂಡಿಲ್ಲ. ಈ ಕುರಿತ ವರದಿಗಳನ್ನು ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನೀಡಬೇಕು ಎಂದು ನ್ಯಾಯ ಪೀಠ ಸೂಚಿಸಿದೆ.

    ಅಲ್ಲದೇ ನ್ಯಾಯಧಿಕರಣದ ನೀಡಿರುವ ನಿರ್ದೇಶಗಳ ಪ್ರತಿಯನ್ನು ಕೇಂದ್ರದ ಗಂಗಾ ನದಿಯ ಸ್ಪಚ್ಛತಾ ಸಮಿತಿಯ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಸಚಿವಾಲಯ ಹಾಗೂ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಇಲಾಖೆಗೆ ಈ ನಿರ್ದೇಶನಗಳನ್ನು ಕಳುಹಿಸಿಕೊಡಬೇಕು ಎಂದು ಪೀಠವು ಆದೇಶಿಸಿದೆ.

    ಅಕ್ಟೋಬರ್ 24 ರಂದು ಗಂಗಾ ನದಿ ಸ್ಪಚ್ಛತೆಯ ಕುರಿತು ನಡೆಯುವ ಮುಂದಿನ ವಿಚಾರಣೆಯ ಒಳಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದೆ.

    ನ್ಯಾಯ ಪೀಠವು ಈ ಹಿಂದೆ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಸರ್ಕಾರವು ಸುಮಾರು 7 ಸಾವಿರ ಕೋಟಿ ರೂ.ಗಳನ್ನು ಎರಡು ವರ್ಷಗಲ್ಲಿ ಗಂಗಾ ನದಿಯ ಸ್ಪಚ್ಚತೆಗೆ ಖರ್ಚು ಮಾಡಿದ್ದಾಗಿ ಮಾಹಿತಿಯನ್ನು ನೀಡಿತ್ತು. ಆದರೆ ಇಂದಿಗೂ ಗಂಗಾ ನದಿಯ ದಡಗಳಲ್ಲಿ ಸ್ವಚ್ಛತೆ ಕಾಣುತ್ತಿಲ್ಲ.

    ನ್ಯಾಯ ಪೀಠವು ನೀಡುವ 543 ಪುಟಗಳ ಆದೇಶ ಪ್ರತಿಯಲ್ಲಿ ಉತ್ತರ ಪ್ರದೇಶದ ಹರಿದ್ವಾರ ದಿಂದ ಉನ್ನೋ ಪ್ರದೇಶದ ನದಿ ದಡಗಳ 100 ಮೀ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ನಿರ್ಮಿಸದಂತೆ ನಿರ್ಬಂಧವನ್ನು ವಿಧಿಸಿದೆ. ಅಲ್ಲದೆ ನದಿಗೆ ಯಾವುದೇ ರೀತಿಯ ಕಟ್ಟಡ ತ್ಯಾಜ್ಯ, ಇ-ತ್ಯಾಜ್ಯ ಅಥವಾ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ತಂದು ಸುರಿಯದಂತೆ ಸೂಚನೆಯನ್ನು ನೀಡಿದೆ.

    ಗಂಗಾ ನದಿಯಲ್ಲಿ ಯಂತ್ರಗಳ ಸಹಾಯ ಮಾಡುವ ಗಣಿಗಾರಿಕೆಯನ್ನು ನಿಷೇಧಿಸಿ ಆದೇಶವನ್ನು ನೀಡಿತ್ತು.