Tag: Uttarakhand

  • ಮಗನನ್ನು ಅಂಗನವಾಡಿಗೆ ಸೇರಿಸುವ ಮೂಲಕ ಮಾದರಿಯಾದ ಜಿಲ್ಲಾಧಿಕಾರಿ

    ಮಗನನ್ನು ಅಂಗನವಾಡಿಗೆ ಸೇರಿಸುವ ಮೂಲಕ ಮಾದರಿಯಾದ ಜಿಲ್ಲಾಧಿಕಾರಿ

    ಡೆಹ್ರಾಡೂನ್: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ ಭಡೌರಿಯಾ ತನ್ನ ಮಗನನ್ನು ಗೋಪೇಶ್ವರ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸೇರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ ಭಡೌರಿಯಾರವರು ತಮ್ಮ ಎರಡೂವರೆ ವರ್ಷದ ಮಗ ಅಭ್ಯುದಯ್ ನನ್ನು ಅಂಗನವಾಡಿ ಶಾಲೆಗೆ ದಾಖಲಿಸಿದ್ದಾರೆ. ಅಲ್ಲದೇ ಉನ್ನತ ಹುದ್ದೆಯಲ್ಲಿಯರುವವರು, ತಮ್ಮ ಮಕ್ಕಳನ್ನು ಎಂದಿಗೂ ಹೈ-ಫೈ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ ಸಂಗತಿ. ಆದರೆ ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಅದಕ್ಕೆ ಅಪವಾದವೆಂಬಂತೆ ನಡೆದುಕೊಂಡಿದ್ದಾರೆ. ಖುದ್ದು ತನ್ನ ಮಗನನ್ನು ಸರ್ಕಾರಿ ಅಂಗನಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸವನ್ನು ಸರಿಯಾಗಿ ಕೊಡುತ್ತಿಲ್ಲ ಎನ್ನುವ ಆರೋಪವನ್ನು ತೆಗೆದು ಹಾಕಲು ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ, ಆಟ ಹಾಗೂ ಊಟ-ಉಪಚಾರಗಳು ಒಂದೇ ರೀತಿ ಇರುತ್ತದೆ. ಅಂಗನವಾಡಿಗಳ ಕುರಿತು ತಪ್ಪು ಕಲ್ಪನೆ ಬೆಳೆಸಿಕೊಳ್ಳುವುದು ಸರಿಯಲ್ಲ ಎಂದರು.

    ಅಂಗನವಾಡಿ ಕೇಂದ್ರದಲ್ಲಿ ತಮ್ಮ ಮಗ ಇತರರೊಂದಿಗೆ ಹಂಚಿ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಇತರ ಮಕ್ಕಳ ಜೊತೆ ತುಂಬಾ ಚೆನ್ನಾಗಿ ಆಟವಾಡುತ್ತಿದ್ದಾನೆ. ಈ ಕೇಂದ್ರಗಳಲ್ಲಿ ಮಕ್ಕಳು ಬೌದ್ಧಿಕವಾಗಿ ಹೆಚ್ಚು ಕಲಿಯುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ. ದೈಹಿಕ ಮತ್ತು ಮಾನಸಿಕವಾಗಿಯೂ ಸದೃಢರಾಗುತ್ತಾರೆ. ಅಂಗನವಾಡಿ ಕೇಂದ್ರಗಳನ್ನು ನೋಡುವ ರೀತಿ ಬದಲಾಗಬೇಕು ಎಂದು ಹೇಳಿದ್ದಾರೆ.

    ಸ್ವಾತಿ ಭಡೌರಿಯಾರ ಪತಿ ಕೂಡ ಐಎಎಸ್ ಅಧಿಕಾರಿಯಾಗಿದ್ದು, ಅವರು ಸಹ ಉತ್ತರಾಖಂಡ್‍ನ ಅಲ್ಮೋರಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳ ಮೇಲಿರುವ ಅಪನಂಬಿಕೆಯನ್ನು ಜನರಿಂದ ಹೋಗಲಾಡಿಸಬೇಕು. ಹೀಗಾಗಿ ಮಗನನ್ನು ಅಂಗನವಾಡಿಗೆ ಸೇರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ಓವರ್, 10 ರನ್, 8 ವಿಕೆಟ್ – ಜಾರ್ಖಂಡ್ ಬೌಲರ್ ಶಹಬಾಜ್ ನದೀಮ್ ವಿಶ್ವ ದಾಖಲೆ

    10 ಓವರ್, 10 ರನ್, 8 ವಿಕೆಟ್ – ಜಾರ್ಖಂಡ್ ಬೌಲರ್ ಶಹಬಾಜ್ ನದೀಮ್ ವಿಶ್ವ ದಾಖಲೆ

    ಚೆನ್ನೈ: ವಿಜಯ್ ಹಜಾರೆ ಟ್ರೋಫಿಯ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಜಾರ್ಖಂಡ್ ಬೌಲರ್ ಶಹಬಾಜ್ ನದೀಮ್ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಮಾಡಿ 10 ಓವರ್ ಎಸೆದು ಕೇವಲ 10 ರನ್ ನೀಡಿ 8 ವಿಕೆಟ್ ಪಡೆದು  ಲಿಸ್ಟ್ ಎ  ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಎಡಗೈ ಸ್ಪಿನ್ನರ್ ಆಗಿರುವ ಶಹಬಾಜ್ ರಾಜಸ್ಥಾನದ ಎದುರು ನಡೆಯುತ್ತಿರುವ ವಿಜಯ್ ಹಾಜರೆ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ತನ್ನ 10 ಓವರ್ ಗಳ ಕೋಟಾದಲ್ಲಿ 4 ಓವರ್ ಮೆಡಿನ್ ಕೂಡ ಮಾಡಿದ್ದಾರೆ. ಈ ಪಂದ್ಯದಲ್ಲಿ ರಾಜಸ್ಥಾನ 28.3 ಓವರ್ ಗಳಲ್ಲಿ ಕೇವಲ 73 ರನ್‍ಗಳಿಗೆ ಅಲೌಟ್ ಆಗಿದೆ.

    ಈ ಹಿಂದೆ ದೆಹಲಿ ಆಟಗಾರ ರಾಹುಲ್ ಸಂಘವಿ 1997-98ರಲ್ಲಿ ನಡೆದ ದೇಶಿಯ ಟೂರ್ನಿಯೊಂದರ ಪಂದ್ಯದ ವೇಳೆ ಹಿಮಾಚಲಪ್ರದೇಶದ ವಿರುದ್ಧ 15 ರನ್‍ಗೆ 8 ವಿಕೆಟ್ ಪಡೆದಿದ್ದರು. ಸದ್ಯ ಶಹಬಾಜ್ 8 ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು,

    ಮೈಕಲ್ ಹೋಲ್ಡಿಂಗ್, ಡೆರೆಕ್ ಅಂಡರ್ ವುಡ್ ರಂತಹ ಆಟಗಾರರು ಈ ಹಿಂದೆ 8 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಉಳಿದಂತೆ 2001ರಲ್ಲಿ ಜಿಂಬಾಂಬ್ವೆ ವಿರುದ್ಧ ನಡೆದ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಲಂಕಾ ಆಟಗಾರರ ಚಮಿಂಡಾ ವಾಸ್ 8 ವಿಕೆಟ್ ಪಡೆದ ದಾಖಲೆ ಮಾಡಿದ್ದಾರೆ.

    29 ವರ್ಷದ ಶಹಬಾಜ್ 99 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 29.74 ಸರಾಸರಿಯಲ್ಲಿ 375 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಲಿಸ್ಟ್ ಎ ಮಾದರಿಯಲ್ಲಿ 87 ಪಂದ್ಯಗಳಿಂದ 124 ವಿಕೆಟ್ ಹಾಗೂ ಟಿ20 ಮಾದರಿಯಲ್ಲಿ 109 ಪಂದ್ಯಗಳಿಂದ 89 ವಿಕೆಟ್ ಪಡೆದಿದ್ದಾರೆ.

    ಟೀಂ ಇಂಡಿಯಾ ಎ ತಂಡ ಇಂಗ್ಲೆಂಡ್ ಎ ಹಾಗೂ ಆಸೀಸ್ ಎ ತಂಡದ ವಿರುದ್ಧ ಕೈಗೊಂಡಿದ್ದ ಪ್ರವಾಸದಲ್ಲೂ ಶಹಬಾಜ್ ಸ್ಥಾನ ಪಡೆದಿದ್ದರು. ಸದ್ಯ ಶಹಬಾಜ್ ಟೀಂ ಇಂಡಿಯಾಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಮಹಿಳಾ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಶಾಸಕ- ವಿಡಿಯೋ ವೈರಲ್

    ಡೆಹ್ರಾಡೂನ್: ಉತ್ತರಾಖಂಡ್‍ದ ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್‍ಇನ್ಸ್‌ಪೆಕ್ಟರ್ ಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರುದ್ರಪುರ್ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಅವರ ಇಬ್ಬರು ಸಹಚರರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಅವರನ್ನು ರುದ್ರಪುರ್ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಬಂದ ಶಾಸಕರು ಸಬ್‍ಇನ್ಸ್‌ಪೆಕ್ಟರ್ ಅನಿತಾ ಗೈರೊಲಾ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.

    ಬಂಧನಕ್ಕೆ ಕಾರಣ ತಿಳಿಸುತ್ತಿದ್ದರೂ ಕೇಳದ ಶಾಸಕ, ಅನಿತಾ ಗೈರೊಲಾ ಅವರ ಮೇಲೆ ಹರಿಹಾಯ್ದು, ಬೆದರಿಕೆ ಒಡ್ಡಿದ್ದಾರೆ. ಬಳಿಕ ಹಿಂಬಾಲಕರು ಹೇಳಿದ್ದರಿಂದ ಮತ್ತೇ ಠಾಣೆ ಬಾಗಿಲ ಬಳಿ ನಿಂತು, ಬಂಧಿತರನ್ನು ಬಿಡುವಂತೆ ಒತ್ತಾಯಿಸಿದ್ದಾರೆ.

    ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.

    ಇದೇ ಮೊದಲಲ್ಲ, ಈ ಹಿಂದೆಯೂ ಯುವಕನೊಬ್ಬ ಪರಿಶಿಷ್ಟ ಜಾತಿಯ ಯುವತಿಯ ಜೊತೆಗೆ ಓಡಿ ಹೋಗಿದ್ದನು. ಹೀಗಾಗಿ ಯುವತಿಯ ಕುಟುಂಬದ ಮೂರು ಜನ ಮಹಿಳೆಯರ ಮೇಲೆ ಶಾಸಕರು ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯ ತಾಯಿ ಸೇರಿದಂತೆ ಇಬ್ಬರು ಸಹೋದರಿಯರನ್ನು ಥಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯಾದ್ಯಂತ ಮುಂದುವರಿದ ವರುಣನ ಅಬ್ಬರ – ಇನ್ನೂ ಎರಡ್ಮೂರು ದಿನ ಭಾರೀ ಮಳೆ

    ರಾಜ್ಯಾದ್ಯಂತ ಮುಂದುವರಿದ ವರುಣನ ಅಬ್ಬರ – ಇನ್ನೂ ಎರಡ್ಮೂರು ದಿನ ಭಾರೀ ಮಳೆ

    – ಕೇರಳ, ಉತ್ತರಾಖಂಡ್‍ನಲ್ಲಿ ರೆಡ್ ಅಲರ್ಟ್

    ಬೆಂಗಳೂರು: ಮೈಸೂರು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಕಮ್ಮಿಯಾಗೋ ಯಾವುದೇ ಲಕ್ಷಣ ಕಾಣ್ತಿಲ್ಲ. ಕಾರಣ ಕಬಿನಿ ನದಿಯ ಭೋರ್ಗರತೆ ಇನ್ನೂ ಜೋರಾಗಿಯೇ ಇದೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ. ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ. ಇತ್ತ ನಂಜನಗೂಡಿನ ದೇಗುಲದ ಸನಿಹದವರೆಗೂ ನೀರು ಬಂದು ನಿಂತಿದೆ.


    ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಕುಮಾರಾಧಾರಾ ನದಿ ಉಕ್ಕಿ ಹರಿಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ – ಪಂಜ ರಾಜ್ಯ ಹೆದ್ದಾರಿಯ ಸಂಪರ್ಕ ಕಡಿತಗೊಂಡಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಆ.17ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಿ ಮಾಡಿ ಡಿಡಿಪಿಐ ಮಚಾಡೋ ಆದೇಶ ಹೊರಡಿಸಿದ್ದಾರೆ.


    ಹಾರಂಗಿ ಜಲಾನಯನ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಜಲಾಶಯದಿಂದ ಕ್ರೆಸ್ಟ್ ಗೇಟ್‍ಗಳ ಮೂಲಕ 35 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುವುದು. ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ನಿವಾಸಿಗಳು ಎಚ್ಚರದಿಂದವಂತೆ ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದಾರೆ. ಮಲೆನಾಡಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಚಿಕ್ಕಮಗಳೂರು-ಶೃಂಗೇರಿ ರಸ್ತೆ ಸಂಚಾರ್ ಬಂದ್ ಆಗಿರುವ ಘಟನೆ ಆಲ್ದೂರು ತಾಲೂಕಿನ ಆರೆನೂರು ಗ್ರಾಮದಲ್ಲಿ ನಡೆದಿದೆ. ಬಳಿಕ ಸ್ಥಳೀಯರು ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವು ಮಾಡಿದ್ರು. ಇತ್ತ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ, ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ.


    ಹಾಸನ ಜಿಲ್ಲೆಯ ವಿವಿಧೆಡೆ ಮಳೆ ಹಿನ್ನೆಲೆ, ಸಕಲೇಶಪುರ-ಆಲೂರು-ಬೇಲೂರು ತಾಲೂಕಿನ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅವಕಾಶ ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಅಂತ ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮಣ್ಣಶೆಟ್ಟಿ ಸೂಚನೆ ನೀಡಿದ್ದಾರೆ. ಇನ್ನು ಮುಂದಿನ ಶೈಕ್ಷಣಿಕ ದಿನಗಳಲ್ಲಿ ಈ ರಜೆಗಳ ಬೋಧನಾ ಅವಧಿಯನ್ನು ಸರಿದೂಗಿಸುವ ಷರತ್ತು ಮೇರೆಗೆ ಈ ಕುರಿತು ಕ್ರಮ ವಹಿಸಿ ಅಂತ ಸೂಚನೆ ನೀಡಿದ್ದಾರೆ. ಕೊಡಗು ಜಿಲ್ಲೆಯಾಧ್ಯಂತ ಭಾರಿ ಗಾಳಿ ಮಳೆಯಿಂದಾಗಿ ಅಕ್ಷರಶಃ ಜನರು ನಲುಗಿ ಹೋಗಿದ್ದಾರೆ. ಜಿಲ್ಲೆಯ ಸೋಮವಾರಪೇಟೆ ವಿರಾಜಪೇಟೆ ತಾಲೂಕಿನ ಭಾಗಗಳಲ್ಲಿಯೂ ಭಾರಿ ಮಳೆಯಾಗಿದ್ದು, ಹಲವು ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿವೆ. ಭಾರಿ ಗಾಳಿಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದನ್ನೂ ಓದಿ: ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ


    ಕರ್ನಾಟಕ, ಕೇರಳ, ಆಂಧ್ರ ಸೇರಿ ಉತ್ತರದ ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಅಸ್ಸಾಂ, ಒಡಿಶಾದಲ್ಲಿ ಮಳೆ ರೌದ್ರಾವತಾರ ತೋರಿಸಿದೆ. ಇನ್ನೂ ಎರಡ್ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತ್ತರಾಖಂಡ್ ಮತ್ತು ಕೇರಳದಲ್ಲಿ ಮರಣಮಳೆಯಿಂದಾಗಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಕೇರಳದಲ್ಲಿ ಇದೂವರೆಗೆ 37 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕೇರಳದ ಸ್ಥಿತಿ ಭಯಾನಕವಾಗಿದ್ದು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಭೂಕುಸಿತಗಳು ಸಂಭವಿಸುತ್ತಲೇ ಇವೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಯೋಧರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಇಡುಕ್ಕಿ ಡ್ಯಾಂನಿಂದ ನೀರು ಬಿಟ್ಟಿರೋ ಕಾರಣ ಚೆರಂತೋನಿ ಸಮೀಪ ರಸ್ತೆಗೆನೀರು ನುಗ್ಗಿದ್ದು, ಯೋಧರೊಬ್ಬರು ಮಗವನ್ನು ಹೊತ್ತು ಓಡುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.


    ಉತ್ತರಾಖಂಡ್‍ನಲ್ಲೂ ಸಹ ಭಾರೀ ಮಳೆ ಆಗ್ತಿದೆ. ಗುಡ್ಡಗಳು ನೋಡನೋಡುತ್ತಲೇ ಕುಸಿಯುತ್ತಿವೆ. ಮನೆಗಳು ಧರೆಗೆ ಉರುಳುತ್ತಿವೆ. ಕಾರೊಂದು ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಿಹಾರದಲ್ಲಿ ಸಹ ಮಳೆ ಅಬ್ಬರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಈಜುತ್ತಲೇ ಶಾಲೆಯಿಂದ ಮರಳಿದ್ದಾರೆ. ನಿರಂತರ ಮಳೆಗೆ ಒಡಿಶಾದ ಭುವನೇಶ್ವರದ ರಸ್ತೆಗಳು ಜಲಾವೃತವಾಗಿದೆ. ನೂರಾರು ವಾಹನಗಳು ನೀರಲ್ಲಿ ಮುಳುಗಿವೆ. ಇತ್ತ ತೆಲಂಗಾಣದಲ್ಲೂ ಮಳೆಯಬ್ಬರವಿದ್ದು, ನಗರಂ ಅನ್ನೋ ಹಳ್ಳಿಯಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಅಂಬ್ಯುಲೆನ್ಸ್ ಬಳಿಗೆ ಎತ್ಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಯ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    ಹರಿದ್ವಾರ: ಉತ್ತರಾಖಂಡ ಪ್ರಸಿದ್ಧ ಕನ್ವರ ಯಾತ್ರೆ ಆರಂಭವಾಗಿದ್ದು, ಪ್ರತಿ ಬಾರಿ ಯಾತ್ರೆಯಲ್ಲಿ ಕೇಂದ್ರ ಬಿಂದುವಾಗುವ ಗೋಲ್ಡನ್ ಬಾಬಾ ಈ ಬಾರಿಯೂ ತಾವು ಧರಿಸುವ ಚಿನ್ನಾಭರಣದಿಂದ ಎಲ್ಲರ ಗಮನ ಸೆಳೆದಿದ್ದಾರೆ.

    56 ವರ್ಷದ ಗೋಲ್ಡನ್ ಬಾಬಾ ಖ್ಯಾತಿಯ ಪುರಿ ಮಹಾರಾಜ್ ಅವರು ಈ ಬಾರಿ ಸುಮಾರು 6 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನಾಭರಣವನ್ನು ಧರಿಸಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಯಾತ್ರೆಯ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದು, ಜನರು ನಾನು ತೆರಳುವ ಎಲ್ಲಾ ಸ್ಥಳಗಳಿಗೆ ಆಗಮಿಸುತ್ತಾರೆ. ಯಾತ್ರೆ ವೇಳೆ ಪೊಲೀಸರು ನನಗೆ ರಕ್ಷಣೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಕಾರು ಹಾಗೂ ಚಿನ್ನದ ಮೇಲಿನ ಆಕರ್ಷಣೆ ನಾನು ಮೃತ ಪಡುವವರೆಗೂ ಹೋಗುವುದಿಲ್ಲ. ಅಲ್ಲದೇ ನಾನು 25 ಬಾರಿ ಕನ್ವರ್ ಯಾತ್ರೆ ಮಾಡುತ್ತಿದ್ದು, ಇದು ಕೊನೆಯ ಯಾತ್ರೆಯಾಗಿದೆ. ಈ ಯಾತ್ರೆಯ ಅವಧಿಯಲ್ಲಿ ಮಾತ್ರ ಚಿನ್ನಾಭರಣಗಳನ್ನು ಧರಿಸುತ್ತೇನೆ. ಹೆಚ್ಚಿನ ತೂಕದ ಅಭರಣ ಧರಿಸುವುದರಿಂದ ನನ್ನ ದೇಹದ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದ್ದಾರೆ.

    ಅಂದಹಾಗೇ ಪುರಿ ಮಹಾರಾಜ್ ಬಾಬಾ ಆಗುವ ಮುನ್ನ ದೆಹಲಿಯಲ್ಲಿ ಉದ್ಯಮಿಯಾಗಿದ್ದು, ಬಳಿಕ ಬಾಬಾ ಆಗಿ ಪರಿವರ್ತನೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಪುರಿ ಮಹಾರಾಜ್ 25 ಬಾರಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಅವರೊಂದಿಗೆ ಭಾಗವಹಿಸುವ ಇತರೇ ಮಂದಿಗೆ 1.25 ಕೋಟಿ ರೂ. ಖರ್ಚು ಮಾಡಿದ್ದಾರೆ. ಅವರೊಂದಿಗೆ ಬರುವ 250 ರಿಂದ 300 ಮಂದಿ ಯಾತ್ರಿಗಳ ಊಟ, ವಸತಿ, ಆಹಾರ, ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

    ಕೇವಲ ಚಿನ್ನಾಭರಣಗಳನ್ನ ಮಾತ್ರ ಧರಿಸದೇ ಬಾಬಾ 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಸಹ ಹೊಂದಿದ್ದು, ಸ್ವತಃ ಬಿಎಂಡಬ್ಲೂ, 3 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ಯಾತ್ರೆಯ ವೇಳೆ ಜಾಗ್ವಾರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಸಹ ಪಡೆಯುತ್ತಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • ಪ್ರವಾಹದ ನೀರಿಗೆ ರಸ್ತೆಯಲ್ಲಿದ್ದ 2 ಕಾರು, ರಿಕ್ಷಾ ಕೊಚ್ಚಿ ಹೋಯ್ತು – ವಿಡಿಯೋ

    ಪ್ರವಾಹದ ನೀರಿಗೆ ರಸ್ತೆಯಲ್ಲಿದ್ದ 2 ಕಾರು, ರಿಕ್ಷಾ ಕೊಚ್ಚಿ ಹೋಯ್ತು – ವಿಡಿಯೋ

    ಡೆಹ್ರಾಡೂನ್: ಉತ್ತರಾಖಂಡ್‍ನಲ್ಲಿ ಭಾರೀ ಮಳೆಯಗುತ್ತಿದ್ದು ಪ್ರವಾಹದ ರಭಸಕ್ಕೆ ರಸ್ತೆಯಲ್ಲಿದ್ದ ಎರಡು ಕಾರುಗಳು ಕೊಚ್ಚಿಕೊಂಡು ಹೋಗಿವೆ.

    ಹಲ್ಡ್ ವಾನಿ 2 ಕಾರುಗಳು ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಕಾರಿನಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಕಾರಿನಲ್ಲಿದ್ದ 4 ಪ್ರಯಾಣಿಕರು ಮತ್ತೊಂದು ಕಾರಿನ ಮೇಲೆ ಹತ್ತಿದ್ದಾರೆ.

    ಕೊನೆಯ ವ್ಯಕ್ತಿ ಹತ್ತುತ್ತಿದ್ದಂತೆ ಸ್ಯಾಂಟ್ರೋ ಕಾರು ಕೊಚ್ಚಿ ಹೋಗಿದೆ. ಕೆಲವೇ ಕ್ಷಣದಲ್ಲಿ ಪ್ರಯಾಣಿಕರು ರಕ್ಷಣೆ ಪಡೆಯಲು ಹತ್ತಿದ್ದ ಇನ್ನೊಂದು ಕಾರು ಕೊಚ್ಚಿ ಹೋಗಿದೆ. ಈ ಕಾರು ಕೊಚ್ಚಿ ಹೋಗುವುದರ ಒಳಗಡೆ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿತ್ತು.

    ಎರಡು ಕಾರಿನ ಜೊತೆ ಅಲ್ಲೆ ನಿಂತಿದ್ದ ಆಟೊ ರಿಕ್ಷಾ ಸಹ ಪ್ರವಾಹದ ನೀರಿಗೆ ಕೊಚ್ಚಿ ಹೋಗಿದೆ. ಕೆಲವು ಸೆಕೆಂಡ್ ಗಳಲ್ಲಿ ನಡೆದ ಈ ಎಲ್ಲ ದೃಶ್ಯಗಳನ್ನು ಸಮೀಪದಲ್ಲಿದ್ದ ವ್ಯಕ್ತಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.

  • ನೋಡ ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಹೋದ ಕಾರು: ವಿಡಿಯೋ ನೋಡಿ

    ನೋಡ ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಕೊಚ್ಚಿಹೋದ ಕಾರು: ವಿಡಿಯೋ ನೋಡಿ

    ಡೆಹ್ರಾಡೂನ್: ಹರಿದ್ವಾರದ ಖರ್ ಖರಿ  ಪ್ರದೇಶದಲ್ಲಿ ನೋಡ ನೋಡುತ್ತಿದ್ದಂತೆಯೇ ಪ್ರವಾಹದಲ್ಲಿ ಮಾರುತಿ ಕಾರೊಂದು ಕೊಚ್ಚಿ ಹೋಗಿದೆ.

    ಪ್ರವಾಹದಿಂದಾಗಿ ಹರಿದ್ವಾರದ ಖರ್ ಖರಿ ಪ್ರದೇಶದಲ್ಲಿ ನಿಲ್ಲಿಸಿದ್ದ ಮಾರುತಿ ಕಂಪೆನಿಯ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ. ಪ್ರವಾಹದ ಪ್ರಮಾಣ ತಗ್ಗಿದ ಬಳಿಕ ಸ್ಥಳೀಯರ ಸಹಾಯದಿಂದ ಕಾರನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಕಾರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಉತ್ತರಾಖಂಡ್ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಅಲ್ಲದೇ ಇಂದಿನಿಂದ ಒಂದು ವಾರಗಳ ಕಾಲ ಹರಿದ್ವಾರ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಹರಿದ್ವಾರದ ಬಳಿ ಇರುವ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಸ್ಥಳೀಯರಲ್ಲಿ ಪ್ರವಾಹ ಭೀತಿ ಎದುರಾಗಿದೆ.

    https://www.youtube.com/watch?v=HA44Fmg-tuo

  • 250 ಮೀ ಆಳದ ಪ್ರಪಾತಕ್ಕೆ ಬಿದ್ದ ಬಸ್: 14 ಸಾವು, 18 ಜನರ ಸ್ಥಿತಿ ಗಂಭೀರ

    250 ಮೀ ಆಳದ ಪ್ರಪಾತಕ್ಕೆ ಬಿದ್ದ ಬಸ್: 14 ಸಾವು, 18 ಜನರ ಸ್ಥಿತಿ ಗಂಭೀರ

    ಡೆಹ್ರಾಡೂನ್: 205 ಮೀ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ತೆಹರಿ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರಾಖಂಡದ ಸಾರಿಗೆ ನಿಗಮಕ್ಕೆ ಸೇರಿದ್ದ ಬಸ್ ಇದಾಗಿದ್ದು, ಉತ್ತರ ಕಾಶಿಯಿಂದ ಹರಿದ್ವಾರಕ್ಕೆ ಹೊರಟಿತ್ತು. ದಾರಿ ಮಧ್ಯದಲ್ಲಿ ಜಾರ್ಜ್ ಸಮೀಪದ ಸುಲೀಧರ್ ಪ್ರದೇಶದ ಎತ್ತರ ಪರ್ವತ ಶ್ರೇಣಿಯ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಉರುಳಿ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ 14 ಜನರು ಮೃತಪಟ್ಟರೇ, 16 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ 6 ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.

    ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಧಿಕಾರಿಗಳು ಹಾಗೂ ಎಸ್‌ಡಿಆರ್‌ಎಫ್ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಗಾಯಾಳುಗಳನ್ನು ಹೃಷಿಕೇಶದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಪಘಾತದಲ್ಲಿ ಉತ್ತರಾಖಂಡ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ.

  • 60 ಅಡಿ ಎತ್ತರದಿಂದ ಕಣಿವೆಗೆ ಬಸ್ ಬಿದ್ದು 44 ಮಂದಿ ಸಾವು

    60 ಅಡಿ ಎತ್ತರದಿಂದ ಕಣಿವೆಗೆ ಬಸ್ ಬಿದ್ದು 44 ಮಂದಿ ಸಾವು

    ಡೆಹ್ರಾಡೂನ್: ಇಂದು ಬೆಳಗ್ಗೆ 60 ಅಡಿ ಮೇಲಿನಿಂದ ಬಸ್ಸೊಂದು ಕಣಿವೆಗೆ ಬಿದ್ದ ಪರಿಣಾಮ 44 ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್‍ನ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

    ಈಗಾಗಲೇ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ತಂಡ (ಎನ್‌ಡಿಆರ್‌ಎಫ್) ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಣಿವೆಗೆ ಬಸ್ಸು ಬೀಳಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬಸ್ಸು 60 ಅಡಿ ಮೇಲಿನಿಂದ ಬಿದ್ದಾಗಲೇ ಬಹಳಷ್ಟು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗರ್ವಾಲ್ ಪೊಲೀಸ್ ಆಯುಕ್ತ ದಿಲೀಪ್ ಜಾವಲಕರ್ ಹೇಳಿದ್ದಾರೆ.

  • ವರ್ಗಾವಣೆ ಕೇಳಲು ಹೋದ ಶಿಕ್ಷಕಿಯನ್ನು ಸೇವೆಯಿಂದಲೇ ವಜಾಗೊಳಿಸಿದ ಉತ್ತರಾಖಂಡ್ ಸಿಎಂ

    ವರ್ಗಾವಣೆ ಕೇಳಲು ಹೋದ ಶಿಕ್ಷಕಿಯನ್ನು ಸೇವೆಯಿಂದಲೇ ವಜಾಗೊಳಿಸಿದ ಉತ್ತರಾಖಂಡ್ ಸಿಎಂ

    ಡೆಹ್ರಾಡೂನ್: ನನಗೆ ವರ್ಗಾವಣೆ ಬೇಕು ಮಾಡಿಕೊಡಿ ಎಂದು ವಿನಂತಿಸಿಕೊಳ್ಳಲು ಹೋಗಿದ್ದ ಶಾಲಾ ಮುಖ್ಯ ಶಿಕ್ಷಕಿಯೋರ್ವರನ್ನು ಸೇವೆಯಿಂದ ಅಮಾನತುಗೊಳಿ ಅವರನ್ನು ಬಂಧನಕ್ಕೊಳಪಡಿಸುವಂತೆ ಉತ್ತಾರಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪೊಲೀಸರಿಗೆ ಆದೇಶ ನೀಡಿದ್ದಾರೆ.

    ಡೆಹ್ರಾಡೂನ್‍ನಲ್ಲಿ ಗುರುವಾರ ಮಧ್ಯಾಹ್ನ ಜನತಾ ದರ್ಬಾರ್ ಆಯೋಜನೆಗೊಂಡಿತ್ತು. ಈ ವೇಳೆ ಶಿಕ್ಷಕಿಯೊಬ್ಬರು ವರ್ಗಾವಣೆ ನೀಡುವಂತೆ ಕೇಳಿಕೊಂಡಿದ್ದಾರೆ. ನಾನು 25 ವರ್ಷಗಳ ಕಾಲ ಕುಗ್ರಾಮದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿ ಅವಾಚ್ಯ ಪದಗಳನ್ನು ಬಳಸಿ ವರ್ಗಾವಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಸ್ಥಳದಲ್ಲಿ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಸಿಟ್ಟಾದ ಸಿಎಂ ಆಕೆಯನ್ನು ಸೇವೆಯಿಂದಲೇ ಅಮಾನತುಗೊಳಿಸಿ ಬಂಧಿಸುವಂತೆ ಆದೇಶಿಸಿದ್ದಾರೆ.

    ಏನಿದು ಘಟನೆ?
    57 ವರ್ಷದ ಉತ್ತರ ಬಹುಗುಣ ಅವರು ಉತ್ತರಕಾಶಿ ಜಿಲ್ಲೆಯ ನೌಗಾಂವ್ ಪ್ರದೇಶದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, 25 ವರ್ಷಗಳಿಂದ ಕುಗ್ರಾಮದಲ್ಲಿಯೇ ಕೆಲಸ ಮಾಡಿದ್ದೇನೆ. ಈಗ ನನ್ನನ್ನು ವರ್ಗಾವಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಸಿಎಂ ಮರು ಪ್ರಶ್ನೆ ಹಾಕಿದಾಗ ಶಿಕ್ಷಕಿ, ಅವಾಚ್ಯ ಪದ ಬಳಸಿ ಸಿಎಂ ರೊಂದಿಗೆ ವಾದಿಸಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡು ಕೋಪಗೊಂಡ ಸಿಎಂ ರಾವತ್ ಮೈಕಿನಲ್ಲಿ ಜೋರಾಗಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಬಂಧಿಸಿ ಎಂದು ಪೊಲೀಸರಿಗೆ ಆದೇಶಿಸಿದ್ದಾರೆ.

    ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಬಹುಗುಣ ಅವರನ್ನು ಪೊಲೀಸರು ಸ್ಥಳದಲ್ಲೇ ಸಿಆರ್ ಪಿಸಿ ಸೆಕ್ಷನ್ 151 ಅಡಿಯಲ್ಲಿ ಬಂಧಿಸಿದ್ದಾರೆ. ನಂತರ ಗುರುವಾರ ಸಂಜೆ ಅವರನ್ನು ಬಿಡುಗಡೆಗೊಳಿಸಿದ್ದಾರೆ.

    ಘಟನೆ ಬಳಿಕ ಮಾತನಾಡಿದ ಸಿಎಂ ರಾವತ್, ಈ ವೇದಿಕೆ ಸಾರ್ವಜನಿಕರಿಗಾಗಿಯೇ ರೂಪಿಸಲಾಗಿದೆ. ವರ್ಗಾವಣೆ ಬೇಕಿದ್ದರೆ ಅದನ್ನು ಕೇಳುವುದಕ್ಕೆ ಒಂದು ವ್ಯವಸ್ಥಿತ ಪ್ರಕ್ರಿಯೆ ಇದೆ. ಸರ್ಕಾರಿ ಸಿಬ್ಬಂದಿಗಳ ವರ್ಗಾವಣೆಯನ್ನು ರಾಜ್ಯದ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

    ಈ ಘಟನೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉತ್ತರ ಬಹುಗುಣ, ನನಗೆ ಕೆಲಸ ಮಾಡಲು ಯಾವುದೇ ಸಮಸ್ಯೆಯಿಲ್ಲ. ಆದರೆ 25 ವರ್ಷದಿಂದ ನಾನು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಉತ್ತರಕಾಶಿಯ ಹಳ್ಳಿಯಲ್ಲಿ ಕೆಲಸ ಮಾಡುವ ಮುನ್ನ ಅದೇ ಜಿಲ್ಲೆಯ ಚಿನ್ಯಾಲಿಸೌರ್ ಎಂಬ ಕುಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಆಗ ನನ್ನ ಪತಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ 2017ರ ಆಗಸ್ಟ್ ನಲ್ಲಿ ನನ್ನ ಪತಿ ತೀರಿಹೋದರು. ಈಗ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ನನಗೂ ವಯಸ್ಸಾಗಿದೆ ಅಂತಹ ಕುಗ್ರಾಮದಲ್ಲಿ ಕೆಲಸ ನಿರ್ವಹಿಸಲು ಆಗುವುದಿಲ್ಲ. ಈ ಕಾರಣಕ್ಕೆ ನಾನು ವರ್ಗಾವಣೆ ಮಾಡುವಂತೆ ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದ್ದೆ ಎಂದು ತಿಳಿಸಿದರು.